ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೇಬಾಗಿ ಹನುಮಂತ ನಗರದಲ್ಲಿ ಶನಿವಾರ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಡಾ.ಬಿ.ಅರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಕಾಮಗಾರಿಗೆ ಗುದ್ದಲಿ ಪೂಜೆ ಹಾಗು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ : ಶಾಸಕ ಬಿ.ಕೆ ಸಂಗಮೇಶ್ವರ್ ಬಡ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೆಟ್ರಿಕ್ ಪೂರ್ವ ಡಾ.ಬಿ.ಅರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಮಂಜೂರಾತಿ ಮಾಡಿಸಿದ್ದು, ಶೀಘ್ರ ಕಾಮಗಾರಿ ಮುಕ್ತಾಯಗೊಳಿಸುವ ಮೂಲಕ ಇದರ ಸದ್ಬಳಕೆಯಾಗಬೇಕೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಅವರು ಶನಿವಾರ ನಗರಸಭೆ ವ್ಯಾಪ್ತಿಯ ಸೀಗೇಬಾಗಿ ಹನುಮಂತ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಡಾ.ಬಿ.ಅರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ಅನುದಾನ ಸುಮಾರು ೩.೫ ಕೋ. ರು. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಬಂಗಾರಪ್ಪನವರ ಮುಂದಿನ ಜನ್ಮದಿನ ಅಚರಣೆಯೊಳಗೆ ಕಟ್ಟಡ ಪೂರ್ಣಗೊಂಡು ಉದ್ಘಾಟನೆಯಾಗಬೇಕು. ವಿದ್ಯೆ ಎಂಬುದು ಕದಿಯಲಾಗದ ಸಂಪತ್ತು. ವಿದ್ಯೆ ಕಲಿಯಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ನಗರಸಭೆ ಪ್ರಭಾರ ಅಧ್ಯಕ್ಷ ಎಂ.ಮಣಿ ಎಎನ್‌ಎಸ್, ಸದಸ್ಯರಾದ ಚನ್ನಪ್ಪ, ಅನಿತಾ ಮಲ್ಲೇಶ್, ಬಷೀರ್ ಅಹಮ್ಮದ್, ಮಹಮ್ಮದ್ ಯೂಸುಫ್, ಮುಖಂಡರಾದ ಜಿಂಜಾನಾಯ್ಕ, ನಾಗಣ್ಣ, ಶಿವಾಜಿರಾವ್, ರಾಮಣ್ಣ, ಅಣ್ಣಾದೊರೈ, ಸಂಪತ್, ಶ್ರೀನಿವಾಸ, ಅರಿಫ್, ಚಿನ್ನಯ್ಯ, ಶೇಖರ್, ಶಾಲಾ ಅಡುಗೆ ತಯಾರಕರಾದ ಮೋಹಿನಿ, ಪದ್ಮ, ರತ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment