ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಿ : ಕರವೇ ಪ್ರತಿಭಟನೆ
ಭದ್ರಾವತಿ ತಾಲೂಕಿನ ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮಂಜಾನಾಯ್ಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ತಾಲೂಕಿನ ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಾಟರ್ ಪ್ಯೂರಿಫೈಯರ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮಂಜಾನಾಯ್ಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯಲು ಗಡಸು ನೀರು ಬಳಸುತ್ತಿರುವ ಪ್ರದೇಶಗಳ ಸುಮಾರು ೮೦ ಅಂಗನವಾಡಿ ಕೇಂದ್ರಗಳಿಗೆ ತಾಲೂಕು ಪಂಚಾಯಿತಿ ವತಿಯಿಂದ ೨೦೨೩-೨೪ನೇ ಸಾಲಿನ ಸಂಯುಕ್ತ ಅನುದಾನದ ಸುಮಾರು ೪,೭೬,೦೦೦ ರು. ವೆಚ್ಚದಲ್ಲಿ ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿಸಿ ತಲಾ ಒಂದರಂತೆ ನೀಡಲಾಗಿದೆ. ಒಂದು ವಾಟರ್ ಪ್ಯೂರಿಫೈಯರ್‌ಗೆ ೫,೯೫೦ ರು. ದಾಖಲಿಸಲಾಗಿದ್ದು, ಆದರೆ ವಾಸ್ತವವಾಗಿ ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿರುವ ಪ್ಯೂರಿಫೈಯರ್ ಐಎಸ್‌ಐ ಪ್ರಮಾಣಿಕೃತ ಹೊಂದಿಲ್ಲ. ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಾರುಕಟ್ಟೆಯಲ್ಲಿ ಇದರ ೧,೨೦೦ ರು. ಮೌಲ್ಯ ಹೊಂದಿರುವಂತೆ ಕಂಡು ಬರುತ್ತಿದೆ. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಾಟರ್ ಪ್ಯೂರಿಫೈಯರ್‌ಗಳನ್ನು ಅಂಗಡಿವಾಡಿ ಕೇಂದ್ರಗಳಿಗೆ ವಿತರಿಸಿ ಸುಮಾರು ೮ ತಿಂಗಳುಗಳು ಕಳೆದಿವೆ. ಕಳಪೆ ಗುಣಮಟ್ಟದ ವಾಟರ್ ಪ್ಯೂರಿಫೈಯರ್‌ಗಳನ್ನು ವಿತರಿಸಲಾಗಿದ್ದರೂ ಸಹ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸಾಮಾಜಿಕ ಹೋರಾಟಗಾರ ಶಿವಕುಮಾರ್‌ರವರು ಈ ಭ್ರಷ್ಟಾಚಾರ ಪ್ರಶ್ನಿಸಿದ್ದು, ಸಮಗ್ರ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ೩ನೇ ವ್ಯಕ್ತಿಗಳಿಂದ ತನಿಖೆ ನಡೆಸಲಾಗಿದ್ದು, ಇಲ್ಲೂ ಸಹ ಭ್ರಷ್ಟಾಚಾರ ನಡೆದಿದೆ. ಸರ್ಕಾರಕ್ಕೆ ಸುಳ್ಳು ವರದಿಯನ್ನು ನೀಡಲಾಗಿದೆ. ಇದನ್ನು ಗಮನಿಸಿದಾಗ ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳ ದೊಡ್ಡ ಜಾಲವೇ ಭಾಗಿಯಾಗಿರುವುದು ಕಂಡು ಬರುತ್ತಿದೆ. ಸರ್ಕಾರ ತಕ್ಷಣ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವೇದಿಕೆ ನಗರ ಅಧ್ಯಕ್ಷ ಎ. ಸಂದೇಶ್ ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬೆಂಗಳೂರು ನಗರ ಅಧ್ಯಕ್ಷ ಆರ್. ಬಾಲಮುರಳಿ, ತಾಲೂಕು ಅಧ್ಯಕ್ಷ ಎನ್. ನಾಗರಾಜ, ಪ್ರಧಾನ ಕಾರ್ಯದರ್ಶಿ ರಾಜುನಾಯ್ಕ, ಸಂಘಟನಾ ಕಾರ್ಯದರ್ಶಿ ಎ. ಗಿರೀಶ್, ಉಪಾಧ್ಯಕ್ಷ ಹೆಬ್ರಿಯಸ್, ಮುತ್ತಣ್ಣ, ನಾಗರಾಜ್, ಎಲ್. ಶ್ರೀನಿವಾಸ್, ಬಿ.ಪಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment