Wednesday, January 24, 2024

ಜೆಪಿಎಸ್ ಕಾಲೋನಿ ಸರ್ಕಾರಿ ಶಾಲಾ ಕೊಠಡಿ ಉದ್ಘಾಟನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.
    ಶಾಲೆಯ ಕೊಠಡಿ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ನೆಲಸಮಗೊಳಿಸಿ ಪಂಚಾಯಿತಿಯ ರಾಜ್ ಇಲಾಖೆಯಿಂದ ಬಿಡುಗಡೆಯಾದ ವಿವೇಕ ಶಾಲೆ ಅನುದಾನ ಸುಮಾರು 13.90 ಲಕ್ಷ ರು. ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
    ನಗರಸಭೆ ಸದಸ್ಯೆ ವಿಜಯ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಿಕ್ಷಣ ಸಂಯೋಜಕ ರವಿಕುಮಾರ್, ಸಿ.ಚನ್ನಪ್ಪ, ಮುಖಂಡರಾದ ಎಸ್. ಕುಮಾರ್,   ಜಯರಾಮ್, ಮಣಿ, ನಾಗರಾಜ್ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಭದ್ರಾವತಿ ನಗರಸಭೆ : 6199.47 ಲಕ್ಷ ಬಜೆಟ್ ಮಂಡನೆ ನಿರೀಕ್ಷೆ

   ಭದ್ರಾವತಿ: ನಗರಸಭೆ ಸ್ವಂತ ಆದಾಯಗಳಾದ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಇತರೆ
ಆದಾಯ ಹಾಗೂ ಸರ್ಕಾರದ ಅನುದಾನಗಳು ಸೇರಿ ಒಟ್ಟು 6199.47 ಲಕ್ಷಗಳು ನಿರೀಕ್ಷೆ ಇಟ್ಟುಕೊಂಡು  ನಗರದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 2024-25 ನೇ ಸಾಲಿನ ಬಜೆಟ್ ತಯಾರಿಸಬಹುದಾಗಿದೆ. ಸೂಕ್ತ ಸಲಹೆ ಸಹಕಾರ ನೀಡುವಂತೆ ನೂತನ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಕೋರಿದರು.
    ಅವರು ಬುಧವಾರ ನಡೆದ ಆಯ-ವ್ಯಯ(ಬಜೆಟ್) ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
 ಇದಕ್ಕೂ ಮೊದಲು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾಹಿತಿ ನೀಡಿದರು.
     ನಿರೀಕ್ಷಿತ ಆದಾಯದ ವಿವರಗಳು: 
  ಆಸ್ತಿ ತೆರಿಗೆ 725 ಲಕ್ಷ ರು., ನೀರಿನ ಶುಲ್ಕ 350 ಲಕ್ಷ ರು., ಬಾಡಿಗೆಗಳು 22.27 ಲಕ್ಷ ರು., ಉದ್ದಿಮೆ ಪರವಾನಿಗೆ 38.10 ಲಕ್ಷ ರು., ಅಭಿವೃದ್ಧಿ ಶುಲ್ಕ 75 ಲಕ್ಷ ರು., ವಾಹನ ಬಾಡಿಗೆ 15 ಲಕ್ಷ ರು. ಮತ್ತು ಇತರೆ (ಬ್ಯಾಂಕ್ ಬಡ್ಡಿ, ಸುಂಕ, ಸ್ಟಾಂಪ್ ಡ್ಯೂಟಿ ವಸೂಲಾತಿ ಆದಾಯಗಳು) 120.10 ಲಕ್ಷ ರು. ಸೇರಿದಂತೆ ಒಟ್ಟು ಸ್ವಂತ ಆದಾಯ 1345.47 ಲಕ್ಷ ರು. ಮತ್ತು ರಾಜ್ಯ ಸರ್ಕಾರದ ಅನುದಾನಗಳಾದ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ, ಎಸ್.ಎಫ್.ಸಿ ವೇತನ ಅನುದಾನ, ಎಸ್.ಎಫ್.ಸಿ ವಿದ್ಯುತ್ ಅನುದಾನ, ಎಸ್.ಎಫ್.ಸಿ ಕುಡಿಯುವ ನೀರು ಅನುದಾನ, ಎಸ್.ಎಫ್.ಸಿ ವಿಶೇಷ ಅನುದಾನ ಹಾಗು ಕೇಂದ್ರ ಸರ್ಕಾರದ ಅನುದಾನಗಳಾದ I5 ನೇ ಹಣಕಾಸು ಯೋಜನೆ ಅನುದಾನ, ಅಮೃತ್ ನಗರ ಯೋಜನೆ 2.0 ಅನುದಾನ, ನಲ್ಮ್ ಯೋಜನೆ ಅನುದಾನ, ಎಸ್.ಬಿ.ಎಂ. 2.0 ಯೋಜನೆ ಮತ್ತು 15 ನೇ ಹಣಕಾಸು ಅನುದಾನ (MPC Grant) ಸೇರಿದಂತೆ ಒಟ್ಟು ಸರ್ಕಾರದ ಅನುದಾನಗಳು 4854 ಲಕ್ಷ ರು. ಒಟ್ಟಾರೆ ಈ ಬಾರಿ 6199.47 ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ ಎಂದರು.
       ನಿರೀಕ್ಷಿತ ಖರ್ಚುಗಳ ವಿವರಗಳು :
   ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ 416 ಲಕ್ಷ ರು., ಚರಂಡಿಗಳ ಅಭಿವೃದ್ಧಿ ಮತ್ತು ನಿರ್ವಹಣೆ 334 ಲಕ್ಷ ರು., ಒಳಚರಂಡಿ ಕಾಮಗಾರಿ 558.92 ಲಕ್ಷ ರು., ಹೊರಗುತ್ತಿಗೆ ನೀರು ಸರಬರಾಜು ಸಿಬ್ಬಂದಿಗಳ ವೇತನ ಪಾವತಿ 215 ಲಕ್ಷ ರು., ನೈರ್ಮಲೀಕರಣ ಹೊರಗುತ್ತಿಗೆ/ ನೇರ ಪಾವತಿ  ಸಿಬ್ಬಂಧಿಗಳ ವೇತನ ಪಾವತಿ 562.18 ಲಕ್ಷ ರು., ಬೀದಿ ದೀಪಗಳ ನಿರ್ವಹಣೆ 120 ಲಕ್ಷ ರು., ನೀರು ಸರಬರಾಜು ನಿರ್ವಹಣೆ & ಅಭಿವೃದ್ಧಿ 374 ಲಕ್ಷ ರು., ಪ.ಜಾತಿ/ಪ.ಪಂಗಡ/ಇತರೆ 24.10% 7.25% 5% ಸಮುದಾಯದ ಅಭಿವೃದ್ಧಿಗಾಗಿ 108 ಲಕ್ಷ ರು., ನಲ್ಮ್ ಯೋಜನೆ ವೆಚ್ಚಗಳು 5 ಲಕ್ಷ ರು., ಸ್ವಚ್ಛ ಭಾರತ್ ಮಿಷನ್ ಕಾಮಗಾರಿಗಳು 50 ಲಕ್ಷ ರು., ವಿದ್ಯುತ್ ಬಿಲ್ ಪಾವತಿ 1287 ಲಕ್ಷ ರು., ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿ 250 ಲಕ್ಷ ರು., ಉದ್ಯಾನವನ ಮತ್ತು ಕೆರೆ ಅಭಿವೃದ್ಧಿ ಅಮೃತ್ ಯೋಜನೆ ಅಡಿಯಲ್ಲಿ 473.47 ಲಕ್ಷ ರು., ಖಾಯಂ ನೌಕರರ ವೇತನ 1086 ಲಕ್ಷ ರು., ವಾಹನಗಳ ದುರಸ್ಥಿ ಮತ್ತು ನಿರ್ವಹಣೆ ಹಾಗೂ ಇಂಧನ ಬಿಲ್ಲು 177 ಲಕ್ಷ ರು., ದಸರಾ ಆಚರಣೆ ಮತ್ತು ರಾಷ್ಟ್ರೀಯ ಹಬ್ಬಗಳು 40 ಲಕ್ಷ ರು. ಹಾಗು ಕಛೇರಿಯ ಇನ್ನಿತರೆ ವೆಚ್ಚಗಳು 142.90 ಲಕ್ಷ ರು. ಸೇರಿದಂತೆ ಒಟ್ಟು 6199.47 ಲಕ್ಷ ರು. ವೆಚ್ಚ ನಿರೀಕ್ಷಿಸಲಾಗಿದೆ ಎಂದರು.
    ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಉಪಸ್ಥಿತರಿದ್ದರು. 
   ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಎಪಿಎಂಸಿ ಹಮಾಲಿಗರ ಸಂಘದ ಅಧ್ಯಕ್ಷ ಬಿ.ಎಸ್ ನಾರಾಯಣಪ್ಪ, ಅಂತೋಣಿ ವಿಲ್ಸನ್ ಸೇರಿದಂತೆ ಇನ್ನಿತರರು ಸಲಹೆ ಸೂಚನೆಗಳನ್ನು ನೀಡಿದರು.




Tuesday, January 23, 2024

ಸಂಪನ್ಮೂಲ ವ್ಯಕ್ತಿ ನವೀದ್‌ ಅಹಮದ್‌ ಪರ್ವೀಜ್‌ಗೆ ರಾಜ್ಯಮಟ್ಟದ ಪ್ರಶಸ್ತಿ

ನವೀದ್‌ ಅಹಮದ್‌ ಪರ್ವೀಜ್‌  
    ಭದ್ರಾವತಿ: ನಗರದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಕಛೇರಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಚುನಾವಣಾ ನೋಡಲ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನವೀದ್‌ ಅಹಮದ್‌ ಪರ್ವೀಜ್‌ ಅವರಿಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ʻಸ್ಟೇಟ್‌ ಲೆವೆಲ್‌ ಮಾಸ್ಟರ್‌ ಟ್ರೈನರ್‌ʼ ಪ್ರಶಸ್ತಿ ಲಭಿಸಿದೆ.
    ಕಳೆದ ಹಲವಾರು ವರ್ಷಗಳಿಂದ ಆಯೋಗದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಮಹತ್ವ, ಪ್ರಕ್ರಿಯೆಗಳು, ಸಮುದಾಯದ ಜವಾಬ್ದಾರಿಗಳು, ಮತದಾರರ ಪಾಲ್ಗೊಳ್ಳುವಿಕೆ ಹಾಗು ಹಕ್ಕುಗಳು ಸೇರಿದಂತೆ ಹಲವಾರು ವಿಚಾರಗಳ ಕುರಿತು ಅರಿವು ಮೂಡಿಸುವ ನಿರಂತರ ಜಾಗೃತಿ ಕಾರ್ಯದಲ್ಲಿ ನವೀದ್‌  ಅವರು ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಚುನಾವಣಾ ಆಯೋಗ ಪ್ರಶಸ್ತಿ ನೀಡಿದೆ.  
    ನವೀದ್‌ ಅವರಿಗೆ ‍ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿ ಅಭಿನಂದಿಸಿವೆ.

ನೂತನ ನಗರಸಭೆ ಅಧ್ಯಕ್ಷರಿಗೆ ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಅಭಿನಂದನೆ

ಭದ್ರಾವತಿ ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಾರ್ಡ್ ನಂ.೩೪ರ ಸದಸ್ಯೆ ಲತಾ ಚಂದ್ರಶೇಖರ್ ಅವರನ್ನು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಎಸ್. ಅರುಣ್ ಕುಮಾರ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.
    ಭದ್ರಾವತಿ: ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಾರ್ಡ್ ನಂ.೩೪ರ ಸದಸ್ಯೆ ಲತಾ ಚಂದ್ರಶೇಖರ್ ಅವರನ್ನು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಎಸ್. ಅರುಣ್ ಕುಮಾರ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.
    ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ನಗರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಪಕ್ಷದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಲಾಯಿತು.
    ಪ್ರಮುಖರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್, ಎಚ್. ರವಿಕುಮಾರ್ ಮತ್ತು ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಮಮಂದಿರ ಲೋಕಾರ್ಪಣೆ : ಗಮನ ಸೆಳೆದ ಶ್ರೀರಾಮ, ಹನುಮಂತ ವೇಷಧಾರಿಗಳು

ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ಹಳೇನಗರ ಬಸವೇಶ್ವರ ವೃತ್ತದಲ್ಲಿ ಕಲಾವಿದ ರಮೇಶ್‌ರವರು ಶ್ರೀರಾಮ ಹಾಗು ಆಟೋ ಪ್ರದೀಪ್‌ರವರು ಹನುಮಂತ ವೇಷ ಧರಿಸಿ ಎಲ್ಲರ ಗಮನ ಸೆಳೆದರು.
    ಭದ್ರಾವತಿ : ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸೋಮವಾರ ಹಳೇನಗರ ಬಸವೇಶ್ವರ ವೃತ್ತದಲ್ಲಿ ವರ್ತಕರ ಸಂಘದಿಂದ ಧಾರ್ಮಿಕ ಆಚರಣೆಗಳು ಜರುಗಿದವು.
  ಪ್ರಭು ಶ್ರೀರಾಮ ಚಂದ್ರನಿಗೆ ವರ್ತಕರು, ಸ್ಥಳೀಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು. ಕಲಾವಿದ ರಮೇಶ್‌ರವರು ಶ್ರೀರಾಮ ಹಾಗು ಆಟೋ ಪ್ರದೀಪ್‌ರವರು ಹನುಮಂತ ವೇಷ ಧರಿಸಿ ಎಲ್ಲರ ಗಮನ ಸೆಳೆದರು.

ಎನ್. ಗಣೇಶ್‌ರಾವ್ ಸಿಂಧ್ಯಾ ನಿಧನಕ್ಕೆ ಸಂತಾಪ

ಎನ್. ಗಣೇಶ್‌ರಾವ್ ಸಿಂಧ್ಯಾ 
ಭದ್ರಾವತಿ : ನಗರದ ಹಿರಿಯ ಪತ್ರಕರ್ತ ಎನ್. ಗಣೇಶ್‌ರಾವ್ ಸಿಂಧ್ಯಾರವರ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿ ಪತ್ರಿಕಾ ಕ್ಷೇತ್ರಕ್ಕೆ ಅವರ ಸೇವೆಯನ್ನು ಸ್ಮರಿಸಿದೆ.
    ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಠಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು. ಸಿಂಧ್ಯಾರವರು ಪತ್ರಿಕಾ ಕ್ಷೇತ್ರದಲ್ಲಿ ಸುದೀಘ ಕಾಲ ತೊಡಗಿಸಿಕೊಂಡಿದ್ದು, ಅಲ್ಲದೆ ಸಂಘದ ಹಿರಿಯ ಸದಸ್ಯರಾಗಿ ಮಾರ್ಗದರ್ಶಕರಾಗಿದ್ದರು. ಇವರ ನಿಧನದಿಂದ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಇವರ ನಿಧನದಿಂದ ಉಂಟಾಗಿರುವ ದುಃಖ ಭರಿಸುವ ಶಕ್ತಿ ದೇವರು ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.  
       ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಸಂಘದ ಹಿರಿಯ ಪತ್ರಕರ್ತರಾದ ಎನ್ ಬಾಬು, ಎಚ್.ಕೆ ಶಿವಶಂಕರ್, ಕೆ.ಎನ್ ರವೀಂದ್ರನಾಥ್(ಬ್ರದರ್), ಕೆ. ಎಸ್ ಸುಧೀಂದ್ರ ಮತ್ತು ಪ್ರಧಾನ ಕಾರ್ಯದರ್ಶಿ ಬಸವರಾಜ್ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.  

Monday, January 22, 2024

ರಾಮಮಂದಿರ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ : ಎಲ್ಲೆಡೆ ಹಬ್ಬದ ವಾತಾವರಣ

ಸುಮಾರು ೧೫ ಸಾವಿರ ಲಾಡು ವಿತರಣೆ, ಕರ ಸೇವಕರಿಗೆ ಸನ್ಮಾನ

ವಿಶ್ವ ಹಿಂದೂ ಪರಿಷದ್ ವತಿಯಿಂದ ಭದ್ರಾವತಿ ಸಿದ್ಧಾರೂಢನಗರದ ಧಮಶ್ರೀ ಸಭಾಭವನದಲ್ಲಿ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹೋಮ-ಹವನ, ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಅಲ್ಲದೆ ಕರಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತರಿಗೆ ಐತಿಹಾಸಿಕ ಕ್ಷಣ ವೀಕ್ಷಣೆಗಾಗಿ ಬೃಹತ್ ಎಲ್‌ಸಿಡಿ  ವ್ಯವಸ್ಥೆ ಕಲ್ಪಿಲಾಗಿತ್ತು.
    ಭದ್ರಾವತಿ : ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸೋಮವಾರ ಎಲ್ಲೆಡೆ ಹಬ್ಬದ ವಾತಾವರಣ ಕಂಡು ಬಂದಿತು.
    ಐತಿಹಾಸಿಕ ಶುಭ ಸಂದರ್ಭದಲ್ಲಿ ದೇವಸ್ಥಾನಗಳ ಬಳಿ ಅದರಲ್ಲೂ ವಿಶೇಷವಾಗಿ ಶ್ರೀ ರಾಮ ದೇವಸ್ಥಾನ ಹಾಗು ಮಂದಿರಗಳ ಬಳಿ ಆಡಳಿ ಮಂಡಳಿಯವರು, ಹಿಂದೂಪರ ಸಂಘಟನೆಗಳು, ಸೇವಾಕರ್ತರು, ದಾನಿಗಳು, ಭಕ್ತರು ಕೆಲವು ದಿನಗಳ ಹಿಂದೆಯೇ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸುವ ಮೂಲಕ ಐತಿಹಾಸಿಕ ದಿನ ಕಾತುರದಿಂದ ಎದುರು ನೋಡುತ್ತಿದ್ದರು.
    ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರುತ್ತಿದ್ದಂತೆ ಎಲ್ಲೆಡೆ ಹಬ್ಬದ ವಾತಾವರಣ ಕಂಡು ಬಂದಿತು. ಅಭಿಷೇಕ, ವಿಶೇಷ ಪೂಜೆ, ಹೋಮ-ಹವನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಅಲ್ಲದೆ ವಿವಿಧ ಸಂಘಟನೆಗಳು, ದಾನಿಗಳು, ಭಕ್ತರು, ಸೇವಾಕರ್ತರಿಂದ ಪಾನಕ, ಮಜ್ಜಿಗೆ, ಕೋಸಂಬರಿ, ಲಾಡು ಹಾಗು ಅನ್ನಸಂತರ್ಪಣೆ ನೆರವೇರಿತು.
    ಐತಿಹಾಸಿಕ ಕ್ಷಣ ವೀಕ್ಷಣೆಗೆ ಬೃಹತ್ ಎಲ್‌ಸಿಡಿ ವ್ಯವಸ್ಥೆ-ಕರ ಸೇವಕರಿಗೆ ಸನ್ಮಾನ:
    ವಿಶ್ವ ಹಿಂದೂ ಪರಿಷದ್ ವತಿಯಿಂದ ಸಿದ್ಧಾರೂಢನಗರದ ಧಮಶ್ರೀ ಸಭಾಭವನದಲ್ಲಿ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹೋಮ-ಹವನ, ಭಜನೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಅಲ್ಲದೆ ಕರಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತರಿಗೆ ಐತಿಹಾಸಿಕ ಕ್ಷಣ ವೀಕ್ಷಣೆಗಾಗಿ ಬೃಹತ್ ಎಲ್‌ಸಿಡಿ  ವ್ಯವಸ್ಥೆ ಕಲ್ಪಿಲಾಗಿತ್ತು.
    ಸುಮಾರು ೧೫ ಸಾವಿರ ಲಾಡು ವಿತರಣೆ :
    ಪ್ರಮುಖ ಹಿಂದೂಪರ ಸಂಘಟನೆಗಳಲ್ಲಿ ಒಂದಾಗಿರುವ ಕೇಸರಿಪಡೆ ವತಿಯಿಂದ ಹಳೇನಗರದ ಕಂಚಿನಬಾಗಿಲು ವೃತ್ತದ ಬಳಿ ಪ್ರಭು ಶ್ರೀರಾಮ ಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೇಸರಿಪಡೆ ಪ್ರಮುಖರು, ಕಾರ್ಯಕತರು, ಸ್ಥಳೀಯ ನಿವಾಸಿಗಳು, ಭಕ್ತರು ಸಿಡಿಮದ್ದು ಸಿಡಿಸಿ, ಕಲಾತಂಡಗಳೊಂದಿಗೆ ಸಂಭ್ರಮಿಸಿ ಸುಮಾರು ೧೫ ಸಾವಿರ ಲಾಡು ವಿತರಣೆ ಮೂಲಕ ಗಮನ ಸೆಳೆದರು.


ಭದ್ರಾವತಿಯಲ್ಲಿ ಕೇಸರಿಪಡೆ ವತಿಯಿಂದ ಹಳೇನಗರದ ಕಂಚಿನಬಾಗಿಲು ವೃತ್ತದ ಬಳಿ ಪ್ರಭು ಶ್ರೀರಾಮ ಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿಡಿಮದ್ದು ಸಿಡಿಸಿ, ಕಲಾತಂಡಗಳೊಂದಿಗೆ ಸಂಭ್ರಮಿಸಿ ಸುಮಾರು ೧೫ ಸಾವಿರ ಲಾಡು ವಿತರಿಸಲಾಯಿತು.