Tuesday, January 9, 2024

ಅರಣ್ಯ ಪ್ರದೇಶಕ್ಕೆ ಸಾಗುವಳಿ ಚೀಟಿ, ಪಹಣಿ ನೀಡಿ ಜಮೀನು ಮಂಜೂರಾತಿ

ತಹಸೀಲ್ದಾರ್ ಆರ್. ಪ್ರದೀಪ್‌ರನ್ನು ಸೇವೆಯಿಂದ ಅಮಾನತುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಿ

ಶಿವಕುಮಾರ್
    ಭದ್ರಾವತಿ : ಈ ಹಿಂದಿನ ತಹಸೀಲ್ದಾರ್ ಆರ್. ಪ್ರದೀಪ್‌ರವರು ನಿಯಮ ಮೀರಿ ಅರಣ್ಯ ಪ್ರದೇಶಕ್ಕೆ ಸಾಗುವಳಿ ಚೀಟಿ, ಪಹಣಿ ನೀಡಿ ಜಮೀನು ಮಂಜೂರಾತಿ ಮಾಡಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸುಮಾರು ೬ ತಿಂಗಳ ಹಿಂದೆಯೇ ದೂರು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪಿಸಿದ್ದಾರೆ.
    ತಾಲೂಕು ಹೊಳೆಹೊನ್ನೂರು ಹೋಬಳಿ ಮಲ್ಲಾಪುರ ಗ್ರಾಮದ ಸರ್ವೆ ನಂ. ೮೭ ರಲ್ಲಿ ಮಲ್ಲೇಶಪ್ಪ ಬಿನ್ ಮಲ್ಲಾರಪ್ಪ ಎಂಬುವರಿಗೆ ಸಾಗುವಳಿ ಚೀಟಿ ನೀಡಿ ಪಹಣೆ ಹಾಗೂ ಎಂ.ಆರ್ ಎಚ್ ೨೧/೨೦೨೨-೨೩ ೧೬-೦೨-೨೦೨೩ ರಲ್ಲಿ ೪ ಎಕರೆ ೫ ಗುಂಟೆ ಜಮೀನು ಮಂಜೂರು ಮಾಡಿರುತ್ತಾರೆ. ಮಲ್ಲಾಪುರ ಗ್ರಾಮದ ಸರ್ವೆ ನಂ. ೮೭ ಮೀಸಲು ಅರಣ್ಯ ಪ್ರದೇಶವಾಗಿದ್ದು, ಮಲ್ಲೇಶಪ್ಪ ಅವರು ಅರಣ್ಯಾಧಿಕಾರಿಗಳಿಂದ ಎನ್‌ಓಸಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಅದರಂತೆ ವಲಯ ಅರಣ್ಯಾಧಿಕಾರಿ ಶಾಂತಿಸಾಗರ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚನ್ನಗಿರಿ ಉಪವಿಭಾಗ ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿ ಭದ್ರಾವತಿ ವಿಭಾಗರವರು ಸ್ಥಳ ಪರಿಶೀಲಿಸಿ ೩ ಎಕರೆ ೩೦ ಗುಂಟೆ ಜಮೀನು ಅರಣ್ಯ ಇಲಾಖೆಯ ಮೀಸಲು ಅರಣ್ಯ ಪ್ರದೇಶವೆಂದು ಎನ್‌ಓಸಿ ನೀಡಲು ಬರುವುದಿಲ್ಲವೆಂದು ೨ ಜನವರಿ ೨೦೨೩ ರಲ್ಲಿ ತಿಳಿಸಿರುತ್ತಾರೆ. ಆದರೆ ಇದ್ಯಾವುದನ್ನು ಗಮನಿಸದೇ ತಾಲೂಕ್ ಬಗರ್ ಹುಕುಂ ಕಮಿಟಿಯಲ್ಲಿ ಏಕಪಕ್ಷಿಯವಾಗಿ ಉಳುಮೆ ಮಾಡದ ಹಾಲಿ ಮರ ಗಿಡಗಳಿಂದ ಕೂಡಿರುವ ಅರಣ್ಯಕ್ಕೆ ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್. ಪ್ರದೀಪ್‌ರವರು  ಸಾಗುವಳಿ ಚೀಟಿ, ಪಹಣಿ ನೀಡಿ ಜಮೀನು ಮಂಜೂರಾತಿ ಮಾಡಿದ್ದು, ಅವ್ಯವಹಾರ ನಡೆದಿರುವುದು ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಅಂದಿನ ತಹಸೀಲ್ದಾರ್ ಆರ್. ಪ್ರದೀಪ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಹಾಗು ಅವ್ಯವಹಾರದಲ್ಲಿ ಭಾಗಿಯಾಗಿರುವ ತಾಲೂಕು ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಸಹ ಕ್ರಮ ಕೈಗೊಳ್ಳುವಂತೆ ಶಿವಕುಮಾರ್ ದೂರು ಸಲ್ಲಿಸಿದ್ದರು.
    ಜಿಲ್ಲಾಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ತಾಲೂಕು ಕಛೇರಿಯಲ್ಲಿ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಸ್ವೀಕರಿಸದೆ ಯಾವುದೇ ಕೆಲಸ ಮಾಡುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿವಕುಮಾರ್ ಮನವಿ ಮಾಡಿದ್ದಾರೆ.

ಹಲ್ಲೆ ನಡೆಸಿರುವವರ ಪರ ಶಾಸಕರ ಪುತ್ರರು : ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ

ಪೊಲೀಸ್ ಉಪಾಧೀಕ್ಷಕರ ಕಛೇರಿ ಮುಂಭಾಗ ವಿವಿಧ ಸಂಘಟನೆಗಳ ಮುಖಂಡರ ಪ್ರತಿಭಟನೆ

ಭದ್ರಾವತಿ ಕ್ಷೇತ್ರದಲ್ಲಿ ಪೊಲೀಸ್ ಇಲಾಖೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ನಗರದ ನ್ಯೂಟೌನ್ ಪೊಲೀಸ್ ಉಪಾಧೀಕ್ಷಕರ ಕಛೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
    ಭದ್ರಾವತಿ: ಕ್ಷೇತ್ರದಲ್ಲಿ ಪೊಲೀಸ್ ಇಲಾಖೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ನಗರದ ನ್ಯೂಟೌನ್ ಪೊಲೀಸ್ ಉಪಾಧೀಕ್ಷಕರ ಕಛೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
    ಜಮೀನಿನ ಬೇಲಿ ವಿಷಯಕ್ಕೆ ಸಂಬಂಧಿಸಿದಂತೆ ವೀರಾಪುರ ಗ್ರಾಮದ ನಿವಾಸಿ ಸುನಿಲ್(೩೦) ಎಂಬಾತ ಮೇಲೆ ೧೦ ಜನರ ತಂಡ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದೆ. ಹಲ್ಲೆ ಮಾಡಿರುವವರ ಪರವಾಗಿ ಶಾಸಕರ ಪುತ್ರರಾದ ಬಿ.ಎಸ್ ಬಸವೇಶ್, ಬಿ.ಎಸ್ ಗಣೇಶ್ ಹಾಗು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್ ಬೆಂಬಲ ನೀಡಿದ್ದು ಹಲ್ಲೆಗೊಳಗಾದ ವ್ಯಕ್ತಿಗೆ ಪ್ರಾಣ ಬೆದರಿಕೆಯೊಡ್ಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಆಡಳಿತ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
    ಪ್ರತಿಭಟನೆಯಲ್ಲಿ ಮುಖಂಡರುಗಳಾದ ಬಾಲಕೃಷ್ಣ, ಟಿ. ಚಂದ್ರೇಗೌಡ, ಎಂ.ಎ ಅಜಿತ್, ಸುರೇಶ್, ವೆಂಕಟೇಶ್, ಉಮೇಶ್, ಎ.ಟಿ ರವಿ, ಡಿ. ಆನಂದ, ಚಂದ್ರಣ್ಣ, ಕರೀಗೌಡ, ರಾಮಕೃಷ್ಣ ಮತ್ತು ಉಮೇಶ್(ವಕೀಲ) ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಜೃಂಭಣೆಯಿಂದ ಜರುಗಿದ ಕಾಗದನಗರ ಶ್ರೀಚೌಡೇಶ್ವರಿ ದೇವಿ ಜಾತ್ರಾಮಹೋತ್ಸವ

ಶ್ರೀಚೌಡೇಶ್ವರಿ ದೇವಾಲಯ ಪೂಜಾ ಸಮಿತಿ ಹಾಗು ಅನ್ನಪೂರ್ಣೇಶ್ವರಿ ಯುವಕರ ಸಂಘದ ಸಹಯೋಗದೊಂದಿಗೆ ಭದ್ರಾವತಿ ಕಾಗದನಗರ ಶ್ರೀಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ: ಶ್ರೀಚೌಡೇಶ್ವರಿ ದೇವಾಲಯ ಪೂಜಾ ಸಮಿತಿ ಹಾಗು ಅನ್ನಪೂರ್ಣೇಶ್ವರಿ ಯುವಕರ ಸಂಘದ ಸಹಯೋಗದೊಂದಿಗೆ ಕಾಗದನಗರ ಶ್ರೀಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಮುಂಜಾನೆಯಿಂದಲೇ ಧಾರ್ಮಿಕ ಆಚರಣೆಗಳು ಜರುಗಿದವು. ಉದ್ಯಮಿ ಬಿ.ಕೆ ಶಿವಕುಮಾರ್ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.
    ಉತ್ಸವದ ಅಂಗವಾಗಿ ರಾತ್ರಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಮುಖಂಡ ಬಿ.ಎಸ್ ಗಣೇಶ್, ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ವಿಜಯಮ್ಮ, ಚನ್ನಪ್ಪ, ಮಾಜಿ ಸದಸ್ಯರಾದ ಬದರಿ ನಾರಾಯಣ್, ಮಹೇಶ್, ಮೇರಿ, ಪ್ರವೀಣ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಕುಮಾರ್, ಮಣಿಶೇಖರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸದಸ್ಯರಲ್ಲದವರಿಗೆ ನಿವೇಶನಗಳ ಮಾರಾಟ : ಜ.೧೬ರಿಂದ ೪ ದಿನ ದಾಖಲೆಗಳ ಪರಿಶೀಲನೆ, ಅಹವಾಲು ಸ್ವೀಕಾರ

ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಅಧ್ಯಕ್ಷ ಟಿ.ಜಿ ಬಸವರಾಜಯ್ಯ

ಭದ್ರಾವತಿಯಲ್ಲಿ ಮಂಗಳವಾರ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ೨೦೦೬ ರಿಂದ ೨೦೧೪ ರ ವರೆಗೆ ನಿವೇಶನಗಳನ್ನು ಸದಸ್ಯರಲ್ಲದವರಿಗೆ ಮಾರಾಟ ಮಾಡುವ ಮೂಲಕ ಅವ್ಯವಹಾರ ನಡೆಸಲಾಗಿದ್ದು, ಈ ಸಂಬಂಧ ವಿಚಾರಣೆ ನಡೆದು ೭೪ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜ.೧೬ ರಿಂದ ೧೯ರವರೆಗೆ ೪ ದಿನಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ತಿಳಿಸಿದರು.
     ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ೨೨ ಜೂನ್ ೧೯೮೯ರಲ್ಲಿ ಈ ಸಂಘವು ಸ್ಥಾಪನೆಯಾಗಿದ್ದು, ಪ್ರತಿ ಸದಸ್ಯ ರು. ೧೦೦೦ ಬೆಲೆಯ ಷೇರುಗಳನ್ನು ಖರೀದಿಸಿರುತ್ತಾರೆ. ಸುಮಾರು ೪೦೦ಕ್ಕೂ ಹೆಚ್ಚು ಜನ ಷೇರುಗಳನ್ನು ಪಡೆದಿದ್ದರು. ೩೮೬ ಜನರಿಗೆ ಈ ಹಿಂದೆಯೇ ನಿವೇಶನಗಳನ್ನು ಅಲಾಟ್ ಮಾಡಲಾಗಿದೆ. ಬಹಳಷ್ಟು ಜನರಿಗೆ ನಿವೇಶನಗಳನ್ನು ನೋಂದಣಿ ಮಾಡಿಕೊಡಲಾಗಿತ್ತು.  ಮೈಸೂರು ಕಾಗದ ಕಾರ್ಖಾನೆಯವರಿಂದ ಸರ್ವೇ ನಂ. ೧೪ರಲ್ಲಿ ಸುಮಾರು ೧೪೪ ಎಕರೆ ಜಾಗದಲ್ಲಿ ೨೫ ಎಕರೆ ಜಾಗ  ೧೩ ಫೆಬ್ರವರಿ ೧೯೯೨ರಲ್ಲಿ ಸಂಘವು ಕ್ರಯಕ್ಕೆ ಪಡೆದುಕೊಂಡಿದೆ. ರೂ. ೩೫,೨೦೧.೪೦ರಂತೆ ಒಟ್ಟು ರೂ. ೮,೮೦,೦೩೫ ಹಣವನ್ನು ಕಂಪನಿಗೆ ಜಮಾ ಮಾಡಲಾಗಿತ್ತು. ನಿವೇಶನ ಅಲಾಟ್ ಆದವರೂ ಸೇರಿದಂತೆ ಕೆಲವು ಸದಸ್ಯರು ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು ಎಂದರು.
   ಎಂಪಿಎಂ ಬಡಾವಣಿಯಲ್ಲಿ ಒಟ್ಟು ೪೧೬ ನಿವೇಶನಗಳನ್ನು ವಿಂಗಡನೆ ಮಾಡಿದ್ದು, ಅದರಲ್ಲಿ ವಿವಿಧ ರೀತಿಯ ಅಳತೆಯ ನಿವೇಶನಗಳನ್ನು ಮಾಡಲಾಗಿದೆ.
೩೦*೫೦ರ ೩೫೮ ಮತ್ತು ೩೦*೪೦ರ ೨೪ ಹಾಗು ಅಸ್ಪಷ್ಠ ಅಳತೆಯ ೩೪ ನಿವೇಶನಗಳು ಒಟ್ಟು ೪೧೬ ನಿವೇಶನಗಳಿವೆ. ಈ ಪೈಕಿ ೩೪೨ ನಿವೇಶನಗಳು ಸದಸ್ಯರಿಗೆ ಹಂಚಿಕೆ ಆಗಿದೆ. ೭೪ ನಿವೇಶನಗಳನ್ನು ಅಂದಿನ ಸಂಘದ ಪದಾಧಿಕಾರಿಗಳು ೨೦೦೬ ರಿಂದ ೨೦೧೪ರ ವರೆಗೆ ಸದಸ್ಯರಲ್ಲದವರಿಗೆ ಮಾರಾಟ ಮಾಡುವ ಮೂಲಕ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿದರು.
    ಮಾರಾಟ ಮಾಡಿದ ಹಣವನ್ನೂ ಕೂಡಾ ಸಂಘಕ್ಕೆ ಜಮಾ ಮಾಡದೆ ಅನ್ಯಾಯ ಮಾಡಿರುವುದು ತಿಳಿದುಬಂದ ಮೇಲೆ ಸಹಾಯಕ ನಿಬಂಧಕರಿಗೆ  ೧೨ ಸೆಪ್ಟಂಬರ್ ೨೦೧೮ ರಲ್ಲಿ ದೂರು ನೀಡಲಾಗಿತ್ತು. ಅವರು ೨೭ ನವೆಂಬರ್ ೨೦೧೮ ರಲ್ಲಿ ವಿಚಾರಣಾಧಿಕಾರಿಗಳನ್ನು ನೇಮಿಸಿ ಕಲಂ ೬೪ರ ವಿಚಾರಣೆ ನಡೆಸಿದ್ದು, ಅದರಲ್ಲಿ ಸದಸ್ಯರಲ್ಲದವರಿಗೆ ನಿವೇಶನಗಳನ್ನು ಮಾರಿರುವುದು ಸಾಬೀತಾಗಿರುತ್ತದೆ. ಅಲ್ಲದೆ ಸಂಘದ ಹೆಸರಿನಲ್ಲಿ ಇನ್ನೊಂದು ಬಡಾವಣೆ ಮಾಡುವುದಾಗಿ ಕೆಲವರ ಬಳಿ ಹಣ ಪಡೆದು ಸಂಘದ ಲೆಟರ್ ಹೆಡ್ ಮತ್ತು ರಸೀದಿಗಳನ್ನು ದುರುಪಯೋಗಪಡಿಸಿಕೊಂಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ ಎಂದರು.
    ಸಹಾಯಕ ನಿಬಂಧಕರು ಕಲಂ ೬೮ರಂತೆ ೧೦ ಅಕ್ಟೋಬರ್ ೨೦೧೯ ರಲ್ಲಿ ಆದೇಶ ಮಾಡಿ, ಸದಸ್ಯರಲ್ಲದವರಿಗೆ ಮಾರಾಟ ಮಾಡಿದ್ದ ೭೪ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು ನಿಯಮಾನುಸಾರ ಹಂಚಿಕೆ ಮಾಡುವಂತೆ ಹಾಗು ಸಂಘದ ಲೆಟರ್ ಹೆಡ್ ಮತ್ತು ರಸೀದಿಗಳನ್ನು ದುರುಪಯೋಗಪಡಿಸಿಕೊಂಡಿರುವ ಶ್ರೀನಿವಾಸ ಮತ್ತು ಮಂಜುನಾಥ ಹಾಗೂ ಮಾಸಿಲಾಮಣಿ ಇವರುಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹಾಗು ಸಂಘಕ್ಕೆ ನಷ್ಟವಾದ ಹಣವನ್ನು ವಸೂಲು ಮಾಡುವಂತೆ ತಿಳಿಸಿರುತ್ತಾರೆ. ಇದರಂತೆ ಸಂಘವು ಮುನ್ನಡೆದಿದ್ದು, ಮೊದಲ ಕಲಂ ೨೯ಸಿ ಯಂತೆ ಆಡಳಿತ ಮಂಡಳಿಯಲ್ಲಿದ್ದ ಆರೋಪಿತರನ್ನು ವಿಚಾರಣೆ ನಡೆಸಿ ಅನರ್ಹರ ಆದೇಶದಂತೆ ಅನರ್ಹತೆಯಾಗಿರುತ್ತಾರೆ. ಅನರ್ಹತಗೊಂಡವರಲ್ಲಿ ಒಬ್ಬರು ಮೇಲ್ಮನವಿ ಸಲ್ಲಿಸಿದರೂ ಅಲ್ಲಿಯೂ ಕೂಡಾ ಸಂಘದ ಪರವಾಗಿ ತೀರ್ಪು ಬಂದಿರುತ್ತದೆ ಎಂದರು.
    ಕಲಂ ೬೯ ಹಾಗೂ ಕಲಂ ೧೦೩ ರಂತೆ ಆಗಿನ ನಿರ್ದೇಶಕರ ಮೇಲೆ ವಸೂಲಾತಿಗಾಗಿ ದಾವೆ ಹಾಕಿದ್ದು, ಅದು ೨೯ ಜುಲೈ ೨೦೨೨ ರಿಂದ ವಿಚಾರಣೆ ನಡೆಯುತ್ತಿದೆ. ಬಹುಮುಖ್ಯವಾಗಿ ೭೪ ನಿವೇಶನಗಳನ್ನು ಮಾರಾಟ ಮಾಡಿದ ಹಣದಲ್ಲಿ ಶೇ.೯೦ರಷ್ಟು ಹಣ ಅಂದಿನ ಆಡಳಿತ ಮಂಡಳಿಯವರು ಸಂಘಕ್ಕೆ ಜಮಾ ಮಾಡಿಲ್ಲ. ಅದರ ಅಂದಿನ ಮೌಲ್ಯವೇ ಸುಮಾರು ೭೪ ಲಕ್ಷ ರೂ.ಗಳಾಗಿದ್ದು, ಪ್ರಸ್ತುತ ಅದರ ಮೌಲ್ಯ ಸುಮಾರು ರೂ. ೧೫ ಕೋಟಿ ಎಂದು ಅಂದಾಜಿಸಲಾಗಿದೆ ಎಂದರು.
    ೭೪ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶದವಿದ್ದಾಗ್ಯೂ ಆ ನಿವೇಶನಗಳನ್ನು ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನದಂತೆ ಕೊಂಡುಕೊಂಡವರನ್ನು ಒಮ್ಮೆ ಕರೆಸಿ ಅವರ ದಾಖಲೆಗಳನ್ನು ಪರಿಶೀಲಿಸಿ ಮತ್ತು ಅವರ ಅಹವಾಲನ್ನು ಕೇಳಬೇಕೆಂದು ಸಂಘದಲ್ಲಿ ಒಂದು ಉಪಸಮಿತಿಯನ್ನು ನೇಮಕ ಮಾಡಿದ್ದು, ಆ ಸಮಿತಿಯವರಾದ ಹಾಲಿ ನಿರ್ದೇಶಕರೂ ಆಗಿರುವ ಎಸ್.ಆರ್ ಸೋಮಶೇಖರ್, ಪರಮಶಿವ, ರಂಗಸ್ವಾಮಿ,
ಎಚ್. ಆನಂದಮೂರ್ತಿ, ಅಭಯ ಕುಮಾರ್ ಖಡ್ಡು ಮತ್ತು ಲೋಕಾನಂದ ರಾವ್ ಇವರುಗಳು  ೧೬ ಜನವರಿ ೨೦೨೪ ರಿಂದ ೧೯ರ ವರೆಗೆ ೪ ದಿನಗಳ ಕಾಲ ಬೆಳಗ್ಗೆ ೧೦.೩೦ ರಿಂದ ೧೨.೩೦ರ ವರೆಗೆ ಹಾಜರಿದ್ದು ಬಂದವರ ದಾಖಲೆಗಳನ್ನು ಮತ್ತು ಅಹವಾಲನ್ನು ದಾಖಲಿಸಿಟ್ಟುಕೊಳ್ಳುವರು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿ. ಗೋವಿಂದಪ್ಪ, ಕಾರ್ಯದರ್ಶಿ ಎಚ್. ವೀರಭದ್ರಪ್ಪ, ಎಸ್.ಆರ್ ಸೋಮಶೇಖರ್, ಪರಮಶಿವ, ಎಚ್. ಆನಂದಮೂರ್ತಿ, ಅಭಯ ಕುಮಾರ್, ಸಾರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, January 8, 2024

ಪೆಟ್ರೋಲ್ ಬಂಕ್ ನಲ್ಲಿ ಕಾಣಿಸಿಕೊಂಡ 8 ಅಡಿ ಉದ್ದ 13.5 ಕೆ.ಜಿ ಹೆಬ್ಬಾವು

ಸ್ನೇಕ್ ಅಪ್ಪು ತಂಡದಿಂದ ಸೆರೆ : ಅರಣ್ಯಕ್ಕೆ ಸ್ಥಳಾಂತರ

ಭದ್ರಾವತಿ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಅವಿತುಕೊಂಡಿದ್ದ ಬೃಹತ್ ಹೆಬ್ಬಾವು ಸ್ನೇಕ್ ಅಪ್ಪು ಮತ್ತು ತಂಡದವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ: ನಗರದ ಬೈಪಾಸ್ ರಸ್ತೆಯ ಬುಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಅವಿತುಕೊಂಡಿದ್ದ ಬೃಹತ್ ಹೆಬ್ಬಾವು ಸ್ನೇಕ್ ಅಪ್ಪು ಮತ್ತು ತಂಡದವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
    ಪೆಟ್ರೋಲ್ ಬಂಕ್ ಸಿಬ್ಬಂದಿ ಕರೆ ಮಾಡಿದ ತಕ್ಷಣ ಉಜ್ಜನಿಪುರ ನಿವಾಸಿ ಸ್ನೇಕ್ ಅಪ್ಪು ಮತ್ತು ತಂಡದವರು ಸ್ಥಳಕ್ಕೆ ಆಗಮಿಸಿ ಸುಮಾರ 8 ಅಡಿ ಉದ್ದ ಹಾಗು 13.5 ಕೆ.ಜಿ ತೂಕದ ಬೃಹತ್ ಗಾತ್ರದ ಹೆಬ್ಬಾವು ಸೆರೆ ಹಿಡಿದಿದ್ದಾರೆ . ನಂತರ ಸುರಕ್ಷಿತವಾಗಿ ಉಂಬ್ಳೆಬೈಲು ಅರಣ್ಯಕ್ಕೆ ಬಿಡಲಾಗಿದ್ದು, ಪೆಟ್ರೊಲ್ ಬಂಕ್ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.

ಡಾ. ಎ.ಟಿ ಪದ್ಮೇಗೌಡರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಶಿವಮೊಗ್ಗ ಡಿವಿಎಸ್ ಸಂಜೆ ಕಾಲೇಜಿನ ಪ್ರಾಚಾರ್ಯ ಡಾ. ಎ.ಟಿ ಪದ್ಮೇಗೌಡ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಇವರು ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಅನಿತಾ ಕೌಲ್ ಹೆಸರಿನಲ್ಲಿ ನೀಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
    ಭದ್ರಾವತಿ: ಶಿವಮೊಗ್ಗ ಡಿವಿಎಸ್ ಸಂಜೆ ಕಾಲೇಜಿನ ಪ್ರಾಚಾರ್ಯ ಡಾ. ಎ.ಟಿ ಪದ್ಮೇಗೌಡ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಇವರು ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಅನಿತಾ ಕೌಲ್ ಹೆಸರಿನಲ್ಲಿ ನೀಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
    ಬೆಂಗಳೂರಿನಲ್ಲಿ ಜ.೭ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪದ್ಮೇಗೌಡ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಇವರು ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದು, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಪ್ರಾಧ್ಯಾಪಕ ಹಾಗು ನೌಕರ ವರ್ಗದವರು ಅಭಿನಂದಿಸಿದ್ದಾರೆ.

`ಅಪ್ಪು ದಿ ಪ್ರಿಸ್ಕೂಲ್' ಪೂರ್ವ ಪ್ರಾಥಮಿಕ ಶಾಲೆ ಆರಂಭ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪ ಎಸ್.ಜೆ ರಸ್ತೆಯಲ್ಲಿ ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ `ಅಪ್ಪು ದಿ ಪ್ರಿಸ್ಕೂಲ್' ಪೂರ್ವ ಪ್ರಾಥಮಿಕ ಶಾಲೆಗೆ ಸೋಮವಾರ ಚಾಲನೆ ನೀಡಲಾಯಿತು. 
    ಭದ್ರಾವತಿ: ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ಜಯಶ್ರೀ ಕಲ್ಯಾಣ ಮಂಟಪ ಸಮೀಪ ಎಸ್.ಜೆ ರಸ್ತೆಯಲ್ಲಿ ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ `ಅಪ್ಪು ದಿ ಪ್ರಿಸ್ಕೂಲ್' ಪೂರ್ವ ಪ್ರಾಥಮಿಕ ಶಾಲೆಗೆ ಸೋಮವಾರ ಚಾಲನೆ ನೀಡಲಾಯಿತು.
    ಪೂರ್ವ ಪ್ರಾಥಮಿಕ ಶಾಲೆ ಜೊತೆಗೆ ಸರಳ ಮಾಸ್ಟರ್ ಮೈಂಡ್ಸ್ ಟ್ಯುಟೊರಿಯಲ್ ಸಹ ಆರಂಭಗೊಂಡಿದ್ದು, ೫ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಂಜೆ ವೇಳೆ ೫ ಗಂಟೆಯಿಂದ ನುರಿತ ಶಿಕ್ಷಕರಿಂದ ಪಾಠ ಹೇಳಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ.
    ಶಿಕ್ಷಣದ ಮಹತ್ವ ಅರಿತು ಸವಿತಾ ಸಮಾಜದವರು ಒಟ್ಟುಗೂಡಿ ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ಆರಂಭಿಸಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ. ಬೆಳಿಗ್ಗೆ ಸರಸ್ವತಿ ಪೂಜೆ, ಹೋಮ-ಹವನ ಸೇರಿದಂತೆ ಧಾರ್ಮಿಕ ಆಚರಣೆಗಳು ನೆರವೇರಿದವು.  
    ನಗರಸಭೆ ಸದಸ್ಯರಾದ ನಾಗರತ್ನ ಅನಿಲ್‌ಕುಮಾರ್, ಕೋಟೇಶ್ವರ ರಾವ್, ಸವಿತಾ ಸಮಾಜದ ಮುಖಂಡರಾದ ರಮೇಶ್, ಎಂ. ರಾಜು, ವರದರಾಜ್ ಸೇರಿದಂತೆ ಹಲವರು ಹಾಜರಿದ್ದರು.