ಸೋಮವಾರ, ಮಾರ್ಚ್ 31, 2025

ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿಗೆ ಸಚಿವ ಸಂಪುಟ ಒಪ್ಪಿಗೆ

ಮನೆ ಬಾಗಿಲಿಗೆ ಬರುವವರಿಗೆ ಸೂಕ್ತ ಮಾಹಿತಿ ನೀಡಿ : ಎಸ್. ಪುಟ್ಟರಾಜು

ಎಸ್. ಪುಟ್ಟರಾಜು
    ಭದ್ರಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದು, ಈ ಹಿನ್ನಲೆಯಲ್ಲಿ ಜಾತಿಗಣತಿಗೆ ಮನೆ ಮನೆಗೆ ಬರುವವರಿಗೆ ಸೂಕ್ತ ದಾಖಲಾತಿಗಳೊಂದಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ತಾಲೂಕಿನ ಶೋಷಿತ ಮಾದಿಗ ಸಮಾಜದ ಮುಖಂಡರು, ಚಿಂತಕರು, ನೌಕರರು, ಕೂಲಿ ಕಾರ್ಮಿಕರು ಮತ್ತು ಸ್ತ್ರೀಶಕ್ತಿ ಸಮುದಾಯದವರು, ವಿದ್ಯಾರ್ಥಿಗಳು ಒಗ್ಗಟ್ಟಾಗಿ ಶೋಷಿತ ಸಮಾಜದ ಹಿತ ದೃಷ್ಟಿಯಿಂದ ಈ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಅಧ್ಯಕ್ಷ ಎಸ್. ಪುಟ್ಟರಾಜು ಕೋರಿದ್ದಾರೆ. 
    ಒಳಮೀಸಲಾತಿಗಾಗಿ ಕಳೆದ ಸುಮಾರು ಮೂರು ದಶಗಳಿಂದ ಹೋರಾಟ ನಡೆಸಿಕೊಂಡು ಬಂದಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯರವರು ಸಂತಸದ ಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿಗೆ ಮುಂದಾಗಿರುವುದು ಉತ್ತಮ ನಿರ್ಧಾರವಾಗಿದೆ. ಹೋರಾಟದ ಫಲ ಒಳಮೀಸಲು ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕಾನೂನು ತೊಡಕು ಆಗದ ರೀತಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದ ಸಿದ್ದರಾಮಯ್ಯ ಸರ್ಕಾರ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್‌ರವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚಿಸಿತು. ಆಯೋಗ ಮಧ್ಯಂತರ ವರದಿ ಸಲ್ಲಿಸಿದ್ದು, ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ನಡೆಸಿ ಎಂಪೋರಿಕಲ್ ದತ್ತಾಂಶ ಪಡೆದು ಜಾರಿಗೊಳಿಸುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನೆ ಸಲ್ಲಿಸುವುದು ಸೇರಿ ಯಾವುದೇ ರೀತಿ ಕಾನೂನು ತೊಡಕು ಎದುರಾಗದು ಎಂಬ ಸಲಹೆ ನೀಡಿದ ಮೇರೆಗೆ ತಕ್ಷಣವೇ ಸರ್ಕಾರ ಸಚಿವ ಸಂಪುಟದಲ್ಲಿ ಜಾತಿಗಣತಿಗೆ ಒಪ್ಪಿಗೆ ನೀಡಿದೆ. ಈ ಮೂಲಕ ನೊಂದ ಜನರ ಪರವಾಗಿ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. 
    ಸರ್ಕಾರ ಜಾತಿಗಣತಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಜೂನ್ ತಿಂಗಳಿನಲ್ಲಿ ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಮಾಜ ಕಲ್ಯಾಣ ಖಾತೆ ಮಾಜಿ ಸಚಿವ ಎಚ್. ಆಂಚನೇಯರವರು ವಿಶೇಷ ಕಾಳಜಿವಹಿಸಿ ಹಗಲಿರುಳು ಒಳಮೀಸಲಾತಿ ಜಾರಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ಜೊತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ, ಸಮುದಾಯದ ಎಲ್ಲಾ ಶಾಸಕರು, ಮಾಜಿ ಶಾಸಕರು, ದಲಿತಪರ ಸಂಘಟನೆಗಳು ಕಳೆದ ಸುಮಾರು ೩೦ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಹೋರಾಟಕ್ಕೆ ಇದೀಗ ಫಲ ಲಭಿಸಿದೆ. ಇದನ್ನು ಸಮುದಾಯದವರು ಸರಿಯಾಗಿ ಅರ್ಥಮಾಡಿಕೊಂಡು. ಜಾತಿಗಣತಿಗೆ ಮನೆ ಬಾಗಿಲಿಗೆ ಬರುವವರಿಗೆ ಆಧಾರ್ ಕಾರ್ಡ್ ಸಂಖ್ಯೆ ಜೊತೆಗೆ ಜೀವನ ಪರಿಸ್ಥಿತಿ, ಶೈಕ್ಷಣಿಕ, ಸಾಮಾಜಿಕ ಹಾಗು ಆರ್ಥಿಕ ಪರಿಸ್ಥಿತಿಯನ್ನು ದಾಖಲಿಸಲು ಸಹಕರಿಸಿ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗುವಂತೆ  ಪುಟ್ಟರಾಜು ಮನವಿ ಮಾಡಿದ್ದಾರೆ. 

ಶನಿವಾರ, ಮಾರ್ಚ್ 29, 2025

ಎಂಪಿಎಂ ನಿವೃತ್ತ ಕಾರ್ಮಿಕರ ಪಿಂಚಣಿ ಹೆಚ್ಚಿಸಿ : ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಇಪಿಎಸ್-೯೫ ಪಿಂಚಣಿಯನ್ನು ಕನಿಷ್ಠ ೭೫೦೦ ರು.ಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆಯಿಂದ ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕರ ಇಪಿಎಸ್-೯೫ ಪಿಂಚಣಿಯನ್ನು ಕನಿಷ್ಠ ೭೫೦೦ ರು.ಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆಯಿಂದ ಕೇಂದ್ರ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
    ಪ್ರಸ್ತುತ ನಿವೃತ್ತ ಕಾರ್ಮಿಕರಿಗೆ ಬರುತ್ತಿರುವ ಪಿಂಚಣಿ ಮೊತ್ತ ಅತ್ಯಂತ ಕಡಿಮೆ ಇದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಪಿಂಚಣಿ ೭೫೦೦ ರು. ಗಳಿಗೆ ಹೆಚ್ಚಿಸುವ ಮೂಲಕ ಸಹಕರಿಸುವಂತೆ ಕೋರಲಾಗಿದೆ. 
    ಕೇಂದ್ರ ಕಾರ್ಮಿಕ ಸಚಿವರಿಗೆ ಶಿವಮೊಗ್ಗದ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು. ವೇದಿಕೆ ಪ್ರಮುಖರಾದ  ಟಿ.ಜಿ ಬಸವರಾಜಯ್ಯ, ಗೋವಿಂದಪ್ಪ, ಡಿ.ಮರಿಯಪ್ಪ, ಎಚ್. ಚನ್ನೇಶಪ್ಪ, ಲೋಕಾನಂದ ರಾವ್, ವೆಂಕಟೇಶಮೂರ್ತಿ, ತಾರಕೇಶ್ವರಪ್ಪ, ಕೆ.ರಾಮಚಂದ್ರ ಸೇರಿದಂತೆ ಸುಮಾರು ೬೫ ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.

ಏ.೧ರಿಂದ ಬೇಸಿಗೆ ಶಿಬಿರ



    ಭದ್ರಾವತಿ : ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಅಪರಂಜಿ ಅಭಿನಯ ಶಾಲೆ ವತಿಯಿಂದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೧೦೦ನೇ ಜನ್ಮದಿನೋತ್ಸವ ಅಂಗವಾಗಿ ಏ.೧ ರಿಂದ ೧೦ರವರೆಗೆ  ೧೦ದಿನಗಳವರೆಗೆ ಆಯೋಜಿಸಲಾಗಿದೆ. 
    ಪ್ರತಿ ವರ್ಷದಂತೆ ಈ ಬಾರಿ ಸಹ ರಂಗಕರ್ಮಿ, ಕಿರುತೆರೆ-ಚಲನಚಿತ್ರ ನಟ ಅಪರಂಜಿ ಶಿವರಾಜ್‌ರವರ ನೇತೃತ್ವದಲ್ಲಿ ಶಿಬಿರ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಶಿಬಿರದಲ್ಲಿ ೫ ರಿಂದ ೧೫ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. 
    ಡ್ರಾಮಾ ಜ್ಯೂನಿಯರ್, ಅಭಿನಯ ತರಬೇತಿ, ಗೀತಗಾಯನ, ನೃತ್ಯ, ಚಿತ್ರಕಲೆ, ವ್ಯಕ್ತಿತ್ವ ವಿಕಸನ ಮತ್ತು ಕಲಾಕೃತಿ ರಚನೆ(ಕ್ರಾಫ್ಟ್ ವರ್ಕ್ಸ್) ಚಟುವಟಿಕೆಗಳು ಶಿಬಿರದಲ್ಲಿ ನಡೆಯಲಿವೆ. ಶಿಬಿರ ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೩.೩೦ರವರೆಗೆ ನಡೆಯಲಿದ್ದು, ೨೫ ರಿಂದ ೩೦ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಹೆಸರು ನೋಂದಾಯಿಸಲು ಮೊ: ೯೯೮೦೫೩೪೪೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ

ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹಾಗು ಹೊಸ ಕಾಮಗಾರಿ ಆರಂಭಿಸಲು ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು ೧೦ ಕೋ.ರು. ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಒಂದೇ ದಿನ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.      
    ಭದ್ರಾವತಿ : ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹಾಗು ಹೊಸ ಕಾಮಗಾರಿ ಆರಂಭಿಸಲು ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು ೧೦ ಕೋ.ರು. ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಒಂದೇ ದಿನ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.      
      ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಗೆರೆ ಮುಖ್ಯ ರಸ್ತೆಯಿಂದ ಸಿದ್ಧರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ಉದಯನಗರ ಗ್ರಾಮದ ಮುಖ್ಯರಸ್ತೆಯಿಂದ ಬದನೆಹಾಳು ಮಾರ್ಗವಾಗಿ ಬಂಡಿ ಗುಡ್ಡಕ್ಕೆ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ಹಾಗು ಪಾಲಿ ಕ್ಲಿನಿಕ್ ಕಟ್ಟಡ ಉದ್ಘಾಟನೆ ನೆರವೇರಿಸಲಾಯಿತು. 
    ದೊಡ್ಡೇರಿ ಗ್ರಾಮದಲ್ಲಿ ಕೆರೆ ಏರಿ ಮೇಲೆ ಸಿಸಿ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ, ಉಕ್ಕುಂದ ಗ್ರಾಮದ ಮುಖ್ಯ ರಸ್ತೆಯಿಂದ ನಗರಕ್ಕೆ ಕೂಡುವ ರಸ್ತೆ ಡಾಂಬರೀಕರಣ, ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಿ ಗುಡ್ಡದಿಂದ ಕಾಚಗೊಂಡನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಪುರದಿಂದ ಉಕ್ಕುಂದ  ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗು ಅಂತರಗಂಗೆ ಬೋವಿ ಕಾಲೋನಿಯ ಅಂಗನವಾಡಿ ಕಟ್ಟಡ ಉದ್ಘಾಟಿಸಲಾಯಿತು. 


    ಕೆಂಚನಹಳ್ಳಿ ಕಾಲೋನಿಯಿಂದ ಹಡ್ಲಘಟ್ಟ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ಬಾರಂದೂರು ಮತ್ತು ಮಾವಿನಕೆರೆ ಮುಖ್ಯ ರಸ್ತೆಯಿಂದ ಕೆಂಚನಹಳ್ಳಿ ಮತ್ತು ನೀರುಗುಂಡಿ ಮೊಸರಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಮಾವಿನಕೆರೆ ಕಾಲೋನಿಯಿಂದ ಶಿವಪುರ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಕಾರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿಂಗನಹಳ್ಳಿ ಮುಖ್ಯ ರಸ್ತೆಯಿಂದ ಕೆಂಚೇನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ, ಬಿ.ಎಚ್ ರಸ್ತೆಯಿಂದ ಕೆಂಪೇಗೌಡ ನಗರದ ಮಾರ್ಗವಾಗಿ ಕಾಳಿಂಗನಹಳ್ಳಿ ಕೂಡುವ ರಸ್ತೆ ಕಾಮಗಾರಿ, ಕಾರೇಹಳ್ಳಿ ಭದ್ರಾ ಪ್ಯಾಕೇಜ್ ರಸ್ತೆಯಿಂದ ಬಿ.ಎಚ್ ರಸ್ತೆವರೆಗೆ ಅಭಿವೃದ್ಧಿ ಕಾಮಗಾರಿ, ಹಳೇ ಬಾರಂದೂರು ಮುಖ್ಯ ರಸ್ತೆಯಿಂದ, ಬಿ.ಎಚ್ ರೋಡ್ ಮುಖ್ಯರಸ್ತೆಯವರೆಗೆ ಕಾಂಕ್ರೀಟ್ ರಸ್ತೆ ಮತ್ತು ಬಾಳೇ ಮಾರನಹಳ್ಳಿ ಮುಖ್ಯ ರಸ್ತೆಯಿಂದ ಹಳೇ ಹಿರಿಯೂರು ಚಾನೆಲ್‌ವರಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಜಿಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ಜಿಲ್ಲಾಮಟ್ಟದ ಕ್ರೀಡಾಕೂಟ : ಮಹಿಳಾ ತಂಡಕ್ಕೆ ಹಲವು ಬಹುಮಾನ

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ತಾಲೂಕಿನ ಮಹಿಳಾ ದೈಹಿಕ ಶಿಕ್ಷಣ ಶಿಕ್ಷಕರ ತಂಡ ಭಾಗವಹಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದೆ. 
    ಭದ್ರಾವತಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ತಾಲೂಕಿನ ಮಹಿಳಾ ದೈಹಿಕ ಶಿಕ್ಷಣ ಶಿಕ್ಷಕರ ತಂಡ ಭಾಗವಹಿಸಿ ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದೆ. 
    ಗುಂಪು ಸ್ಪರ್ಧೆಗಳಾದ ಹ್ಯಾಂಡ್ ಬಾಲ್-ಪ್ರಥಮ ಸ್ಥಾನ ಮತ್ತು ವಾಲಿಬಾಲ್ ಹಾಗೂ ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಮುಂಜೀರಾ(ನಾಯಕಿ), ಜ್ಯೋತಿ, ನೂರ್ ಫಾತಿಮಾ, ರತ್ನಮ್ಮ. ರೇವತಿ, ದಿವ್ಯ, ರೇಖಾ, ನಂದಿನಿ, ನಿರ್ಮಲ, ಸವಿತ ಮತ್ತು ಸುನೀತಾಬಾಯಿ ಸೇರಿದಂತೆ ಇನ್ನಿತರರು ತಂಡದಲ್ಲಿ ಭಾಗವಹಿಸಿದ್ದರು. 
    ವೈಯಕ್ತಿಕ ಸ್ಪರ್ಧೆಯಲ್ಲಿ ಪಿ. ಸುಜಾತಾ ಎತ್ತರ ಜಿಗಿತ ಪ್ರಥಮ ಸ್ಥಾನ, ೧೦೦ ಮೀ. ಓಟ ಮತ್ತು ಡಿಸ್ಕಸ್ ಥ್ರೋ ತೃತಿಯ ಸ್ಥಾನ, ಅಮೀರ್ ಉನ್ನಿಸ ಉದ್ದಜಿಗಿತ ಪ್ರಥಮ ಸ್ಥಾನ, ೧೦೦ ಮೀ. ಓಟ ತೃತಿಯ ಸ್ಥಾನ ಮತ್ತು ೮೦೦ ಮೀ. ಓಟ ದ್ವಿತೀಯ ಸ್ಥಾನ, ಫಾತಿಮಾ ಉದ್ದ ಜಿಗಿತ ದ್ವಿತೀಯ ಸ್ಥಾನ ಹಾಗು  ಜಾವಲಿನ್ ಮತ್ತು  ೪೦೦ ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜೇತ ತಂಡಕ್ಕೆ ದೈಹಿಕ ಶಿಕ್ಷಣ ಶಿಕ್ಷಕ, ವ್ಯವಸ್ಥಾಪಕ ಶಿವಲಿಂಗೇಗೌಡ, ಕ್ಷೇತ್ರ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪ್ರಭು. ಪ್ರಮುಖರಾದ ಶ್ರೀಧರ್ ಸಾವಂತ್, ರಾಜಾ ನಾಯ್ಕ, ಶ್ರೀಕಾಂತ್, ಸಿದ್ದಯ್ಯ, ಶಿವರಾಜ್, ಖಚಾಂಚಿ  ಕರಣ ಸಿಂಗ್ ಮತ್ತು ಇತರೆ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿದ್ದಾರೆ.  
 

ಶುಕ್ರವಾರ, ಮಾರ್ಚ್ 28, 2025

ಕನ್ನಡ ಸಾಹಿತ್ಯ ಭವನದ ಸಭಾಮಂಟಪ ರಂಗಮಂದಿರದ ಮಾದರಿಯಲ್ಲಿ ನಿರ್ಮಿಸಿ

ಭದ್ರಾವತಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನದ ಸಭಾಮಂಟಪ ರಂಗಮಂದಿರದ ಮಾದರಿಯಲ್ಲಿ ನಿರ್ಮಾಣಗೊಳಿಸುವಂತೆ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ : ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನದ ಸಭಾಮಂಟಪ ರಂಗಮಂದಿರದ ಮಾದರಿಯಲ್ಲಿ ನಿರ್ಮಾಣಗೊಳಿಸುವಂತೆ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. 
    ನ್ಯೂಟೌನ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ಸಂಜೆ ನೂತನ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಂಬಂಧ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು. 
    ನಗರದಲ್ಲಿ ರಂಗಮಂದಿರದ ಕೊರತೆ ಇದ್ದು, ಈ ಹಿನ್ನಲೆಯಲ್ಲಿ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿಲ್ಲ. ಬಾಡಿಗೆಗೆ ಕಲ್ಯಾಣ ಮಂಟಪಗಳಿಗೆ ಹಣ ಕೊಟ್ಟು ನಾಟಕ ಪ್ರದರ್ಶನ ಮಾಡುವುದು ಅಸಾಧ್ಯವಾಗಿದೆ. ಕೆಲವು ರಂಗ ತಂಡಗಳು ಮತ್ತು ರಂಗ ಕಲಾವಿದರು ನಾಟಕ ಪ್ರದರ್ಶನ ಮಾಡಲು ಉತ್ಸುಕರಾಗಿದ್ದಾರೆ. ಅಲ್ಲದೆ ಪ್ರಸ್ತುತ ರಂಗ ಚಟುವಟಿಕೆಗಳು ಕಣ್ಮರೆಯಾಗುತ್ತಿದ್ದು, ಇವುಗಳನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನೂತನ ಕನ್ನಡ ಸಾಹಿತ್ಯ ಭವನದ ಸಭಾಮಂಟಪ ರಂಗಮಂದಿರದ ಮಾದರಿಯಲ್ಲಿ ನಿರ್ಮಾಣ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ, ಎಮರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ, ಸಮಿತಿ ಪ್ರಮುಖರಾದ ಡಿ. ಪ್ರಭಾಕರ ಬೀರಯ್ಯ, ಜಾನಪದ ಪರಿಷತ್ ಹಿರಿಯೂರು ಹೋಬಳಿ ಘಟಕದ ಅಧ್ಯಕ್ಷ ಜಯರಾಂ ಗೊಂದಿ, ಅಂಬೇಡ್ಕರ್ ಜಾನಪದ ಕಲಾ ಸಂಘದ ತಮಟೆ ಜಗದೀಶ್, ದಿವಾಕರ್, ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಯುಗಾದಿ ಕವಿತಾ ವಾಚನ ಸ್ಪರ್ಧೆಯಲ್ಲಿ ಸಾಹಿತಿ ಜೆ.ಎನ್ ಬಸವರಾಜಪ್ಪ ಕವನ ವಾಚನ

ಶಿವಮೊಗ್ಗ ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ವತಿಯಿಂದ ಕೀರ್ತಿನಗರದ ವನಿತಾ ವಿದ್ಯಾಲಯದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕವಿತಾ ವಾಚನ ಸ್ಪರ್ಧೆಯಲ್ಲಿ ಭದ್ರಾವತಿ ನಗರದ ಹೊಸಮನೆ ನಿವಾಸಿ, ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಭಾಗವಹಿಸಿದ್ದರು. 
    ಭದ್ರಾವತಿ : ಶಿವಮೊಗ್ಗ ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ವತಿಯಿಂದ ಕೀರ್ತಿನಗರದ ವನಿತಾ ವಿದ್ಯಾಲಯದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕವಿತಾ ವಾಚನ ಸ್ಪರ್ಧೆಯಲ್ಲಿ ನಗರದ ಹೊಸಮನೆ ನಿವಾಸಿ, ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಭಾಗವಹಿಸಿದ್ದರು. 
    ವನಿತಾ ವಿದ್ಯಾಲಯದಲ್ಲಿ ಜರುಗಿದ ಸ್ಪರ್ಧೆಯಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡಿದ್ದರು. ಜೆ.ಎನ್ ಬಸವರಾಜಪ್ಪರವರು ತಾವು ರಚಿಸಿರುವ ಮತ್ತೆ ಮತ್ತೆ ಯುಗಾದಿ ಕವನ ವಾಚಿಸಿದರು. ಈಗಾಗಲೇ ಹಲವಾರು ವೇದಿಕೆಗಳಲ್ಲಿ ಬಸವರಾಜಪ್ಪರವರು ತಮ್ಮ ಕವನಗಳನ್ನು ವಾಚಿಸಿದ್ದಾರೆ. ಅಲ್ಲದೆ ಭದ್ರಾವತಿ ಆಕಾಶವಾಣಿ ಕೇಂದ್ರದ ಹಲವಾರು ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. 
    ವಿಜೇತರಿಗೆ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಬಹುಮಾನಗಳನ್ನು ವಿತರಿಸಿದರು. ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ಅಧ್ಯಕ್ಷೆ ತಾರಾ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವನಿತಾ ವಿದ್ಯಾಲಯದ ರಮ್ಯ ಉಪಸ್ಥಿತರಿದ್ದರು.