ಶ್ರೀ ಸಾಯಿ ದೃವಿ ಕಾಂಪ್ಲೆಕ್ಸ್, ಲಕ್ಷ್ಮೀ ಬೇಕರಿ ಎದುರು, ಮುಖ್ಯ ರಸ್ತೆ, ಸಿದ್ದಾಪುರ, ಭದ್ರಾವತಿ. ೩ನೇ ಮಹಡಿಯಲ್ಲಿ 34 x 68 ಚದುರ ಅಡಿ ವಿಸ್ತೀರ್ಣ ಹೊಂದಿರುವ ಹಾಲ್ ಬಾಡಿಗೆಗೆ ಇದೆ. ಲಿಫ್ಟ್ ಸೌಲಭ್ಯ ಹೊಂದಿದ್ದು, ಹೆಚ್ಚಿನ ಮಾಹಿತಿಗೆ ಮೊ: 9845070083 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
Tuesday, November 28, 2023
ತಮಿಳ್ ಸಂಗಮ್‌ವತಿಯಿಂದ ಕನ್ನಡ ರಾಜ್ಯೋತ್ಸವ
ಭದ್ರಾವತಿ ತರೀಕೆರೆ ರಸ್ತೆಯ ತಮಿಳ್ ಸಂಗಮ್ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಗಮ್ ಅಧ್ಯಕ್ಷ ಕೆ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.
ಭದ್ರಾವತಿ : ನಗರದ ತರೀಕೆರೆ ರಸ್ತೆಯ ತಮಿಳ್ ಸಂಗಮ್ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಗಮ್ ಅಧ್ಯಕ್ಷ ಕೆ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಆಗಮುಡಿ ಮೊದಲಿಯಾರ್ ಸಂಘದ ಅಧ್ಯಕ್ಷ ಕೆ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಮಿಳ್ ಸಂಗಮ್ ಕಾರ್ಯದರ್ಶಿ ವಿ. ಮಣಿ, ಸಹ ಕಾಯದರ್ಶಿ ವಿ. ರಾಜ, ಖಜಾಂಚಿ ವೀರಭದ್ರನ್, ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ಸದಸ್ಯರು, ಸ್ಥಳೀಯರು ಪಾಲ್ಗೊಂಡಿದ್ದರು.
Monday, November 27, 2023
ಡಿ.೨, ೩ರಂದು ೨೨ನೇ ಪತ್ರ ಸಂಸ್ಕೃತಿ ಮಿತ್ರರ ಸಮ್ಮಿಲನ
ಭದ್ರಾವತಿ: ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ವತಿಯಿಂದ ೨ ದಿನಗಳ ಕಾಲ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೨೨ನೇ ಪತ್ರ ಸಂಸ್ಕೃತಿ ಮಿತ್ರರ ಸಮ್ಮಿಲನ ಹಮ್ಮಿಕೊಳ್ಳಲಾಗಿದೆ.
ಡಿ.೨ರಂದು ಸಂಜೆ ೫.೩೦ಕ್ಕೆ ಡಿ.ಬಿ ಹಳ್ಳಿ ಪದ್ಮದೀಪ ಶಾಲೆ ವತಿಯಿಂದ ಅಜಯ್ ನೀನಾಸಂ ನಿರ್ದೇಶನದಲ್ಲಿ ``ಸಿರಿಧಾನ್ಯವೇ ಸರಿಧಾನ್ಯ'' ನಾಟಕ ಪ್ರದರ್ಶನ, ವಿಜಯಲಕ್ಷ್ಮಿ ಮತ್ತು ತಂಡದಿಂದ ``ರಂಗ ಗೀತೆಗಳು'' ಹಾಗು ಶಿವಮೊಗ್ಗ ಸಹ್ಯಾದ್ರಿ ಕಲಾ ತಂಡದಿಂದ ನಾ. ಶ್ರೀನಿವಾಸ್ ನಿರ್ದೇಶನದ ಜಂಗಮ ನಾಟಕ ಪ್ರದರ್ಶನ ನಡೆಯಲಿದೆ.
ಡಿ.೩ರಂದು ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣಪ್ಪ ತಂಡದಿಂದ ಜಾನಪದ ಗೀತೆಗಳು, ಬೆಂಗಳೂರಿನ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ಪಂಡಿತ್ ಅಮೃತೇಶ್ ಕುಲಕರ್ಣಿ ಹಾಗು ವಿದ್ಯಾರ್ಥಿಗಳಿಂದ ತಬಲಾ ತರಂಗ್ ನಡೆಯಲಿದೆ.
ನಂತರ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಇಂ. ಹೊಸಹಳ್ಳಿ ದಾಳೇಗೌಡ ಅಧ್ಯಕ್ಷತೆ ವಹಿಸಲಿದ್ದು, ಜಿ.ಎಚ್ ರಾಜಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹಾಸನದ ಸಾಹಿತಿ ಎನ್.ಎಲ್ ಚನ್ನೇಗೌಡ ಅವರಿಂದ `ಪತ್ರೋತ್ಸವ ಭಾಗ-೩' ಬಿಡುಗಡೆ ಮತ್ತು ನುಡಿ, ಸಾಹಿತಿ ಡಾ. ಭದ್ರಾವತಿ ರಾಮಾಚಾರಿ ಅವರಿಂದ ಪಿಸುಮಾತು `ರಾಷ್ಟ್ರಪ್ರೇಮ' ಸಂಚಿಕೆ ಬಿಡುಗಡೆ ಮತ್ತು ನುಡಿ ಹಾಗು ಬೆಂಗಳೂರಿನ ಬುದ್ಧ ಬಸವ ಗಾಂಧಿ ಟ್ರಸ್ಟ್ ಸಂಸ್ಥಾಪಕ ಡಾ. ರಾಮಲಿಂಗೇಶ್ವರ(ಸಿಸಿರಾ) ಅವರಿಂದ `ಮಾಸದ ನೆನಪು' ಪುಸ್ತಕ ಬಿಡುಗಡೆ ಮತ್ತು ನುಡಿ ನಡೆಯಲಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕಾದಂಬರಿಗಾರ್ತಿ ಜಯಂತಿ ಚಂದ್ರಶೇಖರ್, ಲೇಖಕ ಪಿ.ಎಂ ಸಿದ್ದಯ್ಯ ಉಪಸ್ಥಿತರಿರುವರು. ಬಿ.ಆರ್ ಪ್ರಾಜೆಕ್ಟ್ ಸಿದ್ದಪ್ಪ ಮತ್ತು ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಆಸ್ಪತ್ರೆ ಎಸ್. ಜ್ಯೋತಿ ಅವರಿಗೆ ಪತ್ರ ಪರಿಚಯ ಸೇವಾ ಪ್ರಶಸ್ತಿ, ಯು.ಎನ್ ಸಂಗನಾಳಮಠ ಮತ್ತು ಯು. ಶಕುಂತಲ ಹಾಗು ಡಾ. ಶರಶ್ಚಂದ್ರ ಜಿ. ರಾನಡೆ ಮತ್ತು ಸ್ವಿತಾ ರಾನಡೆ ದಂಪತಿಗಳಿಗೆ ಸಾಂಸ್ಕೃತಿಕ ರಾಯಭಾರಿ ದಂಪತಿಗಳು ಪ್ರಶಸ್ತಿ ಹಾಗು ಬೆಂಗಳೂರಿನ ಮೈಕೋ ಶಿವಶಂಕರ್ ಅವರಿಗೆ ದಿವಂಗತ ದೇಶೀಗೌಡ ಮತ್ತು ನಿಂಗಮ್ಮ ರಂಗಭೂಮಿ ದತ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪತ್ರ ಸಂಸ್ಕೃತಿ ಮಿತ್ರರ ಸಮ್ಮಿಲನ ಯಶಸ್ವಿಗೊಳಿಸುವಂತೆ ಸಂಘಟನೆ ಸಂಸ್ಥಾಪಕ ಇಂ. ಹೊಸಹಳ್ಳಿ ದಾಳೇಗೌಡ ಕೋರಿದ್ದಾರೆ.
ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ೭೫ನೇ ಜನ್ಮದಿನ : ರುದ್ರಾಭಿಷೇಕ, ವಿಶೇಷ ಪೂಜೆ
ಶ್ರೀ ಕ್ಷೇತ್ರ ಧರ್ಮಾಧಿಕಾರಿ, ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ೭೫ನೇ ಜನ್ಮ ದಿನದ ಅಂಗವಾಗಿ ಭದ್ರಾವತಿ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಾಧಿಕಾರಿ, ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ೭೫ನೇ ಜನ್ಮ ದಿನದ ಅಂಗವಾಗಿ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಡಾ. ವೀರೇಂದ್ರ ಹೆಗ್ಗಡೆಯವರಿಗೆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ನಾಡಿಗೆ ಇವರ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಲಭಿಸುವಂತಾಗಲಿ ಎಂಬ ವಿಶೇಷ ಸಂಕಲ್ಪದೊಂದಿಗೆ ರುದ್ರಾಭಿಷೇಕ ಹಾಗು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಜಿಲ್ಲಾ ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಜಿ. ಅನಂದಕುಮಾರ್, ಸದಸ್ಯರಾದ ಆರ್. ಕರುಣಾಮೂರ್ತಿ, ಸ್ಥಳೀಯ ಪ್ರಮುಖರಾದ ರಾಜು ರೇವಣಕರ್, ನರೇಂದ್ರ, ಸುಬ್ಬಣ್ಣ, ಬಿ.ಎಸ್ ಶ್ರೀನಾಥ್, ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಹಾತ್ಮಗಾಂಧಿ ವೃತ್ತದಲ್ಲಿ ಫುಡ್ ಕೋರ್ಟ್ ನಿರ್ಮಾಣ : ಪೂರ್ವಭಾವಿ ಸಭೆ
ಹಲವು ವರ್ಷಗಳ ಬೇಡಿಕೆಯಂತೆ ಭದ್ರಾವತಿ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಹೈಟೆಕ್ ಫುಡ್ ಕೋರ್ಟ್ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ವ್ಯಾಪಾರಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ಭದ್ರಾವತಿ : ಹಲವು ವರ್ಷಗಳ ಬೇಡಿಕೆಯಂತೆ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಹೈಟೆಕ್ ಫುಡ್ ಕೋರ್ಟ್ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ.
ಮಹಾತ್ಮಗಾಂಧಿ ವೃತ್ತದಲ್ಲಿ ಪುಟ್‌ಪಾತ್ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕನ್ಸರ್‌ವೆನ್ಸಿಯಲ್ಲಿ ಸುಸಜ್ಜಿತ ಹೈಟೆಕ್ ಫುಡ್ ಕೋರ್ಟ್ ನಿರ್ಮಿಸುವ ಸಂಬಂಧ ನಗರಸಭೆ ಹೆಚ್ಚಿನ ಆಸಕ್ತಿವಹಿಸಿದ್ದು, ಈ ಹಿನ್ನಲೆಯಲ್ಲಿ ವ್ಯಾಪಾರಸ್ಥರೊಂದಿಗೆ ನಗರಸಭೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
೧೨೦ ಮೀಟರ್ ಉದ್ದ ಮತ್ತು ೮ ಮೀಟರ್ ಅಗಲ ವಿಸ್ತೀರ್ಣ ಹೊಂದಿರುವ ಕನ್ಸರ್‌ವೆನ್ಸಿಯಲ್ಲಿ ಒಟ್ಟು ೨೫ ವ್ಯಾಪಾರಸ್ಥರಿಗೆ ಸುಮಾರು ೧.೫ ಕೋ. ರು. ವೆಚ್ಚದಲ್ಲಿ ಫುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ನೀಲನಕ್ಷೆ ಸಿದ್ದಪಡಿಸಿ ಅನುಮೋದನೆ ಕಳುಹಿಸಬೇಕಾಗಿದೆ. ಈಗಾಗಲೇ ಬಸವೇಶ್ವರ ವೃತ್ತದಲ್ಲಿ ಒಟ್ಟು ೮ ವ್ಯಾಪಾರಸ್ಥರಿಗೆ ಸುಮಾರು ೮೫ ಲಕ್ಷ ರು. ವೆಚ್ಚದಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲು ನೀಲನಕ್ಷೆ ಸಿದ್ದಪಡಿಸಿ ಕಳುಹಿಸಲಾಗಿದೆ. ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಲ್ಲಿ ಸಾಲದ ರೂಪದಲ್ಲಿ ಅನುದಾನ ಬಳಸಿಕೊಳ್ಳಲಾಗುತ್ತಿದ್ದು, ೧೨ ವರ್ಷಗಳ ಕಾಲಾವಧಿಯಲ್ಲಿ ಮರುಪಾವತಿ ಮಾಡಬೇಕಾಗಿದೆ.
ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಪೌರಾಯುಕ್ತ ಎಚ್.ಎಂ ಮನುಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಚನ್ನಪ್ಪ, ಆರ್. ಮೋಹನ್‌ಕುಮಾರ್, ಜಾರ್ಜ್, ಕಾಂತರಾಜ್, ಟಿಪ್ಪು ಸುಲ್ತಾನ್, ಮೋಹನ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Sunday, November 26, 2023
ಸಂವಿಧಾನ ದಿನಾಚರಣೆ : ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ಭದ್ರಾವತಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
ಭದ್ರಾವತಿ: ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ನಗರದಲ್ಲಿ ವಿವಿಧ ಸಂಘಟನೆಗಳಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೀಠಿಕೆ ವಾಚಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ, ಡಿಎಸ್‌ಎಸ್ ಪ್ರಮುಖರಾದ ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಕೆ. ರಂಗನಾಥ್, ಜಿಂಕ್‌ಲೈನ್ ಮಣಿ, ರಂಗನಾಥ ಅರಹತೊಳಲು, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆ ಪ್ರಮುಖರಾದ ಎಸ್. ಚೇತನ್‌ಕುಮಾರ್, ಡಿ.ಎಸ್ ಹೇಮಂತ್‌ಕುಮಾರ್, ಆರ್. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವಿಐಎಸ್‌ಎಲ್ ಉಳಿಸಲು ಪೇಜಾವರ ಶ್ರೀಗಳಿಗೆ ಮನವಿ
ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ, ಕಾಯಂ ಹಾಗು ನಿವೃತ್ತ ಕಾರ್ಮಿಕರು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ರಾಮೀಜಿಯವರನ್ನು ಭೇಟಿಯಾಗಿ ಇತ್ತೀಚೆಗೆ ಜರುಗಿದ ಕಾರ್ಖಾನೆ ಶತಮಾನೋತ್ಸವ ಹಾಗೂ ಪ್ರಸ್ತುತ ಬೆಳವಣಿಗೆಗಳನ್ನು ಶ್ರೀಗಳಿಗೆ ವಿವರಿಸಿ ಕಾರ್ಖಾನೆ ಉಳಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ಸುಮಾರು ೧೧ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಇದೀಗ ಹೋರಾಟ ಮತ್ತಷ್ಟು ತೀವ್ರಗೊಳಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ನಿಯೋಗದಲ್ಲಿ ಪಾಲ್ಗೊಳ್ಳಲು ಕಾರ್ಮಿಕರು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ರಾಮೀಜಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಕಾರ್ಖಾನೆ ಮಾಜಿ ಉದ್ಯೋಗಿ, ಹಿರಿಯ ಚಲನಚಿತ್ರ ದೊಡ್ಡಣ್ಣನವರ ನೇತೃತ್ವದಲ್ಲಿ ಇತ್ತೀಚೆಗೆ ಜರುಗಿದ ಕಾರ್ಖಾನೆ ಶತಮಾನೋತ್ಸವ ಹಾಗೂ ಕಾರ್ಖಾನೆಯ ಪ್ರಸ್ತುತ ಬೆಳವಣಿಗೆಗಳನ್ನು ಕಾರ್ಮಿಕರು ಶ್ರೀಗಳಿಗೆ ವಿವರಿಸಿದ್ದಾರೆ.
ಕಾರ್ಖಾನೆ ಉಳಿಸಿಕೊಳ್ಳಲು ಮೈಸೂರು ಮಹಾರಾಜರು, ಜಿಲ್ಲೆಯ ಸಂಸದರು, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಪ್ರಮುಖ ಮಠಗಳ ಮಠಾಧೀಶರು ಹಾಗೂ ನಾಡಿನ ಪ್ರಮುಖರನ್ನೊಳಗೊಂಡ ನಿಯೋಗ ಪ್ರಧಾನಮಂತ್ರಿಯವರನ್ನು ಭೇಟಿಯಾಗುತ್ತಿದ್ದು. ಈ ನಿಯೋಗದಲ್ಲಿ ಭಾಗಿಯಾಗಿ ಪ್ರಧಾನಮಂತ್ರಿಯವರ ಮನವೊಲಿಸಿ ಕಾರ್ಖಾನೆ ಉಳಿಸಿ ಕೊಡಬೇಕಾಗಿ ಮನವಿ ಮಾಡಿದರು.
ಕಾರ್ಮಿಕರ ಮನವಿಗೆ ಶ್ರೀಗಳು ಪೂರಕವಾಗಿ ಸ್ಪಂದಿಸಿದ್ದು, ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅಭಯ ನೀಡಿದ್ದಾರೆ.
ಗುತ್ತಿಗೆ, ಕಾಯಂ ಹಾಗು ನಿವೃತ್ತ ಕಾರ್ಮಿಕರಾದ ರಾಕೇಶ್, ಆನಂದ್, ಅಮೃತ್ ಮತ್ತು ನರಸಿಂಹಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Subscribe to:
Posts (Atom)