Thursday, November 30, 2023

ದಾರ್ಶನಿಕರ ಆದರ್ಶ ಯುವ ಸಮುದಾಯಕ್ಕೆ ಪರಿಚಯಿಸುವುದು ಜಯಂತಿ ಆಚರಣೆಗಳ ಆಶಯ : ಸಂಗಮೇಶ್ವರ್

ಭದ್ರಾವತಿ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಕನಕ ಜಯಂತಿ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ: ಯುವ ಸಮುದಾಯಕ್ಕೆ ದಾರ್ಶನಿಕರ ಆದರ್ಶಗಳನ್ನು ಪರಿಚಯಿಸುವ ಜೊತೆಗೆ ಮಾರ್ಗದರ್ಶನ ನೀಡುವುದು ಜಯಂತಿ ಆಚರಣೆಗಳ ಉದ್ದೇಶವಾಗಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ತಿಳಿಸಿದರು.
ಅವರು ಗುರುವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮಹಾನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜಯಂತಿ ಆಚರಣೆಗಳ ಆಶಯ ಅರ್ಥ ಮಾಡಿಕೊಳ್ಳುವ ಜೊತೆಗೆ ಸದ್ಬಳಕೆ ಮಾಡಿಕೊಳ್ಳಬೇಕೆಂದರು. 
ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಮಾತನಾಡಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಸಂದೇಶದ ಮೂಲಕ ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಶ್ರೇಷ್ಠರು ಕನಕದಾಸರು. ದಾಸವಾಣಿಯ ಮೂಲಕ ಸಮಾನತೆ ಬೋಧಿಸಿದ ಇವರು ವಿಶ್ವಮಾನ್ಯರು ಎಂದರು.
ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮತ್ತು ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್ ಕನಕದಾಸ ಕುರಿತು ಉಪನ್ಯಾಸ ನೀಡಿದರು.  ನಗರಸಭೆ ಸದಸ್ಯರಾದ ಕಾಂತರಾಜು, ಮಂಜುಳಾ ಸುಬ್ಬಣ್ಣ, ಶಶಿಕಲಾ ನಾರಾಯಣಪ್ಪ, ಅನಿತಾ ಮಲ್ಲೇಶ್, ಆರ್. ಶ್ರೇಯಸ್, ಚನ್ನಪ್ಪ, ಮಣಿ ಎಎನ್‌ಎಸ್, ಜಾರ್ಜ್, ಬಸವರಾಜ ಬಿ. ಆನೇಕೊಪ್ಪ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ವಿವಿಧ ಸಮುದಾಯಗಳ ಪ್ರಮುಖರಾದ ಕೆ. ಚಂದ್ರಶೇಖರ್, ಸೆಲ್ವರಾಜ್, ಜುಂಜ್ಯಾನಾಯ್ಕ, ಸಿ. ಜಯಪ್ಪ, ವೈ. ರೇಣುಕಮ್ಮ, ಗಿರೀಶ್, ಎಚ್. ರವಿಕುಮಾರ್, ಅಭಿಲಾಷ್, ಕುಮಾರ್, ಶ್ರೀನಿವಾಸ್(ಪೋಟೋಗ್ರಾಫರ್), ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್, ಸುಕನ್ಯ, ಶೋಭ ರವಿಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಗಂಗಣ್ಣ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಸುಮತಿ ಕಾರಂತ್ ತಂಡ ನಾಡಗೀತೆ ಹಾಡಿತು. ಉಪತಹಸೀಲ್ದಾರ್ ಮಂಜಾನಾಯ್ಕ ನಿರೂಪಿಸಿದರು. ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಥ್ಲೆಟಿಕ್ ವಿಕಲಚೇತನ ಕ್ರೀಡಾಪಟು ಜ್ಯೋತಿ ಸೇರಿದಂತೆ ಸಾಧಕರು, ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಶ್ರೀ ಸಂತಕವಿ, ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಮೆರವಣಿಗೆ : ಚಾಲನೆ


ಭದ್ರಾವತಿಯಲ್ಲಿ ಶ್ರೀ ಸಂತಕವಿ, ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ : ಶ್ರೀ ಸಂತಕವಿ, ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಬಿ.ಎಚ್ ರಸ್ತೆ ಲೋಯರ್ ಹುತ್ತಾ ಬಸ್ ನಿಲ್ದಾಣದ ಬಳಿ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನದ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಸ್. ಚೇತನ್‌ಕುಮಾರ್, ತಾಲೂಕು ಕುರುಬ ಸಮಾಜದ ಪದಾಧಿಕಾರಿಗಳು, ನಿರ್ದೇಶಕರು, ಕನಕ ಯುವಪಡೆ, ಸಂಗೊಳ್ಳಿ ರಾಯಣ್ಣ ಯುವ ಪಡೆ, ಕೇಸರಿ ಪಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
    ಮೆರವಣಿಗೆ ಬಿ.ಎಚ್ ರಸ್ತೆ ಕೆ.ಎಸ್.ಆರ್.ಟಿ ಮುಖ್ಯ ಬಸ್ ನಿಲ್ದಾಣ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಪಂಚಾಯಿತಿ ಕಛೇರಿ ತಲುಪಿತು.

Wednesday, November 29, 2023

ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ : ಗಮನ ಸೆಳೆದ ರಾಮಾಯಣ ರೂಪಕ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಶಾಲಾ ಆವರಣದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು. ರಾಮಾಯಣ ರೂಪಕ ಗಮನ ಸೆಳೆಯಿತು. ನಿರ್ದೇಶಕ ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಭದ್ರಾವತಿ: ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಶಾಲಾ ಆವರಣದಲ್ಲಿ ಬುಧವಾರ ವಿಜೃಂಭಣೆಯಿಂದ ಜರುಗಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ ಶಾಲಾ ಮಕ್ಕಳು ಹಾಗು ಅವರ ಪೋಷಕರು ಜ್ಯೋತಿ ಬೆಳಗಿಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಬಾರಿ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸೇಂಟ್ ಜೋಸೆಫ್ ಶಾಲೆ ಕಾರ್ಯದರ್ಶಿ ಲತಾ ರಾಬರ್ಟ್ ಮತ್ತು ಅರದೊಟ್ಲು ಭುವನೇಶ್ವರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಲೋಲಾಕ್ಷಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ. ದೇವೇಂದ್ರಪ್ಪ, ಟ್ರಸ್ಟ್ ಸದಸ್ಯರಾದ ಬಿ. ಚೀಲೂರಪ್ಪ, ಎಚ್.ಪಿ ಶಿವಪ್ಪ, ಕೆ. ಸೌಮ್ಯರೂಪ, ರಾಮಕೃಷ್ಣಯ್ಯ, ದಾಮೋದರ್ ಜಿ. ಶೇಟ್, ಕೆ. ಗೊಪಾಲ್, ಆರ್. ವಿನಯ್, ಸಂತೋಷ್ ಜಿ. ವರ್ಣೇಕರ್, ಸಿ.ಆರ್ ಚೇತನ್, ಶಾಲಾ ಮುಖ್ಯಸ್ಥರುಗಳಾದ ಶಾಮರಾಯ ಆಚಾರ್, ಮೃತ್ಯುಂಜಯ ಕಾನಿಟ್ಕರ್, ಎಚ್.ಪಿ ಪ್ರಸನ್ನ, ಟಿ.ವಿ ಸುಜಾತ, ಜಿ. ವಿಜಯಲಕ್ಷ್ಮಿ ಮತ್ತು ಜಿ.ಪಿ ಪರಮೇಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿಶೇಷವಾಗಿ ಮಕ್ಕಳು ಅವರು ಅಪೇಕ್ಷಿಸುವ ವಸ್ತುಗಳನ್ನು ಬಹುಮಾನವಾಗಿ ವಿತರಿಸಲಾಯಿತು. ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್ ನಿರ್ದೇಶನದ ರಾಮಾಯಣ ರೂಪಕ ಗಮನ ಸೆಳೆಯಿತು.

ಎಲ್‌ಐಸಿ ಕಚೇರಿಯಲ್ಲಿ ಕಡಿಮೆ ಅವಧಿಯ `ಜೀವನ ಉತ್ಸವ' ಪಾಲಿಸಿಗೆ ಚಾಲನೆ

ಭದ್ರಾವತಿ ಉಂಬ್ಳೆಬೈಲು ರಸ್ತೆಯಲ್ಲಿರುವ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ನೂತನ `ಎಲ್‌ಐಸಿಯ ಜೀವನ ಉತ್ಸವ' ಪಾಲಿಸಿಗೆ ಬುಧವಾರ ಚಾಲನೆ ನೀಡಲಾಯಿತು.
    ಭದ್ರಾವತಿ: ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ನೂತನ `ಎಲ್‌ಐಸಿಯ ಜೀವನ ಉತ್ಸವ' ಪಾಲಿಸಿಗೆ ಬುಧವಾರ ಚಾಲನೆ ನೀಡಲಾಯಿತು.
    ಶಾಖಾ ಪ್ರಬಂಧಕ ಮುರಳೀಧರ್ ಮಾತನಾಡಿ,  ಜೀವನ ಉತ್ಸವ ಪಾಲಿಸಿ ಮಹತ್ವದ ಯೋಜನೆಯಾಗಿದೆ. ಕಡಿಮೆ ಅವಧಿಯ ಪಾಲಿಸಿಯನ್ನು ಜನರು ಅಪೇಕ್ಷಿಸುತ್ತಿದ್ದರು. ಇದೀಗ ಜನರ ಅಪೇಕ್ಷೆ ಈ ಪಾಲಿಸಿ ಈಡೇರಿಸಿದೆ ಎಂದರು.
    ಶಾಖಾ ಕಛೇರಿಯಲ್ಲಿ ಯೋಜನೆಗೆ ಚಾಲನೆ ನೀಡಿದ ೨ ಗಂಟೆ ಅವಧಿಯಲ್ಲಿ ೬ ಜನರ ನೋಂದಣಿಯಾಗಿದೆ. ಈ ಪಾಲಿಸಿ ಕಡಿಮೆ ಅವಧಿಯನ್ನು ಬಯಸುವ ಜನರಿಗೆ ಬಹುಮುಖ್ಯ ಪಾಲಿಸಿಯಾಗಿದೆ. ಈ ಪಾಲಿಸಿಯ ಸಂದಾಯ ಅವಧಿ ೫ ರಿಂದ ೧೬ ವರ್ಷವಾಗಿರುತ್ತದೆ ಎಂದ ತಿಳಿಸಿದರು.
    ಆಡಳಿತಾಧಿಕಾರಿ ನಾಗರಾಜ್, ಬಾಬು ಸೇಠ್ ನಾಯಕ್, ಅಭಿವೃದ್ಧಿ ಅಧಿಕಾರಿಗಳಾದ ರಾಜೇಶ್ ಕೆ ಐನಾಪುರ್, ಲೋಹಿ ಕೆ ನಾಯರ್, ನಿಖಿಲೇಶ್ ಸೇರಿದಂತೆ ಕಛೇರಿ ಸಿಬ್ಬಂದಿಗಳು, ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
    ಜೀವನ ಉತ್ಸವ ಯೋಜನೆಯ ಮೊದಲ ಪ್ರತಿನಿಧಿಗಳಾದ ಕೆ.ಎಚ್ ಮಂಜುನಾಥ ನಾಯ್ಕ, ಸುಬ್ರಮಣಿಯವರನ್ನು ಗೌರವಿಸಿ, ಅಭಿನಂದಿಸಲಾಯಿತು.

ವೃದ್ಧಾಶ್ರಮದ ಹಿರಿಯರೊಂದಿಗೆ ಮೃತ ವ್ಯಕ್ತಿಯ ಹುಟ್ಟುಹಬ್ಬ

ಕುಟುಂಬ ವರ್ಗದಿಂದ ಸಿಹಿ ಹಂಚಿ, ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ಹೊಸ ಸಿದ್ದಾಪುರದಲ್ಲಿರುವ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ವಿಶೇಷವಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಜನ್ಮದಿನ ಆಚರಿಸುವ ಮೂಲಕ ಗಮನ ಸೆಳೆಯಲಾಯಿತು.
    ಭದ್ರಾವತಿ : ನಗರದ ಹೊಸ ಸಿದ್ದಾಪುರದಲ್ಲಿರುವ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ವಿಶೇಷವಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಜನ್ಮದಿನ ಆಚರಿಸುವ ಮೂಲಕ ಗಮನ ಸೆಳೆಯಲಾಯಿತು.
    ತಾಲೂಕಿನ ದೇವರ ನರಸೀಪುರದ ನಿವಾಸಿಗಳಾದ ಉಮೇಶ್ ಮತ್ತು ಗೌರಮ್ಮ ದಂಪತಿ ಪುತ್ರ  ಜಯಚಂದ್ರ ಕಳೆದ ಸುಮಾರು ೯ ತಿಂಗಳ ಹಿಂದೆ ಮರಣ ಹೊಂದಿದ್ದು, ಇವರ ಜನ್ಮದಿನ ಆಚರಿಸುವ ಮೂಲಕ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.


    ದಿವಂಗತ ಜಯಚಂದ್ರ ಅವರ ಅಣ್ಣ ಅಭಿ ತಮ್ಮನ ನೆನಪಿನಲ್ಲಿ ಆಶ್ರಮಕ್ಕೆ ದಿನಸಿ ಸಾಮಗ್ರಿ ವಿತರಿಸಿ ಹಿರಿಯರಿಗೆ ಸಿಹಿ ಹಂಚಿ ನೋವಿನಲ್ಲೂ ಸಂಭ್ರಮ ಹಂಚಿಕೊಂಡರು. ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ದಾಶ್ರಮ ಮತ್ತು ಅನಾಥಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ಟ್ರಸ್ಟಿಗಳು, ಸೇವಾಕರ್ತರು, ದಿವಂಗತ ಜಯಚಂದ್ರ ಕುಟುಂಬ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಂಕ್ರೀಟ್ ಕಟ್ಟಡಕ್ಕೆ ದ್ವಿಚಕ್ರ ವಾಹನ ಸವಾರ ಡಿಕ್ಕಿ : ಸ್ಥಳದಲ್ಲಿಯೇ ಸಾವು

    ಭದ್ರಾವತಿ : ದ್ವಿಚಕ್ರ ವಾಹನ ಸವಾರನೋರ್ವ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಾಮಗಾರಿ ಸ್ಥಳದಲ್ಲಿನ ಕಾಂಕ್ರೀಟ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಮಂಗಳವಾರ ರಾತ್ರಿ ನಡೆದಿದೆ.
    ಹೊಸಮನೆ ಓಎಸ್‌ಎಂ ರಸ್ತೆ ನಿವಾಸಿ ಶಶಿಕುಮಾರ್(೪೫) ಮೃತಪಟ್ಟಿದ್ದು, ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಶಶಿಕುಮಾರ್ ಸೇಂಟ್ ಚಾರ್ಲ್ಸ್ ಶಾಲೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
    ನಗರದ ವಿಐಎಸ್‌ಎಲ್ ಡಬ್ಬಲ್ ರಸ್ತೆಯಲ್ಲಿ ವಿದ್ಯುತ್ ಕಂಬ ಅಳವಡಿಸಲು ಕಾಮಗಾರಿ ಕೈಗೊಳ್ಳುತ್ತಿದ್ದು, ಶಶಿಕುಮಾರ್ ರಾತ್ರಿ ಸಿಡಿಲು ಸಹಿತ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಕಾಂಕ್ರೀಟ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಸಾರ್ವಜನಿಕರಿಗೆ ಮನವಿ :
    ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸುವ ಜೊತೆಗೆ ಹೆಲ್ಮೆಟ್ ಧರಿಸಿ ಇತರರಿಗೆ ಜಾಗೃತಿ ಮೂಡಿಸಿ ಅಪಘಾತಗಳನ್ನು ತಡೆಗಟ್ಟಲು ಸಹಕರಿಸುವಂತೆ ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ಮನವಿ ಮಾಡಿದ್ದಾರೆ.

ಸಿಡಿಲು ಬಡಿದು ಸಹೋದರರಿಬ್ಬರ ಸಾವು

ಭದ್ರಾವತಿಯಲ್ಲಿ ಮಂಗಳವಾರ ರಾತ್ರಿ ಸಿಡಿಲು ಬಡಿದು ಮೃತಪಟ್ಟ ಬೀರ-ಸುರೇಶ್.
    ಭದ್ರಾವತಿ: ಸಿಡಿಲು ಬಡಿದು ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
    ಗೌಳಿಗರ ಕ್ಯಾಂಪ್ ನಿವಾಸಿಗಳಾದ ಬೀರ(32) ಮತ್ತು ಸುರೇಶ್(30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.  ಮಂಗಳವಾರ ರಾತ್ರಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಜಮೀನಿನಲ್ಲಿದ್ದ ಈ ಇಬ್ಬರಿಗೂ ಏಕಾಏಕಿ ಸಿಡಿಲು ಬಡಿದಿದೆ. ಇದರಿಂದಾಗಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
    ಮೃತದೇಹಗಳನ್ನು ಬುಧವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.