ಕ್ರಮಕ್ಕೆ ಆಗ್ರಹಿಸಿ ನ.೨೬ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ
![](https://blogger.googleusercontent.com/img/a/AVvXsEhuV0Ql-KcRiDIfvFk7d2gYJIuE85YmmUMkNPcsp_cSJc9YyXbGoOxmFAKI8KwIssM-gLCdnjL94WIu7gS_cGl0apqlcYIVDx1CGxOcK7hn_Uv5mxi6Jr2wlgbFh3zXp2sC0IwrHoJfBCvi4y1EB_jtLtQWzAyxYoSMnn-GCFtSGYpIGClYhGUiKfhf6FB7=w400-h300-rw)
ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು.
ಭದ್ರಾವತಿ : ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣರವರ ವಿರುದ್ಧ ಜಾತಿನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸುವ ಜೊತೆಗೆ ನ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಈ ಸಂಬಂಧ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿ.ಟಿ.ಸಿ.ಎಲ್ ಕಾಯ್ದೆ ಪ್ರಕಾರ ಪ.ಜಾ/ವರ್ಗದ ಜನರಿಗೆ ಸರ್ಕಾರ ನೀಡಿದಂತಹ ಜಮೀನು ಸರ್ಕಾರದ ಅನುಮತಿ ಇಲ್ಲದೆ ಮಾರಾಟವಾಗಲೀ, ಭೋಗ್ಯವಾಗಲೀ ಇನ್ನಿತರೆ ಯಾವುದೇ ರೂಪದಲ್ಲಿ ಮಾರಾಟ ಮಾಡುವುದು ನಿಷೇಧವಾಗಿದೆ. ಒಂದು ವೇಳೆ ಸರ್ಕಾರದ ಅನುಮತಿ ಪಡೆಯದೆ ಪರಬಾರೆ ಮಾಡಿದರೆ ಪಿ.ಟಿ.ಸಿ.ಎಲ್ ಕಾಯ್ದೆಯ ಪ್ರಕಾರ ಪುನಃ ಮೂಲ ಮಂಜೂರುದಾರರಿಗೆ ಜಮೀನು ಹಿಂತಿರುಗಿಸಿ ಅವರ ಹೆಸರಿಗೆ ವರ್ಗಾವಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ಈ ಕಾಯ್ದೆ ಕುರಿತು ಸರಿಯಾಗಿ ತಿಳಿದುಕೊಳ್ಳದೆ ಮನಸ್ಸಿಗೆ ಬಂದಂತೆ ತೀರ್ಪು ನೀಡಿ ಆದೇಶಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ತಾಲೂಕಿನ ಹೆಬ್ಬಂಡಿ ಲಕ್ಷ್ಮೀಪುರದ ನಿವಾಸಿ ವೆಂಕಟರಾಮಣ್ಣ ಬಿನ್ ವೆಂಕಟಸ್ವಾಮಯ್ಯ ಎಂಬ ಭೋವಿ ಜಾತಿಯ ಇವರುಗಳ ಜಮೀನು ೧.೨೦ ಗುಂಟೆ ಸರ್ಕಾರವು ದರಕಾಸ್ತ್‌ನಲ್ಲಿ ಮಂಜೂರು ಮಾಡಿದ್ದು, ಲಕ್ಷ್ಮೀಪುರದ ನಿವಾಸಿ ಬ್ಯಾಡ್ ತಿಮ್ಮೇಗೌಡ ಎಂಬ ವ್ಯಕ್ತಿ ೨೦೦೦ ರು. ಕೈ ಸಾಲಕ್ಕೆ ಸದರಿ ಹಣಕ್ಕೆ ಆಧಾರವಾಗಿ ಜಮೀನನ್ನು ಭೋಗ್ಯಕ್ಕೆ ಪಡೆದಿದ್ದು, ನಂತರ ಬ್ಯಾಡ್ ತಿಮ್ಮೇಗೌಡ ಲಕ್ಷ್ಮೀಪುರ ಗ್ರಾಮದ ನಿವಾಸಿ ಕೆಂಪಮ್ಮ ಕೋಂ ಸಿದ್ದೇಗೌಡ ರವರ ಹೆಸರಿಗೆ ಅಕ್ರಮವಾಗಿ ಮಾರಾಟ ಮಾಡಿರುತ್ತಾರೆ. ಈ ವಿಚಾರವಾಗಿ ಪ್ರಶ್ನೆ ಮಾಡಿದ ವೆಂಕಟರಾಮಣ್ಣನವರ ಮೇಲೆ ಅನೇಕ ಬಾರಿ ಹಲ್ಲೆ ಮಾಡಿ ದೌರ್ಜನ್ಯ ನಡೆಸಿರುತ್ತಾರೆ ಎಂದು ಆರೋಪಿಸಿದರು.
ಶ್ರೀಮಂತರಾದ ಬ್ಯಾಡ್ ತಿಮ್ಮೇಗೌಡ ದೌರ್ಜನ್ಯ ದಬ್ಬಾಳಿಕೆಯಿಂದ ಜಮೀನನ್ನು ಪಡೆದಿದ್ದರಿಂದ ಇವರ ವಿರುದ್ಧ ೧೯೭೮ರ ಪಿ.ಟಿ.ಸಿ.ಎಲ್ ಕಾಯ್ದೆಯ ಪ್ರಕಾರ ಮಾನ್ಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ೧೯೯೩ ರಲ್ಲಿ ವೆಂಕಟರಾಮಣ್ಣ ರವರ ಪರವಾಗಿ ಆದೇಶವಾಗಿ ಸ್ವತಃ ಅಂದಿನ ಉಪವಿಭಾಗಾಧಿಕಾರಿಗಳು ಜಮೀನು ಮತ್ತು ಜಮೀನಿನಲ್ಲಿ ಇದ್ದ ಮನೆಯನ್ನು ಬಿಡಿಸಿಕೊಟ್ಟಿರುತ್ತಾರೆ. ನಂತರದಲ್ಲಿ ಕೆಂಪಮ್ಮ ಮತ್ತು ಸಿದ್ದೇಗೌಡ ರವರು ಎ.ಸಿ/ಡಿ.ಸಿ ಕೋರ್ಟ್, ಸುಪ್ರೀಂ ಕೋರ್ಟ್ ವರೆಗೂ ಪ್ರಕರಣ ಮುಂದುವರೆಸಿಕೊಂಡು ಹೋಗಿದ್ದು, ಆದರೆ ಕೆಂಪಮ್ಮರವರ ವಿರುದ್ಧ ಖುಲಾಸೆಗೊಂಡಿರುತ್ತದೆ ಎಂದರು.
ವೆಂಕಟರಾಮಣ್ಣನವರು ಅವರ ಮಕ್ಕಳಾದ ಲಕ್ಷ್ಮಮ್ಮ, ನಾಗರತ್ನ, ಜಯಮ್ಮ, ಮತ್ತು ಸೀನಪ್ಪ ಎಂಬುವವರಿಗೆ ವಿಲ್ ರಿಜಿಸ್ಟರ್ ಮಾಡಿಸಿದ್ದರು. ಆದರೆ ಖಾತೆ ಮಾಡುವ ಮುನ್ನವೆ ಜಮೀನು ಉಳುಮೆ ಮಾಡಲು ಬಿಡದೆ ಕೆಂಪಮ್ಮ ಮತ್ತು ಮಕ್ಕಳು ಪದೇ ಪದೇ ಗಲಾಟೆ ನಡೆಸಿ ಜಮೀನಿಗೆ ಬಾರದಂತೆ ತೊಂದರೆ ನೀಡುತ್ತಿದ್ದರು. ಜಮೀನು ಸಾಗುವಳಿ ಮಾಡುತ್ತಿದ್ದಾಗ ಪದೇ ಪದೇ ಕೆಂಪಮ್ಮ ಮತ್ತು ಅವರ ಮಕ್ಕಳು ನಾಗರಾಜ. ಗೌತಮಿ, ಬೇಬಿಯಮ್ಮ. ರಾಘವೇಂದ್ರ, ದೇವರಾಜ ಸೇರಿದಂತೆ ಇನ್ನಿತರರು
ಹಲ್ಲೆ ನಡೆಸಿ ಜಾತಿ ನಿಂದನೆ ಮಾಡುತ್ತಿದ್ದರು. ಈ ವೇಳೆ ೨ ಬಾರಿ ನ್ಯೂಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ. ೧೨ ರಂದು ತಹಶೀಲ್ದಾರ್, ಆರ್.ಐ/ವಿ.ಎ ಸರ್ವೆ ಇಲಾಖೆಯ ಅಧಿಕಾರಿಗಳು, ನ್ಯೂಟೌನ್ ಪೋಲಿಸರು ಸುಮಾರು ೨೦ ಮಂದಿ ವೆಂಕಟರಾಮಣ್ಣರವರ ಮಕ್ಕಳ ರಕ್ಷಣೆಗಾಗಿ ನಿಂತು ಜಮೀನಿನಲ್ಲಿ ಕೆಲಸ ಮಾಡಲು ರಕ್ಷಣೆ ನೀಡಿ ಎದುರುದಾರರಿಗೆ ಯಾವುದೇ ತೊಂದರೆ ನೀಡದಂತೆ ಎಚ್ಚರಿಸಿದರು. ಈ ಬಗ್ಗೆ ವೀಡಿಯೋ ಸಹ ದಾಖಲಾಗಿರುತ್ತದೆ. ಮತ್ತೊಮ್ಮೆ ಆ.೨೦ ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರವೇಶ ಮಾಡಿ ಬಿಸಿಲಿನ ತಾಪಕ್ಕೆ ಕಟ್ಟಿಕೊಂಡಿದ್ದ ತಾರ್ಪಲ್/ಗೂಟಗಳನ್ನು ಕಿತ್ತುಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಮತ್ತೊಮ್ಮೆ ದೂರು ದಾಖಲಾಗಿರುತ್ತದೆ ಎಂದರು.
ಒಮ್ಮೆ ಪಿ.ಟಿ.ಸಿಎಲ್ ಕಾಯ್ದೆಯ ಪ್ರಕಾರ ಬಿಡಿಸಿಕೊಟ್ಟ ಜಮೀನಿನ ವಿಚಾರದಲ್ಲಿ ಎ.ಸಿ/ಡಿ.ಸಿ/ತಹಶೀಲ್ದಾರ್ ಆಗಲೀ ತೀರ್ಪು ನೀಡಲು ಅವಕಾಶ ಇರುವುದಿಲ್ಲ. ಆದರೆ ಉಪವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣರವರು ಎದುರುದಾರರ ಪರವಾಗಿ ಈ ಪ್ರಕರಣದಲ್ಲಿ ಕಂದಾಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಬಾರದು ಎಂದು ತಿಳುವಳಿಕೆ ನೀಡಿದ್ದಾರೆ. ಇದೆ ಉಪವಿಭಾಗಾಧಿಕಾರಿ ಜ.೨೫ ರಂದು ಸೀನಪ್ಪ ರವರ ಕುಟುಂಬಕ್ಕೆ ಪೋಲಿಸ್ ರಕ್ಷಣೆ ನೀಡಬೇಕೆಂದು ಸಹ ತಿಳುವಳಿಕೆ ನೀಡಿದ್ದಾರೆ. ಎರಡನ್ನೂ ಕೂಲಂಕುಶವಾಗಿ ಪರಿಶೀಲಿಸದೆ ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಇವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಹಿನ್ನಲೆಯಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬ್ರಹ್ಮಲಿಂಗಯ್ಯ, ಲಕ್ಷ್ಮಮ್ಮ, ಜಯಮ್ಮ, ನಾಗರತ್ನಮ್ಮ, ಸೀನಪ್ಪ, ರಾಜುಸ್ವಾಮಿ, ವೀರೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.