Tuesday, October 1, 2024

ಭದ್ರಾವತಿ ನಗರಸಭೆ : ೫೪.೫೦ ಲಕ್ಷ ರು. ವೆಚ್ಚದಲ್ಲಿ ನಾಡಹಬ್ಬ ದಸರಾ ಆಚರಣೆ

ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪರಿಂದ ಆಚರಣೆಗೆ ಚಾಲನೆ 

ಭದ್ರಾವತಿ ನಗರಸಬೆ ಕಚೇರಿ ಸಭಾಂಗಣದಲ್ಲಿ ಪ್ರಭಾರ ಅಧ್ಯಕ್ಷ ಎಂ.ಮಣಿ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವ ಆಚರಣೆ ಕುರಿತು ಸಭೆ ನಡೆಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಕದಿರೇಶ್, ಲತಾಚಂದ್ರಶೇಖರ್ ಸೇರಿದಂತೆ ಹಲವರಿದ್ದರು.
    ಭದ್ರಾವತಿ; ನಗರಸಭೆವತಿಯಿಂದ ಈ ಬಾರಿ ನಾಡಹಬ್ಬ ದಸರಾ ಮಹೋತ್ಸವ ಸುಮಾರು ೫೪.೫೦ ಲಕ್ಷ ರು. ವೆಚ್ಚದಲ್ಲಿ ೧೦ ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಹೇಳಿದರು.
    ಅವರು ನಗರಸಭೆ ಕಚೇರಿ ಸಭಾಂಗಣದಲ್ಲಿ ದಸರಾ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅ.೩ ರಿಂದ ೧೨ರವರೆಗೆ ೧೦ ದಿನಗಳ ಕಾಲ ನಡೆಯುವ ದಸರಾ ಮಹೋತ್ಸವ ಆಚರಿಸಲಾಗುವುದು. ಅ.೩ ರಂದು ಬೆಳಗ್ಗೆ ೧೦ ಗಂಟೆಗೆ ನಗರಸಭೆ ಮುಂಭಾಗದಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ದಸರಾ ಆಚರಣೆಗೆ ಚಾಲನೆ ನೀಡುವರು ಎಂದರು.
    ಅ.೪ ರಂದು ಕನಕಮಂಟಪ ಮೈದಾನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಪಂದ್ಯಾವಳಿಯನ್ನು ಅಂತರಾಷ್ಟ್ರೀಯ ಕ್ರೀಡಾಪಟು ಸುಧೀರ್ ಕುಮಾರ್ ಉದ್ಘಾಟಿಸುವರು. ಅ.೫ ರಂದು ಸಂಜೆ ೪ ಗಂಟೆಗೆ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ನಡೆಯಲಿದ್ದು, ಅ.೬ರಂದು ಜನ್ನಾಪುರ ಬಂಟರ ಭವನದಲ್ಲಿ ಮಹಿಳೆಯರಿಗೆ ಬೆಂಕಿ ರಹಿತ ಅಡುಗೆ ಸ್ಪರ್ಧೆ ನಡೆಯಲಿದೆ. ಅ.೭ ರಂದು ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ರಾಷ್ಟ್ರೀಯ ಕ್ರೀಡಾಪಟು ಮಹೇಶ್ವರಪ್ಪ ಉದ್ಘಾಟಿಸಲಿದ್ದಾರೆ. ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದ ವಿಜೇತರಿಗೆ ಬೆಳ್ಳಿ ಗದೆ ಹಾಗೂ "೨೦೨೪ ದಸರಾ ಕೇಸರಿ" ಬಿರುದು ನೀಡಿ ಗೌರವಿಸಲಾಗುವುದು. ಅ.೮ರಂದು ಮಹಿಳೆಯರಿಗಾಗಿ ಮಹಿಳಾ ದಸರಾ ಆಚರಿಸಲಾಗುತ್ತಿದ್ದು, ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

    ಅ.೯ ರಂದು ಮಿಮಿಕ್ರಿ ಗೋಪಿ ಹಾಗೂ ಗಿಚ್ಚಿಗಿಲಿಗಿಲಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಕನಕ ಮಂಟಪ ಮೈದಾನದಲ್ಲಿ ನಡೆಯಲಿದೆ. ಅ.೧೨ ರ ಕೊನೆಯ ದಿನ ವಿಜಯದಶಮಿಯಂದು ಮಧ್ಯಾಹ್ನ ೩ ಗಂಟೆಗೆ ಅಪ್ಪರ್‌ಹುತ್ತಾ ಬಸ್ ನಿಲ್ದಾಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಸೇರಿದಂತೆ ೫೦ಕ್ಕೂ ಹೆಚ್ಚು ವಿವಿಧ ದೇವಾನುದೇವತೆಗಳ ಬೃಹತ್ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಲಿದ್ದಾರೆ. ವಿವಿದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಕನಕ ಮಂಟಪ ಮೈದಾನದಲ್ಲಿ ಸಂಜೆ ಬನ್ನಿ ಮುಡಿಯುವ ಮೂಲಕ ರಾವಣನ ಸಂಹಾರದೊಂದಿಗೆ ನಾಡಹಬ್ಬ ದಸರಾ ಸಂಪನ್ನಗೊಳ್ಳಲಿದೆ ಎಂದರು.
    ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಪ್ರಮುಖರಾದ ಕದಿರೇಶ್, ಲತಾಚಂದ್ರಶೇಖರ್, ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ರಿಯಾಜ್ ಅಹಮದ್, ಕೋಟೇಶ್ವರರಾವ್,  ನಗರಸಭೆ ಕಛೇರಿ ವ್ಯವಸ್ಥಾಪಕಿ ಸುನಿತಾ ಕುಮಾರಿ ಉಪಸ್ಥಿತರಿದ್ದರು.  

     ನಾಡಹಬ್ಬ ದಸರಾ ಉತ್ಸವ ಮೆರವಣಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಿಸಿ 

 

     " ಮೈಸೂರು ದಸರಾ ಮಾದರಿಯಲ್ಲಿ ಭದ್ರಾವತಿ ನಗರದ ದಸರಾ ಮಹೋತ್ಸವು ಪ್ರತಿ ವರ್ಷ ನಡೆದುಕೊಂಡು ಬರುತ್ತಿದ್ದು, ಸಾವಿರಾರು ಭಕ್ತರು ಕನಕಮಂಟಪ ಮೈದಾನದಲ್ಲಿ ನಡೆಯುವ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ನಿಗದಿತ ಸಮಯಕ್ಕೆ ಮೆರವಣಿಗೆ ಆರಂಭಿಸಿ ಸಂಜೆ ೭ ಗಂಟೆಯ ಒಳಗಾಗಿ ಕಾರ್ಯಕ್ರಮ ಮುಗಿಸಿ" ಎಂದು ದೇವಸ್ಥಾನಗಳ ಕಮಿಟಿ ಸದಸ್ಯರುಗಳಿಗೆ ಕರೆಯಲಾಗಿದ್ದ ಸಭೆಯಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಶರ್ಮ, ವಿಶ್ವ ಹಿಂದೂ ಪರಿಷದ್ ಪ್ರಾಂತ ಉಪಾಧ್ಯಕ್ಷ ಹಾ.ರಾಮಪ್ಪ, ಹಾಗೂ ಹಳದಮ್ಮ ದೇವಿ ದೇವಸ್ಥಾನದ ಪದಾಧಿಕಾರಿ ಕೃಷ್ಣಪ್ಪ ಸೇರಿದಂತೆ ಇನ್ನಿತರರು ಆಗ್ರಹಿಸಿದರು.
      ನಾವು ಮಾಡುವ ಹಬ್ಬ ಸಂಪ್ರದಾಯಬದ್ದವಾಗಿರಬೇಕು. ಸಕಾಲದಲ್ಲಿ ಬನ್ನಿ ಮುಡಿಯುವುದರಿಂದ ದೇವರುಗಳ ಅನುಗ್ರಹವೂ ನಮ್ಮ ಮೇಲಿರುತ್ತದೆ. ಸಂಜೆ ೫ ಗಂಟೆಗೆ ಬನ್ನಿ ಮುಡಿಯುವುದು ಸೂಕ್ತ, ಎಂದು ರಂಗನಾಥಶರ್ಮ ಸಲಹೆ ನೀಡಿದರೆ, ಉತ್ಸವ ಮೂರ್ತಿಯನ್ನು ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಮೆರವಣಿಗೆ ಮಾಡಬೇಕಾಗಿರುವುದರಿಂದ ಕನಕ ಮಂಟಪದ ಕಾರ್ಯಕ್ರಮ ತಡಮಾಡಿದರೆ ನಾವು ಇಡಿ ರಾತ್ರಿ ದೇವರ ಮೆರವಣಿಗೆ ಮಾಡಬೇಕಾಗುತ್ತದೆ ಎಂದು ಕೃಷ್ಣಪ್ಪ ಹೇಳಿದರು.
  ಹಾ.ರಾಮಪ್ಪ ಮಾತನಾಡಿ, ೪೧೪ನೇ ವರ್ಷದ ದಸರಾ ಉತ್ಸವ ಇದಾಗಿದ್ದು ೧೯೮೦ ರಿಂದಲೂ ವಿಶ್ವ ಹಿಂದೂ ಪರಿಷತ್ ಸಹಕರಿಸುತ್ತಾ ಬಂದಿದೆ.  ಉದ್ಘಾಟಕರು ನಿಗದಿತ ಸಮಯಕ್ಕೆ ಆಗಮಿಸಿ ಮೆರವಣಿಗೆ ಆರಂಭಿಸಿ ೬ ಗಂಟೆಯ ಒಳಗಾಗಿ ಮೆರವಣಿಗೆಯು ಬನ್ನಿ ಮುಡಿಯುವ ಕನಕಮಂಟಪ ಮೈದಾನ ತಲುಪಬೇಕು. ಬನ್ನಿ ಮುಡಿಯುವ ವೇದಿಕೆ ಸ್ಥಳದಲ್ಲಿ ಅರ್ಚಕರು ಹೊರತಾಗಿ ಹೆಚ್ಚಿನ ಜನಸಂದಣಿ ಆಗಬಾರದು. ಮೆರವಣಿಗೆಯಲ್ಲೂ ಮೊದಲು ನಗರಸಭೆಯ ಚಾಮುಂಡೇಶ್ವರಿ ದೇವಿಯ ರಥ, ನಂತರ ಕ್ಷೇತ್ರ ಪಾಲಕ ಲಕ್ಷ್ಮೀನರಸಿಂಹಸ್ವಾಮಿ ನಂತರ ಗ್ರಾಮ ದೇವತೆ ಹಳದಮ್ಮ ದೇವಿ ದೇವಿ ನಂತರ ಮಿಕ್ಕೆಲ್ಲಾ ದೇವರುಗಳ ಸರದಿ ಸಾಲು ಇರಬೇಕು ಎಂದು ಸಲಹೆ ನೀಡಿದರು.

Monday, September 30, 2024

ಅಥ್ಲೆಟಿಕ್ ಅಂಧ ಕ್ರೀಡಾಪಟುಗಳಿಗೆ ತರಬೇತಿ : ಸೌಮ್ಯ ಸಾವಂತ್‌ಗೆ ಸನ್ಮಾನ

ಭದ್ರಾವತಿ ಹೊಸಮನೆ ನಿವಾಸಿ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್ ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಒಲಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಇವರ ಪರಿಶ್ರಮ ಸಹ ಹೆಚ್ಚಿನದಾಗಿದೆ. ಈ ಹಿನ್ನಲೆಯಲ್ಲಿ ಇವರನ್ನು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ : ನಗರದ ಹೊಸಮನೆ ನಿವಾಸಿ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್ ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಾರಿ ಒಲಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಇವರ ಪರಿಶ್ರಮ ಸಹ ಹೆಚ್ಚಿನದಾಗಿದೆ. ಈ ಹಿನ್ನಲೆಯಲ್ಲಿ ಇವರನ್ನು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  
    ಸೌಮ್ಯ ಸಾವಂತ್ ಈ ಹಿಂದೆ ಅಥ್ಲೆಟಿಕ್ ಕ್ರೀಡಾಪಟು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಸಾಧನೆಗಳನ್ನು ಮಾಡುವ ಮೂಲಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಗಮನ ಸೆಳೆದಿದ್ದರು. ನಂತರ ಅಂತರಾಷ್ಟ್ರೀಯ ತರಬೇತಿದಾರರಾಗಿ ಅಂಧ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಅವರುಗಳು ಸಹ ರಾಜ್ಯ ಮತ್ತು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಂಗಾರ ಮತ್ತು ಬೆಳ್ಳಿ ಪದಕಗಳನ್ನು ಗಳಿಸುವಲ್ಲಿ ಕಾರಣಕರ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸೆ.೨೯ರಂದು ರಿಲೆಯನ್ಸ್ ಫೌಂಡೇಷನ್ ವತಿಯಿಂದ ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಒಲಿಂಪಿಕ್ಸ್ ಮತ್ತು ಪ್ಯಾರಾಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಕ್ರೀಡಾಪಟು ಹಾಗು ತರಬೇತಿದಾರರೊಂದಿಗೆ ಸಂತೋಷ ಕೂಟ ಸಂಭ್ರಮ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  ಮುಕೇಶ್ ಅಂಬಾನಿ, ನೀತು ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬ ವರ್ಗದವರು ಹಾಗು ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 
    ಸೌಮ್ಯ ಸಾವಂತ್ ಹಿರಿಯ ಪತ್ರಕರ್ತ ಯು.ಆರ್ ಸಾವಂತ್-ಅನ್ನಪೂರ್ಣ ಸಾವಂತ್ ದಂಪತಿಯ ಹಿರಿಯ ಪುತ್ರಿಯಾಗಿದ್ದಾರೆ. ಪ್ರಸ್ತುತ ಸೌಮ್ಯ ಸಾವಂತ್ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಇವರ ಪತಿ ಬಿ.ರಾಹುಲ್ ಸಹ ಅಥ್ಲೆಟಿಕ್ ಕ್ರೀಡಾಪಟುವಾಗಿದ್ದು, ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
 

ಪಡಿತರ ವಿತರಕರ ಸಂಘ : ಅಧ್ಯಕ್ಷರಾಗಿ ಎಸ್.ಆರ್ ನಾಗರಾಜ್

ಎಸ್.ಆರ್ ನಾಗರಾಜ್ 
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ನಗರ ಘಟಕದ ಹಂಗಾಮಿ ಅಧ್ಯಕ್ಷರಾಗಿ ಎಸ್.ಆರ್ ನಾಗರಾಜ್ ಅವರನ್ನು ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 
    ಹಂಗಾಮಿ ಅಧ್ಯಕ್ಷರ ಆಯ್ಕೆ ಸಂಬಂಧ ಸಿದ್ದಲಿಂಗಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಎಸ್.ಆರ್ ನಾಗರಾಜ್ ಆಯ್ಕೆಯಾಗಿದ್ದಾರೆ. ಸುಮಾರು ೨೫ ಸದಸ್ಯರು ಅಧ್ಯಕ್ಷರ ಆಯ್ಕೆ ಅನುಮೋದಿಸಿದ್ದು, ಈ ನಡುವೆ ಸಿದ್ದಲಿಂಗಯ್ಯ ಸೇರಿದಂತೆ ಪದಾಧಿಕಾರಿಗಳು ಹಂಗಾಮಿ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. 

ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಎಸ್. ಲೋಹಿತ್

ಎಸ್. ಲೋಹಿತ್ 
    ಭದ್ರಾವತಿ: ಶಿವಮೊಗ್ಗ ಹರಿಗೆ ನಿವಾಸಿ, ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ಕಿರಿಯ ಆಟಗಾರ ಎಸ್. ಲೋಹಿತ್  ಬಿಸಿಸಿಐ ೧೯ ವರ್ಷದೊಳಗಿನ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. 
    ಒರಿಸ್ಸಾ ಕಟಕ್ ನಗರದಲ್ಲಿ ಅ.೪ ರಿಂದ ೧೨ರವರೆಗೆ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯದಿಂದ ಒಟ್ಟು ೧೫ ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಎಸ್. ಲೋಹಿತ್ ಸಹ ಒಬ್ಬರಾಗಿದ್ದಾರೆ. ಕೆ.ಬಿ ಪವನ್ ಮುಖ್ಯ ತರಬೇತಿದಾರರಾಗಿದ್ದು, ಎಸ್.ಎಲ್ ಅಕ್ಷಯ್ ಸಹಾಯಕ ತರಬೇತಿದಾರರಾಗಿದ್ದಾರೆ. 
    ಎಸ್. ಲೋಹಿತ್ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಮೂಲಕ ಗುರುತಿಸಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಸ್ಪೋಟಕ ಬಳಸಿ ಅಕ್ರಮ ಕಲ್ಲು ಸಾಗಾಣಿಕೆ : ನಾಲ್ವರಿಗೆ ೧ ವರ್ಷ ಸೆರೆವಾಸ, ೨೦ ಸಾವಿರ ರು. ದಂಡ

    ಭದ್ರಾವತಿ: ಯಾವುದೇ ಪರವಾನಗಿ ಪಡೆಯದೆ ಸಿಡಿಮದ್ದು ಬಳಸಿ ಅಕ್ರಮವಾಗಿ ಕಲ್ಲು ಬಂಡೆ ಸ್ಪೋಟಿಸಿ ಕಲ್ಲು ಸಾಗಾಣಿಕೆ  ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೪ ಮಂದಿಗೆ ೧ ವರ್ಷಗಳ ಕಾಲ ಸಾದಾ ಸೆರೆವಾಸ ಹಾಗು ತಲಾ ೨೦,೦೦೦ ರು. ದಂಡ ವಿಧಿಸಿ ತೀರ್ಪು ನೀಡಿದೆ. 
    ಗುರುಮೂರ್ತಿ, ಧರ್ಮಪ್ಪ, ಸತೀಶ ಮತ್ತು ಹರಿಕೃಷ್ಣ ಶಿಕ್ಷೆಗೊಳಗಾದವರು. ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 
ಪ್ರಕರಣದ ವಿವರ:
    ಈ ನಾಲ್ವರು ಅಪರಾಧಿಗಳು ತಾಲೂಕಿನ ಅತ್ತಿಗುಂದ ಗ್ರಾಮದ ಸರ್ವೆ ನಂ.೭೬ರಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಪಡೆಯದೆ ಕಲ್ಲುಬಂಡೆಗಳನ್ನು ಸ್ಪೋಟಿಸಿ ಕಲ್ಲು ಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇರೆಗೆ ೧೯-೦೮-೨೦೧೬ರಂದು ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಅಲ್ಲದೆ ಸ್ಪೋಟಕಕ್ಕೆ ಬಳಸಿದ ೫ ಕೇಪುಗಳು, ೨ ತೋಟಗಳು, ಒಂದು ಮೀಟರ್ ಉದ್ದದ ಬತ್ತಿ, ಒಂದು ಹಿಡಿಯಷ್ಟು ಉಪ್ಪು ಹಾಗು ೩ ಸುತ್ತಿಗೆಗಳು, ಮೂರು ಹಾರೆಕೋಲುಗಳು ಹಾಗು ೧ ಟ್ರ್ಯಾಕ್ಟರ್ ಮತ್ತು ೧ ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 
    ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಬಿ. ಅಶೋಕ್ ಕುಮಾರ್ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೪ ಅರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಸುಮಾರು ೮ ವರ್ಷಗಳ ವಿಚಾರಣೆ ನಂತರ ಇದೀಗ ತೀರ್ಪು ಹೊರ ಹೊರಬಿದ್ದಿದೆ. 

Sunday, September 29, 2024

ಕೇರಳ ಸಮಾಜದವರು ನೆಲದ ಸಂಸ್ಕೃತಿ ಪಸರಿಸುವ ಮೂಲಕ ಸೌಹಾರ್ದತೆ ಕಾಯ್ದುಕೊಂಡಿದ್ದಾರೆ

೧೨ನೇ ವರ್ಷದ ಓಣಂ ಆಚರಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ


ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ಕೇರಳ ಸಮಾಜದವರು ಓಣಂ ಆಚರಣೆಯ ಮೂಲಕ ತಮ್ಮ ನೆಲದ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವ ಮೂಲಕ ಜಾತಿ, ಧರ್ಮ, ಭಾಷೆ ಮೀರಿ ಸೌಹಾರ್ದತೆ ಕಾಯ್ದುಕೊಂಡು ಬಂದಿರುವುದು ಅವರ ವಿಶೇಷತೆಯಾಗಿದೆ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು. 
    ಅವರು ಭಾನುವಾರ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆ ಉದ್ಘಾಟಿಸಿ ಮಾತನಾಡಿದರು. 
    ಕೇರಳ ಸಮಾಜದವರಲ್ಲಿ ಒಂದು ವಿಶೇಷವಾದ ಶಕ್ತಿ ಇದೆ. ತಮ್ಮಲ್ಲಿನ ಪ್ರತಿಭೆ ಮೂಲಕ ಪ್ರಪಂಚದ ಎಲ್ಲೆಡೆ ಎಲ್ಲರೊಂದಿಗೂ ಗುರುತಿಸಿಕೊಂಡಿದ್ದಾರೆ. ತಾವು ನೆಲೆಸಿರುವ ನೆಲದ ಭಾಷೆ, ಸಂಸ್ಕೃತಿ ಜೊತೆಗೆ ತಮ್ಮ ಮೂಲ ನೆಲೆಯ ಸಂಸ್ಕೃತಿಯನ್ನೂ ಸಹ ಪಸರಿಸುತ್ತಿದ್ದಾರೆ. ಕೇರಳ ಸಮಾಜದವರ ಏಳಿಗೆಗೆ ಸದಾ ಬದ್ಧನಾಗಿದ್ದೇನೆ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕೇರಳ ಸಮಾಜದವರು ಓಣಂ ಆಚರಣೆ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಮಾದರಿಯಾಗಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಜಗಜ್ಯೋತಿ ಬಸವೇಶ್ವರರ ಆಶಯ ಕೂಡ ಇದೆ ಆಗಿದೆ. ಕೇರಳ ಸಮಾಜದ ಸಂಘಟನೆಗೆ ಅಗತ್ಯವಿರುವ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. 

ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕೇರಳ ಸಮಾಜಂ ಅಧ್ಯಕ್ಷ ಸುಗುಣ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯುವ ಘಟಕದ ಅಧ್ಯಕ್ಷ ಎಸ್. ಪ್ರಸನ್ನ ಕುಮಾರ್, ಉದ್ಯಮಿಗಳಾದ ಕೆ. ಇಬ್ರಾಹಿಂ, ಬಿ.ಕೆ ಜಗನ್ನಾಥ, ಬಿ.ಕೆ ಶಿವಕುಮಾರ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಸದಸ್ಯ ಹನುಮಂತಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಓಣಂ ಆಚರಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ರಂಗೋಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.  ಪ್ರಶಾಂತ್ ಅಪ್ಪು ಕಾರ್ಯಕ್ರಮ ನಿರೂಪಿಸಿದರು. 

ಶಾಸಕರ ಸ್ವಂತ ಹಣದಲ್ಲಿ ತಾಲೂಕಿನ ಪೊಲೀಸ್ ಠಾಣೆಗಳಿಗೆ ಉಚಿತ ಕಂಪ್ಯೂಟರ್ ವಿತರಣೆ

ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ಭದ್ರಾವತಿ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಂತ ಹಣದಲ್ಲಿ ಉಚಿತವಾಗಿ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. 
    ಭದ್ರಾವತಿ : ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಂತ ಹಣದಲ್ಲಿ ಉಚಿತವಾಗಿ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. 
    ತಾಲೂಕಿನ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ನ್ಯೂಟೌನ್, ಹಳೇನಗರ, ಹೊಸಮನೆ ಶಿವಾಜಿ ಸರ್ಕಲ್, ಪೇಪರ್ ಟೌನ್, ಗ್ರಾಮಾಂತರ ಹಾಗು ಬಿ.ಆರ್.ಪಿ(ಗ್ರಾಮಾಂತರ ಉಪ ಠಾಣೆ) ಮತ್ತು ಸಂಚಾರಿ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಗಳಿದ್ದು, ಅಲ್ಲದೆ ಪೊಲೀಸ್ ಉಪಾಧೀಕ್ಷಕರ ಹಾಗು ನಗರ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಗಳಿವೆ. ಎಲ್ಲಾ ಪೊಲೀಸ್ ಠಾಣೆಗಳಿಗೂ ಸಹ ಉಚಿತವಾಗಿ ಕಂಪ್ಯೂಟರ್‌ಗಳನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ವಿತರಿಸಲಾಯಿತು. 
    ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಪೇಪರ್ ಟೌನ್ ಠಾಣಾ ನಿರೀಕ್ಷಕಿ ನಾಗಮ್ಮ, ಹೊಸಮನೆ ಶಿವಾಜಿ ಸರ್ಕಲ್ ಠಾಣಾ ಸಹಾಯಕ ನಿರೀಕ್ಷಕ ಕೃಷ್ಣಕುಮಾರ್ ಮಾನೆ, ನ್ಯೂಟೌನ್ ಪೊಲೀಸ್ ಠಾಣಾ ಸಹಾಯಕ ನಿರೀಕ್ಷಕ ರಮೇಶ್, ಸಂಚಾರಿ ಠಾಣಾ ಸಹಾಯಕ ನಿರೀಕ್ಷಕಿ ಶಾಂತಲ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಮುಖಂಡರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್ ಹಾಗು ಎಲ್ಲಾ ಠಾಣೆಗಳ ಠಾಣಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.