Monday, October 2, 2023

ಭದ್ರಾವತಿ ವಿವಿಧೆಡೆ ಮಹಾತ್ಮಗಾಂಧಿ ಜಯಂತಿ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಈ ಬಾರಿ ಭದ್ರಾ ಅತಿಥಿ ಗೃಹದಲ್ಲಿ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.

ಭದ್ರಾವತಿ : ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ನಗರದ ವಿವಿಧೆಡೆ ಸೋಮವಾರ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.

     ವಿಐಎಸ್ಎಲ್ ಭದ್ರಾ ಅತಿಥಿ ಗೃಹ:

    ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಈ ಬಾರಿ ಭದ್ರಾ ಅತಿಥಿ ಗೃಹದಲ್ಲಿ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.

    ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಕೆ.ಎಸ್ ಸುರೇಶ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. ಅಧಿತ್ರಿ ರಾಘವೇಂದ್ರ ಭಗವದ್ಗೀತೆ, ನೋರಾ ಮೆನೆಜಸ್ ಬೈಬಲ್ ಹಾಗು ಹಫೀಜ್-ಉರ್-ರಹಮಾನ್ ಕುರಾನ್ ಪವಿತ್ರ ಗ್ರಂಥಗಳ ಆಯ್ದ ಭಾಗಗಳನ್ನು ಪಠಣ ನಡೆಸಿದರು.

    ಕಾರ್ಖಾನೆಯ ಹಿರಿಯ ಪ್ರಬಂಧಕ(ಹಣಕಾಸು) ಉನ್ನಿಕೃಷ್ಣನ್ ರಘುಪತಿರಾಘವ ರಾಜಾರಾಮ್ ಭಜನೆ ಮೂಲಕ ಮಹಾತ್ಮಗಾಂಧಿ ಅವರನ್ನು ಸ್ಮರಿಸಿದರು. ಸ್ವಚ್ಛತಾ ಪ್ರತಿಜ್ಞೆ ಬೋಧಿಸಲಾಯಿತು.

    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ ಸೋಂಕುವರ್, ಇಸ್ಪಾತ್ ಮಹಿಳಾ ಸಮಾಜದ ಪ್ರತಿನಿಧಿ ಶೋಭಾ ಶಿವಶಂಕರನ್ ಉಪಸ್ಥಿತರಿದ್ದರು. ಕಾರ್ಖಾನೆ ಉದ್ಯೋಗಿಗಳು, ಕಾರ್ಮಿಕ ಹಾಗು ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಗುತ್ತಿಗೆ ಕಾರ್ಮಿಕರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

    ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಅತಿಥಿ ಗೃಹದ ಮೇಲ್ವಿಚಾರಕ ಕೆ.ಎಸ್ ರಾಘವೇಂದ್ರ ವಂದಿಸಿದರು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ನಗರದ ಹೊಸಸೇತುವೆ ರಸ್ತೆ ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಿಸಲಾಯಿತು. ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.
    ವಿಶ್ವೇಶ್ವರಾಯ ವಿದ್ಯಾಸಂಸ್ಥೆ :

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸಸೇತುವೆ ರಸ್ತೆ ಸಿದ್ದಾರೂಢನಗರದ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಿಸಲಾಯಿತು.

    ವಿದ್ಯಾಸಂಸ್ಥೆ ಆಡಳಿತಧಿಕಾರಿ ಡಾ. ಎಸ್. ಪಿ ರಾಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ವಧರ್ಮ ಸಮನ್ವಯತೆ ಪ್ರತೀಕವಾಗಿ ವಿದ್ಯಾರ್ಥಿಗಳಿಂದ ಭಗವದ್ಗೀತೆ, ಬೈಬಲ್ ಹಾಗೂ ಕುರಾನ್ ಪವಿತ್ರ ಗ್ರಂಥಗಳ ಆಯ್ದ ಭಾಗಗಳ ಪಠಣ ನಡೆಯಿತು. ಬಿ. ಇಡಿ ಪ್ರಶಿಕ್ಷಣಾರ್ಥಿ ಸುರೇಶ್ ದಿನದ ವಿಶೇಷತೆ ಕುರಿತು ಮಾತನಾಡಿದರು.

    ಶಿಕ್ಷಕರು, ವಿದ್ಯಾರ್ಥಿಗಳು ಹಾಗು ಸಿಬ್ಬಂದಿ ವರ್ಗದವರು ಶ್ರಮದಾನದಲ್ಲಿ ಪಾಲ್ಗೊಂಡು ವಿದ್ಯಾಸಂಸ್ಥೆ ಆವರಣ ಹಾಗು ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿದರು. ವಿದ್ಯಾಸಂಸ್ಥೆ ಸಂಸ್ಥಾಪಕ ಹಾಗೂ ಬಿ.ಇಡಿ ವಿಭಾಗದ ಕಾರ್ಯಧ್ಯಕ್ಷ. ಬಿ.ಎಲ್. ರಂಗಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

.    ಶಿಕ್ಷಕರಾದ ಕವಿತಾ ಪ್ರಾರ್ಥಿಸಿ, ಪ್ರಸನ್ನಕುಮಾರ್ ಸ್ವಾಗತಿಸಿದರು. ಮಂಜುನಾಥ್ ವಂದಿಸಿ, ಸಮೀನಾ ಯಾಸ್ಮಿನ್ ನಿರೂಪಿಸಿದರು.


ಭದ್ರಾವತಿಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಶ್ರೀಗಂಧ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

     ಜಯ ಕರ್ನಾಟಕ ಜನಪರ ವೇದಿಕೆ :

    ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಶ್ರೀಗಂಧ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ನಗರದ ಸಂಚಾರಿ ಪೊಲೀಸ್ ಠಾಣೆ ಆವರಣದಲ್ಲಿ ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಸಂಚಾರಿ ಠಾಣಾಧಿಕಾರಿ ಶಾಂತಲ ಕಾರ್ಯಕ್ರಮ ಉದ್ಘಾಟಿಸಿದರು.

    ವೇದಿಕೆ ಜಿಲ್ಲಾಧ್ಯಕ್ಷ ಎಸ್.ಕೆ ರಘುವೀರ್ ಸಿಂಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ, ತಾಲೂಕು ಅಧ್ಯಕ್ಷ ಜಗದೀಶ್, ಮುಖಂಡರಾದ ಹರಿನಾಥ ಸಿಂಗ್, ದಿನೇಶ ಶೇಟ್, ನವೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ್ಯೂಟೌನ್ ವಿಐಎಸ್ಎಲ್ ಆಸ್ಪತ್ರೆ ಸಮೀಪ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್)ದ ವತಿಯಿಂದ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.
    ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್) :

ನ್ಯೂಟೌನ್ ವಿಐಎಸ್ಎಲ್ ಆಸ್ಪತ್ರೆ ಸಮೀಪ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ(ಬಿಪಿಎಲ್)ದ ವತಿಯಿಂದ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.

    ಮಹಾತ್ಮಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚುವ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಶ್ಯಾಮ್, ದಾಸ್, ಶಾಲಾ ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ನಗರಸಭೆ ಹಾಗು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.
    ನಗರಸಭೆ, ಸರ್.ಎಂ.ವಿ ಕಾಲೇಜು:

    ನಗರಸಭೆ ಹಾಗು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು.

    ತರೀಕೆರೆ ರಸ್ತೆಯಲ್ಲಿರುವ ಮಹಾತ್ಮಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಸವಿತಾ ಉಮೇಶ್, ಪಲ್ಲವಿ ದಿಲೀಪ್, ನಾಗರತ್ನ ಅನಿಲ್ ಕುಮಾರ್, ಮಂಜುಳ ಸುಬ್ಬಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಬಿ ಶಿವಪ್ರಸಾದ್, ಸಮುದಾಯ ಸಂಘಟನಾಧಿಕಾರಿ ಸುಹಾಸಿನಿ, ಎಸ್. ಪವನ್ ಕುಮಾರ್, ಸುಮಿತ್ರ ಎಚ್.ಎಸ್ ಹರಪ್ಪನಹಳ್ಳಿ, ವಾಲಿಮಹೇಶ, ಜಯಂತಿ, ಓಂಕಾರಪ್ಪ, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳು ಹಾಗು ಸಂಯೋಜಕರು(ಉಪನ್ಯಾಸಕ) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, October 1, 2023

ಈದ್ ಮಿಲಾದ್ ಸಂಭ್ರಮ : ಬೃಹತ್ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ

ಪ್ರತಿ ವರ್ಷದಂತೆ ಈ ಬಾರಿ ಸಹ ಪ್ರವಾದಿ ಮಹಮದ್ ಫೈಗಂಬರರ ಜನ್ಮದಿನ ಈದ್ ಮಿಲಾದ್ ಹಬ್ಬದ ಅಂಗವಾಗಿ ಭದ್ರಾವತಿ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.

    ಭದ್ರಾವತಿ: ಪ್ರತಿ ವರ್ಷದಂತೆ ಈ ಬಾರಿ ಸಹ ಪ್ರವಾದಿ ಮಹಮದ್ ಫೈಗಂಬರರ ಜನ್ಮದಿನ ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.

    ಸೆ.28ರಂದು ಈದ್ ಮಿಲಾದ್ ಹಬ್ಬ ಆಚರಣೆ ಸಾಂಕೇತಿಕವಾಗಿ ನಡೆದಿದ್ದು, ಭಾನುವಾರ ಮುಸ್ಲಿಂ ಸಮುದಾಯದವರು ಅಲಂಕೃತಗೊಂಡ ಪ್ರವಾದಿಯವರ ಜನ್ಮಸ್ಥಳ ಮೆಕ್ಕಾ ಮದೀನಾ ಗುಂಬಜ್ ಮಾದರಿಗಳೊಂದಿಗೆ ಬೃಹತ್ ಮೆರವಣೆಗೆ ನಡೆಸಿದರು.

    ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ನಗರದ ಹೊಳೆಹೊನ್ನೂರು ವೃತ್ತದಿಂದ ಆರಂಭಗೊಂಡ ಮೆರವಣೆಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತ ತಲುಪಿ ನಂತರ ಸಾದತ್ ದರ್ಗಾ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

    ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾ ಖಾನ್, ನಗರಸಭೆ ಅಧ್ಯಕ್ಷ ಶೃತಿ ವಸಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯರಾದ ಸದಸ್ಯರಾದ ಬಿ.ಕೆ.ಮೋಹನ್, ಚನ್ನಪ್ಪ, ಬಷೀರ್ ಅಹಮದ್, ಸೈಯದ್ ರಿಯಾಜ್, ಮಾಜಿ ಉಪ ಮೇಯರ್ ಮಹಮದ್ ಸನ್ನಾವುಲ್ಲಾ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಎಸ್. ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಸಿ.ಎಂ ಖಾದರ್, ದಿಲ್ದಾರ್, ಅಮೀರ್ ಜಾನ್ ಸೇರಿದಂತೆ ನೂರಾರು ಮಂದಿ ಮುಸ್ಲಿಂ ಸಮುದಾಯದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಪಾಲ್ಗೊಂಡಿದ್ದರು.

ಈದ್ ಮಿಲಾದ್ : ರಕ್ತದಾನ ಶಿಬಿರ

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಭದ್ರಾವತಿಯಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಹೊಳೆಹೊನ್ನೂರು ವೃತ್ತದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಭದ್ರಾವತಿ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಹೊಳೆಹೊನ್ನೂರು ವೃತ್ತದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಬೋಧನಾ ಆಸ್ಪತ್ರೆ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ರಕ್ತ ನಿಧಿ ಹಾಗು ಆಶಾ ಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ ಹೆಚ್ಚಿನ ಜನರು ಪಾಲ್ಗೊಂಡಿದ್ದರು. ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಶಿಬಿರ ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ.

    ಟ್ರಸ್ಟ್ ಅಧ್ಯಕ್ಷ ಜೆಬಿಟಿ ಬಾಬು, ಪ್ರಮುಖರಾದ ಮುಸ್ವೀರ್ ಬಾಷಾ, ಮಾಜಿ ಉಪ ಮೇಯರ್ ಮಹಮದ್ ಸನ್ನಾವುಲ್ಲಾ, ನಗರಸಭೆ ಸದಸ್ಯ ಬಷೀರ್ ಅಹಮದ್ ಹಾಗು ಟ್ರಸ್ಟ್ ಪದಾಧಿಕಾರಿಗಳು, ಮುಸ್ಲಿಂ ಸಮಾಜದ ಮುಖಂಡರು, ಸುಬ್ಬಯ್ಯ ಮೆಡಿಕಲ್ ಕಾಲೇಜ್ ರಕ್ತ ನಿಧಿ ಹಾಗು ಆಶಾ ಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಒಂದನೇ ತಾರೀಕು, ಒಂದು ಗಂಟೆ, ಒಟ್ಟಿಗೆ ಅಭಿಯಾನದಲ್ಲಿ 250 ಮಂದಿ

ವಿಐಎಸ್ಎಲ್ ಕಾರ್ಖಾನೆಯಿಂದ "ಸ್ವಚ್ಛತೆಗಾಗಿ ಶ್ರಮದಾನ"

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತೆಗಾಗಿ ಶ್ರಮದಾನ" ಅಪ್ಪರ್ ಹುತ್ತಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡದ ಸಹಯೋಗದೊಂದಿಗೆ ಭಾನುವಾರ ಬೆಳಿಗ್ಗೆ ಸ್ವಚ್ಛತಾ ಅಭಿಯಾನ ನಡೆಯಿತು.
    ಭದ್ರಾವತಿ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ "ಸ್ವಚ್ಛತೆಗಾಗಿ ಶ್ರಮದಾನ" ಅಪ್ಪರ್ ಹುತ್ತಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡದ ಸಹಯೋಗದೊಂದಿಗೆ ಭಾನುವಾರ ಬೆಳಿಗ್ಗೆ ಸ್ವಚ್ಛತಾ ಅಭಿಯಾನ ನಡೆಯಿತು.

    ಕಾರ್ಖಾನೆಯ ಪ್ರಭಾರ ಕಾರ್ಯಪಾಲಕ ನಿರ್ದೇಶಕ ಕೆ.ಎಸ್ ಸುರೇಶ್ ಅಭಿಯಾನ ಉದ್ಘಾಟಿಸಿದರು. ತ್ಯಾಜ್ಯ ಮುಕ್ತ ಭಾರತ ಪರಿಕಲ್ಪನೆಯಡಿ "ಒಂದನೇ ತಾರೀಕು, ಒಂದು ಗಂಟೆ, ಒಟ್ಟಿಗೆ ಅಭಿಯಾನ" ತರಂಗ ಕಿವುಡು ಮಕ್ಕಳ ಶಾಲೆ ಮತ್ತು ಸಿದ್ದಾರ್ಥ ಅಂಧರ ವಿಕಾಸ ಕೇಂದ್ರದಲ್ಲಿ ನಡೆಯಿತು. "ಸ್ವಚ್ಛತೆಗಾಗಿ ಶ್ರಮದಾನ"ದಲ್ಲಿ ಸುಮಾರು 250 ಮಂದಿ ಪಾಲ್ಗೊಂಡಿದ್ದರು.

    ಕಾರ್ಖಾನೆಯ ಸಹಾಯಕ ಪ್ರಬಂಧಕರಾದ ಕೆ.ಎಸ್ ಶೋಭ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ತರಂಗ ಕಿವುಡು ಮಕ್ಕಳ ಶಾಲೆಯ ಅನಂತ ಕೃಷ್ಣ ನಾಯಕ್, ಎಸ್.ಎನ್ ಸುಭಾಷ್, ಅಪ್ಪರ್ ಹುತ್ತಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಶ್ರೀ ಕುಕ್ಕುವಾಡೇಶ್ವರಿ ಯೂತ್ ಕ್ಲಬ್ ಕಬಡ್ಡಿ ತಂಡದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, September 30, 2023

ಭೀಕರ ಅಪಘಾತ : ಸ್ಥಳದಲ್ಲಿ ಮೂವರ ದುರ್ಮರಣ.

    ಭದ್ರಾವತಿ: ತಾಲೂಕಿನ ಕಲ್ಲಿಹಾಳ್-ಅರಹತೊಳಲು ನಡುವೆ  ಎರಡು ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿರುವಿಸಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಒಂದು ಬೈಕ್‌‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ದೇಹಗಳು ಲಾರಿಯ ಚಕ್ರದ ಕೆಳಗೆ ಸಿಲುಕಿ ಛಿದ್ರವಾಗಿವೆ. ಮರಣ ಹೊಂದಿದ ಯುವಕರು ಯಾವ ಗ್ರಾಮದವರು ಎಂಬುದು ಇನ್ನೂ ತಿಳಿದು ಬಂದಿಲ್ಲ. 

ಅ.1ರಂದು ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು

    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ತಾಲೂಕಿನ ಹಿರಿಯ ನಾಗರಿಕರಿಗೆ ಅ.1ರಂದು ಬೆಳಿಗ್ಗೆ 10.30ಕ್ಕೆ ನಗರಸಭೆ ವಾರ್ಡ್ ನಂ.4ರ ಹಳೇನಗರ ಕಾಳಮ್ಮ ದೇವಸ್ಥಾನ ರಸ್ತೆಯಲ್ಲಿರುವ ಸಂಘದ ನೂತನ ಕಟ್ಟಡದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

    ದೇಶಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆ ಮತ್ತು ನಗೆ ಚಟಾಕಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದಶರ್ಶ ಎಚ್.ಎನ್ ಮಹಾರುದ್ರ ಕೋರಿದ್ದಾರೆ.

ಅಪಘಾತ : ಎಮ್ಮೆ ಸಾವು

    ಭದ್ರಾವತಿ: ರಸ್ತೆ ಅಪಘಾತದಲ್ಲಿ ಎಮ್ಮೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಗಂಗೂರು ಗ್ರಾಮದ ಉದ್ದಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ನಡೆದಿದೆ.

    ಗಂಗೂರು ಗ್ರಾಮದ ಬಾಬು ಎಂಬುವರಿಗೆ ಸೇರಿದ ಸುಮಾರು 40 ಸಾವಿರ ರು. ಮೌಲ್ಯದ 4 ವರ್ಷದ ಎಮ್ಮೆ ಮೃತಪಟ್ಟಿದ್ದು, ಬಾಬುರವರು ಎಮ್ಮೆಗಳನ್ನು ಮೇಯಿಸಿಕೊಂಡು ಬರುತ್ತಿದ್ದಾಗ ಬುಲೋರೋ ಪಿಕಪ್ ವಾಹನದ ಚಾಲಕ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿಯೇ ಒಂದು ಎಮ್ಮೆ ಮೃತಪಟ್ಟಿದ್ದು, ಉಳಿದ ಎಮ್ಮೆಗಳಿಗೆ ಗಾಯವಾಗಿರುತ್ತದೆ.

    ಈ ಸಂಬಂಧ ಬಾಬುರವರು ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.