Thursday, January 4, 2024

ಕೋಟ್ಯಾಂತರ ರು. ಮೌಲ್ಯದ ಅರಣ್ಯ ಪ್ರದೇಶ ಒತ್ತುವರಿ : ದೂರು

ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪ : ತನಿಖೆಗೆ ಆಗ್ರಹ

   ಅರಣ್ಯ ಪ್ರದೇಶ ಒತ್ತುವರಿ ಮಾಡಲು ಮರಗಳನ್ನು ಕಡಿತಲೆ ಮಾಡಿ, ಬೆಂಕಿ ಹಾಕಿರುವುದು.
 ಭದ್ರಾವತಿ : ಹುಣಸೆ ನೆಡುತೋಪಿನಲ್ಲಿ ಅಕ್ರಮವಾಗಿ ಮರಕಡಿತಲೆ ಮಾಡಿ ಅರಣ್ಯ ಒತ್ತುವರಿ ಮಾಡಿರುವ ಘಟನೆ   ಭದ್ರಾವತಿ ವಿಭಾಗದ ತರೀಕೆರೆ ವಲಯದ ಬಲ್ಲಾವರ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ತಿಳಿಸಿದ್ದಾರೆ.


ತರೀಕೆರೆ ವಲಯ ಅರಣ್ಯಾಧಿಕಾರಿಗಳ ಕಛೇರಿ ಫಲಕ
    ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಾಟ್ಸಾಪ್ ಮತ್ತು ಈ-ಮೇಲ್‌ನಲ್ಲಿ ದೂರು ಸಲ್ಲಿಸಲಾಗಿದೆ. ಭದ್ರಾವತಿ ವಿಭಾಗದ ತರೀಕೆರೆ ವಲಯದ ನಂದಿಬಟ್ಲು, ಕಿರು ಅರಣ್ಯ ಪ್ರದೇಶದ ಬಲ್ಲಾವರ ಸರ್ವೆ ನಂ.೨೨ರ ಹುಣಸೆ ನೆಡುತೋಪಿನಲ್ಲಿ ನೂರಾರು ಹುಣಸೆ ಮತ್ತು ಇತರೆ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಸುಮಾರು ೪ ರಿಂದ ೫ ಎಕರೆ ಅರಣ್ಯ ಒತ್ತುವರಿ ಮಾಡಿದ್ದು, ಸುಮಾರು ೮ ರಿಂದ ೧೦ ಕೋ.ರು. ಅಧಿಕ ಬೆಲೆ ಬಾಳುವ ರಸ್ತೆ ಪಕ್ಕದ ಅರಣ್ಯ ಪ್ರದೇಶ ಅಬ್ಬು ಎಂಬಾತ ಒತ್ತುವರಿ ಮಾಡಿಕೊಳ್ಳಲು ತರೀಕೆರೆ ವಲಯದ ಅರಣ್ಯಾಧಿಕಾರಿ(ಆರ್‌ಎಫ್‌ಓ) ಆಸೀಫ್ ಅಹಮದ್‌ರವರ ನೇರ ಕೈವಾಡವಿರುವ ಬಗ್ಗೆ ಅನುಮಾನವಿದ್ದು, ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.

    ಸಾಮಾಜಿಕ ಹೋರಾಟಗಾರ ಶಿವಕುಮಾರ್
    ಹಾಸನ ಅರಣ್ಯ ವಿಭಾಗದಲ್ಲಿ ನಡೆದಿರುವ ಮರಗಳ ಕಡಿತಲೆ ಪ್ರಕರಣ ಮಾಸುವ ಮೊದಲೇ ಅದೇ ರೀತಿ ಪ್ರಕರಣ ಇಲ್ಲಿ ಕಂಡು ಬಂದಿದೆ. ನೂರಾರು ಮರಗಳನ್ನು ಕಡಿತಲೆ ಮಾಡಿರುವ, ಕೋಟ್ಯಾಂತರ ರು. ಬೆಲೆ ಬಾಳುವ ಅರಣ್ಯ ಪ್ರದೇಶ ಒತ್ತುವರಿ ಮಾಡಿರುವ ಹಾಗು ಈ ಕೃತ್ಯಕ್ಕೆ ಸಹಕರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. ತಕ್ಷಣ ಭದ್ರಾವತಿ ವಿಭಾಗದ ಡಿಎಫ್‌ಓ, ತರೀಕೆರೆ ಉಪವಿಭಾಗದ ಎಸಿಎಫ್, ತರೀಕೆರೆ ವಲಯದ ಆರ್‌ಎಫ್‌ಓ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

No comments:

Post a Comment