Saturday, January 25, 2025

ಬಿ. ಪೂಜಾಗೆ ಪ್ರಥಮ ರ್‍ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕ

ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯದ ಎಂ.ಎಸ್‌ಸಿ ಲೈಬ್ರರಿ & ಇನ್‌ಫಾರ್‌ಮೇಷನ್ ಸೈನ್ಸ್ ಸ್ನಾತಕೋತ್ತರ ಪದವಿಯಲ್ಲಿ ಬಿ. ಪೂಜಾ ಪ್ರಥಮ ರ್‍ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯದ ಎಂ.ಎಸ್‌ಸಿ ಲೈಬ್ರರಿ & ಇನ್‌ಫಾರ್‌ಮೇಷನ್ ಸೈನ್ಸ್ ಸ್ನಾತಕೋತ್ತರ ಪದವಿಯಲ್ಲಿ ಬಿ. ಪೂಜಾ ಪ್ರಥಮ ರ್‍ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ವಿಶ್ವವಿದ್ಯಾಲಯದ ೩೪ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಪೂಜಾರಿಗೆ ಚಿನ್ನದ ಪದಕ ಪ್ರದಾನ ಮಾಡಿದರು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ನಿವೃತ್ತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಪೂಜಾ ನಗರದ ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕ ಎಂ.ಜಿ ಬಸವರಾಜ ಮತ್ತು ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರೇಮಮ್ಮ ದಂಪತಿ ಪುತ್ರಿಯಾಗಿದ್ದಾರೆ. 

ಕನಕಮಂಟಪ ಮೈದಾನದಲ್ಲಿ ೭೬ನೇ ಗಣರಾಜ್ಯೋತ್ಸವ



    ಭದ್ರಾವತಿ : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜ. ೨೬ರ ಭಾನುವಾರ ಬೆಳಿಗ್ಗೆ ೯ ಗಂಟೆಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ೭೬ನೇ ಗಣರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. 
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಪರುಸಪ್ಪ ಕುರುಬರ ಧ್ವಜಾರೋಹಣ ನೆರವೇರಿಸಲಿದ್ದಾರೆ. 
    ಜಿಲ್ಲಾ ಉಸ್ತುವಾರ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಷ್ ಬಾನು, ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಎಸ್.ಎಲ್ ಭೋಜೇಗೌಡ, ಭಾರತಿ ಶೆಟ್ಟಿ, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್ ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

ದೇಶವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಸಮರ್ಥ ಸರ್ಕಾರ ರಚನೆ ನಮ್ಮೆಲ್ಲರ ಜವಾಬ್ದಾರಿ : ನ್ಯಾ. ಡಿ. ರಾಘವೇಂದ್ರ

ಭದ್ರಾವತಿ ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ ಉದ್ಘಾಟಿಸಿದರು. 
    ಭದ್ರಾವತಿ: ಯಾರು ಈ ದೇಶವನ್ನು ಸಮರ್ಥವಾಗಿ, ಸರಿದಾರಿಯಲ್ಲಿ ಕೊಂಡೊಯ್ಯುತ್ತಾರೋ ಅಂತಹ ಸರ್ಕಾರವನ್ನು ನಾವೆಲ್ಲರೂ ಸೇರಿ ರಚಿಸಿಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ. ರಾಘವೇಂದ್ರ ಹೇಳಿದರು. 
    ಅವರು ಶನಿವಾರ ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. 
    ಈ ದೇಶದಲ್ಲಿ ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಹಕ್ಕು ನೀಡಿದೆ. ಈ ಹಕ್ಕು ನಾವೆಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಸರ್ಕಾರದ ರಚನೆಯಲ್ಲಿ ಪಾಲ್ಗೊಳ್ಳಬೇಕೆಂದರು. 
    ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ರವಿಕುಮಾರ್ ಮಾತನಾಡಿ, ಮತದಾನದ ಮಹತ್ವ ಹಾಗು ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ದೇಶವಾಗಿದೆ. ಅದರಲ್ಲೂ ಯುವ ಮತದಾರರಲ್ಲಿ ಈ ಕುರಿತು ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆ ಆಯೋಗ ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಈ ಕಾರ್ಯಕ್ರಮ ಆಯೋಜಿಸುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಸಮಿತಿ ಸಹ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು. 
        ತಹಸೀಲ್ದಾರ್ ಪರುಸಪ್ಪ ಕುರುಬರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಸಹಾಯಕ ಸರ್ಕಾರಿ ಅಭಿಯೋಜಕ ವಿ. ಪ್ರಸನ್ನ ಕುಮಾರ್, ತಾಲೂಕು ಪಂಚಾಯಿತಿ ಅಧಿಕಾರಿ ಉಪೇಂದ್ರ ಬಾಬು, ಉಪ ತಹಸೀಲ್ದಾರ್ ರಾಜ್ ಅರಸು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಉಪ ತಹಸೀಲ್ದಾರ್ ಮಂಜಾನಾಯ್ಕ ಸ್ವಾಗತಿಸಿ, ಸುಮತಿ ಕಾರಂತ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. 
 

ಭದ್ರಾವತಿ ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ(ಸ್ಮಾರ್ಟ್ ಕಾರ್ಡ್) ವಿತರಿಸಲಾಯಿತು. 

Friday, January 24, 2025

ಜ.೨೬ರಂದು ೧೨ ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ, ಪೌರಕಾರ್ಮಿಕರ ವಸತಿ ಸಮುಚ್ಛಯ ಉದ್ಘಾಟನೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಕಳೆದ ೨ ತಿಂಗಳ ಹಿಂದೆ(ಅಕ್ಟೋಬರ್-೨೦೨೪) ಹಳೇಯ ಪ್ರತಿಮೆ ಬದಲಿಸಿ ಹೊಸ ಪ್ರತಿಮೆ ಪ್ರತಿಷ್ಠಾಪಿಸುವ ಕಾರ್ಯ ಆರಂಭಿಸಲಾಗಿತ್ತು. 
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಹಳೇಯ ಪ್ರತಿಮೆ ಬದಲಿಸಿ ಪ್ರತಿಷ್ಠಾಪಿಸಲಾಗಿರುವ ೧೨ ಅಡಿ ಎತ್ತರದ ಹಾಗು ನೈಜತೆ ಹೋಲುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಕಂಚಿನ ಪ್ರತಿಮೆ ಉದ್ಘಾಟನೆ ಹಾಗು ಖಾಸಗಿ ಬಸ್ ನಿಲ್ದಾಣದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಾಮಫಲಕ ಉದ್ಘಾಟನೆ ಮತ್ತು ರಂಗಪ್ಪ ವೃತ್ತದ ಜೈ ಭೀಮ್ ನಗರದಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಿರುವ ವಸತಿ ಸಮುಚ್ಛಯಗಳ ಉದ್ಘಾಟನೆ ಜ.೨೬ರ ಭಾನುವಾರ ಗಣರಾಜ್ಯೋತ್ಸವ ದಿನದಂದು ನಡೆಯಲಿದೆ. 
    ನಗರಸಭೆ ವತಿಯಿಂದ ಒಟ್ಟು ೫೪ ಲಕ್ಷ ರು. ವೆಚ್ಚದಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ.ಬಿ.ಆರ್ ಅಂಬೇಡ್ಕರ್‌ರವರ ಹೊಸ ಪ್ರತಿಮೆ ಮಧ್ಯಾಹ್ನ ೧೨ ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಅಲ್ಲದೆ ಖಾಸಗಿ ಬಸ್ ನಿಲ್ದಾಣದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣನವರ ನಾಮಫಲಕ ಅನಾವರಣಗೊಳ್ಳಲಿದೆ. ಇದಕ್ಕೂ ಮೊದಲು ಬೆಳಿಗ್ಗೆ ೮.೩೦ಕ್ಕೆ ಆರ್.ಜಿ.ಆರ್.ಎಚ್.ಸಿ.ಎಲ್ ವತಿಯಿಂದ ಒಟ್ಟು ೫.೬೦ ಕೋಟಿ ರು. ವೆಚ್ಚದಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾಗಿರುವ ವಸತಿ ಸಮುಚ್ಛಯಗಳ ಉದ್ಘಾಟನೆ ನಡೆಯಲಿದೆ. 
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್ ಜಮೀರ್ ಅಹಮದ್ ಖಾನ್, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ಅಧ್ಯಕ್ಷರಾದ ಶಾಸಕ ಗೋಪಾಲಕೃಷ್ಣ ಬೇಳೂರು ಉಪಸ್ಥಿತರಿರುವರು. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಶಾರದ ಪೂರ್‍ಯಾನಾಯ್ಕ, ಎಸ್.ಎಲ್ ಭೋಜೇಗೌಡ, ಭಾರತಿಶೆಟ್ಟಿ, ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಷ್ ಬಾನು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರಾದ ಜಿ. ಪಲ್ಲವಿ, ಎಸ್. ಪಲ್ಲವಿ, ಎಸ್. ರವಿಕುಮಾರ್, ಆರ್.ಎಂ ಮಂಜುನಾಥಗೌಡ, ಡಾ. ಅಂಶುಮಂತ್, ಎಚ್.ಎಸ್ ಸುಂದರೇಶ್, ಸಿ.ಎಸ್ ಚಂದ್ರಭೂಪಾಲ, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಸದಸ್ಯರಾದ ಜಾರ್ಜ್, ಬಿ.ಎಂ ಮಂಜುನಾಥ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಹಿರಿಯ ಐಎಎಸ್ ಅಧಿಕಾರಿಗಳಾದ  ದೀಪ ಚೋಳನ್, ಪ್ರಭುಲಿಂಗ ಕವಲಿಕಟ್ಟೆ, ಗುರುದತ್ತ ಹೆಗಡೆ, ಕೆಎಎಸ್ ಅಧಿಕಾರಿ ಎನ್. ಸುಶೀಲಮ್ಮ, ಜಿಲ್ಲಾ ಯೋಜನಾ ನಿರ್ದೇಶಕ ಕೆ. ರಂಗಸ್ವಾಮಿ ಮತ್ತು ನದಾಫ್ ವಹಿದಾ ಬೇಗಂ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.  ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಕೋರಿದ್ದಾರೆ. 
 

ತರಂಗರಂಗ ಸಭಾಗೃಹ ಉದ್ಘಾಟನೆ : ಕಾರ್ಯದರ್ಶಿ ಎಸ್.ಎನ್ ಸುಭಾಷ್‌ಗೆ ಸನ್ಮಾನ

ಶಿವಭದ್ರ ಟ್ರಸ್ಟ್ ವತಿಯಿಂದ ಆರಂಭಿಸಲಾಗಿರುವ ಭದ್ರಾವತಿ ನಗರದ ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕಾರ್ಯದರ್ಶಿಯಾಗಿ ಸುಮಾರು ೪ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಎಸ್.ಎನ್ ಸುಭಾಷ್‌ರವರನ್ನು ಶಾಲೆಯ ತರಂಗರಂಗ ಸಭಾಗೃಹದ ಉದ್ಘಾಟನೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ : ಶಿವಭದ್ರ ಟ್ರಸ್ಟ್ ವತಿಯಿಂದ ಆರಂಭಿಸಲಾಗಿರುವ ನಗರದ ನ್ಯೂಟೌನ್ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕಾರ್ಯದರ್ಶಿಯಾಗಿ ಸುಮಾರು ೪ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಎಸ್.ಎನ್ ಸುಭಾಷ್‌ರವರನ್ನು ಶಾಲೆಯ ತರಂಗರಂಗ ಸಭಾಗೃಹದ ಉದ್ಘಾಟನೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಟ್ರಸ್ಟ್ ವತಿಯಿಂದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಹಯೋಗದೊಂದಿಗೆ ಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದ್ದು, ಶಿಥಿಲಗೊಂಡಿದ್ದ ಕಟ್ಟಡವನ್ನು ಶಾಸಕರ ಅನುದಾನ ಹಾಗು ಕ್ಲಬ್ ಆರ್ಥಿಕ ನೆರವಿನೊಂದಿಗೆ ನವೀಕರಣಗೊಳಿಸಲಾಗಿದೆ. ಜೊತೆಗೆ ನೂತನವಾಗಿ ತರಂಗರಂಗ ಸಭಾಗೃಹ ನಿರ್ಮಿಸಲಾಗಿದೆ. ಇದರ ಉದ್ಘಾಟನೆಯನ್ನು ನಗರದ ಹಿರಿಯ ಮುಖಂಡ, ಉದ್ಯಮಿ ಬಿ.ಕೆ ಜಗನ್ನಾಥ್ ನೆರವೇರಿಸಿದ್ದು, ಕಾರ್ಯಕ್ರಮದ ಅಂಗವಾಗಿ ಎಸ್.ಎನ್ ಸುಭಾಷ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಶಿವಮೊಗ್ಗದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ವಿಕಲಚೇತನರ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸುವರ್ಣ ವಿ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಲಯನ್ಸ್ ಕ್ಲಬ್ ಶುಗರ್ ಟೌನ್ ಪ್ರಮುಖರಾದ ಡಾ.ಟಿ ನರೇಂದ್ರ ಭಟ್, ಆರ್. ಉಮೇಶ್, ಅನಂತ ಕೃಷ್ಣ ನಾಯಕ್, ತಾರಾಮಣಿ ಹಾಗು ಟ್ರಸ್ಟ್  ಸದಸ್ಯರು ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗಂಗೋಜಿರಾವ್ ನಿಧನ

ಗಂಗೋಜಿರಾವ್ ನಿಧನ 
    ಭದ್ರಾವತಿ : ತಾಲೂಕಿನ ಕಾಚಗೊಂಡನ ಹಳ್ಳಿ ನಿವಾಸಿ, ಸರ್ಕಾರಿ ಪಡಿತರ ವಿತರಕ ಗಂಗೋಜಿರಾವ್(೬೯) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ನಗರಸಭೆ ಮಾಜಿ ಸದಸ್ಯೆ ರೇಣುಕಾ ಸೇರಿದಂತೆ ೩ ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಸಂಜೆ ನೆರವೇರಿತು. 
    ನಗರಸಭೆ ಸದಸ್ಯರಾದ ವಿ. ಕದಿರೇಶ್, ಕೆ. ಸುದೀಪ್ ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 

Thursday, January 23, 2025

ಅಕ್ರಮವಾಗಿ ಸಮುದಾಯ ಭವನ ನಿರ್ಮಾಣ : ಜ.೨೬ರಂದು ಶಾಸಕರಿಗೆ ಸ್ಥಳೀಯರಿಂದ ಮನವಿ

ಸಮುದಾಯ ಭವನ ವಶಕ್ಕೆ ಪಡೆಯಿರಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ 

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಫಿಲ್ಟರ್‌ಶೆಡ್ ನಾಗರೀಕರ ಹಿತರಕ್ಷಣಾ ಸಮಿತಿಯ ಪ್ರಮುಖರು, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮಾತನಾಡಿದರು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ, ಫಿಲ್ಟರ್‌ಶೆಡ್‌ನಲ್ಲಿರುವ ಸರ್ಕಾರಿ ಗೋಮಾಳದ ಜಾಗದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ೩೦*೮೦ ಅಡಿ ಅಳತೆಯ ಜಾಗದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಸಮುದಾಯ ಭವನ ತಾಲೂಕು ಆಡಳಿತ ವಹಿಸಿಕೊಂಡು ಜನ್ನಾಪುರದ ಸ್ಥಳೀಯ ನಾಗರೀಕರಿಗೆ ಶುಭ ಸಮಾರಂಭಗಳು ಹಾಗೂ ಇತರೆ ಸಣ್ಣಪುಟ್ಟ ಕಾರ್ಯಕ್ರಮ ರಿಯಾಯಿತಿ ದರದಲ್ಲಿ ನಡೆಸಲು ಅವಕಾಶ ಮಾಡಿಕೊಡುವುದರ ಜೊತೆಗೆ ಅಕ್ರಮವಾಗಿ ಸಮುದಾಯ ಭವನವ ನಿರ್ಮಿಸಿರುವವರ ವಿರುದ್ಧ ಹಾಗೂ ಈ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ನಗರಸಭೆ ಹಾಗೂ ತಾಲೂಕು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜ.೨೬ರಂದು ಕನಕಮಂಟಪ ಮೈದಾನದಲ್ಲಿ ಶಾಸಕರಿಗೆ ಸ್ಥಳೀಯ ನಿವಾಸಿಗಳೊಂದಿಗೆ ಮನವಿ ಮಾಡಲಾಗುವುದು ಎಂದು ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಿಳಿಸಿದರು. 
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರ ಶಾಸಕರ ಮತ್ತು ಸಂಸದರ ಅನುದಾನಗಳನ್ನು ಪಡೆದುಕೊಂಡು ಮೂರು ಅಂತಸ್ತಿನ ಸಮುದಾಯ ಭವನವನ್ನು ನಿರ್ಮಿಸಿ ಖಾಸಗಿ ಸಮುದಾಯ ಭವನದ ರೀತಿ ಮಾರ್ಪಾಡು ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ, ಕಳೆದ ಒಂದು ವರ್ಷದಿಂದ ಫಿಲ್ಟರ್‌ಶೆಡ್ ನಾಗರೀಕರ ಹಿತರಕ್ಷಣಾ ಸಮಿತಿಯಿಂದ ಹೋರಾಟ ಮಾಡುತ್ತಿದ್ದು, ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಬಾಹಿರವಾಗಿ ಸಮುದಾಯಭವನ ನಿರ್ಮಿಸಿರುವವರ ವಿರುದ್ಧ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
    ಸರ್ಕಾರದ ಜಾಗಗಳಲ್ಲಿ ಸಮುದಾಯ ಭವನ ಅಥವಾ ಇನ್ನಿತರೆ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ತಾಲೂಕು ಆಡಳಿತ, ಕೊಳಚೆ ಮಂಡಳಿ(ಸ್ಲಂ ಬೋರ್ಡ್), ನಗರಸಭೆ ವತಿಯಿಂದ ಅನುಮತಿ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಅಲ್ಲದೆ ಶಾಸಕರ ಮತ್ತು ಸಂಸದರ ಅನುದಾನ ಸಾರ್ವಜನಿಕರ ಉದ್ದೇಶಕ್ಕಾಗಿ ಪಡೆಯುವ ಸಂದರ್ಭದಲ್ಲಿ ಟ್ರಸ್ಟ್ ನೊಂದಣಿಯಾಗಿರಬೇಕು. ನಿರ್ಮಾಣವಾಗುತ್ತಿರುವ ಜಾಗಕ್ಕೆ ಖಾತೆಯಾಗಿರಬೇಕು. ಇವುಗಳಲ್ಲಿ ಯಾವುದೂ ಆಗದೇ ಸಮುದಾಯಭವನ ನಿರ್ಮಾಣ ಮಾಡಿರುವವರು ೨೦೧೯-೨೦೨೦ರಲ್ಲಿ ಸಂಸದರ ಹಾಗೂ ಶಾಸಕರ ಅನುದಾನ ಪಡೆದುಕೊಂಡಿರುತ್ತಾರೆ. ೨೦೨೨-೨೦೨೩ರಲ್ಲಿ ಟ್ರಸ್ಟ್ ನೊಂದಣಿ ಮಾಡಿಕೊಂಡಿರುತ್ತಾರೆ. ನಗರಸಭೆವತಿಯಿಂದ ೨೦೨೪ ಫೆಬ್ರವರಿಯಲ್ಲಿ ಅಂತರಘಟ್ಟಮ್ಮ ದೇವಸ್ಥಾನದ ಹೆಸರಿನಲ್ಲಿ ಸಂಬಂಧಪಟ್ಟ ಜಾಗಕ್ಕೆ ಖಾತೆ ಮಾಡಿಸಿಕೊಂಡಿರುತ್ತಾರೆ. ಇವೆಲ್ಲವೂ ಕೂಡ ಒಂದಕ್ಕೊಂದು ಸಂಬಂಧವಿಲ್ಲದೆ ಇರುವುದರಿಂದ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದು, ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು. 
    ಪ್ರತಿಕಾಗೋಷ್ಠಿಯಲ್ಲಿ ಸ್ಥಳೀಯ ಪ್ರಮುಖರಾದ ಬಿ.ಜಿ ಉಮೇಶ್, ಸವಿತಾ ಉಮೇಶ್, ಸತೀಶ್ ಪೂಜಾರಿ, ಮಹಾದೇವಿ, ದಿವ್ಯಶ್ರೀ, ಗೋಪಾಲ್‌ರಾವ್, ಶಶಿಧರ್, ಜಯಲಕ್ಷ್ಮೀ, ಮಹಾಲಕ್ಷ್ಮಿ, ಸಣ್ಣಮ್ಮ, ಪಾರ್ವತಿಬಾಯಿ, ಜಯಂತಿ, ನಾಗೋಜಿರಾವ್, ಪರಮೇಶ್ವರ್, ಇಂದ್ರಮ್ಮ, ಕುಮಾರ್ ರಾವ್, ಮೋಹನ್‌ಕುಮಾರ್, ಉಮೇಶ್, ಶಿವಶಂಕರ್, ಲಕ್ಷ್ಮಿಬಾಯಿ, ಸುಭದ್ರಬಾಯಿ, ಜಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.