Wednesday, October 30, 2024

ಧರ್ಮ ಸತ್ಯದ ದಾರಿಯಲ್ಲಿ ನಡೆಯಿರಿ : ಶ್ರೀ ರಂಭಾಪುರಿ ಜಗದ್ಗುರುಗಳು

ಭದ್ರಾವತಿ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಬುಧವಾರ ಜರುಗಿದ ಲಿಂ.ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ ೫೭ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
    ಭದ್ರಾವತಿ : ಮನುಷ್ಯ ಆಶೆ ಕಳೆದುಕೊಂಡು ಬದುಕಬಹುದು. ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು. ಧರ್ಮ ಸತ್ಯದ ದಾರಿಯಲ್ಲಿ ನಡೆಯುವವನಿಗೆ ನೂರೆಂಟು ಕಷ್ಟಗಳು ಬಂದರೂ ಕೊನೆಗೆ ಸತ್ಯ ಧರ್ಮಗಳ ಪರಿಪಾಲನೆ ನಮ್ಮನ್ನು ಕಾಪಾಡುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. 
    ಅವರು ಬುಧವಾರ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಜರುಗಿದ ಲಿಂ.ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ ೫೭ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 
    ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ನಿಶ್ಚಿತ. ಭೌತಿಕ ಸಂಪತ್ತು ಜೀವನ ಶಾಶ್ವತವಲ್ಲ. ಆದರೆ ಸತ್ಯ ಧರ್ಮ ಒಂದೇ ಸ್ಥಿರ. ಅರಳಿದ ಪುಷ್ಪಗಳು ಬೀರುವ ಸುಗಂಧ ಗಾಳಿಯಲ್ಲಿ ಹರಡುವಂತೆ ಸತ್ಕಾರ್ಯಗಳಿಂದ ಮನುಷ್ಯನ ಕೀರ್ತಿ ಎಲ್ಲೆಡೆ ಹರಡುತ್ತದೆ. ದೇವರ ಹೆಸರಿನಲ್ಲಿ ಉಪವಾಸ ಮಾಡುವುದು ದೊಡ್ಡ ಸಾಧನೆಯಲ್ಲ. ಜನ್ಮ ಕೊಟ್ಟ ತಂದೆ ತಾಯಿ ಮಾರ್ಗದರ್ಶನ ನೀಡುವ ಗುರುವಿನಲ್ಲಿ ಶ್ರದ್ಧೆಯಿಟ್ಟು ಕಾಪಾಡುವುದೇ ದೊಡ್ಡ ಸಾಧನೆ ಎಂಬುದನ್ನು ಮರೆಯಬಾರದು ಎಂದರು. 
    ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಆದರ್ಶ ಮೌಲ್ಯಗಳನ್ನು ಪರಿಪಾಲಿಸಿ ನಡೆದರೆ ಜೀವನ ಸಾರ್ಥಕ. ಲಿಂ.ರಾಚೋಟಿ ಶಿವಾಚಾರ್ಯರು ಧರ್ಮಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಸತ್ಕಾರ್ಯಗಳನ್ನು ಮಾಡಿ ಭಕ್ತ ಸಮುದಾಯವನ್ನು ಸನ್ಮಾರ್ಗಕ್ಕೆ ತಂದ ಕೀರ್ತಿ ಅವರದಾಗಿದೆ. ಇಂದಿನ ರಾಚೋಟೇಶ್ವರ ಶಿವಾಚಾರ್ಯರು ಪೂರ್ವದ ಆದರ್ಶ ಪರಿಪಾಲನೆಯನ್ನು ಪರಿಪಾಲಿಸುವ ಭಕ್ತ ಸಂಕುಲದಲ್ಲಿ ಸಂಸ್ಕಾರ, ಸದ್ವಿಚಾರಗಳನ್ನು ಬೆಳೆಸುತ್ತಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದರು. 
      ಸಮಾರಂಭ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮನಸೊಂದಿದ್ದರೆ ಮಾರ್ಗವಿದೆ. ನಂಬಿಕೆಯೊಂದಿದ್ದರೆ ಜೀವನವಿದೆ, ನಿಷ್ಕಲ್ಮಶವಾದ ಭಕ್ತಿಯೊಂದಿದ್ದರೆ ಪರಮಾತ್ಮನ ಅನುಗ್ರಹ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಚಿಂತನೆಗಳನ್ನು ರಾಚೋಟಿ ಶ್ರೀಗಳು ಪರಿಪಾಲಿಸಿ ಭಕ್ತರಿಗೆ ಬೋಧಿಸಿದ ಶಕ್ತಿಯನ್ನು ಮರೆಯಲಾಗದು. ಅವರ ಜೀವನದ ಸಿದ್ಧಿ ಸಾಧನೆಗಳು ನಮ್ಮೆಲ್ಲರಿಗೂ ದಾರಿ ದೀಪವಾಗಲೆಂದರು. 
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಎಷ್ಟು ವರುಷ ಬದುಕಿದನೆಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನ ಹೇಗೆ ಬದುಕಿದನೆಂಬುದು ಬಹಳ ಮುಖ್ಯ. ಹಣ ಇವತ್ತು ಅಥವಾ ನಾಳೆ ಗಳಿಸಬಹುದು. ಆದರೆ ಯಾವಾಗಲೂ ಜೊತೆಯಾಗಿ ನಿಲ್ಲುವ ವ್ಯಕ್ತಿಯನ್ನು ಕಳೆದುಕೊಳ್ಳಬಾರದು. ಲಿಂ.ರಾಚೋಟಿ ಶ್ರೀಗಳವರು ಎಲ್ಲ ಭಕ್ತರನ್ನು ಸಮಾನವಾಗಿ ಕಂಡು ಸತ್ಕರಿಸಿ ಒಳಿತನ್ನು ಬಯಸಿದ ಮಹಾನ್ ಚೇತನ ಶಕ್ತಿ ಎಂದು ಸ್ಮರಿಸಿದರು. 
    ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆದರ್ಶ ಮೌಲ್ಯಗಳ ಪರಿಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೆಳೆಯುವ ಯುವ ಜನಾಂಗದಲ್ಲಿ ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯ ಪಾಠಗಳನ್ನು ಮಾಡುವ ಅವಶ್ಯಕತೆ ಇದೆ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ ಮಾತನಾಡಿ, ಇಂದಿನ ಅತ್ಯಾಧುನಿಕ ಯುಗದಲ್ಲಿ ಮನುಷ್ಯನ ಮನಸ್ಸು ಬಹಳಷ್ಟು ಚಂಚಲಗೊಂಡಿದೆ. ಧರ್ಮ ಪರಿಪಾಲನೆಯ ದಾರಿಯಲ್ಲಿ ನಡೆದಾಗ ಬದುಕಿನಲ್ಲಿ ಶಾಂತಿ, ಸಂತೃಪ್ತಿ, ಸಮಾಧಾನ ಪ್ರಾಪ್ತಿಗಾಗಿ ಇಂತಹ ಸಮಾರಂಭಗಳ ಅವಶ್ಯಕತೆ ಇದೆ. ಶ್ರೀ ರಂಭಾಪುರಿ ಜಗದ್ಗುರುಗಳು ನಿತ್ಯ ಸಂಚರಿಸಿ ಜನ ಸಮುದಾಯಗಳಲ್ಲಿ ಸದಭಿಮಾನ, ಶ್ರದ್ಧೆ, ದೇಶಭಕ್ತಿ, ಧರ್ಮ ಪರಿಪಾಲನೆಯ ವಿಚಾರಗಳನ್ನು ಬೋಧಿಸಿ ಉದ್ಧರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು. 
    ಹುಣಸಘಟ್ಟ, ಹಾಲಸ್ವಾಮಿಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೀರೂರು ಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದಿರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮೆಟಿಕುರ್ಕೆಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಸಂಸ್ಥಾನ ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ರಾಮಲಿಂಗೇಶ್ವರಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠ, ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕುರವತ್ತಿ ಹಿರೇಮಠದ ಶ್ರೀ ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ನಂದಿಪುರಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಹಣ್ಣೆಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. 
    ಶ್ರೀ ಮಠದ ಗೌರವಾಧ್ಯಕ್ಷ ಟಿ.ವಿ.ಈಶ್ವರಯ್ಯ, ಉದ್ಯಮಿ ಬಿ.ಕೆ.ಜಗನ್ನಾಥ, ಎಸ್.ಎನ್ ಮಹಾಲಿಂಗಶಾಸ್ತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಎ.ಎಂ.ಚಂದ್ರಯ್ಯ, ಹೆಚ್.ಮಲ್ಲಿಕಾರ್ಜುನಸ್ವಾಮಿ, ಡಾ.ರೇಣುಕಾರಾಧ್ಯ ಶಾಸ್ತ್ರಿಗಳು, ಸಿದ್ಧಲಿಂಗಯ್ಯ, ಉಮೇಶ ಹಿರೇಮಠ, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಹೊನ್ನಾಳಿ ಕೋಟೆಮಲ್ಲೂರಿನ ಶತಾಯುಷಿ, ನಿವೃತ್ತ ಮುಖ್ಯೋಪಾಧ್ಯಾಯ ಶಿವಲಿಂಗಾರಾಧ್ಯ ಶಾಸ್ತ್ರಿಗಳವರಿಗೆ `ಸೌಜನ್ಯ ಸುಧಾಕರ ರತ್ನ' ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಶ್ರೀ ಮಠದ ನಿಯೋಜಿತ ಪೀಠಾಧಿಪತಿ ಶ್ರೀ ಗುರುಪ್ರಸಾದ ದೇವರು ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಗಂಜಿಗಟ್ಟಿ ಕೃಷ್ಣಮೂರ್ತಿ  ಜಾನಪದ ಗೀತೆಗಳನ್ನು ಹಾಡಿದರು. 
    ಬೆಳಿಗ್ಗೆ ಲಿಂ.ರಾಚೋಟಿ ಶ್ರೀಗಳವರ ಗದ್ದುಗೆಗೆ ಹಾಗೂ ಶ್ರೀ ಮಠದ ಎಲ್ಲ ದೇವರುಗಳಿಗೆ ಶಾಸ್ತ್ರೋಕ್ತ ರುದ್ರಾಭಿಷೇಕ, ಅಷ್ಟೋತ್ತರ ಮಹಾಮಂಗಳಾರತಿ ಜರುಗಿದವು. ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು.
 
    ಲಿಂ.ಹಾನಗಲ್ಲ ಕುಮಾರಸ್ವಾಮಿಗಳು ಮಾಡಿರುವ ನಿರ್ಣಯದಂತೆ ನಡೆದುಕೊಳ್ಳಿ...
    ಇತ್ತೀಚೆಗೆ ಜಾತಿ ಜನಗಣತಿ ಹಿನ್ನೆಲೆಯಲ್ಲಿ ಸೇರಿದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡಿದ್ದು ಸಂತೋಷದ ಸಂಗತಿ. ಈ ಸಂದರ್ಭದಲ್ಲಿ ಹಲವಾರು ಠರಾವುಗಳನ್ನು ಮಹಾಸಭೆ ಪ್ರಕಟಪಡಿಸಿದ್ದು, ಮೊದಲನೆಯ ಠರಾವಿನಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ತತ್ವ ಸಿದ್ಧಾಂತ ಮತ್ತು ಶ್ರೀ ಬಸವಾದಿ ಶಿವಶರಣರ ವಿಚಾರ ಧಾರೆಯಂತೆ ಮಹಾಸಭಾ ಕಾರ್ಯ ನಿರ್ವಹಿಸುತ್ತದೆ ಎಂದಾಗಬೇಕಿತ್ತು. ಆದರೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಹೆಸರು ಕೈ ಬಿಟ್ಟಿರುವುದು ಒಳ್ಳೆಯದಲ್ಲ. ಮಹಾಸಭಾ ಯಾವಾಗಲೂ ಗುರು ವಿರಕ್ತ ಸಮುದಾಯವನ್ನು ಸಮಾನ ದೃಷ್ಟಿಯಿಂದ ಕಾಣಬೇಕೆಂದು ನಿಯಮ ಇರುವಾಗಲೂ ಈ ರೀತಿ ನಿರ್ಣಯ ಕೈಗೊಂಡಿರುವುದು ನೋವಿನ ಸಂಗತಿ. ಈ ವಿಚಾರವನ್ನು ಮಹಾಸಭಾ ಗಂಭೀರವಾಗಿ ಅವಲೋಕನ ಮಾಡಿ ಸರಿಪಡಿಸುವತ್ತ ಗಮನ ಕೊಡಬೇಕಾದ ಅಗತ್ಯವಿದೆ.  ಲಿಂ.ಹಾನಗಲ್ಲ ಕುಮಾರಸ್ವಾಮಿಗಳು ಮಾಡಿರುವ ನಿರ್ಣಯದಂತೆ ವೀರಶೈವ ಮಹಾಸಭೆ ನಡೆದುಕೊಳ್ಳಬೇಕಲ್ಲದೇ ತಪ್ಪು ನಿರ್ಣಯ ಕೈಕೊಳ್ಳಬೇಡಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಎಚ್ಚರಿಸಿದರು. 
 

ಭದ್ರಾವತಿ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಬುಧವಾರ ಜರುಗಿದ ಲಿಂ.ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳವರ ೫೭ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದಲ್ಲಿ ಹೊನ್ನಾಳಿ ಕೋಟೆಮಲ್ಲೂರಿನ ಶತಾಯುಷಿ, ನಿವೃತ್ತ ಮುಖ್ಯೋಪಾಧ್ಯಾಯ ಶಿವಲಿಂಗಾರಾಧ್ಯ ಶಾಸ್ತ್ರಿಗಳವರಿಗೆ `ಸೌಜನ್ಯ ಸುಧಾಕರ ರತ್ನ' ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಉಕ್ಕಿನ ನಗರಕ್ಕೆ ಆಗಮಿಸಿದ ೧೨ ಅಡಿ ಎತ್ತರದ ನೂತನ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ

ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತಿ : ಸಿಹಿ ಹಂಚಿ ಸಂಭ್ರಮ 

 ೧೨ ಅಡಿ ಎತ್ತರದ ನೂತನ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ ಬುಧವಾರ ಭದ್ರಾವತಿ ನಗರಕ್ಕೆ ಆಗಮಿಸಿದ್ದು, ಹಳೇಯ ಪ್ರತಿಮೆ ಸ್ಥಳದಲ್ಲಿಯೇ ಪ್ರತಿಷ್ಠಾಪನೆಗೊಳ್ಳುತ್ತಿದೆ. 
    ಭದ್ರಾವತಿ : ೧೨ ಅಡಿ ಎತ್ತರದ ನೂತನ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ ಬುಧವಾರ ನಗರಕ್ಕೆ ಆಗಮಿಸಿದ್ದು, ದಲಿತ ಸಂಘಟನೆಗಳ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು. 
    ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಹಳೇಯ ಪ್ರತಿಮೆ ಸ್ಥಳದಲ್ಲಿಯೇ ನೂತನ ಪ್ರತಿಮೆ ಅನಾವರಣಗೊಳ್ಳುತ್ತಿದ್ದು, ಮಧ್ಯಾಹ್ನ ೩ ಗಂಟೆ ಸಮಯಕ್ಕೆ ಪ್ರತಿಷ್ಠಾಪನಾ ಸ್ಥಳಕ್ಕೆ ಆಗಮಿಸಿದ ಪ್ರತಿಮೆಯನ್ನು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರಾದ ಚನ್ನಪ್ಪ, ಬಸವರಾಜ ಬಿ. ಆನೇಕೊಪ್ಪ, ದಲಿತ ಮುಖಂಡರಾದ ಸತ್ಯ ಭದ್ರಾವತಿ, ಶಿವಬಸಪ್ಪ, ಚಿನ್ನಯ್ಯ, ವಿ. ವಿನೋದ್, ಈಶ್ವರಪ್ಪ, ಎಸ್. ಕುಮಾರ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಗೋಪಾಲ್, ರಾಜೇಂದ್ರ, ವೆಂಕಟೇಶ್ ಉಜ್ಜನಿಪುರ ಹಾಗು ಕೆ. ಪ್ರಸಾದ್, ಸಂತೋಷ್ ಪಾಟೀಲ್ ಸೇರಿದಂತೆ ನಗರಸಭೆ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು. 
    ನೂತನ ಅಂಬೇಡ್ಕರ್ ಪ್ರತಿಮೆ ಸಂಪೂರ್ಣವಾಗಿ ಕಂಚಿನಿಂದ ನಿರ್ಮಿಸಲಾಗಿದ್ದು, ಸುಮಾರು ೧,೫೦೦ ಕೆ.ಜಿ ತೂಕವಿದೆ. ಪ್ರತಿಷ್ಠಾಪನಾ ಮಂಟಪ ೬ ಅಡಿ ಎತ್ತರವಿದ್ದು, ೧೨ ಅಡಿ ಪ್ರತಿಮೆ ಸೇರಿ ಒಟ್ಟು ೧೮ ಅಡಿ ಎತ್ತರಕ್ಕೆ ಮೆಟ್ಟಿಲುಗಳನ್ನು ಸಹ ನಿರ್ಮಿಸಲಾಗುತ್ತದೆ. ಈಗಾಗಲೇ ಪ್ರತಿಷ್ಠಾಪನಾ ಸ್ಥಳದ ಸುತ್ತ ಲೋಹದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಉಳಿದಂತೆ ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಯಾಗಬೇಕಿದೆ. 

Tuesday, October 29, 2024

ಚುನಾವಣೆಯಲ್ಲಿ ಗೆಲುವು : ಡಿಎಫ್‌ಓ ಅಭಿನಂದನೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ತಾಲೂಕು ಶಾಖೆಗೆ ನಡೆದ ಚುನಾವಣೆಯಲ್ಲಿ ಅರಣ್ಯ ಇಲಾಖೆ ಮತಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಪ್ರಥಮ ದರ್ಜೆ ಸಹಾಯಕ ಡಿ. ವೆಂಕಟೇಶ್ ಅವರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ. 
    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ನಡೆದ ಚುನಾವಣೆಯಲ್ಲಿ ಅರಣ್ಯ ಇಲಾಖೆ ಮತಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಪ್ರಥಮ ದರ್ಜೆ ಸಹಾಯಕ ಡಿ. ವೆಂಕಟೇಶ್ ಅವರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ. 
    ಅರಣ್ಯ ಇಲಾಖೆ ಮತಕ್ಷೇತ್ರದ ೧ ಸ್ಥಾನಕ್ಕೆ ಕಾಂತೇಶ್ ನಾಯ್ಕ ಮತ್ತು ಡಿ. ವೆಂಕಟೇಶ್ ಸ್ಪರ್ಧಿಸಿದ್ದರು. ತೀವ್ರ ಪೈಪೋಟಿ ನಡುವೆ ವೆಂಕಟೇಶ್ ಗೆಲುವು ಸಾಧಿಸಿದ್ದಾರೆ. ಇವರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಸ್ ರೆಡ್ಡಿ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದು, ನೌಕರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರಲಾಗಿದೆ.  

ಸರ್ಕಾರಿ ನೌಕರರ ಸಂಘದ ಚುನಾವಣೆ : ನಾಲ್ವರು ಗೆಲುವು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ತಾಲೂಕು ಶಾಖೆಗೆ ನಡೆದ ಚುನಾವಣೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ೪ ಜನ ಗೆಲುವು ಸಾಧಿಸಿದ್ದಾರೆ. 
    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ನಡೆದ ಚುನಾವಣೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ೪ ಜನ ಗೆಲುವು ಸಾಧಿಸಿದ್ದಾರೆ. 
    ಒಟ್ಟು ೪ ಸ್ಥಾನಗಳಿಗೆ ಉಮೇಶಪ್ಪ, ಡಾ.ಎಚ್.ಎಸ್ ಗಿರೀಶ್, ಎಚ್.ಎಂ ನಾಗರಾಜಪ್ಪ, ಪದ್ಮರಾಜ ಶೆಟ್ಟಿ, ಕೆ. ರಮೇಶ್, ಆರ್. ರೀನಾ, ಶ್ರೀನಿವಾಸ್ ಎಚ್. ಬಾಗೋಡಿ ಮತ್ತು  ಎಂ.ಎಚ್ ಹರೀಶ್ ಸೇರಿದಂತೆ ಒಟ್ಟು ೮ ಸ್ಪರ್ಧಿಗಳು ಸ್ಪರ್ಧಿಸಿದ್ದರು. ಈ ಪೈಕಿ ಡಾ.ಎಚ್.ಎಸ್ ಗಿರೀಶ್, ಕೆ. ರಮೇಶ್, ಶ್ರೀನಿವಾಸ್ ಎಚ್. ಬಾಗೋಡಿ ಮತ್ತು ಆರ್. ರೀನಾ ಗೆಲುವು ಸಾಧಿಸಿದ್ದಾರೆ. 
    ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಯ್ಕೆಯಾದ ಕಾರ್ಯಕಾರಿ ಸಮಿತಿ ನೂತನ ಸದಸ್ಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಭಿನಂದನೆ ಸಲ್ಲಿಸಿದೆ. 

ವಿಐಎಸ್‌ಎಲ್‌ನಲ್ಲಿ ನ.೩ರವರೆಗೆ ಜಾಗೃತಾ ತಿಳುವಳಿಕೆ ಸಪ್ತಾಹ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ.೩ರವರೆಗೆ "ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಧ್ಯೇಯ ವ್ಯಾಕ್ಯದೊಂದಿಗೆ ಜಾಗೃತಾ ತಿಳುವಳಿಕೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ.೩ರವರೆಗೆ   "ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಧ್ಯೇಯ ವ್ಯಾಕ್ಯದೊಂದಿಗೆ ಜಾಗೃತಾ ತಿಳುವಳಿಕೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ. 
    ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹಾಗೂ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗಾಗಿ ಭಿತ್ತಿಪತ್ರ ವಿನ್ಯಾಸ(ಪೋಸ್ಟರ್ ಡಿಸೈನ್), ಪ್ರಬಂಧ, ಆಶುಭಾಷಣ, ರಂಗೋಲಿ, ರಸಪ್ರಶ್ನೆ ಮತ್ತು ಚಿತ್ರಕಲೆಯಂತಹ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
    ಕಾರ್ಖಾನೆಯ ಇಸ್ಪಾತ್ ಭವನದ ಮುಂಭಾಗ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಸರ್. ಎಂ. ವಿಶ್ವೇಶ್ವರಾಯರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.  
    ಪ್ರತಿಜ್ಞಾ ವಿಧಿಯನ್ನು ಕನ್ನಡದಲ್ಲಿ ಡಾ. ಕೆ.ಎಸ್ ಸುಜೀತ್ ಕುಮಾರ್(ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ) ಮತ್ತು ಹಿಂದಿಯಲ್ಲಿ ಶೋಭಾ ಶಿವಶಂಕರನ್ (ಪ್ರಧಾನ ವ್ಯವಸ್ಥಾಪಕರು ಹಣಕಾಸು ಮತ್ತು ಲೆಕ್ಕ) ಹಾಗು ಆಂಗ್ಲ ಭಾಷೆಯಲ್ಲಿ ಕೆ. ಹರಿಶಂಕರ್ (ಪ್ರಧಾನ ವ್ಯವಸ್ಥಾಪಕರು-ಸುರಕ್ಷತೆ) ಬೋಧಿಸಿದರು.
    ಟಿ. ರವಿಚಂದ್ರನ್ (ಪ್ರಧಾನ ವ್ಯವಸ್ಥಾಪಕರು-ಸೇವೆಗಳು), ಎಂ. ಸುಬ್ಬರಾವ್ (ಪ್ರಧಾನ ವ್ಯವಸ್ಥಾಪಕರು ಇ.ಎಂ.ಡಿ ಮತ್ತು ಸಿ.ಈ ಪ್ಲಾಂಟ್), ಎಲ್. ಪ್ರವೀಣ್ ಕುಮಾರ್ (ಪ್ರಧಾನ ವ್ಯವಸ್ಥಾಪಕರು- ಸಾರ್ವಜನಿಕ ಸಂಪರ್ಕ) ಮತ್ತು  ಅಜಯ್ ಡಿ. ಸೋಂಕುವಾರ್ (ಉಪ ಪ್ರಧಾನ ವ್ಯವಸ್ಥಾಪಕರು ಮೆಟೀರಿಯಲ್ ಮ್ಯಾನೇಜ್‌ಮೆಂಟ್)ರವರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗು ಕೇಂದ್ರ ಜಾಗೃತಾ ಕಮಿಷನರ್‌ರವರ ಸಂದೇಶಗಳನ್ನು ವಾಚಿಸಿದರು. 
    ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಸೇರಿದಂತೆ ಅಧಿಕಾರಿಗಳು, ಕಾರ್ಮಿಕರು ಇನ್ನಿತರರು ಉಪಸ್ಥಿತರಿದ್ದರು. 
    ತ್ರಿವೇಣಿ ಪ್ರಾರ್ಥಿಸಿ, ರಘುನಾಥ ಬಿ. ಅಷ್ಟಪುತ್ರೆ (ಪ್ರಧಾನ ವ್ಯವಸ್ಥಾಪಕರು-ವಿಜಿಲೆನ್ಸ್) ಸ್ವಾಗತಿಸಿ, ಎಲ್. ಕುಥಲನಾಥನ್ ಸಹಾಯಕ ಮಹಾಪ್ರಬಂಧಕರು (ವಿಜಿಲೆನ್ಸ್) ಕಾರ್ಯಕ್ರಮ ನಿರೂಪಿಸಿದರು. ಕೇದಾರನಾಥ (ಸೆಕ್ಷನ್ ಅಸೋಸಿಯೆಟ್ಸ್) ವಂದಿಸಿದರು.  
    ನ್ಯೂಟೌನ್ ಶ್ರೀ ಶಾರದಾ ಮಂದಿರದಲ್ಲಿ ನ.೪ರಂದು ಮಧ್ಯಾಹ್ನ ೨.೧೫ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ವಿತರಿಸುವುದರೊಂದಿಗೆ ಜಾಗೃತಿ ತಿಳುವಳಿಕೆ ಕುರಿತು ನಾಟಕವನ್ನು ಆಯೋಜಿಸಲಾಗಿದೆ.

ಪುನೀತ್‌ರಾಜ್‌ಕುಮಾರ್ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿ : ಬಿ.ಎಸ್ ಗಣೇಶ್

ಭದ್ರಾವತಿ ತಾಲೂಕು ಕಛೇರಿ ರಸ್ತೆ, ತಾಲೂಕು ಪಂಚಾಯಿತಿ ಸಮೀಪದ ಕನಕ ಆಟೋ ಚಾಲಕರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪುನೀತ್‌ರಾಜ್‌ಕುಮಾರ್‌ರವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಯುವ ಮುಖಂಡ ಬಿ.ಎಸ್ ಗಣೇಶ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ : ಕರ್ನಾಟಕ ರತ್ನ, ನಟ, ಸಮಾಜ ಸೇವಕ ದಿವಂಗತ ಪುನೀತ್‌ರಾಜ್‌ಕುಮಾರ್ ಸಮಾಜಕ್ಕೆ ಮಾದರಿಯಾಗಿದ್ದು, ಅವರ ಸೇವಾ ಕಾರ್ಯಗಳನ್ನು ನಾವುಗಳು ಸಹ ಮೈಗೂಡಿಸಿಕೊಳ್ಳಬೇಕೆಂದು ಯುವ ಮುಖಂಡ ಬಿ.ಎಸ್ ಗಣೇಶ್ ಹೇಳಿದರು. 
    ಅವರು ಮಂಗಳವಾರ ತಾಲೂಕು ಕಛೇರಿ ರಸ್ತೆ, ತಾಲೂಕು ಪಂಚಾಯಿತಿ ಸಮೀಪದ ಕನಕ ಆಟೋ ಚಾಲಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪುನೀತ್‌ರಾಜ್‌ಕುಮಾರ್‌ರವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಭೂಮಿ ಮೇಲೆ ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ನಮ್ಮ ಜನ್ಮ ಸಾರ್ಥಕವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು. 
    ಸ್ಥಳೀಯ ಮುಖಂಡರಾದ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್ ಕುಮಾರ್, ಡಿಎಸ್‌ಎಸ್ ಮುಖಂಡ ಪುಟ್ಟರಾಜ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಮುರುಗೇಶ್, ತಾಲೂಕು ಕುರುಬರ ಸಂಘದ ನಿರ್ದೇಶಕ ಮಂಜುನಾಥ್ ಕೊಯ್ಲಿ, ಕುಮಾರ್(ಮಾಸ್ಟರ್) ಹಾಗು ಆಟೋ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಆಟೋ ಚಾಲಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಪುಣ್ಯಸ್ಮರಣೆ ಅಂಗವಾಗಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಬಿ.ಎಸ್ ಗಣೇಶ್, ಆರ್. ಮಹೇಶ್ ಕುಮಾರ್ ಚಾಲನೆ ನೀಡಿದರು.  

ಪುನೀತ್‌ರಾಜ್‌ಕುಮಾರ್‌ರವರ ಪುಣ್ಯಸ್ಮರಣೆ ಅಂಗವಾಗಿ ಭದ್ರಾವತಿ ತಾಲೂಕು ಕಛೇರಿ ರಸ್ತೆ, ತಾಲೂಕು ಪಂಚಾಯಿತಿ ಸಮೀಪದ ಕನಕ ಆಟೋ ಚಾಲಕರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಬಿ.ಎಸ್ ಗಣೇಶ್, ಆರ್. ಮಹೇಶ್ ಕುಮಾರ್ ಚಾಲನೆ ನೀಡಿದರು. 

ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಗಣಹೋಮ

ಭದ್ರಾವತಿ ನಗರದ ನ್ಯೂಕಾಲೋನಿ ಎಸ್‌ಎವಿ ವೃತ್ತದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೧೪ ವರ್ಷದ ಶ್ರೀ ವಿನಾಯಕ ಮಹೋತ್ಸವ ಅಂಗವಾಗಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಮಂಗಳವಾರ ಗಣಹೋಮ ಜರುಗಿತು.
    ಭದ್ರಾವತಿ: ನಗರದ ನ್ಯೂಕಾಲೋನಿ ಎಸ್‌ಎವಿ ವೃತ್ತದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೧೪ ವರ್ಷದ ಶ್ರೀ ವಿನಾಯಕ ಮಹೋತ್ಸವ ಅಂಗವಾಗಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಮಂಗಳವಾರ ಗಣಹೋಮ ಜರುಗಿತು.
    ಕಳೆದ ವರ್ಷ ಸಹ ಕಾರ್ಖಾನೆ ಉಳಿವಿಗಾಗಿ ಗಣಹೋಮ ಹಮ್ಮಿಕೊಳ್ಳಲಾಗಿತ್ತು. ಇದೀಗ ೨ನೇ ಬಾರಿ ಗಣಹೋಮ ಜರುಗಿದ್ದು, ಕಾಗದನಗರ ೭ನೇ ವಾರ್ಡ್ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ್ ತರಳಿಮಠ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. 
    ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ, ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನ್ಯೂಕಾಲೋನಿ, ನ್ಯೂಟೌನ್, ಆಂಜನೇಯ ಅಗ್ರಹಾರ, ಬಾಲಭಾರತಿ, ಬೆಣ್ಣೆಕೃಷ್ಣ ಸರ್ಕಲ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು,  
    ನ.೨ರಂದು ಡೊಳ್ಳು ಕುಣಿತ, ತಮಟೆ ಹಾಗು ಮಂಗಳವಾದ್ಯಗಳೊಂದಿಗೆ ಉತ್ಸವ ಮೆರವಣಿಗೆಯೊಂದಿಗೆ ಸಂಜೆ ವಿನಾಯಕ ಮೂರ್ತಿ ವಿಸರ್ಜನೆ ನಡೆಯಲಿದೆ.