Monday, March 17, 2025

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ವಾದಿರಾಜರ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. 
    ಹಿರಿಯೂರಿನ ಶ್ರೀ ವೇದವರ್ಧನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.  ಬೆಳಗ್ಗೆ ಪಂಚಾಮೃತ ಅಭಿಷೇಕ, ನಂತರ ಶ್ರೀ ವಾದಿರಾಜರ ರಥೋತ್ಸವ ಮಠದಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದವರೆಗೆ ರಥೋತ್ಸವ ಜರಗಿತು. 
    ಮಧ್ಯಾಹ್ನ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು. ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರತಂತ್ರಿ, ಉಪಾಧ್ಯಕ್ಷ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಹಾಗೂ ನಿರಂಜನಾಚಾರ್ಯ, ಪ್ರಮೋದ್ ಕುಮಾರ್ ಉಡುಪ, ಪವನ್ ಕುಮಾರ್, ವಿದ್ಯಾನಂದ ನಾಯಕ್, ಶುಭ ಗುರುರಾಜ್, ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸಚಾರ್, ಸತ್ಯನಾರಾಯಣಚಾರ್, ಶ್ರೀ ಕೃಷ್ಣ ಚಂಡಿ ಬಳಗ ಹಾಗೂ ವಿವಿಧ ಭಜನಾ ಮಂಡಳಿಗಳು ಹಾಗು ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

ಜನನ-ಮರಣ ನಡುವಿನ ಬದುಕಿನ ಸಾಹಿತ್ಯವೇ ಜಾನಪದ : ಯುಗಧರ್ಮ ರಾಮಣ್ಣ

ಕರ್ನಾಟಕ ಜಾನಪದ ಪರಿಷತ್ ಭದ್ರಾವತಿ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಮೊದಲ ಬಾರಿಗೆ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗು ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಆಧುನಿಕ ಸರ್ವಜ್ಞ ಯುಗಧರ್ಮ ರಾಮಣ್ಣ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಜನನ-ಮರಣ ನಡುವಿನ ಬದುಕಿನ ಸಾಹಿತ್ಯವೇ ಜಾನಪದವಾಗಿದ್ದು, ಇದು ೬೪ ವಿದ್ಯೆಗಳ ತಾಯಿಯಾಗಿದೆ. ಜಾನಪದ ಕಲೆಗಳಲ್ಲಿ ಅದ್ಭುತ ಶಕ್ತಿ ಅಡಗಿವೆ. ಇಂತಹ ಜಾನಪದ ಕಲೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಆಧುನಿಕ ಸರ್ವಜ್ಞ ಯುಗಧರ್ಮ ರಾಮಣ್ಣ ಹೇಳಿದರು. 
    ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಮೊದಲ ಬಾರಿಗೆ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗು ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಬದುಕಿನಲ್ಲಿ ಅನುಭವಿಸಿರುವ ನೋವು-ನಲಿವು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಬದುಕು-ಬವಣೆ ಒಟ್ಟಾರೆ ಇವುಗಳ ಸಾಹಿತ್ಯವೇ ಜಾನಪದವಾಗಿದ್ದು, ಹುಟ್ಟಿನಿಂದ ಸಾವಿನವರೆಗೂ ಜೊತೆ ಜೊತೆಗೆ ಬಂದಿದೆ. ನಮಗೆ ಸಾವಿದೆ, ಆದರೆ ಜಾನಪದಕ್ಕೆ ಸಾವಿಲ್ಲ. ಜಾನಪದ ಈ ಭೂಮಿ ಮೇಲೆ ಎಂದಿಗೂ ಶಾಶ್ವತವಾಗಿ ಉಳಿಯಲಿದೆ. ಇಂತಹ ಜಾನಪದ ಕಲೆUಳನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. 
    ಹಿರಿಯ ಮುಖಂಡ, ಉದ್ಯಮಿ ಬಿ.ಕೆ ಜಗನ್ನಾಥ್ ಮಾತನಾಡಿ, ಇಂದಿನವರಿಗೆ ಜಾನಪದ ಕುರಿತು ಅರಿವಿಲ್ಲ. ನಮ್ಮ ಪೂರ್ವಿಕರಿಂದ ಬಂದಿರುವ ಜಾನಪದ ಕಲೆಗಳು ಬದುಕಿನ ಅನುಭವದ ಸಾರಗಳಾಗಿವೆ. ನಾವುಗಳು ನಮ್ಮ ಮಕ್ಕಳಿಗೆ ಜಾನಪದ ಕಲೆಗಳನ್ನು ತಿಳಿಸಿಕೊಡಬೇಕಾಗಿದೆ. ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಜಾನಪದ ಕಲೆಗಳನ್ನು ಕಲಿಸಿ ಕೊಡಬೇಕಾದ ಅಗತ್ಯವಿದೆ ಎಂದರು. 
    ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ ಆರಂಭವಾದಾಗ ಜಾನಪದ ಕಾರ್ಯಕ್ರಮಗಳು ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದವು. ೨೦೧೫ರಲ್ಲಿ ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕಗೊಳಿಸಿದ ನಂತರ ಜಿಲ್ಲಾದ್ಯಂತ ಜಾನಪದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಎಲ್ಲರಿಂದಲೂ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿದ್ದು, ಜಾನಪದ ಕಲೆಗಳ ಮಹತ್ವ ಇಂದಿನವರೆಗೆ ತಿಳಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. 
    ಸಮ್ಮೇಳನಾಧ್ಯಕ್ಷ ಲಕ್ಷ್ಮಣ್‌ರಾವ್ ಬೋರಾತ್ ಮಾತನಾಡಿ, ಜಾನಪದ ಕಲಾವಿದರನ್ನು ಯಾರು ಸಹ ಗುರುತಿಸುವುದಿಲ್ಲ. ಎಲೆ-ಮರೆ ಕಾಯಿಗಳಂತೆ ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತ ಜಾನಪದ ಕಲಾವಿದರಿದ್ದಾರೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಬೇಕಾಗಿದೆ. ಈ ಹಿಂದೆ ನನ್ನನ್ನು ಯಾರು ಸಹ ಗುರುತಿಸಿರಲಿಲ್ಲ. ಆದರೆ ಡಿ. ಮಂಜುನಾಥ್‌ರವರು ನನ್ನನ್ನು ಗುರುತಿಸಿ ನನ್ನನ್ನು ಪ್ರೋತ್ಸಾಹಿಸಿದರು. ಈ ಹಿನ್ನಲೆಯಲ್ಲಿ ನಾನು ಇಂದು ಈ ವೇದಿಕೆಯಲ್ಲಿ ಬರಲು ಸಾಧ್ಯವಾಯಿತು. ಮೊದಲ ಜಾನಪದ ಸಮ್ಮೇಳನ ಪರಿಷತ್ ತಾಲೂಕು ಶಾಖೆ ಅಧ್ಯಕ್ಷರಾದ ಎಂ.ಆರ್ ರೇವಣಪ್ಪನವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದಿದ್ದು, ಈ ಹಿನ್ನಲೆಯಲ್ಲಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಕಲಾವಿದರಾದ ಲಕ್ಷ್ಮಮ್ಮ(ಸೋಬಾನೆ ಪದ), ಭಾಗ್ಯಬಾಯಿ(ಲಂಬಾಣಿ ನೃತ್ಯ), ವೆಂಕಟರಮಣ(ತಮಟೆ ವಾದನ), ಕಣ್ಣನ್(ಭಜನೆ ಪದ), ಜಂಬೂಸ್ವಾಮಿ(ಜಾನಪದ ಗಾಯನ), ಶಿವಾಜಿ ರಾವ್(ಡೊಳ್ಳು ಕುಣಿತ) ಮತ್ತು ಹನುಮಂತ್‌ರಾವ್(ರಂಗಕಲೆ) ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
    ಗೊಂದಿ ಶ್ರೀ ಪಾಂಡುರಂಗ ಸಾಧಕಾಶ್ರಮದ ಮಾತಾ ಮುಕ್ತಾನಂದಮಯಿ ದಿವ್ಯ ಸಾನಿಧ್ಯವಹಿಸಿದ್ದು, ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಹಿರಿಯೂರು ಹೋಬಳಿ ಘಟಕ ಅಧ್ಯಕ್ಷ ಜಯರಾಂ ಗೊಂದಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಬಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಬಿ. ಸುರೇಶ್, ಎಸ್. ರಾಜು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಹಾಗು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಎಮ್ಮಹಟ್ಟಿ ಅನಿಲ್ ಕುಮಾರ್ ಮತ್ತು ಸಂಗಡಿಗರಿಂದ ಡೊಳ್ಳು ಕುಣಿತ, ತಾರೀಕಟ್ಟೆ ಶೇಖರ್ ಮತ್ತು ಸಂಗಡಿಗರು ಹಾಗು ಜೆ. ಪ್ರಶಾಂತ್ ಮತ್ತು ಸಂಗಡಿಗರಿಂದ ತಮಟೆ ಕುಣಿತ, ಹೊಸಮನೆ ಲಕ್ಷ್ಮಣ್ ರಾವ್ ಮತ್ತು ಕುಟುಂಬ ಹಾಗು ಕೇಶವ ಮತ್ತು ಸಂಗಡಿಗರಿಂದ ಚೌಡಿಕೆ ಗೊಂದಲಿಗರ ಪದ, ಹಿರಿಯೂರು ನಗರಾಜ್ ಮತ್ತು ಸಂಗಡಿಗರಿಂದ ವೀರಗಾಸೆ, ದಿವಾಕರ್ ಮತ್ತು ಸಂಗಡಿಗರಿಂದ ಲಂಬಾಣಿ ನೃತ್ಯ, ತಿಮ್ಲಾಪುರ ಮಹಾದೇವಿ ಮತ್ತು ಸಂಗಡಿಗರು, ರಮಾ ಮತ್ತು ಸಂಗಡಿಗರು ಹಾಗು ಓಂಕಾರ ಯೋಗ ತಂಡದಿಂದ ಕೋಲಾಟ ನಡೆಯಲಿವೆ.  ಅಲ್ಲದೆ ಪುಟಾಣಿ ಮಕ್ಕಳಿಂದ ಕಂಸಾಳೆ ನೃತ್ಯ, ಲಂಬಾಣಿ ನೃತ್ಯ, ಸುಗ್ಗಿ ಕುಣಿತ ಮತ್ತು ಜಾನಪದ ನೃತ್ಯ ಜರುಗಿದವು. 
    ಇದಕ್ಕೂ ಮೊದಲು ಗ್ರಾಮದಲ್ಲಿ ಜಾನಪದ ಮೆರವಣಿಗೆ ನಡೆಸಲಾಯಿತು. ಪರಿಷತ್ ತಾಲೂಕು ಶಾಖೆಯ ಸಂಘಟನಾ ಕಾರ್ಯದರ್ಶಿ ಬಿ.ಎಚ್ ಪ್ರಶಾಂತ್, ಕಾರ್ಯದರ್ಶಿ ದಿವಾಕರ್, ಕೋಶಾಧ್ಯಕ್ಷೆ ಲತಾ ಪಾಂಡುರಂಗೇಗೌಡ, ಸಲಹಾ ಸಮಿತಿ ಸದಸ್ಯರಾದ ಭಾಗ್ಯ ಮಂಜುನಾಥ್, ಚಂದ್ರಶೇಖರ್ ಚಕ್ರಸಾಲಿ, ಶಿವರಾಜ್, ಸಂಚಾಲಕ ಸಂಪತ್‌ಕುಮಾರ್ ಸೇರಿದಂತೆ ತಾಲೂಕು ನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಮೋಹನ್‌ಕುಮಾರ್ ಸ್ವಾಗತಿಸಿ, ಶಿಕ್ಷಕ ದದಯಾನಂದ ಸಾಗರ್ ನಿರೂಪಿಸಿದರು.
 

ಕರ್ನಾಟಕ ಜಾನಪದ ಪರಿಷತ್ ಭದ್ರಾವತಿ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಮೊದಲ ಬಾರಿಗೆ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗು ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರಾದ ಲಕ್ಷ್ಮಮ್ಮ(ಸೋಬಾನೆ ಪದ), ಭಾಗ್ಯಬಾಯಿ(ಲಂಬಾಣಿ ನೃತ್ಯ), ವೆಂಕಟರಮಣ(ತಮಟೆ ವಾದನ), ಕಣ್ಣನ್(ಭಜನೆ ಪದ), ಜಂಬೂಸ್ವಾಮಿ(ಜಾನಪದ ಗಾಯನ), ಶಿವಾಜಿ ರಾವ್(ಡೊಳ್ಳು ಕುಣಿತ) ಮತ್ತು ಹನುಮಂತ್‌ರಾವ್(ರಂಗಕಲೆ) ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಪುರಾಣ ಪ್ರಸಿದ್ದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ೧.೫ ಲಕ್ಷ ರು. ಆರ್ಥಿಕ ನೆರವು

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗು ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವ ಕ್ಷೇತ್ರದಾದ್ಯಂತ ಮುಂದುವರೆಯುತ್ತಿದ್ದು, ತಾಲೂಕಿನ ಯೋಜನೆ-೧ರ ವತಿಯಿಂದ ಅರಳಿಕೊಪ್ಪ ವಲಯದ ಗೊಂದಿ ಗ್ರಾಮದಲ್ಲಿ ಪುರಾಣ ಪ್ರಸಿದ್ದ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ೧.೫೦ ಲಕ್ಷ ರು. ಆರ್ಥಿಕ ನೆರವು ನೀಡಲಾಯಿತು. 
    ಭದ್ರಾವತಿ : ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗು ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವ ಕ್ಷೇತ್ರದಾದ್ಯಂತ ಮುಂದುವರೆಯುತ್ತಿದ್ದು, ತಾಲೂಕಿನ ಯೋಜನೆ-೧ರ ವತಿಯಿಂದ ಅರಳಿಕೊಪ್ಪ ವಲಯದ ಗೊಂದಿ ಗ್ರಾಮದಲ್ಲಿ ಪುರಾಣ ಪ್ರಸಿದ್ದ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ೧.೫೦ ಲಕ್ಷ ರು. ಆರ್ಥಿಕ ನೆರವು ನೀಡಲಾಯಿತು. 
    ಯೋಜನೆ-೧ರ ಯೋಜನಾಧಿಕಾರಿ ಪ್ರಕಾಶ್‌ನಾಯ್ಕ ದೇವಸ್ಥಾನ ಆಡಳಿತ ಮಂಡಳಿಗೆ ೧.೫೦ ಲಕ್ಷ ರು. ಮೌಲ್ಯದ ಡಿ.ಡಿ ಚೆಕ್ ವಿತರಿಸಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಜಯರಾಂ ಗೊಂದಿ, ದೇವಸ್ಥಾನ ಸಮಿತಿ ಪ್ರಮುಖರಾದ ಅಶೋಕ್, ಕೃಷ್ಣಮೂರ್ತಿ, ಮಂಜು, ರಂಗನಾಥ್, ಚಂದ್ರನಾಯ್ಕ ಮತ್ತು ಅರಳಿಕೊಪ್ಪ ವಲಯದ ಮೇಲ್ವಿಚಾರಕ ಮೋಹನ್‌ಕುಮಾರ್, ಸೇವಾಪ್ರತಿನಿಧಿ ಶೃತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪುನೀತ್ ಸೇವಾ ಕಾರ್ಯ ಮೈಗೂಡಿಸಿಕೊಂಡಿರುವ ಅಭಿಮಾನಿ

ರಾಜುನಾಯ್ಕ ಕನ್ನಡಿಗ ವಯೋವೃದ್ಧರು, ನಿರಾಶ್ರಿತರಿಗೆ ಆಸರೆ 

 ಭದ್ರಾವತಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ. 
    * ಅನಂತಕುಮಾರ್ 
    ಭದ್ರಾವತಿ: ಚಲನಚಿತ್ರ ನಟ, ಸಮಾಜ ಸೇವಕ, ಕರ್ನಾಟಕ ರತ್ನ, ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬ ಸೋಮವಾರ ಎಲ್ಲೆಡೆ ಆಚರಿಸಲಾಗುತ್ತಿದ್ದು, ಅವರ ಅಭಿಮಾನಿ ಬಳಗದಲ್ಲಿ ಸಂತಸ, ಸಂಭ್ರಮ ಮನೆಮಾಡಿದೆ. 
    ಪುನೀತ್‌ರಾಜ್‌ಕುಮಾರ್ ಕೇವಲ ಸಿನಿಮಾ ನಟರಾಗಿ ಬದುಕಿರಲಿಲ್ಲ. ಹಲವಾರು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅವರೊಬ್ಬ ಸಮಾಜ ಸೇವಕರಾಗಿದ್ದರು ಎಂಬುದು ವಿಶೇಷವಾಗಿದೆ. ವಿಶೇಷ ಎಂದರೆ ಅವರ ನಿಧನ ನಂತರ ಅವರ ಸೇವಾಕಾರ್ಯಗಳು ಬೆಳಕಿಗೆ ಬಂದವು. ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಎಲ್ಲಡೆ ಇದ್ದಾರೆ. ಆದರೆ ಅವರ ಅಭಿಮಾನಿಯಾಗಿ ಅವರಂತೆ ಸೇವಾಕಾರ್ಯಗಳನ್ನು ಮೈಗೂಡಿಸಿಕೊಂಡವರು ವಿರಳ. ಇಂತಹ ವಿರಳ ವ್ಯಕ್ತಿಗಳಲ್ಲಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮದ ಸಂಸ್ಥಾಪಕ ರಾಜುನಾಯ್ಕ ಕನ್ನಡಿಗ ಸಹ ಒಬ್ಬರಾಗಿದ್ದಾರೆ. 
    ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ಕತ್ತಲಗೆರೆ ಕವಳಿ ತಾಂಡ ಎಂಬ ಚಿಕ್ಕ ಗ್ರಾಮದಲ್ಲಿ ಒಬ್ಬ ಬಡ ರೈತನ ಮಗನಾಗಿ ಜನಿಸಿರುವ ರಾಜುನಾಯ್ಕರವರು ಪುನೀತ್‌ರಾಜ್‌ಕುಮಾರ್ ಅಭಿಮಾನಿಯಾಗಿದ್ದು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಶಯದೊಂದಿಗೆ ಸುಮಾರು ೯ ವರ್ಷಗಳ ಹಿಂದೆ  ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ಆರಂಭಿಸುವ ಮೂಲಕ ವಯೋವೃದ್ಧರು, ನಿರಾಶ್ರಿತರಿಗೆ ಆಸರೆಯಾಗಿದ್ದಾರೆ. 


ಭದ್ರಾವತಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮದಲ್ಲಿರುವ ವಯೋವೃದ್ಧರು, ನಿರಾಶ್ರಿತರು. 
      ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ ಆರಂಭಿಸಲು ರಾಜುರವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಆರಂಭದಲ್ಲಿ ಶಿವಮೊಗ್ಗ ಸೋಮಿನಕೊಪ್ಪದ ಆದರ್ಶನಗರದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೆರವಿನೊಂದಿಗೆ ನಿರ್ಮಿತಿ ಕೇಂದ್ರದಿಂದ ಕಟ್ಟಿರುವ ಪಾಳು ಬಿದ್ದಿರುವ ಒಂದು ಕಟ್ಟಡ ಇವರಿಗೆ ಲಭಿಸಿತ್ತು. ಇದನ್ನು ಸ್ವಚ್ಛಗೊಳಿಸಿ ೨೦೧೬ರಲ್ಲಿ ಆಶ್ರಮ ಪ್ರಾರಂಭಿಸಿದರು. ಆರಂಭದಲ್ಲಿ ಇವರ ಕಾರ್ಯಕ್ಕೆ ಮತ್ತೊಬ್ಬ ಸಮಾಜ ಸೇವಕ ಕೈಜೋಡಿಸಿದ್ದರು. ೨೦೧೮ರಿಂದ ಇವರೊಬ್ಬರೇ ಆಶ್ರಮ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ನಡುವೆ ನಿರ್ಮಿತಿ ಕೇಂದ್ರದ ವೈಕ್ತಿಯೋರ್ವ ಏಕಾಏಕಿ ಇವರನ್ನು ಹೊರಹಾಕಿದ್ದು, ರಸ್ತೆಯಲ್ಲಿ ಬಿದ್ದಿರುವ ನಿರಾಶ್ರಿತರನ್ನು ರಕ್ಷಿಸಿ ಸಲಹಲು ರಾಜುರವರು ತಮ್ಮ  ಆಸ್ತಿಯನ್ನು ಮಾರಾಟ ಮಾಡಬೇಕಾದ ಸ್ಥಿತಿ ಎದುರಾಯಿತು. ಆದರೂ ಧೈರ್ಯ ಕಳೆದುಕೊಳ್ಳದೆ ತಮ್ಮ ಸೇವಾ ಕಾರ್ಯ ಮುಂದುವರೆಸಿದ್ದಾರೆ. 
    ಶಿವಮೊಗ್ಗದಿಂದ ಸ್ಥಳಾಂತರಗೊಂಡು ನಗರದ ಬೊಮ್ಮನಕಟ್ಟೆ ತಿಮ್ಲಾಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಸಹಾಯದೊಂದಿಗೆ ಆಶ್ರಮ ಮುಂದುವರೆಸಿದ್ದಾರೆ. ಯಾವುದೇ ಆದಾಯ ಮೂಲ ಹೊಂದಿರುದ ರಾಜುರವರು ತಮ್ಮ ಸ್ವಂತ ಹಣದಲ್ಲಿ ಆಶ್ರಮಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಂಡಿದ್ದಾರೆ.  ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳದೆ ಸ್ಥಳೀಯರು, ದಾನಿಗಳು ಹಾಗು ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಶ್ರಮ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
    ಕೆಲವು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಮಾಜಸೇವಕರಂತೆ ಮುಖವಾಡ ಹಾಕಿಕೊಂಡವರು ಇದ್ದಾರೆ. ಆದರೆ ರಾಜು ಅವರಂತೆ ಎಲೆ-ಮರೆ ಕಾಯಿಯಾಗಿ ಸೇವೆ ಸಲ್ಲಿಸುವವರು ವಿರಳ. ಇಂತಹವರು ಸಮಾಜಕ್ಕೆ ಮಾದರಿ ಎಂದರೆ ತಪ್ಪಾಗಲಾರದು. 
 

ನಾನು ಪುನೀತ್‌ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದು, ಅವರ ಹೆಸರನ್ನು ನಾನು ಎಲ್ಲೂ ದುರ್ಬಳಕೆ ಮಾಡಿಕೊಂಡಿಲ್ಲ. ವಯೋವೃದ್ದರು, ನಿರಾಶ್ರಿತರ ಸೇವೆ ಮಾಡುತ್ತಿರುವುದು ನನಗೆ ತೃಪ್ತಿ ನೀಡುತ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ನಾನು ಭೇಟಿಯಾಗಿಲ್ಲ. ಅವರು ನಿಧನ ಹೊಂದುವ ಒಂದು ವಾರದ ಹಿಂದೆ ನಾನು ಅವರ ಸಹಾಯಕರನ್ನು ಸಂಪರ್ಕಿಸಿದಾಗ ನನಗೆ ಪುನೀತ್ ರಾಜ್‌ಕುಮಾರ್ ಭೇಟಿಯಾಗಲು ಅವಕಾಶ ನೀಡುವುದಾಗಿ ತಿಳಿಸಿದ್ದರು. ಆದರೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ. 
                                                                                    - ರಾಜುನಾಯ್ಕ ಕನ್ನಡಿಗ, ಸಂಸ್ಥಾಪಕರು, 
ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ
-------------------------------------------------------------------------------------------- 

ರಾಜುನಾಯ್ಕ ಅವರು ಒಬ್ಬ ಮಾನವೀಯತೆ ಉಳ್ಳ ವ್ಯಕ್ತಿಯಾಗಿದ್ದು, ಯಾವುದೇ ಫಲಾಫೇಕ್ಷೆ ಇಲ್ಲದೆ ವಯೋವೃದ್ಧರು, ನಿರಾಶ್ರಿತರ ಸೇವೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಆಶ್ರಮದಲ್ಲಿ ಸುಮಾರು ೪೫ ಜನರಿದ್ದು, ಅವರ ಜೊತೆಯಲ್ಲಿಯೇ ರಾಜು ದಂಪತಿ ಸಹ ವಾಸಿಸುತ್ತಿದ್ದರು. ಇವರ ಈ ಸೇವಾ ಕಾರ್ಯಕ್ಕೆ ನಗರದ ಜನಪ್ರತಿನಿಧಿಗಳು, ದಾನಿಗಳು ನೆರವಾಗಿದ್ದಾರೆ. 
 - ಅಪೇಕ್ಷ ಮಂಜುನಾಥ್, ಕಲಾವಿದರು,  ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಭದ್ರಾವತಿ. 

Saturday, March 15, 2025

ಬಣದೋಕುಳಿಯೊಂದಿಗೆ ಹೋಳಿ ಹಬ್ಬ ಸಂಪನ್ನ

ಭದ್ರಾವತಿ ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಬ್ರಾಹ್ಮಣರ ಬೀದಿಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕುವ ಮೂಲಕ ಕುಣಿದು ಸಂಭ್ರಮಿಸಿದರು. 
    ಭದ್ರಾವತಿ : ನಗರದ ವಿವಿಧೆಡೆ ಶನಿವಾರ ಬಣದೋಕುಳಿಯೊಂದಿಗೆ ಸಂಭ್ರಮಾಚರಣೆ ನಡೆಸಿ ರತಿಮನ್ಮಥರ ದಹನದೊಂದಿಗೆ ಹೋಳಿ ಹಬ್ಬ ಸಂಪನ್ನಗೊಳಿಸಲಾಯಿತು. 
    ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಬಳಿ ಬ್ರಾಹ್ಮಣರ ಬೀದಿ ಮತ್ತು ಉಪ್ಪಾರರ ಬೀದಿ ಹಾಗು ಕುಂಬಾರರ ಬೀದಿ ಸೇರಿದಂತೆ ವಿವಿಧೆಡೆ ಬೆಳಿಗ್ಗೆಯಿಂದಲೇ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕುವ ಮೂಲಕ ಹಾಡಿನ ಅಬ್ಬರದ ಸದ್ದಿಗೆ ಕುಣಿದು ಸಂಭ್ರಮಿಸಿದರು. ನಂತರ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಭಕ್ತಿ-ಭಾವದೊಂದಿಗೆ ರತಿ-ಮನ್ಮಥರ ಮೆರವಣಿಗೆ ನಡೆಸಿ ದಹನದೊಂದಿಗೆ ಸಂಪನ್ನಗೊಳಿಸಿದರು. 
    ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೮೮ನೇ ವರ್ಷದ ಹೋಳಿ ಹಬ್ಬ ಆಚರಣೆ ಸಹ ಸಂಪನ್ನಗೊಂಡಿತು. 


    ನಗರಸಭೆ ಸಮೀಪದ ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಹಾಗು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೮೮ನೇ ವರ್ಷದ ಹೋಳಿ ಹಬ್ಬ ಆಚರಣೆ ಕೊನೆಯ ದಿನ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಸಲಾಯಿತು. 
    ಭೂತನಗುಡಿ ವ್ಯಾಪ್ತಿಯ ರಸ್ತೆ ರಸ್ತೆಗಳಲ್ಲಿ ಮಕ್ಕಳು, ಪುರುಷರು, ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಬಣದೋಕುಳಿಯಲ್ಲಿ ತೊಡಕಿರುವುದು ಕಂಡು ಬಂದಿತು. ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಭವ್ಯ ಮೆರವಣಿಗೆ ನಡೆಸಿ ಅಂತಿಮವಾಗಿ ನಗರಸಭೆ ಬಳಿ ದಹನದೊಂದಿಗೆ ಸಂಪನ್ನಗೊಳಿಸಿದರು. 
    ಉಳಿದಂತೆ ನಗರದಾದ್ಯಂತ ಕಳೆದ ೨-೩ ದಿನಗಳಿಂದ ಸಾಮಾನ್ಯವಾಗಿ ಹೋಳಿ ಆಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು. ವಿಶೇಷ ಎಂದರೆ ಈ ಬಾರಿ ಹೆಚ್ಚಾಗಿ ಯುವಕರು-ಯುವತಿಯರು ಬಣದೋಕುಳಿಯಲ್ಲಿ ತೊಡಗುವ ಮೂಲಕ ಗಮನ ಸೆಳೆದರು. 
    ಹೋಳಿ ಆಚರಣೆ ಹಿನ್ನಲೆಯಲ್ಲಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹಾಗು ಹೋಳಿ ಆಚರಣೆ ನಡೆಸುವ ಸ್ಥಳಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 

ಜಗತ್ತಿನಲ್ಲಿ ಯಾರು ದೊಡ್ಡವರಲ್ಲ ಎಲ್ಲರೂ ಸಮಾನರು : ಅಕ್ರಮ್ ಉಲ್ಲಾ ಷರೀಬ್

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಇಫ್ತಾರ್ ಕೂಟ 

ಪಾವನ ಮಾಸ ರಂಜಾನ್ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಭದ್ರಾವತಿ ತಾಲೂಕು ಘಟಕದ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ಆಯಿಷಾ ಮಸೀದಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮ್ ಉಲ್ಲಾ ಷರೀಬ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ಜಗತ್ತಿನಲ್ಲಿ ಯಾರು ದೊಡ್ಡವರಲ್ಲ ಎಲ್ಲರೂ ಸಮಾನರು. ನಮ್ಮ ಸೃಷ್ಟಿಕರ್ತ ಮಾತ್ರ ದೊಡ್ಡವನು. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಉದ್ದೇಶದಿಂದ ಇಫ್ತಾರ್ ಕೂಟ ಆಯೋಜಿಸಲಾಗುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಜನಾಬ್ ಅಕ್ರಮ್ ಉಲ್ಲಾ ಷರೀಬ್ ಹೇಳಿದರು. 
    ಅವರು ಶನಿವಾರ ಪಾವನ ಮಾಸ ರಂಜಾನ್ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಸ್ತೆ(ಬಿ.ಎಚ್ ರಸ್ತೆ) ಆಯಿಷಾ ಮಸೀದಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಮುಸ್ಲಿಂ ಸಮುದಾಯದವರು ನಮ್ಮ ಸೃಷ್ಟಿಕರ್ತ ಒಬ್ಬನೆ. ಆತ ಮಾತ್ರ ನಮ್ಮೆಲ್ಲರಿಗೂ ದೊಡ್ಡವನು ಎಂಬುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ೫ ಕರ್ಮಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಆಗ ಮಾತ್ರ ನಮ್ಮಲ್ಲಿ ಒಳ್ಳೆಯ ಗುಣಗಳನ್ನು ರೂಪುಗೊಳ್ಳಲು ಸಾಧ್ಯ. ಜಾತಿ-ಧರ್ಮ, ಬಡವ-ಶ್ರೀಮಂತ ಯಾವುದೇ ಭಾವಿಸದೆ ಎಲ್ಲರನ್ನು ಒಂದಾಗಿ ನೋಡುವ ಮನೋಭಾವ, ಕಷ್ಟದಲ್ಲಿ ಇರುವವರಿಗೆ ನೆರವಾಗುವುದು. ಯಾರು ಮೊದಲು ಬರುತ್ತಾರೆಯೋ ಅವರಿಗೆ ಮೊದಲ ಆದ್ಯತೆ ನೀಡುವುದು. ಹೀಗೆ ಹಲವು ಸಮಾನತೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಇಫ್ತಾರ್ ಕೂಟ ಇದನ್ನು ತಿಳಿಸುವ ಉದ್ದೇಶವಾಗಿದೆ ಎಂದರು. 
    ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಸಂಚಾಲಕ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಜಾರ್ಜ್, ಮುಖಂಡರಾದ ತೀರ್ಥೇಶ, ಮಂಜುನಾಥ್, ರಾಜು, ಮಹಮದ್ ರಫಿ(ಟೈಲರ್), ಖದೀರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ವಿಜೃಂಭಣೆಯಿಂದ ಜುರುಗಿದ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಭದ್ರಾವತಿ ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. 
ಭದ್ರಾವತಿ: ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.    ಪ್ರತಿ ವರ್ಷದಂತೆ ಈ ಬಾರಿ ಸಹ ದೇವಸ್ಥಾನದ ಆವರಣದಿಂದ ಆರಂಭಗೊಂಡ ರಥೋತ್ಸವ ಮಧ್ಯಾಹ್ನ ೧೨.೪೫ಕ್ಕೆ ಗ್ರಾಮದ ಅಗಸೆ ಬಾಗಿಲಿನವರೆಗೆ ಬಂದು ತಲುಪಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜಯಘೋಷಗಳನ್ನು ಹಾಕಿದರು. ಭಜನಾ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು. ಸ್ವಾಮಿ ಪ್ರತಿಷ್ಠಾಪನೆಗೊಂಡ ಅಲಂಕೃತ ಭವ್ಯ ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಅಲ್ಲದೆ ಓಂಕಾರ ಚಿತ್ತಾರ ಹಾಗು ಆಯೋಧ್ಯೆ ಶ್ರೀರಾಮನ ಬಿಲ್ಲು-ಬಾಣ ಬಿಡಿಸಿ ಕರ್ಪೂರ ಹಚ್ಚಿ ಭಕ್ತಿಯಿಂದ ಕುಣಿದು ಸಂಭ್ರಮಿಸಲಾಯಿತು. 



ರಥೋತ್ಸವ ನಂತರ ಅನ್ನ ಸಂತರ್ಪಣೆ ನೆರವೇರಿತು. ಅಲ್ಲದೆ ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕಲ್ಲು ಸಕ್ಕರೆ ಸೇರಿದಂತೆ ಇನ್ನಿತರೆ ಪ್ರಸಾದ ವಿತರಣೆ ನಡೆಯಿತು. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು, ಸುಣ್ಣದಹಳ್ಳಿ, ಮಾರುತಿ ನಗರ, ಮೊಸರಹಳ್ಳಿ, ತಾಷ್ಕೆಂಟ್ ನಗರ, ಎರೇಹಳ್ಳಿ, ಆನೆಕೊಪ್ಪ, ಬಾರಂದೂರು, ಉಜ್ಜನಿಪುರ, ಕಾಗದನಗರ, ಜೆಪಿಎಸ್ ಕಾಲೋನಿ ಮತ್ತು ನಗರ ಹಾಗು ಗ್ರಾಮಾಂತರ ಪ್ರದೇಶಗಳ ಭಕ್ತರು ಭಕ್ತರು ಪಾಲ್ಗೊಂಡಿದ್ದರು.