ಭದ್ರಾವತಿ: ಪ್ರಸ್ತುತ ಸಮಾಜದಲ್ಲಿ ಕಣ್ಣಿದ್ದು ಕುರುಡರಾಗಿರುವ, ಕೈಕಾಲು ಚೆನ್ನಾಗಿದ್ದು ಸೋಮಾರಿಗಳಾಗಿರುವವರ ಮಧ್ಯೆ ಉತ್ತಮ ಶಿಕ್ಷಣ, ತರಬೇತಿ ಪಡೆದು ಸ್ವಾಭಿಮಾನದಿಂದ ಜೀವನ ಕಟ್ಟಿಕೊಳ್ಳುತ್ತಿರುವ ಅಂಧರು ನಮಗೆ ಆದರ್ಶ ಪ್ರಾಯರಾಗಿ ಕಾಣಿಸುತ್ತಾರೆ ಎಂದು ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ, ಬಿ.ಎಸ್ ಮಹೇಶ್ ಕುಮಾರ್ ಹೇಳಿದರು.
ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಮತ್ತು ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ವಿಶ್ವ ದೃಷ್ಟಿ ದಿನಾಚರಣೆ ಹಾಗೂ ಸೇವಾ ದಿವಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಣ್ಣುಗಳ ದೋಷ ಮತ್ತು ಅವುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವದೃಷ್ಟಿ ದಿನಾಚರಣೆ ಆಚರಿಸಲಾಗುತ್ತಿದೆ. ಅಂಧರು ಸಹ ತಮ್ಮ ಪ್ರತಿಭೆಗಳ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಅಂಧರಿಗೆ ಉನ್ನತ ಶಿಕ್ಷಣ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಸಂಗೀತ ತರಬೇತಿ ನೀಡುವ ಮೂಲಕ ಅವರ ಸ್ವಾವಲಂಬನೆಯ ಜೀವನೋಪಾಯಕ್ಕೆ ದಾರಿಯಾಗಿರುವ ಸಿದ್ದಾರ್ಥ ಅಂಧರ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಮೂರ್ತಿ ಲಯನ್ಸ್ ಕ್ಲಬ್ ಸೇವಾ ದಿವಸ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಲಯನ್ಸ್ ಕ್ಲಬ್ ಖಜಾಂಚಿ ರಾಜಕುಮಾರ್, ಸಿದ್ದಾರ್ಥ್ ಅಂಧರ ಕೇಂದ್ರದ ನಿರ್ದೇಶಕಿ ಹಾಗೂ ಉಪನ್ಯಾಸಕಿ ಸೃಷ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿ ವಂದಿಸಿದರು. ಅಂಧರ ಕೇಂದ್ರದ ಮಂಜುನಾಥ್ ಪ್ರಾರ್ಥಿಸಿದರು.