Thursday, October 5, 2023

ಯೋಗಪಟು ಡಿ. ನಾಗರಾಜ್ 4 ದಶಕಗಳ ಸಾಧನೆ : ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ

ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಛೇರ್ಮನ್, ಅಂತರರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ರವರಿಗೆ ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಲಭಿಸಿದೆ.

    ಭದ್ರಾವತಿ : ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಛೇರ್ಮನ್, ಅಂತರರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ರವರಿಗೆ ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಲಭಿಸಿದೆ.

    ಕಳೆದ 4 ದಶಕಗಳಿಂದ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಾಗರಾಜ್ ರವರು ಇದುವರೆಗೂ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ 31, ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ 54 ಹಾಗು ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ 45 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

    ನಾಗರಾಜ್ ರವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜೇಸೀಸ್, ರೋಟರಿ, ಲಯನ್ಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳ ನೆರವಿನೊಂದಿಗೆ 10 ದಿನಗಳ ಅವಧಿಯ 441 ಯೋಗ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದು, ಅಲ್ಲದೆ ವಿದ್ಯಾರ್ಥಿಗಳಿಗೆ 1 ಗಂಟೆ ಅವಧಿಯ 720ಕ್ಕೂ ಹೆಚ್ಚು ಯೋಗ ಉಪನ್ಯಾಸ ಹಾಗು ಯೋಗ ಪ್ರದರ್ಶನ ನೀಡಿ ಯೋಗದ ಬಗ್ಗೆ ಅರಿವು ಮೂಡಿಸಿದ್ದಾರೆ. ಲಕ್ಷಾಂತರ ಜನರಿಗೆ ಆರೋಗ್ಯವಂತ ಹಾಗು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ. ಇವರು ಯೋಗ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ರಾಜ್ಯ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿದೆ.

    ಬೆಂಗಳೂರಿನ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಡಿ.ನಾಗರಾಜ್ ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸರ್ಕಾರದ ಕಾರ್ಯದರ್ಶಿ ಡಾ. ಜಿ.ಸಿ ಪ್ರಕಾಶ್ ಮತ್ತು ಇಲಾಖೆ ನಿರ್ದೇಶಕ ಎಂ. ಸಿದ್ದೇಶ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ, ಕಾರ್ಯದರ್ಶಿ ಡಾ. ಡಿ. ಪುಟ್ಟೇಗೌಡ ಹಾಗು ಯೋಗ ಪಟುಗಳು ಡಿ. ನಾಗರಾಜ್ ರವರನ್ನು ಅಭಿನಂದಿಸಿದ್ದಾರೆ.

ಮಾಳಮ್ಮ ನಿಧನ

ಮಾಳಮ್ಮ

    ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಗ್ರಾಮದ ನಿವಾಸಿ ಮಾಳಮ್ಮ(90) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು.

    ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನೇತ್ರಾಧಿಕಾರಿ ಶಂಕರ್ ಸೇರಿದಂತೆ 4 ಗಂಡು, 2 ಹೆಣ್ಣು ಹಾಗು 10 ಮೊಮ್ಮಕ್ಕಳಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ನೆರವೇರಲಿದೆ. ಮಾಳಮ್ಮ ನಿಧನಕ್ಕೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗದವರು, ತರೀಕೆರೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನಿಲೇಶ್ ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭಾರತೀಯ ನೌಕದಳ ಸೈನಿಕ ದಿನೇಶ್ ಕುಮಾರ್ ಅರಣ್ಯ ಇಲಾಖೆ ಆರ್.ಎಫ್.ಓ

ಭದ್ರಾವತಿ : ಬಿ.ಆರ್ ದಿನೇಶ್ ಕುಮಾರ್ ಉಪ ವಲಯ ಅರಣ್ಯಾಧಿಕಾರಿ ಹುದ್ದೆಯಿಂದ ಮುಂಬಡ್ತಿಯೊಂದಿ ವಲಯ ಅರಣ್ಯಾಧಿಕಾರಿ(ಆರ್.ಎಫ್.ಓ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಭದ್ರಾವತಿ :ಬಿ.ಆರ್ ದಿನೇಶ್ ಕುಮಾರ್ ಉಪ ವಲಯ ಅರಣ್ಯಾಧಿಕಾರಿ ಹುದ್ದೆಯಿಂದ ಮುಂಬಡ್ತಿಯೊಂದಿ ವಲಯ ಅರಣ್ಯಾಧಿಕಾರಿ(ಆರ್.ಎಫ್.ಓ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ನಗರದಲ್ಲಿಯೇ ಹುಟ್ಟಿ ಬೆಳೆದಿರುವ ದಿನೇಶ್ ಕುಮಾರ್, ವಿಐಎಸ್ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿ, ಕಬಡ್ಡಿ ಆಟಗಾರ ದಿವಂಗತ ಬೆಣ್ಣೆಕೃಷ್ಣ ಮತ್ತು ಗೌರಮ್ಮ ದಂಪತಿ ಪುತ್ರರಾಗಿದ್ದಾರೆ.

    ದಿನೇಶ್ ಕುಮಾರ್ ಅವರು ನೌಕದಳದಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಇವರಿಗೆ ಡಿಸಿಎಫ್ ಆಶೀಶ್ ರೆಡ್ಡಿ(ಐಎಫ್ಎಸ್), ಎಸಿಎಫ್ ರತ್ನಪ್ರಭಾ ಮತ್ತು ಅರಣ್ಯ ಇಲಾಖೆ ಜಿಲ್ಲಾ ಅಧಿಕಾರಿಗಳು ಶುಭಾಶಯ ಕೋರಿದ್ದಾರೆ.

    ಅರಣ್ಯ ಇಲಾಖೆ ಸಹದ್ಯೋಗಿಗಳಾದ ಇ.ಎಂ ಶಫೀಉಲ್ಲಾ, ಅಣ್ಣಾ ನಾಯಕ, ನವೀನ್ ಕುಮಾರ್, ರಶೀದ್ ಬೇಗ್ ಮತ್ತು ಇತರರು ಉಪಸ್ಥಿತರಿದ್ದರು.

ಅತಿಯಾದ ಮದ್ಯ ಸೇವನೆ : ವಾರಸುದಾರರಿಲ್ಲದ ವ್ಯಕ್ತಿ ಮೃತ

    ಭದ್ರಾವತಿ : ವಾರಸುದಾರರಿಲ್ಲದ ವ್ಯಕ್ತಿಯೊಬ್ಬರು ಅತಿಯಾದ ಮದ್ಯ ಸೇವನೆಯಿಂದ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹೊಸಮನೆ ನಿವಾಸಿ ಜಗನ್ನಾಥರಾವ್ ಎಂಬುವರಿಗೆ ಸೇರಿದ ಕೊಠಡಿಯಲ್ಲಿ ಸುಮಾರು 4 ವರ್ಷದಿಂದ ಬಾಡಿಗೆಗೆ ವಾಸವಿದ್ದ ಹಿಟ್ಟಿನ ಗಿರಣಿ ರಿಪೇರಿ ಕೆಲಸ ಮಾಡುವ ಹನುಮಂತಪ್ಪ(48) ಎಂಬುವರು ಮೃತಪಟ್ಟಿದ್ದು, 5.6 ಅಡಿ ಎತ್ತರ, ಕೋಲು ಮುಖ, ಕಪ್ಪು-ಬಿಳಿ ಮಿಶ್ರಿತ ತಲೆ ಕೂದಲು ಇದ್ದು, ತಲೆಯ ಮುಂಭಾಗ ಬೋಳಾಗಿರುತ್ತದೆ. ಬಿಳಿ ಬಣ್ಣದ ಚೆಕ್ಸ್ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಇವರ ಮೃತದೇಹ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶವಗಾರದಲ್ಲಿದ್ದು, ವಾರಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

Wednesday, October 4, 2023

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರ ಮುಷ್ಕರ

ಆಲ್ ಇಂಡಿಯಾ ಗ್ರಾಮೀಣ್ ಡಿಎಕೆ ಸೇವಕ್ ಯೂನಿಯನ್(ಎಐಜಿಡಿಎಸ್ ಯು) ಕರ್ನಾಟಕ ಸರ್ಕಲ್ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಅಂಚೆ ಕಛೇರಿ ಮುಂಭಾಗ ಸಾಂಕೇತಿಕವಾಗಿ ಮುಷ್ಕರ ನಡೆಸಲಾಯಿತು.

    ಭದ್ರಾವತಿ: ಆಲ್ ಇಂಡಿಯಾ ಗ್ರಾಮೀಣ್ ಡಿಎಕೆ ಸೇವಕ್ ಯೂನಿಯನ್(ಎಐಜಿಡಿಎಸ್ ಯು) ಕರ್ನಾಟಕ ಸರ್ಕಲ್ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ನಗರದ ಅಂಚೆ ಕಛೇರಿ ಮುಂಭಾಗ ಸಾಂಕೇತಿಕವಾಗಿ ಮುಷ್ಕರ ನಡೆಸಲಾಯಿತು.

    ವಲಯ ರಾಜ್ಯಾಧ್ಯಕ್ಷ ಎಚ್.ವಿ ರಾಜ್ ಕುಮಾರ್ ಮಾತನಾಡಿ, ಈಗಾಗಲೇ 7ನೇ ವೇತನ ಆಯೋಗದ ಕಮಲೇಶ್ ಚಂದ್ರ ವರದಿ ಪ್ರಕಾರ ಅಂಚೆ ನೌಕರರಿಗೆ ಹಲವಾರು ಶಿಫಾರಸ್ಸುಗಳನ್ನು ಮಾಡಲಾಗಿದ್ದು, ಆದರೆ ಶಿಫಾರಸ್ಸುಗಳನ್ನು ಇಲಾಖೆ ಅಥವಾ ಸರ್ಕಾರ ಇದುವರೆಗೂ ಯಥಾವತ್ತಾಗಿ ಅನುಮೋದನೆ ಮಾಡಿಲ್ಲ. ಇದರಿಂದಾಗಿ ನೌಕರರು ಸಮಸ್ಯೆ ಎದುರಿಸುವಂತಾಗಿದ್ದು, ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

    8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದು. ಸೇವಾ ಹಿರಿತನದ ಆಧಾರದ ಮೇಲೆ 12-14-36 ಸೇವೆ ಸಲ್ಲಿಸಿದ ಜಿಎಸ್ ಡಿ ನೌಕರರಿಗೆ ವಿಶೇಷ ಇನ್ ಕ್ರೀಮೆಂಟ್ ನೀಡುವುದು. ಗ್ರೂಪ್ ಇನ್ಸೂರೆನ್ಸ್ ಕವರೇಜ್ ರು.5 ಲಕ್ಷದವರೆಗೆ ಹೆಚ್ಚಿಸುವುದು. ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸುವುದು. ಜಿಡಿಎಸ್ ಗ್ರಾಚ್ಯುಟಿ ಹಣ ರು. 5 ಲಕ್ಷಗಳವರೆಗೆ ಹೆಚ್ಚಿಸುವುದು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಹಾಗು ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

    ಈಗಾಗಲೇ ಹಲವಾರು ಬಾರಿ ಹೋರಾಟ ನಡೆಸಲಾಗಿದ್ದು, ಇದುವರೆಗೂ ಬೇಡಿಕೆ ಈಡೇರಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಡಿ.12ರಿಂದ ವಿಭಾಗೀಯ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಉಪಾಧ್ಯಕ್ಷ ಜವರೇಗೌಡ್ರು, ಸಂಘಟನಾ ಕಾರ್ಯದರ್ಶಿ ಕೆ. ಮಂಜುನಾಥ್, ಸಂಗಮೇಶ್ ಆಚಾರ್, ಶ್ರೀಲಕ್ಷ್ಮೀ, ಸರಸ್ವತಿ, ಲಿಂಗರಾಜ್, ವೆಂಕಟರಮಣ, ಚೇತನ ಸೇರಿದಂತೆ ಇನ್ನಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.


ಮಣಿಪಾಲ ಆರೋಗಕಾರ್ಡ್ 2023ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ


ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಸೇರಿದಂತೆ ಇನ್ನಿತರರು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಪತ್ರಕರ್ತ ಕಣ್ಣಪ್ಪ ಅವರಿಗೆ ಸಾಂಕೇತಿಕವಾಗಿ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಿಸಿದರು.

ಭದ್ರಾವತಿ: ಮಣಿಪಾಲ್ ಆರೋಗ ಕಾರ್ಡ್ 2023ರ ನೋಂದಣಿ ಪ್ರಾರಂಭವಾಗಿದ್ದು, ಮಣಿಪಾಲ್ ಆರೋಗ್ಯಕಾರ್ಡ್ (MAC) ಅನ್ನು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಆಸ್ಪತ್ರೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.

    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಸಣ, ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು, ಕಾರ್ಡ್ ಖರೀದಿಸಲು ಹೂಡಿಕೆ ಮಾಡಿದ ಹಣವನ್ನು ಕೇವಲ ಎರಡು ಅಥವಾ ಮೂರು ಕಾರ್ಡ್ ಬಳಕೆಗಳಲ್ಲಿ ರಿಯಾಯಿತಿ ರೂಪದಲ್ಲಿ ಹಿಂಪಡೆಯಬಹುದು, "ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ" ಎಂಬುದು ಮಣಿಪಾಲ್ ಆರೋಗ್ಯ ಕಾರ್ಡ್ ನ ಧ್ಯೇಯ ವಾಕ್ಯವಾಗಿದೆ ಎಂದರು. 

    ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಇಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾವೇರಿ, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಅಲ್ಲದೇ ಕೇರಳ,ಗೋವಾದಂತಹ ನೆರೆ ರಾಜ್ಯಗಳಿಗೂ ವಿಸ್ತರಣೆಯಾಗಿದ್ದು, ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದು ಎಂದರು.

    ಕಾರ್ಡಿನ ಕೇವಲ ಎರಡು ಅಥವಾ ಮೂರು ಬಳಕೆಗಳಲ್ಲಿ ರಿಯಾಯಿತಿ ರೂಪದಲ್ಲಿ ಅವರ ಹೂಡಿಕೆಯನ್ನು ಮರಳಿ ಪಡೆಯಬಹುದಾಗಿದೆ. ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವ ಒಬ್ಬರಿಗೆ ರು. 300, ಕೌಟಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ ರು. 600 ಮತ್ತು ಕುಟುಂಬ ಪ್ಲಸ್ ಯೋಜನೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ರು. 750 ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರು. 500, ಕುಟುಂಬಕ್ಕೆ ರು. 800 ಮತ್ತು ಕೌಟಂಬಿಕ ಪ್ಲಸ್ ಯೋಜನೆ ರು. 950 ಆಗಿರುತ್ತದೆ ಎಂದರು.

    ಕಾರ್ಡ್ ಹೊಂದಿರುವವರು ಹಲವಾರು ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು, ಹೊರರೋಗಿ ವಿಭಾಗದಲ್ಲಿ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಮಾಲೋಚನೆಯಲ್ಲಿ ಶೇ.50ರಷ್ಟು, ಪ್ರಯೋಗಾಲಯ ಪರೀಕ್ಷೆ ಯಲ್ಲಿ ಶೇ.30, ಸಿ ಟಿ, ಎಂಆರ್ ಐ, ಅಲ್ಟ್ರಾಸೌಂಡ್ ಗಳಲ್ಲಿ ಶೇ.20, ಮಧುಮೇಹ ಪಾದ ತಪಾಸಣೆಯಲ್ಲಿ ಶೇ.20 ಮತ್ತು ಔಷಧಾಲಯಗಳಲ್ಲಿ ಶೇ. 12ರವರೆಗೆ ರಿಯಾಯಿತಿ ಪಡೆಯಬಹುದಾಗಿದೆ ಎಂದರು.

    ಒಳರೋಗಿ ವಿಭಾಗದಲ್ಲಿ ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ ಶೇ. 25 ಮತ್ತು ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್ ನಲ್ಲಿ ರೋಗಿಗಳಿಗೆ ಸರ್ಕಾರ ಅನುಮೋದಿತ ಪ್ಯಾಕೇಜ್ ಮೇಲೆ ಶೇಕಡಾ 10 ರಿಯಾಯಿತಿ ನೀಡಲಾಗುವುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಪ್ರವೀಣ್, ನಗರದ ಕಸ್ತೂರಬಾ ಆಸ್ಪತ್ರೆ ಮಾಹಿತಿ ಕೇಂದ್ರದ ರಾಜೇಶ್ ಮತ್ತು ಮಮತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Tuesday, October 3, 2023

ಜ್ಞಾನದೀಪಿಕಾ ಶಾಲೆ ವಿದ್ಯಾರ್ಥಿಗಳು 2ನೇ ಬಾರಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆ

  

ಭದ್ರಾವತಿ ತಾಲೂಕಿನ ಯರೇಹಳ್ಳಿ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಖೋ ಖೋ ಸ್ಪರ್ಧೆಯಲ್ಲಿ 2ನೇ ಬಾರಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಭದ್ರಾವತಿ : ತಾಲೂಕಿನ ಯರೇಹಳ್ಳಿ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಖೋ ಖೋ ಸ್ಪರ್ಧೆಯಲ್ಲಿ 2ನೇ ಬಾರಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹೆಚ್ಚಿನ ಬಹುಮಾನಗಳನ್ನು ಪಡೆದುಕೊಂಡಿದ್ದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಬಾಲಕಿಯರ ಖೋ ಖೋ ತಂಡ ಪ್ರಥಮ, 100 ಮೀ. ಓಟ, ಸಿ. ಅರ್ಪಿತ ಪ್ರಥಮ, ಬಾಲಕರ ತಟ್ಟೆ ಎಸೆತ ಎಂ. ಅಯ್ಯಪ್ಪ ಪ್ರಥಮ, 4X100 ಮೀ. ರಿಲೆ ಓಟ ಬಾಲಕಿಯರು ದ್ವಿತೀಯ, 100 ಮೀಟರ್ ಹರ್ಡಲ್ಸ್ ಓಟ ಟಿ.ಡಿ ದಿಶಾ ದ್ವಿತೀಯ, 400 ಮೀಟರ್ ಮತ್ತು 600 ಮೀಟರ್ ಓಟದಲ್ಲಿ ಸಿ. ಅರ್ಪಿತ ತೃತೀಯ ಸ್ಥಾನ ಪಡೆದಿದ್ದಾರೆ.

    ವಿಜೇತ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆ ಕಾರ್ಯದರ್ಶಿ ಮಂಜುಳ ರಾಜಶೇಖರ್ ಹಾಗು ಶಾಲಾ ಮುಖ್ಯೋಪಾಧ್ಯಾಯರು, ತರಬೇತಿದಾರರು, ಶಿಕ್ಷಕರು ಹಾಗು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.