ಶನಿವಾರ, ಮಾರ್ಚ್ 22, 2025

ಪುನೀತ್‌ರಾಜ್‌ಕುಮಾರ್ ನಾಡಿನ ಸಾಂಸ್ಕೃತಿಕ ನಾಯಕ : ಕೋಗಲೂರು ತಿಪ್ಪೇಸ್ವಾಮಿ

ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಶನಿವಾರ ಭದ್ರಾವತಿ ನ್ಯೂಟೌನ್ ಅಯ್ಯಪ್ಪ ಸ್ವಾಮಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ರಾಜ್‌ಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್ ಮತ್ತು ರಂಗ ಕಲಾವಿದ ವೈ.ಕೆ ಹನುಮಂತಯ್ಯ ಅವರನ್ನು ಸನ್ಮಾನಿಸಲಾಯಿತು.
    ಭದ್ರಾವತಿ: ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ರಾಜ್‌ಕುಮಾರ್ ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಎರೇಹಳ್ಳಿ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಕೋಗಲೂರು ತಿಪ್ಪೇಸ್ವಾಮಿ ಬಣ್ಣಿಸಿದರು. 
    ಅವರು ನಗರದ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಶನಿವಾರ ನ್ಯೂಟೌನ್ ಅಯ್ಯಪ್ಪ ಸ್ವಾಮಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ರಾಜ್‌ಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಉದ್ಘಾಟಿಸಿ ಮಾತನಾಡಿದರು. 
  ಅಂದು ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ಇಡೀ ವಿಶ್ವವೇ ಕಂಬನಿ ಮುಡಿದಿತ್ತು. ಅವರೊಬ್ಬ ಧೀಮಂತ ನಾಯಕರಾಗಿ ಇಂದಿಗೂ ಕಂಗೊಳಿಸುತ್ತಿದ್ದಾರೆ. ಅವರಿಲ್ಲದ ೫೦ನೇ ವರ್ಷದ ಹುಟ್ಟುಹಬ್ಬ ಇಂದು ನಮ್ಮೆಲ್ಲರಿಗೂ ಸಂಕಟದ ದಿನವಾಗಿದೆ. ನಿಜ ಜೀವನದ ಒಬ್ಬ ನಾಯಕನಾಗಿ, ಸೇವಕನಾಗಿ ನಮ್ಮೆಲ್ಲರಿಗೂ ಭೂತಕಾಲ, ವರ್ತಮಾನ ಕಾಲ ಹಾಗು ಭವಿಷ್ಯ ಕಾಲ ೩ ಕಾಲಕ್ಕೂ ಒಪ್ಪುವಂತಹ ಎಂದೆಂದಿಗೂ ಏಕೈಕ ಆದರ್ಶ ವ್ಯಕ್ತಿ ಪುನೀತ್ ರಾಜ್‌ಕುಮಾರ್ ಎಂದರೆ ತಪ್ಪಾಗಲಾರದು. ಇಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕಲಾವಿದರು ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.  
    ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನಟರಾಜ್, ಸಂಘದ ಗೌರವ ಸಲಹೆಗಾರ ರಾಜವಿಕ್ರಂ, ಹಿರಿಯ ಕಲಾವಿದ ಜೆ.ಪಿ ನಂಜುಂಡೇಗೌಡ ಹಾಗು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜ್  ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.  
    ವಿಶೇಷವಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್ ಮತ್ತು ರಂಗ ಕಲಾವಿದ ವೈ.ಕೆ ಹನುಮಂತಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. 
    ಸಂಘದ ಪದಾಧಿಕಾರಿಗಳು, ಕಲಾವಿದರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕಲಾವಿದರಿಂದ ಪುನೀತ್‌ರಾಜ್‌ಕುಮಾರ್ ಚಲನಚಿತ್ರ ಗೀತೆಗಳ ಗಾಯನ ನಡೆಯಿತು. 

ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ : ಮನವಿ

ಭದ್ರಾವತಿ  ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ೩ ಎಕರೆ ಜಮೀನಿಗೆ  ಅಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗು ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕೆಂದು ಜಮೀನಿನ ವಾರಸುದಾರರಾದ ಪ್ರಸನ್ನ ಕುಮಾರ್ ಹಾಗೂ ಅನಿತಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
    ಭದ್ರಾವತಿ : ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ೩ ಎಕರೆ ಜಮೀನಿಗೆ  ಅಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗು ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕೆಂದು ಜಮೀನಿನ ವಾರಸುದಾರರಾದ ಪ್ರಸನ್ನ ಕುಮಾರ್ ಹಾಗೂ ಅನಿತಾ ಮನವಿ ಮಾಡಿದರು.
  ಅವರು ಈ ಸಂಬಂಧ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ (ಹಳೆಯ ಸರ್ವೆ ನಂಬರ್ ೧೫) ೩ ಎಕರೆ ಜಮೀನನ್ನು ಕರ್ನಾಟಕ ಭೂಸುಧಾರಣಾ ಕಾಯ್ದೆಯ ಪ್ರಕಾರ ವೆಂಕಟೇಶ್ ಬಿನ್ ತಿಮ್ಮಯ್ಯ ಅವರ ಹೆಸರಿಗೆ (ಸಾಗುವಳಿ ಚೀಟಿ ಸಂಖ್ಯೆ ೫೦೮/೯೬-೯೭) ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ಮೂರು ಎಕರೆ ಜಮೀನನ್ನು ನಂಜಮ್ಮ ಬಿನ್ ದೊಡ್ಡಯ್ಯ ಅವರ ಹೆಸರಿಗೆ (ಸಾಗುವಳಿ ಚೀಟಿ ಸಂಖ್ಯೆ ೫೦೫/ ೯೬-೯೭) ಸರ್ಕಾರ ೧೯೯೭ರಲ್ಲಿ ಸಾಗುವಳಿ ಚೀಟಿ ನೀಡಿರುತ್ತದೆ. ವೆಂಕಟೇಶ್ ಹಾಗೂ ನಂಜಮ್ಮ ಅವರ ಹೆಸರಿಗೆ ಜಮೀನಿನ ಖಾತೆ, ಪಹಣಿ ಆಗಿದ್ದು, ಹದ್ದುಬಸ್ತನ್ನೂ ಸಹ ಮಾಡಿಕೊಂಡಿರುತ್ತಾರೆ. ೧೯೯೭ರಿಂದ ವೆಂಕಟೇಶ್ ಹಾಗೂ ನಂಜಮ್ಮ ಅವರ ಕುಟುಂಬದವರೇ ಜಮೀನಿನ ಅನುಭೋಗದಲ್ಲಿದ್ದಾರೆ. ಸರ್ವೆ ನಂಬರ್ ೩೭ರಲ್ಲಿರುವ ಮೂರು ಎಕರೆ ಜಮೀನಿನ ಮಾಲೀಕರಾದ ನಂಜಮ್ಮ ಅವರು ಈಚೆಗೆ ವಿಭಾಗ ಪತ್ರದ ಮೂಲಕ ಪುತ್ರಿ ಅನಿತಾ ಹೆಸರಿಗೆ ಜಮೀನಿನ ಖಾತೆ ವರ್ಗಾವಣೆ ಮಾಡಿಕೊಟ್ಟಿರುತ್ತಾರೆ ಎಂದರು.
     ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಜಮೀನನ್ನು ಅಗಸ್ಟ್ ೧೪, ೨೦೨೪ರಂದು ವೆಂಕಟೇಶ್ ಅವರ ಪುತ್ರ ಪ್ರದೀಪ್.ವಿ ಅವರಿಂದ ಪ್ರಸನ್ನ ಕುಮಾರ್ ಕ್ರಯಕ್ಕೆ ಪಡೆದಿರುತ್ತಾರೆ. ಈ ಸಂಬಂಧ  ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಂಆರ್ ಎಚ್೨/೨೦೨೪-೨೫ರಂತೆ ಖಾತೆಯೂ ಆಗಿದೆ. ಇದರ ನಡುವೆ ಫೆಬ್ರುವರಿ ೨೫ರಂದು  ತಾಲೂಕಿನ ಜಿಂಕ್‌ಲೈನ್ ನಿವಾಸಿ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ನಮ್ಮ ಜಮೀನಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಹದ್ದುಬಸ್ತು ಬಾಂದ್ ಕಲ್ಲನ್ನು ಕಿತ್ತುಹಾಕಿ ಜೀವ ಬೆದರಿಕೆ ಹಾಕಿದ್ದಾರೆ. ಗೂಂಡಾಗಳನ್ನು ಕರೆತಂದು ಭಯ ಹುಟ್ಟಿಸುತ್ತಿದ್ದಾರೆ. ನಮ್ಮ ಜಮೀನಿನೊಳಗೆ ಇಸ್ಪೀಟ್ ಸಹಿತ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು. 
    ಈ ಬಗ್ಗೆ ರಕ್ಷಣೆ ಕೋರಿ ಪೊಲೀಸ್ ಇಲಾಖೆಗೂ ದೂರು ನೀಡಲಾಗಿದೆ. ಜಮೀನಿನ ಕ್ರಯ ಪತ್ರ, ನ್ಯಾಯಾಲಯದ ಶಾಶ್ವತ ನಿರ್ಬಂಧಾಜ್ಞೆ ಆದೇಶ ಪ್ರತಿ, ಪಹಣಿ ಸಾಗುವಳಿ ಚೀಟಿ, ಮ್ಯುಟೇಷನ್, ಪೋಡು ನಕ್ಷೆ, ಸರ್ವೆ ಪ್ರತಿ ಸಹಿತ ಅಗತ್ಯ ದಾಖಲೆಗಳೆಲ್ಲವೂ ನಮ್ಮ ಹೆಸರಿನಲ್ಲೇ ಇವೆ. ೨೦೦೪ರಲ್ಲಿ ಜಮೀನಿಗೆ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಬೋರ್‌ವೆಲ್ ಕೊರೆಸಲಾಗಿದೆ. ಸಣ್ಣ ಹೆಂಚಿನ ಮನೆಯನ್ನೂ ನಿರ್ಮಿಸಲಾಗಿದೆ. ತಹಶೀಲ್ದಾರ್ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಆದೇಶದಂತೆ ಮಾರ್ಚ್ ೧೮ರಂದು ಭೂಮಾಪಕರು, ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಗಡಿ ಗುರುತಿಸಿದ್ದು ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಜಮೀನು ಪ್ರಸನ್ನಕುಮಾರ್ ಬಿನ್ ತಿಮ್ಮಯ್ಯ ಅವರ ಹೆಸರಿನಲ್ಲಿ ಇರುವುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದರು.
    ಇಷ್ಟಾದರೂ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ಜಮೀನಿಗೆ ನುಗ್ಗಿ ಅನಗತ್ಯ ಕಿರುಕುಳ ನೀಡುತ್ತಿದ್ದು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಜಮೀನು ಪ್ರವೇಶ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ  ಸಂಬಂಧಿ ಪಾರ್ವತಮ್ಮ ಉಪಸ್ಥಿತರಿದ್ದರು.

ಆಯುಷ್ಮಾನ್ ಕಾರ್ಡ್ ಯೋಜನೆ ಯಶಸ್ವಿಗೆ ರಾಜ್ಯ ಸರ್ಕಾರ ಆಸಹಕಾರ : ಸಂಸದ ಬಿ.ವೈ ರಾಘವೇಂದ್ರ



ಭದ್ರಾವತಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಂಸದ ಬಿ.ವೈ ರಾಘವೇಂದ್ರ ಸ್ಮಾರ್ಟ್ ಕಾರ್ಡ್ ವಿತರಿಸಿದರು.
    ಭದ್ರಾವತಿ : ಆಯುಷ್ಮಾನ್ ಕಾರ್ಡ್ ೧೬೫೦ಕ್ಕೂ ವಿವಿಧ ತರಹದ ಚಿಕಿತ್ಸೆ, ೯೩೪ ತುರ್ತು ಸಂದರ್ಭದ ಚಿಕಿತ್ಸೆ ಹಾಗು ೧೭ ಅತಿ ತುರ್ತು ಸಂದರ್ಭದ ಚಿಕಿತ್ಸೆಗಳನ್ನು ಒಳಗೊಂಡಿದೆ. ಆದರೆ ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಆರೋಪಿಸಿದರು.
    ಅವರು ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಯೋಜನೆಯ ಉಚಿತ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಮಾತನಾಡಿದರು. 
    ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂಬ ಬಹುದೊಡ್ಡ ಕನಸು ಕಂಡಿದ್ದಾರೆ. ದೇಶದಲ್ಲಿ ಕೋವಿಡ್ ನಂತರ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚಕ್ಕೆ ಕಡಿವಾಣ ಹಾಕಲು ಈ ಯೋಜನೆ ಸಹಕಾರಿಯಾಗಿದೆ ಎಂದರು.
    ಕುಟುಂಬದಲ್ಲಿ ಹಿರಿಯರ ಆರೋಗ್ಯ ಮತ್ತು ಯೋಗ ಕ್ಷೇಮ ನೋಡಿಕೊಳ್ಳುವುದು ಕಿರಿಯರ ಜವಾಬ್ದಾರಿಯಾಗಿದೆ. ಅದರೆ ಇತ್ತೀಚಿನ ದಿನಗಳಲ್ಲಿ ಹಿರಿಯರ ಆರೈಕೆ ಮಾಡುವುದನ್ನು ಕಡೆಗಣಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಪ್ರವೃತ್ತಿ ಸಮಾಜದಲ್ಲಿ ತೊಲಗಬೇಕು. ಹಿರಿಯ ಆರೈಕೆ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದರು.
  ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮಾತನಾಡಿ, ಪಕ್ಷದ ಮುಖಂಡರು, ಕಾರ್ಯಕರ್ತರು ಈ ಯೋಜನೆ ಯಶಸ್ವಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಸಮಾಜದ ಪ್ರತಿಯೊಬ್ಬ ಕಡು ಬಡವನಿಗೂ ಈ ಯೋಜನೆ ತಲುಪಬೇಕು. ಈ ನಿಟ್ಟಿನಲ್ಲಿ ಸಂಸದ ರಾಘವೇಂದ್ರರವರು ಈ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ ಎಂದರು.                    
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ.ಧರ್ಮ ಪ್ರಸಾದ್ ಮಾತನಾಡಿ, ಸಮಾಜದಲ್ಲಿನ ಮಧ್ಯಮ ವರ್ಗ ಹಾಗು ಶ್ರೀ ಸಾಮನ್ಯರಿಗೆ ಈ ಯೋಜನೆ ವರದಾನವಾಗಿದೆ ಎಂದರು.
    ಯುವ ಮುಖಂಡರಾದ ಜಿ.ಆನಂದ ಕುಮಾರ್, ಟಿ.ಎಸ್ ದುಗ್ಗೇಶ್, ಅಣ್ಣಪ್ಪ, ಬಿ.ಜಿ ರಾಮಲಿಂಗಯ್ಯ, ಎಂ. ಮಂಜುನಾಥ್, ಮಧುಕರ್ ಕಾನಿಟ್ಕರ್, ದಿನೇಶ್, ಕೆ.ಎಚ್ ತೀರ್ಥಯ್ಯ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಗಜೇಂದ್ರ ಪ್ರಾರ್ಥಿಸಿ, ವೆಂಕಟೇಶ್ ಸ್ವಾಗತಿಸಿದರು. ಮಂಗೋಟೆ ರುದ್ರೇಶ್ ಪ್ರಸ್ತಾವಿಕ ನುಡಿಗಳನ್ನಾಡಿ, ಚನ್ನೇಶ್ ಕಾರ್ಯಕ್ರಮ  ನಿರೂಪಿಸಿ, ಆನಂದ್ ವಂದಿಸಿದರು. 

ಬಷೀರುನ್ನೀಸ ನಿಧನ


ಬಷೀರುನ್ನೀಸ 
    ಭದ್ರಾವತಿ : ನಗರದ ಜನ್ನಾಪುರ ನಂದಿನಿ ಸರ್ಕಲ್ ದಿನ ಪತ್ರಿಕೆಗಳ ಮಾರಾಟಗಾರ ನವಾಬ್‌ರವರ ತಾಯಿ ಬಷೀರುನ್ನೀಸ(೭೦) ವಯೋ ಸಹಜವಾಗಿ ನಿಧನ ಹೊಂದಿದರು. 
    ಪತಿ, ಓರ್ವ ಪುತ್ರಿ ಹಾಗು ನವಾಬ್ ಸೇರಿದಂತೆ ಇಬ್ಬರು ಪುತ್ರರು ಇದ್ದಾರೆ. ಜನ್ನಾಪುರ ರಾಜಪ್ಪ ಬಡಾವಣೆಯಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ತರೀಕೆರೆ ರಸ್ತೆಯ ಸಾದತ್ ದರ್ಗಾ ಖಬರ್‌ಸ್ತಾನದಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 




ಶುಕ್ರವಾರ, ಮಾರ್ಚ್ 21, 2025

ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ : ಎಂಪಿಎಂ ಕಾರ್ಖಾನೆ ಪುನರ್ ಪ್ರಾರಂಭಿಸುವ ಭರವಸೆ

ಭದ್ರಾವತಿ ಎಂಪಿಎಂ ಕಾರ್ಖಾನೆ ಪುನರ್ ಪ್ರಾರಂಭಿಸುವ ಕುರಿತು ಸದನದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್  ಚರ್ಚಿಸಿದ ಪರಿಣಾಮ ಶುಕ್ರವಾರ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಸಭೆ ಜರುಗಿತು. 
    ಭದ್ರಾವತಿ : ನಗರದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ (ಎಂ.ಪಿ.ಎಂ) ಪುನರ್ ಪ್ರಾರಂಭಿಸುವ ಸಂಬಂಧ ಅರಣ್ಯ ಇಲಾಖೆಯಿಂದ ಎದುರಾಗಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದ್ದಾರೆ. 
    ಕಳೆದ ೩ ದಿನಗಳ ಹಿಂದೆ ಎಂಪಿಎಂ ಕಾರ್ಖಾನೆ ಪುನರ್ ಪ್ರಾರಂಭಿಸುವ ಕುರಿತು ಸದನದಲ್ಲಿ ನಾನು ಚರ್ಚಿಸಿದ ಪರಿಣಾಮ ಶುಕ್ರವಾರ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಸಭೆ ಜರುಗಿತು. ಪ್ರಸ್ತುತ ಎಂಪಿಎಂ ಕಾರ್ಖಾನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಸಚಿವರಿಗೆ ತಿಳಿಸುವ ಮೂಲಕ ಕಾರ್ಖಾನೆ ಪುನರ್ ಪ್ರಾರಂಭಿಸುವುದರಿಂದ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸುವಂತಹ ಕಾರ್ಯ ಸಾಕಾರಗೊಳ್ಳುವ ಕುರಿತು ಮನವರಿಕೆ ಮಾಡಿಕೊಡಲಾಯಿತು. 
    ಸಚಿವರು, ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹಾಗೂ ಹಿರಿಯ ಅರಣ್ಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಬೇಗನೆ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸಲು ಎಲ್ಲ ರೀತಿಯ ಸಹಕಾರ ನೀಡಲು ಬದ್ಧರಿರುವುದಾಗಿ ತಿಳಿಸಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾರ್ಖಾನೆ ಪುನರ್ ಪ್ರಾರಂಭಿಸುವ ವಿಶ್ವಾಸ ಹೆಚ್ಚಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. 

ಮಾ.೨೨ರಂದು ಪುನೀತ್‌ರಾಜ್‌ಕುಮಾರ್ ೫೦ನೇ ಹುಟ್ಟುಹಬ್ಬ



    ಭದ್ರಾವತಿ: ನಗರದ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಕರ್ನಾಟಕ ರತ್ನ, ನಟ, ಸಮಾಜ ಸೇವಕ ಪುನೀತ್‌ರಾಜ್‌ಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಮಾ.೨೨ರ ಶನಿವಾರ ಸಂಜೆ ೪ ಗಂಟೆಗೆ ನ್ಯೂಟೌನ್ ಅಯ್ಯಪ್ಪ ಸ್ವಾಮಿ ಸಭಾಭವನದಲ್ಲಿ ಆಯೋಜಿಸಲಾಗಿದೆ. 
    ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎರೇಹಳ್ಳಿ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಕೋಗಲೂರು ತಿಪ್ಪೇಸ್ವಾಮಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. 
    ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನಟರಾಜ್, ಸಂಘದ ಗೌರವ ಸಲಹೆಗಾರ ರಾಜವಿಕ್ರಂ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ದೇವರಾಜ್, ಹಿರಿಯ ಕಲಾವಿದ ಜೆ.ಪಿ ನಂಜುಂಡೇಗೌಡ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
    ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್ ಮತ್ತು ರಂಗ ಕಲಾವಿದ ವೈ.ಕೆ ಹನುಮಂತಯ್ಯ ಅವರಿಗೆ ಸನ್ಮಾನ ನಡೆಯಲಿದೆ. ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಕೇಂದ್ರ ಉಕ್ಕು ಸಚಿವರಿಂದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ದಿನ ಹೆಚ್ಚಿಸುವ ಭರವಸೆ

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ನಿಯೋಗ ಶುಕ್ರವಾರ ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ದಿನ ಹೆಚ್ಚಿಸುವುದಾಗಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ ಕುಮಾರ ಸ್ವಾಮಿಯವರು ಭರವಸೆ ನೀಡಿದ್ದಾರೆ. 
    ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಗುತ್ತಿಗೆ ಕಾರ್ಮಿಕರ ನಿಯೋಗ ಶುಕ್ರವಾರ ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. 
    ಕಾರ್ಖಾನೆ ಅಭಿವೃದ್ಧಿ ಹೊಂದುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಇದರಿಂದಾಗಿ ಕಾರ್ಮಿಕ ವಲಯ ಹಾಗು ಕ್ಷೇತ್ರದ ಜನತೆಯಲ್ಲಿ ಆತಂಕ ಛಾಯೆ ಆವರಿಸಿಕೊಂಡಿದ್ದು, ಅಲ್ಲದೆ ಗುತ್ತಿಗೆ ಕಾರ್ಮಿಕರಿಗೆ ಕೆಲಸದ ದಿನಗಳು ಹೆಚ್ಚಳವಾಗದ ಕಾರಣ ಸಂಕಷ್ಟದಲ್ಲಿ ಬದುಕುವಂತಾಗಿದೆ ಎಂದು ಎಂದು ನಿಯೋಗ ಅಳಲು ವ್ಯಕ್ತಪಡಿಸಿದೆ.  
    ಸಚಿವ ಕುಮಾರಸ್ವಾಮಿ ನಿಯೋಗಕ್ಕೆ ಸ್ಪಂದಿಸಿ ಕಾರ್ಖಾನೆ ಅಭಿವೃದ್ಧಿ ಹಾಗು ಗುತ್ತಿಗೆ ಕಾರ್ಮಿಕರಿಗೆ ಕೆಲಸ ದಿನ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆಂದು ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ತಿಳಿಸಿದ್ದಾರೆ.  
    ನಿಯೋಗದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸೇರಿದಂತೆ ಪದಾಧಿಕಾರಿಗಳು, ನಿರ್ದೇಶಕರು ಪಾಲ್ಗೊಂಡಿದ್ದರು.