ಸೋಮವಾರ, ನವೆಂಬರ್ 27, 2023

ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ೭೫ನೇ ಜನ್ಮದಿನ : ರುದ್ರಾಭಿಷೇಕ, ವಿಶೇಷ ಪೂಜೆ

ಶ್ರೀ ಕ್ಷೇತ್ರ ಧರ್ಮಾಧಿಕಾರಿ, ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ೭೫ನೇ ಜನ್ಮ ದಿನದ ಅಂಗವಾಗಿ ಭದ್ರಾವತಿ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
    ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಾಧಿಕಾರಿ, ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ೭೫ನೇ ಜನ್ಮ ದಿನದ ಅಂಗವಾಗಿ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
    ಡಾ. ವೀರೇಂದ್ರ ಹೆಗ್ಗಡೆಯವರಿಗೆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ನಾಡಿಗೆ ಇವರ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಲಭಿಸುವಂತಾಗಲಿ ಎಂಬ ವಿಶೇಷ ಸಂಕಲ್ಪದೊಂದಿಗೆ ರುದ್ರಾಭಿಷೇಕ ಹಾಗು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
    ಜಿಲ್ಲಾ ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಜಿ. ಅನಂದಕುಮಾರ್, ಸದಸ್ಯರಾದ ಆರ್. ಕರುಣಾಮೂರ್ತಿ, ಸ್ಥಳೀಯ ಪ್ರಮುಖರಾದ ರಾಜು ರೇವಣಕರ್, ನರೇಂದ್ರ, ಸುಬ್ಬಣ್ಣ, ಬಿ.ಎಸ್ ಶ್ರೀನಾಥ್, ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಾತ್ಮಗಾಂಧಿ ವೃತ್ತದಲ್ಲಿ ಫುಡ್ ಕೋರ್ಟ್ ನಿರ್ಮಾಣ : ಪೂರ್ವಭಾವಿ ಸಭೆ

ಹಲವು ವರ್ಷಗಳ ಬೇಡಿಕೆಯಂತೆ ಭದ್ರಾವತಿ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಹೈಟೆಕ್ ಫುಡ್ ಕೋರ್ಟ್ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ವ್ಯಾಪಾರಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.
    ಭದ್ರಾವತಿ : ಹಲವು ವರ್ಷಗಳ ಬೇಡಿಕೆಯಂತೆ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಹೈಟೆಕ್ ಫುಡ್ ಕೋರ್ಟ್ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ.
    ಮಹಾತ್ಮಗಾಂಧಿ ವೃತ್ತದಲ್ಲಿ ಪುಟ್‌ಪಾತ್ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕನ್ಸರ್‌ವೆನ್ಸಿಯಲ್ಲಿ ಸುಸಜ್ಜಿತ ಹೈಟೆಕ್ ಫುಡ್ ಕೋರ್ಟ್ ನಿರ್ಮಿಸುವ ಸಂಬಂಧ ನಗರಸಭೆ ಹೆಚ್ಚಿನ ಆಸಕ್ತಿವಹಿಸಿದ್ದು, ಈ ಹಿನ್ನಲೆಯಲ್ಲಿ ವ್ಯಾಪಾರಸ್ಥರೊಂದಿಗೆ ನಗರಸಭೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
    ೧೨೦ ಮೀಟರ್ ಉದ್ದ  ಮತ್ತು ೮ ಮೀಟರ್ ಅಗಲ ವಿಸ್ತೀರ್ಣ ಹೊಂದಿರುವ ಕನ್ಸರ್‌ವೆನ್ಸಿಯಲ್ಲಿ ಒಟ್ಟು ೨೫ ವ್ಯಾಪಾರಸ್ಥರಿಗೆ ಸುಮಾರು ೧.೫ ಕೋ. ರು. ವೆಚ್ಚದಲ್ಲಿ ಫುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ನೀಲನಕ್ಷೆ ಸಿದ್ದಪಡಿಸಿ ಅನುಮೋದನೆ ಕಳುಹಿಸಬೇಕಾಗಿದೆ. ಈಗಾಗಲೇ ಬಸವೇಶ್ವರ ವೃತ್ತದಲ್ಲಿ ಒಟ್ಟು ೮ ವ್ಯಾಪಾರಸ್ಥರಿಗೆ ಸುಮಾರು ೮೫ ಲಕ್ಷ ರು. ವೆಚ್ಚದಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲು ನೀಲನಕ್ಷೆ ಸಿದ್ದಪಡಿಸಿ ಕಳುಹಿಸಲಾಗಿದೆ. ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಲ್ಲಿ ಸಾಲದ ರೂಪದಲ್ಲಿ ಅನುದಾನ ಬಳಸಿಕೊಳ್ಳಲಾಗುತ್ತಿದ್ದು, ೧೨ ವರ್ಷಗಳ ಕಾಲಾವಧಿಯಲ್ಲಿ ಮರುಪಾವತಿ ಮಾಡಬೇಕಾಗಿದೆ.
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಪೌರಾಯುಕ್ತ ಎಚ್.ಎಂ ಮನುಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಚನ್ನಪ್ಪ, ಆರ್. ಮೋಹನ್‌ಕುಮಾರ್, ಜಾರ್ಜ್, ಕಾಂತರಾಜ್, ಟಿಪ್ಪು ಸುಲ್ತಾನ್, ಮೋಹನ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭಾನುವಾರ, ನವೆಂಬರ್ 26, 2023

ಸಂವಿಧಾನ ದಿನಾಚರಣೆ : ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ಭದ್ರಾವತಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
    ಭದ್ರಾವತಿ: ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ನಗರದಲ್ಲಿ ವಿವಿಧ ಸಂಘಟನೆಗಳಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ, ಡಿಎಸ್‌ಎಸ್ ಪ್ರಮುಖರಾದ ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಕೆ. ರಂಗನಾಥ್, ಜಿಂಕ್‌ಲೈನ್ ಮಣಿ, ರಂಗನಾಥ ಅರಹತೊಳಲು, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ ಪ್ರಮುಖರಾದ ಎಸ್. ಚೇತನ್‌ಕುಮಾರ್, ಡಿ.ಎಸ್ ಹೇಮಂತ್‌ಕುಮಾರ್, ಆರ್. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಉಳಿಸಲು ಪೇಜಾವರ ಶ್ರೀಗಳಿಗೆ ಮನವಿ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ, ಕಾಯಂ ಹಾಗು ನಿವೃತ್ತ ಕಾರ್ಮಿಕರು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ರಾಮೀಜಿಯವರನ್ನು ಭೇಟಿಯಾಗಿ ಇತ್ತೀಚೆಗೆ ಜರುಗಿದ ಕಾರ್ಖಾನೆ ಶತಮಾನೋತ್ಸವ ಹಾಗೂ  ಪ್ರಸ್ತುತ ಬೆಳವಣಿಗೆಗಳನ್ನು ಶ್ರೀಗಳಿಗೆ ವಿವರಿಸಿ ಕಾರ್ಖಾನೆ ಉಳಿಸಿಕೊಳ್ಳಲು ಮನವಿ ಮಾಡಿದ್ದಾರೆ.
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ಸುಮಾರು ೧೧ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಇದೀಗ ಹೋರಾಟ ಮತ್ತಷ್ಟು ತೀವ್ರಗೊಳಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ನಿಯೋಗದಲ್ಲಿ ಪಾಲ್ಗೊಳ್ಳಲು ಕಾರ್ಮಿಕರು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ರಾಮೀಜಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
    ಕಾರ್ಖಾನೆ ಮಾಜಿ ಉದ್ಯೋಗಿ, ಹಿರಿಯ ಚಲನಚಿತ್ರ ದೊಡ್ಡಣ್ಣನವರ ನೇತೃತ್ವದಲ್ಲಿ ಇತ್ತೀಚೆಗೆ ಜರುಗಿದ ಕಾರ್ಖಾನೆ ಶತಮಾನೋತ್ಸವ ಹಾಗೂ ಕಾರ್ಖಾನೆಯ ಪ್ರಸ್ತುತ ಬೆಳವಣಿಗೆಗಳನ್ನು ಕಾರ್ಮಿಕರು ಶ್ರೀಗಳಿಗೆ ವಿವರಿಸಿದ್ದಾರೆ.
    ಕಾರ್ಖಾನೆ ಉಳಿಸಿಕೊಳ್ಳಲು ಮೈಸೂರು ಮಹಾರಾಜರು, ಜಿಲ್ಲೆಯ ಸಂಸದರು, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಪ್ರಮುಖ ಮಠಗಳ ಮಠಾಧೀಶರು ಹಾಗೂ ನಾಡಿನ ಪ್ರಮುಖರನ್ನೊಳಗೊಂಡ ನಿಯೋಗ ಪ್ರಧಾನಮಂತ್ರಿಯವರನ್ನು ಭೇಟಿಯಾಗುತ್ತಿದ್ದು. ಈ ನಿಯೋಗದಲ್ಲಿ ಭಾಗಿಯಾಗಿ ಪ್ರಧಾನಮಂತ್ರಿಯವರ ಮನವೊಲಿಸಿ ಕಾರ್ಖಾನೆ ಉಳಿಸಿ ಕೊಡಬೇಕಾಗಿ ಮನವಿ ಮಾಡಿದರು.
    ಕಾರ್ಮಿಕರ ಮನವಿಗೆ ಶ್ರೀಗಳು ಪೂರಕವಾಗಿ ಸ್ಪಂದಿಸಿದ್ದು, ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅಭಯ ನೀಡಿದ್ದಾರೆ.
    ಗುತ್ತಿಗೆ, ಕಾಯಂ ಹಾಗು ನಿವೃತ್ತ ಕಾರ್ಮಿಕರಾದ ರಾಕೇಶ್, ಆನಂದ್, ಅಮೃತ್ ಮತ್ತು ನರಸಿಂಹಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ನಾಗರತ್ನ-ಸಿದ್ದಲಿಂಗಯ್ಯ ನಿವಾಸದಲ್ಲಿ ಯಶಸ್ವಿಯಾಗಿ ಜರುಗಿದ ೬೪೮ನೇ ವಚನ ಮಂಟಪ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಸಿದ್ಧಾರೂಢನಗರದ ನಾಗರತ್ನ-ಸಿದ್ದಲಿಂಗಯ್ಯ ಕುಟುಂಬದ ಸಹಯೋಗದೊಂದಿಗೆ ೬೪೮ನೇ ವಚನ ಮಂಟಪ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹಿರೇನಲ್ಲೂರು ಎಚ್.ಎಸ್ ವೀರಸಂಗಪ್ಪ ದತ್ತಿ-೭೦ ಕಾರ್ಯಕ್ರಮ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಉದ್ಘಾಟಿಸಿದರು.
    ಭದ್ರಾವತಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಶಾಖೆ ವತಿಯಿಂದ ಸಿದ್ಧಾರೂಢನಗರದ ನಾಗರತ್ನ-ಸಿದ್ದಲಿಂಗಯ್ಯ ಕುಟುಂಬದ ಸಹಯೋಗದೊಂದಿಗೆ ೬೪೮ನೇ ವಚನ ಮಂಟಪ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹಿರೇನಲ್ಲೂರು ಎಚ್.ಎಸ್ ವೀರಸಂಗಪ್ಪ ದತ್ತಿ-೭೦ ಕಾರ್ಯಕ್ರಮ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಉದ್ಘಾಟಿಸಿದರು.
    ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಪತಿ ಹಳಗುಂದ `ಶರಣರ ಚಿಂತನೆಯಲ್ಲಿ ಬದುಕಿನ ಮೌಲ್ಯಗಳ ಪ್ರಸ್ತುತತೆ' ಕುರಿತು ಮಾತನಾಡಿದರು.  
    ಶಿವಮೊಗ್ಗ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಮಂಜುನಾಥ್ ವಚನ ಗಾಯನದೊಂದಿಗೆ ಶರಣರ ಮೌಖಿಕ ಚಿಂತನೆ ಕುರಿತು ಮಾತನಾಡಿದರು. ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು.
    ಪ್ರಮುಖರಾದ ಜಗದೀಶ್ ಕವಿ, ಎಚ್.ಆರ್ ಕುಮಾರಪ್ಪ, ಮಲ್ಲಿಕಾಂಬ ವಿರುಪಾಕ್ಷಪ್ಪ, ನಾಗರತ್ನ, ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಂ. ವಿರುಪಾಕ್ಷಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂರ್ಣಿಮ ಸಿದ್ದಲಿಂಗಯ್ಯ ಸ್ವಾಗತಿಸಿದರು. ನಂದಿನಿ ಮಲ್ಲಿಕಾರ್ಜುನ ನಿರೂಪಿಸಿದರು. ಕತ್ತಲಗೆರೆ ತಿಮ್ಮಪ್ಪ ಮತ್ತು ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು.

ಶನಿವಾರ, ನವೆಂಬರ್ 25, 2023

ಆಶ್ರಯ, ಆಶೀರ್ವಾದ ನೀಡಿ ನಿರ್ಗಮಿಸಿರುವ ಸ್ವಾಮೀಜಿಗಳ ಸ್ಮರಣೆ ಮುಖ್ಯ : ಶ್ರೀ ಸಂಗಮಾನಂದ ಸ್ವಾಮೀಜಿ

ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀಕ್ಷೇತ್ರ ಭದ್ರಗಿರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ದವತ್ತೀರು ಸ್ವಾಮೀಜಿಗಳ ೬ನೇ ವರ್ಷದ ಗುರುಪೂಜೆ ಸಮಾರಂಭ ಬೆಂಗಳೂರಿನ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿ ಉದ್ಘಾಟಿಸಿದರು.  
    ಭದ್ರಾವತಿ: ಧರ್ಮ, ಜಾತಿ ಬೇಧಭಾವವಿಲ್ಲದೆ ಆಶ್ರಯ, ಆಶೀರ್ವಾದ ನೀಡಿ ನಿರ್ಗಮಿಸಿರುವ ಸ್ವಾಮೀಜಿಗಳ ಸ್ಮರಣೆ ಮುಖ್ಯ ಎಂದು ಬೆಂಗಳೂರಿನ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿ ಹೇಳಿದರು.
    ಶ್ರೀಗಳು ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀಕ್ಷೇತ್ರ ಭದ್ರಗಿರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ದವತ್ತೀರು ಸ್ವಾಮೀಜಿಗಳ ೬ನೇ ವರ್ಷದ ಗುರುಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಶೀರ್ವಚನ ನೀಡಿದರು.
    ಮನುಷ್ಯರ ಬದುಕು ಸಾರ್ಥಕಗೊಳ್ಳಬೇಕಾದರೆ ಧಾರ್ಮಿಕ ಹಾಗು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಶ್ರೀ ಕ್ಷೇತ್ರ ಭದ್ರಗಿರಿ ಅನೇಕ ಸಾಧು ಸಂತರುಗಳ ಸಂಗಮ ಸ್ಥಳ. ಅನೇಕ ಸಾಧುಗಳು ಇಲ್ಲಿಗೆ ಭೇಟಿ ನೀಡಿದ್ದು, ಇದೊಂದು ಪುಣ್ಯಸ್ಥಳವಾಗಿದೆ ಎಂದರು.
    ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ರಾಜ್ಯ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರನ್ನು ಸೆಳೆದ ಮಹತ್ವದ ಕ್ಷೇತ್ರ ಭದ್ರಗಿರಿ. ಭಕ್ತರನ್ನು ಸೆಳೆಯುವುದು ಸಲಭವಲ್ಲ. ವಿಶೇಷ ಶಕ್ತಿ ಇದ್ದಾಗ ಮಾತ್ರ ಭಕ್ತರು ಆಕರ್ಷಿತರಾಗಲು ಸಾಧ್ಯ ಎಂದರು.
ಶ್ರೀಮಂತರಿಗೆ ಮಹತ್ವನೀಡಲು ಅನೇಕ ಮಠಗಳಿವೆ. ಆದರೆ ಭದ್ರಗಿರಿ ಆಶ್ರಮವು ಬಡವರಿಗೆ ಆದ್ಯತೆ ನೀಡುವ ಮೂಲಕವೇ ಮನ್ನಣೆ ಪಡೆದಿದೆ. ಈ ಆಶ್ರಮದ ವತಿಯಿಂದ ಬಡವರಿಗೆ ನೆರವಾಗುವಂಥ ಹಲವರು ಸೇವಾ ಕಾರ್ಯಗಳನ್ನು ಮುಂದುವರೆಸಿದೆ. ಈ ಆಶ್ರಮದ ಅಭಿವೃದ್ಧಿಗೆ ತಮ್ಮ ಕುಟುಂಬದವರು ಸದಾ ಸ್ಪಂದಿಸುವುದಾಗಿ ತಿಳಿಸಿದರು.
    ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ದವತ್ತೀರು ಸ್ವಾಮೀಜಿಗಳ ನಡೆ-ನುಡಿ ಭಕ್ತರಿಗೆ ಆದರ್ಶ. ಭಕ್ತರಲ್ಲಿ ಅಜ್ಞಾನ ದೂರಾಗಿಸಿ, ಜ್ಞಾನವನ್ನು ಸ್ಥಾಪಿಸುವುದೇ ಪ್ರತಿಯೊಬ್ಬ ಸ್ವಾಮೀಜಿಗಳ ಮೂಲ ಕರ್ತವ್ಯ ಎಂದರು.
    ಕುಂಬಾರ ಗುರುಪೀಠದ ಶ್ರೀಕುಂಬಾರ ಗುಂಡಯ್ಯ ಸ್ವಾಮೀಜಿ, ಕೊಲ್ಲೂರಿನ ರಾಘವೇಂದ್ರ,ಲಿಂಗಯ್ಯ ಸ್ವಾಮೀಜಿ, ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಚ್ ಶ್ರೀನಿವಾಸ್ ಅವರ ಪತ್ನಿ ವಾಣಿ, ಎಂ.ಸಿ ಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ.ಸಿ ರಾಮೇಗೌಡ, ಉಪಾಧ್ಯಕ್ಷೆ ಅಲಮೇಲಮ್ಮ, ಆಶ್ರಮದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಘೋಷ್ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.
    ವಿದ್ಯಾರ್ಥಿ ಸೃಜನ್ ಪ್ರಾರ್ಥಿಸಿದರು. ಡಾ. ವಿಕ್ರಂ ಸ್ವಾಗತಿಸಿ, ಡಾ. ದಿವ್ಯ ದವತ್ತೀರು ಶ್ರೀಗಳು ನಡೆದುಬಂದ ಹಾದಿಯನ್ನು ಪರಿಚಯಿಸಿದರು. ಮಂಜುನಾಥ್ ನಿರೂಪಿಸಿ, ವಂದಿಸಿದರು.

ಭದ್ರಾವತಿ : ಅರಣ್ಯ ಇಲಾಖೆ ಬೋನಿಗೆ ಸಿಕ್ಕಿ ಬಿದ್ದ ಮತ್ತೊಂದು ಚಿರತೆ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಂಡು ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
    ಭದ್ರಾವತಿ : ಕ್ಷೇತ್ರದಲ್ಲಿ ಇತ್ತೀಚೆಗೆ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು, ಸುಮಾರು ೨ ತಿಂಗಳ ಹಿಂದೆ ಅರಣ್ಯ ಇಲಾಖೆಯ ಬೋನಿಗೆ ಚಿರತೆಯೊಂದು ಸಿಕ್ಕಿ ಬಿದ್ದ ಪ್ರಕರಣ ನಡೆದಿತ್ತು. ಇದೀಗ ಗ್ರಾಮೀಣ ಭಾಗದಲ್ಲಿ ಮತ್ತೊಂದು ಚಿರತೆ ಬೋನಿಗೆ ಸಿಕ್ಕಿ ಬಿದ್ದಿದೆ.
    ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಂಡು ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೋನಿಗೆ ಸಿಕ್ಕಿ ಬಿದ್ದ ಚಿರತೆಯನ್ನು ಅರಣ್ಯಕ್ಕೆ ಬಿಡಲಾಗಿದೆ.
    ಇತ್ತೀಚೆಗೆ ಗ್ರಾಮದ ಮನೆಯೊಂದರಲ್ಲಿ ಕಟ್ಟಿ ಹಾಕಲಾಗಿದ್ದ ಸಾಕು ನಾಯಿಯೊಂದರ ಮೇಲೆ ಚಿರತೆ ದಾಳಿ ನಡೆಸಿ ಪರಾರಿಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಬೋನ್ ಇಟ್ಟಿದ್ದರು. ಈ ನಡುವೆ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ಚಿರತೆ ಬೋನ್‌ಗೆ ಸಿಕ್ಕಿ ಬಿದ್ದಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರು, ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬುವ ಮೂಲಕ ಎಚ್ಚರ ವಹಿಸುವಂತೆ ಮನವಿ ಮಾಡಿದರು.
    ಸುಮಾರು ೨ ತಿಂಗಳ ಹಿಂದೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಮರಿ ಚಿರತೆಯೊಂದು ಸಿಕ್ಕಿ ಬಿದ್ದಿತ್ತು.