Monday, October 14, 2024

೨ನೇ ಹಂತದ ಕಾಮಗಾರಿಗೆ ಸಂಸದರ ನಿಧಿಯಿಂದ ೩೦ ಲಕ್ಷ ರು. ಅನುದಾನ : ಬಿವೈಆರ್

ಭದ್ರಾವತಿ ಹಳೇನಗರದ ವೀರಶೈವ ಸೇವಾ ಸಮಿತಿವತಿಯಿಂದ ಶ್ರೀ ಬನಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದುರ್ಗಾಸಪ್ತಶತಿ ಪಾರಾಯಣ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡಿದ್ದರು. 
    ಭದ್ರಾವತಿ : ಹಳೆನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದ ಶ್ರೀಮಾತಾ ಬನಶಂಕರಿ ದೇವಿ ಸಭಾಂಗಣದ ೨ನೇ ಹಂತದ ಕಾಮಗಾರಿಗೆ ಮುಂದಿನ ದಿನಗಳಲ್ಲಿ ೫೦ ಲಕ್ಷ ರು. ಸಂಸದರ ಅನುದಾನದಿಂದ ನೀಡಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು. 
    ಅವರು ಹಳೇ ನಗರದ ವೀರಶೈವ ಸೇವಾ ಸಮಿತಿವತಿಯಿಂದ  ಶ್ರೀ ಬನಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದುರ್ಗಾಸಪ್ತಶತಿ ಪಾರಾಯಣ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀ ವೀರಭದ್ರೇಶ್ವರಿ ಸ್ವಾಮಿ ಸಮುದಾಯ ಭವನ ಸುಸಜ್ಜಿತವಾಗಿ ನಿರ್ಮಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವ ನಿಟ್ಟಿನಲ್ಲಿ ಸಹಕಾರ ನೀಡುತ್ತೇನೆ ಎಂದರು. 
       ಸಮಿತಿ ಪ್ರಮುಖರಾದ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಎಂ. ವಾಗೀಶ್ ಕುಮಾರ್ ಕೋಠಿ, ಮಲ್ಲಿಕಾರ್ಜುನ್, ನಂಜಪ್ಪ, ಷಣ್ಮುಖಪ್ಪ, ಉದಯ್ ಕುಮಾರ್, ನಾಗಾನಂದ, ಶೋಭಾ ಮತ್ತು ನಾಗರತ್ನ ಹಾಗು ಮುಖಂಡರಾದ ಎಚ್. ತೀರ್ಥಯ್ಯ, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅ.೧೫ರಂದು ನಗರ-ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ

    ಭದ್ರಾವತಿ : ಮೆಸ್ಕಾಂ ನಗರ ಮತ್ತು ಗ್ರಾಮೀಣ ಉಪವಿಭಾಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದ ರಿಂದ ಅ.೧೫ರ ಮಂಗಳವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ವಕಾಗದ ನಗರದ ೧ನೇ ವಾರ್ಡ್ ನಿಂದ ೧೦ನೇ ವಾರ್ಡ್‌ವರೆಗೆ, ಎಂ.ಪಿ.ಎಂ ವಸತಿ, ಎಂ.ಪಿ.ಎಂ ಲೇಔಟ್, ಆನೆಕೊಪ್ಪ, ಜೆಪಿಎಸ್ ಕಾಲೋನಿ, ಉಜ್ಜನಿಪುರ, ದೊಡ್ಡಗೊಪ್ಪೇನಹಳ್ಳಿ, ಬಾರಂದೂರು, ಮೊಸರಹಳ್ಳಿ, ಕಾರೇಹಳ್ಳಿ, ಹಡ್ಲಘಟ್ಟ, ಶಿವಪುರ, ಕೆಂಚೇನಹಳ್ಳಿ, ಮಾವಿನಕೆರೆ, ಮಾವಿನಕೆರೆ ಕಾಲೋನಿ, ಅಂತರಗಂಗೆ, ಭೋವಿ ಕಾಲೋನಿ, ಗಂಗೂರು, ದೊಡ್ಡೇರಿ, ಉಕ್ಕುಂದ, ಕೆಂಚಮ್ಮನಹಳ್ಳಿ, ಜನ್ನಾಪುರ, ಹುತ್ತಾ ಕಾಲೋನಿ, ಭಂಡಾರಹಳ್ಳಿ, ಕಡದಕಟ್ಟೆ, ನಾಗಮ್ಮ ಬಡಾವಣೆ, ಸಂಜಯ ಕಾಲೋನಿ, ವೇಲೂರು ಶೆಡ್, ಜಿಂಕ್‌ಲೈನ್, ಅಪ್ಪರ್ ಹುತ್ತಾ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ಹಾಗು ೧೦.೩೦ ರಿಂದ ೨.೩೦ರವರೆಗೆ ಸೀಗೆಬಾಗಿ, ಭದ್ರಾ ಕಾಲೋನಿ, ಸೈಯ್ಯದ್ ಕಾಲೋನಿ, ಶ್ರೀರಾಮ ನಗರ, ವೀರಾಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ  ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ. 

ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ


ಭದ್ರಾವತಿ:  ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಭವಾನಿ ಸಂಕೀರ್ಣದಲ್ಲಿ ಸೋಮವಾರ ನೂತನ ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
. ಬೆಂಗಳೂರು ಗವಿಪುರಂ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಜಾಮೀನುಸಾಲ, ಗೋಲ್ಡ್ ಲೋನ್, ಹಿರಿಯ ನಾಗರಿಕರ ಹಾಗೂ ಮಹಿಳೆಯರ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿದರ ನೀಡುವುದು, ಆರ್.ಟಿ.ಜಿ.ಎಸ್, ನೆಫ್ಟ್ ನಂತಹ ಎಲ್ಲಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಆರ್. ಪಾಗೋಜಿ, ಸೊಸೈಟಿ ಅಧ್ಯಕ್ಷ ಲೋಕೇಶ್ವರರಾವ್ ದೊಂಬಾಳೆ, ಸೊಸೈಟಿ ಉಪಾಧ್ಯಕ್ಷ ಆರ್. ನಾಗರಾಜ್‌ರಾವ್ ಸಿಂಘಾಡೆ, ನಿರ್ದೇಶಕರಾದ ರಾಮಾನಾಥ ವಿ ಬರ್ಗೆ, ಕೃಷ್ಣೋಜಿರಾವ್ ಗಾಯಕ್‌ವಾಡ್, ಗೀತಾಬಾಯಿ, ಭಾರತಿಗಾಯಕ್‌ವಾಡ್, ಬಸಂತರಾವ್ ದಾಳೆ, ಸುರೇಶ್ ಎಸ್. ಬೋಸ್ಲೆ, ರಂಗೋಜಿರಾವ್ ಬಂಡಗಾರ್, ಬಿ. ಹಾಲೋಜಿರಾವ್, ಟಿ.ಆರ್ ಭೀಮರಾವ್, ಎಸ್. ಶಾಂತಕುಮಾರ್ ಗಾಯಕ್‌ವಾಡ್, ಪರಶುರಾಮ್‌ರಾವ್ ಜಾಧವ್, ಎಚ್.ಡಿ ಮಹೇಶ್‌ರಾವ್, ಮಂಜುನಾಥರಾವ್ ಮೋರೆ ಮತ್ತು ಜಿ.ವೈ ರಂಗನಾಥರಾವ್ ಹಜಾರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಭದ್ರಾವತಿ ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಭವಾನಿ ಸಂಕೀರ್ಣದಲ್ಲಿ ಸೋಮವಾರ ನೂತನ ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 

Sunday, October 13, 2024

ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಕುಸಿದು ಬಿದ್ದ ಭದ್ರಾ ನಾಲೆಗೆ ನಿರ್ಮಿಸಿದ್ದ ಸೇತುವೆ

ಭದ್ರಾವತಿ ತಾಲೂಕಿನಲ್ಲಿ ಕಳೆದ ಎರಡು ದಿನದ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಭದ್ರಾ ನಾಲೆಗೆ ನಿರ್ಮಿಸಲಾಗಿದ್ದ ಸೇತುವೆ ಶಿಥಿಲಗೊಂಡು ಕುಸಿದು ಬಿದ್ದಿರುವ ಘಟನೆ ನಡೆದಿದೆ. 
    ಭದ್ರಾವತಿ:  ತಾಲೂಕಿನಲ್ಲಿ ಕಳೆದ ಎರಡು ದಿನದ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಭದ್ರಾ ನಾಲೆಗೆ ನಿರ್ಮಿಸಲಾಗಿದ್ದ ಸೇತುವೆ ಶಿಥಿಲಗೊಂಡು ಕುಸಿದು ಬಿದ್ದಿರುವ ಘಟನೆ ನಡೆದಿದೆ. 
    ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಭದ್ರಾ ನಾಲೆಗೆ ನಿರ್ಮಿಸಿದ್ದ ಸೇತುವೆ ಕುಸಿದು ಬಿದ್ದಿದೆ. ಹಂಚಿನ ಸಿದ್ದಾಪುರ ಗ್ರಾಮದಿಂದ ಸಿದ್ದೇಶ್ವರ ದೇವಸ್ಥಾನ ಹಾಗು ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಸೇತುವೆ ಕುಸಿದು ಬಿದ್ದಿರುವ ಹಿನ್ನಲೆಯಲ್ಲಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ತಕ್ಷಣ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. 
    ಧಾರಾಕಾರವಾಗಿ ಸುರಿದ ಮಳೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿರುವ ಘಟನೆಗಳು ಸಹ ನಡೆದಿದ್ದು, ನಾಡಹಬ್ಬ ಹಬ್ಬ ದಸರಾ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮದ ಸಂಭ್ರಮದಲ್ಲಿ ತೊಡಗಿದ್ದ ಗ್ರಾಮಸ್ಥರ ಸಂತಸ ಕಸಿದುಕೊಂಡಿದೆ. 

ಶ್ರೀ ಕರುಮಾರಿಯಮ್ಮ ದೇವಸ್ಥಾನದಲ್ಲಿ ನಾಡಹಬ್ಬ ದಸರಾ ಆಚರಣೆ ಸಂಪನ್ನ

    ಭದ್ರಾವತಿ : ನ್ಯೂಟೌನ್ ಶ್ರೀ ಕರುಮಾರಿಯಮ್ಮ ದೇವಸ್ಥಾನದಲ್ಲಿ ನಾಡಹಬ್ಬ ದಸರಾ ಉತ್ಸವ ಕಡೆ ದಿನ ಅಮ್ಮನವರಿಗೆ ಚಾಮುಂಡೇರಿಶ್ವರಿ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ಉತ್ಸವ ಮೆರವಣಿಗೆ ನಡೆಸಿ ಸಂಪನ್ನಗೊಳಿಸಲಾಯಿತು. 
    ದಸರಾ ಆಚರಣೆ ೯ ದಿನಗಳ ಕಾಲ ಅಮ್ಮನವರಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. 
    ಶನಿವಾರ ಅಲಂಕೃತಗೊಂಡ ಅಮ್ಮನವರ ಉತ್ಸವ ಮೂರ್ತಿ ಬನ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸಿತು. ಕೊನೆಯಲ್ಲಿ ಉತ್ಸವ ಮೂರ್ತಿಯನ್ನು ಬರಮಾಡಿಕೊಂಡು ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಯೋಗದೊಂದಿಗೆ ಸಂಪನ್ನಗೊಳಿಸಲಾಯಿತು. 
    ದೇವಸ್ಥಾನದ ಪ್ರಧಾನ ಅರ್ಚಕ ಕಾಶಿನಾಥ್ ಹಾಗು ವಿಜಯಕುಮಾರ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ ಹಾಗು ಪದಾಧಿಕಾರಿಗಳು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. 


ಭದ್ರಾವತಿ ನ್ಯೂಟೌನ್ ಶ್ರೀ ಕರುಮಾರಿಯಮ್ಮ ದೇವಸ್ಥಾನದಲ್ಲಿ ನಾಡಹಬ್ಬ ದಸರಾ ಉತ್ಸವ ಕಡೆ ದಿನ ಅಮ್ಮನವರಿಗೆ ಚಾಮುಂಡೇರಿಶ್ವರಿ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ಉತ್ಸವ ಮೆರವಣಿಗೆ ನಡೆಸಿ ಸಂಪನ್ನಗೊಳಿಸಲಾಯಿತು. 

ಕಾರು ಅಪಘಾತ : ಇಆರ್‌ವಿ ಅಧಿಕಾರಿಗಳಿಂದ ಗಾಯಾಳುಗಳ ರಕ್ಷಣೆ

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದ ಹೊಸ ಸೇತುವೆ ಮೇಲೆ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ತಕ್ಷಣ ಗಾಯಾಳುಗಳನ್ನು ಸಮೀಪದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
 ಭದ್ರಾವತಿ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದ ಹೊಸ ಸೇತುವೆ ಮೇಲೆ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ತಕ್ಷಣ ಗಾಯಾಳುಗಳನ್ನು ಸಮೀಪದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
    ಕಾರು ಅಪಘಾತಗೊಂಡಿರುವ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಇಆರ್‌ವಿ ಅಧಿಕಾರಿಗಳು ಸಾರ್ವಜನಿಕರ ಸಹಾಯದೊಂದಿಗೆ ಗಾಯಾಳುಗಳನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ಶ್ರಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಆರ್‌ವಿ ಅಧಿಕಾರಿಗಳನ್ನು ಅಭಿನಂದಿಸಿದೆ. 
    ಹೆಚ್ಚುತ್ತಿರುವ ಅಪಘಾತ : 
    ಹೊಸಸೇತುವೆಯ ಎರಡು ಬದಿ ತಡೆ ಗೋಡೆ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಪ್ರವಾಹ ಉಂಟಾಗಿ ತಡೆಗೋಡೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇದುವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಅಲ್ಲದೆ ಸೇತುವೆ ವಿದ್ಯುತ್ ದೀಪಗಳು ಇಲ್ಲದೆ ಇರುವುದರಿಂದ ವಾಹನಗಳು ಹಾಗು ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. 
ಇತ್ತೀಚೆಗೆ ಸೇತುವೆ ಮೇಲೆ ಅಪಘಾತಗಳು ಹೆಚ್ಚಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ. 

ಅ.೧೫ರವರೆಗೆ ಬರಿಗಣ್ಣಿಗೆ ಧೂಮಕೇತು ನೋಡಿ ಆನಂದಿಸೋಣ : ಹರೋನಹಳ್ಳಿಸ್ವಾಮಿ

    ಭದ್ರಾವತಿ: ಶತಮಾನದ ಧೂಮಕೇತುವೆಂದು ಕರೆಸಿಕೊಳ್ಳುತ್ತಿರುವ ತ್ಸುಸಿತ್ಸಾನ್ ಅಟ್ಲಾಸ್ ಸಿ/೨೦೨೩/ಎ ಧೂಮಕೇತು ಬರಿಗಣ್ಣಿಗೆ ಕಾಣುತ್ತಿರುವುದು ಆಕಾಶ ವೀಕ್ಷಕರಿಗೆ ಸಂಭ್ರಮದ ಸುದ್ದಿಯಾಗಿದೆ. ಅ.೧೫ರವರೆಗೆ ಪಶ್ಚಿಮ ದಿಕ್ಕಿನ ಸೂರ್ಯಸ್ತದ ನಂತರ ಕನ್ಯಾ ನಕ್ಷತ್ರಪುಂಜದ ನೇರದಲ್ಲಿ ಸುಮಾರು ೧೦ ಡಿಗ್ರಿ ಕೋನದಲ್ಲಿ ಕಾಣಿಸುತ್ತಿದೆ. ೮೦೦೦೦ ವರ್ಷಗಳಿಗೊಮ್ಮೆ ಸೂರ್ಯನನ್ನು ಸುತ್ತು ಹಾಕುತ್ತಿರುವ ಈ ಧೂಮಕೇತುವನ್ನು ಮತ್ತು ಅದರ ಬಾಲವನ್ನು ಎಲ್ಲರೂ ನೋಡಬಹುದಾಗಿದೆ. ಜೀವಮಾನದಲ್ಲೊಮ್ಮೆ ಮಾತ್ರ ಈ ಆಕಾಶದ  ಅದ್ಭುತವನ್ನು ನೊಡಬಹುದು. ಎಲ್ಲರೂ ನೋಡಿ ಸಂಭ್ರಮಿಸೋಣ ಎಂದು ಹವ್ಯಾಸಿ ಖಗೋಳ ವೀಕ್ಷಕ ಹರೋನಹಳ್ಳಿಸ್ವಾಮಿ ತಿಳಿಸಿದ್ದಾರೆ.


ಶತಮಾನದ ಧೂಮಕೇತುವೆಂದು ಕರೆಸಿಕೊಳ್ಳುತ್ತಿರುವ ತ್ಸುಸಿತ್ಸಾನ್ ಅಟ್ಲಾಸ್ ಸಿ/೨೦೨೩/ಎ ಧೂಮಕೇತು ಬರಿಗಣ್ಣಿಗೆ ಕಾಣುತ್ತಿರುವುದು ಮತ್ತು ಧೂಮಕೇತು ಚಲನೆ ವಿವರ. 
       ಈ ಅಟ್ಲಾಸ್ ಧೂಮಕೇತು ಚೀನಾ ಹಾಗೂ ದಕ್ಷಿಣ ಆಫ್ರಿಕಾದ  ವೀಕ್ಷಣಾಲಯಗಳಿಂದ ಕಂಡುಹಿಡಿಯಲ್ಪಟ್ಟಿದೆ. ಸೌರವ್ಯೂಹದ ಗ್ರಹಗಳ ಚಲನೆಗೆ ವಿರುದ್ಧ ವಾದ ದಿಕ್ಕಿನಲ್ಲಿ ಸೂರ್ಯನ ಸುತ್ತ ಬಂದು ಹೋಗುತ್ತದೆ. ಧೂಮಕೇತುವಿನ ಬಾಲವು ಸೂರ್ಯನ ಸಮೀಪ ಬಂದಾಗ ಲಕ್ಷಾಂತರ ಕಿಲೋ ಮೀಟರ್ ಎತ್ತರಕ್ಕೆ ಆಗಸದಲ್ಲಿ ಬೆಳೆಯುತ್ತದೆ. ಧೀರ್ಘ ವೃತ್ತಾಕಾರದ ಪಥದಲ್ಲಿ ಸೂರ್ಯನ ಸುತ್ತ ಹಾದುಹೋಗುವ ಈ ಧೂಮಕೇತುಗಳು ತಮ್ಮ ಪಥದಲ್ಲಿ ಅಪಾರ ಚೂರುಗಳನ್ನು ಬಿಟ್ಟು ಹೋಗುತ್ತವೆ. ಭೂಮಿಯು ಗುರುತ್ವದಿಂದ ಈ ತುಣುಕುಗಳನ್ನು ಸೆಳೆಯಲ್ಪಡುತ್ತವೆ. ಅವುಗಳೆ ಉಲ್ಕೆಗಳು ಮತ್ತು ಉಲ್ಕಾಪಾತ. 
    ಧೂಮಕೇತುವಿನಲ್ಲಿ ಏನಿರುತ್ತದೆ? 
    ಧೂಮಕೇತುಗಳು ಸೌರವ್ಯೂಹದ ಅಂಚಿನಲ್ಲಿರುವ ಕ್ಯುಪರ್ ಪಟ್ಟಿ ಮತ್ತು ವೂರ್ಟ್ ಮೋಡಗಳಿಂದ ಅತಿಥಿಗಳಂತೆ ಆಗಮಿಸುತ್ತವೆ. ಧೂಮಕೇತು ಧೂಳು, ಕಲ್ಲು ಮತ್ತುಮಂಜುಗಡ್ಡೆ ಗಳಿಂದ ಆವೃತವಾದ ದೊಡ್ಡ ಬಂಡೆ ಎನ್ನಬಹುದು. ಇವುಗಳಲ್ಲಿ ಹೈಡ್ರೋಕಾರ್ಬನ್‌ಗಳು ಇರುತ್ತವೆ. ಜೀವಿಗಳ ಉಗಮಕ್ಕೆ ಧೂಮಕೇತುಗಳು ಕೂಡ ಸಾಕ್ಷಿಯಾಗಿವೆ. ಜೀವಿಗಳ ಉಗಮಕ್ಕೆ ಅನೇಕ ಸಾಕ್ಷಿಗಳನ್ನು ಧೂಮಕೇತುಗಳು ನೀಡುತ್ತವೆ.
    ಅ.೧೫ರವರೆಗೆ ಸಂಜೆ ಆಗಸದಲ್ಲಿ ಅಟ್ಲಾಸ್ ಸಿ/೨೦೨೩/ಎ  ಧೂಮಕೇತುವಿನ ಅದ್ಭುತ ದರ್ಶನವನ್ನು ಬರಿಗಣ್ಣಿನಲ್ಲಿ ನೋಡಬಹುದಾಗಿದೆ. ಎಲ್ಲರೂ ನೋಡಿ ಆನಂದಿಸಿರಿ. ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ನೋಡಿ ಅಧ್ಯಯನ ಮಾಡಬಹುದು ಎಂದು ಹರೋನಹಳ್ಳಿ ಸ್ವಾಮಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ ೭೮೯೨೧೫೪೬೯೫ ಸಂಪರ್ಕಿಸಬಹುದಾಗಿದೆ.