ಭದ್ರಾವತಿ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ನೇತೃತ್ವದಲ್ಲಿ ನಾಡಹಬ್ಬ ದಸರಾ ಆಚರಣೆ ಸಮಿತಿ ವತಿಯಿಂದ ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪನವರ ನಿವಾಸಕ್ಕೆ ತೆರಳಿ ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಲಾಯಿತು.
ಭದ್ರಾವತಿ : ನಗರಸಭೆ ವತಿಯಿಂದ ನಾಡಹಬ್ಬ ದಸರಾ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಬಾರಿ ವಿಶೇಷ ಎಂದರೆ ದಸರಾ ಉದ್ಘಾಟನೆಗೆ ವಿಧಾನಸಭೆ ಮಾಜಿ ಸಭಾಧ್ಯಕ್ಷ, ಹಿರಿಯ ರಾಜಕೀಯ ಮುತ್ಸದ್ದಿ, ಸಮಾಜವಾದಿ ಕಾಗೋಡು ತಿಮ್ಮಪ್ಪನವರನ್ನು ಆಹ್ವಾನಿಸಿರುವುದು.
ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂಲತಃ ತಾಲೂಕಿನ ಗಣ್ಯರು, ಹಿರಿಯರು, ಮಾರ್ಗದರ್ಶಕರನ್ನು ಗುರುತಿಸಿ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿತ್ತು. ಆದರೆ ಈ ಬಾರಿ ಸಾಗರ ತಾಲೂಕಿನ ಕಾಗೋಡು ತಿಮ್ಮಪ್ಪನವರನ್ನು ಆಹ್ವಾನಿಸಲಾಗಿದೆ. ಕಾಗೋಡು ತಿಮ್ಮಪ್ಪನವರು ಕೇವಲ ಸಾಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ನಾಡಿನ ಎಲ್ಲರಿಗೂ ಬೇಕಾದ ವ್ಯಕ್ತಿ. ತಿಮ್ಮಪ್ಪನವರು ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ಮಾತ್ರ ಕೊಡುಗೆಗಳನ್ನು ನೀಡಿಲ್ಲ. ಸಮಾಜವಾದಿ ಸಿದ್ದಾಂತ ಹಾಗು ಹೋರಾಟಗಳ ಮೂಲಕ ಇಡೀ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಇವರನ್ನು ರಾಜ್ಯ ಸರ್ಕಾರ ಗುರುತಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ತಿಮ್ಮಪ್ಪನವರನ್ನು ಇಲ್ಲಿನ ನಗರಸಭೆ ಆಡಳಿತ ಈ ಬಾರಿ ದಸರಾ ಆಚರಣೆಗೆ ಆಹ್ವಾನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಅದ್ದೂರಿ ದಸರಾ ಆಚರಣೆಗೆ ತಿಮ್ಮಪ್ಪನವರು ಚಾಲನೆ ನೀಡುತ್ತಿರುವುದು ಮತ್ತಷ್ಟು ವೈಭವ ಪಡೆದುಕೊಳ್ಳಲಿದೆ ಎಂಬ ಆಶಯ ಇಲ್ಲಿನ ನಿವಾಸಿಗಳು ಹೊಂದಿದ್ದಾರೆ.
ತಿಮ್ಮಪ್ಪನವರಿಗೆ ಆಹ್ವಾನ:
ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ನೇತೃತ್ವದಲ್ಲಿ ನಾಡಹಬ್ಬ ದಸರಾ ಆಚರಣೆ ಸಮಿತಿ ವತಿಯಿಂದ ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪನವರ ನಿವಾಸಕ್ಕೆ ತೆರಳಿ ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಲಾಯಿತು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಾಡಹಬ್ಬ ದಸರಾ ಆಚರಣೆ ಸ್ವಾಗತ ಸಮಿತಿ ಅಧ್ಯಕ್ಷೆ ಲತಾ ಚಂದ್ರಶೇಖರ್, ಸದಸ್ಯರಾದ ಬಷೀರ್ ಅಹಮದ್, ಬಿ. ಶಶಿಕಲಾ, ಪರಿಸರ ಅಭಿಯಂತರ ಪ್ರಭಾಕರ್, ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment