Saturday, October 5, 2024

ಬನ್ನಿ ಮುಡಿಯುವ ಖಡ್ಗಕ್ಕೆ ತಹಸೀಲ್ದಾರ್ ವಿಶೇಷ ಪೂಜೆ

ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ಭದ್ರಾವತಿ ಹಳೇನಗರದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ತಾಲೂಕು ದಂಡಾಧಿಕಾರಿ ಕೆ.ಆರ್ ನಾಗರಾಜು ಬನ್ನಿ ಮುಡಿಯಲು ಬಳಸುವ ಖಡ್ಗಕ್ಕೆ ಪೂಜೆ ಸಲ್ಲಿಸಿದರು. 
    ಭದ್ರಾವತಿ : ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ಹಳೇನಗರದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ತಾಲೂಕು ದಂಡಾಧಿಕಾರಿ ಕೆ.ಆರ್ ನಾಗರಾಜು ಬನ್ನಿ ಮುಡಿಯಲು ಬಳಸುವ ಖಡ್ಗಕ್ಕೆ ಪೂಜೆ ಸಲ್ಲಿಸಿದರು. 
    ನಗರಸಭೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ನಾಡಹಬ್ಬ ದಸರಾ ಆಚರಣೆ ಅದ್ದೂರಿಯಾಗಿ ನಡೆಯುತ್ತಿದ್ದು, ಹಳೇನಗರದ ಕನಕಮಂಟಪ ಮೈದಾನದಲ್ಲಿ ಅ.೧೨ರಂದು ನಡೆಯುವ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ತಹಸೀಲ್ದಾರ್‌ರವರು ಬನ್ನಿ ಮುಡಿಯುತ್ತಿದ್ದಾರೆ. ನಂತರ ಸಿಡಿಮದ್ದು ಪ್ರದರ್ಶನ ಹಾಗು ರಾವಣ ಸಂಹಾರದೊಂದಿಗೆ ಹಬ್ಬ ಸಂಪನ್ನಗೊಳ್ಳಲಿದೆ. 
    ಬನ್ನಿ ಮುಡಿಯಲು ಶ್ರೀ ಕಾಳಿಕಾ ದೇವಿ ಖಡ್ಗ ಬಳಸುವುದು ವಾಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ದಸರಾ ಆಚರಣೆ ಮೊದಲ ದಿನದಂದು ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 
    ಉಪತಹಸೀಲ್ದಾರ್ ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್ ಹಾಗು ಕಾಳಿಕಾ ದೇವಿ ದೇವಸ್ಥಾನದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ : ಎಂ. ಮಣಿ ಎಎನ್‌ಎಸ್

ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ, ವಿಮುಖರಾಗದಿರಿ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಸರ್. ವಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡ ಮೊದಲ ಬಹುಮಾನ ಪಡೆದುಕೊಂಡಿತು. ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಸೇರಿದಂತೆ ಇನ್ನಿತರರು ಬಹುಮಾನಗಳನ್ನು ವಿತರಿಸಿದರು. 
    ಭದ್ರಾವತಿ: ಕ್ಷೇತ್ರದಲ್ಲಿರುವ ಕ್ರೀಡಾಪಟುಗಳಿಗೆ ಶಾಸಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೆ ನಾನು ಸಹ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಆರ್ಥಿಕವಾಗಿ ನೆರವು ನೀಡುತ್ತೇನೆ ಎಂದು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಭರವಸೆ ನೀಡಿದರು. 
    ಅವರು ಶನಿವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. 
    ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಪ್ರಸ್ತುತ ನಾವುಗಳು ಕ್ರೀಡೆಗಳಿಂದ ವಂಚಿತರಾದ್ದಲ್ಲಿ ಭವಿಷ್ಯದಲ್ಲಿ ಮತ್ತೊಮ್ಮೆ ಅವಕಾಶಗಳು ಸಿಗುವುದಿಲ್ಲ. ಕ್ರೀಡೆಗಳಿಂದ ಉತ್ತಮ ಆರೋಗ್ಯದ ಜೊತೆಗೆ ದೈಹಿಕ ಹಾಗು ಮಾನಸಿಕವಾಗಿ ಬೆಳವಣಿಗೆ ಹೊಂದಬಹುದು. ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ತಗಲುವ ಸಂಪೂರ್ಣ ವೆಚ್ಚ ನಾನು ಭರಿಸಲು ಸಿದ್ದವಾಗಿದ್ದೇನೆ. ಈ ಹಿನ್ನಲೆಯಲ್ಲಿ ಯಾರು ಸಹ ಕ್ರೀಡೆಗಳಿಂದ ವಿಮುಖರಾಗಬಾರದು ಎಂದರು. 
     ಸರ್. ಮಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡಕ್ಕೆ ಮೊದಲ ಬಹುಮಾನ: 
    ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಸರ್. ವಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡ ಮೊದಲ ಬಹುಮಾನ ಪಡೆದುಕೊಂಡಿದೆ. ಕೊನೆಯ ಅಂತಿಮ ಪಂದ್ಯದಲ್ಲಿ ಶಿವಮೊಗ್ಗ ಮಾಚೇನಹಳ್ಳಿ ಮಲ್ನಾಡ್ ಕ್ರಿಕೆಟರ್‍ಸ್ ತಂಡದ ವಿರುದ್ಧ ಜಯ ಸಾಧಿಸಿ ೨೦ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ತನ್ನದಾಗಿಸಿಕೊಂಡಿತು. ಉಳಿದಂತೆ ದ್ವಿತೀಯ ಸ್ಥಾನ ಪಡೆದ ಮಲ್ನಾಡ್ ಕ್ರಿಕೆಟರ್‍ಸ್ ತಂಡ ೧೦ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ಪಡೆದುಕೊಂಡಿತು. 
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಬಹುಮಾನಗಳನ್ನು ವಿತರಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಾಡಹಬ್ಬ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್, ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಯುವ ಮುಖಂಡ ವೈ. ನಟರಾಜ್, ಶ್ರೀನಿವಾಸ್(ಪೋಟೋ ಗ್ರಾಫರ್) ಸೇರಿದಂತೆ ನಗರಸಭೆ ಹಾಲಿ ಮತ್ತು ಮಾಜಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Friday, October 4, 2024

ಕ್ರೀಡಾಪಟುಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ : ಎಂ. ಮಣಿ ಎಎನ್‌ಎಸ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಕೂಟ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾಕೂಟದಲ್ಲಿ ಮೊದಲ ದಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಮೊದಲ ಪಂದ್ಯ ನಗರಸಭೆ ನೀರು ಸರಬರಾಜು ವಿಭಾಗ ಹಾಗು ಸರ್. ಮಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡಗಳ ನಡುವೆ ನಡೆಯಿತು.
    ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾಕೂಟಕ್ಕೆ ಶುಕ್ರವಾರ ಬೆಳಿಗ್ಗೆ ಅಂತರಾಷ್ಟ್ರೀಯ ಕ್ರೀಡಾಪಟು ಸಿ.ಪಿ.ಆರ್ ಸುಧೀರ್ ಕುಮಾರ್ ಕ್ರೀಡಾ ಜ್ಯೋತಿ ತರುವ ಮೂಲಕ ಉದ್ಘಾಟಿಸಿದರು. 
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಕ್ರೀಡಾಪಟುಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ತೀರ್ಪುಗಾರರು ನೀಡುವ ತೀರ್ಪಿಗೆ ತಲೆಬಾಗಬೇಕು ಎಂದರು. 
    ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಮಾತನಾಡಿ, ನಾಡಹಬ್ಬ ದಸರಾ ಆಚರಣೆಯಲ್ಲಿ ಕ್ರೀಡಾ ಕೂಟವೇ ಒಂದು ವಿಶೇಷತೆಯಾಗಿದೆ. ಪ್ರತಿ ವರ್ಷ ಕ್ರೀಡಾಕೂಟದ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು. 
    ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್ ಸೇರಿದಂತೆ ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಸದಸ್ಯರು ಮತ್ತು ವ್ಯವಸ್ಥಾಪಕಿ ಸುನಿತಾ ಕುಮಾರಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಹಾಗು ತಾಲೂಕು ಅಧ್ಯಕ್ಷ ಚೇತನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಮೊದಲ ದಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಮೊದಲ ಪಂದ್ಯ ನಗರಸಭೆ ನೀರು ಸರಬರಾಜು ವಿಭಾಗ ಹಾಗು ಸರ್. ಮಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡಗಳ ನಡುವೆ ನಡೆಯಿತು.
 

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಕೂಟ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾಕೂಟಕ್ಕೆ ಶುಕ್ರವಾರ ಬೆಳಿಗ್ಗೆ ಅಂತರಾಷ್ಟ್ರೀಯ ಕ್ರೀಡಾಪಟು ಸಿ.ಪಿ.ಆರ್ ಸುಧೀರ್ ಕುಮಾರ್ ಕ್ರೀಡಾ ಜ್ಯೋತಿ ತರುವ ಮೂಲಕ ಉದ್ಘಾಟಿಸಿದರು. 

ಅಕ್ರಮವಾಗಿ ಸಮುದಾಯ ಭವನ ನಿರ್ಮಾಣ : ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೨ರ ಫಿಲ್ಟರ್‌ಶೆಡ್ ನಾಗರಿಕರಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿದ್ದು, ಇವರುಗಳ ವಿರುದ್ಧ  ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. 
    ಭದ್ರಾವತಿ :  ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೨ರ ಫಿಲ್ಟರ್‌ಶೆಡ್ ನಾಗರಿಕರಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿದ್ದು, ಇವರುಗಳ ವಿರುದ್ಧ  ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. 
    ಫಿಲ್ಟರ್‌ಶೆಡ್ ಶ್ರೀ ಅಂತರಘಟ್ಟಮ್ಮ ದೇವಸ್ಥಾನದ ಮುಂಭಾಗ ೨೫*೭೫ ಆಳತೆ ಜಾಗವನ್ನು ಇಲ್ಲಿನ ನಾಗರಿಕರು ಜಾತ್ರೆ ಹಬ್ಬ ಹರಿದಿನಗಳಲ್ಲಿ ಉಪಯೋಗಿಸಿಕೊಳ್ಳಲು ಮೀಸಲಿಟ್ಟಿದ್ದು, ಈ ಜಾಗದಲ್ಲಿ ಫಿಲ್ಟರ್‌ಶೆಡ್‌ಗೆ ಸಂಬಂಧವೇ ಇಲ್ಲದ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕೆಲವು ನಗರಸಭೆ ಅಧಿಕಾರಿಗಳ ಸಹಕಾರದಿಂದ ಲೋಕಸಭೆ, ವಿಧಾನಸಭೆ ಹಾಗು ವಿಧಾನ ಪರಿಷತ್ ಸದಸ್ಯರ, ಚುನಾಯಿತ ಪ್ರತಿನಿಧಿಗಳ ಅನುದಾನದ ಜೊತೆಗೆ ನಾರ್ವಜನಿಕರಿಂದಲೂ ಸಹ ಲಕ್ಷಾಂತರ ರು. ಹಣ ವಡೆದುಕೊಂಡು ದುರುದ್ದೇಶದಿಂದ ಆಕ್ರಮವಾಗಿ ಸಮುದಾಯ ಭವನದ ರೀತಿ ಕಟ್ಟಡವನ್ನು ನಿರ್ಮಾಣ ಮಾಡಿ ಖಾಸಗಿ ಟ್ರಸ್ಟ್ ರಚನೆ ಮಾಡಿಕೊಂಡಿದ್ದಾರೆ. ಸಮುದಾಯ ಭವನದ ಮುಖಾಂತರ ಬರುವ ಆದಾಯದ ಮೂಲಗಳಾದ ಸೀರಿಯಲ್ ಸೆಟ್ ದೀಪಾಲಂಕಾರ, ಅಡುಗೆ ಪಾತ್ರೆ ಸಾಮಾನುಗಳ ಬಾಡಿಗೆ, ಹೂವಿನ ಅಲಂಕಾರ, ಮೈಕ್ ಇತ್ಯಾದಿ ಆದಾಯದ ಮೂಲಗಳನ್ನು ಖಾಸಗಿ ಟ್ರಸ್ಟ್ ಮಾಡಿರುವವರೇ ವಹಿಸಿಕೊಂಡು ಹಣ ಮಾಡುವ ದಂಧೆಯನ್ನು ಮಾಡಿಕೊಂಡಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದರು ಆರೋಪಿಸಿದರು. 
    ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಈ ಆರೋಪ ಸತ್ಯವಾಗಿದ್ದು, ಈ ಹಿನ್ನಲೆಯಲ್ಲಿ ೨೦೨೦ ರಿಂದ ನಿರಂತರವಾಗಿ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿರುವವರ ವಿರುದ್ಧ ಟ್ರಸ್ಟ್‌ನ್ನು ವಜಾ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ತಹಸೀಲ್ದಾರ್, ನಗರಸಭೆ ಪೌರಾಯುಕ್ತರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಸಮುದಾಯ ಭವನವನ್ನು ನಗರಸಭೆ ವ್ಯಾಪ್ತಿಗೊಳವಡಿಸಿಕೊಂಡು ಫಿಲ್ಟರ್‌ಶೆಡ್ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಅಕ್ರಮದಲ್ಲಿ ಭಾಗಿಯಾಗಿರುವ ನಗರಸಭೆ ಅಧಿಕಾರಿಗಳು ಹಾಗೂ ಅಕ್ರಮವಾಗಿ ಟ್ರಸ್ಟ್ ರಚಿಸಿಕೊಂಡು ಸಮುದಾಯ ಭವನವನ್ನು ನಿರ್ಮಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಂಡು ಸಮುದಾಯ ಭವನದ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ನಗರಸಭೆ ಅಧಿಕಾರಿಗಳು ಸಮುದಾಯ ಭವನಕ್ಕೆ ಬೀಗ ಹಾಕುವವರೆಗೂ ಶಾಂತಿಯುತವಾಗಿ ಅನಿರ್ಧಿಷ್ಟಾವಧಿ ಧರಣ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು. 
    ಸ್ಥಳೀಯ ಪ್ರಮುಖರಾದ ಬಿ.ಕೆ ಶಶಿಕುಮಾರ್ ಗೌಡ, ಸಿದ್ದಮ್ಮ, ಇಂದ್ರಮ್ಮ, ಜಯಮ್ಮ, ಮಹಾಲಕ್ಷ್ಮಿ, ಮಂಜಮ್ಮ, ಲಕ್ಷ್ಮಮ್ಮ, ಭಾಗ್ಯಮ್ಮ, ಸಣ್ಣಮ್ಮ, ಶಾಂತಮ್ಮ, ಭರತ್ ಕುಮಾರ್, ಥಾಮಸ್, ಎಂ. ಶ್ರೀಧರ್, ಕುಮಾರ್, ಉಮೇಶ್, ಗೋಪಾಲ್ ರಾವ್, ಮಂಜು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Thursday, October 3, 2024

ಕ್ಷೇತ್ರದ ಅಭಿವೃದ್ಧಿಗೆ ತಾಯಿ ಚಾಮುಂಡೇಶ್ವರಿ ಇನ್ನೂ ಹೆಚ್ಚಿನ ಬಲ ನೀಡಲಿ : ಬಿ.ಕೆ ಸಂಗಮೇಶ್ವರ್


ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. 
    ಭದ್ರಾವತಿ : ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಬಲ ನೀಡುವ ಮೂಲಕ ತಾಯಿ ಚಾಮುಂಡೇಶ್ವರಿ ದೇವಿ ಪ್ರತಿಯೊಬ್ಬರಿಗೂ ಆಯುರಾರೋಗ್ಯ ಕರುಣಿಸಲಿ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಾರ್ಥಿಸಿದರು. 
    ಅವರು ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಕೋಟ್ಯಾಂತರ ರು. ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಮಂಜುರಾತಿಯಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರು ಜೋಡಿಸಬೇಕು ಎಂದರು. 
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಮಾತನಾಡಿ, ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಅವರದ್ದಾಗಿದೆ. ಅವರಿಗೆ ನಾವೆಲ್ಲರೂ ಇನ್ನೂ ಹೆಚ್ಚಿನ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದ್ದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮತ್ತು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಎಲ್ಲಾ ಸದಸ್ಯರು, ಆಶ್ರಯ ಸಮಿತಿ ಮತ್ತು ಸೂಡಾ ಸದಸ್ಯರು, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸ್ವಾಗತಿಸಿದರು. ಬಸವರಾಜ ನಾಯ್ಕ ಪ್ರಾರ್ಥಿಸಿ, ಮಹಮ್ಮದ್ ಗೌಸ್ ಕಾರ್ಯಕ್ರಮ ನಿರೂಪಿಸಿ, ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ ವಂದಿಸಿದರು. 
    ಇದಕ್ಕೂ ಮೊದಲು ನಗರದ ಮಾಧವಚಾರ್ ವೃತ್ತದಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ನಾದಸ್ವರದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ಕರೆ ತರಲಾಯಿತು. ನಿಖಿತಾ ಕೃಷ್ಣ ಬಾಲಕಿಯ ಭರತ್ಯ ನಾಟ್ಯ ಗಮನ ಸೆಳೆಯಿತು. ಬಾಲಕಿಯನ್ನು ಸನ್ಮಾನಿಸಿ ಗೌರವಿಸಲಾಯಿತು. 
 

ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ನಿಖಿತಾ ಕೃಷ್ಣ ಬಾಲಕಿಯ ಭರತ್ಯ ನಾಟ್ಯ ಗಮನ ಸೆಳೆಯಿತು. 

Wednesday, October 2, 2024

ಉಕ್ಕಿನ ನಗರದಲ್ಲಿ ನಾಡಹಬ್ಬ ದಸರಾ ಉದ್ಘಾಟಿಸಲಿರುವ ಸಮಾಜವಾದಿ ಕಾಗೋಡು ತಿಮ್ಮಪ್ಪ

ಭದ್ರಾವತಿ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ನೇತೃತ್ವದಲ್ಲಿ ನಾಡಹಬ್ಬ ದಸರಾ ಆಚರಣೆ ಸಮಿತಿ ವತಿಯಿಂದ ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪನವರ ನಿವಾಸಕ್ಕೆ ತೆರಳಿ ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಲಾಯಿತು. 
    ಭದ್ರಾವತಿ :  ನಗರಸಭೆ ವತಿಯಿಂದ ನಾಡಹಬ್ಬ ದಸರಾ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಬಾರಿ ವಿಶೇಷ ಎಂದರೆ ದಸರಾ ಉದ್ಘಾಟನೆಗೆ ವಿಧಾನಸಭೆ ಮಾಜಿ ಸಭಾಧ್ಯಕ್ಷ, ಹಿರಿಯ ರಾಜಕೀಯ ಮುತ್ಸದ್ದಿ, ಸಮಾಜವಾದಿ ಕಾಗೋಡು ತಿಮ್ಮಪ್ಪನವರನ್ನು ಆಹ್ವಾನಿಸಿರುವುದು. 
    ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂಲತಃ ತಾಲೂಕಿನ ಗಣ್ಯರು, ಹಿರಿಯರು, ಮಾರ್ಗದರ್ಶಕರನ್ನು ಗುರುತಿಸಿ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿತ್ತು. ಆದರೆ ಈ ಬಾರಿ ಸಾಗರ ತಾಲೂಕಿನ ಕಾಗೋಡು ತಿಮ್ಮಪ್ಪನವರನ್ನು ಆಹ್ವಾನಿಸಲಾಗಿದೆ. ಕಾಗೋಡು ತಿಮ್ಮಪ್ಪನವರು ಕೇವಲ ಸಾಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ನಾಡಿನ ಎಲ್ಲರಿಗೂ ಬೇಕಾದ ವ್ಯಕ್ತಿ. ತಿಮ್ಮಪ್ಪನವರು ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ಮಾತ್ರ ಕೊಡುಗೆಗಳನ್ನು ನೀಡಿಲ್ಲ. ಸಮಾಜವಾದಿ ಸಿದ್ದಾಂತ ಹಾಗು ಹೋರಾಟಗಳ ಮೂಲಕ ಇಡೀ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಇವರನ್ನು ರಾಜ್ಯ ಸರ್ಕಾರ ಗುರುತಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. 
    ತಿಮ್ಮಪ್ಪನವರನ್ನು ಇಲ್ಲಿನ ನಗರಸಭೆ ಆಡಳಿತ ಈ ಬಾರಿ ದಸರಾ ಆಚರಣೆಗೆ ಆಹ್ವಾನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಅದ್ದೂರಿ ದಸರಾ ಆಚರಣೆಗೆ ತಿಮ್ಮಪ್ಪನವರು ಚಾಲನೆ ನೀಡುತ್ತಿರುವುದು ಮತ್ತಷ್ಟು ವೈಭವ ಪಡೆದುಕೊಳ್ಳಲಿದೆ ಎಂಬ ಆಶಯ ಇಲ್ಲಿನ ನಿವಾಸಿಗಳು ಹೊಂದಿದ್ದಾರೆ. 


    ತಿಮ್ಮಪ್ಪನವರಿಗೆ ಆಹ್ವಾನ: 
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ನೇತೃತ್ವದಲ್ಲಿ ನಾಡಹಬ್ಬ ದಸರಾ ಆಚರಣೆ ಸಮಿತಿ ವತಿಯಿಂದ ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪನವರ ನಿವಾಸಕ್ಕೆ ತೆರಳಿ ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಲಾಯಿತು. 
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಾಡಹಬ್ಬ ದಸರಾ ಆಚರಣೆ ಸ್ವಾಗತ ಸಮಿತಿ ಅಧ್ಯಕ್ಷೆ ಲತಾ ಚಂದ್ರಶೇಖರ್, ಸದಸ್ಯರಾದ ಬಷೀರ್ ಅಹಮದ್, ಬಿ. ಶಶಿಕಲಾ,  ಪರಿಸರ ಅಭಿಯಂತರ ಪ್ರಭಾಕರ್, ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಐಎಸ್‌ಎಲ್, ಬಿಜೆಪಿ ಮಂಡಲ ಸೇರಿದಂತೆ ವಿವಿಧೆಡೆ ರಾಷ್ಟ್ರಪಿತ ಗಾಂಧಿ ಜಯಂತಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ನ್ಯೂಟೌನ್ ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಜಯಂತಿ ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ ಮತ್ತು ಕಾರ್ಖಾನೆಯ ಉದ್ಯೋಗಿಗಳು ಹಾಗು ಕುಟುಂಬ ವರ್ಗದವರಿಗೆ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. 
    ಭದ್ರಾವತಿ: ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಬಿಜೆಪಿ ತಾಲೂಕು ಮಂಡಲ, ಲಯನ್ಸ್  ಕ್ಲಬ್ ಶುಗರ್ ಟೌನ್, ಬಿಪಿಎಲ್ ಸಂಘ ಸೇರಿದಂತೆ ವಿವಿಧೆಡೆ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು. 
    ನ್ಯೂಟೌನ್ ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪನಮನ, ನಂತರ ವಿಶೇಷವಾಗಿ ಈ ಬಾರಿ ಮಕ್ಕಳಿಂದ ಧರ್ಮ ಗ್ರಂಥಗಳಾದ ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಸಂದೇಶ ವಾಚನ ನಡೆಯಿತು. ಗಾಂಧಿ ಜಯಂತಿ ಅಂಗವಾಗಿ ತಾಲೂಕಿನ ಶಾಲಾ ಮಕ್ಕಳಿಗೆ ಮತ್ತು ಕಾರ್ಖಾನೆಯ ಉದ್ಯೋಗಿಗಳು ಹಾಗು ಕುಟುಂಬ ವರ್ಗದವರಿಗೆ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. 
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ರವಿಚಂದ್ರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ  ಎಲ್. ಪ್ರವೀಣ್‌ಕುಮಾರ್, ಮೋಹನ್‌ರಾಜ್ ಶೆಟ್ಟಿ, ಯೋಗೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕ ಸಂಘ ಹಾಗು ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಕುಟುಂಬ ವರ್ಗದವರು ಪಾಲ್ಗೊಂಡಿದ್ದರು. 


ಭದ್ರಾವತಿಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವದಲ್ಲಿ ಗಾಂಧಿಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಹಾಗೂ ಸೇವಾ ಪಾಕ್ಷಿಕ ಅಂಗವಾಗಿ ನಗರದ ತರೀಕೆರೆ ರಸ್ತೆಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ  ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. 
    ಬಿಜೆಪಿ ಮಂಡಲದಿಂದ ಲಾಲ್ ಬಹದ್ದೂರ್ ಶಾಸ್ತ್ರಿ-ಗಾಂಧಿ ಜಯಂತಿ : 
    ಮಂಡಲದ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವದಲ್ಲಿ ಗಾಂಧಿಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಹಾಗೂ ಸೇವಾ ಪಾಕ್ಷಿಕ ಅಂಗವಾಗಿ ನಗರದ ತರೀಕೆರೆ ರಸ್ತೆಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ  ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಖಾದಿ ಗ್ರಾಮೋದ್ಯೋಗ ಭವನದಲ್ಲಿ ಖಾದಿ ಖರೀದಿಸಲಾಯಿತು.
    ಪ್ರಧಾನ ಕಾರ್ಯದರ್ಶಿಗಳಾ ಚನ್ನೇಶ್ ಮತ್ತು ಮೊಸರಳ್ಳಿ ಅಣ್ಣಪ್ಪ, ಮುಖಂಡರಾದ ಮಂಗೋಟೆ ರುದ್ರೇಶ್, ಎಚ್. ತೀರ್ಥಯ್ಯ, ರಾಜಶೇಖರ್ ಉಪ್ಪಾರ, ಧನುಷ್ ಬೋಸ್ಲೆ, ಜಿ. ಆನಂದ್‌ಕುಮಾರ್, ಸರಸ್ವತಿ, ರವಿಕುಮಾರ್, ರಘುರಾವ್, ನಿರಂಜನ್ ಗೌಡ, ಕಾ.ರಾ ನಾಗರಾಜ್,  ಸುಲೋಚನಾ ಪ್ರಕಾಶ್, ಮಂಜುಳಾ, ಡಾ. ಜಿ.ಎಂ ನಟರಾಜ್, ಬಸವರಾಜ್ ಆಚಾರ್ ಸೇರಿದಂತೆ ಮಂಡಲದ ಪದಾಧಿಕಾರಿಗಳು, ಮೋರ್ಚಾ, ಮಹಾಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. 


ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೫ನೇ ಜನ್ಮದಿನ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿಯವರ ೧೨೦ನೇ ಜನ್ಮದಿನ ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಶುಗರ್ ಟೌನ್ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಅಂತರಾಷ್ಟ್ರೀಯ ಹಿರಿಯ ನಾಗರೀಕ ದಿನಾಚರಣೆ ಅಂಗವಾಗಿ ಕ್ಲಬ್ ಮಹಾಪೋಷಕರಾದ ಡಾ. ಟಿ. ನರೇಂದ್ರ ಭಟ್, ಕೆ. ಅನಂತ ಕೃಷ್ಣನಾಯಕ್ ಮತ್ತು ಮದಿಯಲಗನ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಲಯನ್ಸ್ ಕ್ಲಬ್ ಶುಗರ್ ಟೌನ್‌ನಲ್ಲಿ ಗಾಂಧಿ ಜಯಂತಿ :  
    ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೫ನೇ ಜನ್ಮದಿನ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿಯವರ ೧೨೦ನೇ ಜನ್ಮದಿನ ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಶುಗರ್ ಟೌನ್ ಸಮುದಾಯ ಭವನದಲ್ಲಿ ಆಚರಿಸಲಾಯಿತು.
    ಕ್ಲಬ್ ಆವರಣದಲ್ಲಿರುವ ಕೋಟಾ ಶಿವರಾಮ ಕಾರಂತ ವನದಲ್ಲಿ ಶ್ರಮದಾನ ನಡೆಸಲಾಯಿತು. ಅಂತರಾಷ್ಟ್ರೀಯ ಹಿರಿಯ ನಾಗರೀಕ ದಿನಾಚರಣೆ ಅಂಗವಾಗಿ ಕ್ಲಬ್ ಮಹಾಪೋಷಕರಾದ ಡಾ. ಟಿ. ನರೇಂದ್ರ ಭಟ್, ಕೆ. ಅನಂತ ಕೃಷ್ಣನಾಯಕ್ ಮತ್ತು ಮದಿಯಲಗನ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕ್ಲಬ್ ಅಧ್ಯಕ್ಷ ಆರ್. ಉಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ತಮ್ಮೇಗೌಡ, ಎಂ.ಸಿ ಯೋಗೀಶ್, ಡಾ. ಸಿ.ಆರ್ ಗುರುರಾಜ್, ಲಿಂಗೋಜೀರಾವ್, ಮಂಜುನಾಥ್, ಕೃಷ್ಣ ,ನಾಗರಾಜ್ ಸೋಲಾರ್, ಮಧುಸೂದನ್ ಮತ್ತು ವಿಜಯ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು. 
    ಬಿಪಿಎಲ್ ಸಂಘದಿಂದ ಗಾಂಧಿ ಜಯಂತಿ :
    ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು. 
    ಸಂಘದ ಅಧ್ಯಕ್ಷ ಬಿ. ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಳಳು, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗು ಸ್ಥಳೀಯರು ಪಾಲ್ಗೊಂಡಿದ್ದರು.