ಮಂಗಳವಾರ, ಫೆಬ್ರವರಿ 25, 2025

ಕಾಯ್ದೆ ಜಾರಿಗೆ ಬಂದರೂ ನಿಲ್ಲದ ಫೈನಾನ್ಸ್ ಕಂಪನಿಗಳ ಕಿರುಕುಳ

ಕುಟುಂಬಸ್ಥರನ್ನು ೧ ತಿಂಗಳ ಕಾಲ ಬೀದಿಗೆ ತಳ್ಳಿದ ಇಕ್ವಿಟಾಸ್ ಫೈನಾನ್ಸ್ 

ಭದ್ರಾವತಿ ತಾಲೂಕಿನ ಆಗರದಹಳ್ಳಿ ಗ್ರಾಮದ ನಿವಾಸಿ, ಭೋವಿ ಜನಾಂಗದ ಕೃಷಿ ಕೂಲಿ ಕಾರ್ಮಿಕ ಚೌಡಪ್ಪ ಹಾಗು ಸಹೋದರರ ಎರಡು ಮನೆಗಳಿಗೆ ಇಕ್ವಿಟಾಸ್ ಫೈನಾನ್ಸ್ ರವರು ನೋಟಿಸ್ ಅಂಟಿಸಿ ಬೀಗ ಜಡಿದಿರುವುದು. 
    ಭದ್ರಾವತಿ : ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ, ದೌರ್ಜನ್ಯ ತಪ್ಪಿಸಲು ಸರ್ಕಾರ ಕಾಯ್ದೆ ಜಾರಿಗೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ನಗರದ ಮೈಕ್ರೋ ಫೈನಾನ್ಸ್ ಕಂಪನಿಯೊಂದು ರೈತ ಕುಟುಂಬವನ್ನು ಸುಮಾರು ೧ ತಿಂಗಳ ಕಾಲ ಬೀದಿಗೆ ತಳ್ಳಿರುವ ಘಟನೆ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಇದರ ವಿರುದ್ಧ ರೈತ ಸಂಘ ಧ್ವನಿ ಎತ್ತುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಮುಂದಾಗಿದೆ. 
    ತಾಲೂಕಿನ ಆಗರದಹಳ್ಳಿ ಗ್ರಾಮದ ನಿವಾಸಿ, ಭೋವಿ ಜನಾಂಗದ ಕೃಷಿ ಕೂಲಿ ಕಾರ್ಮಿಕ ಚೌಡಪ್ಪ ನಗರದ ಇಕ್ವಿಟಾಸ್ ಫೈನಾನ್ಸ್‌ನಿಂದ ಸುಮಾರು ೨ ಲಕ್ಷ ರು. ಸಾಲ ೨೦೨೧ರಲ್ಲಿ ಪಡೆದಿದ್ದು, ಈಗಾಗಲೇ ಸಾಲದ ೯ ಕಂತುಗಳನ್ನು ಫೈನಾನ್ಸ್‌ಗೆ ಪಾವತಿಸಿರುತ್ತಾರೆ. ಈ ನಡುವೆ ಉಳಿದ ಬಾಕಿ ಹಣ ವಸೂಲಿಗಾಗಿ ಫೈನಾನ್ಸ್‌ರವರು ಒಂದು ತಿಂಗಳ ಹಿಂದೆ ಚೌಡಪ್ಪ ಹಾಗು ಸಹೋದರರಿಗೆ ಸೇರಿದ ೩೦*೫೦ ಅಡಿ ವಿಸ್ತೀರ್ಣದ ಎರಡು ಮನೆಗಳಿಗೆ ಬೀಗ ಜಡಿದು ಕುಟುಂಬದ ಸುಮಾರು ೧೫ ಮಂದಿ ಬೀದಿಯಲ್ಲಿ ಕಾಲ ಕಳೆಯುವಂತೆ ಮಾಡಿದ್ದು, ಶಾಲಾ ಕಟ್ಟಡ, ದೇವಸ್ಥಾನಗಳಲ್ಲಿ ಕುಟುಂಬಸ್ಥರು ಉಳಿದುಕೊಂಡು ಜೀವನ ಸಾಗಿಸಿರುವುದು ತಿಳಿದು ಬಂದಿದೆ. 
    ಫೈನಾನ್ಸ್ ಕಂಪನಿಯ ಈ ಕ್ರೂರ ವರ್ತನೆಯನ್ನು ಖಂಡಿಸಿ ರೈತ ಸಂಘದಿಂದ ಇದರ ವಿರುದ್ಧ ಹೋರಾಟ ಆರಂಭಿಸಿದ್ದು, ಮೊದಲ ಹಂತದಲ್ಲಿ ಕಳೆದ ೨ ದಿನಗಳ ಹಿಂದೆ ಫೈನಾನ್ಸ್‌ರವರು ಎರಡು ಮನೆಗಳಿಗೆ ಜಡಿದಿರುವ ಬೀಗ ತೆರವುಗೊಳಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.  


ಭದ್ರಾವತಿ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದ ರೈತರು, ಫೈನಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗುವ ಜೊತೆಗೆ ಎಚ್ಚರಿಕೆ ನೋಟಿಸ್ ಅಂಟಿಸಿದರು. 
    ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ : 
    ಮಂಗಳವಾರ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದ ರೈತರು, ಫೈನಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗುವ ಜೊತೆಗೆ ಸರ್ಕಾರ ಕಾಯ್ದೆ ಜಾರಿಗೆ ತಂದರೂ ಸಹ ಬಡ ರೈತರ ಮೇಲೆ ಕಿರುಕುಳ ಮುಂದುವರೆಯುತ್ತಿರುವುದು ಖಂಡನೀಯ. ತಕ್ಷಣ ಜಿಲ್ಲಾಧಿಕಾರಿಗಳು ಗಮನ ಹರಿಸುವ ಮೂಲಕ ಇಂತಹ ಫೈನಾನ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ ` ಮೈಕ್ರೋ ಫೈನಾನ್ಸ್ ಕಂಪನಿಗಳೇ ಊರೊಳಗೆ ಕಾಲಿಟ್ಟರೆ ನಿಮಗೆ ಉಳಿಗಾಲವಿಲ್ಲ' ಎಂಬ ಘೋಷ ವಾಕ್ಯದೊಂದಿಗೆ ಎಚ್ಚರಿಕೆ ದಿನವಾಗಿ ಆಚರಿಸಿ ಕಛೇರಿಗೆ ನೋಟಿಸ್ ಅಂಟಿಸಲಾಯಿತು. 


ಭದ್ರಾವತಿ ನಗರದ ಇಕ್ವಿಟಾಸ್ ಫೈನಾನ್ಸ್ ಕಛೇರಿಯ ಕ್ರೂರ ವರ್ತನೆ ಖಂಡಿಸಿ ಮಂಗಳವಾರ ರೈತರು ಲೋಕಾಯುಕ್ತ ಜಿಲ್ಲಾ ನಿರೀಕ್ಷಕ ವೀರಬಸಪ್ಪ ಕುಶಾಲಪುರ ಅವರಿಗೆ ದೂರು ಸಲ್ಲಿಸಿದರು. 
      ಲೋಕಾಯುಕ್ತರಿಗೆ ದೂರು : 
    ಪ್ರತಿಭಟನೆಗೂ ಮೊದಲು ರೈತರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಲೋಕಾಯುಕ್ತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಜಿಲ್ಲಾ ನಿರೀಕ್ಷಕ ವೀರಬಸಪ್ಪ ಕುಶಾಲಪುರ ಅವರಿಗೆ ದೂರು ಸಲ್ಲಿಸಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದ್ದು, ಸರ್ಕಾರ ಕಾಯ್ದೆ ಜಾರಿಗೆ ತಂದರೂ ಸಹ ಕಿರುಕುಳ ನಿಲ್ಲುತ್ತಿಲ್ಲ. ಇಕ್ವಿಟಾಸ್ ಫೈನಾನ್ಸ್ ಕ್ರೂರ ವರ್ತನೆ ಕುರಿತು ಫೆ.೪ರಂದು ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಆದರೆ ತಾಲೂಕು ಆಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 
    ಇದಕ್ಕೆ ಸ್ಪಂದಿಸಿದ ವೀರಬಸಪ್ಪ ಕುಶಾಲಪುರ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು. ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. 
    ರೈತ ಪ್ರಮುಖರಾದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಮಂಜುನಾಥ್, ಡಿ.ವಿ ವೀರೇಶ್, ಚಂದ್ರಪ್ಪ, ರಂಗಪ್ಪ, ವೀರೇಶ ಸೇರಿದಂತೆ ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು. 

ಸೋಮವಾರ, ಫೆಬ್ರವರಿ 24, 2025

ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ೫ ಜನರ ವಿರುದ್ಧ ಪ್ರಕರಣ ದಾಖಲು

ನೌಕರನಿಗೆ ಮಾನಸಿಕ, ದೈಹಿಕ ಹಿಂಸೆ, ಜಾತಿನಿಂದನೆ ಆರೋಪ 


    ಭದ್ರಾವತಿ: ಇಲ್ಲಿನ ಕೈಗಾರಿಕಾ ಪ್ರದೇಶದ ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ೫ ಜನರ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಹಳೇನಗರ ವ್ಯಾಪ್ತಿಯ ಗಾಂಧಿನಗರ ನಿವಾಸಿ ಬಿ.ಎನ್ ರವಿ ಎಂಬುವರು ಕಳೆದ ೫ ದಿನಗಳ ಹಿಂದೆ ಫೆ.೧೯ರಂದು ದೂರು ದಾಖಲಿಸಿದ್ದಾರೆ. ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವೈ.ವಿ ಮಧುಕರ್ ಜೋಯ್ಸ್, ಕಾರ್ಯನಿರ್ವಾಹಕ ನಿರ್ದೇಶಕ ಪ್ರತೀಕ್ ಜೋಯ್ಸ್, ಸಿ.ಇ.ಓ ಬಿ.ಎಸ್ ಜಗದೀಶ್, ಉತ್ಪಾದನಾ ವಿಭಾಗದ ವ್ಯವಸ್ಥಾಪಕ ರಾವಾ ಸಾಹೇಬ್ ಗಲೀಬಿ ಮತ್ತು ಕಚೇರಿ ಎಚ್.ಆರ್ ನಿರಂಜನ್ ವಿರುದ್ಧ ಮಾನಸಿಕ ಮತ್ತು ದೈಹಿಕ ಹಿಂಸೆ ಹಾಗು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. 
    ಮೋಚಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿರುವ ದಲಿತ ಸಮುದಾಯದ ಬಿ.ಎನ್ ರವಿ ಕಳೆದ ೧೮ ವರ್ಷಗಳಿಂದ ಕಾರ್ಖಾನೆಯ ಉತ್ಪಾದನಾ ವಿಭಾಗದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದು, ಕಾರ್ಮಿಕರ ಬೇಡಿಕೆಗಾಗಿ ಕಾರ್ಮಿಕ ಸಂಘದ ಅಧ್ಯಕ್ಷರ ಜೊತೆ ಸೇರಿ ಹೋರಾಟ ಮಾಡಿದ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ಇವರಿಗೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡುವ ಜೊತೆಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಕೆಲಸದಿಂದ ತೆಗೆದು ಹಾಕುವ ಹಾಗು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. 

ಫೆ.೨೫ರಂದು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ


    ಭದ್ರಾವತಿ: ಲೋಕಾಯುಕ್ತ ಜಿಲ್ಲಾ ಪೊಲೀಸ್ ಉಪಾಧೀಕ್ಷಕರಿಂದ ಫೆ.೨೫ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧೨.೩೦ರ ವರೆಗೆ ನಗರಸಭೆ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯಲಿದೆ. 
    ಪ್ರತಿ ತಿಂಗಳಿನಂತೆ ಈ ಬಾರಿ ಸಹ ಅಹವಾಲು ಸ್ವೀಕಾರ ಸಭೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಂಡು ತಮ್ಮ ಅಹವಾಲುಗಳನ್ನು ಸಲ್ಲಿಸುವ ಮೂಲಕ ಪರಿಹಾರ ಕಂಡು ಕೊಳ್ಳಬಹುದಾಗಿದೆ ಎಂದು ತಹಸೀಲ್ದಾರ್ ಪರುಸಪ್ಪ ಕುರುಬರ ತಿಳಿಸಿದ್ದಾರೆ. 

ಕಮಲಕುಮಾರಿಗೆ ಸಮಾಜಶ್ರೀ ರಾಜ್ಯ ಪ್ರಶಸ್ತಿ

ಕಮಲಕುಮಾರಿ 
    ಭದ್ರಾವತಿ: ಹೊಸಮನೆ ನಿವಾಸಿ, ಹಳೇನಗರ ಮಹಿಳಾ ಸೇವಾ ಸಮಾಜದ ಮಾಜಿ ಉಪಾಧ್ಯಕ್ಷೆ ಕಮಲಕುಮಾರಿ ಅವರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಸಮಾಜಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಿದೆ. 
    ಕಮಲಕುಮಾರಿಯವರು ಸಾಹಿತ್ಯ, ರಾಜಕೀಯ ಹಾಗು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ವಿಭಿನ್ನವಾಗಿ ತೊಡಗಿಸಿಕೊಂಡಿದ್ದು, ಹಳೇನಗರ ಮಹಿಳಾ ಸೇವಾ ಸಮಾಜ, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲೂ ಹಲವಾರು ವರ್ಷಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡು ಮಹಿಳಾ ಕಾಂಗ್ರೆಸ್ ಹೆಚ್ಚಿನ ರೀತಿಯಲ್ಲಿ ಸಂಘಟಿಸುವಲ್ಲಿ ಶ್ರಮವಹಿಸಿದ್ದರು. ಅಲ್ಲದೆ ವಿಭಿನ್ನ ರೀತಿಯ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 
    ಇವರ ಸಮಾಜ ಸೇವೆಯನ್ನು ಪರಿಗಣಿಸಿ ಸಮಾಜಶ್ರೀ ರಾಜ್ಯ ಪ್ರಶಸ್ತಿ ಅಕಾಡೆಮಿ ನೀಡುತ್ತಿದ್ದು, ಮಾ.೨ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಮಲಕುಮಾರಿಯವರಿಗೆ ನಗರದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. 

ಧಾರ್ಮಿಕ ಆಚರಣೆ : ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯಕ್ಕೆ ಪಾದಯಾತ್ರೆ

ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಧರ್ಮ ಕೇಂದ್ರದ ವತಿಯಿಂದ ಶಿವಮೊಗ್ಗ ಸೆಕ್ರೆಟ್ ಹಾರ್ಟ್ ಪ್ರಧಾನಾಲಯಕ್ಕೆ ಭಕ್ತಾದಿಗಳು ಪಾದಯಾತ್ರೆ ಕೈಗೊಂಡರು. 
    ಭದ್ರಾವತಿ : ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಧರ್ಮ ಕೇಂದ್ರದ ವತಿಯಿಂದ ಶಿವಮೊಗ್ಗ ಸೆಕ್ರೆಟ್ ಹಾರ್ಟ್ ಪ್ರಧಾನಾಲಯಕ್ಕೆ ಭಕ್ತಾದಿಗಳು ಪಾದಯಾತ್ರೆ ಕೈಗೊಂಡರು. 
    ೨೦೨೫ ಜ್ಯೂಬಿಲಿ ವರ್ಷವನ್ನು ಯಾತ್ರಾತ್ರಿ ವರ್ಷವನ್ನಾಗಿ ಕ್ರೈಸ್ತ ಕಥೋಲಿಕ ಧರ್ಮದ ಜಗದ್ಗುರು ಫ್ರಾನ್ಸಿಸ್‌ರವರು ಘೋಷಿಸಿದ್ದು,  ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಸಾಧ್ಯವಾದಷ್ಟು ಪುಣ್ಯಕ್ಷೇತ್ರಗಳಿಗೆ ತೆರಳಿ ಪ್ರಾರ್ಥಿಸಲು ಕರೆ ನೀಡಲಾಗಿದೆ ಎಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ ತಿಳಿಸಿದರು. 
    ಇದರ ಅಂಗವಾಗಿ ಧರ್ಮ ಕೇಂದ್ರದ ಇನ್ನೂರಕ್ಕೂ ಅಧಿಕ ಭಕ್ತರು ಧರ್ಮ ಕೇಂದ್ರದಿಂದ ಸುಮಾರು ೨೦ ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಪ್ರಾರ್ಥಿಸುತ್ತಾ ಶಿವಮೊಗ್ಗಕ್ಕೆ ಯಾತ್ರೆ ಕೈಗೊಂಡರು. 
    ನಂತರ ಶಿವಮೊಗ್ಗ ಪ್ರಧಾನಾಲಯದ ಧರ್ಮ ಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜರವರಿಂದ ಪೂಜಾ ವಿಧಿ-ವಿಧಾನಗಳು ನೆರವೇರಿದವು. ಶಿವಮೊಗ್ಗ ವಿವಿಧ ಧರ್ಮ ಕೇಂದ್ರಗಳ ಗುರುಗಳು, ಸೈಂಟ್ ಚಾರ್ಲ್ಸ್ ಬರೋಮಿಯೋ ಸಂಸ್ಥೆಯ ಧರ್ಮ ಭಗಿನಿಯರು, ಮಕ್ಕಳು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಬ್ಬ ಆರೋಪಿ, ರೌಡಿಶೀಟರ್ ಕಾಲಿಗೆ ಗುಂಡೇಟು

ಆರೋಪಿ, ರೌಡಿಶೀಟರ್ ಶಹೀದ್ 
    ಭದ್ರಾವತಿ:  ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿರುವ ಮತ್ತೊಂದು ಘಟನೆ ನಡೆದಿದೆ.
    ರೌಡಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ, ಸುಮಾರು ೧೨ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಶಹೀದ್ ಕಾಲಿಗೆ ಗುಂಡು ಹಾರಿಸಲಾಗಿದೆ. ನಗರದ ಪೇಪರ್‌ಟೌನ್ ಠಾಣೆ ಪೊಲೀಸರು ಈತನನ್ನು ಹಿಡಿಯಲು ಹೋದಾಗ ಪೊಲೀಸ್ ಕಾನ್ಸ್‌ಸ್ಟೇಬಲ್ ನಾಗರಾಜ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಠಾಣೆಯ ನಿರೀಕ್ಷಕಿ ನಾಗಮ್ಮ ಈತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 
    ಗಾಯಗೊಂಡಿರುವ ಶಹೀದ್‌ಗೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಳೆದ ೩ ದಿನಗಳ ಹಿಂದೆ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ರೌಡಿಶೀಟರ್ ಗುಂಡ ಅಲಿಯಾಸ್ ರವಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. 
    ಶಹೀದ್ ೨೦೨೪ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಸಹ  ಆರೋಪಿಯಾಗಿದ್ದ. ಯಾಸಿನ್ ಖುರೇಷಿಯ ಆಪ್ತ ಹಾಗೂ ಆದಿಲ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಈತ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಎಂಬ ಆರೋಪ ಈತನ ಮೇಲಿದೆ. 

ಭಾನುವಾರ, ಫೆಬ್ರವರಿ 23, 2025

ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ

ಸಮುದಾಯದವರ ಏಳಿಗೆಗೆ ಬದ್ಧ, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದ : ಬಿ.ವೈ ರಾಘವೇಂದ್ರ 

ಭದ್ರಾವತಿ ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಸಂಸದ ಬಿ.ವೈ ರಾಘವೇಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ: ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
     ಸಮಾವೇಶದಲ್ಲಿ ಮೊದಲಿಯಾರ್ ಸಮುದಾಯದವರು ಇನ್ನೂ ಹೆಚ್ಚು ಕ್ರಿಯಾಶೀಲರಾಗುವ ಮೂಲಕ ಸಂಘಟನೆಗೆ ಒತ್ತು ನೀಡಬೇಕು. ಸಮುದಾಯದವರ ಹಿತರಕ್ಷಣೆಗೆ ಬದ್ಧರಾಗಿ ಪರಿಣಾಮಕಾರಿ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳುವಂತೆ ಕರೆ ನೀಡಲಾಯಿತು. 
    ಸಮಾವೇಶದಲ್ಲಿ ಬಿ.ವೈ ರಾಘವೇಂದ್ರರವರು ತಾಲೂಕು ಸಂಘದ ನೂತನ ಕಛೇರಿ ಉದ್ಘಾಟಿಸುವ ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಮೊದಲಿಯಾರ್ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಈ ಸಮುದಾಯದವರ ಏಳಿಗೆಗೆ ಬದ್ಧನಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದ್ದೇನೆ ಎಂದರು.  
    ಸಮಾವೇಶಕ್ಕೂ ಮೊದಲು ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ದ್ವಜಾರೋಹಣ ನೆರವೇರಿಸಿದರು. ಸಮಾವೇಶದಲ್ಲಿ ಪಾಂಡಿಚೆರಿ, ತಮಿಳುನಾಡು, ಹೈದರಬಾದ್ ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.  ತಾಲೂಕು ಸಂಘದ ಅಧ್ಯಕ್ಷ ಕೆ. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಬಿ.ವೈ ರಾಘವೇಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಐಎಂಪಿಎ ಸಂಸ್ಥಾಪಕ ಚೆವಲಿಯಾರ್ ಡಾ. ಆರ್. ಅರುಣಾಚಲ, ಎಐಎಟಿವಿಎಸ್ ಕಾರ್ಯದರ್ಶಿ ಗೋಪಾಲಮಣಿ, ಎನ್. ಮಂಜುನಾಥ್, ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಲೂಕು ಸಂಘದ ಉಪಾಧ್ಯಕ್ಷ ಎ. ಸುಬ್ರಮಣಿ,  ಕಾರ್ಯದರ್ಶಿ ವಿ. ಶಿವಕುಮಾರ್(ಪೆಟ್ರೋಲ್ ಬಂಕ್), ಖಜಾಂಚಿ ಜಿ. ಸುರೇಶ್ ಕುಮಾರ್, ಸಹ ಕಾರ್ಯದರ್ಶಿ ಎನ್. ರವಿಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ಭದ್ರಾವತಿ ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶದಲ್ಲಿ ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.