Monday, December 16, 2024

ಪುರಸಭೆ ಮಾಜಿ ಸದಸ್ಯ ಎನ್. ಕೃಷ್ಣಮೂರ್ತಿ ನಿಧನ

    ಎನ್. ಕೃಷ್ಣಮೂರ್ತಿ
    ಭದ್ರಾವತಿ : ನಗರದ ಹಿರಿಯ ಕಾಂಗ್ರೆಸ್ ಮುಖಂಡ, ಪುರಸಭೆ ಮಾಜಿ ಸದಸ್ಯ ಎನ್. ಕೃಷ್ಣಮೂರ್ತಿ(೭೮) ಸೋಮವಾರ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರರು ಇದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಕೃಷ್ಣಮೂರ್ತಿಯವರು ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿ ವಾಸಿಸುತ್ತಿದ್ದು, ಹಲವು ವರ್ಷಗಳ ಕಾಲ ಹಳೇನಗರದ ಮಾಡಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪುರಸಭೆ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಾಡಲ್ ಕೋ-ಅಪರೇಟಿವ್ ಸೊಸೈಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಪುಟ್ಟಮ್ಮ ನಿಧನ

ಪುಟ್ಟಮ್ಮ 
    ಭದ್ರಾವತಿ: ನಗರದ ನಂಜಾಪುರ ನಿವಾಸಿ ಪುಟ್ಟಮ್ಮ(೬೫) ಸೋಮವಾರ ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಸಂಜೆ ನೆರವೇರಿತು. 
    ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳು ಇದ್ದರು. ಈ ಹಿಂದೆ ನಗರಸಭೆ ವ್ಯಾಪ್ತಿಯ ವೇಲೂರುಶೆಡ್‌ನಲ್ಲಿ ವಾಸವಾಗಿದ್ದರು. ಇವರ ಪತಿ ಚಲುವಯ್ಯ ಜನವರಿ ತಿಂಗಳಿನಲ್ಲಿ ನಿಧನ ಹೊಂದಿದ್ದರು. ಪುಟ್ಟಮ್ಮ ಕೆಲವು ವರ್ಷಗಳಿಂದ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು.  
 

Sunday, December 15, 2024

ನೂತನ ತಹಸೀಲ್ದಾರ್ ಪರಶುರಾಮ್‌ರಿಗೆ ಡಿಎಸ್‌ಎಸ್ ಅಭಿನಂದನೆ

ಭದ್ರಾವತಿ ನೂತನ ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ತಹಸೀಲ್ದಾರ್ ಪರಶುರಾಮ್‌ರವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಅಭಿನಂದಿಸಲಾಯಿತು. 
    ಭದ್ರಾವತಿ: ನೂತನ ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ತಹಸೀಲ್ದಾರ್ ಪರಶುರಾಮ್‌ರವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಅಭಿನಂದಿಸಲಾಯಿತು. 
    ಈ ಹಿಂದೆ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-೧ ಅಧಿಕಾರಿ ತಹಸೀಲ್ದಾರ್ ಕೆ.ಆರ್ ನಾಗರಾಜು ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದ್ದು, ತೆರೆವಾಗಿದ್ದ ಹುದ್ದೆಗೆ ಗ್ರೇಡ್-೨ ಅಧಿಕಾರಿ ತಹಸೀಲ್ದಾರ್ ಪರಶುರಾಮ್‌ರವರನ್ನು ನಿಯೋಜನೆಗೊಳಿಸಿದೆ. 
    ಪರಶುರಾಮ್‌ರನ್ನು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ, ನಿವೃತ್ತ ಪ್ರಾಚಾರ್ಯ ಶಿವಬಸಪ್ಪ ನೇತೃತ್ವದಲ್ಲಿ ಅಭಿನಂದಿಸಲಾಯಿತು. ತಾಲೂಕು ಸಂಚಾಲಕ ನಾಗರಾಜ್, ಪ್ರೌಢಶಾಲಾ ನಿವೃತ್ತ ಶಿಕ್ಷಕ ಬೊಮ್ಮೇನಹಳ್ಳಿ ಶ್ರೀನಿವಾಸ್, ದೇವರಲ್ಲಿ ಮೈಲಾರಪ್ಪ,  ಕೆಂಚಮ್ಮನಹಳ್ಳಿ ಶ್ರೀನಿವಾಸ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 
 

ಅಣ್ಣನ ಕೊಲೆ : ಸುಫಾರಿ ನೀಡಿದ್ದ ತಂಗಿ ಗಂಡ ಸೇರಿ ಮೂವರ ಸೆರೆ

    ಭದ್ರಾವತಿ: ತಂಗಿಯ ಗಂಡನೇ ಅಣ್ಣನ ಕೊಲೆಗೆ ಸುಫಾರಿ ನೀಡಿರುವ ಘಟನೆ ಕಳೆದ ೩ ದಿನಗಳ ಹಿಂದೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ. 
    ತಾಲೂಕಿನ ಮೈದೊಳಲು ಮಲ್ಲಾಪುರ ಗ್ರಾಮದ ನಿವಾಸಿ ಪರಶುರಾಮ್(೩೬) ಕೊಲೆಯಾಗಿದ್ದು, ಕಾರೇಹಳ್ಳಿ ಗ್ರಾಮದ ತಾಳೆ ಎಣ್ಣೆ ಕಾರ್ಖಾನೆ ಬಳಿ ನಿರ್ಜನ ಪ್ರದೇಶದಲ್ಲಿ ಇವರ ಮೃತ ದೇಹ ಪತ್ತೆಯಾಗಿದೆ. ಪರಶುರಾಮ್‌ರನ್ನು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ನಂತರ ಅವರ ಮೃತ ದೇಹವನ್ನು ಕಾರ್ಖಾನೆ ಬಳಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ. 
    ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡ ಪೊಲೀಸರು ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ನಿವಾಸಿ ಸುದೀಪ್, ತಾಲೂಕಿನ ಗೊಂದಿ ಗ್ರಾಮದ ಮಹಂತೇಶ್ ಹಾಗು ಬೊಮ್ಮೇನಹಳ್ಳಿ ನಿವಾಸಿ ಅರುಣ್ ಮೂವರನ್ನು ಬಂಧಿಸಿದ್ದಾರೆ. ಮಹಂತೇಶ್ ಕೊಲೆಯಾದ ಪರಶುರಾಮ್ ತಂಗಿಯ ಗಂಡನಾಗಿದ್ದು, ಈತನೇ ಕೊಲೆಗೆ ಸುಫಾರಿ ನೀಡಿದ್ದ ಎನ್ನಲಾಗಿದೆ.  

ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲ್ನಡಿಗೆ ವಿಶೇಷ ಗಸ್ತು


ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಕಾಲ್ನಡಿಗೆ ವಿಶೇಷ ಗಸ್ತು ನಡೆಸಲಾಯಿತು. 
    ಭದ್ರಾವತಿ: ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಕಾಲ್ನಡಿಗೆ ವಿಶೇಷ ಗಸ್ತು ನಡೆಸಲಾಯಿತು. 
    ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ. ರಮೇಶ್ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ಠಾಣೆ ವ್ಯಾಪ್ತಿಯ ಬಾಲಭಾರತಿ, ನ್ಯೂಕಾಲೋನಿ ಸೇರಿದಂತೆ ವಿವಿಧೆಡೆ ಕಾಲ್ನಡಿಗೆ ವಿಶೇಷ ಗಸ್ತು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅದರಲ್ಲೂ ವಿಶೆಷವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಹೆಣ್ಣು ಮಕ್ಕಳು ಹೆಚ್ಚಾಗಿ ಸಂಚರಿಸುವ ಸ್ಥಳಗಳಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸಲಾಯಿತು.
    ಸಾಮಾನ್ಯ ಗಸ್ತು ಕಾರ್ಯಾಚರಣೆ ಠಾಣಾ ವ್ಯಾಪ್ತಿಯ ಭಂಡಾರಹಳ್ಳಿಯಲ್ಲಿ ನಡೆಯಿತು. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಇತ್ತೀಚೆಗೆ ಪ್ರತಿ ಭಾನುವಾರ ಸಿಬ್ಬಂದಿಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲಾಗುತ್ತಿದೆ. 

ಅಧಿಕಾರಿಗಳ ಸಂಘದಿಂದ ಸ್ವಚ್ಛತಾ ಅಭಿಯಾನ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸಿದ್ಧಾರೂಢ ನಗರದ ಅಧಿಕಾರಿಗಳ ಸಂಘದ ಅವತಿಯಿಂದ ವಾರ್ಡ್ ನಂ.೬ರ ಎ.ಎನ್ ಕೃಷ್ಣಮೂರ್ತಿ ಉದ್ಯಾನವನದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಸಿದ್ಧಾರೂಢ ನಗರದ ಅಧಿಕಾರಿಗಳ ಸಂಘದ ಅವತಿಯಿಂದ ವಾರ್ಡ್ ನಂ.೬ರ ಎ.ಎನ್ ಕೃಷ್ಣಮೂರ್ತಿ ಉದ್ಯಾನವನದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. 
    ಅಭಿಯಾನ ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕೈಗೊಳ್ಳುವ ಮನೋಭಾವ ಬೆಳೆಸಿಕೊಂಡು ಉತ್ತಮ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು. 
    ಸಂಘದ ಕಾರ್ಯದರ್ಶಿ ವಿ. ಪ್ರಕಾಶ್, ಖಜಾಂಚಿ ಶಿವಬಸಪ್ಪ, ಸದಸ್ಯರಾದ ಪ್ರೊ. ಎಂ. ಚಂದ್ರಶೇಖರಯ್ಯ, ಪ್ರೊ. ಗಂಗರಾಜ್, ಪ್ರೊ. ಶ್ರೀನಿವಾಸ್, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮತ್ತು  ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Saturday, December 14, 2024

ಭದ್ರಾ ಪ್ರೌಢಶಾಲೆಯಲ್ಲಿ ಸೈಬರ್ ಅಪರಾಧ ತಡೆ ಜಾಗೃತಿ ಅಭಿಯಾನ

ಶಿವಮೊಗ್ಗ ಸಿಇಎನ್ ಅಪರಾಧ ಪೊಲೀಸ್ ಠಾಣೆ ವತಿಯಿಂದ ಸೈಬರ್ ಅಪರಾಧ ತಡೆ ಜಾಗೃತಿ ಅಭಿಯಾನ ಭದ್ರಾವತಿ ತಾಲೂಕಿನ ಭದ್ರಾ ಕಾಲೋನಿ ಭದ್ರಾ ಪ್ರೌಢ ಶಾಲೆಯಲ್ಲಿ ಶನಿವಾರ ಜರುಗಿತು. 
    ಭದ್ರಾವತಿ : ಶಿವಮೊಗ್ಗ ಸಿಇಎನ್ ಅಪರಾಧ ಪೊಲೀಸ್ ಠಾಣೆ ವತಿಯಿಂದ ಸೈಬರ್ ಅಪರಾಧ ತಡೆ ಜಾಗೃತಿ ಅಭಿಯಾನ ತಾಲೂಕಿನ ಭದ್ರಾ ಕಾಲೋನಿ ಭದ್ರಾ ಪ್ರೌಢ ಶಾಲೆಯಲ್ಲಿ ಶನಿವಾರ ಜರುಗಿತು. 
    ಶಿವಮೊಗ್ಗ ಸಿಇಎನ್ ಅಪರಾಧ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಧರ್ಮನಾಯ್ಕ್ ಹಾಗೂ ಲಿಂಗರಾಜ್‌ರವರು ಸೈಬರ್ ಅಪರಾಧ ಕುರಿತು ವಿದ್ಯಾರ್ಥಿಗಳಲ್ಲಿ  ಜಾಗೃತಿ ಮೂಡಿಸಿದರು. ನಾವು ಬ್ಯಾಂಕಿನವರು ಎಂದು ಹೇಳಿಕೊಂಡು ದೂರವಾಣಿ ಮುಖಾಂತರ ಓ.ಟಿ.ಪಿ ಹೇಳಿ ಎಂದು ಸುಳ್ಳು ಹೇಳಿ ಬ್ಯಾಂಕಿನ ಅಕೌಂಟ್‌ನಲ್ಲಿರುವ ಹಣ ಕದಿಯುವ ದಂಧೆಕೋರರ ಬಗ್ಗೆ  ವಿವರಿಸಿದರು. 
    ಡಿಜಿಟಲ್ ಕಂಟ್ರೋಲರ್ ಹಾಗೂ ಫೋನ್‌ಗಳನ್ನು ಹೇಗೆ ಹ್ಯಾಕ್ ಮಾಡುತ್ತಾರೆ ಮತ್ತು ನಮ್ಮ ಖಾತೆಯಲ್ಲಿರುವ ಹಣ ಹೇಗೆ ಎಗರಿಸುತ್ತಾರೆ. ಲೋನ್‌ಗಳನ್ನು ಕೊಡುತ್ತೇವೆ ಎಂದು, ಕೆವೈಸಿ ಮಾಡಿಸುತ್ತೇವೆ ಎಂದು ಹೀಗೆ ನಾನಾ ಸುಳ್ಳುಗಳನ್ನು ಹೇಳಿ ನಮ್ಮ ಡಿಜಿಟಲ್ ದಾಖಲೆಗಳನ್ನು, ಆಧಾರ್ ನಂಬರ್ ಓಟಿಪಿ ಪಡೆಯುವುದರ ಮೂಲಕ ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಖಾತೆಯಲ್ಲಿರುವ ಹಣ ಹೇಗೆ ಎಗರಿಸುತ್ತಾರೆ ಎಂಬುದನ್ನು ತಿಳಿಸಿದರು.


    ಮೊಬೈಲ್‌ನಲ್ಲಿ ಹಲವಾರು ಗೇಮ್‌ಗಳನ್ನು ಡೌನ್ಲೋಡ್ ಮಾಡುವುದರ ಮೂಲಕ, ಬೇರೆ ಬೇರೆ ಅಪ್ಲಿಕೇಷನ್‌ಗಳನ್ನು ಸಕ್ರಿಯಗೊಳಿಸುವುದರ ಮೂಲಕ ನಮ್ಮ ಫೋನ್‌ನಲ್ಲಿರುವ ಫೋಟೋಗಳನ್ನು, ಸಂಪರ್ಕ ಸಂಖ್ಯೆಗಳನ್ನು ಬೇರೆಯವರು ಬಹಳ ಸುಲಭವಾಗಿ ಪಡೆದು ನಮ್ಮನ್ನು ಡಿಜಿಟಲ್ ಮೂಲಕ ನಿಯಂತ್ರಿಸುತ್ತಾರೆ ಎಂದು ಎಚ್ಚರಿಸಿದರು. ಅಲ್ಲದೆ ಮಕ್ಕಳು ಸೈಬರ್ ಅಪರಾಧಗಳ ಕುರಿತು ತಾವು ತಿಳಿದುಕೊಂಡು ತಮ್ಮ ಪೋಷಕರಿಗೆ ತಿಳಿಸಬೇಕು. ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕೆಂದರು. ಮುಖ್ಯ ಶಿಕ್ಷಕ ಸಿ.ಎಸ್ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶ್ರೀನಿವಾಸ ಟಿ. ಜಾಜೂರ್, ಶಶಿಕುಮಾರ್, ಸೌಮ್ಯ ಹಾಗು ಸಿಬ್ಬಂದಿಗಳಾದ ಆಶಾ, ಬಾಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.