Tuesday, November 7, 2023

ಸವಿತಾ ಸಮಾಜಕ್ಕೆ ಮೀಸಲಾತಿ ನೀಡಿ, ಜಾತಿ ನಿಂದನೆ ಕಾಯ್ದೆ ಜಾರಿಗೊಳಿಸಿ

ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸವಿತಾ ಸಮಾಜ ಮನವಿ

ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಸರ್ಕಾರ ತಕ್ಷಣ ಮೀಸಲಾತಿ ನೀಡುವ ಜೊತೆಗೆ ಜಾತಿ ನಿಂದನೆ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಸರ್ಕಾರ ತಕ್ಷಣ ಮೀಸಲಾತಿ ನೀಡುವ ಜೊತೆಗೆ ಜಾತಿ ನಿಂದನೆ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಪ್ರಮುಖರು ಮಾತನಾಡಿ, ಸಮಾಜದಲ್ಲಿ ಕ್ಷೌರಿಕ ವೃತ್ತಿ ಹಾಗು ಮಂಗಳವಾದ್ಯ ಮತ್ತು ಪಾರಂಪರಿಕ ವೈದ್ಯ ಪದ್ದತಿ ನಂಬಿ ಬದುಕುತ್ತಿರುವ ಸವಿತಾ ಸಮಾಜದವರು ಶೋಷಣೆಗೆ ಒಳಗಾಗಿದ್ದಾರೆ. ರಾಜಕೀಯ, ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಈಗಾಗಲೇ ಪಾರಂಪರಿಕ ವೈದ್ಯ ಪದ್ದತಿ ಕಸಿದುಕೊಳ್ಳಲಾಗಿದ್ದು, ಪ್ರಸ್ತುತ ಕ್ಷೌರಿಕ ವೃತ್ತಿ ಸಹ ಅನ್ಯರ ಪಾಲಾಗುತ್ತಿದೆ. ಇದರಿಂದಾಗಿ ಬದುಕುವುದು ಕಷ್ಟಕರವಾಗಿದ್ದು, ಈ ನಡುವೆ ಜಾತಿ ನಿಂದನೆ ಕಾಯ್ದೆ ಜಾರಿಗೊಳಿಸದಿರುವುದು ನೋವುಂಟು ಮಾಡಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಸರ್ಕಾರ ತಕ್ಷಣ ಮುಂದಿನ ವರ್ಷ ಜ.೧೫ರೊಳಗಾಗಿ ಸಮಾಜದ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಸಮಾಜದ ಶ್ರೀ ಸವಿತಾನಂದನಾಥ ಸ್ವಾಮೀಜಿಯವರು ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೂ ಪಾದಯಾತ್ರೆ ನಡೆಸಿ ನಂತರ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಸವಿತಾ ಸಮುದಾಯದವರು ಇದಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆಂದು ಎಚ್ಚರಿಸಿದರು.
    ಸವಿತಾ ಸಹಕಾರ ಸಂಘದ ಅಧ್ಯಕ್ಷ ಎಂ. ಪರಮೇಶ್, ಸವಿತಾ ಸಮಾಜದ ಉಪಾಧ್ಯಕ್ಷರಾದ ಎನ್. ವೆಂಕಟೇಶ್, ಕೆ. ಓಬಳೇಶ್, ಜಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರಾಜು ರೆಡ್‌ಸನ್, ಸಹಕಾರ್ಯದರ್ಶಿ ಬಿ.ಎನ್ ಮಹೇಶ್‌ಕುಮಾರ್, ಖಜಾಂಚಿ ಎಸ್.ವಿ ನರಸಿಂಹಮೂರ್ತಿ, ಸಹಕಾರ್ಯದರ್ಶಿಗಳಾದ ಎನ್. ರಮೇಶ್, ಪಿ.ವಿ ಸುರೇಶ್, ಸಲಹೆಗಾರ ಗಣೇಶಣ್ಣ, ನಿರ್ದೇಶಕರಾದ ಶಿವಶಂಕರ್, ವಾಸು, ಅನಿಲ್‌ಕುಮಾರ್, ಲೋಕೇಶ್, ಹರೀಶ್, ನಾಗರಾಜ್, ರವಿಚಂದ್ರ, ಕುಮಾರ್ ಹಾಗು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಧುಮಾಲತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, November 6, 2023

ಡಿಎಸ್‌ಎಸ್ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಂಚಾಲಕರಾಗಿ ಜಿ. ಮಂಜುನಾಥ್

ಜಿ. ಮಂಜುನಾಥ್
    ಭದ್ರಾವತಿ : ತಾಲೂಕಿನ ಸುಣ್ಣದಹಳ್ಳಿ ಗಾಂಧಿನಗರ ಗ್ರಾಮದ ನಿವಾಸಿ ಜಿ. ಮಂಜುನಾಥ್‌ರವರನ್ನು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರನ್ನಾಗಿ ನೇಮಕಗೊಳಿಸಿ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಆದೇಶಿಸಿದ್ದಾರೆ.
    ವಿದ್ಯಾರ್ಥಿ ಒಕ್ಕೂಟದ ತತ್ವ ಮತ್ತು ಸಿದ್ದಾಂತಗಳಿಗೆ ಬದ್ಧರಾಗಿ ಹಾಗು ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗು ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪನವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಸಮುದಾಯದ ಜಾಗೃತಿಗಾಗಿ ಹಾಗು ಸಂವಿಧಾನಾತ್ಮಕ ಹಕ್ಕೊತ್ತಾಯಕ್ಕಾಗಿ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.
    ನೂತನ ಜಿಲ್ಲಾ ಸಂಚಾಲಕ ಜಿ. ಮಂಜುನಾಥ್‌ರವರನ್ನು ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ತಮ್ಮಣ್ಣ ಸೇರಿದಂತೆ ಸ್ಥಳೀಯ ಮುಖಂಡರು ಅಭಿನಂದಿಸಿದ್ದಾರೆ.

ಭದ್ರಾವತಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. 
    ಭದ್ರಾವತಿ : ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೋಮವಾರ ನಡೆದ ಸಭೆಯಲ್ಲಿ ಆಗ್ರಹಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಕುಡಿಯುವ ನೀರು, ಸ್ಮಶಾನ ಭೂಮಿ, ನಿವೇಶನ ಹಂಚಿಕೆ ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು.
    ನೀರು ಸರಬರಾಜು ಇಲಾಖೆ ಇಂಜಿನಿಯರ್ ಶಿವಕುಮಾರ್ ಸಭೆಗೆ ಮಾಹಿತಿ ನೀಡಿ, ತಡಸ ಮತ್ತು ದೊಣಬಘಟ್ಟ ಗ್ರಾಮಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದ್ದು, ಈ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಉಳಿದಂತೆ ಎಲ್ಲಾ ಗ್ರಾಮಗಳಲ್ಲೂ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ. ಹಣದ ಸಮಸ್ಯೆ ಇಲ್ಲ. ನೀರಿಗಾಗಿ ಬಹುತೇಕ ಭದ್ರಾ ಜಲಾಶಯ ಅವಲಂಬಿಸಲಾಗಿದ್ದು, ಈ ಹಿನ್ನಲೆಯಲ್ಲಿ ಜಲಾಶಯದಲ್ಲಿ ನೀರಿನ ಕೊರತೆ ಎದುರಾದಲ್ಲಿ ಜನವರಿ ನಂತರ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದರು.
    ಆದರೂ ಈ ನಡುವೆ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು. ಶಾಸಕ ಸಂಗಮೇಶ್ವರ್ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ತಹಸೀಲ್ದಾರ್ ಕೆ.ಆರ್ ನಾಗರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಜಾರ್ಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೈಸೂರು ಮಹಾರಾಜ ಯದುವೀರ್‌ರವರಿಗೆ ಗೌರವ ಸಮರ್ಪಣೆ


ಭದ್ರಾವತಿ ನಗರಕ್ಕೆ ಆಗಮಿಸಿರುವ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರನ್ನು ಸೋಮವಾರ ಅನುದಾನ ರಹಿತ ವಿದ್ಯಾಸಂಸ್ಥೆಗಳ ಸಂಘದ ಪ್ರಮುಖರು ಬಿಆರ್‌ಪಿ ಜಂಗಲ್ ರೆಸಾರ್ಟ್ ಅತಿಥಿಗೃಹದಲ್ಲಿ ಭೇಟಿ ಮಾಡಿ ಸನ್ಮಾನಿಸುವ ಮೂಲಕ ಗೌರವಿಸಿದರು.
    ಭದ್ರಾವತಿ : ನಗರಕ್ಕೆ ಆಗಮಿಸಿರುವ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರನ್ನು ಸೋಮವಾರ ಅನುದಾನ ರಹಿತ ವಿದ್ಯಾಸಂಸ್ಥೆಗಳ ಸಂಘದ ಪ್ರಮುಖರು ಬಿಆರ್‌ಪಿ ಜಂಗಲ್ ರೆಸಾರ್ಟ್ ಅತಿಥಿಗೃಹದಲ್ಲಿ ಭೇಟಿ ಮಾಡಿ ಸನ್ಮಾನಿಸುವ ಮೂಲಕ ಗೌರವಿಸಿದರು. 
     ಅನುದಾನ ರಹಿತ ವಿದ್ಯಾ ಸಂಸ್ಥೆಗಳ ಸಂಘದ ಕಾರ್ಯದರ್ಶಿ ಹಾಗೂ ನಗರದ ವಿಇಎಸ್ ವಿದ್ಯಾಸಂಸ್ಥೆ ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗೇಗೌಡ ಮತ್ತು ಹಾಗೂ  ತಾಲೂಕು ಅನುದಾನಿತ ಶಾಲೆಗಳ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ನಾಗರಾಜ್‌ರವರು ಮೊದಲ ಬಾರಿಗೆ ಆಗಮಿಸಿರುವ ಒಡೆಯರ್‌ರವರನ್ನು ಸನ್ಮಾನಿಸಿ ಗೌರವಿಸಿದರು. ಅಲ್ಲದೆ ಮೈಸೂರು ಮಹಾರಾಜರ ಕೊಡುಗೆಗಳನ್ನು ಸ್ಮರಿಸಿ ಪ್ರಸ್ತುತ ಕ್ಷೇತ್ರದ ಸ್ಥಿತಿಗತಿಗಳನ್ನು ವಿವರಿಸಿದರು.

ಶ್ರೀ ರಾಘವೇಂದ್ರ ಸ್ವಾಮಿಯವರ ಮಠದಲ್ಲಿ ವಿಜೃಂಭಣೆಯಿಂದ ಜರುಗಿದ ಆಶ್ಲೇಷ ಬಲಿ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಯವರ ಮಠದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಆಶ್ಲೇಷ ಬಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಯವರ ಮಠದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಆಶ್ಲೇಷ ಬಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.
    ಮಠದಲ್ಲಿರುವ ಬೃಂದಾವನಗಳಿಗೆ ಬೆಳಿಗ್ಗೆ ಅಭಿಷೇಕ. ನಂತರ ಹೋಮ ಮತ್ತು ನಾಗದೇವತೆ ಪ್ರಾರ್ಥನೆ ಜರಗಿತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
    ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ಖಜಾಂಚಿ ನಿರಂಜನಾ ಆಚಾರ್ ಮತ್ತು ಪ್ರಮೋದ್ ನೇತೃತ್ವದ ತಂಡದಿಂದ ನಾಗರಾಧನೆ ಧಾರ್ಮಿಕ ಆಚರಣೆಗಳು ನೆರವೇರಿದವು.
    ಪ್ರಮುಖರಾದ ಪವನ್ ಕುಮಾರ್ ಉಡುಪ, ಸುಪ್ರಿತ ತಂತ್ರಿ, ಶುಭಾ ಗುರುರಾಜ, ವಿದ್ಯಾನಂದನಾಯಕ್, ಪ್ರಧಾನ ಅರ್ಚಕ ಮಾಧು ರಾವ್, ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವಿಐಎಸ್‌ಎಲ್ ಕಾರ್ಖಾನೆಗೆ ಮೊದಲ ಬಾರಿಗೆ ಮೈಸೂರು ಮಹಾರಾಜ ಯದುವೀರ್ ಭೇಟಿ

ಅಧಿಕಾರಿಗಳು, ಕಾಯಂ, ಗುತ್ತಿಗೆ ಕಾರ್ಮಿಕರೊಂದಿಗೆ ಸಭೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಸೋಮವಾರ ಮೈಸೂರು ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಖುದ್ದಾಗಿ ಭೇಟಿ ನೀಡಿ ಅಧಿಕಾರಿಗಳು, ಕಾಯಂ, ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿದರು.
    ಭದ್ರಾವತಿ: ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಹಿರಿಯ ಚಲನ ಚಿತ್ರ ನಟ, ಮಾಜಿ ಉದ್ಯೋಗಿ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ಕಳೆದ ೨ ದಿನಗಳ ಹಿಂದೆ ನಗರದ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶತಮಾನೋತ್ಸವ ಉದ್ಘಾಟಿಸುವ ಮೂಲಕ ಪ್ರಸ್ತುತ ಕಾರ್ಖಾನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟದ ಜೊತೆಗಿರುವುದಾಗಿ ಭರವಸೆ ನೀಡಿದ್ದ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಸೋಮವಾರ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಶತಮಾನೋತ್ಸವದಲ್ಲಿ ಗುತ್ತಿಗೆ, ಕಾಯಂ ಹಾಗು ನಿವೃತ್ತ ನೌಕರರು ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರಿಗೆ ಮನವಿ ಸಲ್ಲಿಸಿ ಮೈಸೂರು ಮಹಾರಾಜರ ಕೊಡುಗೆಯಾಗಿರುವ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದ್ದರು.
    ಈ ಹಿನ್ನಲೆಯಲ್ಲಿ ಒಡೆಯರ್‌ರವರು ಖುದ್ದಾಗಿ ಕಾರ್ಖಾನೆ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಕಾರ್ಖಾನೆ ಸಂಸ್ಥಾಪಕರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ನಂತರ ಮೊದಲ ಬಾರಿಗೆ ಮೈಸೂರು ಮಹಾರಾಜರು ಕಾರ್ಖಾನೆ ಪ್ರವೇಶಿಸಿರುವುದು ಕ್ಷೇತ್ರದ ಕಾರ್ಮಿಕ ವಲಯದಲ್ಲಿ ಸಂತಸವನ್ನುಂಟು ಮಾಡಿದೆ.  ಕಾರ್ಖಾನೆ ಆಡಳಿತ ಕಛೇರಿಯಲ್ಲಿ ಒಡೆಯರ್‌ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಸೋಮವಾರ ಮೈಸೂರು ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಖಾನೆ ಆಡಳಿತ ಕಛೇರಿಯಲ್ಲಿ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.

Sunday, November 5, 2023

ಯಶಸ್ವಿಯಾಗಿ ಜರುಗಿದ ವಿಐಎಸ್‌ಎಲ್ ಶತಮಾನೋತ್ಸವ ಸಮಾರಂಭ

ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ಸಮಾರೋಪ ಸಮಾರಂಭ ಭಾನುವಾರ ಯಶಸ್ವಿಯಾಗಿ ನಡೆದಿದ್ದು, ಸಂಜೆ ನಡೆದ ಕಾರ್ಯಕ್ರಮದಲ್ಲಿ ಶತಮಾನೋತ್ಸವದ ಕೇಂದ್ರ ಬಿಂದು ದೊಡ್ಡಣ್ಣ ಅವರನ್ನು ಗುತ್ತಿಗೆ ಕಾರ್ಮಿಕರ ಸಂಘ ಹಾಗು ಸಂತೋಷ್ ಶಾಮಿಯಾನ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ಸಮಾರೋಪ ಸಮಾರಂಭ ಭಾನುವಾರ ಯಶಸ್ವಿಯಾಗಿ ನಡೆದಿದ್ದು, ಸಂಜೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಕಾರ್ಮಿಕರು, ಸಮಾರಂಭದ ಯಶಸ್ವಿಗೆ ಶ್ರಮಿದವರನ್ನು, ಗಣ್ಯರು ಹಾಗು ಸಾಧಕರನ್ನು ಮತ್ತು ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ, ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ಕಳೆದ ೨ ದಿನಗಳ ಕಾಲ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ  ಹಲವು ವೈಶಿಷ್ಟಗಳೊಂದಿಗೆ ಶತಮಾನೋತ್ಸವ ಅದ್ದೂರಿಯಾಗಿ ನಡೆಯಿತು.
    ಹೊರ ದೇಶ, ಹೊರ ರಾಜ್ಯಗಳಿಂದ ಮತ್ತು ರಾಜ್ಯದ ವಿವಿಧ ಮೂಲೆಗಳಿಂದ ಹಾಗು ನಗರದ ವಿವಿಧೆಡೆಗಳಿಂದ ಆಗಮಿಸಿದ್ದ ನಿವೃತ್ತ ಅಧಿಕಾರಿಗಳು, ಕಾರ್ಮಿಕರು ಹಾಗು ಕುಟುಂಬ ವರ್ಗದವರು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
    ಶತಮಾನೋತ್ಸವದ ಕೇಂದ್ರ ಬಿಂದು ದೊಡ್ಡಣ್ಣ ಅವರನ್ನು ಗುತ್ತಿಗೆ ಕಾರ್ಮಿಕರ ಸಂಘ ಹಾಗು ಸಂತೋಷ್ ಶಾಮಿಯಾನ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.