Monday, September 30, 2024

ಪಡಿತರ ವಿತರಕರ ಸಂಘ : ಅಧ್ಯಕ್ಷರಾಗಿ ಎಸ್.ಆರ್ ನಾಗರಾಜ್

ಎಸ್.ಆರ್ ನಾಗರಾಜ್ 
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ನಗರ ಘಟಕದ ಹಂಗಾಮಿ ಅಧ್ಯಕ್ಷರಾಗಿ ಎಸ್.ಆರ್ ನಾಗರಾಜ್ ಅವರನ್ನು ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 
    ಹಂಗಾಮಿ ಅಧ್ಯಕ್ಷರ ಆಯ್ಕೆ ಸಂಬಂಧ ಸಿದ್ದಲಿಂಗಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಎಸ್.ಆರ್ ನಾಗರಾಜ್ ಆಯ್ಕೆಯಾಗಿದ್ದಾರೆ. ಸುಮಾರು ೨೫ ಸದಸ್ಯರು ಅಧ್ಯಕ್ಷರ ಆಯ್ಕೆ ಅನುಮೋದಿಸಿದ್ದು, ಈ ನಡುವೆ ಸಿದ್ದಲಿಂಗಯ್ಯ ಸೇರಿದಂತೆ ಪದಾಧಿಕಾರಿಗಳು ಹಂಗಾಮಿ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. 

ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಎಸ್. ಲೋಹಿತ್

ಎಸ್. ಲೋಹಿತ್ 
    ಭದ್ರಾವತಿ: ಶಿವಮೊಗ್ಗ ಹರಿಗೆ ನಿವಾಸಿ, ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ಕಿರಿಯ ಆಟಗಾರ ಎಸ್. ಲೋಹಿತ್  ಬಿಸಿಸಿಐ ೧೯ ವರ್ಷದೊಳಗಿನ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. 
    ಒರಿಸ್ಸಾ ಕಟಕ್ ನಗರದಲ್ಲಿ ಅ.೪ ರಿಂದ ೧೨ರವರೆಗೆ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯದಿಂದ ಒಟ್ಟು ೧೫ ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಎಸ್. ಲೋಹಿತ್ ಸಹ ಒಬ್ಬರಾಗಿದ್ದಾರೆ. ಕೆ.ಬಿ ಪವನ್ ಮುಖ್ಯ ತರಬೇತಿದಾರರಾಗಿದ್ದು, ಎಸ್.ಎಲ್ ಅಕ್ಷಯ್ ಸಹಾಯಕ ತರಬೇತಿದಾರರಾಗಿದ್ದಾರೆ. 
    ಎಸ್. ಲೋಹಿತ್ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಮೂಲಕ ಗುರುತಿಸಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಸ್ಪೋಟಕ ಬಳಸಿ ಅಕ್ರಮ ಕಲ್ಲು ಸಾಗಾಣಿಕೆ : ನಾಲ್ವರಿಗೆ ೧ ವರ್ಷ ಸೆರೆವಾಸ, ೨೦ ಸಾವಿರ ರು. ದಂಡ

    ಭದ್ರಾವತಿ: ಯಾವುದೇ ಪರವಾನಗಿ ಪಡೆಯದೆ ಸಿಡಿಮದ್ದು ಬಳಸಿ ಅಕ್ರಮವಾಗಿ ಕಲ್ಲು ಬಂಡೆ ಸ್ಪೋಟಿಸಿ ಕಲ್ಲು ಸಾಗಾಣಿಕೆ  ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೪ ಮಂದಿಗೆ ೧ ವರ್ಷಗಳ ಕಾಲ ಸಾದಾ ಸೆರೆವಾಸ ಹಾಗು ತಲಾ ೨೦,೦೦೦ ರು. ದಂಡ ವಿಧಿಸಿ ತೀರ್ಪು ನೀಡಿದೆ. 
    ಗುರುಮೂರ್ತಿ, ಧರ್ಮಪ್ಪ, ಸತೀಶ ಮತ್ತು ಹರಿಕೃಷ್ಣ ಶಿಕ್ಷೆಗೊಳಗಾದವರು. ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 
ಪ್ರಕರಣದ ವಿವರ:
    ಈ ನಾಲ್ವರು ಅಪರಾಧಿಗಳು ತಾಲೂಕಿನ ಅತ್ತಿಗುಂದ ಗ್ರಾಮದ ಸರ್ವೆ ನಂ.೭೬ರಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಪಡೆಯದೆ ಕಲ್ಲುಬಂಡೆಗಳನ್ನು ಸ್ಪೋಟಿಸಿ ಕಲ್ಲು ಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇರೆಗೆ ೧೯-೦೮-೨೦೧೬ರಂದು ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಅಲ್ಲದೆ ಸ್ಪೋಟಕಕ್ಕೆ ಬಳಸಿದ ೫ ಕೇಪುಗಳು, ೨ ತೋಟಗಳು, ಒಂದು ಮೀಟರ್ ಉದ್ದದ ಬತ್ತಿ, ಒಂದು ಹಿಡಿಯಷ್ಟು ಉಪ್ಪು ಹಾಗು ೩ ಸುತ್ತಿಗೆಗಳು, ಮೂರು ಹಾರೆಕೋಲುಗಳು ಹಾಗು ೧ ಟ್ರ್ಯಾಕ್ಟರ್ ಮತ್ತು ೧ ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 
    ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಬಿ. ಅಶೋಕ್ ಕುಮಾರ್ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೪ ಅರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಸುಮಾರು ೮ ವರ್ಷಗಳ ವಿಚಾರಣೆ ನಂತರ ಇದೀಗ ತೀರ್ಪು ಹೊರ ಹೊರಬಿದ್ದಿದೆ. 

Sunday, September 29, 2024

ಕೇರಳ ಸಮಾಜದವರು ನೆಲದ ಸಂಸ್ಕೃತಿ ಪಸರಿಸುವ ಮೂಲಕ ಸೌಹಾರ್ದತೆ ಕಾಯ್ದುಕೊಂಡಿದ್ದಾರೆ

೧೨ನೇ ವರ್ಷದ ಓಣಂ ಆಚರಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ


ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ಕೇರಳ ಸಮಾಜದವರು ಓಣಂ ಆಚರಣೆಯ ಮೂಲಕ ತಮ್ಮ ನೆಲದ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವ ಮೂಲಕ ಜಾತಿ, ಧರ್ಮ, ಭಾಷೆ ಮೀರಿ ಸೌಹಾರ್ದತೆ ಕಾಯ್ದುಕೊಂಡು ಬಂದಿರುವುದು ಅವರ ವಿಶೇಷತೆಯಾಗಿದೆ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು. 
    ಅವರು ಭಾನುವಾರ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆ ಉದ್ಘಾಟಿಸಿ ಮಾತನಾಡಿದರು. 
    ಕೇರಳ ಸಮಾಜದವರಲ್ಲಿ ಒಂದು ವಿಶೇಷವಾದ ಶಕ್ತಿ ಇದೆ. ತಮ್ಮಲ್ಲಿನ ಪ್ರತಿಭೆ ಮೂಲಕ ಪ್ರಪಂಚದ ಎಲ್ಲೆಡೆ ಎಲ್ಲರೊಂದಿಗೂ ಗುರುತಿಸಿಕೊಂಡಿದ್ದಾರೆ. ತಾವು ನೆಲೆಸಿರುವ ನೆಲದ ಭಾಷೆ, ಸಂಸ್ಕೃತಿ ಜೊತೆಗೆ ತಮ್ಮ ಮೂಲ ನೆಲೆಯ ಸಂಸ್ಕೃತಿಯನ್ನೂ ಸಹ ಪಸರಿಸುತ್ತಿದ್ದಾರೆ. ಕೇರಳ ಸಮಾಜದವರ ಏಳಿಗೆಗೆ ಸದಾ ಬದ್ಧನಾಗಿದ್ದೇನೆ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕೇರಳ ಸಮಾಜದವರು ಓಣಂ ಆಚರಣೆ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಮಾದರಿಯಾಗಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಜಗಜ್ಯೋತಿ ಬಸವೇಶ್ವರರ ಆಶಯ ಕೂಡ ಇದೆ ಆಗಿದೆ. ಕೇರಳ ಸಮಾಜದ ಸಂಘಟನೆಗೆ ಅಗತ್ಯವಿರುವ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. 

ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕೇರಳ ಸಮಾಜಂ ಅಧ್ಯಕ್ಷ ಸುಗುಣ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯುವ ಘಟಕದ ಅಧ್ಯಕ್ಷ ಎಸ್. ಪ್ರಸನ್ನ ಕುಮಾರ್, ಉದ್ಯಮಿಗಳಾದ ಕೆ. ಇಬ್ರಾಹಿಂ, ಬಿ.ಕೆ ಜಗನ್ನಾಥ, ಬಿ.ಕೆ ಶಿವಕುಮಾರ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಸದಸ್ಯ ಹನುಮಂತಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಓಣಂ ಆಚರಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ರಂಗೋಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.  ಪ್ರಶಾಂತ್ ಅಪ್ಪು ಕಾರ್ಯಕ್ರಮ ನಿರೂಪಿಸಿದರು. 

ಶಾಸಕರ ಸ್ವಂತ ಹಣದಲ್ಲಿ ತಾಲೂಕಿನ ಪೊಲೀಸ್ ಠಾಣೆಗಳಿಗೆ ಉಚಿತ ಕಂಪ್ಯೂಟರ್ ವಿತರಣೆ

ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ಭದ್ರಾವತಿ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಂತ ಹಣದಲ್ಲಿ ಉಚಿತವಾಗಿ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. 
    ಭದ್ರಾವತಿ : ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಂತ ಹಣದಲ್ಲಿ ಉಚಿತವಾಗಿ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. 
    ತಾಲೂಕಿನ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ನ್ಯೂಟೌನ್, ಹಳೇನಗರ, ಹೊಸಮನೆ ಶಿವಾಜಿ ಸರ್ಕಲ್, ಪೇಪರ್ ಟೌನ್, ಗ್ರಾಮಾಂತರ ಹಾಗು ಬಿ.ಆರ್.ಪಿ(ಗ್ರಾಮಾಂತರ ಉಪ ಠಾಣೆ) ಮತ್ತು ಸಂಚಾರಿ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಗಳಿದ್ದು, ಅಲ್ಲದೆ ಪೊಲೀಸ್ ಉಪಾಧೀಕ್ಷಕರ ಹಾಗು ನಗರ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಗಳಿವೆ. ಎಲ್ಲಾ ಪೊಲೀಸ್ ಠಾಣೆಗಳಿಗೂ ಸಹ ಉಚಿತವಾಗಿ ಕಂಪ್ಯೂಟರ್‌ಗಳನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ವಿತರಿಸಲಾಯಿತು. 
    ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಪೇಪರ್ ಟೌನ್ ಠಾಣಾ ನಿರೀಕ್ಷಕಿ ನಾಗಮ್ಮ, ಹೊಸಮನೆ ಶಿವಾಜಿ ಸರ್ಕಲ್ ಠಾಣಾ ಸಹಾಯಕ ನಿರೀಕ್ಷಕ ಕೃಷ್ಣಕುಮಾರ್ ಮಾನೆ, ನ್ಯೂಟೌನ್ ಪೊಲೀಸ್ ಠಾಣಾ ಸಹಾಯಕ ನಿರೀಕ್ಷಕ ರಮೇಶ್, ಸಂಚಾರಿ ಠಾಣಾ ಸಹಾಯಕ ನಿರೀಕ್ಷಕಿ ಶಾಂತಲ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಮುಖಂಡರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್ ಹಾಗು ಎಲ್ಲಾ ಠಾಣೆಗಳ ಠಾಣಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Saturday, September 28, 2024

ಶಿಕ್ಷಕರ, ಸಂಸ್ಥಾಪಕರ ದಿನಾಚರಣೆ, ಮದರ್ ತೆರೇಸಾ ಹುಟ್ಟುಹಬ್ಬ

ಭದ್ರಾವತಿ ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ಶಿಕ್ಷಕರ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ ಹಾಗು ಮದರ್ ತೆರೇಸಾರವರ ಹುಟ್ಟುಹಬ್ಬ ಆಚರಿಸಲಾಯಿತು.
    ಭದ್ರಾವತಿ: ಲಯನ್ಸ್ ಕ್ಲಬ್ ಶುಗರ್‌ಟೌನ್‌ನಲ್ಲಿ ಶಿಕ್ಷಕರ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ ಹಾಗು ಮದರ್ ತೆರೇಸಾರವರ ಹುಟ್ಟುಹಬ್ಬ ಆಚರಿಸಲಾಯಿತು.
    ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ,  ಲಯನ್ಸ್ ಕ್ಲಬ್ ದೇವೇಂದ್ರ ಭಟ್ ಹಾಗು ಎಂಪಿಎಂ ಕಾರ್ಖಾನೆಯ ಎಚ್.ಎನ್ ರವಿಚಂದ್ರನ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. 
    ಹಿರಿಯ ನರ್ಸಿಂಗ್ ಬಡ್ತಿ ಅಧಿಕಾರಿ ಶೀಲಮೇರಿ ಜಾರ್ಜ್ ವಿನ್ಸೆಂಟ್, ಅರಳಿಕೊಪ್ಪ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನೀತ ಮತ್ತು ದೈಹಿಕ ಶಿಕ್ಷಕಿ ನಂದಿನಿ ಹಾಗು ನಿವೃತ್ತ ಕೆಪಿಟಿಸಿಎಲ್ ಇಂಜಿನಿಯರ್‌ಗಳಾದ ಸತ್ಯನಾರಾಯಣ ಮತ್ತು ಸಾಣೆಗೌಡ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು. 
    ಲಯನ್ಸ್ ಕ್ಲಬ್ ಶುಗರ್‌ಟೌನ್ ಅಧ್ಯಕ್ಷ ಉಮೇಶ್ ಅಧ್ಯಕ್ಷತೆವಹಿಸಿದ್ದರು. ಡಾ. ನರೇಂದ್ರ ಭಟ್, ಸತೀಶ್ ಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಮ್ಮೇಗೌಡ ಸ್ವಾಗತಿಸಿ, ಶಿಕ್ಷಕಿಯರಾದ ಸವಿತಾ ಮತ್ತು ಕೋಕಿಲಾ ಪ್ರಾರ್ಥಿಸಿ, ಡಾರತಿ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ವಂದಿಸಿದರು. 
 

೧೮೬೧ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ

ಭದ್ರಾವತಿ ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಏಕದಂತ ಕಲ್ಯಾಣ ಮಂಟದಲ್ಲಿ ೧೮೬೧ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಲಾಯಿತು. 
    ಭದ್ರಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಮದ್ಯವರ್ಜನ ವ್ಯವಸ್ಥಾಪನ ಸಮಿತಿ, ಜನ್ನಾಪುರ ಹಾಗೂ ಸ್ಥಳಿಯ ಸಂಘ-ಸಂಸ್ಥೆಗಳ ಸಹಾಕಾರದೊಂದಿಗೆ ೧೮೬೧ನೇ ಮದ್ಯವರ್ಜನ ಶಿಬಿರ ಅ.೩ರ ವರೆಗೆ ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಏಕದಂತ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದು, ಹಲವು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. 
    ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಾರತರಾಜು ಅಧ್ಯಕ್ಷತೆಯಲ್ಲಿ ಶಿಬಿರಕ್ಕೆ ಚಾಲನೆ ನೀಡಲಾಗಿದ್ದು, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ನಗರಸಭಾ ಸದಸ್ಯರಾದ ಲತಾಚಂದ್ರಶೇಖರ್, ಸವಿತಾ ಉಮೇಶ್, ಜಿಲ್ಲಾ ಜನ ಜಾಗೃತಿ ವೇದಿಕೆ  ಉಪಾಧ್ಯಕ್ಷ ಪಾಲಾಕ್ಷಪ್ಪ, ಸದಸ್ಯರಾದ ಆರ್. ಕರುಣಾಮೂರ್ತಿ, ಜಯರಾಂ ಗೊಂದಿ, ಯೋಜನಾಧಿಕಾರಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮೇಲ್ವಿಚಾರಕರು ಮತ್ತು ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 
    ಶಿಬಿರದ ಸಮಾರೋಪ ಸಮಾರಂಭ ಅ.೩ರಂದು ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸುವರು. ತಹಸೀಲ್ದಾರ್ ಕೆ.ಆರ್ ನಾಗರಾಜು, ಬೆಳ್ತಂಗಡಿ ಜನಜಾಗೃತಿ ವೇದಿಕೆ ಕೇಂದ್ರ ಕಛೇರಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಮೂ ಕೊರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.