Saturday, February 1, 2025

ಬೆಂಕಿ ನಂದಿಸುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಿ : ಟಿ.ಎ ರತ್ನಾಪ್ರಭ

ಭದ್ರಾವತಿ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್ ಮಾಹಿತಿ ನೀಡಿದರು.  
    ಭದ್ರಾವತಿ: ಅರಣ್ಯದಲ್ಲಿ ಬೆಂಕಿ ಅವಘಡಗಳು ಸಂಭವಿಸಿದ ತುರ್ತು ಸಂದರ್ಭಗಳಲ್ಲಿ ಅರಣ್ಯ ಸಿಬ್ಬಂದಿಗಳು ಮೊದಲು ಬೆಂಕಿ ನಂದಿಸುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಚನ್ನಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎ ರತ್ನಾಪ್ರಭ ಹೇಳಿದರು. 
    ಅವರು ಶನಿವಾರ ನಗರದ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 


    ಅರಣ್ಯ ಸಿಬ್ಬಂದಿಗಳು ಕರ್ತವ್ಯದ ಸಂದರ್ಭದಲ್ಲಿ ಬೆಂಕಿ ಅವಘಡ ಕುರಿತ ಮಾಹಿತಿ ತಿಳಿದ ತಕ್ಷಣ ಮೊದಲು ಬೆಂಕಿ ನಂದಿಸುವ ಕಾರ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು.  ಅಗ್ನಿ ನಂದಿಸುವ ಕುರಿತು ಹೆಚ್ಚಿನ ಮಾಹಿತಿ ಹೊಂದಿರಬೇಕು. ತರ್ತು ಸೇವೆಗಳನ್ನು ಬಳಸಿಕೊಂಡು ಬೆಂಕಿ ನಂದಿಸುವ ಮೂಲಕ ಅರಣ್ಯ ಸಂರಕ್ಷಣೆ ಮಾಡಬೇಕೆಂದರು. 
    ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್ ಮಾತನಾಡಿ, ಬೆಂಕಿ ನಂದಿಸಲು ಹಲವಾರು ಕ್ರಮಗಳಿವೆ. ಆಯಾ ಸಂದರ್ಭಗಳಿಗೆ ತಕ್ಕಂತೆ ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದ್ದಲ್ಲಿ ಹೆಚ್ಚಿನ ಬೆಂಕಿ ಅವಘಡ ಸಂಭವಿಸುವುದನ್ನು ತಡೆಯಬಹುದಾಗಿದೆ ಎಂದರು. ಅಲ್ಲದೆ ಅಗ್ನಿ ನಂದಿಸುವ ಉಪಕರಣಗಳನ್ನು ಪ್ರದರ್ಶಿಸಿ ಅವುಗಳ ಕಾರ್ಯ ನಿಧಾನ ಹಾಗು ಬಳಸುವ ಕ್ರಮಗಳನ್ನು ವಿವರಿಸಿದರು. 
    ತರೀಕೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಉಮರ್ ಬಾದ್‌ಷಹಾ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಅಗ್ನಿಶಾಮಕ ದಳ ಅಧಿಕಾರಿ ಎಲ್.ಎಫ್ ಅಶೋಕ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಬಿ.ಎಚ್ ದುಗ್ಗಪ್ಪ, ನಿರಂಜನಮೂರ್ತಿ, ಮಹೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಅರಣ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಂಗಸ್ವಾಮಿ ಪ್ರಾರ್ಥಿಸಿ, ಗಸ್ತು ಅರಣ್ಯ ಪಾಲಕ ಆರ್. ನಂದನ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಇ.ಎಂ ಶಫೀವುಲ್ಲಾ ವಂದಿಸಿದರು.
ಲಯನ್ಸ್ ಕ್ಲಬ್ ಆವರಣದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕುರಿತು ಅಣಕು ಪ್ರದರ್ಶನ ನಡೆಸಿಕೊಡಲಾಯಿತು. 
 

ಭದ್ರಾವತಿ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಘಟಕದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಂಕಿಯಿಂದ ಅರಣ್ಯ ರಕ್ಷಿಸುವ ಕುರಿತು ಕಾರ್ಯಾಗಾರದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕುರಿತು ಅಣಕು ಪ್ರದರ್ಶನ ನಡೆಸಿಕೊಡಲಾಯಿತು. 

Friday, January 31, 2025

ಮಹಿಳೆಯರು ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳ ಸದಸ್ಯತ್ವ ಹೊಂದಿ : ಹೆಲೆನ್ ಮೋರಸ್

ಭದ್ರಾವತಿ ನ್ಯೂಟೌನ್ ಸೆಂಟ್ ಚಾರ್ಲ್ಸ್ ಆವರಣದಲ್ಲಿ  ಕರುಣಾ ಸೇವಾ ಕೇಂದ್ರದ ವತಿಯಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಂಘದ ಪರಿಕಲ್ಪನೆಯ ಬಗ್ಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ಸ್ವಸಹಾಯ ಸಂಘಗಳ ಮಹಿಳೆಯರು ಸಬಲೀಕರಣಗೊಳ್ಳುವ ಮೂಲಕ ಕುಟುಂಬದ ಆಸರೆಯಾಗಬೇಕು ಹೊರತು ದುರಾಸೆಗಳಿಂದ ಸಂಕಷ್ಟಗಳಿಗೆ ಒಳಗಾಗಬಾರದು ಎಂದು ನಗರದ ಕರುಣಾ ಸೇವಾ ಕೇಂದ್ರದ ಮುಖ್ಯಸ್ಥೆ ಸಿಸ್ಟರ್ ಹೆಲೆನ್ ಮೋರಸ್ ಹೇಳಿದರು. 
    ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರುಣಾ ಸೇವಾ ಕೇಂದ್ರದ ವತಿಯಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಂಘದ ಪರಿಕಲ್ಪನೆಯ ಬಗ್ಗೆ ಮಾಹಿತಿ ಕಾರ್ಯಗಾರದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 
    ಮಹಿಳೆಯರು ದುರಾಸೆ ಹಾಗು ಅಮಿಷಗಳಿಂದ ಸ್ವಸಹಾಯ ಸಂಘಗಳ ಸದಸ್ಯರಾಗಬಾರದು. ದುರಾಸೆ ಹಾಗು ಅಮಿಷಗಳು ಮಹಿಳೆಯರ ವಿನಾಶಕ್ಕೆ ಕಾರಣವಾಗಲಿವೆ. ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರು ಹಣವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಜೀವನದ ಮೌಲ್ಯಗಳನ್ನು ತನ್ನದಾಗಿಸಿಕೊಂಡು ಯಶಸ್ವಿನ ದಾರಿಯಲ್ಲಿ ಮುಂದುವರೆದಿದ್ದಾರೆ ಎಂದರು. 
ಸಮುದ್ರದ ಬಂದರುಗಳಲ್ಲಿ ಲೈಟ್ ಹೌಸ್‌ಗಳನ್ನು ನಿರ್ಮಿಸಿರುತ್ತಾರೆ. ಸಮುದ್ರದಲ್ಲಿ ದಾರಿ ತಪ್ಪಿದ ನಾವಿಕರಿಗೆ ಈ ಲೈಟ್ ಹೌಸ್‌ಗಳು ದಾರಿದೀಪಗಳಾಗಿವೆ. ಇದೆ ರೀತಿ ಸ್ವಸಹಾಯ ಸಂಘಗಳು ಜೀವನಕ್ಕೆ ದಾರಿ ದೀಪವಾಗಿರಲಿ. ಅಲ್ಲದೆ ಸ್ವಸಹಾಯ ಸಂಘಗಳಿಂದ ಇಡೀ ಕುಟುಂಬ ಸಂತೋಷ, ತೃಪ್ತಿ ಸಮಾಧಾನವನ್ನು ಅನುಭವಿಸಿ ಉತ್ತಮ ಜೀವನ ಕಂಡುಕೊಳ್ಳುವಂತಾಗಬೇಕೆಂದರು. 
    ಮಹಿಳೆಯರು ಹಲವು ಸ್ವಸಹಾಯ ಸಂಘಗಳಲ್ಲಿ ಸದಸ್ಯತ್ವ ಹೊಂದುವ ಬದಲು ಒಂದೇ ಸ್ವಸಹಾಯ ಸಂಘದಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆಯಲ್ಲಿ ತೊಡಗಬೇಕೆಂದರು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ೧೩ ಸ್ವಸಹಾಯ ಸಂಘಗಳಲ್ಲಿ ಒಟ್ಟು ೧೨೦ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದಾರೆ. 
  ಕರುಣಾ ಸೇವಾ ಕೇಂದ್ರದ ಸಿಸ್ಟರ್ ಪ್ರಭ, ಒಕ್ಕೂಟದ ಸದಸ್ಯರಾದ ರೇಷ್ಮ, ಕಾರ್ಯಕರ್ತರಾದ ಸಾವಿತ್ರಿ. ಧನಲಕ್ಷ್ಮಿ ಹಾಗೂ ಕಾವ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಫೆ.೨ರಂದು ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ

    ಭದ್ರಾವತಿ : ಉಪ್ಪಾರ ಸಂಘದ ವತಿಯಿಂದ ಹಳೇನಗರ ಬಸವೇಶ್ವರ ವೃತ್ತದ ಸಮೀಪದ ನರೇಂದ್ರ ಪಾರ್ಕ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆ ಫೆ.೨ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. 
    ಹೊಸದುರ್ಗ ಶ್ರೀ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 
ಸಂಸದ ಬಿ.ವೈ ರಾಘವೇಂದ್ರ, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರಾದ ಶಾಸಕ ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಶಿವಮೊಗ್ಗ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್, ನಿವೃತ್ತ ಕೆ.ಎ.ಎಸ್ ಅಧಿಕಾರಿ ಬಿ. ಭೀಮಪ್ಪ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಜಗನ್ನಾಥ್ ಸಗರ, ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಗಿರೀಶ್ ಉಪ್ಪಾರ, ಲಕ್ಕಪ್ಪ, ವೆಂಕಟೇಶ್, ಡಾ. ನಾಗರಾಜ್, ಅನುಪಮ ಚನ್ನೇಶ್, ಪರಶುರಾಮ್, ಎಚ್.ಟಿ ಹಾಲಪ್ಪ, ಎನ್. ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 
    ನಿವೃತ್ತ ನ್ಯಾಯಾಧೀಶರಾದ ಬಿಲ್ಲಪ್ಪ ಶ್ರೀ ಭಗೀರಥ ಭಾವಚಿತ್ರ ಅನಾವರಣಗೊಳಿಸಿದ್ದು, ಉಪ್ಪಾರ ಸಮಾಜದ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಬಂಧುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ರಾಜ್ಯಮಟ್ಟದ ಸಿರಿಧಾನ್ಯ ಸಿಹಿ ಖಾದ್ಯ ಸ್ಪರ್ಧೆಯಲ್ಲಿ ಪ್ರೇಮಲತಾಗೆ ೨ನೇ ಸ್ಥಾನ

ಸಾವಯವ ಮತ್ತು ಸಿರಿಧಾನ್ಯ, ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಸಿರಿಧಾನ್ಯ ಸಿಹಿ ಖಾದ್ಯ ವಿಭಾಗದಲ್ಲಿ ಭದ್ರಾವತಿ ನಗರದ ವಿದ್ಯಾಮಂದಿರ ನಿವಾಸಿ ಬಿ.ಎಂ ಪ್ರೇಮಲತಾ ೨ನೇ ಸ್ಥಾನ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. 
    ಭದ್ರಾವತಿ: ಕೃಷಿ ಇಲಾಖೆ ವತಿಯಿಂದ ಸ್ಲರ್ಪ್ ಕಲಿನರಿ ಅಕಾಡೆಮಿ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಂತರರಾರಾಷ್ಟ್ರೀಯ ವಾಣಿಜ್ಯ ಮೇಳ-೨೦೨೫, ಸಾವಯವ ಮತ್ತು ಸಿರಿಧಾನ್ಯ, ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ಸಿರಿಧಾನ್ಯ ಸಿಹಿ ಖಾದ್ಯ ವಿಭಾಗದಲ್ಲಿ ನಗರದ ವಿದ್ಯಾಮಂದಿರ ನಿವಾಸಿ ಬಿ.ಎಂ ಪ್ರೇಮಲತಾ ೨ನೇ ಸ್ಥಾನ ಪಡೆದುಕೊಂಡಿದ್ದಾರೆ. 
    ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ, ಸಚಿವರಾದ ಕೃಷ್ಣ ಬೈರೇಗೌಡ, ಬಿ.ಎಸ್ ಸುರೇಶ್, ಶಾಸಕ ಗೋವಿಂದಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರೇಮಲತಾ ಅವರನ್ನು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ. 

Thursday, January 30, 2025

ನೌಕರರ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಲ್.ಕೆ ಲತಾ, ಉಪಾಧ್ಯಕ್ಷರಾಗಿ ಎಸ್. ಪ್ರಕಾಶ್

ಭದ್ರಾವತಿ ಹಳೇನಗರದ ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಲಾ ಶಿಕ್ಷಣ ಇಲಾಖೆಯ ಎಲ್.ಕೆ ಲತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಯನ್ನು ತಾಲೂಕು ಸರ್ಕಾರಿ ನೌಕರರ ಸಂಘದ  ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ. 
    ಭದ್ರಾವತಿ : ಹಳೇನಗರದ ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಲಾ ಶಿಕ್ಷಣ ಇಲಾಖೆಯ ಎಲ್.ಕೆ ಲತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ೧೩ ನಿರ್ದೇಶಕರನ್ನು ಒಳಗೊಂಡಿರುವ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎಲ್.ಕೆ ಲತಾ, ಉಪಾಧ್ಯಕ್ಷರಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಇಮ್ತಿಯಾಜ್ ಅಹಮದ್ ತಿಳಿಸಿದ್ದಾರೆ. 
    ನಿರ್ದೇಶಕರಾದ ಡಿ. ಮುರಳೀಧರ, ಎಂ. ಪುಟ್ಟುಲಿಂಗಮೂರ್ತಿ, ಎಸ್.ಟಿ ಸುಧೀಂದ್ರ ರೆಡ್ಡಿ, ಶಹತಾಜ್ ಪರ್ವೀನ್, ಎಂ. ಹನುಮಂತಪ್ಪ, ಆರ್. ಜಯಸ್ವಾಮಿ, ಜಿ.ಎಸ್ ರುದ್ರೇಶ್, ಎಸ್. ಆನಂದ್, ಎಚ್. ರುದ್ರೇಶ್, ವಿ. ಗದ್ದಿಗೆ ಸ್ವಾಮಿ ಮತ್ತು ಎಲ್.ಓ ಲೋಕೇಶ್ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. 
    ನೂತನ ಆಡಳಿತ ಮಂಡಳಿಯನ್ನು ತಾಲೂಕು ಸರ್ಕಾರಿ ನೌಕರರ ಸಂಘದ  ಅಧ್ಯಕ್ಷ ಬಿ. ಸಿದ್ದಬಸಪ್ಪ, ಪದಾಧಿಕಾರಿಗಳಾದ ಎಸ್.ಕೆ ಮೋಹನ್, ಕೆ.ಆರ್ ಪ್ರಶಾಂತ್, ಎಂ. ವೆಂಕಟೇಶ್, ವೈ.ಎನ್ ಶ್ರೀಧರಗೌಡ, ಎ. ರಂಗನಾಥ್ ಮತ್ತು ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ಕಾರ್ಯದರ್ಶಿ ಎಂ.ಎಸ್ ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. 

ಮಹಾತ್ಮಗಾಂಧಿ ಕೊಂದವರ ವೈಭವೀಕರಣ ವಿಷಾದನೀಯ : ಶಶಿಕುಮಾರ್ ಗೌಡ

ಭದ್ರಾವತಿ ನಗರದ ಜನ್ನಾಪುರ ಫಿಲ್ಟರ್‌ಶೆಡ್ ಅಂತರಘಟ್ಟಮ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ ಮುಂಭಾಗ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಮಹಾತ್ಮಗಾಂಧಿಯವರ ಹುತಾತ್ಮ ದಿನ, ಸರ್ವೋದಯ ದಿನ ಆಚರಿಸಲಾಯಿತು. 
    ಭದ್ರಾವತಿ: ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಮನುವಾದಿಗಳ ಸಂಸ್ಕೃತಿ ಹೆಚ್ಚಾಗಿದ್ದು, ಮಹಾತ್ಮಗಾಂಧಿ ಕೊಂದವರನ್ನು ಮಹಾನ್ ವ್ಯಕ್ತಿಗಳಂತೆ ಬಿಂಬಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ವಿಷಾದ ವ್ಯಕ್ತಪಡಿಸಿದರು.  
    ಅವರು ಗುರುವಾರ ನಗರದ ಜನ್ನಾಪುರ ಫಿಲ್ಟರ್‌ಶೆಡ್ ಅಂತರಘಟ್ಟಮ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನ ಮುಂಭಾಗ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಗಾಂಧಿಯವರ ಹುತಾತ್ಮ ದಿನ, ಸರ್ವೋದಯ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ರಾಷ್ಟ್ರಪಿತ ಮಹಾತ್ಮಗಾಂಧಿಯವರು ಜಾತಿ, ಧರ್ಮ, ಮತಪಂಥಗಳನ್ನು ಮೀರಿ ಎಲ್ಲರನ್ನು ಒಗ್ಗೂಟಿಸಿಕೊಂಡು ಅಹಿಂಸಾ ಮಾರ್ಗದಲ್ಲಿ ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು, ಸರ್ವಕಾಲಕ್ಕೂ ಮಹಾತ್ಮಗಾಂಧಿಯವರು ಆದರ್ಶಪ್ರಾಯರಾಗಿದ್ದಾರೆ. ಆದರೆ ಇಂದು ದೇಶದಲ್ಲಿ ಅವರ ತತ್ವ, ಸಿದ್ಧಾಂತಗಳನ್ನು ವಿರೋಧ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದ್ದು, ಇದನ್ನು ಖಂಡಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಮಹಾತ್ಮಾ ಗಾಂಧಿಯವರ ವಿಷಯದಲ್ಲಿ ಬಾಯಿಗೆ ಬಂದಂತೆ ಮಾತನಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. 
    ಮಾದೇವಿ, ಪಾರ್ವತಿಬಾಯಿ, ದಿವ್ಯಶ್ರೀ, ಇಂದ್ರಮ್ಮ, ಶಾಂತಮ್ಮ ಸೇರಿದಂತೆ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಪ್ರಮುಖರು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. 

Wednesday, January 29, 2025

ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ಸುಳ್ಳು ವರದಿ ನೀಡಿರುವ ರಾಜಸ್ವ ನಿರೀಕ್ಷಕ ಸೇವೆಯಿಂದ ವಜಾಗೊಳಿಸಲು ಆಗ್ರಹ 

ಭದ್ರಾವತಿ ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಗೆ ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಹಾಗು ಸುಳ್ಳು ದಾಖಲೆಗಳ ಆಧಾರದ ಮೇರೆಗೆ ವಂಶವೃಕ್ಷ ನೀಡಿರುವ ರಾಜಸ್ವ ನಿರೀಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ : ತಾಲೂಕಿನ ಡಿ.ಬಿ ಹಳ್ಳಿ ಗ್ರಾಮದ ಸಂಗಪ್ಪ ಎಂಬುವವರಿಗೆ ವಂಶವೃಕ್ಷ ನೀಡದೆ ತೊಂದರೆ ನೀಡುತ್ತಿರುವ ಕ್ರಮ ಖಂಡಿಸಿ ಹಾಗು ಸುಳ್ಳು ದಾಖಲೆಗಳ ಆಧಾರದ ಮೇರೆಗೆ ವಂಶವೃಕ್ಷ ನೀಡಿರುವ ರಾಜಸ್ವ ನಿರೀಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಗ್ರಾಮದ ಸರ್ವೆ ನಂ. ೭೭/೪ರಲ್ಲಿ ೩ ಎಕರೆ ೬ ಗುಂಟೆ ಜಮೀನಿನಲ್ಲಿ ೧ ಎಕರೆ ಜಮೀನು ಸಂಗಪ್ಪ ಬಿನ್ ಸಣ್ಣಪ್ಪರವರ ಹೆಸರಿನಲ್ಲಿ ಮುತ್ತಜ್ಜಿ ನಾಗಮ್ಮರವರು ಅವರ ಮಗಳಾದ ನೀಲಮ್ಮರವರಿಗೆ ಕ್ರಯಕ್ಕೆ ನೀಡಿರುತ್ತಾರೆ. ಉಳಿದ ೧ ಎಕರೆ ೧೮ ಗುಂಟೆ ಜಮೀನು ಈಗಲೂ ಸಹ ನಾಗಮ್ಮರವರ ಹೆಸರಿನಲ್ಲಿಯೇ ಇರುತ್ತದೆ. ಇದರ ವಾರಸುದಾರರು ಸಂಗಪ್ಪ ಬಿನ್ ಸಣ್ಣಪ್ಪರವರೇ ಆಗಿದ್ದು, ವಂಶವೃಕ್ಷಕ್ಕಾಗಿ ಎ.ಸಿ/ಡಿ.ಸಿ ನ್ಯಾಯಾಲಯಗಳಲ್ಲಿ ಪ್ರಕರಣ ನಡೆದು ಸ್ಥಳ ಪರಿಶೀಲನೆ ಮಾಡಿದಾಗ ಅಂದಿನ ರಾಜಸ್ವ ನಿರೀಕ್ಷಕ ಮಾನೋಜಿರಾವ್‌ರವರು ಗ್ರಾಮಸ್ಥರೆಲ್ಲರೂ ನೀಲಕ್ಕನ ತಾಯಿ ನಾಗಮ್ಮ ಇವರ ಕುಟುಂಬದ ವಾರಸುದಾರ ಸಂಗಪ್ಪ ಬಿನ್ ಸಣ್ಣಪ್ಪ ಎಂದು ತಿಳಿಸಿದ್ದು, ಅಲ್ಲದೆ ಅನೇಕ ದಾಖಲೆಗಳು ಇದ್ದರೂ ಸಹ  ಸುಳ್ಳು ವರದಿಗಳನ್ನು ಮಾಡಿರುತ್ತಾರೆಂದು ಪ್ರತಿಭಟನಾನಿರತರು ದೂರಿದರು. 
    ಈ ಸಂಬಂಧ ನಾಡಕಛೇರಿ, ತಾಲೂಕು ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು.  ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ್ದ ಉಪ ವಿಭಾಗಾಧಿಕಾರಿ ಜಿ.ಎಸ್ ಸತ್ಯನಾರಾಯಣರವರು ಶಾಲಾ ದಾಖಲೆಗಳನ್ನು ರಾಜರುಪಡಿಸಿದ್ದಲ್ಲಿ ಸಂಗಪ್ಪ ಬಿನ್ ಸಣ್ಣಪ್ಪರವರ ಕುಟುಂಬದ ವಂಶವೃಕ್ಷ ಮಾಡಿಕೊಡಿ ಎಂದು ತಹಸೀಲ್ದಾರ್/ರಾಜಸ್ವ ನಿರೀಕ್ಷಕ/ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹಿಂದಿನ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಅಕ್ರಮ ಕಾರ್ಯ ಮುಚ್ಚಿ ಹಾಕುವ ಉದ್ದೇಶದಿಂದ ಸುಳ್ಳು ವರದಿಗಳನ್ನು ಸೃಷ್ಟಿಸಿರುತ್ತಾರೆಂದು ಆರೋಪಿಸಿದರು. 
    ಗ್ರಾಮಸ್ಥರು ಹಿಂದಿನ ತಹಸೀಲ್ದಾರ್ ನಾಗರಾಜು ಮತ್ತು ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಮತ್ತು ಉಪ ತಹಸೀಲ್ದಾರ್ ಮಂಜಾನಾಯ್ಕರವರ ಎದುರು ತಿಮ್ಮಕ್ಕ ಎಂಬ ಮಹಿಳೆ ಗ್ರಾಮದಲ್ಲಿ ವಾಸವಾಗಿರುವುದಿಲ್ಲ ಎಂದು ಸಾಕ್ಷಿ ನೀಡಿದ್ದಾರೆ. ಈ ಕುರಿತು ವಿಡಿಯೋ ಸಹ ಸಾಕ್ಷಿ ಇದೆ. ಆದರೂ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಬಡವರಿಗೆ ಮೋಸ, ವಂಚನೆ ಮಾಡಿದ್ದು, ಈತನನ್ನು ರಕ್ಷಿಸಲು ಉಳಿದ ಅಧಿಕಾರಿಗಳು ತಪ್ಪು ತಪ್ಪು ಮಾಹಿತಿಯನ್ನು ಸೇರಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ನೀಡಲು ತಡಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 
    ತಕ್ಷಣ ಮೇಲಾಧಿಕಾರಿಗಳು ತಕ್ಷಣ ರಾಜಸ್ವ ನಿರೀಕ್ಷಕ ಮಾನೋಜಿ ರಾವ್ ಸೇವೆಯಿಂದ ವಜಾಗೊಳಿಸಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣ ನ್ಯಾಯ ದೊರಕಿಸಿ ಕೊಡಬೇಕೆಂದು ಕೋರಿದರು. 
    ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್ದರು.