ಬುಧವಾರ, ನವೆಂಬರ್ 29, 2023

ಕಾಂಕ್ರೀಟ್ ಕಟ್ಟಡಕ್ಕೆ ದ್ವಿಚಕ್ರ ವಾಹನ ಸವಾರ ಡಿಕ್ಕಿ : ಸ್ಥಳದಲ್ಲಿಯೇ ಸಾವು

    ಭದ್ರಾವತಿ : ದ್ವಿಚಕ್ರ ವಾಹನ ಸವಾರನೋರ್ವ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಾಮಗಾರಿ ಸ್ಥಳದಲ್ಲಿನ ಕಾಂಕ್ರೀಟ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಮಂಗಳವಾರ ರಾತ್ರಿ ನಡೆದಿದೆ.
    ಹೊಸಮನೆ ಓಎಸ್‌ಎಂ ರಸ್ತೆ ನಿವಾಸಿ ಶಶಿಕುಮಾರ್(೪೫) ಮೃತಪಟ್ಟಿದ್ದು, ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಶಶಿಕುಮಾರ್ ಸೇಂಟ್ ಚಾರ್ಲ್ಸ್ ಶಾಲೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
    ನಗರದ ವಿಐಎಸ್‌ಎಲ್ ಡಬ್ಬಲ್ ರಸ್ತೆಯಲ್ಲಿ ವಿದ್ಯುತ್ ಕಂಬ ಅಳವಡಿಸಲು ಕಾಮಗಾರಿ ಕೈಗೊಳ್ಳುತ್ತಿದ್ದು, ಶಶಿಕುಮಾರ್ ರಾತ್ರಿ ಸಿಡಿಲು ಸಹಿತ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಕಾಂಕ್ರೀಟ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸಾರ್ವಜನಿಕರಿಗೆ ಮನವಿ :
    ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸುವ ಜೊತೆಗೆ ಹೆಲ್ಮೆಟ್ ಧರಿಸಿ ಇತರರಿಗೆ ಜಾಗೃತಿ ಮೂಡಿಸಿ ಅಪಘಾತಗಳನ್ನು ತಡೆಗಟ್ಟಲು ಸಹಕರಿಸುವಂತೆ ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ಮನವಿ ಮಾಡಿದ್ದಾರೆ.

ಸಿಡಿಲು ಬಡಿದು ಸಹೋದರರಿಬ್ಬರ ಸಾವು

ಭದ್ರಾವತಿಯಲ್ಲಿ ಮಂಗಳವಾರ ರಾತ್ರಿ ಸಿಡಿಲು ಬಡಿದು ಮೃತಪಟ್ಟ ಬೀರ-ಸುರೇಶ್.
    ಭದ್ರಾವತಿ: ಸಿಡಿಲು ಬಡಿದು ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
    ಗೌಳಿಗರ ಕ್ಯಾಂಪ್ ನಿವಾಸಿಗಳಾದ ಬೀರ(32) ಮತ್ತು ಸುರೇಶ್(30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.  ಮಂಗಳವಾರ ರಾತ್ರಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಜಮೀನಿನಲ್ಲಿದ್ದ ಈ ಇಬ್ಬರಿಗೂ ಏಕಾಏಕಿ ಸಿಡಿಲು ಬಡಿದಿದೆ. ಇದರಿಂದಾಗಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
    ಮೃತದೇಹಗಳನ್ನು ಬುಧವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ, ನವೆಂಬರ್ 28, 2023

ಕೋಟ್ಪಾ ಕಾಯ್ದೆ ಉಲ್ಲಂಘನೆ : ೨೦ ಪ್ರಕರಣ, ೨೦೦೦ ರು. ದಂಡ ವಸೂಲಿ

ಭದ್ರಾವತಿ ನಗರಸಭೆ ವಾರ್ಡ್ ೨೨ರ ಉಜ್ಜನಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ಮಂಗಳವಾರ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘಿಸಿದವರಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.
    ಭದ್ರಾವತಿ : ನಗರಸಭೆ ವಾರ್ಡ್ ೨೨ರ ಉಜ್ಜನಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ಮಂಗಳವಾರ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘಿಸಿದವರಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.
    ೨೦ ಪ್ರಕರಣ, ೨೦೦೦ ದಂಡವನ್ನು ವಿಧಿಸಲಾಯಿತು, ಸೆಕ್ಷನ್ ೪ರಲ್ಲಿ ೧೦, ೬ಎ ೫ ಮತ್ತು ೬ಬಿಯಲ್ಲಿ ೫ ಸೇರಿದಂತೆ ಒಟ್ಟು ೨೦ ಪ್ರಕರಣಗಳಿಂದ ಒಟ್ಟು ೨೦೦೦ ರು. ದಂಡ ವಿಧಿಸಲಾಗಿದೆ.
    ದಾಳಿಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾಬಾಯಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಆನಂದಮೂರ್ತಿ ಮತ್ತು ತಾಜ್ ಹಾಗೂ ಮನೋಹರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿ.ಕೆ ರವಿರಾಜ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ತಂಬಾಕು ಮಾರಾಟಗಾರರಿಗೆ ತಂಬಾಕು ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.

ಶಿವಮೊಗ್ಗ-ಭದ್ರಾವತಿಯಲ್ಲಿ ಫಿಟ್ನೆಸ್ ಡ್ಯಾನ್ಸ್ ತರಬೇತಿ

    ಭದ್ರಾವತಿ: ಕೋರಿಯೋಗ್ರಫರ್ ಸಂತೋಷ್ ಭದ್ರಾವತಿ ಮಾರ್ಗದರ್ಶನದಲ್ಲಿ ಶಿವಮೊಗ್ಗ-ಭದ್ರಾವತಿಯಲ್ಲಿ ಫಿಟ್ನೆಸ್ ಡ್ಯಾನ್ಸ್ ತರಬೇತಿ ಆರಂಭಿಸಲಾಗುತ್ತಿದೆ.
    ವಾರಾಂತ್ಯ ತರಗತಿಗಳು ಮತ್ತು ಆಸಕ್ತ ಕುಟುಂಬಗಳಿಗೆ ಸ್ವಗೃಹಗಳಲ್ಲಿಯೂ ತರಬೇತಿ ನೀಡಲಾಗುವುದು. ಸದೃಢ ಆರೋಗ್ಯ ಮತ್ತು ಜಂಜಾಟಗಳಿಂದ ಮುಕ್ತರಾಗಲು ಸಹಾಕಾರಿಯಾಗಿರುವ ಫಿಟ್ನೆಸ್ ನೃತ್ಯವನ್ನು ೫ ರಿಂದ ೬೦ವರ್ಷದವರೆಗಿನ ಎಲ್ಲ ವಯೋಮಾನದವರು ಕಲಿಬಹುದಾಗಿದೆ.
    ಹೆಚ್ಚಿನ ಮಾಹಿತಿಗೆ ೯೪೮೨೦ ೫೧೧೨೦ ವಾಟ್ಸಪ್ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಸಂತೋಷ್ ಫಿಟ್ನೆಸ್ ಸೆಂಟರ್ ಪ್ರಕಟಣೆ ಮೂಲಕ ಕೋರಿದೆ.

ಬಾಡಿಗೆಗೆ ಇದೆ




ಶ್ರೀ ಸಾಯಿ ದೃವಿ ಕಾಂಪ್ಲೆಕ್ಸ್, ಲಕ್ಷ್ಮೀ ಬೇಕರಿ ಎದುರು, ಮುಖ್ಯ ರಸ್ತೆ, ಸಿದ್ದಾಪುರ, ಭದ್ರಾವತಿ. ೩ನೇ ಮಹಡಿಯಲ್ಲಿ 34 x 68 ಚದುರ ಅಡಿ ವಿಸ್ತೀರ್ಣ ಹೊಂದಿರುವ ಹಾಲ್ ಬಾಡಿಗೆಗೆ ಇದೆ. ಲಿಫ್ಟ್ ಸೌಲಭ್ಯ ಹೊಂದಿದ್ದು, ಹೆಚ್ಚಿನ ಮಾಹಿತಿಗೆ ಮೊ:  9845070083 ಸಂಖ್ಯೆಗೆ ಕರೆ ಮಾಡಬಹುದಾಗಿದೆ. 


ತಮಿಳ್ ಸಂಗಮ್‌ವತಿಯಿಂದ ಕನ್ನಡ ರಾಜ್ಯೋತ್ಸವ

ಭದ್ರಾವತಿ ತರೀಕೆರೆ ರಸ್ತೆಯ ತಮಿಳ್ ಸಂಗಮ್ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಗಮ್ ಅಧ್ಯಕ್ಷ ಕೆ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.
    ಭದ್ರಾವತಿ : ನಗರದ ತರೀಕೆರೆ ರಸ್ತೆಯ ತಮಿಳ್ ಸಂಗಮ್ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಗಮ್ ಅಧ್ಯಕ್ಷ ಕೆ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಆಗಮುಡಿ ಮೊದಲಿಯಾರ್ ಸಂಘದ ಅಧ್ಯಕ್ಷ ಕೆ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಮಿಳ್ ಸಂಗಮ್ ಕಾರ್ಯದರ್ಶಿ ವಿ. ಮಣಿ, ಸಹ ಕಾಯದರ್ಶಿ ವಿ. ರಾಜ, ಖಜಾಂಚಿ ವೀರಭದ್ರನ್, ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ಸದಸ್ಯರು, ಸ್ಥಳೀಯರು ಪಾಲ್ಗೊಂಡಿದ್ದರು.

ಸೋಮವಾರ, ನವೆಂಬರ್ 27, 2023

ಡಿ.೨, ೩ರಂದು ೨೨ನೇ ಪತ್ರ ಸಂಸ್ಕೃತಿ ಮಿತ್ರರ ಸಮ್ಮಿಲನ

    ಭದ್ರಾವತಿ: ಬಿ.ಆರ್ ಪ್ರಾಜೆಕ್ಟ್ ಪತ್ರ ಸಂಸ್ಕೃತಿ ಸಂಘಟನೆ ವತಿಯಿಂದ ೨ ದಿನಗಳ ಕಾಲ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೨೨ನೇ ಪತ್ರ ಸಂಸ್ಕೃತಿ ಮಿತ್ರರ ಸಮ್ಮಿಲನ ಹಮ್ಮಿಕೊಳ್ಳಲಾಗಿದೆ.
    ಡಿ.೨ರಂದು ಸಂಜೆ ೫.೩೦ಕ್ಕೆ ಡಿ.ಬಿ ಹಳ್ಳಿ ಪದ್ಮದೀಪ ಶಾಲೆ ವತಿಯಿಂದ ಅಜಯ್ ನೀನಾಸಂ ನಿರ್ದೇಶನದಲ್ಲಿ ``ಸಿರಿಧಾನ್ಯವೇ ಸರಿಧಾನ್ಯ'' ನಾಟಕ ಪ್ರದರ್ಶನ, ವಿಜಯಲಕ್ಷ್ಮಿ ಮತ್ತು ತಂಡದಿಂದ ``ರಂಗ ಗೀತೆಗಳು'' ಹಾಗು ಶಿವಮೊಗ್ಗ ಸಹ್ಯಾದ್ರಿ ಕಲಾ ತಂಡದಿಂದ ನಾ. ಶ್ರೀನಿವಾಸ್ ನಿರ್ದೇಶನದ ಜಂಗಮ ನಾಟಕ ಪ್ರದರ್ಶನ ನಡೆಯಲಿದೆ.
    ಡಿ.೩ರಂದು ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣಪ್ಪ ತಂಡದಿಂದ ಜಾನಪದ ಗೀತೆಗಳು, ಬೆಂಗಳೂರಿನ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ಪಂಡಿತ್ ಅಮೃತೇಶ್ ಕುಲಕರ್ಣಿ ಹಾಗು ವಿದ್ಯಾರ್ಥಿಗಳಿಂದ ತಬಲಾ ತರಂಗ್ ನಡೆಯಲಿದೆ.
    ನಂತರ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಇಂ. ಹೊಸಹಳ್ಳಿ ದಾಳೇಗೌಡ ಅಧ್ಯಕ್ಷತೆ ವಹಿಸಲಿದ್ದು, ಜಿ.ಎಚ್ ರಾಜಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹಾಸನದ ಸಾಹಿತಿ ಎನ್.ಎಲ್ ಚನ್ನೇಗೌಡ ಅವರಿಂದ `ಪತ್ರೋತ್ಸವ ಭಾಗ-೩' ಬಿಡುಗಡೆ ಮತ್ತು ನುಡಿ, ಸಾಹಿತಿ ಡಾ. ಭದ್ರಾವತಿ ರಾಮಾಚಾರಿ ಅವರಿಂದ ಪಿಸುಮಾತು `ರಾಷ್ಟ್ರಪ್ರೇಮ' ಸಂಚಿಕೆ ಬಿಡುಗಡೆ ಮತ್ತು ನುಡಿ ಹಾಗು ಬೆಂಗಳೂರಿನ ಬುದ್ಧ ಬಸವ ಗಾಂಧಿ ಟ್ರಸ್ಟ್ ಸಂಸ್ಥಾಪಕ ಡಾ. ರಾಮಲಿಂಗೇಶ್ವರ(ಸಿಸಿರಾ) ಅವರಿಂದ `ಮಾಸದ ನೆನಪು' ಪುಸ್ತಕ ಬಿಡುಗಡೆ ಮತ್ತು ನುಡಿ ನಡೆಯಲಿದೆ.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕಾದಂಬರಿಗಾರ್ತಿ ಜಯಂತಿ ಚಂದ್ರಶೇಖರ್, ಲೇಖಕ ಪಿ.ಎಂ ಸಿದ್ದಯ್ಯ ಉಪಸ್ಥಿತರಿರುವರು. ಬಿ.ಆರ್ ಪ್ರಾಜೆಕ್ಟ್ ಸಿದ್ದಪ್ಪ ಮತ್ತು ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಆಸ್ಪತ್ರೆ ಎಸ್. ಜ್ಯೋತಿ ಅವರಿಗೆ ಪತ್ರ ಪರಿಚಯ ಸೇವಾ ಪ್ರಶಸ್ತಿ, ಯು.ಎನ್ ಸಂಗನಾಳಮಠ ಮತ್ತು ಯು. ಶಕುಂತಲ ಹಾಗು ಡಾ. ಶರಶ್ಚಂದ್ರ ಜಿ. ರಾನಡೆ ಮತ್ತು ಸ್ವಿತಾ ರಾನಡೆ ದಂಪತಿಗಳಿಗೆ ಸಾಂಸ್ಕೃತಿಕ ರಾಯಭಾರಿ ದಂಪತಿಗಳು ಪ್ರಶಸ್ತಿ ಹಾಗು ಬೆಂಗಳೂರಿನ ಮೈಕೋ ಶಿವಶಂಕರ್ ಅವರಿಗೆ ದಿವಂಗತ ದೇಶೀಗೌಡ ಮತ್ತು ನಿಂಗಮ್ಮ ರಂಗಭೂಮಿ ದತ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪತ್ರ ಸಂಸ್ಕೃತಿ ಮಿತ್ರರ ಸಮ್ಮಿಲನ ಯಶಸ್ವಿಗೊಳಿಸುವಂತೆ ಸಂಘಟನೆ ಸಂಸ್ಥಾಪಕ ಇಂ. ಹೊಸಹಳ್ಳಿ ದಾಳೇಗೌಡ ಕೋರಿದ್ದಾರೆ.