Tuesday, October 31, 2023

ಎಸ್. ಬಂಗಾರಪ್ಪ ಜನ್ಮ ದಿನಾಚರಣೆ, ಉಸ್ತುವಾರಿ ಜಿಲ್ಲಾ ಸಚಿವರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ದೀನದಲಿತರ, ಶೋಷಿತರ, ರೈತರ, ಕಾರ್ಮಿಕರ, ಎಲ್ಲಾ ವರ್ಗದ, ಎಲ್ಲಾ ಧರ್ಮದವರ ಹಿತ ಚಿಂತಕರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ೯೦ನೇ ಜನ್ಮ ದಿನಾಚರಣೆ ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಂದ ಕ್ಷೇತ್ರದ ನಿರ್ಲಕ್ಷ್ಯ ಖಂಡಿಸಿ ಮಂಗಳವಾರ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ: ದೀನದಲಿತರ, ಶೋಷಿತರ, ರೈತರ, ಕಾರ್ಮಿಕರ, ಎಲ್ಲಾ ವರ್ಗದ, ಎಲ್ಲಾ ಧರ್ಮದವರ ಹಿತ ಚಿಂತಕರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ೯೦ನೇ ಜನ್ಮ ದಿನಾಚರಣೆ ಹಾಗು  ಜಿಲ್ಲಾ ಉಸ್ತುವಾರಿ ಸಚಿವರಿಂದ ಕ್ಷೇತ್ರದ ನಿರ್ಲಕ್ಷ್ಯ ಖಂಡಿಸಿ ಮಂಗಳವಾರ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಎಸ್. ಬಂಗಾರಪ್ಪನವರ ಪುತ್ರರಾದ ಜಿಲ್ಲಾ ಉಸ್ತುವಾರಿ ಹಾಗು ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು ಕೇವಲ ಶಿವಮೊಗ್ಗ, ಸಾಗರ, ಸೊರಬ ಕ್ಷೇತ್ರಗಳಿಗೆ ಮಾತ್ರ ಪದೇ ಪದೇ ಭೇಟಿ ನೀಡುತ್ತಿದ್ದು, ಆದರೆ ಈ ಕ್ಷೇತ್ರಕ್ಕೆ ಇದುವರೆಗೂ ಭೇಟಿ ನೀಡದೆ ನಿರ್ಲಕ್ಷಿಸುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
    ಕ್ಷೇತ್ರದ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಕಳಪೆ ಕಾಮಗಾರಿಗಳು ಹೆಚ್ಚಾಗಿ ಅವ್ಯವಸ್ಥೆ ಉಂಟಾಗಿದೆ. ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸದಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ೨೦೧೭ರಲ್ಲಿ ಪ್ರಾರಂಭವಾದ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪದೇ ಪದೇ ಹೋರಾಟಗಳ ಮೂಲಕ ಮನವಿ ಸಲ್ಲಿಸಿದ್ದರೂ ಸಹ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರ ಹೆಸರಿಗೆ ಅವಮಾನವಾಗುತ್ತಿದ್ದರು ಸಹ ಇದುವರೆಗೂ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಬಗಹರಿಸಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
    ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ರಂಗಪ್ಪ, ಶೌಕತ್, ಎಂ.ವಿ ಚಂದ್ರಣ್ಣ, ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್, ವೀರೇಶ್, ಪ್ರಧಾನ ಸಂಚಾಲಕರಾದ ಶ್ರೀನಿವಾಸ್, ಬಸವರಾಜ್, ಸಂಚಾಲಕರಾದ ಅಜಿತ್, ಅಜಯ್, ಕೆ. ಶಿವಕುಮಾರ್, ಟಿ.ಎನ್ ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, October 30, 2023

ನ.೧, ೨ರಂದು ನೀರು ವ್ಯತ್ಯಯ

    ಭದ್ರಾವತಿ: ಹಳೇನಗರ ನೀರು ಶುದ್ಧೀಕರಣ ಘಟಕದಲ್ಲಿ ಅ.೩೧ ಹಾಗು ನ.೧ರಂದು ಜಾಕ್ವೆಲ್ ಶುದ್ಧೀಕರಣ ಮತ್ತು ೧೨೦ ಎಚ್.ಪಿ ಸಾಮರ್ಥ್ಯದ ಜಿಎಸ್‌ಎಲ್‌ಆರ್ ಸಂಪ್‌ನಲ್ಲಿ ಹೂಳು ತೆಗೆಯುವ ಕಾರ್ಯ ಹಮ್ಮಿಕೊಳ್ಳಲಾಗಿದೆ.
    ನ.೧ ಮತ್ತು ೨ರಂದು ಎರಡು ದಿನ ಹಳೇನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರು ಕೋರಿದ್ದಾರೆ.

ಪವರ್ ಲಿಫ್ಟಿಂಗ್‌ನಲ್ಲಿ ಶಿವರುದ್ರಪ್ಪರಿಗೆ ಚಿನ್ನದ ಪದಕ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗಾಗಿ ತುಮಕೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಉಪನ್ಯಾಸಕ ಡಾ. ಶಿವರುದ್ರಪ್ಪ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗಾಗಿ ತುಮಕೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಉಪನ್ಯಾಸಕ ಡಾ. ಶಿವರುದ್ರಪ್ಪ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಶಿವರುದ್ರಪ್ಪರವರು ೯೩ ಕೆಜಿ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  ಇವರ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ೯ನೇ ಬಾರಿಗೆ ಚಿನ್ನದ ಪದಕ ಪಡೆದಿರುವುದು ವಿಶೇಷವಾಗಿದ್ದು, ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
    ಶಿವರುದ್ರಪ್ಪರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ನಗರದ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಕಾಲೇಜು ಆಡಳಿತ ಮಂಡಳಿ ಹಾಗು ಗಣ್ಯರು ಅಭಿನಂದಿಸಿದ್ದಾರೆ.

ಸಾಮಿಲ್ ಮಾಲೀಕ ರಾಮಣ್ಣ ಕುಟುಂಬಕ್ಕೆ ಮಹಿಮಾ ಜಿ. ಪಟೇಲ್ ಸಂತಾಪ


ಭದ್ರಾವತಿ ಹೊಳೆಹೊನ್ನೂರು ರಸ್ತೆಯಲ್ಲಿರುವ ಶಾಂತಿ ಸಾಮಿಲ್‌ಗೆ ಸಂಯುಕ್ತ ಜನತಾದಳ(ಜೆಡಿಯು) ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜಿ. ಪಟೇಲ್ ಸೋಮವಾರ ಭೇಟಿ ನೀಡಿ ಇತ್ತೀಚೆಗೆ ನಿಧನ ಹೊಂದಿದ ಸಾಮಿಲ್ ಮಾಲೀಕ ರಾಮಣ್ಣನವರ ಕುಟುಂಬಕ್ಕೆ ಸಂತಾಪ ಸೂಚಿಸಿದರು.
   ಭದ್ರಾವತಿ: ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಶಾಂತಿ ಸಾಮಿಲ್‌ಗೆ ಸಂಯುಕ್ತ ಜನತಾದಳ(ಜೆಡಿಯು) ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜಿ. ಪಟೇಲ್ ಸೋಮವಾರ ಭೇಟಿ ನೀಡಿ ಇತ್ತೀಚೆಗೆ ನಿಧನ ಹೊಂದಿದ ಸಾಮಿಲ್ ಮಾಲೀಕ ರಾಮಣ್ಣನವರ ಕುಟುಂಬಕ್ಕೆ ಸಂತಾಪ ಸೂಚಿಸಿದರು. 
ಮಹಿಮಾ ಜಿ. ಪಟೇಲ್‌ರವರನ್ನು ಸಾಮಿಲ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಾಮಿಲ್ ಮಾಲೀಕ ರಾಮಣ್ಣನವರ ಸಹೋದರ ಜಿ. ಸುರೇಶ್‌ಕುಮಾರ್, ಜೆಡಿಯು ಮುಖಂಡ ಬಾಬು ದೀಪಕ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಹಬ್ಬ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳ ವಾಹಕ : ರಾಮಚಂದ್ರ ಭರಣಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಹಬ್ಬದ ಅಂಗವಾಗಿ ಭದ್ರಾವತಿಯಲ್ಲಿ ಪಥ ಸಂಚಲನ ನಡೆಯಿತು.
    ಭದ್ರಾವತಿ: ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಹಬ್ಬ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳ ವಾಹಕವಾಗಿದ್ದು, ವಿಜಯದಶಮಿ ಹಬ್ಬ ಸಹ ದುಷ್ಟ ಶಕ್ತಿಗಳ ಸಂಹಾರ ಹಾಗು ವಿಜಯದ ಸಂಕೇತವಾಗಿದೆ ಎಂದು ಆರ್‌ಎಸ್‌ಎಸ್ ಶಿವಮೊಗ್ಗ ವಿಭಾಗದ ಬೌಧ್ದಿಕ್ ಪ್ರಮುಖ್ ರಾಮಚಂದ್ರ ಭರಣಿ ಹೇಳಿದರು.
   ಅವರು ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡು ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಸಂಘಟನೆ ಬಲ ಇದ್ದಲ್ಲಿ ಭಯ ಎಂಬುದು ಇರುವುದಿಲ್ಲ. ಬಲ ವಿರೋಧಿಗಳ ವಿರುಧ್ಧ ಶಕ್ತಿ ಪ್ರದರ್ಶನವೂ ಅಲ್ಲ. ಆಕ್ರಮಣಣದ ಉದ್ದೇಶವೂ ಅಲ್ಲ. ಆದರೆ ಯಾರೆ ಆಗಲಿ ಅಥವಾ ಶತ್ರುಗಳು ನಮ್ಮ ಮೇಲೆ ದಾಳಿ ಮಾಡಬಾರದು ಎಂಬ ಉದ್ದೇಶವಾಗಿದೆ ಎಂದರು.
    ದುಷ್ಟ ಶಕ್ತಿಗಳ ಉಪಟಳ ಎಲ್ಲಾ ಕಾಲದಲ್ಲೂ ಇದ್ದು, ಹಿಂದೆಯೂ ಇತು, ಇಂದೂ ಇದೆ, ಮುಂದೆಯೂ ಇರುತ್ತದೆ. ಇದರ ಜೊತೆಯಲ್ಲಿ ಈಗ ನಮ್ಮೊಳಗೆ ಇದೆ. ದುಷ್ಟ ಶಕ್ತಿ ಶಿಷ್ಟ ಶಕ್ತಿಯನ್ನು ತನ್ನ ಹಿಡಿತದೊಳಗೆ ತೆಗೆದುಕೊಳ್ಳಬೇಕು ಎಂದು ಹವಣಿಕೆ ಮಾಡುತ್ತಿದೆ. ದೈವ ಶಕ್ತಿಯನ್ನು ನಿರ್ನಾಮ ಮಾಡಲು ಪ್ರಯತ್ನಿಸುತ್ತಿದೆ. ಇದರ ಕಾರಣ ನಾವು ಯಾವಾಗಲೂ ಶಿಷ್ಟ ಶಕ್ತಿಗಳ ಆರಾಧಕರಾಗಿರಬೇಕು ಅವುಗಳು ನಮ್ಮನ್ನು ಕಾಪಾಡುತ್ತವೆ ಎಂದರು.
    ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾರಂಭ ಆಗಿದ್ದು ಕೇವಲ ಕಾಕತಾಳಿಯ ಅಲ್ಲ. ಅಥವಾ ಹತ್ತಾರು ಸಂಘದ ಜೊತೆ ಇದು ಒಂದು ಎಂಬ ಭಾವನೆಯಿಂದ ಅಲ್ಲ. ಇದರ ಪ್ರಾರಂಭದ ಮೊದಲು ಸುಮಾರು ೮-೧೦ ವರ್ಷಗಳ ಸುರ್ದೀಘ ಚರ್ಚೆಗಳು ನಡೆದು ದೈತ್ಯ ಶಕ್ತಿಯ ಸಂಘಟನೆ ಪ್ರಾರಂಭವಾಯಿತು. ಇಂದು ಈ ಸಂಘಟನೆ ವಿಶ್ವದ ಅತ್ಯಂತ ಬಲಿಷ್ಟ ಸಂಘಟನೆಯಾಗಿ ಬೆಳೆದಿದೆ ಎಂದರು.
  ಆನಂದ್ ಅಧ್ಯಕ್ಷತೆ ವಹಿಸಿದ್ದರು. ಗಣವೇಷಧಾರಿ ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ಬಿ.ಹೆಚ್ ರಸ್ತೆ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗಿ ಹಾಲಪ್ಪ ಸರ್ಕಲ್,  ಅಂಬೇಡ್ಕರ್ ವೃತ್ತ, ಹೊಸ ಸೇತುವೆ ರಸ್ತೆ, ಕೋಟೆ ಏರಿಯಾ, ದೊಡ್ಡ ಕುರುಬರ ಬೀದಿ, ಹಳದಮ್ಮ ಬೀದಿ, ಪೇಟೆ ಬೀದಿ, ಎನ್‌ಎಸ್‌ಟಿ ರಸ್ತೆ, ಸಿಎನ್ ರಸ್ತೆ, ಶ್ರೀ ಬಸವೇಶ್ವರ ವೃತ್ತ ಮುಖಾಂತರ ಕನಕ ಮಂಟಪ ಮೈದಾನ ತಲುಪಿತು.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಪತ್ರಿಕಾ ವಿತರಕರಿಗೆ ಸಾಲಸೌಲಭ್ಯ

ನಗರಸಭೆ ಪೌರಾಯುಕ್ತರಿಗೆ ವಿತರಕರಿಂದ ಅಭಿನಂದನೆ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಭದ್ರಾವತಿ ತಾಲೂಕು ಸದಸ್ಯರುಗಳಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ನಗರಸಭೆ ವತಿಯಿಂದ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದ್ದು, ಈ ಹಿನ್ನಲೆಯಲ್ಲಿ ಒಕ್ಕೂಟದಿಂದ ಪೌರಾಯುಕ್ತ ಎಚ್.ಎಂ ಮನುಕುಮಾರ್‌ರವರನ್ನು ಅಭಿನಂದಿಸಲಾಯಿತು.
    ಭದ್ರಾವತಿ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ತಾಲೂಕು ಸದಸ್ಯರುಗಳಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ನಗರಸಭೆ ವತಿಯಿಂದ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದ್ದು, ಈ ಹಿನ್ನಲೆಯಲ್ಲಿ ಒಕ್ಕೂಟದಿಂದ ಪೌರಾಯುಕ್ತ ಎಚ್.ಎಂ ಮನುಕುಮಾರ್‌ರವರನ್ನು ಅಭಿನಂದಿಸಲಾಯಿತು.
    ಪತ್ರಿಕಾ ವಿತಕರಿಗೆ ಸಾಲ ಸೌಲಭ್ಯ ಕಲ್ಪಿಸಿಕೊಡುವಂತೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಪೂರಕವಾಗಿ ಸ್ಪಂದಿಸಿದ ನಗರಸಭೆ ಆಡಳಿತ ಸ್ಟೇಟ್ ಬ್ಯಾಂಕ್ ಇಂಡಿಯಾ ಸಹಕಾರದೊಂದಿಗೆ ಪ್ರಸ್ತುತ ೧೧ ಮಂದಿ ವಿತರಕರಿಗೆ ತಲಾ ೧೦ ಸಾವಿರ ರು. ಸಾಲ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಒಂದು ವರ್ಷದ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿ ಪುನಃ ಹೊಸದಾಗಿ ಸಾಲ ಪಡೆಯಬಹುದಾಗಿದೆ.
    ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಹಾಗು ಕಛೇರಿ ಸಿಬ್ಬಂದಿ ವರ್ಗದವರು, ಪತ್ರಿಕಾ ವಿತರಕರ ಒಕ್ಕೂಟದ ಪರಶುರಾಮ್ ರಾವ್, ಕೃಷ್ಣಮೂರ್ತಿ, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆಲೋಚನಾ, ವಿಚಾರ ಶಕ್ತಿ ಹೊಂದಿರುವ ನಾಯಕರ ಅಗತ್ಯವಿದೆ : ಎಚ್.ಆರ್ ಬಸವರಾಜಪ್ಪ

ಭದ್ರಾವತಿ ಶ್ರೀವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಜೆ.ಎಚ್ ಪಟೇಲ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌ಪಟೇಲರ ೯೩ನೇ ಜನ್ಮದಿನಾಚರಣೆ ಹಾಗು ಸಾವಯವ ರಾಜಕಾರಣ, ಚುನಾವಣೆ-ಸುಧಾರಣೆ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ: ರಾಜಕಾರಣದಲ್ಲಿ ಆಲೋಚನಾ ಶಕ್ತಿ, ವಿಚಾರಶಕ್ತಿ ಹೊಂದಿರುವ ನಾಯಕರ ಅಗತ್ಯವಿದೆ. ಆದರೆ ಇಂದು ಎಲ್ಲಾ ಪಕ್ಷಗಳಲ್ಲೂ ವ್ಯಾಪಾರಿ ಮನೋಭಾವ ಹೆಚ್ಚುತ್ತಿದೆ. ಹಣವಿದ್ದವರು ಪ್ರಬಲ, ಹಣವಿಲ್ಲದವರು ದುರ್ಬಲ ಎಂಬ ಮನೋಭಾವನೆ ಬೆಳೆದು ಬಿಟ್ಟಿದೆ. ಈ ರೀತಿಯ ಭಾವನೆ ಸರಿಯಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
    ನಗರದ ಶ್ರೀವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಜೆ.ಎಚ್ ಪಟೇಲ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌ಪಟೇಲರ ೯೩ನೇ ಜನ್ಮದಿನಾಚರಣೆ ಹಾಗು ಸಾವಯವ ರಾಜಕಾರಣ, ಚುನಾವಣೆ-ಸುಧಾರಣೆ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಣವೇ ಮೇಲುಗೈ ಸಾಧಿಸುತ್ತಿರುವ ಹೊಟ್ಟೆಪಾಡಿನ ರಾಜಕಾರಣದಿಂದ ರಾಜ್ಯ, ರಾಷ್ಟ್ರದ ಏಳಿಗೆ ಅಸಾಧ್ಯ. ೧೯೮೩ರ ಚುನಾವಣೆಯಲ್ಲಿ ನಾಯಕರುಗಳಿಗೆ ಹಣವಿಲ್ಲದಿದ್ದರೂ ಜನರೇ ಬಟ್ಟೆಹೊಲಿಸಿ, ಹಣನೀಡಿ ಚುನಾವಣೆಗೆ ನಿಲ್ಲಿಸುತ್ತಿದ್ದರು. ಆದರೆ ಇಂದು ಮತದಾರ ಹಣಪಡೆಯುವ ಮೂಲಕ ಪ್ರಶ್ನಿಸುವ ನೈತಿಕತೆ ಕಳೆದುಕೊಳ್ಳುತ್ತಿದ್ದಾರೆ ಎಂದರು.
    ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಜೆ.ಎಚ್.ಪಟೇಲರು ಸಹ ಒಬ್ಬರಾಗಿದ್ದು, ಜಾತಿ, ಧರ್ಮದ ಹೆಸರಿನಲ್ಲಿ ಪಟೇಲರು ಎಂದಿಗೂ ರಾಜಕಾರಣ ಮಾಡಲಿಲ್ಲ. ಪ್ರಸ್ತುತ ರೈತ ನಾಯಕರು ವಿಧಾನಸಭೆ ಪ್ರವೇಶಿಸುವುದು ಅಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ನಾವುಗಳು ಅಧಿಕಾರಕ್ಕಾಗಿ ನೈತಿಕತೆ ಮೀರಿಲ್ಲ ಎಂದು ಹಳೆಯ ಘಟನೆಗಳನ್ನು ಸ್ಮರಿಸಿದರು.
    ಚಳುವಳಿಗಳಿಗೆ ರಾಜಕಾರಣ ಬದಲಿಸುವ ಶಕ್ತಿ ಇದೆ. ಈ ಹಿಂದಿನ ಚಳುವಳಿಗಳು ಇದಕ್ಕೆ ಉದಾಹರಣೆಯಾಗಿವೆ. ಚಳುವಳಿಯಿಂದಲೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ರಾಜಕಾರಣಕ್ಕೆ ಬರಬೇಕೆಂಬ ಪಟೇಲರ ನಿಲುವು ಸರಿಯಾಗಿದ್ದು, ಅವರ ರಾಜಕಾರಣ ಇಂದಿಗೂ ಮಾದರಿಯಾಗಿದೆ ಎಂದರು.
     ಜೆ.ಎಚ್ ಪಟೇಲರ ಪುತ್ರ, ಮಾಜಿ ಶಾಸಕ ಮಹಿಮ ಜೆ ಪಟೇಲ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಿ.ಎಲ್ ರವಿ, ಕಲ್ಪನ ಗೌಡ, ಆರ್.ಪಿ.ಯಶೋಧ, ಶಕುಂತಲ ಶೆಟ್ಟಿ, ಕರವೇ ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ನಗರಸಭೆ ಸದಸ್ಯರಾದ ಆರ್. ಮೋಹನ್ ಕುಮಾರ್, ಜಾರ್ಜ್, ಮುಖಂಡರಾದ ಸಿದ್ದಲಿಂಗಯ್ಯ, ಡಿ.ಜೆ ಪ್ರಭು, ಮೋಸಸ್ ರೋಸಯ್ಯ, ಜಾನ್ ಬೆನ್ನಿ, ವೈ. ಶಶಿಕುಮಾರ್, ಯುವರಾಜ್, ಕಾರ್ಯಕ್ರಮದ ಆಯೋಜಕ ಹಾಗು ಜೆಡಿಯು ಮುಖಂಡ ಶಶಿಕುಮಾರ್ ಗೌಡ, ಬಾಬು ದೀಪಕ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.