Sunday, October 22, 2023

ಅಭಿವೃದ್ಧಿ ಕಾರ್ಯಗಳು ಜನರು ಸದಾ ಕಾಲ ನೆನಪಿಟ್ಟುಕೊಳ್ಳುವಂತಿರಲಿ : ಮನೋಹರ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಅಭಿವೃದ್ಧಿ ಕೆಲಸಗಳು ಹೆಚ್ಚು ಕಾಲ ಉಳಿಯುವಂತೆ ಇರಬೇಕು. ಆಗ ಮಾತ್ರ ಅಧಿಕಾರಿಗಳನ್ನು ಜನರು ಸದಾ ಕಾಲ ನೆನಪಿಟ್ಟುಕೊಳ್ಳುತ್ತಾರೆಂದು  ಎಂದು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಹೇಳಿದರು.
    ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾ ಉದ್ಘಾಟಿಸಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಇನ್ನೂ ಸಾಕಷ್ಟು ಕೆಲಸ ನಡೆಯಬೇಕಾಗಿದೆ. ಅಧಿಕಾರಿಗಳಿಗೆ ಸ್ಥಳೀಯ ಶಾಸಕರು, ನಗರಸಭೆ ಸದಸ್ಯರು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದರು.  
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನಾಡಹಬ್ಬ ದಸರಾ ಈ ಬಾರಿ ಸಹ ವಿಜೃಂಭಣೆಯಿಂದ ನಡೆಯುತ್ತಿದೆ. ಸಾರ್ವಜನಿಕರು ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಸಮಾಜದ ಸಕಲ ಕೆಲಸಗಳಲ್ಲಿ ಶ್ರಮವಹಿಸುವ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಮಹಿಳಾ ದಸರಾ ವೇದಿಕೆಯಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಮಾತನಾಡಿ, ಇಡೀ ಜೀವರಾಶಿಯ ತೂಕ ಹೊತ್ತಿರುವುದು ಭೂತಾಯಿ. ಮಹಿಳೆಯರ ಸಾಮರ್ಥ್ಯಕ್ಕೆ ಭೂತಾಯಿಯೇ ಉದಾಹರಣೆ. ಮಹಿಳೆ ಎಂದರೆ ಶಕ್ತಿ ಎಂದರು.
    ವೇದಿಕೆಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಕ್ರೀಡಾಸಮಿತಿ ಅಧ್ಯಕ್ಷ ಚೆನ್ನಪ್ಪ, ಸದಸ್ಯರಾದ ಬಸವರಾಜ್ ಆನೇಕೊಪ್ಪ, ಅನುಸುಧಾ ಮೋಹನ್ ಪಳನಿ, ಪಲ್ಲವಿ, ನಾಗರತ್ನ, ಪ್ರೇಮ, ನಾಗರತ್ನ, ಲತಾ ಚಂದ್ರಶೇಖರ್, ರೇಖಾ ಪ್ರಕಾಶ್, ಮಂಜುಳ ಸುಬ್ಬಣ್ಣ, ಜಯಶೀಲ, ಮಾಜಿ ಸದಸ್ಯರಾದ ಬದರಿನಾರಾಯಣ, ಲಕ್ಷ್ಮೀದೇವಿ, ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ನೃತ್ಯ ರೂಪಕ, ಹಳೇನಗರದ ಮಹಿಳಾ ಸೇವಾ ಸಮಾಜದಿಂದ ಜನಪದ ಗೀತೆ, ಪೌರಕಾರ್ಮಿಕರಿಂದ ನಾಟಕ, ಜ್ಯೋತಿ ಪ್ರಸಾದ್ ತಂತ್ರಿ ಅವರಿಂದ ನೃತ್ಯ, ಚೌಡೇಶ್ವರಿ ಮಹಿಳಾ ಮಂಡಳಿಯಿಂದ ದೇವಿ ನೃತ್ಯ, ವೀರಶೈವ ಸೇವಾ ಸಮಿತಿ ವತಿಯಿಂದ ಕೋಲಾಟ, ಅಖಿಲ ಭಾರತ ವೀರಶೈವ ಮಹಿಳಾ ವೇದಿಕೆಯಿಂದ ನೀರಿಗೆ ಬಾರೇ ಚನ್ನಿ, ಚುಂಚಾದ್ರಿ ವೇದಿಕೆ ಹಾಗು ಬನಶಂಕರಿ ಗಾಯನ ತಂಡದಿಂದ ನೃತ್ಯ ನಡೆಯಿತು.
    ಭದ್ರಾ ಸುಗಮಸಂಗೀತ ವೇದಿಕೆ ಮಹಿಳೆಯರು ಪ್ರಾರ್ಥಿಸಿದರು. ನಗರಸಭೆ ಅಧಿಕಾರಿ ಸುಹಾಸಿನಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮರುಆಯ್ಕೆಯಾದಲ್ಲಿ ಮೆಟ್ರೋ ವ್ಯವಸ್ಥೆ : ಬಿ.ವೈ ರಾಘವೇಂದ್ರ

ಭದ್ರಾವತಿ ನಗರಸಭೆ ವತಿಯಿಂದ ಶನಿವಾರ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
    ಭದ್ರಾವತಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮರು ಆಯ್ಕೆಯಾದಲ್ಲಿ ಶಿವಮೊಗ್ಗ- ಭದ್ರಾವತಿ ಅವಳಿ ನಗರಗಳಿಗೆ ಮೆಟ್ರೋ ವ್ಯವಸ್ಥೆ ಒದಗಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
    ನಗರಸಭೆ ವತಿಯಿಂದ ಶನಿವಾರ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ನನ್ನ ಗೆಲುವಿಗೆ ಭದ್ರಾವತಿ ಕ್ಷೇತ್ರದ ಜನರ ಕೊಡುಗೆ ಸಹ ಇದ್ದು, ತಾಯಿ ಚಾಮುಂಡೇಶ್ವರಿ ಆರ್ಶೀವಾದದಿಂದ ಈ ಬಾರಿಯೂ ಆಯ್ಕೆಯಾಗುವ ವಿಶ್ವಾಸವಿದೆ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳಲ್ಲಿ ಮೈಸೂರು ದಸರಾ ಮಾದರಿಯಲ್ಲಿಯೇ ನಾಡಹಬ್ಬ ದಸರಾ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರವಾಗಿದ್ದು, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗು ಸಿಬ್ಬಂದಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರಾದ ಬಸವರಾಜ್, ಜಾರ್ಜ್, ಆರ್. ಮೋಹನ್ ಕುಮಾರ್, ಬಷೀರ್ ಅಹಮದ್, ಅನುಸುಧಾ ಮೋಹನ್ ಪಳನಿ, ಲತಾ ಚಂದ್ರಶೇಖರ್, ಪ್ರೇಮ ಬದರಿನಾರಾಯಣ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಅನುಪಮ ಚನ್ನೇಶ್, ಕಾಂತರಾಜ್, ಕೋಟೇಶ್ವರರಾವ್, ಉದಯ್‌ಕುಮಾರ್, ಮಾಜಿ ಸದಸ್ಯ ಬದರಿ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಸಂಸದ ಬಿ.ವೈ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಕಂದಾಯ ಅಧಿಕಾರಿ ಎಂ.ಎಸ್.ರಾಜಕುಮಾರ್ ಸ್ವಾಗತಿಸಿದರು. ಪೌರಾಯುಕ್ತ ಮನುಕುಮಾರ್ ವಂದಿಸಿದರು.

Saturday, October 21, 2023

ಯುವಕನ ಕೊಲೆ : ದೂರು ದಾಖಲು

ಸೈಯದ್ ರಜಿಖ್ 
ಭದ್ರಾವತಿ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಲೂಕಿನ ಬಾಬಳ್ಳಿ ಗ್ರಾಮದಲ್ಲಿ ಯುವಕನೋರ್ವ ಕೊಲೆಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸೈಯದ್ ರಜಿಖ್ (೩೦) ಮೃತ ದುರ್ದೈವಿಯಾಗಿದ್ದು, ರಜಿಖ್‌ನನ್ನು ಆತನ ಸಂಬಂಧಿಕರೇ ಕೊಲೆ ಮಾಡಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ. ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಹೇಮಂತ್ ನಿಧನ

ಹೇಮಂತ್(ಕಟ್ಟಾ)
    ಭದ್ರಾವತಿ, ಅ. ೨೧: ನಗರದ ಬಾಲಭಾರತಿ ನಿವಾಸಿ, ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಹೇಮಂತ್(ಕಟ್ಟಾ)(೩೮) ಶುಕ್ರವಾರ ರಾತ್ರಿ ನಿಧನ ಹೊಂದಿದರು.
    ಹೇಮಂತ್ ತಾಯಿ ಜೊತೆ ವಾಸವಿದ್ದರು. ವಿಐಎಸ್‌ಎಲ್ ಕಾರ್ಖಾನೆಯ ಟ್ರಾಫಿಕ್ ಇಲಾಖೆಯ ಗುತ್ತಿಗೆ ಕಾರ್ಮಿಕರಾಗಿದ್ದು, ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೯ ತಿಂಗಳಿನಿಂದ ನಡೆಸುತ್ತಿರುವ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಗುತ್ತಿಗೆ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.

Friday, October 20, 2023

ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡಿ : ಕೃಷ್ಣೇಗೌಡ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆಯಿಂದ ಆಯೋಜಿಸಲಾಗಿದ್ದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕೃಷ್ಣೇಗೌಡ ಉದ್ಘಾಟಿಸಿದರು.  
    ಭದ್ರಾವತಿ: ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಲು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿಯೂ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದು ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕೃಷ್ಣೇಗೌಡ ಕರೆ ನೀಡಿದರು.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆಯಿಂದ ಆಯೋಜಿಸಲಾಗಿದ್ದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಕಬಡ್ಡಿ ಗಟ್ಟಿತನದ ಕ್ರೀಡೆಯಾದರೂ ಸಹ ವ್ಯಕ್ತಿಯ ಸಾಮರ್ಥ್ಯ ಬಲಪಡಿಸುವಲ್ಲಿ ಸಹಕಾರಿಯಾದ ಕ್ರೀಡೆ. ಭದ್ರಾವತಿಗೆ ಹೆಸರು ತರಲು ಆಸಕ್ತಿಯಿಂದ ಕ್ರೀಡಾಪಟುಗಳು ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
    ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ದಸರಾ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಕ್ರೀಡಾ ಸಮಿತಿ ಅಧ್ಯಕ್ಷ ಚೆನ್ನಪ್ಪರ ಪರಿಶ್ರಮವನ್ನು ಶ್ಲಾಘಿಸಿದರು.
    ಶಿವಮೊಗ್ಗ ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಷಿಯೇಷನ್ ಕಾರ್ಯದರ್ಶಿ ಗೋಪಿ, ಹಿರಿಯ ಕ್ರೀಡಾಪಟುಗಳಾದ ಕೋದಂಡರಾವ್ ಪಿಳ್ಳೈ, ರಂಗನಾಥ್, ತೀರ್ಪುಗಾರರಾದ ಬಸವರಾಜ್, ಸಿದ್ದಯ್ಯ, ಜಗದೀಶ್, ಮಂಜಣ್ಣ, ಪ್ರೇಮ್, ಆನಂದ್, ಶಾಂತಪ್ಪ, ಸ್ನೇಹ, ನಗರಸಭೆ ಸದ್ಯರಾದ ಚೆನ್ನಪ್ಪ, ಬಸವರಾಜ್ ಆನೇಕೊಪ್ಪ, ರೇಖಾ ಪ್ರಕಾಶ್, ಮಾಜಿ ಸದಸ್ಯ ಬದರಿನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಆರಂಭಿಕ ಪಂದ್ಯಾವಳಿಯಾಗಿ ನಗರಸಭೆ ಪೌರಕಾರ್ಮಿಕರು ಹಾಗು ನಗರಸಭೆ ಸಿಬ್ಬಂದಿ ಸೌಹಾರ್ಧ ಪಂದ್ಯಾವಳಿ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ಮೈದೊಳಲು ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಸಿಆರ್‌ಎಸ್ ಚಟುವಟಿಕೆಯಡಿ ಸೈಲ್-ವಿಐಎಸ್‌ಎಲ್ ಆಯೋಜನೆ

ಸೈಲ್-ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ನಗರದ ವಿಐಎಸ್‌ಎಲ್ ಆಸ್ಪತ್ರೆ, ಶಿವಮೊಗ್ಗ ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್) ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ: ಸೈಲ್-ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ನಗರದ ವಿಐಎಸ್‌ಎಲ್ ಆಸ್ಪತ್ರೆ, ಶಿವಮೊಗ್ಗ ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್) ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಸೈಲ್-ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್ ಹಾಗೂ ಮೈದೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಗೀತಮ್ಮ ಉದ್ಘಾಟಿಸಿದರು.
    ವಿಐಎಸ್‌ಎಲ್ ಆಸ್ಪತ್ರೆ ತಜ್ಞ ವೈದ್ಯರಾದ ಡಾ. ಎಮ್.ವೈ ಸುರೇಶ್ ಮತ್ತು ಡಾ. ಎಸ್.ಎನ್ ಸುರೇಶ್ ನೇತೃತ್ವ ತಂಡ ಸಾಮಾನ್ಯ ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು. ತಂಡದಲ್ಲಿ ಅಪರ್ಣ, ಟಿ.ಎನ್. ಕೃಷ್ಣ, ಅಲೆನ್ ಜುಡೊ ಪಿಂಟೊ, ಮಧುಕರ್, ತುಳಸಿ ಮತ್ತು  ಆರ್. ಮಂಜುನಾಥ್ ಉಪಸ್ಥಿತರಿದ್ದರು.
    ಶಂಕರ ಕಣ್ಣಿನ ಆಸ್ಪತ್ರೆ ತಜ್ಞರಾದ ಡಾ. ಅಮೃತ ಮಧು, ಜುಮನ, ಕಾವ್ಯ ಮತ್ತು ಚಂದನ ಹಾಗು ಮಹೇಶ್ ರಾಯ್ಕರ್ ತಂಡ ನೇತ್ರ ಪರೀಕ್ಷೆ ನಡೆಸಿ ನೇತ್ರ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು.
    ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ. ಜೀನಾ, ಡಾ. ಹಂಸಲೇಖ, ತಾಸಿನಾ, ಪೂಜಾ, ಅತುಲ್ಯ ಮತ್ತು ಗಣೇಶ್ ನೇತೃತ್ವದ ತಂಡ ಹೃದಯ ಸಂಬಂಧಿ, ೨ಡಿ, ಇಸಿಎಚ್‌ಓ ಹಾಗು ಇಸಿಜಿ ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು.
    ಮಹಾಪ್ರಬಂಧಕರು(ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್, ಪ್ರವೀಣ್ ಕುಮಾರ್, ಸಹಾಯಕ ಪ್ರಬಂಧಕರು (ಸಿಬ್ಬಂದಿ) ಕೆ.ಎಸ್. ಶೋಭ, ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಎಮ್.ವೈ ಸುರೇಶ್, ಎಸ್.ಎನ್ ಸುರೇಶ್, ಸಹ್ಯಾದ್ರಿ ನಾರಾಯಣ ಹೃದಯಾಲಯದ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ತಂಡ, ಮೈದೊಳಲು ಗ್ರಾಮಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.  
    ಸಾಮಾನ್ಯ ಆರೋಗ್ಯ, ಹೃದಯ, ಕಣ್ಣು, ಮೂಳೆ, ದಂತ ಚಿಕಿತ್ಸೆ ತಪಾಸಣೆ ಮತ್ತು ಉಚಿತ ಔಷಧಿಯ ವಿತರಣೆ ನಡೆಯಿತು. ೨೫೪ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು.

ನ್ಯಾಯಬೆಲೆ ಅಂಗಡಿ ಮಾಲೀಕ ಗಂಗಪ್ಪ ನಿಧನ

ಗಂಗಪ್ಪ
    ಭದ್ರಾವತಿ :  ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ನ್ಯಾಯಬೆಲೆ ಅಂಗಡಿ ಮಾಲೀಕ ಗಂಗಪ್ಪ(೬೫) ನಿಧನ ಹೊಂದಿದರು.
     ಪತ್ನಿ, ೪ ಪುತ್ರಿಯರು, ಓರ್ವ ಪುತ್ರ ಇದ್ದರು. ಗಂಗಪ್ಪ ಕೆಂಚನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಗ್ರಾಮ ಪಂಚಾಯಿತಿಗೆ ೩ ಬಾರಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಅಧ್ಯಕ್ಷರಾಗಿ, ಮತ್ತೊಂದು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಾಳಿಂಗನಹಳ್ಳಿ ಮತ್ತು ಕೆಂಪೇಗೌಡ ನಗರ ನ್ಯಾಯಬೆಲೆ ಅಂಗಡಿ ಮಾಲೀಕರಾಗಿದ್ದರು.  
    ಇವರ ಅಂತ್ಯಕ್ರಿಯೆ ಕೆಂಚನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೆರವೇರಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್ ಕುಮಾರ್, ಯುವ ಮುಖಂಡ ಬಿ. ಎಸ್ ಗಣೇಶ್, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಲಿಂಗಯ್ಯ ಸೇರಿದಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.