ಪೂರ್ವ ಸಿದ್ದತೆ ಪರಿಶೀಲಿಸಿ, ಸಲಹೆ, ಸೂಚನೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ
ಪ್ರತಿ ವರ್ಷ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ. ರಾಜಬೀದಿ ಉತ್ಸವದ ಪ್ರತಿ ಹೆಜ್ಜೆಗೂ ಕಣ್ಗಾವಲಿರಿಸಲಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈ ಬಾರಿ ಸಹ ಮುಂದುವರೆದಿದ್ದು, ಸೋಮವಾರ ಖುದ್ದಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ನಗರಕ್ಕೆ ಭೇಟಿ ನೀಡಿ ಪೂರ್ವ ಸಿದ್ದತೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇಲಾಖೆಯ ಕರ್ತವ್ಯನಿರತ ಅಧಿಕಾರಿಗಳು ಮತ್ತ ಸಿಬ್ಬಂದಿಗಳಿಗೆ ಮುನ್ನಚ್ಚರಿಕೆ ವಹಿಸುವಂತೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ ವಿನಾಯಕ ಸೇವಾ ಸಮಿತಿ ಪ್ರಮುಖರೊಂದಿಗೆ ಚರ್ಚಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ರಾಜಬೀದಿ ಉತ್ಸವ ಮೆರವಣಿಗೆ ಯಶಸ್ವಿಯಾಗಿ ನಡೆಸುವಂತೆ ಮನವಿ ಮಾಡಿದ್ದಾರೆ.
ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ-ಸಿಬ್ಬಂದಿಗಳು:
ಜಿಲ್ಲಾ ರಕ್ಷಣಾಧಿಕಾರಿ-1, ಹೆಚ್ಚುವರಿ ರಕ್ಷಣಾಧಿಕಾರಿ-1, ವೃತ್ತ ನಿರೀಕ್ಷಕರು-20, ಪೊಲೀಸ್ ನಿರೀಕ್ಷರು-50, ಸಹಾಯಕ ಪೊಲೀಸ್ ನಿರೀಕ್ಷಕರು-85, ಆರಕ್ಷಕ ಸಿಬ್ಬಂದಿಗಳು-500, ಗೃಹ ರಕ್ಷಕ ದಳ-250, ಕ್ಷಿಪ್ರ ಕಾರ್ಯಪಡೆ ತುಕಡಿ-1, ಸಶಸ್ತ್ರ ಮೀಸಲು ಪಡೆ ತುಕಡಿ-6 ಮತ್ತು ಸಂಚಾರಿ ಪೊಲೀಸ್ ದಳ-1 ಬಂದೋಬಸ್ತ್ ನಲ್ಲಿ ಕಾರ್ಯ ನಿರ್ವಹಿಸಲಿವೆ.
ವೈಭವಯುತ ರಾಜಬೀದಿ ಉತ್ಸವ ಮೆರವಣಿಗೆ :
ರಾಜಬೀದಿ ಉತ್ಸವ ಮೆರವಣಿಗೆ ಪ್ರತಿವರ್ಷ ನಿರೀಕ್ಷೆಗೂ ಮೀರಿ ವೈಭವಯುತವಾಗಿ ನಡೆಯುತ್ತಿದ್ದು, ಉತ್ಸವ ಮೆರವಣಿಗೆ ಹಬ್ಬದಂತೆ ಕಂಡು ಬರುತ್ತಿದೆ. ಜಾತಿ, ಧರ್ಮ ಬೇಧಭಾವವಿಲ್ಲದೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಸ್ತೆಯುದ್ದಕ್ಕೂ ಕೇಸರಿ ತೋರಣಗಳು, ಧ್ವಜಗಳು ಕಂಗೊಳಿಸುವ ಜೊತೆಗೆ ಸೇವಾಕರ್ತರಿಂದ ಅನ್ನಸಂತರ್ಪಣೆ, ಲಾಡು, ಮಜ್ಜಿಗೆ, ಕೋಸಂಬರಿ ಸೇರಿದಂತೆ ಬಗೆ ಬಗೆಯ ಪ್ರಸಾದ ವಿತರಣೆ. ಬಗೆ ಬಗೆಯ ಬೃಹತ್ ಹಾರಗಳ ಸಮರ್ಪಣೆ, ಬೃಹತ್ ಓಂಕಾರದ ಚಿತ್ತಾರದೊಂದಿಗೆ ಭಕ್ತಿ ಸಮರ್ಪಣೆ ಕಂಡು ಬರುತ್ತಿದೆ. ಅಲ್ಲದೆ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ನಾದಸ್ವರ, ಕೋಲಾಟ, ಗೊಂಬೆ ನೃತ್ಯ, ಜಾನಪದ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆ ಮೆರಗು ನೀಡುತ್ತಿವೆ. ಉತ್ಸವ ಮೆರವಣಿಗೆ ಪ್ರತಿ ವರ್ಷ ನಿರೀಕ್ಷೆಗೂ ಮೀರಿ ವೈಭವ ಪಡೆದುಕೊಳ್ಳುತ್ತಿದೆ.
No comments:
Post a Comment