ಎಂಪಿಎಂ ನಿವೃತ್ತ ಕಾರ್ಮಿಕರಿಂದ ಎಲ್‌ಐಸಿ ಶಾಖಾ ಕಛೇರಿ ಮುಂಭಾಗ ಪ್ರತಿಭಟನೆ
ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರಿಗೆ ನೀಡುತ್ತಿರುವ ಗ್ರೂಪ್ ಸೂಪರ್ ಅನ್ಯುಯೇಷನ್ ಆನ್ಯೂಟಿ ಹಣ ತುಂಬಾ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಬುಧವಾರ ಮೈಸೂರು ಕಾಖಾದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಖಾ ವ್ಯವಸ್ಥಾಪಕ ಮುರಳಿಧರರವರ ಮೂಲಕ ಎಲ್‌ಐಸಿ ಆಫ್ ಇಂಡಿಯಾ, ಪಿ & ಜಿ.ಎಸ್ ಯೂನಿಟ್, ಮಂಗಳೂರು ಕಚೇರಿಯ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ : ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರಿಗೆ ನೀಡುತ್ತಿರುವ ಗ್ರೂಪ್ ಸೂಪರ್ ಅನ್ಯುಯೇಷನ್ ಆನ್ಯೂಟಿ ಹಣ ತುಂಬಾ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಬುಧವಾರ ಮೈಸೂರು ಕಾಖಾದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಾಖಾ ವ್ಯವಸ್ಥಾಪಕ ಎಸ್.ಎನ್ ಮುರಳಿಧರರವರ ಮೂಲಕ ಎಲ್‌ಐಸಿ ಆಫ್ ಇಂಡಿಯಾ, ಪಿ & ಜಿ.ಎಸ್ ಯೂನಿಟ್, ಮಂಗಳೂರು ಕಚೇರಿಯ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರಾದ ನಮಗೆ ಎಂಪಿಎಂ ಕಾರ್ಮಿಕರ ಗ್ರೂಪ್ ಸೂಪರ್ ಅನ್ಯುಯೇಷನ್ ಸ್ಟೀಂನ ಮಾಸ್ಟರ್ ಪಾಲಿಸಿ ಸಂ. ೫೦೮೨೧೧ ರ ಮೂಲಕ ನೀಡುತ್ತಿರುವ ಅನ್ಯುಟಿ ಹಣ ತುಂಬಾ ಕಡಿಮೆ ಇದ್ದು ಅದನ್ನು ಜಾಸ್ತಿ ಮಾಡಬೇಕೆಂದು ಅಥವಾ ನಮ್ಮ ಒಟ್ಟು ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಛೇರಿಯ ನಮ್ಮ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಕೋರಿ ಪತ್ರ ಬರೆದಿದ್ದೆವು. ನಮ್ಮ ಮನವಿಗೆ ಸ್ಪಂದಿಸದಿದ್ದುದರಿಂದ ಅನಿವಾರ್ಯವಾಗಿ ಹೋರಾಟ ಮಾಡಲಾಗುತ್ತಿದೆ ಎಂದರು.
ನಾವು ಈ ಹಿಂದೆ ಎರಡು ಬಾರಿ ಹೋರಾಟ ನಡೆಸಲು ಮುಂದಾದಾಗ ನಮ್ಮ ಬೇಡಿಕೆ ಬಗ್ಗೆ ಪರಿಶೀಲಿಸುತ್ತೇವೆಂದು ಸಮಯ ತೆಗೆದುಕೊಂಡು ಇಲ್ಲಿಯವರೆಗೂ ಪರಿಹರಿಸಿಲ್ಲ. ಇದೀಗ ಅ.೧೦ರಂದು ತಾವುಗಳು ಪತ್ರವನ್ನು ನೀಡಿದ್ದು ಅದರಲ್ಲಿ ಪಾಲಿಸಿದಾರ ಬದುಕಿರುವವರೆಗೂ ಹಣ ವಾಪಸ್ ಕೊಡುವುದಕ್ಕಾಗಲೀ, ಬಡ್ಡಿ ಹೆಚ್ಚಳ ಮಾಡುವುದಕ್ಕಾಗಲೀ ಬರುವುದಿಲ್ಲವೆಂದು ಹಾಗು ಒಪ್ಪಂದ ಇದೆಯೆಂದು ಯಾವುದೋ ಭೋಗಸ್ ಪ್ರತಿಯನ್ನು ನೀಡಿದ್ದೀರಿ. ಈ ಪತ್ರಗಳಿಗೆ ಸಹಿಯೂ ಇಲ್ಲ ಮತ್ತು ಆ ತರಹ ಯಾವುದೇ ಒಪ್ಪಂದ ಇಲ್ಲವೆಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ. ಈ ಬಗ್ಗೆ ಯಾವುದೇ ಟ್ರಸ್ಟ್ ರಚನೆಯನ್ನು ನೀವುಗಳು ಆಗಲೇ ಮಾಡಿದ್ದರೆ ನಮಗೆ ಆಡಳಿತವರ್ಗವು ಪ್ರತಿವಷ ಹಣ ಕಟ್ಟದಿದ್ದಾಗ ತಿಳಿಯುತ್ತಿತ್ತು ಎಂದರು.
ನೀವು ನಿಮ್ಮ ಯಾವುದೇ ಪಾಲಿಸಿಯನ್ನು ನಿಗದಿತ ಸಮಯದಲ್ಲಿ ಕಟ್ಟದಿದ್ದಾಗ ಆ ಕಂತನ್ನು ಕಟ್ಟಿಸಿಕೊಳ್ಳುವಾಗ ಅದಕ್ಕೆ ಬಡ್ಡಿಯನ್ನು ಸೇರಿಸಿ ಕಟ್ಟಿಸಿಕೊಳ್ಳುತ್ತೀರಿ. ಆದರೆ ಎಂಪಿಎಂ ಆಡಳಿತವರ್ಗ ನಿಗದಿತವಾಗಿ ಕಂತುಗಳನ್ನು ಕಟ್ಟದಿದ್ದಾಗ ಆ ಕಂತುಗಳಿಗೆ ಅವರಿಂದ ಬಡ್ಡಿಯನ್ನು ಕಟ್ಟಿಸಿಕೊಳ್ಳದೆ ನಮಗೆ ಅನ್ಯಾಯ ಮಾಡಿರುತ್ತೀರಿ. ಆದರೆ ಈಗ ನಮ್ಮ ಹಣಕ್ಕೆ ಬಹಳ ಕಡಿಮೆ ರೀತಿಯಲ್ಲಿ ಬಡ್ಡಿ ನೀಡುತ್ತಿದ್ದು, ಇದು ನಮಗೆ ಮಾಡಿರುವ ಮತ್ತೊಂದು
ಅನ್ಯಾಯವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಇದನ್ನು ಸರಿಪಡಿಸಿಕೊಡಬೇಕು. ನಮ್ಮ ಬೇಡಿಕೆ ಪರಿಹಾರವಾಗದಿದ್ದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಅಥವಾ ಕಾನೂನು ಮೊರೆ ಹೋಗಲೇಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ಸಂಚಾಲಕರಾದ ವಿ.ಗೋವಿಂದಪ್ಪ, ಕೆ.ಜಿ ವೆಂಕಟೇಶ್ ಮೂರ್ತಿ, ಶಿವಲಿಂಗಯ್ಯ, ಆರ್.ಎ ಬಾಪು, ವಿ.ಎಸ್ ರಘುನಾಥ್, ನಿವೃತ್ತ ನೌಕರರಾದ ಚಿಕ್ಕರಾಜು, ಬಸವರಾಜ್, ಟಿ. ತಿಮ್ಮಪ್ಪ, ಟಿ.ಎಸ್ ಆನಂದಕುಮಾರ್, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.