ಭದ್ರಾವತಿ ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಹಳೇ ಪ್ರತಿಮೆ ಬದಲಿಸಿ ಹೊಸದಾಗಿ ಪ್ರತಿಷ್ಠಾಪಿಸಲಾಗಿರುವ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ: ಧರ್ಮ, ಜಾತಿ, ಭಾಷೆ, ಬಡವ-ಶ್ರೀಮಂತ, ಲಿಂಗ ಬೇಧಭಾವವಿಲ್ಲದೆ ಸಮಾಜದಲ್ಲಿ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣಬೇಕು. ಎಲ್ಲರೂ ಒಗ್ಗಟ್ಟಿನಿಂದ ಬಾಳಬೇಕೆಂಬ ಆಶಯದೊಂದಿಗೆ ಪ್ರಪಂಚದಲ್ಲಿಯೇ ಶ್ರೇಷ್ಠವಾದ ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿ ಡಾ. ಬಿ.ಆರ್ ಅಂಬೇಡ್ಕರ್ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಂಡು ಅವರ ಆಶಯದೊಂದಿಗೆ ಮುನ್ನಡೆಯಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಭಾನುವಾರ ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಹಳೇ ಪ್ರತಿಮೆ ಬದಲಿಸಿ ಹೊಸದಾಗಿ ಪ್ರತಿಷ್ಠಾಪಿಸಲಾಗಿರುವ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟಿಸಿ ಮಾತನಾಡಿದರು.
ಮಹಾನ್ ವ್ಯಕ್ತಿ ಅಂಬೇಡ್ಕರ್‌ರವರ ಪ್ರತಿಮೆ ಉದ್ಘಾಟಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮುಂದಿನ ೩ ತಿಂಗಳಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಸಹ ಪೂರ್ಣಗೊಳಿಸಿ ಉದ್ಘಾಟಿಸುವುದಾಗಿ ಭರವಸೆ ನೀಡಿದರು.
ಮುಖಂಡ ಕೆ.ಎಲ್ ಅಶೋಕ್ ಮಾತನಾಡಿ, ಅಂಬೇಡ್ಕರ್‌ರವರ ಬದುಕು ತುಂಬಾ ಕಠಿಣವಾದ ಬದುಕು. ಅವರು ತಮ್ಮ ಬದುಕಿನಲ್ಲಿ ಅಸಮಾನತೆಯ ವಿರುದ್ಧ ಹೋರಾಟ ನಡೆಸಿ ಪ್ರಪಂಚದ ಎಲ್ಲಾ ರಾಷ್ಟ್ರಗಳ ಅಧ್ಯಯನ ನಡೆಸಿ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಪ್ರತಿಮೆ ಸ್ಥಾಪನೆ ಸಾರ್ಥಕವಾಗಬೇಕಾದರೆ ಅವರ ಚಿಂತನೆ, ಆಶಯಗಳನ್ನು ನಾವುಗಳು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ತಹಸೀಲ್ದಾರ್ ಪರುಸಪ್ಪ ಕುರುಬರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ದಲಿತ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭೌದ್ಧ ಬಿಕ್ಕು ಪಂತೆಜೀ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸಂವಿಧಾನ ಪೀಠಿಕೆ ವಾಚಿಸಿದರು. ಬೌದ್ಧ ನಗರಸಭೆ ಸದಸ್ಯ ಚನ್ನಪ್ಪ ಸ್ವಾಗತಿಸಿದರು. ಭಿಕ್ಕು ಬಂತೇಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.