Friday, November 8, 2024

ಅರಣ್ಯ ಇಲಾಖೆಯಲ್ಲಿನ ಅಕ್ರಮ, ಭ್ರಷ್ಟಾಚಾರದ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲು

ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಜಿ.ಆರ್ ಷಡಾಕ್ಷರಪ್ಪ ಆರೋಪ 

ಭದ್ರಾವತಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ನ್ಯಾಯವಾದಿ ಜಿ.ಆರ್ ಷಡಾಕ್ಷರಪ್ಪ, ಎಚ್.ಎಂ. ಶಿವಣ್ಣ, ಚಿತ್ರಪ್ಪ ಯರಬಾಳ, ಎಂ. ಅಣ್ಣಪ್ಪ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ: ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಯವರು ಅ. ೨೮ರಂದು ನರಸಿಂಹರಾಜಪುರ ತಾಲೂಕಿನ ಭೈರಾಪುರ-ಅಲ್ದಾರ ಗ್ರಾಮದಲ್ಲಿ ದಲಿತ ಮುಖಂಡ, ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಚಿತ್ರಪ್ಪ ಯರಬಾಳ ಅವರು ಅರಣ್ಯ ಭೂಮಿ ಒತ್ತುವರಿ ಮಾಡಿ ಆಕ್ರಮ ಮಣ್ಣು ಗಣಿಗಾರಿಕೆ ನಡೆಸಿದ್ದಾರೆಂದು ಆರೋಪಿಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ನ್ಯಾಯವಾದಿ ಜಿ.ಆರ್ ಷಡಾಕ್ಷರಪ್ಪ ಆರೋಪಿಸಿದರು. 
    ಅವರು ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಸುಳ್ಳು ಪ್ರಕರಣ ದಾಖಲಿಸಿ ದಲಿತರ ಮೇಲೆ ಹಲ್ಲೆ ನಡೆಸಿ, ಅರಣ್ಯ ಇಲಾಖೆಯ ಭ್ರಷ್ಟಾಚಾರದ ವಿರುದ್ಧದ ಹೋರಾಟ ಹತ್ತಿಕ್ಕುತ್ತಿರುವ ಪ್ರಯತ್ನ ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ.  ಚಿತ್ರಪ್ಪ ಯರಬಾಳ ಅವರ ವಿರುದ್ಧ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿ ಬಾಬು ರಾಜೇಂದ್ರಪ್ರಸಾದ್ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ರ ಕಲಂ ೩೩,೬೨ ಮತ್ತು ೮೦ರಂತೆ ಪ್ರಕರಣ ದಾಖಲಿಸಿದ್ದಾರೆ. ಅಂದೇನ್ಯಾಯಾಲಯದ ಅನುಮತಿ ಪಡೆದು, ಅಂದು ಮಧ್ಯಾಹ್ನವೇ ಅಲ್ದಾರದ ಸರ್ವೆ ನಂ.೪೪ರಲ್ಲಿರುವ ಚಿತ್ರಪ್ಪ ಯರಬಾಳ ಅವರ ತಂದೆ ಕೊಲ್ಲಪ್ಪ ಬಿನ್ ಮುಕುಂದಪ್ಪ ಇವರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಅಲ್ಲಿ ಸ್ವಂತ ಬಳಕೆಗೆಂದು ಸುಟ್ಟಿದ್ದ ಇಟ್ಟಿಗೆ ಗೂಡನ್ನು ಕೆಡವಿಹಾಕಿ, ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು, ಸುಮಾರು ೧೦ ಟ್ರ್ಯಾಕ್ಟರ್‌ನಷ್ಟು ಇಟ್ಟಿಗೆಗಳನ್ನು ಸ್ಥಳದಲ್ಲಿ ಅಮಾನತ್ತು ಪಡಿಸಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಸ್ವಂತ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿದ ಅಧಿಕಾರಿಗಳನ್ನು ತಡೆದ ೮೦ ವರ್ಷ ವಯಸ್ಸಿನ ಕೊಲ್ಲಪ್ಪ ಮತ್ತು ಅವರ ಪತ್ನಿ ನಾಗಮ್ಮ ಇವರುಗಳ ಮೇಲೆ ದೌರ್ಜನ್ಯವೆಸಗಿ, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ನಡೆಸಿದ್ದಾರೆಂದು ದೂರಿದರು.  
    ಅಲ್ದಾರ ಗ್ರಾಮದ ಸರ್ವೆ ನಂಬರ್ ೪೪ರಲ್ಲಿ ಪರಿಶಿಷ್ಟ ಜಾತಿ ಭೋವಿ ಜನಾಂಗದ ೩೦ ಕುಟುಂಬಗಳು ಸುಮಾರು ೫೦ ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದು, ಕಾಲಕಾಲಕ್ಕೆ ಸರ್ಕಾರಕ್ಕೆ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಾ ಬಂದಿರುತ್ತಾರೆ. ೧೯೯೧ರಲ್ಲಿ ಫಾರಂ ೫೦ ಅಡಿಯಲ್ಲಿ, ನಂತರ ಫಾರಂ ನಂ. ೫೩ರಡಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಗಳನ್ನು ಪರಿಶೀಲಿಸಿದ ಬಗರ್ ಹುಕುಂ ಕಮಿಟಿ ಕಾನೂನು ವ್ಯಾಪ್ತಿಯಲ್ಲಿ ಕಂದಾಯ ಭೂಮಿಯನ್ನು ತಮಗಿರುವ ಅಧಿಕಾರ ಬಳಸಿ ೨೦೧೭-೧೮ನೇ ಸಾಲಿನಲ್ಲಿ ಈ ೩೦ ಕುಟುಂಬಗಳಿಗೂ ತಲಾ ೨ ಎಕರೆಯಿಂದ ೩ ಎಕರೆಯವರೆಗೂ ರೈತರು ಸ್ವಾಧೀನದಲ್ಲಿದ್ದ ಪ್ರಮಾಣಕ್ಕನುಗುಣವಾಗಿ ಮಂಜೂರು ಮಾಡಿದ್ದು, ಕೊಲ್ಲಪ್ಪ ಬಿನ್ ಮುಕುಂದಪ್ಪ ಇವರಿಗೂ ೨ ಎಕರೆ ೨೫ ಗುಂಟೆ ಜಮೀನು ಮಂಜೂರಾತಿ ಮಾಡಿದ್ದು, ಇವರೆಲ್ಲರ ಹೆಸರಿಗೆ ಪಹಣಿ ಮತ್ತು ಖಾತೆ ದಾಖಲಾಗಿರುತ್ತದೆ ಎಂದರು. 
    ೨೦೧೯ನೇ ಸಾಲಿನಲ್ಲಿ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ಕೆಲ ಪರಿಶಿಷ್ಟ ಜಾತಿಗೆ ಸೇರಿದ ಸಾಗುವಳಿದಾರರ ವಿರುದ್ಧ ಮಾತ್ರ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿರುತ್ತದೆ. ಅದರಂತೆ ಕೊಲ್ಲಪ್ಪ ಬಿನ್ ಮುಕುಂದಪ್ಪ ಇವರ ವಿರುದ್ಧವೂ ಪ್ರಕರಣ ಸಂಖ್ಯೆ: ಎಲ್.ಜಿ.ಸಿ. (ಜಿ) ನಂ. ೧೫೦೭/೨೦೧೯ರಂತೆ ದಾವೆ ಹೂಡಲಾಗಿದೆ. ಆದರೆ, ಕರ್ನಾಟಕ ಸರ್ಕಾರದ ರಾಜ್ಯಪತ್ರ ಸಂವ್ಯಶಾಇ ಶಾಸನ ೨೦೨೨, ಬೆಂಗಳೂರು ದಿನಾಂಕ: ೧೩-೧೦-೨೦೨೨ರಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಅಧಿನಿಯಮ, ೨೦೨೨ರಲ್ಲಿ ಈ ಎಲ್ಲಾ ದಾವೆಗಳನ್ನು ಮುಕ್ತಾಯಗೊಳಿಸಿದೆ. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಚಿತ್ರಪ್ಪ ಯರಬಾಳ ಅವರು ಜಮೀನಿನ ಮಾಲೀಕರಲ್ಲದಿದ್ದರೂ, ಅವರು ಸ್ಥಳದಲ್ಲಿ ಇಲ್ಲದಿದ್ದರೂ ಕೊಲ್ಲಪ್ಪ ಅವರ ಖಾತೆ ಜಮೀನನ್ನೇ ಚಿತ್ರಪ್ಪ ಯರಬಾಳ ಅವರು ೩ ಎಕರೆ ೦೭ ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡುವ ಮೂಲಕ ಅಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 
    ಈ ಹಿಂದೆ ನ್ಯಾಯಾಲಯಕ್ಕೆ ೨ ಎಕರೆ ೩೨ ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಕೇಸು ದಾಖಲಿಸಿದ್ದ ಅಧಿಕಾರಿಗಳು ಈಗ ಅದೇ ಜಮೀನನ್ನು ೩ ಎಕರೆ ೭ ಗುಂಟೆ ಎಂದು ಸುಳ್ಳು ದೂರು ದಾಖಲಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯಲ್ಲಿನ ಅಕ್ರಮ ಹಾಗು ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧದ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಚಿತ್ರಪ್ಪ ಯರಬಾಳ ಅವರ  ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಸರ್ಕಾರ ತಕ್ಷಣ ಅರಣ್ಯ ಇಲಾಖೆ ಅಕ್ರಮಗಳ ವಿರುದ್ಧ ತನಿಖೆ ನಡೆಸಿ ಭ್ರಷ್ಟಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಎಚ್.ಎಂ. ಶಿವಣ್ಣ, ಚಿತ್ರಪ್ಪ ಯರಬಾಳ, ಎಂ. ಅಣ್ಣಪ್ಪ, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, November 7, 2024

ನ.೮ರಂದು ಕನ್ನಡರಾಜ್ಯೋತ್ಸವ, ದೀಪಾವಳಿ ಆಚರಣೆ

    ಭದ್ರಾವತಿ: ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ನ.೮ರಂದು ಸಂಜೆ ೭ ಗಂಟೆಗೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ, ದೀಪಾವಳಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ಉಪನ್ಯಾಸ ನೀಡಲಿದ್ದಾರೆ. ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗೌವರ್ನರ್ ದಿವಾಕರಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಮಹೇಶ್ ಕುಮಾರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎನ್. ಶಿವಕುಮಾರ್ ಮತ್ತು ಖಜಾಂಚಿ ಕೆ.ಜಿ ರಾಜ್‌ಕುಮಾರ್  ಉಪಸ್ಥಿತರಿರುವರು. 
    ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನಾಯ್ಡು ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. 

ನ.೮ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ: ಮೆಸ್ಕಾಂ ಕೂಡ್ಲಿಗೆರೆ ಶಾಖಾ ವ್ಯಾಪ್ತಿಯ ೧೧ ಕೆವಿ ಮಾರ್ಗಗಳಲ್ಲಿ ತುರ್ತು ನಿರ್ವಹಣೆ ಕೆಲಸವಿರುವುದರಿಂದ ನ.೮ ಶುಕ್ರವಾರ ಬೆಳಿಗ್ಗೆ ೯.೩೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಅತ್ತಿಗುಂದ, ಗುಡ್ಡದನೇರಲಕೆರೆ, ಕೋಮಾರನಹಳ್ಳಿ, ಕುಮರಿನಾರಾಯಣಪುರ, ಸೀತಾರಾಂಪುರ, ಹೊಸಹಳ್ಳಿ, ಸಿದ್ದರಮಟ್ಟಿ, ದೇವರಹಳ್ಳಿ, ಸಂಜೀವನಗರ, ಜಯನಗರ, ತಿಪ್ಲಾಪುರ, ಬಸಲೀಕಟ್ಟೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳ ೧೧ ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಲು ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ಬಿ.ಓ ಸುದರ್ಶನ್ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆ

ಭದ್ರಾವತಿ ನಗರದ ನಿವಾಸಿ, ಕರ್ನಾಟಕ ಯೋಗ ರತ್ನ ಬಿ.ಓ ಸುದರ್ಶನ್ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. 
     ಭದ್ರಾವತಿ : ನಗರದ ನಿವಾಸಿ, ಕರ್ನಾಟಕ ಯೋಗ ರತ್ನ ಬಿ.ಓ ಸುದರ್ಶನ್ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. 
    ಇತ್ತೀಚೆಗೆ ಯೋಗ ಫೆಡರೇಷನ್ ಆಫ್ ಇಂಡಿಯ ಹಾಗೂ ಹಿಮಾಚಲ ಯೋಗ ಸಂಸ್ಥೆ ವತಿಯಿಂದ ಹಿಮಾಚಲ ಪ್ರದೇಶದ ಊನ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ೪೯ನೇ ಸಬ್-ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸಂಯೋಜಕರಾಗಿ ಮತ್ತು ತೀರ್ಪುಗಾರರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. 
    ಇವರು ಏಷ್ಯನ್ ಯೋಗ ಫೆಡರೇಷನ್ ಆಶ್ರಯದಲ್ಲಿ ಮುಂದಿನ ವರ್ಷ ೨೦೨೫ ಜನವರಿ ತಿಂಗಳಿನಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ೧೦ನೇ ಏಷ್ಯನ್ ಯೋಗ ಕ್ರೀಡಾ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾರತೀಯ ತಂಡ ಪ್ರತಿನಿಧಿಸುತ್ತಿದ್ದು, ಅಲ್ಲದೆ ಏಷ್ಯದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 
    ಸುದರ್ಶನ್ ಅವರನ್ನು ಯೋಗ ಫೆಡರೇಷನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷೆ ಇಂದು ಅಗರ್ವಾಲ್ ಸನ್ಮಾನಿಸಿದರು. ಹಿಮಾಚಲ ಪ್ರದೇಶದ ಸಂಸತ್ ಸದಸ್ಯ, ಕೇಂದ್ರ ಕ್ರೀಡಾ ಮತ್ತು ಯುವಜನ ಮಾಜಿ ಸಚಿವ ಅನುರಾಗ ಠಾಕೂರ್ ಮತ್ತು ಏಷ್ಯಯನ್ ಯೋಗ ಫೆಡರೇಷನ್ ಅಧ್ಯಕ್ಷ ಅಶೋಕ್ ಕುಮಾರ್ ಅಗರ್ವಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸುದರ್ಶನ್‌ರವರು ನಗರದಲ್ಲಿ ಬಾಲ್ಯದಿಂದಲೂ ಸುಮಾರು ೩೦ ವರ್ಷಗಳಿಂದ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ೧೯೮೯ ರಿಂದ ೨೦೦೦ರವರೆಗೆ ಯೋಗ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಹಲವಾರು ಪದಕಗಳನ್ನು ಗಳಿಸಿ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.  
    ಇವರು ಪ್ರಸ್ತುತ ಬೆಂಗಳೂರಿನಲ್ಲಿ ಬಿಎಸ್‌ಕೆ ೩ ಹಂತದಲ್ಲಿ ವೈಐಸಿ-ವಿಐಎಎಸ್‌ಎ ಶಿಕ್ಷಕರ ತರಬೇತಿ ನೀಡುತ್ತಿದ್ದು, ಅಲ್ಲದೆ ಡಾ|| ಬಿ.ಕೆ.ಎಸ್ ಅಯ್ಯಂಗಾರ್ ಯೋಗ ತರಗತಿಗಳನ್ನು ಕೂಡಾ ನಡೆಸುತ್ತಿದ್ದಾರೆ. ಇವರನ್ನು ನಗರದ ಯೋಗ ತರಬೇತಿದಾರರು, ಯೋಗ ಅಭಿಮಾನಿಗಳು, ಗಣ್ಯರು ಅಭಿನಂದಿಸಿದ್ದಾರೆ. 
 

Wednesday, November 6, 2024

ಸಿಇಎನ್ ಪೊಲೀಸರ ಕಾರ್ಯಾಚರಣೆ : ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರ ಸೆರೆ

೪ ಕೆ.ಜೆ ೪೬೧ ಗ್ರಾಂ. ಗಾಂಜಾ ಸೇರಿ ಒಟ್ಟು ೨.೧೩ ಲಕ್ಷ ರು. ಮೌಲ್ಯದ ಸ್ವತ್ತು ವಶ 

ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಸಿಇಎನ್ ಪೊಲೀಸರು ಬಂಧಿಸಿ  ೪ ಕೆ.ಜೆ ೪೬೧ ಗ್ರಾಂ. ಗಾಂಜಾ ವಶಪಡಿಸಿಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಬಿಳಿಕಿ ಕ್ರಾಸ್‌ನಲ್ಲಿ ನಡೆದಿದೆ. 
    ಭದ್ರಾವತಿ: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಸಿಇಎನ್ ಪೊಲೀಸರು ಬಂಧಿಸಿ  ೪ ಕೆ.ಜೆ ೪೬೧ ಗ್ರಾಂ. ಗಾಂಜಾ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಿಳಿಕಿ ಕ್ರಾಸ್‌ನಲ್ಲಿ ನಡೆದಿದೆ. 
    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ನಿವಾಸಿ ಮೊಹಮ್ಮದ್ ಅಕ್ರಂ(೨೬) ಮತ್ತು ಸತ್ಯಸಾಯಿ ನಗರದ ನಿವಾಸಿ ಅಬ್ದುಲ್ ರಜಾಕ್(೩೫) ಇಬ್ಬರನ್ನು ಬಂಧಿಸಿ ಸುಮಾರು ೧.೪೦ ಲಕ್ಷ ರು. ಮೌಲ್ಯದ ೪ ಕೆ.ಜಿ ೪೬೧ ಗ್ರಾಂ. ತೂಕದ ಒಣ ಗಾಂಜಾ ಮತ್ತು ಸುಮಾರು ೩ ಸಾವಿರ ರು. ಮೌಲ್ಯದ ಮೊಬೈಲ್ ಹಾಗೂ ಸುಮಾರು ೭೦ ಸಾವಿರ ರು. ಮೌಲ್ಯದ ದ್ವಿ ಚಕ್ರ ವಾಹನ ಸೇರಿ ಒಟ್ಟು ೨.೧೩ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. 
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ.ಜಿ ಕಾರಿಯಪ್ಪ  ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆ ಕೆ. ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ ಪೊಲೀಸ್ ನಿರೀಕ್ಷಕ ಪಿ.ಐ ಮಂಜುನಾಥ್ ನೇತೃತ್ವ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.  

ವಿಕಲಚೇತನರೊಂದಿಗೆ ಹಟ್ಟುಹಬ್ಬ ಆಚರಣೆ

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ನವೀನ್ ನಾಗರಾಜ್ ಮತ್ತು ಸಿಂಧು ದಂಪತಿ ಪುತ್ರಿ ನಿರಾಲಿ ಹಾಗು ಸವಿತಾ ವಿಶ್ವನಾಥ್‌ರವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ನವೀನ್ ನಾಗರಾಜ್ ಮತ್ತು ಸಿಂಧು ದಂಪತಿ ಪುತ್ರಿ ನಿರಾಲಿ ಹಾಗು ಸವಿತಾ ವಿಶ್ವನಾಥ್‌ರವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಅಂಧ ವಿಕಲಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸಂಭ್ರಮ ಹಂಚಿಕೊಳ್ಳಲಾಯಿತು. ಸಾಮಾಜಿಕ ಸೇವೆ ಪ್ರಮುಖ ಗುರಿಯಾಗಿಸಿಕೊಂಡಿರುವ ಲಯನ್ಸ್ ಕ್ಲಬ್‌ನಲ್ಲಿ ದಂಪತಿ ತೊಡಗಿಸಿಕೊಂಡಿದ್ದು, ಪುತ್ರಿ ನಿರಾಲಿ ಹುಟ್ಟುಹಬ್ಬ ಸಮಾಜಕ್ಕೆ ಮಾದರಿಯಾಗಬೇಕೆಂಬ ಆಶಯ ವ್ಯಕ್ತಪಡಿಸಲಾಯಿತು. 
    ಲಯನ್ಸ್ ಪ್ರಮುಖರಾದ ರಾಮಸ್ವಾಮಿ ನಾಯ್ಡು, ಶಿವಕುಮಾರ್, ರಾಜಕುಮಾರ್, ಹೆಬ್ಬಂಡಿ ನಾಗರಾಜ್, ಆರ್. ಉಮೇಶ್, ಶ್ರೀನಿವಾಸ್, ಮಂಜುನಾಥ್,  ವಿಶ್ವನಾಥ್, ಎಂ.ಎಸ್ ಮಂಜುನಾಥ್,  ಡಾರತಿ, ನಿರ್ಮಲ, ಸವಿತಾ ಹಾಗು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ  ಹಾಗು  ಬಿ.ಆರ್ ಪ್ರಾಜೆಕ್ಟ್ ಲಯನ್ಸ್  ಕ್ಲಬ್  ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
 

ನಿವೃತ್ತ ಇಂಜಿನಿಯರ್ ಹನುಮಗೌಡ ನಿಧನ

ಹನುಮಗೌಡ 
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಇಂಜಿನಿಯರ್ ಹನುಮಗೌಡ(೭೫) ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಪುತ್ರಿ ಹಾಗು ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ನಗರದ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಹನುಮಗೌಡರವರು ವಿಐಎಸ್‌ಎಲ್ ಕಾರ್ಖಾನೆಯ ಸಿ.ಇ ಪ್ಲಾಂಟ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ನಿಧನಕ್ಕೆ ನಿವೃತ್ತ ಕಾರ್ಮಿಕರ ಸಂಘ ಸಂತಾಪ ಸೂಚಿಸಿದೆ.