Thursday, October 26, 2023

ವಿಐಎಸ್‌ಎಲ್ ಉಳಿವಿಗಾಗಿ ಅ.೨೭ರಂದು ಗಣ ಹೋಮ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಯಲಿ ಎಂಬ ಆಶಯದೊಂದಿಗೆ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವೃತ್ತ(ಎಸ್‌ಎವಿ ಸರ್ಕಲ್)ದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಯಲಿ ಎಂಬ ಆಶಯದೊಂದಿಗೆ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವೃತ್ತ(ಎಸ್‌ಎವಿ ಸರ್ಕಲ್)ದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಅ.೨೮ರ ಶನಿವಾರ ನಡೆಯಲಿದೆ.
    ಪ್ರಸ್ತುತ ಕಾರ್ಖಾನೆ ಎದುರಿಸುತ್ತಿರುವ ಸಂಕಷ್ಟ ಪರಿಹರಿಸುವಂತೆ ಇಲ್ಲಿನ ಯುವಕರು ವಿಘ್ನ ನಿವಾರಕನಲ್ಲಿ ಮೊರೆ ಹೋಗುವ ಉದ್ದೇಶದಿಂದ ಈ ಬಾರಿ ೧೩ನೇ ವರ್ಷದ ವಿನಾಯಕ ಚತುರ್ಥಿಯಂದು ವಿಶೇಷವಾಗಿ ಕಾರ್ಖಾನೆಯ ಸಂಪೂರ್ಣ ಚಿತ್ರಣ ಅನಾವರಣಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
    ಗುರುವಾರ ಸರ್.ಎಂ.ವಿ ಗಾನವೃಂದ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ನಿವಾಸಿಗಳು ಪಾಲ್ಗೊಂಡಿದ್ದರು.
    ಅ.೨೭ರಂದು ಬೆಳಿಗ್ಗೆ ೧೦ ಗಂಟೆಗೆ ವಿಐಎಸ್‌ಎಲ್ ಉಳಿಯಲಿ ಎಂಬ ಸಂಕಲ್ಪದೊಂದಿಗೆ ಗಣಹೋಮ ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನ.೪ ಮತ್ತು ೫ ವಿಐಎಸ್‌ಎಲ್ ಶತಮಾನೋತ್ಸವ ಸಮಾರಂಭ

ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟನೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಹಿರಿಯ ಚಲನ ಚಿತ್ರ ನಟ, ನಿವೃತ್ತ ಉದ್ಯೋಗಿ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ನ.೪ ಮತ್ತು ೫ರಂದು ಹಮ್ಮಿಕೊಳ್ಳಲಾಗಿರುವ ಶತಮಾನೋತ್ಸವ ಸಮಾರಂಭ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಉದ್ಘಾಟಿಸಲಿದ್ದಾರೆ.
    ಕಾರ್ಖಾನೆ ಆವರಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸಮಾರಂಭ ಆರಂಭಗೊಳ್ಳಲಿದ್ದು, ಮೈಸೂರು ಸುತ್ತೂರು ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತು ಹಾಸನ ಹಾರನಹಳ್ಳಿ ಶ್ರೀ ಕ್ಷೇತ ಕೋಡಿಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
    ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಜ್ಯೋತಿರಾದಿತ್ಯ ಸಿಂಧ್ಯಾ, ಶೋಭಾ ಕರಂದ್ಲಾಜೆ ಮತ್ತು ಎ. ನಾರಾಯಣಸ್ವಾಮಿ ಹಾಗು ರಾಜ್ಯದ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಸಚಿವರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.


ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
    ಸಾಧಕರಾದ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್, ಕೆ.ಇ.ಎಲ್ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಮತ್ತು ವಿಆರ್‌ಎಲ್ ಗ್ರೂಪ್ಸ್ ಛೇರ್‍ಮನ್ ವಿಜಯ ಸಂಕೇಶ್ವರ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.
ಸಂಜೆ ೫ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಎಚ್.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಡಿ.ವಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.
    ಮಾ.೫ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಡಾ. ಜಿ. ಪರಮೇಶ್ವರ್, ಎಚ್.ಕೆ ಪಾಟೀಲ್, ಎಂ.ಬಿ ಪಾಟೀಲ್, ಡಾ. ಎಚ್.ಸಿ ಮಹಾದೇವಪ್ಪ, ಎನ್. ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಕೆ.ಜೆ ಜಾರ್ಜ್, ಜಮೀರ್ ಅಹಮದ್ ಖಾನ್, ಎಸ್.ಎಸ್ ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ, ಈಶ್ವರ್ ಖಂಡ್ರೆ, ಆರ್.ಬಿ ತಿಮ್ಮಾಪುರ, ಭೈರತಿ ಸುರೇಶ್, ಡಿ. ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಸಂಸದ ಡಿ.ಕೆ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ನ.೪ ಮತ್ತು ೫ ರಂದು ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನ.೩ರಂದು ಸಂಜೆ ನಗರದ ಹಳೇಸೇತುವೆ ಬಳಿ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಭದ್ರಾರತಿ ನಡೆಯಲಿದೆ.
    ಎಲ್ಲಾ ಕಾರ್ಯಕ್ರಮಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ನೇತೃತ್ವದಲ್ಲಿ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿದಾಗ ಸಂಘಟನೆ ಬಲಗೊಳ್ಳಲು ಸಾಧ್ಯ

ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ನೂತನ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ದೊಂಬಾಳೆ

ಭದ್ರಾವತಿ ನಗರದ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ  ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಭದ್ರಾವತಿ: ಯಾವುದೇ ವ್ಯಕ್ತಿಗೆ ಮೊದಲು ತನ್ನ ಸಮುದಾಯ ಮುಖ್ಯವಾಗಿದ್ದು, ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿದಾಗ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದು ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ನೂತನ ಅಧ್ಯಕ್ಷ, ನ್ಯಾಯವಾದಿ ಎಚ್.ಆರ್ ಲೋಕೇಶ್ವರ್ ರಾವ್ ದೊಂಬಾಳೆ ಹೇಳಿದರು.
    ಅವರು ಗುರುವಾರ ನಗರದ ಚನ್ನಗಿರಿ ರಸ್ತೆಯಲ್ಲಿರುವ ಸಂಘದ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸಂಘದ ಬೆಳವಣಿಗೆಯಲ್ಲಿ ಸಮುದಾಯದ ಹಿಂದಿನ ಹಿರಿಯರ ಪಾತ್ರ ಹೆಚ್ಚಿನದ್ದಾಗಿದ್ದು, ಸಂಘ ಮುನ್ನಡೆಸಿಕೊಂಡು ಹೋಗಲು ಪ್ರತಿಯೊಬ್ಬ ಸಹಕಾರ ಮುಖ್ಯವಾಗಿದೆ ಎಂದರು.
    ಸಮುದಾಯ ಮುಖಂಡರಾದ ತಿಪ್ಪೇಶ್‌ರಾವ್, ಯಲ್ಲೋಜಿರಾವ್, ಬಸವಂತರಾವ್ ದಾಳೆ, ಸಿದ್ದೋಜಿರಾವ್, ಪ್ರಕಾಶ್‌ರಾವ್, ಬಿ.ಎಸ್ ರಾಜೇಶ್, ಡಿ.ಟಿ ಶ್ರೀಧರ್, ಟಿ.ಎಸ್ ದುಗ್ಗೇಶ್ ಸೇರಿದಂತೆ ಇನ್ನಿತರರು ಮಾತನಾಡಿ, ಸಂಘದ ನೂತನ ಪದಾಧಿಕಾರಿಗಳು ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು. ಯಾವುದೇ ಸಂಧರ್ಭದಲ್ಲೂ ಸಮುದಾಯಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾಜದ ಎಲ್ಲಾ ಸಮುದಾಯದಗಳೊಂದಿಗೆ ಸೌಹಾರ್ದತೆ ಕಾಯ್ದುಕೊಂಡು ಮುನ್ನಡೆಯಬೇಕೆಂದರು.
    ನೂತನ ನಿರ್ದೇಶಕರು:
    ಕೃಷ್ಣೋಜಿರಾವ್, ಎಂ.ಆರ್ ರಾಜಾರಾವ್, ಜಗನ್ನಾಥ್‌ರಾವ್ ಗಾಯ್ಕ್‌ವಾಡ್, ವಿ. ರಾಮನಾಥ್ ಬರ್ಗೆ, ಬಿ. ನಾಗಪ್ಪ, ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ, ಆರ್. ನಾಗರಾಜ್‌ರಾವ್, ಬಿ.ಎಲ್ ಶಂಕರ್‌ರಾವ್ ಜಾದವ್, ಮಂಜುನಾಥ್‌ರಾವ್ ಪವಾರ್, ಎಸ್. ಶಾಂತಕುಮಾರ್ ಗಾಯ್ಕ್‌ವಾಡ್, ಮಹೇಶ್‌ರಾವ್ ಹಜಾರೆ, ಇ. ಸುನಿಲ್‌ಗಾರ್ಗೆ, ಎಚ್. ರಂಗನಾಥ್‌ರಾವ್, ಎಸ್. ಸುರೇಶ್‌ರಾವ್ ಮತ್ತು ಎಚ್.ಎಲ್ ರಂಗನಾಥ್‌ರಾವ್ ಚವ್ಹಾಣ್ ಒಟ್ಟು ೧೫ ಮಂದಿ ನಿರ್ದೇಶಕರಿದ್ದಾರೆ.
    ನೂತನ ಪದಾಧಿಕಾರಿಗಳು:
    ಅಧ್ಯಕ್ಷರಾಗಿ ಎಚ್.ಆರ್ ಲೋಕೇಶ್ವರ್‌ರಾವ್ ದೊಂಬಾಳೆ, ಉಪಾಧ್ಯಕ್ಷರಾಗಿ ಎಚ್.ಎಲ್ ರಂಗನಾಥ್‌ರಾವ್ ಚವ್ಹಾಣ್, ಪ್ರಧಾನ ಕಾರ್ಯದರ್ಶಿಯಾಗಿ ಇ. ಸುನಿಲ್‌ಗಾರ್ಗೆ, ಸಹ ಕಾರ್ಯದರ್ಶಿಯಾಗಿ ಎಚ್. ರಂಗನಾಥ್‌ರಾವ್ ಮತ್ತು ಖಜಾಂಚಿಯಾಗಿ ವಿ. ರಾಮನಾಥ್ ಬರ್ಗೆ ಅಧಿಕಾರ ಸ್ವೀಕರಿಸಿದರು. ವಿವಿಧ ಸಮುದಾಯಗಳ ಅಧ್ಯಕ್ಷರು, ಮುಖಂಡರು ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.

Wednesday, October 25, 2023

ಅ.೨೮ರಂದು ವಾಲ್ಮೀಕಿ ಜಯಂತಿ

       ಭದ್ರಾವತಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅ.೨೮ರ ಶನಿವಾರ ೧೧ಗಂಟೆಗೆ ಹಳೇನಗರದ ವೀರಶೈವ ಸಭಾಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ  ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ.ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ್ ಬಿ. ಆನೇಕೊಪ್ಪ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
    ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಕೋರಿದ್ದಾರೆ.

ಸಿದ್ದಾರೂಢ ಮಠದಲ್ಲಿ ಶರನ್ನವರಾತ್ರಿ ಉತ್ಸವ : ಪ್ರವಚನ

ಶರನ್ನವರಾತ್ರಿ ಉತ್ಸವದ ಅಂಗವಾಗಿ ಭದ್ರಾವತಿ ಹುಡ್ಕೋ ಕಾಲೋನಿಯಲ್ಲಿರುವ ಸಿದ್ದಾರೂಢ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಳ್ಳೂರು ಸುಕ್ಷೇತ್ರದ ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಸ್ವಾಮೀಜಿಯವರು ಪಾಲ್ಗೊಂಡು ಪ್ರವಚನ ನೀಡಿದರು.
    ಭದ್ರಾವತಿ : ಶರನ್ನವರಾತ್ರಿ ಉತ್ಸವದ ಅಂಗವಾಗಿ ಹುಡ್ಕೋ ಕಾಲೋನಿಯಲ್ಲಿರುವ ಸಿದ್ದಾರೂಢ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಳ್ಳೂರು ಸುಕ್ಷೇತ್ರದ ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಸ್ವಾಮೀಜಿಯವರು ಪಾಲ್ಗೊಂಡು ಪ್ರವಚನ ನೀಡಿದರು.
    ಶ್ರೀಗಳು ಪ್ರತಿ ವರ್ಷ ಶರನ್ನವರಾತ್ರಿ ಉತ್ಸವದಂದು ಶ್ರೀ ಮಠಕ್ಕೆ ಆಗಮಿಸಿ ಭಕ್ತರಿಗೆ ಆಶೀರ್ವದಿಸುತ್ತಿದ್ದು, ೧೦ ದಿನಗಳ ಕಾಲ ನವದುರ್ಗೆಯರ ಆರಾಧನೆಯೊಂದಿಗೆ ಧಾರ್ಮಿಕ ಆಚರಣೆಗಳು ಜರುಗಿದವು. ಪ್ರತಿದಿನ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡು ಉತ್ಸವ ಯಶಸ್ವಿಗೊಳಿಸಿದರು.

ಶ್ರೀ ವಿನಾಯಕ ಮೂರ್ತಿ ವಿಸರ್ಜನೆ : ಮೆರವಣಿಗೆ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ, ಶ್ರೀ ಕರುಮಾರಿಯಮ್ಮ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಬುಧವಾರ ನಡೆಯಿತು.
    ಭದ್ರಾವತಿ : ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ, ಶ್ರೀ ಕರುಮಾರಿಯಮ್ಮ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಬುಧವಾರ ನಡೆಯಿತು.
    ಸ್ಥಳೀಯ ಕೆಲ ಯುವಕರು ಕಳೆದ ಕೆಲವು ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ವಿನಾಯಕ ಚತುರ್ಥಿ ಆಚರಿಸಿಕೊಂಡು ಬರುತ್ತಿದ್ದಾರೆ. ವಿಸರ್ಜನೆ ಅಂಗವಾಗಿ ನ್ಯೂಟೌನ್ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಯುವಕರೊಂದಿಗೆ ಸ್ಥಳೀಯ ನಿವಾಸಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಂಜೆ ಮೂರ್ತಿ ವಿಸರ್ಜಿಸಲಾಯಿತು.

ಬನ್ನಿ ಮುಡಿದ ತಹಸೀಲ್ದಾರ್ : ನಾಡಹಬ್ಬ ದಸರಾ ಸಂಪನ್ನ

ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಆಚರಣೆಗೆ ತಹಸೀಲ್ದಾರ್ ಕೆ.ಆರ್ ನಾಗರಾಜು ಮಂಗಳವಾರ ರಾತ್ರಿ ಬನ್ನಿ ಮುಡಿಯುವ(ಶಮಿ ಪೂಜೆ) ಮೂಲಕ ತೆರೆ ಎಳೆದರು.
    ಭದ್ರಾವತಿ: ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಆಚರಣೆಗೆ ತಹಸೀಲ್ದಾರ್ ಕೆ.ಆರ್ ನಾಗರಾಜು ಮಂಗಳವಾರ ರಾತ್ರಿ ಬನ್ನಿ ಮುಡಿಯುವ(ಶಮಿ ಪೂಜೆ) ಮೂಲಕ ತೆರೆ ಎಳೆದರು.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಉ||ವೇ||ಬ್ರ||ವಿ|| ಎಸ್. ರಂಗನಾಥ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಕೊನೆಯಲ್ಲಿ ರಾವಣನ ಸಂಹಾರದೊಂದಿಗೆ ದಸರಾ ಆಚರಣೆಗೆ ತೆರೆ ಎಳೆಯಲಾಯಿತು. ನೆರೆದಿದ್ದ ಜನರು ಪರಿಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು.
    ಚಾಮುಂಡೇಶ್ವರಿ ದೇವಿ ಒಳಿತು ಮಾಡಲಿ : ಕೃತಜ್ಞತೆ
    ಇದಕ್ಕೂ ಮೊದಲು ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುವಂತಾಗಲಿ. ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.  ಪ್ರತಿ ವರ್ಷದಂತೆ ಈ ಬಾರಿ ಸಹ ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ನಡೆದಿದ್ದು, ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರಾದ ಬಸವರಾಜ್, ಜಾರ್ಜ್, ಆರ್. ಮೋಹನ್ ಕುಮಾರ್, ಬಷೀರ್ ಅಹಮದ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಬಿ.ಕೆ ಮೋಹನ್, ಅನುಸುಧಾ ಮೋಹನ್ ಪಳನಿ, ಲತಾ ಚಂದ್ರಶೇಖರ್, ಪ್ರೇಮ ಬದರಿನಾರಾಯಣ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಅನುಪಮ ಚನ್ನೇಶ್, ಕಾಂತರಾಜ್, ಕೋಟೇಶ್ವರರಾವ್, ಉದಯ್‌ಕುಮಾರ್, ರಿಯಾಜ್ ಅಹಮದ್, ಪಲ್ಲವಿ ದಿಲೀಪ್, ನಾಗರತ್ನ ಅನಿಲ್‌ಕುಮಾರ್, ಜಯಶೀಲ ಸುರೇಶ್, ಸವಿತಾ ಉಮೇಶ್, ರೇಖಾ ಪ್ರಕಾಶ್, ಮಂಜುಳ ಸುಬ್ಬಣ್ಣ, ಅನಿತಾ ಮಲ್ಲೇಶ್, ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ರವಿಕುಮಾರ್ ಹಾಗು ಅಧಿಕಾರಿಗಳಾದ ರಾಜ್‌ಕುಮಾರ್, ಪ್ರಭಾಕರ್, ಸುಹಾಸಿನಿ ಮತ್ತು ಪೌರಸೇವಾ ನೌಕರರ ಸೇವಾ ಸಂಘದ ಪದಾಧಿಕಾರಿಗಳು, ದಸರಾ ಉದ್ಘಾಟಕರು, ಸಮಾಜ ಸೇವಕರಾದ ಪಿ. ವೆಂಕಟರಮಣ ಶೇಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ನೌಕರರು ಸೇರಿದಂತೆ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು