Monday, January 15, 2024

ಪಿಕಪ್ ವಾಹನ ಪಲ್ಟಿ : ೩ ಸಾವು

        ಭದ್ರಾವತಿ : ಅಡಕೆ ಕಾಯಿ ತುಂಬಿದ ಬುಲೇರೊ ಪಿಕಪ್ ವಾಹನ ಪಲ್ಟಿಯಾಗಿ ಬಿದ್ದು ೩ ಜನ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ತಾಲೂಕಿನ ಹೊಳೆಹೊನ್ನೂರು ಪಟ್ಟಣ ಸಮೀಪದ ಚಂದನಕೆರೆಯ ನಿವಾಸಿಗಳಾದ ನಾಗರಾಜ (೪೭) ಮಂಜುನಾಥ (೪೦) ಗೌತಮ್ (೧೮) ಮೃತರು.
    ಶಿಕಾರಿಪುರ ಸಮೀಪದ ಅರಿಶಿನಗೆರೆಯ ಅಡಿಕೆ ತೋಟದಲ್ಲಿ ಅಡಕೆ ಕೊಯ್ಲು ಮುಗಿಸಿಕೊಂಡು ಚಂದನಕೆರೆಗೆ ವಾಪ್ಪಾಸಾಗುವಾಗ ಚಿನ್ನಿಕಟ್ಟೆ ಜೋಗದ ಬಳಿ ಶನಿವಾರ ಸಂಜೆ ಕಾಯಿ ತುಂಬಿದ ಬುಲೇರೊ ವಾಹನಕ್ಕೆ ಆಕಳೊಂದು ಅಡ್ಡ ಬಂದಿದೆ ಆಕಳು ತಪ್ಪಿಸುವ ಭರದಲ್ಲಿ ವಾಹನದ ಟೈಯರ್ ಹೊಡೆದು ಹೋಗಿ ವಾಹನ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಲ್ಲಿ ಪಲ್ಟಿಯಾಗಿದೆ.
    ಅಡಕೆ ಕೆಲಸಕ್ಕೆಂದು ಹೋದ ಮಂಜುನಾಥ್, ನಾಗರಾಜ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ ಗೌತಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ೭ ಜನ ಅಡಕೆ ತೋಟಕ್ಕೆ ಕಾಯಿ ತರಲು ಹೋಗಿದ್ದರು. ಬುಲೆರೊದ ಒಳಗೆ ಕುಳಿತಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಮನೆ ಮುಂಭಾಗ ಮೃತ ಸಂಬಂದಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಶವಗಳ ಅಂತಿಮ ದರ್ಶನಕ್ಕೆ ಹೋದ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಂದ ಗ್ರಾಮದಲ್ಲಿ ಜನ ಗಂಜುಳಿಯಿಂದ ತುಂಬಿಹೋಯಿತ್ತು.

ಸಹ್ಯಾದ್ರಿ ಬಡಾವಣೆಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ

ಭದ್ರಾವತಿ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯಲ್ಲಿ ಸೋಮವಾರ ಅಲ್ಲಿನ ನಿವಾಸಿಗಳು ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು.
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯಲ್ಲಿ ಸೋಮವಾರ ಅಲ್ಲಿನ ನಿವಾಸಿಗಳು ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು.
    ಬಡಾವಣೆಯಲ್ಲಿ ಇಡೀ ದಿನ ಹಬ್ಬದ ಸಂಭ್ರಮ ಕಂಡು ಬಂದಿದ್ದು, ಬೆಳಿಗ್ಗೆಯಿಂದಲೇ ಹಬ್ಬಕ್ಕಾಗಿ ಸಿದ್ದತೆಗಳು ಆರಂಭಗೊಂಡವು. ಬಡಾವಣೆಯ ಮುಖ್ಯ ಅಡ್ಡ ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗಿತ್ತು. ಸಂಜೆ ಸಂಪ್ರದಾಯದಂತೆ ಹೋರಿಗಳ ಕಿಚ್ಚಾಯಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಮಕ್ಕಳು, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
    ಬಡಾವಣೆಯಲ್ಲಿರುವ ಪ್ರತಿಯೊಬ್ಬರು ಸಾಂಪ್ರದಾಯಿಕ ಉಡುಗೆ ತೊಡುಗೆಗಳೊಂದಿಗೆ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕೊನೆಯಲ್ಲಿ ಬಡಾವಣೆಯ ಹಿರಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಹಿರಿಯ ಅಥ್ಲೆಟಿಕ್ ಕ್ರೀಡಾಪಟು ಬಿ. ನಂಜೇಗೌಡರಿಗೆ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಬಹುಮಾನ

ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ, ಪಾರಿತೋಷಕ, ತೃತೀಯ ಸ್ಥಾನದೊಂದಿಗೆ ೨ ಕಂಚಿನ ಪದಕ

ಬಿ. ನಂಜೇಗೌಡ
    ಭದ್ರಾವತಿ: ನಗರದ ಹೊಸಮನೆ ನಿವಾಸಿ, ಹಿರಿಯ ಕ್ರೀಡಾಪಟು ಬಿ. ನಂಜೇಗೌಡರು ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್‍ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜ.೧೩ ಮತ್ತು ೧೪ರಂದು ಆಯೋಜಿಸಲಾಗಿದ್ದ ೪೨ನೇ ಸ್ಟೇಟ್ ಮಾಸ್ಟರ್‍ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ೭೫ ವರ್ಷ ಮೇಲ್ಪಟ್ಟವರ ವಯೋಮಾನದ ವಿಭಾಗದ ೧೦೦ಮೀ. ಹರ್ಡಲ್ಸ್ ಹಾಗು ೧೫೦೦ ಮೀಟರ್ ಓಟ ಹಾಗು ಉದ್ದ ಜಿಗಿತದಲ್ಲಿ ೨.೫೯ ಮೀಟರ್ ಗುರಿ ಸಾಧಿಸುವ ಮೂಲಕ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ ಹಾಗು ಪಾರಿತೋಷಕ ಬಹುಮಾನ ಪಡೆದುಕೊಂಡಿದ್ದಾರೆ.
    ಇದೆ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾಸ್ಟರ್‍ಸ್ ಅಸೋಸಿಯೇಷನ್ ವತಿಯಿಂದ ಜ.೬ ಮತ್ತು ೭ರಂದು ಹೊಸಕೋಟೆ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪಂದ್ಯಾವಳಿಯ ೭೫ ವರ್ಷ ಮೇಲ್ಪಟ್ಟವರ ವಯೋಮಾನದ ವಿಭಾಗದ ೪೦೦ ಮೀಟರ್ ಓಟದಲ್ಲಿ ಹಾಗು ಉದ್ದ ಜಿಗಿತದಲ್ಲಿ ತೃತೀಯ ಸ್ವಾನದೊಂದಿಗೆ ಪ್ರಶಸ್ತಿ ಪತ್ರ ಹಾಗು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.  
    ನಂಜೇಗೌಡರು ರಾಷ್ಟ್ರ, ರಾಜ್ಯ ಹಾಗು ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಇದುವರೆಗೂ ಸುಮಾರು ೪೫ ಪದಕಗಳನ್ನು ಪಡೆದುಕೊಂಡಿದ್ದಾರೆ. ಯುವ ಸಮುದಾಯಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ. ಇವರ ಕ್ರೀಡಾ ಸಾಧನೆಗೆ ಕ್ರೀಡಾಭಿಮಾನಿಗಳು ಸೇರಿದಂತೆ ನಗರದ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಬೈಕ್ ಜಾಥಾ : ಕಹಿಯಾದ ವರ್ಷದ ಮೊದಲ ಹಬ್ಬ

ಸಿಹಿಯೊಂದಿಗೆ ಸಂಭ್ರಮ ಉಂಟು ಮಾಡುವ ಬದಲು ನೋವಿನ ಕಹಿ ದಿನವಾದ ಸಂಕ್ರಾಂತಿ

ಕೇಂದ್ರ ಸರ್ಕಾರ ಹಾಗೂ ಉಕ್ಕು ಪ್ರಾಧಿಕಾರ ಆಡಳಿತ ವರ್ಗ ಕೈಕೊಂಡಿರುವ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ತೀರ್ಮಾನದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಶಿವಮೊಗ್ಗ ಸಂಸದರ ನಿವಾಸದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ: ಕೇಂದ್ರ ಸರ್ಕಾರ ಹಾಗೂ ಉಕ್ಕು ಪ್ರಾಧಿಕಾರ ಆಡಳಿತ ವರ್ಗ ಕೈಕೊಂಡಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ತೀರ್ಮಾನದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಶಿವಮೊಗ್ಗ ಸಂಸದರ ನಿವಾಸದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.  
    ಕಾರ್ಖಾನೆ ಮುಂಭಾಗದಲ್ಲಿ ಬೆಳಿಗ್ಗೆ ಜಮಾಯಿಸಿದ ಗುತ್ತಿಗೆ ಕಾರ್ಮಿಕರು ಘೋಷಣೆಗಳನ್ನು ಕೂಗಿ ಜಾಥಾ ಆರಂಭಿಸಿದರು. ಮಹಿಳಾ ಕಾರ್ಮಿಕರು ಬಸ್ ಮೂಲಕ ತೆರಳಿದರು. ನಂತರ ಸಂಸದ ನಿವಾಸದ ಮುಂಭಾಗ ಪ್ರತಿಭಟನಾ ಧರಣಿ ನಡೆಸುವ ಮೂಲಕ ತಮ್ಮ ನೋವುಗಳನ್ನು ಸಂಸದರ ಮುಂದೆ ತೋರ್ಪಡಿಸಿಕೊಂಡರು.
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಹಾಗು ಪದಾಧಿಕಾರಿಗಳು, ನಿವೃತ್ತ ಕಾರ್ಮಿಕ ನರಸಿಂಹಚಾರ್ ಸೇರಿದಂತೆ ಇನ್ನಿತರರು ಜಾಥಾ ನೇತೃತ್ವ ವಹಿಸಿದ್ದರು. ವರ್ಷದ ಮೊದಲ ಹಬ್ಬ ಸಂಕ್ರಾಂತಿ ಗುತ್ತಿಗೆ ಕಾರ್ಮಿಕರ ಬಾಳಿಗೆ ಸಿಹಿಯೊಂದಿಗೆ ಸಂಭ್ರಮ ಉಂಟು ಮಾಡುವ ಬದಲು ನೋವಿನ ಕಹಿ ದಿನವಾಯಿತು.

Sunday, January 14, 2024

ಅಸ್ತಿತ್ವದಲ್ಲಿರುವ ದಲಿತ ಸಂಘಟನೆಗಳು ಒಗ್ಗೂಡಲಿ : ಸುರೇಶ್

ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಅಂಬೇಡ್ಕರ್ ಯುವಜನ ವೇದಿಕೆ ಕರ್ನಾಟಕ ವತಿಯಿಂದ `೨೦೬ನೇ ಭೀಮಾಕೋರೆಗಾಂವ್ ವಿಜಯೋತ್ಸವ ನೆನೆಯೋಣ ದಲಿತ ಸ್ವಾಭಿಮಾನ ಚಳುವಳಿ ಕಟ್ಟಲು ಪ್ರೇರಣೆ ಪಡೆಯೋಣ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ಹೊಸದಾಗಿ ದಲಿತ ಸಂಘಟನೆಗಳು ಆರಂಭಗೊಳ್ಳುವುದಕ್ಕಿಂತ ಇರುವ ಸಂಘಟನೆಗಳು ಒಗ್ಗೂಡಿ ಸಂಘಟಿತರಾಗುವುದು ಮುಖ್ಯ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಕರೆ ನೀಡಿದರು.
    ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಅಂಬೇಡ್ಕರ್ ಯುವಜನ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `೨೦೬ನೇ ಭೀಮಾಕೋರೆಗಾಂವ್ ವಿಜಯೋತ್ಸವ ನೆನೆಯೋಣ ದಲಿತ ಸ್ವಾಭಿಮಾನ ಚಳುವಳಿ ಕಟ್ಟಲು ಪ್ರೇರಣೆ ಪಡೆಯೋಣ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕೋರೆಗಾಂವ್ ಎಡ-ಬಲ ತಾರತಮ್ಯವಿಲ್ಲದೆ ಸಮಾನತೆಗಾಗಿ ನಡೆದ ಹೋರಾಟ. ಆದರೆ ಇಂದು ವಿಚಾರಗಳ ಭಿನ್ನಾಭಿಪ್ರಾಯ ಮತ್ತು ರಾಜಕೀಯ ಕಾರಣಗಳಿಗಾಗಿ ದಲಿತ ಸಂಘಟನೆಗಳು ಛಿದ್ರಗೊಂಡು ಬಲ ಕುಗ್ಗುತ್ತಿರುವುದು ದುರಂತ. ಅಂಬೇಡ್ಕರ್ ಹೇಳಿರುವಂತೆ ಯಾವುದೇ ಸಮಾಜ ಮತ್ತು ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
    ಅಂಬೇಡ್ಕರ್ ಯುವಜನ ವೇದಿಕೆ ಸದಸ್ಯ ಪಿ.ಮೂರ್ತಿ ಮಾತನಾಡಿ, ಪ್ರಸ್ತುತ ದಲಿತರಿಗೆ ಶಿಕ್ಷಣದ ಕೊರತೆ, ಉದ್ಯೋಗವಾಕಾಶದ ಕೊರತೆ ಹೆಚ್ಚುತ್ತಿರುವುದರಿಂದ ಹೋರಾಟಗಳು ಅಗತ್ಯ. ಅಂಬೇಡ್ಕರ್ ವಿದ್ಯೆ, ವಿವೇಚನೆ ಮೂಲಕ ಯುದ್ಧಮಾಡಿದ್ದಾರೆ. ಆದ್ದರಿಂದ ಅಂಬೇಡ್ಕರ್ ಮಾದರಿಯಲ್ಲಿ ದಲಿತರು ಸುಶಿಕ್ಷಿತರಾಗಬೇಕು ಎಂದರು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಿಲ್ಲಾ ಖಜಾಂಚಿ ಕಾಣಿಕ್‌ರಾಜ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ವಿಶ್ವನಾಥ್, ಜಿ. ರಾಜು, ಜಿಂಕ್‌ಲೈನ್ ಮಣಿ, ಡಿ. ರಾಜು, ಎಸ್. ಮಂಜುನಾಥ್, ಈ.ಪಿ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಂಬೇಡ್ಕರ್ ಯುವಜನ ವೇದಿಕೆ ಅಧ್ಯಕ್ಷ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ಮತ್ತು ಹರೀಶ್ ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು. ಮೆಸ್ಕಾಂ ಜನ ಚೈತನ್ಯ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಮತ್ತು ಕಾಗದನಗರ ಯುವ ಶಕ್ತಿ ಯುವಕರ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಿತು.

ಸರ್‌ಎಂವಿ ಕನಸಿನ ಕೂಸು ವಿಐಎಸ್‌ಎಲ್ ಉಳಿವಿಗಾಗಿ ಹೋರಾಟಕ್ಕೆ ಒಂದು ವರ್ಷ

ಇತಿಹಾಸದ ಪುಟದಲ್ಲಿ ದಾಖಲಾದ ಹೋರಾಟ, ಸುಧೀರ್ಘ ಹೋರಾಟಕ್ಕೂ ಬೆಲೆ ಇಲ್ಲ


    * ಅನಂತಕುಮಾರ್
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿದ್ದು, ಹೋರಾಟ ಒಂದು ವರ್ಷ ಪೂರೈಸುತ್ತಿದೆ.
     ದಲಿತ ಚಳುವಳಿ ಸೇರಿದಂತೆ ಹಲವು ಚಳುವಳಿಗಳ ಉದಯಕ್ಕೆ ಕಾರಣವಾಗಿರುವ ಕ್ಷೇತ್ರದಲ್ಲಿ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಹೋರಾಟ ನಡೆದಿಲ್ಲ ಎಂಬುದು ವಿಶೇಷವಾಗಿದೆ. ಶತಮಾನ ಪೂರೈಸಿರುವ ಈ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗುತ್ತಿಗೆ, ಕಾಯಂ ಹಾಗೂ ನಿವೃತ್ತ ಕಾರ್ಮಿಕರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಹೋರಾಟಕ್ಕೆ ಪ್ರತಿಫಲ ಇನ್ನು ಲಭಿಸಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ.
    ಕಳೆದ ಸುಮಾರು ಮೂರು ದಶಕಗಳಿಂದ ಸಂಕಷ್ಟದಲ್ಲಿ ಮುನ್ನಡೆಯುತ್ತಿರುವ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುವ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಿಕೊಂಡು ಹೋಗುವ ನೆಟ್ಟಿನಲ್ಲಿ ಪ್ರಯತ್ನ ಕೈಗೊಂಡಿತ್ತು ಆದರೆ ನಿರೀಕ್ಷೆಯಂತೆ ಯಾವ ಪ್ರಕ್ರಿಯೆ ಸಹ ನಡೆಯದ ಕಾರಣ ಅಂತಿಮವಾಗಿ ಕಳೆದ ವರ್ಷ ೨೦೨೩ರ ಜನವರಿ ತಿಂಗಳಿನಲ್ಲಿ ಮುಚ್ಚುವ ತೀರ್ಮಾನ ಕೈಗೊಂಡಿತ್ತು. ಇದರ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆನೀಡಿದ್ದರು. ಹಲವು ಏಳುಬೀಳುಗಳ ನಡುವೆ ಹೋರಾಟ ಇಂಧದಿಗೂ ಮುನ್ನಡೆಯುತ್ತಿದೆ.
    ಹಲವು ವಿಭಿನ್ನ ಹೋರಾಟ:
 ಕಾರ್ಖಾನೆ ಉಳಿವಿಗಾಗಿ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದು, ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ, ರಸ್ತೆ ತಡೆ, ಭದ್ರಾವತಿ ಬಂದ್, ಪಾದಯಾತ್ರೆ, ಅರೆಬೆತ್ತಲೆ ಮೆರವಣಿಗೆ, ಪಂಜಿನ ಮೆರವಣಿಗೆ, ಸಹಿ ಅಭಿಯಾನ, ರಕ್ತದಲ್ಲಿ ಪತ್ರ ಚಳುವಳಿ ಸೇರಿದಂತೆ ಹಲವು ವಿಭಿನ್ನ ಹೋರಾಟಗಳನ್ನು ನಡೆಸಲಾಗಿದೆ. ಅಲ್ಲದೆ ಹೋರಾಟದ ಒಂದು ಭಾಗವಾಗಿ ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಅವರ ನೇತೃತ್ವದಲ್ಲಿ ಕಾರ್ಖಾನೆಯ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲಾಗಿದೆ. ವಿಶೇಷವಾಗಿ ಹಲವು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಗಿದೆ.
    ಹೋರಾಟಕ್ಕೆ ವ್ಯಾಪಕ ಬೆಂಬಲ:
    ಕಾರ್ಮಿಕರ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು, ಶಾಲಾ-ಕಾಲೇಜುಗಳ ವಿದ್ಯಾ ಸಂಸ್ಥೆಗಳು, ಮಠ ಮಂದಿರಗಳು ರೈತರು ಸೇರಿದಂತೆ ಕ್ಷೇತ್ರದ ಸಮಸ್ತ ನಾಗರಿಕರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
    ಉಡುಪಿ ಪೇಜಾವರ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ ಗುರೂಜಿ, ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಶ್ರೀ ಡಾ. ಮುರುಘ ರಾಜೇಂದ್ರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಅಲಗೂಡು ವಿಶ್ವನಾಥ್, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಸೇರಿದಂತೆ ಪ್ರಮುಖರು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ.
    ಈ ನಡುವೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಹಾಗು ರಾಜ್ಯ ಸಚಿವರು, ಮಾಜಿ ಪ್ರಧಾನಿ, ಸಂಸದರು, ಶಾಸಕರು ಹಾಗು ಮೈಸೂರು ಸಂಸ್ಥಾನದ ಮಹಾರಾಜರಿಗೆ ಹಾಗು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ, ರಾಜ್ಯದ ವಿವಿಧ ಮಠಗಳ ಮಠಾಧೀಶರಿಗೆ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದ್ದರೂ ಸಹ ಇದುವರೆಗೂ ಹೋರಾಟಕ್ಕೆ ಯಾವುದೇ ಪ್ರತಿಫಲ ಲಭಿಸಿಲ್ಲ.
    ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡ ದೇಶದ ಎರಡನೇ ಅತಿದೊಡ್ಡ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ, ದೇಶ ಹಾಗು ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ, ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾಗಿದ್ದ ಭಾರತರತ್ನ, ಶ್ರೇಷ್ಠ ತಂತ್ರಜ್ಞಾನಿ, ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ಹಾಗು ಮಲೆನಾಡಿನ ಏಕೈಕ ಬೃಹತ್ ಕಾರ್ಖಾನೆ ಎಂಬ ಪ್ರಶಂಸೆಗೆ ಪಾತ್ರವಾಗಿರುವ ಈ ಕಾರ್ಖಾನೆ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
    ಕೇಂದ್ರ ಸರ್ಕಾರ ಈ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಇನ್ನೇನು ಚುನಾವಣೆ ಎದುರಾಗುತ್ತಿದ್ದು, ಸೂಕ್ತ ನಿಲುವು ಕೈಗೊಳ್ಳುವ ಮೂಲಕ  ಕಾರ್ಮಿಕರ ಹಾಗು ಕ್ಷೇತ್ರದ ನಾಗರೀಕರ ಹಿತಕಾಪಾಡಬೇಕಾಗಿದೆ.
    ಜ.೧೫ರಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಬೈಕ್ ರ್‍ಯಾಲಿ
  ಕೇಂದ್ರ ಸರ್ಕಾರ ಹಾಗೂ ಉಕ್ಕು ಪ್ರಾಧಿಕಾರ ಆಡಳಿತ ವರ್ಗ ಕೈಕೊಂಡಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ತೀರ್ಮಾನದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಜ.೧೫ರಂದು ಬೆಳಿಗ್ಗೆ ೧೧ ಗಂಟೆಗೆ ಶಿವಮೊಗ್ಗ ಸಂಸದರ ನಿವಾಸದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
    ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಗುತ್ತಿಗೆ ಕಾರ್ಮಿಕರು ಹೋರಾಟ ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಜ.೧೬ರಂದು ಕರಾಳ ದಿನ ಆಚರಣೆಯೊಂದಿಗೆ ಪಂಜಿನ ಮೆರವಣಿಗೆ  ಹಾಗು ೧೮ರಂದು ಸಂಸದರ ನಿವಾಸದವರೆಗೂ ಬೈಕ್ ರ್‍ಯಾಲಿ ನಡೆಸಲು ತೀರ್ಮಾನ ಕೈಗೊಂಡಿದ್ದರು. ಇದೀಗ ಬೈಕ್ ರ್‍ಯಾಲಿ ಜ.೧೫ರ ಸಂಕ್ರಾತಿ ಹಬ್ಬದಂದು ನಡೆಸಲು ಮುಂದಾಗಿದ್ದಾರೆ.
    ಈ ಸಂಬಂಧ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಭಾನುವಾರ ಪತ್ರಿಕಾ ಹೇಳಿಕೆ ನೀಡಿದ್ದು, ಬೈಕ್ ರ್‍ಯಾಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ   ಗುತ್ತಿಗೆ ಕಾರ್ಮಿಕರು, ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ರೈತರು, ವ್ಯಾರಾರಸ್ಥರು ಸೇರಿದಂತೆ ನಾಗರೀಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.  
------------------------------------------------------------------
ಪ್ರಾಮಾಣಿಕವಾಗಿ ಕಾರ್ಮಿಕರ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಜೊತೆಗೆ ರಾಜ್ಯ ಸರ್ಕಾರದಿಂದ ಕಾರ್ಖಾನೆಗೆ ಅಗತ್ಯವಿರುವ ಗಣಿ ಸಹ ಮಂಜೂರಾತಿ ಮಾಡಿಸಿಕೊಡಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಬಂಡವಾಳ ತೊಡಗಿಸುವಂತೆ ಮನವಿ ಸಹ ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರ ಇಚ್ಛಾ ಶಕ್ತಿ ಪ್ರದರ್ಶಿಸಬೇಕಾಗಿದೆ. ಕಾರ್ಮಿಕರ ಮುಂದಿನ ಹೋರಾಟಗಳಿಗೂ ನನ್ನ ಬೆಂಬಲವಿರುತ್ತದೆ.
   - ಬಿ.ಕೆ ಸಂಗಮೇಶ್ವರ್, ಶಾಸಕರು, ಭದ್ರಾವತಿ.

                                                            --------------------------------------------------------------------------------
ಕಾರ್ಖಾನೆ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಈ ಹಿಂದೆ ಉಕ್ಕುಪ್ರಾಧಿಕಾರಕ್ಕೆ ಒಳಪಟ್ಟ ಹಲವು ಕಾರ್ಖಾನೆಗಳು ನಷ್ಟಕ್ಕೆ ಒಳಗಾಗಿದ್ದವು. ಈ ಕಾರ್ಖಾನೆಗಳಿಗೆ ಹೆಚ್ಚಿನ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ವಿಐಎಸ್‌ಎಲ್ ಕಾರ್ಖಾನೆಗೆ ಮಾತ್ರ ಬಂಡವಾಳ ತೊಡಗಿಸದೆ ಮಲತಾಯಿಧೋರಣೆ ಅನುಸರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕನಿಷ್ಠ ಪಕ್ಷ ಕಾರ್ಖಾನೆ ಮುಚ್ಚುವ ಆದೇಶವನ್ನಾದರೂ ಹಿಂಪಡೆಯಬೇಕು.
   - ಜೆ.ಎನ್ ಚಂದ್ರಹಾಸ, ಮಾಜಿ ಅಧ್ಯಕ್ಷರು, ಕಾರ್ಮಿಕ ಸಂಘ, ವಿಐಎಸ್‌ಎಲ್.

-------------------------------------------------------------
ಒಂದು ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. ಸದ್ಯದ ಮಟ್ಟಿಗೆ ಕಾರ್ಖಾನೆ ಚಾಲನೆಯಲ್ಲಿದೆ. ಈಗಲೂ ಸಹ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವ ಭರವಸೆ ಜನಪ್ರತಿನಿಧಿಗಳು ನೀಡುತ್ತಿದ್ದಾರೆ. ಈ ನಡುವೆ ಚುನಾವಣೆ ಘೋಷಣೆಯಾಗುವ ಭೀತಿ ಎದುರಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಸದ್ಯದಲ್ಲಿಯೇ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು.
 - ಸುರೇಶ್, ಅಧ್ಯಕ್ಷರು, ಗುತ್ತಿಗೆ ಕಾರ್ಮಿಕರ ಸಂಘ, ವಿಐಎಸ್‌ಎಲ್.

ಜ.೧೫ರಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಬೈಕ್ ರ್‍ಯಾಲಿ

    ಭದ್ರಾವತಿ: ಕೇಂದ್ರ ಸರ್ಕಾರ ಹಾಗೂ ಉಕ್ಕು ಪ್ರಾಧಿಕಾರ ಆಡಳಿತ ವರ್ಗ ಕೈಕೊಂಡಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚುವ ತೀರ್ಮಾನದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಜ.೧೫ರಂದು ಬೆಳಿಗ್ಗೆ ೧೧ ಗಂಟೆಗೆ ಶಿವಮೊಗ್ಗ ಸಂಸದರ ನಿವಾಸದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
    ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಗುತ್ತಿಗೆ ಕಾರ್ಮಿಕರು ಹೋರಾಟ ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಜ.೧೬ರಂದು ಕರಾಳ ದಿನ ಆಚರಣೆಯೊಂದಿಗೆ ಪಂಜಿನ ಮೆರವಣಿಗೆ  ಹಾಗು ೧೮ರಂದು ಸಂಸದರ ನಿವಾಸದವರೆಗೂ ಬೈಕ್ ರ್‍ಯಾಲಿ ನಡೆಸಲು ತೀರ್ಮಾನ ಕೈಗೊಂಡಿದ್ದರು. ಇದೀಗ ಬೈಕ್ ರ್‍ಯಾಲಿ ಜ.೧೫ರ ಸಂಕ್ರಾತಿ ಹಬ್ಬದಂದು ನಡೆಸಲು ಮುಂದಾಗಿದ್ದಾರೆ.
    ಈ ಸಂಬಂಧ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಭಾನುವಾರ ಪತ್ರಿಕಾ ಹೇಳಿಕೆ ನೀಡಿದ್ದು, ಬೈಕ್ ರ್‍ಯಾಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ   ಗುತ್ತಿಗೆ ಕಾರ್ಮಿಕರು, ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ರೈತರು, ವ್ಯಾರಾರಸ್ಥರು ಸೇರಿದಂತೆ ನಾಗರೀಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.