Thursday, January 4, 2024

ಕೋಟ್ಯಾಂತರ ರು. ಮೌಲ್ಯದ ಅರಣ್ಯ ಪ್ರದೇಶ ಒತ್ತುವರಿ : ದೂರು

ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪ : ತನಿಖೆಗೆ ಆಗ್ರಹ

   ಅರಣ್ಯ ಪ್ರದೇಶ ಒತ್ತುವರಿ ಮಾಡಲು ಮರಗಳನ್ನು ಕಡಿತಲೆ ಮಾಡಿ, ಬೆಂಕಿ ಹಾಕಿರುವುದು.
 ಭದ್ರಾವತಿ : ಹುಣಸೆ ನೆಡುತೋಪಿನಲ್ಲಿ ಅಕ್ರಮವಾಗಿ ಮರಕಡಿತಲೆ ಮಾಡಿ ಅರಣ್ಯ ಒತ್ತುವರಿ ಮಾಡಿರುವ ಘಟನೆ   ಭದ್ರಾವತಿ ವಿಭಾಗದ ತರೀಕೆರೆ ವಲಯದ ಬಲ್ಲಾವರ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ತಿಳಿಸಿದ್ದಾರೆ.


ತರೀಕೆರೆ ವಲಯ ಅರಣ್ಯಾಧಿಕಾರಿಗಳ ಕಛೇರಿ ಫಲಕ
    ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಾಟ್ಸಾಪ್ ಮತ್ತು ಈ-ಮೇಲ್‌ನಲ್ಲಿ ದೂರು ಸಲ್ಲಿಸಲಾಗಿದೆ. ಭದ್ರಾವತಿ ವಿಭಾಗದ ತರೀಕೆರೆ ವಲಯದ ನಂದಿಬಟ್ಲು, ಕಿರು ಅರಣ್ಯ ಪ್ರದೇಶದ ಬಲ್ಲಾವರ ಸರ್ವೆ ನಂ.೨೨ರ ಹುಣಸೆ ನೆಡುತೋಪಿನಲ್ಲಿ ನೂರಾರು ಹುಣಸೆ ಮತ್ತು ಇತರೆ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಸುಮಾರು ೪ ರಿಂದ ೫ ಎಕರೆ ಅರಣ್ಯ ಒತ್ತುವರಿ ಮಾಡಿದ್ದು, ಸುಮಾರು ೮ ರಿಂದ ೧೦ ಕೋ.ರು. ಅಧಿಕ ಬೆಲೆ ಬಾಳುವ ರಸ್ತೆ ಪಕ್ಕದ ಅರಣ್ಯ ಪ್ರದೇಶ ಅಬ್ಬು ಎಂಬಾತ ಒತ್ತುವರಿ ಮಾಡಿಕೊಳ್ಳಲು ತರೀಕೆರೆ ವಲಯದ ಅರಣ್ಯಾಧಿಕಾರಿ(ಆರ್‌ಎಫ್‌ಓ) ಆಸೀಫ್ ಅಹಮದ್‌ರವರ ನೇರ ಕೈವಾಡವಿರುವ ಬಗ್ಗೆ ಅನುಮಾನವಿದ್ದು, ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.

    ಸಾಮಾಜಿಕ ಹೋರಾಟಗಾರ ಶಿವಕುಮಾರ್
    ಹಾಸನ ಅರಣ್ಯ ವಿಭಾಗದಲ್ಲಿ ನಡೆದಿರುವ ಮರಗಳ ಕಡಿತಲೆ ಪ್ರಕರಣ ಮಾಸುವ ಮೊದಲೇ ಅದೇ ರೀತಿ ಪ್ರಕರಣ ಇಲ್ಲಿ ಕಂಡು ಬಂದಿದೆ. ನೂರಾರು ಮರಗಳನ್ನು ಕಡಿತಲೆ ಮಾಡಿರುವ, ಕೋಟ್ಯಾಂತರ ರು. ಬೆಲೆ ಬಾಳುವ ಅರಣ್ಯ ಪ್ರದೇಶ ಒತ್ತುವರಿ ಮಾಡಿರುವ ಹಾಗು ಈ ಕೃತ್ಯಕ್ಕೆ ಸಹಕರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. ತಕ್ಷಣ ಭದ್ರಾವತಿ ವಿಭಾಗದ ಡಿಎಫ್‌ಓ, ತರೀಕೆರೆ ಉಪವಿಭಾಗದ ಎಸಿಎಫ್, ತರೀಕೆರೆ ವಲಯದ ಆರ್‌ಎಫ್‌ಓ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Wednesday, January 3, 2024

ಅದ್ದೂರಿಯಾಗಿ ಜರುಗುತ್ತಿರುವ ಶ್ರೀ ಮಾರಿಯಮ್ಮ ಜಾತ್ರಾ ಮಹೋತ್ಸವ

ಕಣ್ಮನ ಸೆಳೆಯುತ್ತಿರುವ ಅಮ್ಮನವರ ಅಲಂಕಾರ, ಬೃಹತ್ ಅನ್ನಸಂತರ್ಪಣೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಮೀನುಗಾರರ ಬೀದಿ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ಸಹ ಕಳೆದ ೩ ದಿನಗಳಿಂದ ಅದ್ದೂರಿಯಾಗಿ ಜರುಗುತ್ತಿದ್ದು, ಸೋಮವಾರ ಸರಸ್ವತಿ ಅಲಂಕಾರ ಹಾಗು ಬುಧವಾರ ನೋಟುಗಳ ಮೂಲಕ ಲಕ್ಷ್ಮೀ ಅಲಂಕಾರ ಕೈಗೊಳ್ಳಲಾಗುತ್ತಿತ್ತು. ಅಮ್ಮನವರ ಅಲಂಕಾರ ಕಣ್ಮನ ಸೆಳೆಯಿತು.
    ಭದ್ರಾವತಿ: ನಗರದ ಬಿ.ಎಚ್ ರಸ್ತೆ ಮೀನುಗಾರರ ಬೀದಿ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ಸಹ ಕಳೆದ ೩ ದಿನಗಳಿಂದ ಅದ್ದೂರಿಯಾಗಿ ಜರುಗುತ್ತಿದ್ದು, ಬುಧವಾರ ಬೃಹತ್ ಅನ್ನಸಂತರ್ಪಣೆ ನೆರವೇರಿತು.
    ಸೋಮವಾರ ಭದ್ರಾ ನದಿಯಿಂದ ಶಕ್ತಿ ತೀರ್ಥದ ಬಿಂದಿಗೆ ತೆಗೆದುಕೊಂಡು ಅಮ್ಮನವರ ಗರ್ಭಗುಡಿಗೆ ಅಭಿಷೇಕ ಮಾಡಲಾಯಿತು. ಮಂಗಳವಾರ ಸಂಜೆ ಅಗ್ನಿಕುಂಡ ತ್ರಿಶೂಲ ಮುದ್ರೆಯೊಂದಿಗೆ ದೇವಸ್ಥಾನಕ್ಕೆ ಭದ್ರಾನದಿಯಿಂದ ಶಕ್ತಿ ಕರಗ ತರಲಾಯಿತು.
    ಬುಧವಾರ ಬೆಳಿಗ್ಗೆ ೫ ಗಂಟೆ ಸಮಯದಲ್ಲಿ ಪೊಂಗಲ್ ನಡೆಯಿತು. ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ೪ ಗಂಟೆವರೆಗೂ ಬೃಹತ್ ಅನ್ನ ಸಂತರ್ಪಣೆ ನೆರವೇರಿತು. ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಸಂಜೆ ೭ ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವ ಮೆರವಣಿಗೆ ಹಾಗು ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಜ.೪ರ ಗುರುವಾರ ಸಂಜೆ ೭ ಗಂಟೆಗೆ ತಮಿಳುನಾಡಿನ ತಿರುಚಿ ಶಿವನ್ ಶಕ್ತಿ ನಾಟಕ ಮಂಡಳಿ ಚೆನ್ನೈ ಬಾಯ್ಸ್ ಹಾಗು ಸ್ನೇಹ ಆರ್ಕೇಸ್ಟ್ರಾ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
    ಅಮ್ಮನವರಿಗೆ ವಿಶೇಷ ಅಲಂಕಾರ :
    ಪ್ರತಿದಿನ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗುತ್ತಿದ್ದು, ಸೋಮವಾರ ಸರಸ್ವತಿ ಅಲಂಕಾರ ಹಾಗು ಬುಧವಾರ ನೋಟುಗಳ ಮೂಲಕ ಲಕ್ಷ್ಮೀ ಅಲಂಕಾರ ಕೈಗೊಳ್ಳಲಾಗುತ್ತಿತ್ತು. ಅಮ್ಮನವರ ಅಲಂಕಾರ ಕಣ್ಮನ ಸೆಳೆಯಿತು.
ಮಾರಿಯಮ್ಮ ದೇವಾಲಯ ಕಮಿಟಿ ಅಧ್ಯಕ್ಷ ಎ. ಮಾಧು ನೇತೃತ್ವದಲ್ಲಿ ಈ ಬಾರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಪ್ರತಿ ದಿನ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ.

ಹೊಂಬಾಳಮ್ಮ ನಿಧನ

ಹೊಂಬಾಳಮ್ಮ
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಿವಾಸಿ, ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ ಜಿ. ಬೊಮ್ಮಯ್ಯ ಅವರ ತಾಯಿ ಹೊಂಬಾಳಮ್ಮ(೮೫) ಬುಧವಾರ ನಿಧನ ಹೊಂದಿದರು.
    ಹೊಂಬಾಳಮ್ಮ ಅವರಿಗೆ ಜಿ. ಬೊಮ್ಮಯ್ಯ ಹಾಗು ಲಿಮ್ಕಾ ದಾಖಲೆ ಪ್ರಶಸ್ತಿ ಪುರಸ್ಕೃತ ಕಲಾವಿದ ಬಿ. ಗುರು ಸೇರಿದಂತೆ ಮೊಮ್ಮಕ್ಕಳು ಇದ್ದರು. ಉಜ್ಜನಿಪುರ ಬಣ್ಣದ ಮನೆಯಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಬೈಪಾಸ್ ರಸ್ತೆ, ಬುಳ್ಳಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯ ಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಮಿಳುನಾಡಿನಲ್ಲಿ ಭರತನಾಟ್ಯ : ಶಿವಮೊಗ್ಗ-ಭದ್ರಾವತಿ ನೃತ್ಯ ಕಲಾವಿದರಿಗೆ ಮೆಚ್ಚುಗೆ

ಭದ್ರಾವತಿ: ಜೆ.ಎಸ್ ಫೈನ್ ಆರ್ಟ್ಸ್ ಅಕಾಡೆಮಿ ವತಿಯಿಂದ ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ-ಭದ್ರಾವತಿ ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್‌ಸೆಂಟರ್ ಭರತನಾಟ್ಯ ನೃತ್ಯ ಕಲಾವಿದರು ಭರತನಾಟ್ಯ ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ಭದ್ರಾವತಿ: ಜೆ.ಎಸ್ ಫೈನ್ ಆರ್ಟ್ಸ್ ಅಕಾಡೆಮಿ ವತಿಯಿಂದ ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ-ಭದ್ರಾವತಿ ಭರತನಾಟ್ಯ ನೃತ್ಯ ಕಲಾವಿದರು ಭರತನಾಟ್ಯ ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ತಮಿಳುನಾಡಿನ ವೆಲ್ಲೂರಿನ ಶ್ರೀ ಲಕ್ಷ್ಮೀನಾರಾಯಣಿ ಗೋಲ್ಡನ್ ಟೆಂಪಲ್‌ನಲ್ಲಿ ಜ.೧ರಂದು ಆಯೋಜಿಸಲಾಗಿದ್ದ ನೃತ್ಯ ವೈಭವ ಕಾರ್ಯಕ್ರಮದಲ್ಲಿ  ಶಿವಮೊಗ್ಗ-ಭದ್ರಾವತಿ ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್‌ಸೆಂಟರ್ ಭರತನಾಟ್ಯ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
    ವಿದೂಷಿ ಪುಷ್ಪಾಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಈ ಕಲಾವಿದರು ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ಇವರನ್ನು ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಹಾಗು ವಿವಿಧ ಸಂಘ-ಸಂಸ್ಥೆಗಳು, ಭರತನಾಟ್ಯ ಕಲಾವಿದರು ಅಭಿನಂದಿಸಿದ್ದಾರೆ.

Tuesday, January 2, 2024

ವಿದ್ಯಾರ್ಥಿಗಳಿಗೆ ಆದರ್ಶ ಮೌಲ್ಯಗಳನ್ನು ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ : ಡಾ. ಚಂದ್ರಶೇಖರ್

ಭದ್ರಾವತಿ ನಗರಸಭೆ ವ್ಯಾಪ್ತಿ ಹಳೇಸೀಗೆಬಾಗಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್, ರಾಜೀವ್‌ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ : ಬಿ.ಇಡಿ ತರಬೇತಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂಸ್ಕಾರಭರಿತವಾದ ಆದರ್ಶ ಮೌಲ್ಯಗಳನ್ನು ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಹೇಳಿದರು.
    ಅವರು ಮಂಗಳವಾರ ನಗರಸಭೆ ವ್ಯಾಪ್ತಿ ಹಳೇಸೀಗೆಬಾಗಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್, ರಾಜೀವ್‌ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಗಿಂತ ಸಂಸ್ಕಾರಭರಿತವಾದ ಆದರ್ಶ ಮೌಲ್ಯಗಳನ್ನು ತುಂಬುವ ಅಗತ್ಯವಿದ್ದು, ಇದು ಭವಿಷ್ಯದಲ್ಲಿ ಸಮಸಮಾಜ ನಿರ್ಮಾಣಕ್ಕೆ ಪೂರಕವಾಗಲಿದೆ ಎಂದರು.
    ಹಿರಿಯ ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ಶಿಕ್ಷಕರು ಸಾಮಾಜಿಕ ಜೀವನದ ಹೊಂದಾಣಿಕೆ ಕೌಶಲ್ಯ ಹಾಗು ಸಂಸ್ಕಾರಯುತವಾದಂತಹ ಆದರ್ಶ ಜೀವನ ರೂಪಿಸಿಕೊಳ್ಳಬೇಕಂದು ಕರೆ ನೀಡಿದರು.
    ಟ್ರಸ್ಟ್ ಕಾರ್ಯದರ್ಶಿ ವಾಣಿ ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕರಾಗಿ ಸಮಾಜಕ್ಕೆ ಮತ್ತು ಮುಂದಿನ ದಿನಮಾನಗಳಲ್ಲಿ ಒಳಿತನ್ನುಂಟುಮಾಡಬೇಕೆಂದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಎಸ್. ಹನುಮಂತಪ್ಪ ಮಾತನಾಡಿ, ಶಿಕ್ಷಕ ವೃತ್ತಿಯ ಗುರಿ ತಲುಪಲು ಮಾನವೀಯತೆ, ವಿಭಿನ್ನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದರು.
    ಟಿ. ಪೂಜಿ ಮತ್ತು ಸಂಗೀತ ಕಾರ್ಯಕ್ರಮ ನಿರೂಪಿಸಿದರು. ರಂಜಿತಾ ಪ್ರಾರ್ಥಿಸಿ, ಎಂ.ಬಿ ಸಂಗೀತ ಸ್ವಾಗತಿಸಿದರು. ಉಪನ್ಯಾಸಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ : ವಿಷಾದ

೧೦ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿನಿ ಸಿಂಚನ

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಶ್ರೀಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು ೧೦ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಭದ್ರಾಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ಉದ್ಘಾಟಿಸಿದರು.
ಭದ್ರಾವತಿ: ಹಿಂದಿನ ಕಾಲದಲ್ಲಿ ಕನ್ನಡ ಸಾಹಿತ್ಯ ಉನ್ನತ ಸ್ಥಿತಿಯಲ್ಲಿದ್ದು, ಇಂದು ಕನ್ನಡ ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದು ದುರಂತದ ಸಂಗತಿ ಎಂದು ಭದ್ರಾಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ವಿಷಾದ ವ್ಯಕ್ತಪಡಿಸಿದರು.
     ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಶ್ರೀಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶ್ರೀಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು ೧೦ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
      ಬಾಲ್ಯದಿಂದಲೇ ಸಮಾಜದ ಸರಿತಪ್ಪುಗಳ ಬಗ್ಗೆ ತಿಳುವಳಿಕೆ ಹೊಂದುವುದರಿಂದ ಭವಿಷ್ಯದ ಉತ್ತಮ ಪ್ರಜೆಗಳಾಗಲು ಸಾಧ್ಯ. ಕನ್ನಡ ನಾಡಿನಲ್ಲಿ ಜನಿಸಿರುವ ಪ್ರತಿಯೊಬ್ಬರೂ ಹೆಮ್ಮೆಪಡಬೇಕು. ಕನ್ನಡ ಪುರಾತನ ಇತಿಹಾಸ ಹೊಂದುವುದರ ಜೊತೆಗೆ ಶ್ರೇಷ್ಠ ಕವಿಗಳನ್ನು ನೀಡಿದೆ ಎಂದರು.
    ಸಮ್ಮೇಳನದ ಅಧ್ಯಕ್ಷತೆವಹಿಸಿದ್ದ ಶ್ರೀ ಸತ್ಯಸಾಯಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಆರ್ ಸೇವಂತಿ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡಭಾಷೆಯನ್ನು ಮಾತೃಭಾಷೆಯಾಗಿ ಪಡೆದಿರುವ ನಾವೇ ಧನ್ಯರು. ಸಂಪತ್ಭರಿತವಾದ ಕನ್ನಡ ಭಾಷೆಯ ತೇರನ್ನು ಎಳೆಯುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದರು.
    ಕನ್ನಡಿಗರು ಪರಭಾಷೆ ವಿರೋಧಿಗಳಲ್ಲ. ಆದರೆ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳದಿದ್ದರೆ ಅಪಾಯ ಖಂಡಿತ. ಕನ್ನಡಿಗರು ಕನ್ನಡಾಭಿಮಾನ ಬೆಳೆಸಿಕೊಳ್ಳದಿದ್ದರೆ ಮತ್ಯಾರು ಕನ್ನಡಾಭಿಮಾನ ಬೆಳೆಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆ ವತಿಯಿಂದ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ. ಇದರ ಸದುಯೋಪಪಡೆದುಕೊಳ್ಳಬೇಕೆಂದರು.
    ವೇದಿಕೆಯಲ್ಲಿ ನಗರಸಭೆ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಜಗನ್ನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಪ್ರಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಡಿ.ಪ್ರಭಾಕರ್ ಬೀರಯ್ಯ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆನಾಗೇಂದ್ರಪ್ಪ, ಕಸಾಪ ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷ ಸಿದ್ದಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕೆ. ತೇಜಸ್ ಕುಮಾರ್ ಸಾಗತಿಸಿದರು. ಹರ್ಷವರ್ದನ್ ನಿರೂಪಿಸಿ, ಎಸ್.ಬಿ ಹರಿ ವಂದಿಸಿದರು. ಶಿಕ್ಷಕ ಸೈಯ್ಯದ್ ಫರ್ವೇಜ್ ನಿರ್ವಹಿಸಿದರು.
ನಂತರ ಕವಿಗೋಷ್ಠಿ, ಕಥಾಗೋಷ್ಠಿ ಮತ್ತು ಪ್ರಚಲಿತ ವಿದ್ಯಾಮಾನಗಳು ಕುರಿತ ಗೋಷ್ಠಿಗಳು ಜರುಗಿದವು. ಸಮ್ಮೇಳನ ಉದ್ಘಾಟನೆಗೂ ಮೊದಲು ಪ್ರಶಾಂತಿ ಸೇವಾ ಟ್ರಸ್ಟ್ ಜಂಟಿ ಕಾರ್ಯದರ್ಶಿ ಶಿವಪ್ಪ ರಾಷ್ಟ್ರಧ್ವಜಾರೋಹಣ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ನಾಡಧ್ವಜಾರೋಹಣ ಹಾಗು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಪ್ರಮುಖರಾದ ಕಾಂತಪ್ಪ, ಎಚ್. ತಿಮ್ಮಪ್ಪ, ಮಾಯಮ್ಮ, ತಿಪ್ಪಮ್ಮ, ಕೋಕಿಲಾ, ಕಮಲಕುಮಾರಿ, ಹೇಮಾವತಿ ವಿಶ್ವನಾಥ್, ಸುಮತಿ ಕಾರಂತ್ ಹಾಗು ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು  ಸಮ್ಮೇಳನ ಯಶಸ್ವಿಗೆ ಸಹಕರಿಸಿದರು.

Monday, January 1, 2024

ನಾರಾಯಣಗೌಡ ಬಂಧನ ಖಂಡಿಸಿ ಪ್ರತಿಭಟನೆ : ಬಿಡುಗಡೆಗೆ ಆಗ್ರಹ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಬಂಧನ ಖಂಡಿಸಿ ಕರವೇ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಸೋಮವಾರ ಭದ್ರಾವತಿಯಲ್ಲಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಬಂಧನ ಖಂಡಿಸಿ ಕರವೇ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ನಾಡು ನುಡಿ, ನೆಲ, ಜಲ ಭಾಷೆಗೆ ಧಕ್ಕೆ ಬಂದಾಗ ದಿಟ್ಟತನದಿಂದ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ನಾರಾಯಣಗೌಡರನ್ನು ಡಿ.೨೭ ರಂದು ಬೆಂಗಳೂರಿನಲ್ಲಿ ಅನ್ಯ ಭಾಷೆಯ ನಾಮಫಲಕಗಳ ವಿರುದ್ಧ ಹೋರಾಟ ರೂಪಿಸಿದ್ದ ಸಂದರ್ಭದಲ್ಲಿ ಹೋರಾಟ ನಡೆಸಲು ಅವಕಾಶ ಕೊಡದೆ ಬಂಧಿಸಿ ಜೈಲಿಗಟ್ಟಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ರಾಷ್ಟ್ರಕವಿ ಕುವೆಂಪುರವರ ಕವಿವಾಣಿಯಂತೆ ಇಂದು ಕನ್ನಡಕ್ಕೆ ಕೈ ಎತ್ತಿದರೆ ಕರೆದುಕೊಂಡು ಹೋಗಿ ಜೈಲಿಗಟ್ಟುವ ಸ್ಥಿತಿ ರಾಜ್ಯ ಸರಕಾರ ಮಾಡಮಾಡುತ್ತಿದೆ. ಇದು ಅತ್ಯಂತ ದುರದೃಷ್ಟಕರ ವಿಷಯ, ಬಂಧಿಸಿರುವ ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಗೊಳಿಸಲು ಆಗ್ರಹಿಸಲಾಯಿತು.
    ನಾರಾಯಣಗೌಡ ಬಂಧನ ಖಂಡಿಸಿ ಕಪ್ಪು ಪಟ್ಟಿ ಧರಿಸಿ ಈ ವರ್ಷ ಹೊಸವರ್ಷವನ್ನು ಕರಾಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಉದ್ದಿಮಿದಾರರಿಗೆ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಶೇ. ೬೦ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಕರವೇ ಹೋರಾಟಗಾರರ ಮೇಲಿರುವ ಕೇಸುಗಳನ್ನು ಹಿಂಪಡೆಯಬೇಕೆಂದು ಉಪ ತಹಸೀಲ್ದಾರ್ ರಾಧಾಕೃಷ್ಣ ಭಟ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
    ಜಿಲ್ಲಾ ಉಪಾಧ್ಯಕ್ಷರಾದ ಮಹೇಶ್ವರಿ, ಶಾರದಾ ಕುಮಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾಗರತ್ನ, ಸುಶ್ಮಿತಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.