Tuesday, March 11, 2025

ಎ.ಎಸ್ ಪದ್ಮಾವತಿ, ಡಾ. ವೀಣಾ ಭಟ್ ಇಬ್ಬರು ಸಾಧಕಿಯರಿಗೆ `ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ'

`ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ' ಪುರಸ್ಕೃತರಾದ ಎ.ಎಸ್. ಪದ್ಮಾವತಿ 
    ಭದ್ರಾವತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಹಾಗು ಮಹಿಳಾ ಸಾಧಕಿಯರಿಗೆ ನೀಡಲಾಗುವ `ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ' ಈ ಬಾರಿ ನಗರದ ಇಬ್ಬರು ಮಹಿಳಾ ಸಾಧಕಿಯರಿಗೆ ಲಭಿಸಿದೆ. 
    ನಗರದ ಜನ್ನಾಪುರ ನಿವಾಸಿ ಎ.ಎಸ್ ಪದ್ಮಾವತಿ(ಪದ್ಮಾವತಿ ಸಚ್ಚಿದಾನಂದ ಗುಪ್ತ) ಅವರಿಗೆ ಕಲಾ ವಿಭಾಗದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಹಾಗು ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ)ಯ ನಯನ ಆಸ್ಪತ್ರೆ ಪ್ರಸೂತಿ ತಜ್ಞೆ, ವೈದ್ಯ ಸಾಹಿತಿ ಡಾ. ವೀಣಾ ಭಟ್ ಅವರಿಗೆ ಮಹಿಳೆಯರ ಅಭಿವೃದ್ಧಿಗಾಗಿ   ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. 
    ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಧಕಿಯರಾದ ಎ.ಎಸ್ ಪದ್ಮಾವತಿ ಮತ್ತು ಡಾ. ವೀಣಾ ಭಟ್ ಪ್ರಶಸ್ತಿ ಸ್ವೀಕರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

`ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ' ಪುರಸ್ಕೃತರಾದ ಡಾ. ವೀಣಾ ಭಟ್ 

ಡಾ.ಬಿ.ಆರ್ ಅಂಬೇಡ್ಕರ್ ಭವನ ಊಟದ ಕೊಠಡಿ ನಿರ್ಮಾಣಕ್ಕೆ ೨ ಕೋ.ರು. ಅನುದಾನ ಬಿಡುಗಡೆಗೊಳಿಸಿ

    ಸಮಾಜ ಕಲ್ಯಾಣ ಖಾತೆ ಸಚಿವರಿಗೆ ಮನವಿ, ಶಾಸಕ ಸಂಗಮೇಶ್ವರ್‌ಗೆ ಅಭಿನಂದನೆ 

ಭದ್ರಾವತಿಯಲ್ಲಿ ಮುಕ್ತಾಯ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದ ಊಟದ ಕೊಠಡಿ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸುವಂತೆ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್.ಸಿ ಮಹಾದೇವಪ್ಪರಿಗೆ ಪತ್ರ ಬರೆದು ಕೋರಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.  
    ಭದ್ರಾವತಿ : ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ಮುಕ್ತಾಯ ಹಂತದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನಕ್ಕೆ ಊಟದ ಕೊಠಡಿ ಅಗತ್ಯವಿದ್ದು, ಸುಮಾರು ೨ ಕೋ. ರು. ಅನುದಾನ ಬಿಡುಗಡೆಗೊಳಿಸುವಂತೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್.ಸಿ ಮಹಾದೇವಪ್ಪರವರಿಗೆ ಮಂಗಳವಾರ ಪತ್ರ ಬರೆದು ಕೋರಿದ್ದಾರೆ. 
    ಕ್ಷೇತ್ರದ ನಿವಾಸಿಗಳ ಹಲವು ದಶಕಗಳ ಬೇಡಿಕೆಯಾಗಿದ್ದ ವಿಶ್ವಜ್ಞಾನಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್‌ರವರ ಸುಸಜ್ಜಿತ ಭವನ ಸುಮಾರು ೫ ಕೋ.ರು. ವೆಚ್ಚದಲ್ಲಿ ನಿರ್ಮಾಣಗೊಂಡು ಮುಕ್ತಾಯ ಹಂತ ತಲುಪಿದ್ದು, ಭವನದ ಹಿಂಭಾಗದಲ್ಲಿ ಊಟದ ಕೊಠಡಿ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ಅನುದಾನ ಸರ್ಕಾರದಿಂದ ಮಂಜೂರಾತಿ ಮಾಡಿಸಿಕೊಡುವಂತೆ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸುಮಾರು ೪ ದಿನಗಳ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. 
    ಮನವಿಗೆ ಸ್ಪಂದಿಸಿರುವ ಶಾಸಕರು, ಕ್ಷೇತ್ರದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಂಘ-ಸಂಸ್ಥೆಗಳಿಗೆ, ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸಭೆ, ಸಮಾರಂಭ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಡಾ. ಬಿ.ಆರ್ ಅಂಬೇಡ್ಕರ್ ಭವನ ಅತ್ಯುತ್ತಮ ಸ್ಥಳವಾಗಿದೆ. ಈ ಭವನ ೫ ಕೋ.ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಕಾರ್ಯದಲ್ಲಿ ತಾವು ನೀಡಿರುವ ಸಹಕಾರ ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ ಕ್ಷೇತ್ರದ ಜನತೆಯ ಪರವಾಗಿ ವಾದ ಕೃತಜ್ಞತೆ ಸಲ್ಲಿಸುತ್ತೇನೆ. ಭವನದ ಹಿಂಭಾಗದಲ್ಲಿ ಊಟದ ಕೊಠಡಿ ನಿರ್ಮಾಣದ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಅಗತ್ಯವಿರುವ ಸುಮಾರು ೨ ಕೋ.ರು. ಅನುದಾನ ಬಿಡುಗಡೆಗೊಳಿಸುವ ಜೊತೆಗೆ ಏ.೧೪ರಂದು ತಮ್ಮ ನೇತೃತ್ವದಲ್ಲಿ ಭವನ ಉದ್ಘಾಟಿಸಿ ಸಾರ್ವಜನಕರ ಬಳಕೆ ನೀಡುವಂತೆ ಸಚಿವರಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ. 
    ಶಾಸಕರಿಗೆ ಅಭಿನಂದನೆ: 
ಸಚಿವರಿಗೆ ಊಟದ ಕೊಠಡಿ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸುವಂತೆ ಪತ್ರ ಬರೆದು ಕೋರಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.  

ಮಹಿಳೆ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದಾಳೆ : ಪಿ. ಭವ್ಯ

ಭದ್ರಾವತಿಯಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಹಳೇನಗರದ ಶ್ರೀವೀರಭದ್ರೇಶ್ವರ ದೇವಸ್ಥಾನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಕಾರಗೃಹ ಸಹಾಯಕ ಅಧೀಕ್ಷಕಿ ಪಿ. ಭವ್ಯ ಅವರಿಗೆ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
    ಭದ್ರಾವತಿ: ಮಹಿಳೆಯರು ಮೊದಲು ತಮ್ಮನ್ನು ತಾವು ಗೌರವಿಸಿಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಪ್ರಸ್ತುತ ಮಹಿಳೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದಾಳೆ ಎಂದು ಶಿವಮೊಗ್ಗ ಕಾರಗೃಹ ಸಹಾಯಕ ಅಧೀಕ್ಷಕಿ ಪಿ. ಭವ್ಯ ಹೇಳಿದರು. 
    ಅವರು ಸೋಮವಾರ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಹಳೇನಗರದ ಶ್ರೀವೀರಭದ್ರೇಶ್ವರ ದೇವಸ್ಥಾನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 
    ಒಂದು ಕಾಲದಲ್ಲಿ ಮಹಿಳೆ ಮನೆಯ ೪ ಗೋಡೆಗಳ ನಡುವೆ ಸೀಮಿತವಾಗಿದ್ದಳು. ಆದರೆ ಪ್ರಸ್ತುತ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಪುರುಷನ ಸಮಾನತೆ ಎದುರು ನೋಡುತ್ತಿದ್ದಾಳೆ. ಸಮಾಜದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರನ್ನು ಸಮಾನವಾಗಿ ಕಾಣುವ ಮನಸ್ಥಿತಿ ಬದಲಾಗಬೇಕಿದೆ. ಈ ಹಿನ್ನಲೆಯಲ್ಲಿ ಮನೆಗಳಲ್ಲಿ ಇಬ್ಬರಿಗೂ ಸಮಾನ ಅವಕಾಶಗಳನ್ನು ನೀಡಬೇಕು. ಹೆಣ್ಣು ಮಕ್ಕಳಿಗೆ ಇನ್ನೂ ಹೆಚ್ಚಿನ ಶಿಕ್ಷಣ ನೀಡಬೇಕು. ಆಕೆಗೆ ತನ್ನದೇ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ನೀಡಬೇಕೆಂದರು. 
    ಮಹಿಳೆ ಪ್ರಕೃತಿಯ ವಿಶೇಷ ಸೃಷ್ಟಿಯಾಗಿದ್ದು, ಮಹಿಳೆಯಿಂದ ಯಾವುದೂ ಅಸಾಧ್ಯವಲ್ಲ. ಆಕೆಯಲ್ಲಿ ಅದ್ಭುತ ಶಕ್ತಿ ಇದ್ದು, ಇದು ನಮ್ಮ ನಡುವೆಯೇ ಬಹಳಷ್ಟು ಬಾರಿ ಸಾಬೀತಾಗಿದೆ. ಆಕೆಯ ಸಾಧನೆಗೆ ಮತ್ತಷ್ಟು ಪ್ರಶಂಸೆ, ಪ್ರೋತ್ಸಾಹ ನಮ್ಮಿಂದ ಲಭಿಸಿದಾಗ ಇನ್ನೂ ಹೆಚ್ಚಿನ ಸಾಧನೆ ಮಾಡಲು ಆಕೆಗೆ ಸಾಧ್ಯವಾಗುತ್ತದೆ ಎಂದರು.   
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಮಹಿಳೆಯರು ಎಲ್ಲಾ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸ ಬಲ್ಲರು. ಕುಟುಂಬದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಅಲ್ಲದೆ ಕುಟುಂಬ ನಿರ್ವಹಣೆ ಜೊತೆಗೆ ಸಮಾಜದ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು  ಪುರುಷರಂತೆ ಯಾವುದರಲ್ಲೂ ಕಡಿಮೆ ಇಲ್ಲದಂತೆ ಮುನ್ನಡೆಯುತ್ತಿದ್ದು, ನಮ್ಮ ಇತಿಹಾಸದ ಪುಟದಲ್ಲಿ ಆನೇಕ ಸಾಧಕ ಮಹಿಳೆಯರಿದ್ದಾರೆ. ನಮಗೆ ಅವರು ಸ್ಪೂರ್ತಿದಾಯಕರಾಗಿದ್ದು, ಅವರ ದಾರಿಯಲ್ಲಿ ನಾವುಗಳು ಸಹ ಮುನ್ನಡೆಯಬೇಕೆಂದರು. 
    ಸಮಾಜದ ಗೌರವಾಧ್ಯಕ್ಷೆ ಆರ್.ಎಸ್ ಶೋಭಾ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ವಿಜಯದೇವಿಯವರ ಮಾರ್ಗದರ್ಶನದಲ್ಲಿ ಅವರ ತಾಯಿಯವರ ನೆನಪಿನಲ್ಲಿ ಸಾಧಕ ಮಹಿಳೆಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಕಳೆದ ಕೆಲವು ವರ್ಷಗಳಿಂದ ಮಹಿಳಾ ದಿನಾಚರಣೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಮಹಿಳೆಯರು ತಮ್ಮನ್ನು ತಾವು ಆತ್ಮವಾಲೋಕನ ಮಾಡಿಕೊಳ್ಳುವ ಜೊತೆಗೆ ಪುರುಷರೊಂದಿಗೆ ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳುವ ದಿನ ಮಹಿಳಾ ದಿನಾಚರಣೆಯಾಗಬೇಕೆಂಬ ಆಶಯ ನಮ್ಮದಾಗಿದೆ ಎಂದರು.  
    ನಗರಸಭೆ ಪೌರಕಾರ್ಮಿಕರಾದ ಲಕ್ಷ್ಮಮ್ಮ ಸೋಮಣ್ಣ, ಪತ್ರಕರ್ತೆ ಆರ್. ಫಿಲೋಮಿನ ಅಂತೋಣಿ, ಡಿ.ಜಿ ಹಳ್ಳಿ ಆಶಾ ಕಾರ್ಯಕರ್ತೆ ರಾಜೇಶ್ವರಿ ನಂದೀಶ್ ಮತ್ತು ಹಳ್ಳಿಕೆರೆ-ಬಾರಂದೂರು ಅಂಗನವಾಡಿ ಕಾರ್ಯಕರ್ತೆ ಟಿ. ಮಂಜುಳ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಸಮಾಜದ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ, ಪ್ರಶಸ್ತಿ ಸಂಸ್ಥಾಪಕಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ, ಸಮಾಜದ ಉಪಾಧ್ಯಕ್ಷೆ ವಿಜಯ ಜಗನ್ನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಈ ಬಾರಿ ಲಾಟರಿ ಮೂಲಕ ಅದೃಷ್ಟ ಮಹಿಳೆಯಾಗಿ ನಾಗರತ್ನ ಕೋಠಿ ಆಯ್ಕೆಯಾದರು. ವಾಣಿಶ್ರೀ, ಸರಿತ ಪ್ರಾರ್ಥಿಸಿ, ಕಲ್ಪನ ಮಂಜುನಾಥ್ ಸ್ವಾಗತಿಸಿದರು. ಶಶಿಕಲಾ, ಅನುಪಮ ಮತ್ತು ಗುಣ ಅತಿಥಿ ಪರಿಚಯ ನಡೆಸಿಕೊಟ್ಟರು. ವೀಣಾ ಚಂದ್ರಶೇಖರ್ ಕೋಠಿ ಕಾರ್ಯಕ್ರಮ ನಿರೂಪಿಸಿ, ಭಾಗ್ಯ ನಿಜಗುಣ ವಂದಿಸಿದರು. 
 

ಭದ್ರಾವತಿಯಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಹಳೇನಗರದ ಶ್ರೀವೀರಭದ್ರೇಶ್ವರ ದೇವಸ್ಥಾನದ ಶ್ರೀ ಮಾತಾ ಬನಶಂಕರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಾದ ಲಕ್ಷ್ಮಮ್ಮ ಸೋಮಣ್ಣ, ಆರ್. ಫಿಲೋಮಿನ ಅಂತೋಣಿ, ರಾಜೇಶ್ವರಿ ನಂದೀಶ್ ಮತ್ತು ಟಿ. ಮಂಜುಳ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 


Monday, March 10, 2025

ಯುವ ಮುಖಂಡ ಬಿ.ಎಂ ರವಿಕುಮಾರ್ ಹುಟ್ಟುಹಬ್ಬ : ಹಣ್ಣು, ಬ್ರೆಡ್ ವಿತರಣೆ

ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಮೋಹನ್‌ರವರ ಪುತ್ರ, ಯುವ ಮುಖಂಡ ಬಿ.ಎಂ ರವಿಕುಮಾರ್ ೪೦ನೇ ಹುಟ್ಟುಹಬ್ಬ ಎನ್‌ಎಸ್‌ಯುಐ ವತಿಯಿಂದ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಸೋಮವಾರ ಆಚರಿಸಲಾಯಿತು.  
    ಭದ್ರಾವತಿ: ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಮೋಹನ್‌ರವರ ಪುತ್ರ, ಯುವ ಮುಖಂಡ ಬಿ.ಎಂ ರವಿಕುಮಾರ್ ೪೦ನೇ ಹುಟ್ಟುಹಬ್ಬ ಎನ್‌ಎಸ್‌ಯುಐ ವತಿಯಿಂದ ಸೋಮವಾರ ಆಚರಿಸಲಾಯಿತು.  
    ಹುಟ್ಟುಹಬ್ಬದ ಅಂಗವಾಗಿ ಜನ್ನಾಪುರ ನಗರ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಲಾಯಿತು. ನಗರಸಭೆ ಸದಸ್ಯ ಶರವಣ, ಎನ್‌ಎಸ್‌ಯುಐ ಗೌರವಾಧ್ಯಕ್ಷ ಮುರುಗೇಶ್, ತಾಲೂಕು ಉಪಾಧ್ಯಕ್ಷ ಗಂಗಾಧರ್, ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಆದಿಲ್ ಭಾಷಾ, ಜಯಕರ್ನಾಟಕ ಸಂಘಟನೆ ಶಂಕರಘಟ್ಟ  ಶಾಖೆ ಅಧ್ಯಕ್ಷ ಡಿ.ಟಿ ಶಶಿಕುಮಾರ್,  ಸೋಮಶೇಖರ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 

ಭೈರವಿ ಸಂಘದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಸನ್ಮಾನ

ಭದ್ರಾವತಿಯಲ್ಲಿ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗು ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟಿರುವ ಒಕ್ಕಲಿಗ ಮಹಿಳೆಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್, ಯುವ ಮುಖಂಡ ಬಿ.ಎಸ್ ಬಸವೇಶ್, ನಗರಸಭೆ ಮಾಜಿ ಅಧ್ಯಕ್ಷೆ ಲತಾ ಚಂದ್ರಶೇಖರ್  ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ: ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗು ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟಿರುವ ಒಕ್ಕಲಿಗ ಮಹಿಳೆಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
    ನಗರಸಭೆ ಮಾಜಿ ಅಧ್ಯಕ್ಷೆ ಲತಾ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್, ಯುವ ಮುಖಂಡ ಬಿ.ಎಸ್ ಬಸವೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡು ಮಾತನಾಡಿ, ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಇನ್ನೂ ಹೆಚ್ಚಿನ ಸಹಕಾರ, ಪ್ರೋತ್ಸಾಹ ಲಭಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು.     
    ಸಮಾಲೋಚನಾ ಮನಶಾಸ್ತ್ರ ತಜ್ಞೆ ಅರುಣ ಭಾಸ್ಕರ್, ಸಹ್ಯಾದ್ರಿ ಎಜ್ಯುಕೇಷನ್ ಟ್ರಸ್ಟ್ ಆಡಳಿತ ಅಧಿಕಾರಿ ಎಚ್.ಬಿ ಉಷಾಕಾಳೇಗೌಡ, ಅರ್ಜುನ್ ಹೋಟೆಲ್ ಮಾಲೀಕಿ ಶೃತಿ ಶ್ರೀಕಾಂತ್, ಕಾರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಅಂಬಿಕಾ ಕಿರಣ್ ಕುಮಾರ್, ಹಲೋ ಕಿಡ್ಸ್ ಸ್ಮಾರ್ಟ್ ಶೈನ್ ಪ್ರೀ ಸ್ಕೂಲ್ ನ ಮಾಲೀಕಿ ಶ್ವೇತಾ ರಮೇಶ್, ನಿವೃತ್ತ ಮುಖ್ಯ ಶಿಕ್ಷಕ ಸಿ. ಜಯಪ್ಪ, ನಗರಸಭೆ ಮೇಸ್ಟ್ರಿ ಪ್ರಸನ್ನ ಕುಮಾರ್ ಹಾಗೂ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.    

Sunday, March 9, 2025

ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬನ್ನಿ: ಮಂಜುಳ

ಭದ್ರಾವತಿ ನಗರದ ಮಿಲಿಟ್ರಿ ಕ್ಯಾಂಪ್ ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು.
    ಭದ್ರಾವತಿ : ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬರೆಬೇಕು. ಆ ಮೂಲಕ ಸೇವೆ, ಹೋರಾಟ, ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ಹೇಳಿದರು.
    ಅವರು ನಗರದ ಮಿಲಿಟ್ರಿ ಕ್ಯಾಂಪ್ ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಮಹಿಳೆಯರಲ್ಲಿ ಮುಖ್ಯ ವಾಹಿನಿಗೆ ಬರಲು ಭಯ, ಆತಂಕ, ಮುಜುಗರ ಸ್ವಭಾವ ಇರಬಾರದು. ಧೈರ್ಯವಾಗಿ ಮನೆಯಿಂದ ಹೊರ ಬಂದು ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಹಿಳೆಯರು ತಮ್ಮ ಮನಸ್ಥಿತಿಗಳನ್ನು ಬದಲಿಸಿಕೊಳ್ಳಬೇಕು ಎಂದರು.
    ಯುವ ಮುಖಂಡ ಬಿ.ಎಸ್ ಗಣೇಶ್ ಮಾತನಾಡಿ, ಮಹಿಳೆಯರಿಗೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ. ನೆಲ, ಜಲ, ಭಾಷೆ ಉಳಿವಿಗಾಗಿ ಹೋರಾಟ ಮುಂದುವರಿಸಬೇಕೆಂದರು.
    ವೇದಿಕೆ ಉಪಾಧ್ಯಕ್ಷೆ ಹೇಮಾವತಿ, ಕಾರ್ಯದರ್ಶಿ ನಾಗರತ್ನ, ಸಹ ಕಾರ್ಯದರ್ಶಿ ರುಕ್ಮಿಣಿ ಹಾಗೂ ಪೊಲೀಸ್ ಅಧಿಕಾರಿ ಚಂದ್ರಕಲಾ, ಹೊಸಮನೆ ಆಟೋ ಸಂಚಾಲಕಿ ನಾಗರತ್ನಮ್ಮ, ಸಮಾಜ ಸೇವಕಿ ಜಾನಕಿ ಅಚನೂರು ಸೇರಿದಂತೆ ಕರವೇ ಸದಸ್ಯರು ಭಾಗವಹಿಸಿದರು.

ಆರಾಧನಾ ಮಹೋತ್ಸವ : ಹನುಮಂತಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಮಹಿಳಾ ಸೇವಾ ಸಮಾಜದಲ್ಲಿ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನಾ ಮಹೋತ್ಸವ ಆಚರಿಸಲಾಯಿತು. ಸಂಗೀತ, ವೀಣೆ ಹಾಗು ಭರತನಾಟ್ಯಪರೀಕ್ಷ್ಷೆಗಳಲ್ಲಿ ಪರೀಕ್ಷ್ಷೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರಜ್ಞಾ ದೀಪ್ತಿ, ಅನಘ ಪಿ ರಾವ್, ಸಿ.ಲೇಖನ ಮತ್ತು ಬಿ.ಕೆ ನಿಖಿತ ಅವರಿಗೆ ಹನುಮಂತಮ್ಮ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ಭದ್ರಾವತಿ:  ಹಳೇನಗರದ ಬಸವೇಶ್ವರ ವೃತ್ತದ ಮಹಿಳಾ ಸೇವಾ ಸಮಾಜದಲ್ಲಿ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನಾ ಮಹೋತ್ಸವ ಆಚರಿಸಲಾಯಿತು.
    ಶೋಭಾ ಗಂಗರಾಜ್ ಪುರಂದರದಾಸರು, ಪ್ರಜ್ಞಾ ದೀಪ್ತಿ ತ್ಯಾಗರಾಜರು ಮತ್ತು ಪೂರ್ಣಿಮಾ ಕನಕದಾಸರ ಕುರಿತು ಮಾತನಾಡಿದರು. ಸಂಗೀತ, ವೀಣೆ ಹಾಗು ಭರತನಾಟ್ಯಪರೀಕ್ಷ್ಷೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರಜ್ಞಾ ದೀಪ್ತಿ, ಅನಘ ಪಿ ರಾವ್, ಸಿ.ಲೇಖನ ಮತ್ತು ಬಿ.ಕೆ ನಿಖಿತ ಅವರಿಗೆ ಹನುಮಂತಮ್ಮ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ವಿದೂಷಿ ಪುಷ್ಪ ಸುಬ್ರಮಣ್ಯಂ, ವಿದ್ವಾನ್ ಸೋಮು, ಗೌರಮ್ಮ ಶಂಕರಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಸೇವಾ ಸಮಾಜದ ಯಶೋಧ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. 
    ಕಲ್ಪನಾ ಮಂಜುನಾಥ ಸ್ವಾಗತಿಸಿದರು. ಶೋಭಾ ಗಂಗರಾಜ್ ಪ್ರಸ್ತಾವಿಕ ನುಡಿಗಳ್ನಾಡಿ, ಗೀತಾ ರಘುನಂದನ್, ವಾಣಿ ನಾಗರಾಜ್, ಶಾರದಾ ಶ್ರೀನಿವಾಸ್ ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಶಾರದಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ, ಜಯಂತಿ ಶೇಟ್ ವಂದಿಸಿದರು. ಸಂಗೀತ ಶಾಲೆಯ ಮಕ್ಕಳು ಮತ್ತು ವಿವಿಧ ಭಜನಾ ಮಂಡಳಿಗಳಿಂದ ದೇವರನಾಮ ಮತ್ತು ಕೃತಿಗಳ ಗಾಯನ ನಡೆಯಿತು.