Saturday, October 26, 2024

ಎಸ್. ಬಂಗಾರಪ್ಪ ಹುಟ್ಟುಹಬ್ಬ : ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲು ವಿತರಣೆ

ಹಿಂದುಳಿದ ವರ್ಗಗಳ ನಾಯಕ, ಬಡವರ ಬಂಧು, ಮಾಜಿ ಮುಖ್ಯಮಂತ್ರಿ ದಿವಂಗತ ಸಾರೇಕೊಪ್ಪ ಬಂಗಾರಪ್ಪನವರ ೯೨ನೇ ಹುಟ್ಟುಹಬ್ಬದ ಅಂಗವಾಗಿ ಭದ್ರಾವತಿಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಗ್ರಾಮಾಂತರ ವಿಭಾಗದ ವತಿಯಿಂದ ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲು ವಿತರಿಸಲಾಯಿತು. 
    ಭದ್ರಾವತಿ : ಹಿಂದುಳಿದ ವರ್ಗಗಳ ನಾಯಕ, ಬಡವರ ಬಂಧು, ಮಾಜಿ ಮುಖ್ಯಮಂತ್ರಿ ದಿವಂಗತ ಸಾರೇಕೊಪ್ಪ ಬಂಗಾರಪ್ಪನವರ ೯೨ನೇ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಗ್ರಾಮಾಂತರ ವಿಭಾಗದ ವತಿಯಿಂದ ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲು ವಿತರಿಸಲಾಯಿತು. 
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಮಾರ್ಗದರ್ಶನದಲ್ಲಿ ಹಿರಿಯೂರಿನ ಅಮಲಾ ಮಾತಾ ಆಸ್ಪತ್ರೆಯಲ್ಲಿ ವಿಭಾಗದ ಅಧ್ಯಕ್ಷ ಎಂ. ರಮೇಶ್ ಶೆಟ್ಟಿ ನೇತೃತ್ವದಲ್ಲಿ ಒಳ ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲು ವಿತರಿಸಲಾಯಿತು. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಯೋಜನೆಗಳ ಮೂಲಕ ಅವರನ್ನು ಸ್ಮರಿಸಲಾಯಿತು. 
    ಶಂಕರಘಟ್ಟ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಟಿ.ಡಿ ಶಶಿಕುಮಾರ್, ಶಂಕರ್ ರೈಸ್ ಮಿಲ್ ಮಾಲೀಕ ನಂದೀಶ್ ಕುಮಾರ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಮುರುಗೇಶ್ ಹಾಗು ಆಸ್ಪತ್ರೆ ವೈದ್ಯರು, ದಾದಿಯರು ಹಾಗು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿದ್ಯಾರ್ಥಿ ನಿಲಯ ಕಾಮಗಾರಿ ಶೀಘ್ರ ಮುಕ್ತಾಯಗೊಂಡು ಸದ್ಬಳಕೆಯಾಗಲಿ : ಬಿ.ಕೆ ಮೋಹನ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೇಬಾಗಿ ಹನುಮಂತ ನಗರದಲ್ಲಿ ಶನಿವಾರ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಡಾ.ಬಿ.ಅರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಕಾಮಗಾರಿಗೆ ಗುದ್ದಲಿ ಪೂಜೆ ಹಾಗು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ : ಶಾಸಕ ಬಿ.ಕೆ ಸಂಗಮೇಶ್ವರ್ ಬಡ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೆಟ್ರಿಕ್ ಪೂರ್ವ ಡಾ.ಬಿ.ಅರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಮಂಜೂರಾತಿ ಮಾಡಿಸಿದ್ದು, ಶೀಘ್ರ ಕಾಮಗಾರಿ ಮುಕ್ತಾಯಗೊಳಿಸುವ ಮೂಲಕ ಇದರ ಸದ್ಬಳಕೆಯಾಗಬೇಕೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ಶನಿವಾರ ನಗರಸಭೆ ವ್ಯಾಪ್ತಿಯ ಸೀಗೇಬಾಗಿ ಹನುಮಂತ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಡಾ.ಬಿ.ಅರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
  ಸಮಾಜ ಕಲ್ಯಾಣ ಇಲಾಖೆ ಅನುದಾನ ಸುಮಾರು ೩.೫ ಕೋ. ರು. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಬಂಗಾರಪ್ಪನವರ ಮುಂದಿನ ಜನ್ಮದಿನ ಅಚರಣೆಯೊಳಗೆ ಕಟ್ಟಡ ಪೂರ್ಣಗೊಂಡು ಉದ್ಘಾಟನೆಯಾಗಬೇಕು. ವಿದ್ಯೆ ಎಂಬುದು ಕದಿಯಲಾಗದ ಸಂಪತ್ತು. ವಿದ್ಯೆ ಕಲಿಯಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು. 
    ನಗರಸಭೆ ಪ್ರಭಾರ ಅಧ್ಯಕ್ಷ ಎಂ.ಮಣಿ ಎಎನ್‌ಎಸ್,  ಸದಸ್ಯರಾದ ಚನ್ನಪ್ಪ, ಅನಿತಾ ಮಲ್ಲೇಶ್, ಬಷೀರ್ ಅಹಮ್ಮದ್, ಮಹಮ್ಮದ್ ಯೂಸುಫ್, ಮುಖಂಡರಾದ ಜಿಂಜಾನಾಯ್ಕ, ನಾಗಣ್ಣ, ಶಿವಾಜಿರಾವ್, ರಾಮಣ್ಣ, ಅಣ್ಣಾದೊರೈ, ಸಂಪತ್, ಶ್ರೀನಿವಾಸ, ಅರಿಫ್, ಚಿನ್ನಯ್ಯ, ಶೇಖರ್,  ಶಾಲಾ ಅಡುಗೆ ತಯಾರಕರಾದ ಮೋಹಿನಿ, ಪದ್ಮ, ರತ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Friday, October 25, 2024

ಅ.೨೬ರಂದು `ಮಂಥನ ಭದ್ರಾವತಿ'

   

 ಭದ್ರಾವತಿ: ಮಂಥನ ಕರ್ನಾಟಕ ವತಿಯಿಂದ ಭದ್ರೆಯ ಮಡಿಲು, ಅರಿವಿನ ಕಡಲು `ಮಂಥನ ಭದ್ರಾವತಿ' ಮೊದಲ ಕಾರ್ಯಕ್ರಮ ಅ.೨೬ರ ಸಂಜೆ ೬ ಗಂಟೆಗೆ ನಯನ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 
    ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್. ಭಟ್ ಮತ್ತು  ರಾಷ್ಟ್ರೀಯ ಸ್ವಯಂ ಸೇವಕ ಸಂಘ, ದಕ್ಷಿಣ ಪ್ರಾಂತ್ಯ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ವ್ಯಕ್ತಿಗೆ ೧೦ ಸಾವಿರ ರು. ದಂಡ..!

ಭದ್ರಾವತಿಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ವ್ಯಕ್ತಿಗೆ ನ್ಯಾಯಾಲಯದ ಸಂಖ್ಯೆ ಸಿಸಿ೬೭೩೦/೨೪ರ ಪ್ರಕರಣದಲ್ಲಿ ಅ.೨೩ರಂದು ೧೦,೦೦೦ ರು. ದಂಡ ವಸೂಲಾತಿ ಮಾಡಲಾಗಿದೆ. ವಾಹನ ಸವಾರರಿಗೆ ಎಚ್ಚರಿಸುವ ಉದ್ದೇಶದಿಂದ ಈ ಕುರಿತು ಜಿಲ್ಲಾ ಪೊಲೀಸ್ ತನ್ನ ಎಕ್ಸ್ ಖಾತೆಯಲ್ಲಿ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದೆ. 
    ಭದ್ರಾವತಿ: ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ವ್ಯಕ್ತಿಯೊಬ್ಬರಿಗೆ ಸಂಚಾರಿ ಠಾಣೆ ಉಪನಿರೀಕ್ಷಕರು(ಪಿಎಸ್‌ಐ) ಗರಿಷ್ಠ ೧೦,೦೦೦ ರು. ದಂಡ ವಿಧಿಸಿ ವಸೂಲಿ ಮಾಡಿರುವ ಘಟನೆ ನಡೆದಿದೆ. 
    ನ್ಯಾಯಾಲಯದ ಸಂಖ್ಯೆ ಸಿಸಿ೬೭೩೦/೨೪ರ ಪ್ರಕರಣದಲ್ಲಿ ಅ.೨೩ರಂದು ೧೦,೦೦೦ ರು. ದಂಡ ವಸೂಲಾತಿ ಮಾಡಲಾಗಿದೆ. ವಾಹನ ಸವಾರರಿಗೆ ಎಚ್ಚರಿಸುವ ಉದ್ದೇಶದಿಂದ ಈ ಕುರಿತು ಜಿಲ್ಲಾ ಪೊಲೀಸ್ ತನ್ನ ಎಕ್ಸ್ ಖಾತೆಯಲ್ಲಿ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದೆ.  
    ದೇಶದಲ್ಲಿ ಯಾವುದೇ ವ್ಯಕ್ತಿ ಕುಡಿದು ವಾಹನ ಚಲಾವಣೆ ಮಾಡ್ತಿದ್ದರೆ ಸಂಚಾರಿ ಪೊಲೀಸರು ಆತನ ಮೇಲೆ ಸೆಕ್ಷನ್ ೧೮೫ ರಡಿ ದೂರು ದಾಖಲಿಸುತ್ತಾರೆ.  ಬಿಎಸಿ ಪರೀಕ್ಷೆ ಮಾಡಿದ ನಂತರ ದಂಡ ವಿಧಿಸಬಹುದು. ವಾಹನವನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಬಹುದು. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ ೨೦೭ ರ ಅಡಿಯಲ್ಲಿ ನಿಮ್ಮ ವಾಹನವನ್ನು ವಶಪಡಿಸಿಕೊಳ್ಳಲಾಗುತ್ತದೆ. ವಾಹನದ ಎಲ್ಲಾ ದಾಖಲೆಗಳನ್ನು ಸಹ ಸಂಚಾರ ಪೊಲೀಸರು ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ. ಏಳು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ೨,೦೦೦ ರೂಪಾಯಿಯಿಂದ ೧೦,೦೦೦ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.  
    ಇನ್ನು ಬೆಂಗಳೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡಿದರೆ ಮೊದಲ ಬಾರಿ ೧೦,೦೦೦ ರೂಪಾಯಿ ದಂಡ ಅಥವಾ ೬ ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎರಡನೇ ಬಾರಿ ಅಪರಾಧಕ್ಕೆ ೧೫,೦೦೦ ರೂಪಾಯಿ ದಂಡ ಅಥವಾ ೨ ವರ್ಷಗಳವರೆಗೆ ಜೈಲು ಶಿಕ್ಷೆಯಾಗುತ್ತದೆ.  

ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಪುರತತ್ವ ಇಲಾಖೆ ಅಭಿಯಂತರ ತಾರಕೇಶ್ ಭೇಟಿ : ಪರಿಶೀಲನೆ

ದೇವಸ್ಥಾನದ ಮೇಲ್ಛಾವಣಿಯಲ್ಲಿ ಮಳೆ ನೀರು ಸೋರಿಕೆ : ಶೀಘ್ರ ಕಾಮಗಾರಿ ಆರಂಭ 

ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ಧ ಕ್ಷೇತ್ರಪಾಲಕ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಪುರತತ್ವ ಇಲಾಖೆ ಸಂರಕ್ಷಣಾ ವಿಭಾಗದ ಅಭಿಯಂತರ ತಾರಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ಭದ್ರಾವತಿ: ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ಧ ಕ್ಷೇತ್ರಪಾಲಕ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಪುರತತ್ವ ಇಲಾಖೆ ಸಂರಕ್ಷಣಾ ವಿಭಾಗದ ಅಭಿಯಂತರ ತಾರಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ದೇವಸ್ಥಾನದ ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆ ನೀರು ಸೋರಿಕೆಯಾಗುತ್ತಿರುವ ಕುರಿತು ದೇವಸ್ಥಾನದ ಅರ್ಚಕರು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗಮನಕ್ಕೆ ತಂದಿದ್ದರು. ಈ ಹಿನ್ನಲೆಯಲ್ಲಿ ಶಾಸಕರು ಪುರತತ್ವ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ತಾರಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
    ಶೀಘ್ರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದು, ಈ ಸಂಬಂಧ ಕಾಮಗಾರಿ ವೆಚ್ಚದ ಅಂದಾಜು ಪಟ್ಟಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಕಂದಾಯ ನಿರೀಕ್ಷಕ ಪ್ರಶಾಂತ್, ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸ್, ಮುಖಂಡರಾದ ನರಸಿಂಹಚಾರ್, ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

ಚನ್ನಪಟ್ಟಣ ಚುನಾವಣೆ ಉಸ್ತುವಾರಿಯಾಗಿ ಎಸ್. ಮಂಜುನಾಥ್ ನೇಮಕ


ಎಸ್. ಮಂಜುನಾಥ್ 
    ಭದ್ರಾವತಿ: ನಗರದ ಜನ್ನಾಪುರ ನಿವಾಸಿ, ಕೆಪಿಸಿಸಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎಸ್. ಮಂಜುನಾಥ್ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. 
    ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಒ.ಬಿ.ಸಿ, ಅಲ್ಪಸಂಖ್ಯಾತ ಉಸ್ತುವಾರಿ ಕೆ.ರಾಜು ಹಾಗು ಎ.ಐ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಲಿಲೋತಿಯರವರ ಆದೇಶದ ಮೇರೆಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿರ್ದೇಶನದಂತೆ  ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್ ಧರ್ಮಸೇನ ಮಂಜುನಾಥ್‌ರವರನ್ನು ನೇಮಕಗೊಳಿಸಿದ್ದಾರೆ. 
     ಪರಿಶಿಷ್ಟಜಾತಿ ಸಮುದಾಯದ ಜನರನ್ನು ಗುರುತಿಸಿ ಅವರನ್ನು ವಿಶ್ವಾಸಕ್ಕೆ ಪಡೆದು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಪಕ್ಷದ ಅಭ್ಯರ್ಥಿಪರ ವ್ಯಾಪಕ ಪ್ರಚಾರ ಕೈಗೊಂಡು ಗೆಲುವಿಗೆ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ. 
    ಮಂಜುನಾಥ್‌ರವರು ಕರ್ನಾಟಕ ರಾಜ್ಯ ಮಾದಿಗ ಸಮಾಜ(ಕೆಆರ್‌ಎಂಎಸ್)ದ ರಾಜ್ಯಾಧ್ಯಕ್ಷರಾಗಿದ್ದು, ಹಲವಾರು ವರ್ಷಗಳಿಂದ ಪರಿಶಿಷ್ಟರ ಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ.   

ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳ ವಿನ್ಯಾಸಕ್ಕೆ ಅನುಮತಿ ನೀಡಿ

ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಮುಂದಿನ ಪ್ರಕ್ರಿಯೆಗೆ ಪೂರಕವಾಗುವಂತೆ ಕಾಮಗಾರಿಗಳ ವಿನ್ಯಾಸಕ್ಕೆ ಅನುಮತಿ ನೀಡುವಂತೆ ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ : ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಮುಂದಿನ ಪ್ರಕ್ರಿಯೆಗೆ ಪೂರಕವಾಗುವಂತೆ ಕಾಮಗಾರಿಗಳ ವಿನ್ಯಾಸಕ್ಕೆ ಅನುಮತಿ ನೀಡುವಂತೆ ನಗರದ ಜನ್ನಾಪುರ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರು ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದು, ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ಉಂಬ್ಲೆಬೈಲು ಕಲ್ಲಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಇತರೆ ೨೮ ಗ್ರಾಮಗಳನ್ನೊಳಗೊಂಡ ಸುಮಾರು ೪೮ ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಈ ಯೋಜನೆಯ ವಿನ್ಯಾಸಕ್ಕೆ (ಡಿಸೈನ್) ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ. 
    ಶಿವಮೊಗ್ಗ ಜಿಲ್ಲೆ ಕುಂಸಿ ಮತ್ತು ೮೯ ಜನ ವಸತಿಗಳನ್ನೊಳಗೊಂಡ ಹಾಗೂ ಗಾಜನೂರು ಮತ್ತು ೧೫ ಜನ ವಸತಿಗಳನ್ನೊಳಗೊಂಡ ಸುಮಾರು ೧೨೫ ಕೋಟಿ ರು. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಈ ಯೋಜನೆಯ ವಿನ್ಯಾಸಕ್ಕೆ (ಡಿಸೈನ್) ಅನುಮತಿ ನೀಡುವುದು ಹಾಗು ತಾಲೂಕಿನ ಆನವೇರಿ ಮತ್ತು ೩೭ ಇತರೆ ಗ್ರಾಮಗಳಿಗೆ ಸುಮಾರು ೩೬.೧೧ ಕೋಟಿ ರು. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಈ ಯೋಜನೆಯ ವಿನ್ಯಾಸಕ್ಕೆ (ಡಿಸೈನ್) ಅನುಮತಿ ನೀಡುವಂತೆ ಕೋರಲಾಗಿದೆ. 
    ತಾಲೂಕಿನ ಮಾರಶೆಟ್ಟಿಹಳ್ಳಿ ಮತ್ತು ಇತರೆ ೨೩ ಗ್ರಾಮಗಳಿಗೆ ೨೫ ಕೋಟಿ ರು. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿರುವುದರಿಂದ ಯೋಜನೆಯ ವಿನ್ಯಾಸಕ್ಕೆ (ಡಿಸೈನ್) ಅನುಮತಿ ನೀಡುವಂತೆ ವಿನಂತಿಸಲಾಗಿದೆ.