ಸಮಾಜ ಕಲ್ಯಾಣ ಖಾತೆ ಸಚಿವರಿಗೆ ಮನವಿ, ಶಾಸಕ ಸಂಗಮೇಶ್ವರ್‌ಗೆ ಅಭಿನಂದನೆ
ಭದ್ರಾವತಿಯಲ್ಲಿ ಮುಕ್ತಾಯ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದ ಊಟದ ಕೊಠಡಿ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸುವಂತೆ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್.ಸಿ ಮಹಾದೇವಪ್ಪರಿಗೆ ಪತ್ರ ಬರೆದು ಕೋರಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ : ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ಮುಕ್ತಾಯ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನಕ್ಕೆ ಊಟದ ಕೊಠಡಿ ಅಗತ್ಯವಿದ್ದು, ಸುಮಾರು ೨ ಕೋ. ರು. ಅನುದಾನ ಬಿಡುಗಡೆಗೊಳಿಸುವಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್.ಸಿ ಮಹಾದೇವಪ್ಪರವರಿಗೆ ಮಂಗಳವಾರ ಪತ್ರ ಬರೆದು ಕೋರಿದ್ದಾರೆ.
ಕ್ಷೇತ್ರದ ನಿವಾಸಿಗಳ ಹಲವು ದಶಕಗಳ ಬೇಡಿಕೆಯಾಗಿದ್ದ ವಿಶ್ವಜ್ಞಾನಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್‌ರವರ ಸುಸಜ್ಜಿತ ಭವನ ಸುಮಾರು ೫ ಕೋ.ರು. ವೆಚ್ಚದಲ್ಲಿ ನಿರ್ಮಾಣಗೊಂಡು ಮುಕ್ತಾಯ ಹಂತ ತಲುಪಿದ್ದು, ಭವನದ ಹಿಂಭಾಗದಲ್ಲಿ ಊಟದ ಕೊಠಡಿ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ಅನುದಾನ ಸರ್ಕಾರದಿಂದ ಮಂಜೂರಾತಿ ಮಾಡಿಸಿಕೊಡುವಂತೆ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸುಮಾರು ೪ ದಿನಗಳ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು.
ಮನವಿಗೆ ಸ್ಪಂದಿಸಿರುವ ಶಾಸಕರು, ಕ್ಷೇತ್ರದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಂಘ-ಸಂಸ್ಥೆಗಳಿಗೆ, ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸಭೆ, ಸಮಾರಂಭ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಡಾ. ಬಿ.ಆರ್ ಅಂಬೇಡ್ಕರ್ ಭವನ ಅತ್ಯುತ್ತಮ ಸ್ಥಳವಾಗಿದೆ. ಈ ಭವನ ೫ ಕೋ.ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಕಾರ್ಯದಲ್ಲಿ ತಾವು ನೀಡಿರುವ ಸಹಕಾರ ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದ ಜನತೆಯ ಪರವಾಗಿ ವಾದ ಕೃತಜ್ಞತೆ ಸಲ್ಲಿಸುತ್ತೇನೆ. ಭವನದ ಹಿಂಭಾಗದಲ್ಲಿ ಊಟದ ಕೊಠಡಿ ನಿರ್ಮಾಣದ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ಸುಮಾರು ೨ ಕೋ.ರು. ಅನುದಾನ ಬಿಡುಗಡೆಗೊಳಿಸುವ ಜೊತೆಗೆ ಏ.೧೪ರಂದು ತಮ್ಮ ನೇತೃತ್ವದಲ್ಲಿ ಭವನ ಉದ್ಘಾಟಿಸಿ ಸಾರ್ವಜನಕರ ಬಳಕೆ ನೀಡುವಂತೆ ಸಚಿವರಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ.
ಶಾಸಕರಿಗೆ ಅಭಿನಂದನೆ:
ಸಚಿವರಿಗೆ ಊಟದ ಕೊಠಡಿ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸುವಂತೆ ಪತ್ರ ಬರೆದು ಕೋರಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.