Tuesday, April 1, 2025

ಉಚಿತ ಕುಡಿಯುವ ನೀರಿನ ಸೇವೆಗೆ ಚಾಲನೆ : ಪ್ರತಿಯೊಬ್ಬರು ಸೇವಾ ಕಾರ್ಯ ಮೈಗೂಡಿಸಿಕೊಳ್ಳಿ

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ 

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಹಾಗು ಶ್ರೀ ಸತ್ಯ ಸಾಯಿ ಶಾಲಾ ಸಮಿತಿ ವತಿಯಿಂದ  ಉಚಿತ ಕುಡಿಯುವ ನೀರಿನ ಸೇವೆ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರ ವ್ಯವಸ್ಥಾಪಕ ಕೃಷ್ಣಮೂರ್ತಿ ಚಾಲನೆ ನೀಡಿದರು. 
    ಭದ್ರಾವತಿ : ಶ್ರೀ ಸತ್ಯಸಾಯಿ ಬಾಬಾರವರ ಪ್ರೇರಣೆಯಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಉಚಿತ ಕುಡಿಯುವ ನೀರಿನ ಸೇವೆ ಮಾಡುತ್ತಿದ್ದು, ಈ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಭಕ್ತರು ಪಾಲ್ಗೊಂಡು ಯಶಸ್ವಿಗೆ ಸಹಕರಿಸುತ್ತಿದ್ದಾರೆ. ಪ್ರತಿಯೊಬ್ಬರು ಇಂತಹ ಸೇವಾ ಕಾರ್ಯ ಮೈಗೂಡಿಸಿಕೊಳ್ಳಬೇಕೆಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಹೇಳಿದರು. 
    ಅವರು ಮಂಗಳವಾರ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಹಾಗು ಶ್ರೀ ಸತ್ಯ ಸಾಯಿ ಶಾಲಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಕುಡಿಯುವ ನೀರಿನ ಸೇವೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. 
    ಬಾಬಾರವರ ಪ್ರೇರಣೆಯಿಂದ ಪ್ರತಿದಿನ ಹಲವಾರು ಸೇವಾ ಕಾರ್ಯಗಳು ನಡೆಯುತ್ತಿವೆ. ಈ ಪೈಕಿ ಉಚಿತ ಕುಡಿಯುವ ನೀರಿನ ಸೇವೆ ಸಹ ಒಂದಾಗಿದೆ. ೧೯೮೫ರಿಂದ ನಿರಂತರವಾಗಿ ಈ ಸೇವಾ ಕಾರ್ಯ ನಡೆಸಲಾಗುತ್ತಿದ್ದು, ೪೧ನೇ ವರ್ಷದ ಸೇವಾ ಕಾರ್ಯ ಇದಾಗಿದೆ. ಮಹಿಳೆಯರು, ಪುರುಷರು ಹಾಗು ಯುವ ಸಮುದಾಯದವರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ಕೆ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಬಾಬಾರವರು ಒಳ್ಳೆಯದನ್ನು ಮಾಡಲಿ ಎಂದರು.  
    ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಕೃಷ್ಣಮೂರ್ತಿ ಉಚಿತ ಕುಡಿಯುವ ನೀರಿನ ಸೇವೆಗೆ ಚಾಲನೆ ನೀಡಿದರು. 
    ಪ್ರಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಸೌಮ್ಯ ಪ್ರಭಾಕರ ಬೀರಯ್ಯ, ರಾಮಕೃಷ್ಣಯ್ಯ, ಸಂತೋಷ್ ವರ್ಣೇಕರ್, ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಶಾಮರಾಯ ಆಚಾರ್, ಶಿಕ್ಷಣ ಸಂಯೋಜಕ ಪರಮೇಶ್ವರಪ್ಪ ಸೇರಿದಂತೆ ಶಿಕ್ಷಕ ವೃಂದದವರು, ಸೇವಾಕರ್ತರು ಉಪಸ್ಥಿತರಿದ್ದರು. 

ಡಾ. ಶಿವಕುಮಾರ ಸ್ವಾಮೀಜಿ ಜನ್ಮದಿನ : ಒಳರೋಗಿಗಳಿಗೆ ಹಣ್ಣು ವಿತರಣೆ

ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ತುಮಕೂರು ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜನ್ಮದಿನದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು. 
    ಭದ್ರಾವತಿ: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ತುಮಕೂರು ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜನ್ಮದಿನದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿ ಸಹ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ವಿತರಿಸಲಾಯಿತು. 
    ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಮುಖರು ಮಾತನಾಡಿ, ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸುವ ಮೂಲಕ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. 
    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿ ಅಧ್ಯಕ್ಷ ಬಸವಂತಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ್, ಸಿದ್ದಾರೂಢ ಮಠದ ಕಾರ್ಯದರ್ಶಿ ರಾಮಮೂರ್ತಿ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗು ಮಹಾಸಭಾ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸಂತ ಗುರು ಹರಳಯ್ಯರವರ ಬದುಕು ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ : ಬಿ.ಕೆ ಶಿವಕುಮಾರ್

ಭದ್ರಾವತಿ ತಾಲೂಕು ಸಮಗಾರ ಶ್ರೀ ಹರಳಯ್ಯ ಮೋಚಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸಂಘದ ಸುವರ್ಣ ಮಹೋತ್ಸವ ಹಾಗೂ ಸರ್ವಸದಸ್ಯರ ಮಹಾಸಭೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ, ಬಿ.ಪಿ ರಾಘವೇಂದ್ರ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ : ಕಾಯಕ ನಿಷ್ಠೆಯೊಂದಿಗೆ ಸಮಾಜಕ್ಕೆ ತನ್ನದೇ ಆದ ಆದರ್ಶ ಮೌಲ್ಯಗಳನ್ನು ನೀಡಿರುವ ಸಂತ ಗುರು ಹರಳಯ್ಯರವರ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗುವ ಮೂಲಕ ಭವಿಷ್ಯದ ಸಮಾಜ ರೂಪಿಸಿಕೊಳ್ಳಬೇಕೆಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಕರೆ ನೀಡಿದರು. 
    ಅವರು ತಾಲೂಕು ಸಮಗಾರ ಶ್ರೀ ಹರಳಯ್ಯ ಮೋಚಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸಂಘದ ಸುವರ್ಣ ಮಹೋತ್ಸವ ಹಾಗೂ ಸರ್ವಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಗುರು ಹರಳಯ್ಯ ೧೨ನೇ ಶತಮಾನದ ವಚನ ಸಾಹಿತ್ಯದ ಮಹಾನ್ ಸಂತ. ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪದಲ್ಲಿ ನೆಲೆಸಿದ್ದ ಹರಳಯ್ಯ, ಪತ್ನಿ ಕಲ್ಯಾಣಮ್ಮ ದಂಪತಿ ಕಾಯಕದ ಮಹತ್ವ, ನಿಷ್ಠೆ ತಿಳಿಸಿಕೊಡುವ ಜೊತೆಗೆ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸುಧಾರಣೆಗೆ ಮುಂದಾಗಿದ್ದರು. ಇವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದರು. 
    ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಸಂಜೀವ್ ಶಂಕರ್ ನಿಪ್ಪಾಣಿಕರ್, ಸಂಘದ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭವಿಷ್ಯ ರೂಪಿಸುವಂತೆ ಕರೆ ನೀಡಿದರು.
    ನ್ಯಾಯವಾದಿ ವೈ.ಸಿ. ಕಾಂಬಳೆ ಮಾತನಾಡಿ, ಶಿಕ್ಷಣದ ಜೊತೆಗೆ ಸಮಾಜವನ್ನು ಸಂಘಟನೆಯ ಮೂಲಕ ಬಲಪಡಿಸಿದಾಗ ಮಾತ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದರು.
    ಸಂಘದ ಅಧ್ಯಕ್ಷ ಬಿ.ಪಿ ರಾಘವೇಂದ್ರ ಮಾತನಾಡಿ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘದ ಏಳಿಗೆಗೆ ದುಡಿದಾಗ ಮಾತ್ರ ಯಾವುದೇ ಹಿಂದುಳಿದ ಸಮಾಜ ಮುಂದುವರೆಯಲು ಸಾಧ್ಯ ಎಂದರು. 
    ಉದ್ಯಮಿ ಬಿ.ಕೆ ಜಗನ್ನಾಥ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ನಗರಸಭೆ ಸದಸ್ಯ ಬಿ.ಎಂ ಮಂಜುನಾಥ್, ಸಂಘದ ಗೌರವಾಧಕ್ಷ ದೇವರಾವ್, ಉಪಾಧ್ಯಕ್ಷರಾದ ಜಿ.ಗಣೇಶ್ ಮತ್ತು ಬಿ.ಅಶ್ವಥ್, ಪ್ರಧಾನ ಕಾರ್ಯದರ್ಶಿ ದಶರಥ, ಖಜಾಂಚಿ ಎಸ್. ಚಂದ್ರಶೇಖರ್, ಸಹ ಕಾರ್ಯದರ್ಶಿ ಶಿವಾಜಿರಾವ್, ಸಂಘಟನಾ ಕಾರ್ಯದರ್ಶಿ ಗುರುಮೂರ್ತಿ, ಲೋಕೇಶ್ ಸರಾಠೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, March 31, 2025

ನಗರದಲ್ಲಿ ಪವಿತ್ರ ರಂಜಾನ್ ಆಚರಣೆ

ಭದ್ರಾವತಿ ನಗರದಲ್ಲಿ ಮುಸ್ಲಿಂ ಸಮುದಾಯದವರು ಪ್ರೀತಿ, ಶಾಂತಿ, ಸಮಾನತೆ, ಮಾನವೀಯ ಮೌಲ್ಯಗಳ ಸಂಕೇತವಾದ ಪವಿತ್ರ ಈದ್ ಉಲ್ ಫಿತರ್(ರಂಜಾನ್) ಹಬ್ಬ ಸಡಗರ ಸಂಭ್ರಮದಿಂದ ಆಚರಿಸಿದರು. ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
    ಭದ್ರಾವತಿ: ನಗರದಲ್ಲಿ ಮುಸ್ಲಿಂ ಸಮುದಾಯದವರು ಪ್ರೀತಿ, ಶಾಂತಿ, ಸಮಾನತೆ, ಮಾನವೀಯ ಮೌಲ್ಯಗಳ ಸಂಕೇತವಾದ ಪವಿತ್ರ ಈದ್ ಉಲ್ ಫಿತರ್(ರಂಜಾನ್) ಹಬ್ಬ ಸಡಗರ ಸಂಭ್ರಮದಿಂದ ಆಚರಿಸಿದರು. 
    ನಗರದ ಪ್ರಮುಖ ಮಸೀದಿ ಹಾಗು ಈದ್ಗಾ ಮೈದಾನಗಳಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಹಬ್ಬದ ಪ್ರಯುಕ್ತ ಕಳೆದ ೧ ತಿಂಗಳಿನಿಂದ ಉಪಹಾಸ ವ್ರತ ಕೈಗೊಂಡು ಕೊನೆಯ ದಿನವಾದ ಸೋಮವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಗೊಳಿಸಿದರು. 
    ಅಲ್ಲದೆ ಹಬ್ಬದ ನಡುವೆ ಸರ್ವಧರ್ಮಗಳ ನಡುವೆ ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವು ಮುಸ್ಲಿಂ ಸಂಘಟನೆಗಳಿಂದ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಹಬ್ಬದ ಮಹತ್ವ ತಿಳಿಸಿಕೊಡಲಾಯಿತು. 
    ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ತರೀಕೆರೆ ರಸ್ತೆಯ ಸಾದತ್ ದರ್ಗಾ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚುನಾಯಿತ ಪ್ರತಿನಿಧಿಗಳು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯ ಕೋರಿದರು. 

ಸಡಗರ ಸಂಭ್ರಮದ ಯುಗಾದಿ : ಚಂದ್ರ ದರ್ಶನ

ಭದ್ರಾವತಿ : ಹಿಂದೂ ವರ್ಷಾಚರಣೆ ಆರಂಭದ ದಿನ, ವರ್ಷದ ಮೊದಲ ಹಬ್ಬ ಯುಗಾದಿ ಬೇವು-ಬೆಲ್ಲ ಸವಿಯುವ ಮೂಲಕ ನಗರದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಸಂಜೆ ಚಂದ್ರನ ದರ್ಶನ ಮಾಡುವ ಮೂಲಕ ಚಂದ್ರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 
    ಭದ್ರಾವತಿ : ಹಿಂದೂ ವರ್ಷಾಚರಣೆ ಆರಂಭದ ದಿನ, ವರ್ಷದ ಮೊದಲ ಹಬ್ಬ ಯುಗಾದಿ ಬೇವು-ಬೆಲ್ಲ ಸವಿಯುವ ಮೂಲಕ ನಗರದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 
    ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬಕ್ಕೆ ವಿಶೇಷ ಮಹತ್ವವಿದ್ದು, ಮನೆಗಳಲ್ಲಿ ಮುಂಜಾನೆಯೇ ಎದ್ದು ಮಾವು-ಬೇವಿನ ತಳಿರು ತೋರಣಗಳಿಂದ ಅಲಂಕರಿಸಿ ದೇಹಕ್ಕೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವ ಮೂಲಕ ಹೊಸ ಹೊಸ ಉಡುಗೆ ತೊಡುಗೆಗಳೊಂದಿಗೆ ದೇವರಿಗೆ ಪೂಜೆ ಸಲ್ಲಿಸಿ ಬೇವು-ಬೆಲ್ಲ ಸವಿಯುವುದು ವಾಡಿಕೆಯಾಗಿದೆ. 
    ನಂತರ ಹೋಳಿಗೆ, ಪಾಯಸ ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಹಬ್ಬದ ಸಂಭ್ರಮದಲ್ಲಿ ತೊಡಗುತ್ತಾರೆ. ಕುಟುಂಬರಸ್ಥರು, ಬಂದು-ಬಳಗದವರು ಹಬ್ಬಕ್ಕೆ ಬಂದು ಹೋಗುವುದು ವಿಶೇಷವಾಗಿದೆ. 
    ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು. ವಿಶೇಷವಾಗಿ ಯುಗಾದಿ ಹಬ್ಬ ಅದರಲ್ಲೂ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಒಂದಾಗಿದೆ. 
    ಸೋಮವಾರ ಸಂಜೆ ಚಂದ್ರನ ದರ್ಶನ ಮಾಡುವ ಮೂಲಕ ಹಬ್ಬದ ವಿಶೇಷತೆಗಳಲ್ಲಿ ಒಂದಾದ ಚಂದ್ರ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆವಾಗಿದೆ. ಮಂಗಳವಾರ ಸಂಪ್ರದಾಯದಂತೆ ಮಾಂಸ ಆಹಾರ ಸೇವನೆ ಸಹ ಹಬ್ಬದ ಒಂದು ಭಾಗವಾಗಿದ್ದು, ಅಂತಿಮವಾಗಿ ಯುಗಾದಿ ಮುಕ್ತಾಯಗೊಳ್ಳಲಿದೆ. 

ಅಮಲೋದ್ಭವಿ ಮಾತೆ ದೇವಾಲಯದಲ್ಲಿ ಮಹಿಳಾ ದಿನಾಚರಣೆ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ವಿಶೇಷವಾಗಿ ಧರ್ಮಕೇಂದ್ರದ ಪುರುಷರು ಮಹಿಳಾ ದಿನಾಚರಣೆ ಆಯೋಜಿಸುವ ಮೂಲಕ ಗಮನ ಸೆಳೆದರು. ವೈದ್ಯಕೀಯ  ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಹಳೇನಗರದ ನಿರ್ಮಲ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಗ್ಲಾಡಿಸ್ ಪಿಂಟೋ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದಲ್ಲಿ ವಿಶೇಷವಾಗಿ ಧರ್ಮಕೇಂದ್ರದ ಪುರುಷರು ಮಹಿಳಾ ದಿನಾಚರಣೆ ಆಯೋಜಿಸುವ ಮೂಲಕ ಗಮನ ಸೆಳೆದರು. 
    ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವೈದ್ಯಕೀಯ  ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಹಳೇನಗರದ ನಿರ್ಮಲ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಗ್ಲಾಡಿಸ್ ಪಿಂಟೋ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಧರ್ಮ ಕೇಂದ್ರದ ಗುರುಗಳಾದ ಫಾದರ್ ಲಾನ್ಸಿ ಡಿಸೋಜಾ, ಸೈಂಟ್ ಚಾರ್ಲ್ಸ್ ವಿದ್ಯಾಸಂಸ್ಥೆಯ ಸಿಸ್ಟರ್ ಜೆಸಿಂತಾ, ಧರ್ಮ ಕೇಂದ್ರದ ಕಾರ್ಯದರ್ಶಿ ವಿಲ್ಸನ್ ಇತರರು ಉಪಸ್ಥಿತರಿದ್ದರು. 

ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿಗೆ ಸಚಿವ ಸಂಪುಟ ಒಪ್ಪಿಗೆ

ಮನೆ ಬಾಗಿಲಿಗೆ ಬರುವವರಿಗೆ ಸೂಕ್ತ ಮಾಹಿತಿ ನೀಡಿ : ಎಸ್. ಪುಟ್ಟರಾಜು

ಎಸ್. ಪುಟ್ಟರಾಜು
    ಭದ್ರಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದು, ಈ ಹಿನ್ನಲೆಯಲ್ಲಿ ಜಾತಿಗಣತಿಗೆ ಮನೆ ಮನೆಗೆ ಬರುವವರಿಗೆ ಸೂಕ್ತ ದಾಖಲಾತಿಗಳೊಂದಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ತಾಲೂಕಿನ ಶೋಷಿತ ಮಾದಿಗ ಸಮಾಜದ ಮುಖಂಡರು, ಚಿಂತಕರು, ನೌಕರರು, ಕೂಲಿ ಕಾರ್ಮಿಕರು ಮತ್ತು ಸ್ತ್ರೀಶಕ್ತಿ ಸಮುದಾಯದವರು, ವಿದ್ಯಾರ್ಥಿಗಳು ಒಗ್ಗಟ್ಟಾಗಿ ಶೋಷಿತ ಸಮಾಜದ ಹಿತ ದೃಷ್ಟಿಯಿಂದ ಈ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಅಧ್ಯಕ್ಷ ಎಸ್. ಪುಟ್ಟರಾಜು ಕೋರಿದ್ದಾರೆ. 
    ಒಳಮೀಸಲಾತಿಗಾಗಿ ಕಳೆದ ಸುಮಾರು ಮೂರು ದಶಗಳಿಂದ ಹೋರಾಟ ನಡೆಸಿಕೊಂಡು ಬಂದಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯರವರು ಸಂತಸದ ಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿಗೆ ಮುಂದಾಗಿರುವುದು ಉತ್ತಮ ನಿರ್ಧಾರವಾಗಿದೆ. ಹೋರಾಟದ ಫಲ ಒಳಮೀಸಲು ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕಾನೂನು ತೊಡಕು ಆಗದ ರೀತಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದ ಸಿದ್ದರಾಮಯ್ಯ ಸರ್ಕಾರ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್‌ರವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚಿಸಿತು. ಆಯೋಗ ಮಧ್ಯಂತರ ವರದಿ ಸಲ್ಲಿಸಿದ್ದು, ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ನಡೆಸಿ ಎಂಪೋರಿಕಲ್ ದತ್ತಾಂಶ ಪಡೆದು ಜಾರಿಗೊಳಿಸುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನೆ ಸಲ್ಲಿಸುವುದು ಸೇರಿ ಯಾವುದೇ ರೀತಿ ಕಾನೂನು ತೊಡಕು ಎದುರಾಗದು ಎಂಬ ಸಲಹೆ ನೀಡಿದ ಮೇರೆಗೆ ತಕ್ಷಣವೇ ಸರ್ಕಾರ ಸಚಿವ ಸಂಪುಟದಲ್ಲಿ ಜಾತಿಗಣತಿಗೆ ಒಪ್ಪಿಗೆ ನೀಡಿದೆ. ಈ ಮೂಲಕ ನೊಂದ ಜನರ ಪರವಾಗಿ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. 
    ಸರ್ಕಾರ ಜಾತಿಗಣತಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಜೂನ್ ತಿಂಗಳಿನಲ್ಲಿ ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಮಾಜ ಕಲ್ಯಾಣ ಖಾತೆ ಮಾಜಿ ಸಚಿವ ಎಚ್. ಆಂಚನೇಯರವರು ವಿಶೇಷ ಕಾಳಜಿವಹಿಸಿ ಹಗಲಿರುಳು ಒಳಮೀಸಲಾತಿ ಜಾರಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ಜೊತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ, ಸಮುದಾಯದ ಎಲ್ಲಾ ಶಾಸಕರು, ಮಾಜಿ ಶಾಸಕರು, ದಲಿತಪರ ಸಂಘಟನೆಗಳು ಕಳೆದ ಸುಮಾರು ೩೦ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಹೋರಾಟಕ್ಕೆ ಇದೀಗ ಫಲ ಲಭಿಸಿದೆ. ಇದನ್ನು ಸಮುದಾಯದವರು ಸರಿಯಾಗಿ ಅರ್ಥಮಾಡಿಕೊಂಡು. ಜಾತಿಗಣತಿಗೆ ಮನೆ ಬಾಗಿಲಿಗೆ ಬರುವವರಿಗೆ ಆಧಾರ್ ಕಾರ್ಡ್ ಸಂಖ್ಯೆ ಜೊತೆಗೆ ಜೀವನ ಪರಿಸ್ಥಿತಿ, ಶೈಕ್ಷಣಿಕ, ಸಾಮಾಜಿಕ ಹಾಗು ಆರ್ಥಿಕ ಪರಿಸ್ಥಿತಿಯನ್ನು ದಾಖಲಿಸಲು ಸಹಕರಿಸಿ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗುವಂತೆ  ಪುಟ್ಟರಾಜು ಮನವಿ ಮಾಡಿದ್ದಾರೆ.