ಶುಕ್ರವಾರ, ಡಿಸೆಂಬರ್ 15, 2023

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಸುಶ್ರೀಂದ್ರತೀರ್ಥ ಶ್ರೀಪಾದರು

 


    ಭದ್ರಾವತಿ : ಉಡುಪಿ ಪುತ್ತಿಗೆ ಮಠದ ಸುಶ್ರೀಂದ್ರತೀರ್ಥ ಶ್ರೀಪಾದರು ಹಳೇನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ನಂತರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.

    ಉಡುಪಿ ಪುತ್ತಿಗೆ ಮಠದಲ್ಲಿ ಹಮ್ಮಿಕೊಳ್ಳಲಾಗಿರುವ ಶ್ರೀಕೃಷ್ಣನ ಭಾವಿ ಪರ್ಯಾಯ ಪೀಠಾಧ್ಯಕ್ಷರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯ ಮಹೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆ ನೀಡಲು ಸುಶ್ರೀಂದ್ರತೀರ್ಥ ಶ್ರೀಪಾದರು ನಗರಕ್ಕೆ ಆಗಮಿಸಿದ್ದರು.

   ವಿವಿಧ ಭಜನಾ ಮಂಡಳಿ ಹಾಗೂ ಸಂಘ ಸಂಸ್ಥೆಗಳಿಂದ ಶ್ರೀಪಾದರಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಯಿತು. ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರುಳಿಧರ್ ತಂತ್ರಿ, ಉಪಾಧ್ಯಕ್ಷೆ ಸುಮಾರಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ನಿರಂಜನಾಚಾರ್ಯ, ಗೋಪಾಲಕೃಷ್ಣ ಆಚಾರ್, ಮಧುರ ಸುಧೀಂದ್ರ, ಜಯತೀರ್ಥ, ನಿತ್ಯಾನಂದ ನಾಯಕ, ಶುಭ ಗುರುರಾಜ್, ಸುಪ್ರಿತ ತಂತ್ರಿ, ಸತ್ಯನಾರಾಯಣಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ವಾಟರ್ ಪ್ಯೂರಿಫೈಯರ್ ವಿತರಣೆ

ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಿ : ಕರವೇ ಪ್ರತಿಭಟನೆ

ಭದ್ರಾವತಿ ತಾಲೂಕಿನ ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮಂಜಾನಾಯ್ಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ತಾಲೂಕಿನ ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮಂಜಾನಾಯ್ಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯಲು ಗಡಸು ನೀರು ಬಳಸುತ್ತಿರುವ ಪ್ರದೇಶಗಳ ಸುಮಾರು ೮೦ ಅಂಗನವಾಡಿ ಕೇಂದ್ರಗಳಿಗೆ ತಾಲೂಕು ಪಂಚಾಯಿತಿ ವತಿಯಿಂದ ೨೦೨೩-೨೪ನೇ ಸಾಲಿನ ಸಂಯುಕ್ತ ಅನುದಾನದ ಸುಮಾರು ೪,೭೬,೦೦೦ ರು. ವೆಚ್ಚದಲ್ಲಿ ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿಸಿ ತಲಾ ಒಂದರಂತೆ ನೀಡಲಾಗಿದೆ. ಒಂದು ವಾಟರ್ ಪ್ಯೂರಿಫೈಯರ್‌ಗೆ ೫,೯೫೦ ರು. ದಾಖಲಿಸಲಾಗಿದ್ದು, ಆದರೆ ವಾಸ್ತವವಾಗಿ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ಪ್ಯೂರಿಫೈಯರ್ ಐಎಸ್‌ಐ ಪ್ರಮಾಣಿಕೃತ ಹೊಂದಿಲ್ಲ. ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಾರುಕಟ್ಟೆಯಲ್ಲಿ ಇದರ ೧,೨೦೦ ರು. ಮೌಲ್ಯ ಹೊಂದಿರುವಂತೆ ಕಂಡು ಬರುತ್ತಿದೆ. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ವಾಟರ್ ಪ್ಯೂರಿಫೈಯರ್‌ಗಳನ್ನು ಅಂಗಡಿವಾಡಿ ಕೇಂದ್ರಗಳಿಗೆ ವಿತರಿಸಿ ಸುಮಾರು ೮ ತಿಂಗಳುಗಳು ಕಳೆದಿವೆ. ಕಳಪೆ ಗುಣಮಟ್ಟದ ವಾಟರ್ ಪ್ಯೂರಿಫೈಯರ್‌ಗಳನ್ನು ವಿತರಿಸಲಾಗಿದ್ದರೂ ಸಹ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸಾಮಾಜಿಕ ಹೋರಾಟಗಾರ ಶಿವಕುಮಾರ್‌ರವರು ಈ ಭ್ರಷ್ಟಾಚಾರ ಪ್ರಶ್ನಿಸಿದ್ದು, ಸಮಗ್ರ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ೩ನೇ ವ್ಯಕ್ತಿಗಳಿಂದ ತನಿಖೆ ನಡೆಸಲಾಗಿದ್ದು, ಇಲ್ಲೂ ಸಹ ಭ್ರಷ್ಟಾಚಾರ ನಡೆದಿದೆ. ಸರ್ಕಾರಕ್ಕೆ ಸುಳ್ಳು ವರದಿಯನ್ನು ನೀಡಲಾಗಿದೆ. ಇದನ್ನು ಗಮನಿಸಿದಾಗ ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳ ದೊಡ್ಡ ಜಾಲವೇ ಭಾಗಿಯಾಗಿರುವುದು ಕಂಡು ಬರುತ್ತಿದೆ. ಸರ್ಕಾರ ತಕ್ಷಣ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ವೇದಿಕೆ ನಗರ ಅಧ್ಯಕ್ಷ ಎ. ಸಂದೇಶ್ ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬೆಂಗಳೂರು ನಗರ ಅಧ್ಯಕ್ಷ ಆರ್. ಬಾಲಮುರಳಿ, ತಾಲೂಕು ಅಧ್ಯಕ್ಷ ಎನ್. ನಾಗರಾಜ, ಪ್ರಧಾನ ಕಾರ್ಯದರ್ಶಿ ರಾಜುನಾಯ್ಕ, ಸಂಘಟನಾ ಕಾರ್ಯದರ್ಶಿ ಎ. ಗಿರೀಶ್, ಉಪಾಧ್ಯಕ್ಷ ಹೆಬ್ರಿಯಸ್, ಮುತ್ತಣ್ಣ, ನಾಗರಾಜ್, ಎಲ್. ಶ್ರೀನಿವಾಸ್, ಬಿ.ಪಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಗುರುವಾರ, ಡಿಸೆಂಬರ್ 14, 2023

ಸೇತುವೆ ಕಾಮಗಾರಿ ಮುಕ್ತಾಯಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಿ

ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದಿಂದ ಪ್ರತಿಭಟನಾ ಧರಣಿ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹಳೇಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯಗೊಳಿಸಿ ತಕ್ಷಣ ಸಾರ್ವಜನಿಕರ ಸೇವೆಗೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದಿಂದ ಗುರುವಾರ ಮಾಧವಚಾರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
    ಭದ್ರಾವತಿ : ನಗರದ ಹೃದಯ ಭಾಗದಲ್ಲಿ ಹಳೇಸೇತುವೆ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯಗೊಳಿಸಿ ತಕ್ಷಣ ಸಾರ್ವಜನಿಕರ ಸೇವೆಗೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದಿಂದ ಗುರುವಾರ ಮಾಧವಚಾರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
    ನಗರದ ಹೃದಯ ಭಾಗದ ಭದ್ರಾನದಿಯಲ್ಲಿ ನಿರ್ಮಿಸಲಾಗಿರುವ ಸುಮಾರು ೧೫೦ ವರ್ಷಗಳಿಗೂ ಹಳೇಯದಾದ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಈ ಸೇತುವೆ ಪಕ್ಕದಲ್ಲಿ ಮತ್ತೊಂದು ಸೇತುವೆ ಕಳೆದ ಸುಮಾರು ೫ ವರ್ಷಗಳಿಂದ ನಿರ್ಮಿಸುತ್ತಿದ್ದು, ಆದರೆ ಇಂದಿಗೂ ಸಾರ್ವಜನಿಕರ ಸೇವೆಗೆ ಕಲ್ಪಿಸಿಕೊಟ್ಟಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಪಕ್ಷದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
    ಹಳೇಯ ಸೇತುವೆ ಸಂಪೂರ್ಣವಾಗಿ ಶಿಥಿಲಗೊಳ್ಳುತ್ತಿದ್ದು, ಈ ಸೇತುವೆ ಮೇಲೆ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇದರಿಂದಾಗಿ ಸೇತುವೆ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಜೀವಭಯದಲ್ಲಿ ವಾಹನ ಸವಾರರು, ಪಾದಚಾರಿಗಳು ಸಂಚರಿಸುವಂತಾಗಿದೆ.  ಈ ಹಿನ್ನಲೆಯಲ್ಲಿ ತಕ್ಷಣ ಕೆಆರ್‌ಡಿಸಿಎಲ್ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು,  ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪಕ್ಷದ ಶಿವಮೊಗ್ಗ ಅಧ್ಯಕ್ಷ ಪ್ರಭು, ತಾಲೂಕು ಅಧ್ಯಕ್ಷ ನಾಗರಾಜರಾವ್ ಶಿಂಧೆ, ಪ್ರಧಾನ ಕಾರ್ಯದರ್ಶಿ ತೀರ್ಥೇಶ್, ತ್ಯಾಗರಾಜ, ಬಿ.ಎಸ್. ದಯಾನಂದ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್‌ನಲ್ಲಿ ಗೃಹಿಣಿ ಹತ್ಯೆ

ಭದ್ರಾವತಿ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್‌ನಲ್ಲಿ ಹತ್ಯೆಯಾಗಿರುವ ಗೃಹಿಣಿ ರಮ್ಯಾ.
    ಭದ್ರಾವತಿ : ಗೃಹಿಣಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.
    ರಮ್ಯಾ(೩೬) ಹತ್ಯೆಯಾಗಿದ್ದು, ಈಕೆಯ ಪತಿ ನಾಗಭೂಷಣ್ ಎಂಬುವರು ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ನಾಗಭೂಷಣ್ ಆಟೋ ಚಾಲಕನಾಗಿದ್ದು, ದಂಪತಿಗೆ ಸುಮಾರು ೧೬ ವರ್ಷ ವಯಸ್ಸಿನ ಪುತ್ರ ಇದ್ದಾನೆ. ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮನೆಯಲ್ಲಿ ದಂಪತಿ ಮಾತ್ರ ವಾಸವಿದ್ದರು. ಹತ್ಯೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೇಪರ್‌ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿ.೧೬ರಂದು ೩೬ನೇ ಶಾಲಾ ವಾರ್ಷಿಕೋತ್ಸವ

    ಭದ್ರಾವತಿ: ಗಾಂಧಿನಗರ, ಕುವೆಂಪು ಬಡಾವಣೆ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗು ಆಂಗ್ಲ ಮಾಧ್ಯಮ ಪ್ರೌಢಶಾಲೆ ೩೬ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಡಿ.೧೬ರ ಸಂಜೆ ೫ ಗಂಟೆಗೆ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್ ಗುರುರಾಜರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಪೊಲೀಸ್ ನಗರ ವೃತ್ತ ನಿರೀಕ್ಷಕ ಜೆ. ಶ್ರೀಶೈಲಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಮತ್ತು ವಿದ್ಯಾಸಂಸ್ಥೆ ಟ್ರಸ್ಟಿ ಎಂ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಡಿ.೧೬ರಂದು `ಅನನ್ಯ ಕ್ರೀಡೋತ್ಸವ'

    ಭದ್ರಾವತಿ: ನಗರದ ಅಪ್ಪರ್ ಹುತ್ತಾ ಅನನ್ಯ ಶಿಕ್ಷಣ ಸಂಸ್ಥೆ ಅನನ್ಯ ನರ್ಸರಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ಡಿ.೧೬ರಂದು `ಅನನ್ಯ ಕ್ರೀಡೋತ್ಸವ' ಆಯೋಜಿಸಲಾಗಿದ್ದು, ಏಷ್ಯನ್ ಪ್ಯಾರಾ ಒಲಂಪಿಕ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ವೃತ್ತಿ ಜೈನ್ ಉದ್ಘಾಟಿಸಲಿದ್ದಾರೆ.
    ಶಾಲಾ ಆವರಣದಲ್ಲಿ ಬೆಳಿಗ್ಗೆ ೮.೪೫ಕ್ಕೆ ಆರಂಭಗೊಳ್ಳಲಿರುವ ಕ್ರೀಡೋತ್ಸವದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಕೆ. ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ವಿದ್ಯಾರ್ಥಿಗಳ ಪೋಷಕರಿಗೂ ವಿಶೇಷ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕ್ರೀಡೋತ್ಸವ ಯಶಸ್ವಿಗೊಳಿಸುವಂತೆ ಆಡಳಿತ ಮಂಡಳಿ ಕೋರಿದೆ.

ಭಾನುವಾರ, ಡಿಸೆಂಬರ್ 10, 2023

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಎಸ್. ಅರುಣ್ ಕುಮಾರ್

 

ಭದ್ರಾವತಿ ಹೊಸ ಸಿದ್ದಾಪುರ ನಿವಾಸಿ ಎಸ್. ಅರುಣ್ ಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.

     ಭದ್ರಾವತಿ : ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಗೆಲುವಿಗೆ ಶ್ರಮಿಸಿದ್ದ ನಗರದ ಹೊಸ ಸಿದ್ದಾಪುರ ನಿವಾಸಿ ಎಸ್. ಅರುಣ್ ಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

   ಎಸ್. ಅರುಣ್ ಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಆದೇಶದ ಮೇರೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಶಿಫಾರಸ್ಸಿನಂತೆ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.

   ಎಸ್. ಅರುಣ್ ಕುಮಾರ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅತಿ ಕಡಿಮೆ ಅವಧಿಯಲ್ಲಿ ಪಕ್ಷ ಸಂಘಟಿಸುವ ಜೊತೆಗೆ ಕ್ಷೇತ್ರದಾದ್ಯಂತ ಹೆಚ್ಚಿನ ಪ್ರಚಾರ ಕೈಗೊಂಡು ಗೆಲುವಿಗೆ ಕಾರಣಕಾರ್ತರಾಗಿದ್ದರು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಹಾಗು ಪಕ್ಷದ ಜಿಲ್ಲಾ ಹಾಗು ಸ್ಥಳೀಯ ಪ್ರಮುಖರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದುವಲ್ಲಿ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ ಎನ್ನಲಾಗಿದೆ.

 ಎಸ್. ಅರುಣ್ ಕುಮಾರ್ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಮುಖಂಡರಾದ ಬಿ.ಕೆ ಮೋಹನ್, ಬಿ.ಎಸ್ ಗಣೇಶ್, ಎಚ್ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.