Tuesday, November 5, 2024

ಭೈರಾಪುರ ಕಿರು ಅರಣ್ಯದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ : ದಾಳಿ

ಆರೋಪಿ ವಿರುದ್ಧ ಕಾನೂನು ಕ್ರಮ : ಎಂ.ವಿ ಆಶೀಶ್ ರೆಡ್ಡಿ

ಆಶೀಶ್ ರೆಡ್ಡಿ
    ಭದ್ರಾವತಿ: ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಎನ್.ಆರ್ ಪುರ ತಾಲೂಕಿನ ಭೈರಾಪುರ ಸರ್ವೆ ನಂ.೪೪, ಭೈರಾಪುರ ಕಿರು ಅರಣ್ಯದ ೩ ಎಕರೆ ೭ ಗುಂಟೆ ಒತ್ತುವರಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ ಆಶೀಶ್ ರೆಡ್ಡಿ ತಿಳಿಸಿದರು. 
    ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅವರು, ಭದ್ರಾವತಿ ಅರಣ್ಯ ವಿಭಾಗ, ಎನ್.ಆರ್‌ಮರ ತಾಲೂಕು ಭೈರಾಪುರ ಸರ್ವೆ ನಂ.೪೪ ಭೈರಾಪುರ ಕಿರು ಅರಣ್ಯದಲ್ಲಿ ಚಿತ್ರಪ್ಪ ಯರಬಾಳು ಎಂಬುವರು ೩ ಎಕರೆ ೭ ಗುಂಟೆ ಒತ್ತುವರಿ ಮಾಡಿ ಅಕ್ರಮವಾಗಿ ಮಣ್ಣು ಗಣಿಗಾರಿಕೆಯಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ಸ್ಥಳ ತನಿಖೆ ಮಾಡಲಾಗಿ ದೂರು ಸತ್ಯವಾಗಿರುವುದು ಕಂಡು ಬಂದಿರುತ್ತದೆ ಈ ಒತ್ತುವರಿ ಪ್ರದೇಶ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಅಲ್ಲದೆ ಪರಿಸರ ಸೂಕ್ಷ್ಮ ವಲಯದ ಒಳಗೆ ಬರುತ್ತದೆ. ಈ ಹಿನ್ನಲೆಯಲ್ಲಿ ಅ.೨೮ ರಂದು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿರುತ್ತದೆ ಎಂದರು. 
    ಈ ಒತ್ತುವರಿ ಪ್ರದೇಶದಿಂದ ೨ ಟ್ರ್ಯಾಕ್ಟರ್ ಲೋಡ್ ಇಟ್ಟಿಗೆ ವಲಯ ಕಛೇರಿ ಆವರಣಕ್ಕೆ ಸಾಗಿಸಿ ಉಳಿದ ಸುಮಾರು ೧೦ ಟ್ರ್ಯಾಕ್ಟರ್ ಲೋಡ್ ಇಟ್ಟಿಗೆ  ಸ್ಥಳದಲ್ಲಿಯೇ ಮಹಜರ್ ನಡೆಸಿ ಸರ್ಕಾರದ ಪರವಾಗಿ ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಈ ಇಟ್ಟಿಗೆ ನಿಯಾಮಾನುಸಾ ವಿಲೇಗೊಳಿಸಲು ನ್ಯಾಯಲಯದ ಅನುಮತಿ ಪಡೆದುಕೊಳ್ಳಲಾಗಿರುತ್ತದೆ ಎಂದರು. 


ಗೂಗಲ್ ಮ್ಯಾಪ್ ಸರ್ವೆ ಮೂಲಕ ಒತ್ತುವರಿ ಗುರುತಿಸಿರುವುದು. 
    ಸುಮಾರು ೧ ರಿಂದ ೨ ವರ್ಷ ಒತ್ತುವರಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಿಂದ ಮಣ್ಣನ್ನು ತೆಗೆದು ಇಟ್ಟಿಗೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಅಲ್ಲದೆ ಯಾವುದೆ ಪರವಾನಿಗೆ ಇಲ್ಲದೆ ಸರ್ಕಾರಕ್ಕೆ ಯಾವುದೇ ರಾಜಸ್ವ ಪಾವತಿಸದೆ ಗಣಿಗಾರಿಗೆ ಚಟುವಟಿಕೆ ನಡೆಸಿರುವುದು ಸಹ ವಿಚಾರಣೆ ತಿಳಿದು ಬಂದಿರುತ್ತದೆ.  ಇದರಿಂದ ಪರಿಸರಕ್ಕೆ ಹಾನಿಯಾಗಿರುವುದಲ್ಲದೇ ಸರ್ಕಾರಕ್ಕೆ ಲಕ್ಷಾಂತರ ರು. ನಷ್ಟವಾಗಿರುತ್ತದೆ ಎಂದು ದೂರಿದರು. 
    ಈ ಪ್ರಕರಣದ ಕುರಿತು ವಿಚಾರಣೆಗಾಗಿ ನ.೪ ರಂದು ವಲಯ ಕಛೇರಿಗೆ ಹಾಜರಾಗಲು ನೋಟಿಸ್ ನೀಡಲಾಗಿರುತ್ತದೆ. ಈ ಪ್ರಕರಣದಲ್ಲಿ ಆರೋಪಿ ಚಿತ್ರಪ್ಪ ಯರಬಾಳು ದೂರುತ್ತಿರುವ ಹಾಗೆ ಅವರ ತಂದೆಯ ಮೇಲೆ ಇಲಾಖಾ ಸಿಬ್ಬಂದಿಗಳು ಹಲ್ಲೆ ಅಥವಾ ಜಾತಿ ನಿಂದನೆ ಮಾಡಿರುವುದಿಲ್ಲ. ವಾಸ್ತವಾಗಿ ಅ.೨೮ ರಂದು ಸ್ಥಳ ತನಿಖೆ ಸಂದರ್ಭದಲ್ಲಿ ಆರೋಪಿತರ ಕಡೆಯವರು ಇಲಾಖಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಇದರ ವೀಡಿಯೋ ಚಿತ್ರಿಕರಣ ಲಭ್ಯವಿರುತ್ತದೆ ಎಂದರು. 
    ಭೈರಾಪುರ ಸ.ನಂ.೪೪, ಭೈರಾಪುರ ಕಿರು ಅರಣ್ಯದಲ್ಲಿ ಬೂವಣ್ಣ ಎಂಬುವರ ಮತ್ತೊಂದು ಪ್ರಕರಣದಲ್ಲಿ ಅರಣ್ಯ ಒತ್ತುವರಿಯನ್ನು ಭೂಕಬಳಿಕೆ ವಿಶೇಷ ನ್ಯಾಯಲಯದ ತೀರ್ಪಿನಂತೆ ತೆರವುಗೊಳಿಸಿ ಇಲಾಖಾ ಸುಪರ್ದಿಗೆ ತೆಗೆದುಕೊಳ್ಳಲಾಗಿರುತ್ತದೆ. ಅಲ್ಲದೆ ಆರೋಪಿ ಅರಣ್ಯ ಒತ್ತುವರಿಯ ವಿರುದ್ಧ ೬೪ ಏ ನಡಾವಳಿಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಮತ್ತು ನ್ಯಾಯಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. 

ಉಪವಲಯ ಅರಣ್ಯಾಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ : ಜಿ.ಪಂ ಸಿಇಓ ಪತ್ರ



ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಬರೆದಿರುವ ಪತ್ರ. 
    ಭದ್ರಾವತಿ : ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ದೋಷಾರೋಪಣ ಪಟ್ಟಿ ಆಧಾರದ ಮೇಲೆ  ಉಪವಲಯ ಅರಣ್ಯಾಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪತ್ರ ಬರೆದು ಕೋರಿದ್ದಾರೆ. 
    ಉಪವಲಯ ಅರಣ್ಯಾಧಿಕಾರಿ ಸಂತೋಷ್ ರಾಠೋಡ್‌ರವರಿಗೆ ವಲಯ ಅರಣ್ಯಾಧಿಕಾರಿ ಪ್ರಭಾರ ನೀಡಿದ್ದ ಸಂದರ್ಭದಲ್ಲಿ ಜಿ.ಪಂ ವ್ಯಾಪ್ತಿಯ ವಿವಿಧ ನರ್ಸರಿ/ನೆಡುತೋಪು ಕಾಮಗಾರಿಗಳಲ್ಲಿ ಅಕ್ರಮ ಎಸಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್‌ರವರು ೨೦೨೧ರಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು)ಯವರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸೂಚಿಸಿದ್ದರು. 
    ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೋಷಾರೋಪಣ ಪಟ್ಟಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಿದ್ದರು.  ಉಪವಲಯ ಅರಣ್ಯಾಧಿಕಾರಿಗೆ ನೇಮಕಾತಿ ಪ್ರಾಧಿಕಾರ/ಶಿಸ್ತು ಪ್ರಾಧಿಕಾರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ವೃತ್ತರವರು ಆಗಿರುವುದರಿಂದ ತಮ್ಮ ಹಂತದಲ್ಲಿಯೇ ಆರೋಪವಿರುವ ಅಧಿಕಾರಿಯ ವಿರುದ್ಧ ಕರ್ನಾಟಕ ನಾಗರೀಕ ಸೇವೆ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ೧೯೫೭ ರ ನಿಯಮ ದಂತೆ ಶಿಸ್ತುಕ್ರಮವನ್ನು ಜರುಗಿಸಲು ಕೋರಿದ್ದಾರೆ. 
    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಪತ್ರದ ಆಧಾರದ ಮೇಲೆ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ತಕ್ಷಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆಗ್ರಹಿಸಿದ್ದಾರೆ. 
 

ಭದ್ರಾವತಿ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್. 

Monday, November 4, 2024

ವಕ್ಫ್ ಕಾಯ್ದೆ ದುರ್ಬಳಕೆ ವಿರೋಧಿಸಿ ತಾಲೂಕು ಕಛೇರಿ ಮುತ್ತಿಗೆಗೆ ಯತ್ನ

ಬಿಜೆಪಿ ಮುಖಂಡರು, ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಆಕ್ರೋಶ 

ಪ್ರಸ್ತುತ ರಾಜ್ಯದಲ್ಲಿ ವಕ್ಫ್ ಕಾಯ್ದೆ ದುರ್ಬಳಕೆ ಹಿನ್ನಲೆಯಲ್ಲಿ ರೈತರು, ಮಠಮಾನ್ಯಗಳು, ಹಿಂದೂ ದೇವಾಲಯಗಳು ಸೇರಿದಂತೆ ಎಲ್ಲರೂ ಆತಂಕದಲ್ಲಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಈ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವುದು ಖಂಡನೀಯ ಎಂದು ಆಕ್ರೋಶಪಡಿಸಿ ಸೋಮವಾರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಭದ್ರಾವತಿ ತಾಲೂಕು ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. 
     ಭದ್ರಾವತಿ : ಪ್ರಸ್ತುತ ರಾಜ್ಯದಲ್ಲಿ ವಕ್ಫ್ ಕಾಯ್ದೆ ದುರ್ಬಳಕೆ ಹಿನ್ನಲೆಯಲ್ಲಿ ರೈತರು, ಮಠಮಾನ್ಯಗಳು, ಹಿಂದೂ ದೇವಾಲಯಗಳು ಸೇರಿದಂತೆ ಎಲ್ಲರೂ ಆತಂಕದಲ್ಲಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಈ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವುದು ಖಂಡನೀಯ ಎಂದು ಆಕ್ರೋಶಪಡಿಸಿ ಸೋಮವಾರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ತಾಲೂಕು ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. 
ವಕ್ಫ್ ಕಾಯ್ದೆ ದುರ್ಬಳಕೆ ವಿರೋಧಿಸಿ ತಾಲೂಕು ಬಿಜೆಪಿ ಮಂಡಲ ಹಾಗು ಹೊಳೆಹೊನ್ನೂರು ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ವೇಳೆ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಏಕಾಏಕಿ ತಾಲೂಕು ಕಛೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ಪೊಲೀಸರು ಹೆಚ್ಚಿನ ಬಂದೋಬಸ್ತ್‌ನೊಂದಿಗೆ ವಿಫಲಗೊಳಿಸಿದರು.  ಅಲ್ಲದೆ ಈ ನಡುವೆ ಅಕ್ರಮಕ್ಕೆ ಸಾಕ್ಷಿಯಾದ ಪಹಣಿಗಳನ್ನು ಸುಟ್ಟು ಮುಖಂಡರು, ಕಾರ್ಯಕರ್ತರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು. 


ಇದಕ್ಕೂ ಮೊದಲು ನಗರದ ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಲ್ಪಸಂಖ್ಯಾತರ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್‌ಖಾನ್ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. 
ಈ ಹಿಂದೆ ಕಾಂಗ್ರೆಸ್‌ನವರು ರೂಪಿಸಿರುವ ವಕ್ಫ್  ಕಾಯ್ದೆ ಮುಸ್ಲಿಂ ತುಷ್ಠಿಕರಣಕ್ಕಾಗಿ, ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ. ಪ್ರಸ್ತುತ ಪಸ್ತುತ ರೈತರು, ಮಠಗಳ ಮಠಾಧೀಶರು, ಮಂದಿರದ ಮುಖ್ಯಸ್ಥರು ಆತಂಕಗೊಂಡಿದ್ದಾರೆ. ಕಂದಾಯ ದಾಖಲೆಗಳಲ್ಲಿ ತಮ್ಮ ಮಾಲೀಕತ್ವವದ ಆಸ್ತಿಗಳು ವಕ್ಫ್ ಪಾಲಾಗಿವೆಯೇ ಎನ್ನುವುದನ್ನು ದೃಢೀಕರಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಂದು ಕಂದಾಯ ದಾಖಲೆಗಳಲ್ಲಿ ರೈತರ ಹೆಸರುಗಳನ್ನು ತೆಗೆದು ಹಾಕದೆ ೧೯೭೪ರ ಗೆಜೆಟ್ ಪ್ರಕಾರ ಇದೀಗ ೫೦ ವರ್ಷಗಳ ನಂತರ ಇಂಡೀಕರಿಸಲು ಸೂಚನೆ ನೀಡಿದ್ದರ ಪರಿಣಾಮ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ ಆಕ್ರೋಶ ವ್ಯಕ್ತಪಡಿಸಿದರು. 
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕಳ್ಳಾಟ ಮಾಡಬಾರದು. ರೈತರಿಗೆ, ಹಿಂದುಗಳಿಗೆ ದ್ರೋಹ ಬಗೆಯಬಾರದು. ಯಾವ ರೈತರು ಕೃಷಿ ಜಮೀನನ್ನು ಸಾಗುವಳಿ ಮಾಡುತ್ತಿದ್ದಾರೋ, ಯಾವ ಮಠ- ಮಂದಿರಗಳಲ್ಲಿ ಹತ್ತು ಹಲವು ವರ್ಷಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿವೆಯೋ, ಅವೆಲ್ಲವುಗಳನ್ನು ವಕ್ಫ್ ಪಾಲಾಗಲು ಬಿಜೆಪಿ ಬಿಜೆಪಿ ಬಿಡುವುದಿಲ್ಲ. ಆಸ್ತಿ ಮಾಲೀಕರಿಗೆ ಯಾವ ಮಾಹಿತಿಯೂ ಕೊಡದೆ ಗೊತ್ತೇ ಇರದಂತೆ ಸೃಷ್ಟಿ ಮಾಡಿಕೊಂಡಿರುವ ವಕ್ಫ್ ಗೆಜೆಟ್ ಅಧಿಸೂಚನೆಗಳನ್ನು ರದ್ದುಗೊಳಿಸುವ ಕ್ರಮ ರಾಜ್ಯ ಸರ್ಕಾರ ತಕ್ಷಣ ಕೈಗೊಳ್ಳಬೇಕೆಂದು ಆಗ್ರಹಿಸಿದರು. 


ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗು ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಲ್ಲೇಶ್ ನೇತೃತ್ವವಹಿಸಿದ್ದರು.  ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ಶಂಕರ್‌ಮೂರ್ತಿ,  ಜಿಲ್ಲಾ ವಿಶೇಷ ಆಹ್ವಾನಿತರಾದ ಎಂ. ಮಂಜುನಾಥ್, ಎಚ್. ತೀರ್ಥಯ್ಯ,  ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ಬಿ.ಜಿ ರಾಮಲಿಂಗಯ್ಯ, ಬಜರಂಗದಳ ಪ್ರಮುಖರಾದ ರಾಘವನ್ ವಡಿವೇಲು, ವಿಶ್ವ ಹಿಂದೂ ಪರಿಷತ್ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ರೇಖಾ ಬೋಸ್ಲೆ ಹಾಗೂ  ಪಕ್ಷದ ಮಹಿಳಾ ಮೋರ್ಚಾ, ಯುವ ಮೋರ್ಚಾ, ರೈತ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Sunday, November 3, 2024

ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ದೀಪಾವಳಿ

ಭದ್ರಾವತಿ ನಗರದ ನ್ಯೂಟೌನ್ ಶ್ರೀ ಪ್ರಜಾಪಿತ  ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ದೀಪಾವಳಿ ಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ : ನಗರದ ನ್ಯೂಟೌನ್ ಶ್ರೀ ಪ್ರಜಾಪಿತ  ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ದೀಪಾವಳಿ ಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ವಿಶ್ವವಿದ್ಯಾಲಯದ ಮಾಲಾ ಅಕ್ಕ ದೀಪಾವಳಿ ಹಬ್ಬದ ಧಾರ್ಮಿಕ ಪರಂಪರೆ, ಮಹತ್ವ ಕುರಿತು ವಿವರಿಸಿದರು. ನಮ್ಮೆಲ್ಲರ ಬದುಕಿನಲ್ಲಿ ದೀಪಾವಳಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ವಿಶೇಷತೆಯಾಗಬೇಕು ಎಂದರು. 
    ದೀಪಾವಳಿ ಅಂಗವಾಗಿ ವಿಶ್ವವಿದ್ಯಾಲಯದಲ್ಲಿ ವಿಶೇಷ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಭಕ್ತರಿಗೆ ಮಾಲಾ ಅಕ್ಕ ಹಬ್ಬದ ಶುಭಾಶಯ ಕೋರಿ ಅಶೀರ್ವದಿಸಿದರು. ನಂತರ ಮಹಾ ಪ್ರಸಾದ ವಿತರಣೆ ನಡೆಯಿತು. 
    ವಿಶ್ವವಿದ್ಯಾಲಯದಲ್ಲಿ ಪ್ರತಿಯೊಂದು ಹಬ್ಬ ವಿಶೇಷತೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಅಲ್ಲದೆ ಭಕ್ತರ ಸಂಖ್ಯೆ ಸಹ ಏರಿಕೆಯಾಗುತ್ತಿದೆ.ಪ್ರತಿದಿನ ಬಾಬಾರವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. 

ಕ್ರೈಸ್ತ ಧರ್ಮದ ಸಮಾಧಿ ಹಬ್ಬ

ಭದ್ರಾವತಿ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಾಧಿ ಹಬ್ಬ ಕ್ರೈಸ್ತ ಭಕ್ತಾದಿಗಳಿಂದ ಆಚರಿಸಲಾಯಿತು. 
    ಭದ್ರಾವತಿ : ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಾಧಿ ಹಬ್ಬ ಕ್ರೈಸ್ತ ಭಕ್ತಾದಿಗಳಿಂದ ಆಚರಿಸಲಾಯಿತು. 
    ವಿಶ್ವ ಕ್ರೈಸ್ತ ಕ್ಯಾಥೋಲಿಕ್ ಧರ್ಮ ಸಭೆ ನಿರ್ಣಯದಂತೆ ನ.೨ರಂದು ಮೃತರ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕ್ರೈಸ್ತ ಧರ್ಮದ ಕುಟುಂಬಗಳಲ್ಲಿ ಮೃತರಾದ ಸದಸ್ಯರಿಗಾಗಿ ಅಂತ್ಯ ಕ್ರಿಯೆ ಸಲ್ಲಿಸಿದ ಸಮಾಧಿಯ ಸ್ಥಳದಲ್ಲಿ ಭಕ್ತರು ಅಂದು ಸೇರಿ ಧರ್ಮ ಗುರುಗಳೊಂದಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಪ್ರಾರ್ಥಿಸಲಾಗುವುದು. 
ಸಮಾಧಿಗಳ ಮೇಲೆ ಬೆಳೆದಿರುವ ಗಿಡ, ಪೊದೆಗಳನ್ನು ತೆಗೆದು, ಸ್ವಚ್ಚಗೊಳಿಸಿ ಸುಣ್ಣ ಬಣ್ಣಗಳನ್ನು ಹಚ್ಚಿ, ಹೂವಿನಿಂದ ಅಲಂಕರಿಸಿ, ಸಮಾಧಿಗಳ ಮೇಲೆ ಕ್ಯಾಂಡಲ್‌ಗಳನ್ನು ಹಚ್ಚಿ ನಿಧನರಾದ ಸಕಲರಿಗಾಗಿ ಪ್ರಾರ್ಥಿಸಲಾಯಿತು. 
    ಹಳೇ ನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ನ್ಯೂಟೌನ್ ಅಮಲೋದ್ಭವಿ ಮಾತೆ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜ, ಕಾಗದನಗರದ ಸೈಂಟ್ ಜೋಸೆಫ್ ದೇವಾಲಯ ಫಾದರ್ ಕ್ರಿಸ್ತುರಾಜ್, ಹಿರಿಯೂರು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಪರೇರ, ನೆರೆಯ ಧರ್ಮ ಕೇಂದ್ರದ ಗುರುಗಳು, ಧರ್ಮ ಭಗಿನಿಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಹಿರಿಯ ಪತ್ರಕರ್ತ ಕಣ್ಣಪ್ಪರಿಗೆ ಬಿಜೆಪಿ ಪಕ್ಷದಿಂದ ಸನ್ಮಾನ

ಅಲ್ ಇಂಡಿಯಾ ಮೊದಲಿಯಾರ್ ಸಂಘದ ನೂತನ ಅಧ್ಯಕ್ಷರಾದ ಭದ್ರಾವತಿ ನಗರದ ಹಿರಿಯ ಪತ್ರಕರ್ತ ಕಣ್ಣಪ್ಪರವರನ್ನು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಅಲ್ ಇಂಡಿಯಾ ಮೊದಲಿಯಾರ್ ಸಂಘದ ನೂತನ ಅಧ್ಯಕ್ಷರಾದ ನಗರದ ಹಿರಿಯ ಪತ್ರಕರ್ತ ಕಣ್ಣಪ್ಪರವರನ್ನು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಕಣ್ಣಪ್ಪರವರು ತಾಲೂಕು ತಮಿಳು ಸಂಘ ಹಾಗು ಮೊದಲಿಯಾರ್ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ತಾಲೂಕು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷರಾಗಿ, ಲಾರಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮೊದಲಿಯಾರ್ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
    ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತತ್ರಿ ಕಣ್ಣಪ್ಪರವರಿಗೆ ಉನ್ನತ ಮಟ್ಟದಲ್ಲಿ ಸಂಘದ ಜವಾಬ್ದಾರಿ ವಹಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು. 
    ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ಎಂ.ಮಂಜುನಾಥ್, ಎಚ್. ತೀರ್ಥಯ್ಯ, ಬಿ.ಕೆ ಶ್ರೀನಾಥ್, ಅಣ್ಣಪ್ಪ, ಚನ್ನೆಶ್, ರಾಜಶೇಖರ್ ಉಪ್ಪಾರ, ಅವಿನಾಶ್, ಪಿ.ಜಿ ರಾಮಲಿಂಗಯ್ಯ, ಕಾ.ರಾ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಸೇತುವೆಯಿಂದ ಕಾಲು ಜಾರಿ ನದಿಗೆ ಬಿದ್ದ ಯುವಕನನ್ನು ರಕ್ಷಿಸಿದ ಅಗ್ನಿಶಾಮಕ ಇಲಾಖೆ ತಂಡ

ಸೇತುವೆ ಮೇಲಿಂದ ಆಯ ತಪ್ಪಿ ಭದ್ರಾ ನದಿಗೆ ಬಿದ್ದ ಯುವಕನನ್ನು ಅಗ್ನಿಶಾಮಕ ಇಲಾಖೆ ತಂಡ ರಕ್ಷಿಸಿರುವ ಘಟನೆ ಭಾನುವಾರ ಬೆಳಗಿನ ಜಾವ ಭದ್ರಾವತಿಯಲ್ಲಿ ನಡೆದಿದೆ. 
    ಭದ್ರಾವತಿ: ಸೇತುವೆ ಮೇಲಿಂದ ಆಯ ತಪ್ಪಿ ಭದ್ರಾ ನದಿಗೆ ಬಿದ್ದ ಯುವಕನನ್ನು ಅಗ್ನಿಶಾಮಕ ಇಲಾಖೆ ತಂಡ ರಕ್ಷಿಸಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. 
    ನಗರದ ಬೈಪಾಸ್ ರಸ್ತೆ, ಆನೆಕೊಪ್ಪ ನಗರಸಭೆ ಪಂಪ್ ಹೌಸ್ ಸಮೀಪದ ಹೊಸ ಸೇತುವೆ ಮೇಲೆ ದುರ್ಘಟನೆ ನಡೆದಿದ್ದು, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡದ ಯಶಸ್ವಿ ಕಾರ್ಯಾಚರಣೆಯಿಂದಾಗಿ ಪವನ್(೨೫) ಪ್ರಾಣಾಪಾಯದಿಂದ ಪಾರಾಗಿದ್ದಾನೆ. 
    ಘಟನೆ ವಿವರ : 
    ಕಾರಿನಲ್ಲಿ ಬೆಂಗಳೂರಿಗೆ ತೆರಳಲು ಹೊಸದಾಗಿ ನಿರ್ಮಾಣಗೊಂಡಿರುವ ಸೇತುವೆ ಮೇಲೆ ಬೆಳಗಿನ ಜಾವ ಸುಮಾರು ೫.೩೦ರ ಸಮಯದಲ್ಲಿ ಕಾರು ನಿಲ್ಲಿಸಿ ಪೂಜೆ ಸಲ್ಲಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಕತ್ತಲೆ ಇದ್ದ ಕಾರಣ ಸೇತುವೆ ಒಂದು ಬದಿಯಲ್ಲಿ ನಿಂತಿದ್ದ ಪವನ್ ಆಕಸ್ಮಿಕವಾಗಿ ಕಾಲು ಜಾರಿ ಸೇತುವೆಯಿಂದ ನದಿಗೆ ಬಿದ್ದಿದ್ದಾನೆ. ಜೊತೆಯಲ್ಲಿದ್ದವರು ತಕ್ಷಣ ಆಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. 
    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ತಂಡ ಸುಮಾರು ೧ ಗಂಟೆ ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಪವನ್ ನದಿಗೆ ಬಿದ್ದ ಸ್ಥಳದಲ್ಲಿ ಹೆಚ್ಚಿನ ನೀರು ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಆಂಬ್ಯುಲೆನ್ಸ್ ನೆರವಿನೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. 
    ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್, ಸಿಬ್ಬಂದಿಗಳಾದ ಬಾಬು ಎಸ್. ಗೌಡ, ಪಿ. ಮಂಜುನಾಥ್, ಬಾಬಲು ಮಾನಿಕ ಬಾಯ್, ಪ್ರಜ್ವಲ್, ಉದಯ್, ಹಿರೇಮಠ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿರು.