ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಅಂಬೇಡ್ಕರ್ ಯುವಜನ ವೇದಿಕೆ ಕರ್ನಾಟಕ ವತಿಯಿಂದ `೨೦೬ನೇ ಭೀಮಾಕೋರೆಗಾಂವ್ ವಿಜಯೋತ್ಸವ ನೆನೆಯೋಣ ದಲಿತ ಸ್ವಾಭಿಮಾನ ಚಳುವಳಿ ಕಟ್ಟಲು ಪ್ರೇರಣೆ ಪಡೆಯೋಣ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: ಹೊಸದಾಗಿ ದಲಿತ ಸಂಘಟನೆಗಳು ಆರಂಭಗೊಳ್ಳುವುದಕ್ಕಿಂತ ಇರುವ ಸಂಘಟನೆಗಳು ಒಗ್ಗೂಡಿ ಸಂಘಟಿತರಾಗುವುದು ಮುಖ್ಯ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಕರೆ ನೀಡಿದರು.
ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಅಂಬೇಡ್ಕರ್ ಯುವಜನ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `೨೦೬ನೇ ಭೀಮಾಕೋರೆಗಾಂವ್ ವಿಜಯೋತ್ಸವ ನೆನೆಯೋಣ ದಲಿತ ಸ್ವಾಭಿಮಾನ ಚಳುವಳಿ ಕಟ್ಟಲು ಪ್ರೇರಣೆ ಪಡೆಯೋಣ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋರೆಗಾಂವ್ ಎಡ-ಬಲ ತಾರತಮ್ಯವಿಲ್ಲದೆ ಸಮಾನತೆಗಾಗಿ ನಡೆದ ಹೋರಾಟ. ಆದರೆ ಇಂದು ವಿಚಾರಗಳ ಭಿನ್ನಾಭಿಪ್ರಾಯ ಮತ್ತು ರಾಜಕೀಯ ಕಾರಣಗಳಿಗಾಗಿ ದಲಿತ ಸಂಘಟನೆಗಳು ಛಿದ್ರಗೊಂಡು ಬಲ ಕುಗ್ಗುತ್ತಿರುವುದು ದುರಂತ. ಅಂಬೇಡ್ಕರ್ ಹೇಳಿರುವಂತೆ ಯಾವುದೇ ಸಮಾಜ ಮತ್ತು ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಅಂಬೇಡ್ಕರ್ ಯುವಜನ ವೇದಿಕೆ ಸದಸ್ಯ ಪಿ.ಮೂರ್ತಿ ಮಾತನಾಡಿ, ಪ್ರಸ್ತುತ ದಲಿತರಿಗೆ ಶಿಕ್ಷಣದ ಕೊರತೆ, ಉದ್ಯೋಗವಾಕಾಶದ ಕೊರತೆ ಹೆಚ್ಚುತ್ತಿರುವುದರಿಂದ ಹೋರಾಟಗಳು ಅಗತ್ಯ. ಅಂಬೇಡ್ಕರ್ ವಿದ್ಯೆ, ವಿವೇಚನೆ ಮೂಲಕ ಯುದ್ಧಮಾಡಿದ್ದಾರೆ. ಆದ್ದರಿಂದ ಅಂಬೇಡ್ಕರ್ ಮಾದರಿಯಲ್ಲಿ ದಲಿತರು ಸುಶಿಕ್ಷಿತರಾಗಬೇಕು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಿಲ್ಲಾ ಖಜಾಂಚಿ ಕಾಣಿಕ್‌ರಾಜ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ವಿಶ್ವನಾಥ್, ಜಿ. ರಾಜು, ಜಿಂಕ್‌ಲೈನ್ ಮಣಿ, ಡಿ. ರಾಜು, ಎಸ್. ಮಂಜುನಾಥ್, ಈ.ಪಿ ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಂಬೇಡ್ಕರ್ ಯುವಜನ ವೇದಿಕೆ ಅಧ್ಯಕ್ಷ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ಮತ್ತು ಹರೀಶ್ ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು. ಮೆಸ್ಕಾಂ ಜನ ಚೈತನ್ಯ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಮತ್ತು ಕಾಗದನಗರ ಯುವ ಶಕ್ತಿ ಯುವಕರ ಸಂಘದ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಿತು.
No comments:
Post a Comment