Tuesday, April 8, 2025

ಉತ್ತಮ ಆರೋಗ್ಯಕ್ಕೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಿ : ಡಾ. ವೀಣಾ ಭಟ್

ಭದ್ರಾವತಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಸಾರ್ವಜನಿಕ ಅರಿವು ಸಮಿತಿಯ ರಾಜ್ಯಾಧ್ಯಕ್ಷೆ ಡಾ. ವೀಣಾ ಭಟ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಸಾರ್ವಜನಿಕ ಅರಿವು ಸಮಿತಿಯ ರಾಜ್ಯಾಧ್ಯಕ್ಷೆ ಡಾ. ವೀಣಾ ಭಟ್ ಹೇಳಿದರು. 
    ಅವರು ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.  
    ಉತ್ತಮ ಆರೋಗ್ಯ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆರೋಗ್ಯವನ್ನು ದಾನವಾಗಿ ಕೊಡಲು ಅಥವಾ ಎರವಲಾಗಿ ಪಡೆಯಲು ಸಾದ್ಯವಿಲ್ಲ. ಅದನ್ನು ಪ್ರತಿಯೊಬ್ಬರೂ ಸ್ವಯಂ ಪ್ರಯತ್ನದಿಂದಲೇ ಸಂಪಾದಿಸಬೇಕು. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕೆಂದರು.  
    ಪ್ರತಿವರ್ಷ ಏ.೭ರಂದು ವಿಶ್ವ ಆರೋಗ್ಯ ದಿನವನ್ನು ಒಂದೊಂದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. `ಆಶಾದಾಯಕ ಭವಿಷ್ಯಕ್ಕಾಗಿ ಆರೋಗ್ಯಕರ ಆರಂಭ' ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ ಎಂದರು. 
    ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯಯುತ ಬೆಳವಣಿಗೆ ಜೊತೆಗೆ ಹೆರಿಗೆಯ ನಂತರವೂ ಮಹಿಳೆಯರ ಸರ್ವತೋಮುಖ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು. ಈ ಮೂಲಕ ಸದೃಡ ಕುಟುಂಬ, ಸದೃಢ ಸಮಾಜ ಮತ್ತು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಬುನಾದಿ ಹಾಕುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದ ಅವರು ತಾಯಿ ಮಕ್ಕಳ ಆರೋಗ್ಯಕ್ಕೆ ವಹಿಸಬೇಕಾದ ಕಾಳಜಿಗಳ ಬಗ್ಗೆ ವಿವರವಾಗಿ ತಿಳಿಸಿದರು.
    ಡಾ. ಕುಮಾರಸ್ವಾಮಿ, ಡಾ. ಆಶಾ, ವಿಂದ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪ ಅಸ್ತಿತ್ವ ಕುರಿತು ಪ್ರಶ್ನೆ : ಜಾಗೃತರಾಗಿರಿ

ಶಿವಮೊಗ್ಗ ಬಸವ ಕೇಂದ್ರ, ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿ

ಭದ್ರಾವತಿಯಲ್ಲಿ ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಸಹಯೋಗದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕನ ಬಳಗದವತಿಯಿಂದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೬೫೯ನೇ ವಚನ ಮಂಟಪ ಮತ್ತು ಸಾವಿತ್ರಮ್ಮ ಎಚ್.ವಿ ಶಿವರುದ್ರಪ್ಪ ಹೆಬ್ಬಂಡಿ ದತ್ತಿ ಕಾರ್ಯಕ್ರಮ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸಮಾರಂಭ ಉದ್ಘಾಟಿಸಿದರು.  
    ಭದ್ರಾವತಿ: ವೇದ ಉಪನಿಷತ್‌ಗಳ ಕಾಲದಲ್ಲೂ ಸಂವಾದ, ಚರ್ಚೆಗಳು ನಡೆಯುತ್ತಿತ್ತು. ಜನರ ಅಹವಾಲುಗಳನ್ನು ಆಲಿಸಲಾಗುತ್ತಿತ್ತು. ಅನುಭವ ಮಂಟಪ ಎಂಬುದು ಇರಲೇ ಇಲ್ಲ ಎಂಬ ವಾದ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಇದರ ಬಗ್ಗೆ ಜನರು ಜಾಗೃತರಾಗಿರಬೇಕೆಂದು ಶಿವಮೊಗ್ಗ ಬಸವ ಕೇಂದ್ರ ಹಾಗು ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿಯವರು ಕರೆ ನೀಡಿದರು. 
    ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಸಹಯೋಗದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕನ ಬಳಗದವತಿಯಿಂದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೬೫೯ನೇ ವಚನ ಮಂಟಪ ಮತ್ತು ಸಾವಿತ್ರಮ್ಮ ಎಚ್.ವಿ ಶಿವರುದ್ರಪ್ಪ ಹೆಬ್ಬಂಡಿ ದತ್ತಿ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 
       ೧೨ನೇ ಶತಮಾನದ ಅನುಭವ ಮಂಟಪದ ಅಸ್ತಿತ್ವ ಕುರಿತು ವಿದ್ವಾಂಸರು, ಸಾಹಿತಿಗಳು, ಇತಿಹಾಸಕಾರರು ಸೂಕ್ತ ಸಾಕ್ಷ್ಯಾಧಾರ ಹಾಗು ಐತಿಹಾಸಿಕ ದಾಖಲೆಗಳು, ಸಂಗತಿಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದು ಏನು ಮಾಡಿತು ಎಂಬುದನ್ನು ಸಹ ತಿಳಿಸಿದ್ದಾರೆ. ಪ್ರಸ್ತುತ ಕೆಲವರು ಇದರ ಅಸ್ತಿತ್ವ ಕುರಿತು ಪ್ರಶ್ನಿಸುವ ಮೂಲಕ ಅತಿಸೂಕ್ಷ್ಮವಾಗಿ, ವ್ಯವಸ್ಥಿತವಾಗಿ ಮರೆಮಾಚುವ ಪಿತೂರಿ ನಡೆಸುತ್ತಿದ್ದಾರೆ ಎಂದರು. 
    ಅಂದು ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಶ್ರೀಸಾಮಾನ್ಯರು, ತಳಸಮುದಾಯದವರು ಹಾಗು ಮಹಿಳೆಯರು ಭಾಗವಹಿಸುತ್ತಿದ್ದರು. ಎಲ್ಲರಿಗೂ ಸೂಕ್ತ ಪ್ರಾತಿನಿಧ್ಯ ನೀಡಲಾಗಿತ್ತು.  ಅನುಭವ ಮಂಟಪ ಕೇವಲ ಕಾಲ್ಪನಿಕ ಹಾಗು ಕಟ್ಟು ಕಥೆಯಲ್ಲ. ಇಲ್ಲಿ ಜನಸಾಮಾನ್ಯರ ಅನುಭವಗಳ ಆಧಾರದ ಮೇಲೆ ಶಿವಶರಣರು ವಚನ ಸಾಹಿತ್ಯವನ್ನು ರಚಿಸಿದ್ದಾರೆ. ಇದನ್ನು ಎಲ್ಲರೂ ಅರಿಯುಬೇಕಿದೆ ಎಂದರು. 
    ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ನಗರದ ನಿವಾಸಿ ಡಾ.ಬಿ.ಜಿ ಧನಂಜಯ ಮಾತನಾಡಿ, ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಅಲ್ಲದೆ ಸಾಮಾಜಿಕ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಶಿವಶರಣರ ತಂಡವನ್ನು ನಿರ್ಮಾಣ ಮಾಡಿದರು. ಬಸವಣ್ಣನವರ ಆದರ್ಶ, ಚಿಂತನೆಗಳು ಇಡೀ ವಿಶ್ವವ್ಯಾಪ್ತಿಯಾದವು. ಅವರು ಕಂಡ ಕನಸನ್ನು ನನಸು ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ಕ್ರಾಂತಿಕಾರಿಯಾದರು ಎಂದರು.
    ಶರಣಾಗತಿಯ ಬದಲಾಗಿ ಸ್ವಾಭಿಮಾನದ ಕಿಚ್ಚನ್ನು ಸಮಾಜಕ್ಕೆ ತಿಳಿಸಿದರು. ದಾನದ ಸಂಸ್ಕೃತಿ ಬದಲಿಗೆ ದಾಸೋಹ, ದೇವಾಲಯ ಸಂಸ್ಕೃತಿಗೆ ಬದಲಾಗಿ ದೇಹವೇ ದೇವಾಲಯ, ಯಜಮಾನ ಸಂಸ್ಕೃತಿ ವಿರುಧ್ಧ ಸಮಾಜವಾದ, ಸಮಾನತೆಯನ್ನು ಪ್ರತಿಪಾದಿಸಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡಿದರು. ಸಂದೇಹಗಳಿಗೆ ಪ್ರಶ್ನೆ ಮಾಡುವ ಅದನ್ನು ತಿರಸ್ಕರಿಸುವ, ನಿರಾಕಾರ ಮಾಡುವ ಧೈರ್ಯದ ಬಗ್ಗೆ ತಿಳಿಸಿದರು. ಸಂಪ್ರದಾಯ ಪದ್ದತಿಗೆ ಪರ್ಯಾಯವಾಗಿ ಪರಂಪರೆಯ ಪ್ರಜ್ಞೆಯನ್ನು ಹುಟ್ಟು ಹಾಕಿದ ಮಹಾನ್ ಪುರುಷ ಬಸವಣ್ಣಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಯಾವುದೇ ಒಂದು ನಿರ್ದಿಷ್ಟ ಜಾತಿ, ಜನಾಂಗಕ್ಕೆ ಸೀಮಿತವಾದ ಸಂಘಟನೆಯಾಗಿಲ್ಲ. ಎಲ್ಲಾ ಜಾತಿ ಜನಾಂಗದವರಿಗೂ ಮುಕ್ತ ಮನಸ್ಸಿನಿಂದ ತೆರೆದ ಸಂಘಟನೆಯಾಗಿದೆ ಎಂದರು.
    ಅಂದು ವೀರಶೈವ ಮಠಗಳು ದೇಶದಲ್ಲಿ ಮಾಡಿರುವ ಕ್ರಾಂತಿ ಹಾಗು ತ್ರಿವಿಧ ದಾಸೋಹ ಬೇರೆ ಯಾವ ಮಠಗಳು ಮಾಡಿಲ್ಲ ಎಂಬುದು ಹೆಮ್ಮೆಯ ಸಂಗತಿ ಎಂದರು.
    ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಪ್ರಮುಖರಾದ ಕೆ. ಮಂಜಪ್ಪ ವೇದಿಯಲ್ಲಿ ಉಪಸ್ಥಿತರಿದ್ದರು.
    ಎಚ್.ಎಸ್ ಹರೀಶ್, ಎಚ್.ಎಸ್ ಧರಣೇಶ್ ಕುಟುಂಬದವರು ಆತಿಥ್ಯವಹಿಸಿದ್ದರು. ಕದಳಿ ವೇದಿಕೆ ಸದಸ್ಯರುಗಳು ವಚನ ಗಾಯನ ನಡೆಸಿಕೊಟ್ಟರು. ನಂದಿನಿ ಮಲ್ಲಿಕಾರ್ಜುನ್ ಸ್ವಾಗತಿಸಿ, ಬಾರಂದೂರು ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್ ಮಹೇಶ್ವರಪ್ಪ ಅತಿಥಿ ಪರಿಚಯ, ಮಲ್ಲಿಕಾಂಬ ವಿರುಪಾಕ್ಷ ಕಾರ್ಯಕ್ರಮ ನಿರೂಪಿಸಿ, ಗಂಗಾ ಕುಬ್ಸದ್ ವಂದಿಸಿದರು. 
 
ಬಸವಾದಿ ಶಿವಶರಣರು ಪ್ರತಿಪಾದಿಸಿದ ವಚನ ಸಾಹಿತ್ಯದ ಮೌಲ್ಯಗಳನ್ನು ಇಂದಿನ ಯುವ ಜನರಿಗೆ ತಿಳಿಸಿಕೊಡದೆ ಹಾಗು ಮೌಲ್ಯಗಳನ್ನು ಪಾಲನೆ ಮಾಡದೆ ಐಪಿಎಲ್ ನಂತಹ ಕ್ರಿಕೆಟ್ ಪಂದ್ಯಾವಳಿಗಳನ್ನು ವಿಕ್ಷೀಸಿ ಅದರ ಮೇಲೆ ಬೆಟ್ಟಿಂಗ್ ಕಟ್ಟುವಂತಹ, ಅದರಿಂದ ಹಣ ಮಾಡುವ ಕಾರ್ಯ ಮಾಡುತ್ತಿರುವುದು ಶೋಚನೀಯ ಸಂಗತಿ. ಇದರಿಂದ ಕುಟುಂಬ ವ್ಯವಸ್ಥೆ ಆರ್ಥಿಕವಾಗಿ ನಾಶವಾಗುತ್ತಿದೆ. ಶ್ರಮ ಸಂಸ್ಕೃತಿ ಇಲ್ಲದೆ ದಿಢೀರ್ ಶ್ರೀಮಂತರಾಗಬೇಕು ಎಂಬ ಮನೋಭಾವನೆ ಸರಿಯಲ್ಲ. 
                                     -ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿ  

Monday, April 7, 2025

ನಾಲೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಐವರು ಮಕ್ಕಳು ಪತ್ತೆ

ಭದ್ರಾವತಿ  ತಾಲೂಕಿನ ಕುಮರಿನಾರಾಯಣಪುರದಲ್ಲಿ ಭಾನುವಾರ ಸಂಜೆ ಏಕಾಏಕಿ ನಾಪತ್ತೆಯಾಗಿದ್ದ ೫ ಮಕ್ಕಳು. 
    ಭದ್ರಾವತಿ : ತಾಲೂಕಿನ ಕುಮರಿನಾರಾಯಣಪುರದ ೫ ಮಕ್ಕಳು ಭಾನುವಾರ ಸಂಜೆ ಏಕಾಏಕಿ ಕಾಣೆಯಾಗಿದ್ದರು. ಇಡೀ ರಾತ್ರಿ ಪೊಲೀಸರು, ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಈ ನಡುವೆ ಸೋಮವಾರ ಬೆಳಿಗ್ಗೆ ಸಮೀಪದ ತಳ್ಳಿಕಟ್ಟೆ ಗ್ರಾಮದ ಅಡಕೆ ತೋಟವೊಂದರಲ್ಲಿ ಕಾಣೆಯಾಗಿದ್ದ ಮಕ್ಕಳು ಪತ್ತೆಯಾಗಿದ್ದಾರೆ. 
    ಗ್ರಾಮದ ಧನಂಜಯ(೧೪), ಲೋಹಿತ್(೧೨), ಲಕ್ಷ್ಮೀಶ್(೧೦), ಚರಣ್‌ರಾಜ್(೯) ಮತ್ತು ಭುವನ್(೮) ಸಂಜೆ ಗ್ರಾಮದ ನಾಲೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ಇದು ಗ್ರಾಮಸ್ಥರಿಗೆ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮಕ್ಕಳು ಮನೆಯಲ್ಲಿ ಬಯ್ಯುತ್ತಾರೆಂಬ ಹೆದರಿಕೆಯಿಂದ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಹಾಗು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. 
    ಮಕ್ಕಳು ನೀರಿನಲ್ಲಿ ಮುಳುಗಿರಬಹುದು ಅಥವಾ ಮಕ್ಕಳನ್ನು ಯಾರಾದರೂ ಅಪಹರಿಸಿರಬಹುದು ಎಂಬ ಭಯ ಕುಟುಂಬಸ್ಥರು ಹಾಗು ಗ್ರಾಮಸ್ಥರಲ್ಲಿ ಉಂಟು ಮಾಡಿತ್ತು. ಈ ನಡುವೆ ಪೊಲೀಸರ ನೆರವಿನೊಂದಿಗೆ ಗ್ರಾಮಸ್ಥರು ಇಡೀ ರೀತಿ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಕಂಡು ಬಂದಿರಲಿಲ್ಲ. ಮಧ್ಯರಾತ್ರಿ ೧.೩೦ರ ಸಮಯದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 
    ಕುಮರಿನಾರಾಯಣಪುರದಿಂದ ಸ್ವಲ್ಪ ದೂರದಲ್ಲಿರುವ ತಳ್ಳಿಕಟ್ಟೆ ಗ್ರಾಮದ ದಿನೇಶ್ ಎಂಬುವರ ಅಡಕೆ ತೋಟದಲ್ಲಿ ಮಕ್ಕಳು ಕಂಡು ಬಂದಿದ್ದಾರೆ. ಬೆಳಿಗ್ಗೆ ನೀರು ಬಿಡಲು ತೋಟಕ್ಕೆ ಬಂದಾಗ ಮಕ್ಕಳು ತೋಟದಲ್ಲಿರುವುದು ಕಂಡು ಬಂದಿದೆ. ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ತಿಳಿದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. 

ಏ.೧೪ರಂದು ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಜಾಗೃತಿ ಕಾರ್ಯಕ್ರಮ

ಭದ್ರಾವತಿಯಲ್ಲಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 
    ಭದ್ರಾವತಿ : ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಲಾ ಇಲಾಖೆಗಳಲ್ಲಿರುವ ಸೌಲಭ್ಯಗಳ ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗು ಮಾನವಹಕ್ಕುಗಳ ಮತ್ತು ಸಂವಿಧಾನ ಹಕ್ಕುಗಳ ಬಗ್ಗೆ ಎಲ್ಲಾ ಇಲಾಖೆಗಳಲ್ಲಿ ಜಾಗೃತಿ ಮೂಡಿಸಲು ಏ.೧೪ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬಿ.ಎಚ್ ರಸ್ತೆ, ರೈಲ್ವೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಜಾಗೃತಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು. 
    ಅವರು ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಪ್ರಗತಿಪರ ಚಿಂತಕ ಡಿ.ಸಿ ಮಾಯಣ್ಣ ಉಪಸ್ಥಿತರಿರುವರು. ಎನ್‌ಆರ್‌ಇಜಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ದಿನಕ್ಕೆ ೫೦೦ ರು. ಸಂಬಳ, ಕುಟುಂಬದಲ್ಲಿ ಇಬ್ಬರಿಗೆ ವರ್ಷಕ್ಕೆ ಪ್ರತಿ ವ್ಯಕ್ತಿಗೆ ೨೦೦ ದಿನ ಕೆಲಸ ನೀಡುವುದು. ಕಟ್ಟಡ ಕಾರ್ಮಿಕರಿಗೆ ನೀಡುವಂತಹ ಹಲವು ಸೌಲಭ್ಯಗಳನ್ನು ಇವರಿಗೂ ವಿಸ್ತರಿಸುವುದು. ೬೦ ವರ್ಷದ ನಿವೃತ್ತಿ ನಂತರ ಪ್ರತಿ ತಿಂಗಳು ಪಿಂಚಣಿ  ನೀಡುವುದು. ಉದ್ಯೋಗ ಖಾತ್ರಿ ಕಾರ್ಮಿಕರ ಮಕ್ಕಳಿಗೆ ಉನ್ನತಮಟ್ಟದ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನದೊಂದಿಗೆ ಭದ್ರತೆ ನೀಡುವುದು ಹಾಗೂ ಗ್ರಾಮಗಳಲ್ಲಿ ಗುಡಿ ಕೈಗಾರಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಬೇಕೆಂದು ಒತ್ತಾಯಿಸುವ ಮನವಿ ಪತ್ರಗಳನ್ನು ಪ್ರತಿ ಗ್ರಾಮಪಂಚಾಯಿತಿ ಪಿಡಿಓರವರ ಮೂಲಕ ಪ್ರಧಾನಮಂತ್ರಿ ಹಾಗು ಮುಖ್ಯಮಂತ್ರಿಗೆ ಮನವಿ ಅರ್ಪಿಸಲಾಗುವುದು ಎಂದರು. 
    ಗ್ರಾಮಪಂಚಾಯಿತಿಯಲ್ಲಿನ ಇ-ಸ್ವತ್ತು, ಖಾತೆ, ಬಗರ್‌ಹುಕುಂ ಜಮೀನು, ಹಲವು ನಿಗಮಗಳ ಸಾಲ-ಸಬ್ಸಿಡಿ ಯೋಜನೆಗಳ ಬಗ್ಗೆ ಕಾನೂನಿನ ಅರಿವಿನ ಕುರಿತು ಹಾಗು ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಕಛೇರಿ, ತಾಲೂಕು ಪಂಚಾಯಿತಿ, ನಗರಸಭೆ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಪಿಡಬ್ಲ್ಯೂ.ಡಿ. ಇಲಾಖೆ, ಪಶು ಇಲಾಖೆ ಸೇರಿದಂತೆ ಸರ್ಕಾರದ ಅನೇಕ ಇಲಾಖೆಗಳಲ್ಲಿ ಇರುವ ಮಾಹಿತಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. 
    ಜಾಗೃತಿ ಕಾರ್ಯಕ್ರಮ ಏ.೧೪ ರಿಂದ ಏ.೩೦ರವರೆಗೆ ವಿಶ್ವಮಾನವ ಬಸವಣ್ಣನವರ ಜನ್ಮದಿನದವರೆಗೂ ನಡೆಯಲಿದೆ. ಮೇ ತಿಂಗಳಲ್ಲಿ ಅಂತಿಮವಾಗಿ ವಿಶ್ವಮಾನವ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಈ ಸಮಾವೇಶದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧುಬಂಗಾರಪ್ಪ ನೆರವೇರಿಸಲಿದ್ದಾರೆ. ಶಾಸಕ ಬಿ.ಕೆ. ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು,  ಸಂಘ-ಸಂಸ್ಥೆಗಳ ಮುಖಂಡರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಐ.ಎಲ್ ಅರುಣ್‌ಕುಮಾರ್, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Sunday, April 6, 2025

ಭದ್ರಾವತಿಯಲ್ಲಿ ದೇವಸ್ಥಾನ, ಸಂಘ-ಸಂಸ್ಥೆಗಳಿಂದ ವಿಜೃಂಭಣೆಯಿಂದ ಜರುಗಿದ ಶ್ರೀರಾಮನವಮಿ

ಭದ್ರಾವತಿ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನ ವನದ ಮುಂಭಾಗದಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀರಾಮನವಮಿ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ನಗರದ ವಿವಿಧ ದೇವಸ್ಥಾನಗಳಲ್ಲಿ ಹಾಗು ಸಂಘ-ಸಂಸ್ಥೆಗಳಿಂದ ಭಾನುವಾರ ಶ್ರೀರಾಮನವಮಿ ವಿಜೃಂಭಣೆ ಆಚರಿಸಲಾಯಿತು. ಎಲ್ಲೆಡೆ ಭಕ್ತರಿಗೆ ಕೋಸಂಬರಿ, ಪಾನಕ ವಿತರಣೆ ನಡೆಯಿತು.  
    ನ್ಯೂಟೌನ್ ಶ್ರೀರಾಮ ದೇವಾಲಯ: 
    ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನ ವನದ ಮುಂಭಾಗದಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀರಾಮನವಮಿ ವಿಜೃಂಭಣೆಯಿಂದ ಜರುಗಿತು. 
    ರಾಮನವಮಿ ಅಂಗವಾಗಿ ಮೂಲ ವಿಗ್ರಹಗಳಿಗೆ ಅಭಿಷೇಕ, ವಿಶೇಷ ಅಲಂಕಾರ, ಉತ್ಸವ ಮೂರ್ತಿಗಳ ಮೆರವಣಿಗೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಭಕ್ತರಿಗೆ ಕೋಸಂಬರಿ ಹಾಗು ಪಾನಕ ವಿತರಿಸಲಾಯಿತು. 


ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಶ್ರೀ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು.
    ಹಳೇನಗರ ಶ್ರೀ ರಾಮೇಶ್ವರ ದೇವಾಲಯ: 
    ಹಳೇನಗರದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಶ್ರೀ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು.
  ಬೆಳಗ್ಗೆ ಪಂಚಾಮೃತ ಅಭಿಷೇಕ, ನಂತರ ಶ್ರೀರಾಮ ದೇವರ ರಾಜಬೀದಿ ಉತ್ಸವ ನಡೆಯಿತು. ಉತ್ಸವ ದೇವಾಲಯಕ್ಕೆ ಹಿಂದಿರುಗಿ ಬಂದ ನಂತರ ಮಹಾ ಮಂಗಳಾರತಿಯೊಂದಿಗೆ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಹಾಗು ಪಾನಕ ಮತ್ತು ಕೋಸಂಬರಿ ವಿತರಣೆ ಮಾಡಲಾಯಿತು. ವಿವಿಧ ಭಜನಾ ಮಂಡಳಿಗಳ ಸದಸ್ಯರು, ದೇವಾಲಯ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 


ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಮಂಗಳವಾದ್ಯಗಳೊಂದಿಗೆ ಸ್ವಾಮಿಯ ಉತ್ಸವ ಮೆರವಣಿಗೆ ನಡೆಸಲಾಯಿತು. 
    ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ: 
    ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಮಂಗಳವಾದ್ಯಗಳೊಂದಿಗೆ ಸ್ವಾಮಿಯ ಉತ್ಸವ ಮೆರವಣಿಗೆ ನಡೆಸಲಾಯಿತು. 
    ಬೆಳಗ್ಗೆ ೭ ಗಂಟೆಗೆ ಪಂಚಾಮೃತ ಅಭಿಷೇಕ, ೮ ಗಂಟೆಗೆ ದೇವರ ರಾಜಬೀದಿ ಉತ್ಸವ ಹಾಗೂ ೧೨ ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು. ಪ್ರಧಾನ ಅರ್ಚಕ ರಂಗನಾಥ ಶರ್ಮಾ, ಸಹಾಯಕ ಅರ್ಚಕ ಶ್ರೀನಿವಾಸನ್ ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿದ್ದರು. 
    ವೇದಘೋಷ ಪಾಠಶಾಲೆ ಶಿಷ್ಯ ವೃಂದವರು, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಜಿ. ರಮಾಕಾಂತ್ ಸೇರಿದಂತೆ ಸ್ಥಳೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಯಜಮಾನ್ ಕೃಷ್ಣ ಸಂಗಡಿಗರು ಉತ್ಸವ ನಡೆಸಿಕೊಟ್ಟರು.


ಭದ್ರಾವತಿ ಬಿಜೆಪಿ ಮಂಡಲ ವತಿಯಿಂದ ಪಕ್ಷದ ೪೬ನೇ ಸಂಸ್ಥಾಪನಾ ದಿನ ಹಾಗು ಶ್ರೀರಾಮನವಮಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವದಲ್ಲಿ ಆಚರಿಸಲಾಯಿತು.  
    ಬಿಜೆಪಿ ೪೬ನೇ ಸಂಸ್ಥಾಪನಾ ದಿನ, ಪವಿತ್ರ ಶ್ರೀರಾಮನವಮಿ ಸಂಭ್ರಮಾಚರಣೆ : 
    ಬಿಜೆಪಿ ಮಂಡಲ ವತಿಯಿಂದ ಪಕ್ಷದ ೪೬ನೇ ಸಂಸ್ಥಾಪನಾ ದಿನ ಹಾಗು ಶ್ರೀರಾಮನವಮಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವದಲ್ಲಿ ಆಚರಿಸಲಾಯಿತು.  ಶ್ರೀರಾಮ ದೇವರಿಗೆ ಪುಷ್ಪಾರ್ಚನೆಯೊಂದಿಗೆ ಪಕ್ಷದ ಧ್ವಜಾರೋಹಣ ನೆರವೇರಿಸಿ ಸಂಸ್ಥಾಪಕರನ್ನು ಸ್ಮರಿಸಲಾಯಿತು.
    ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಮೊಸರಹಳ್ಳಿ ಅಣ್ಣಪ್ಪ, ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ಎಂ. ಮಂಜುನಾಥ್, ಎಚ್. ತೀರ್ಥಯ್ಯ, ಕಾರಾ ನಾಗರಾಜ್,  ಬಿ.ಜಿ ರಾಮಲಿಂಗಯ್ಯ, ಸರಸ್ವತಿ, ಧನುಷ್‌ಬೋಸ್ಲೆ, ರಾಜಶೇಖರ್, ಸತೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 


ಭದ್ರಾವತಿ ತಮಿಳು ಯೂತ್ಸ್ ಅಸೋಸಿಯೇಷನ್ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು. 
    ಬಿಟಿವೈನಿಂದ ಶ್ರೀರಾಮನವಮಿ: 
    ಕಡುಬಡವರು, ನಿರ್ಗತಿಕರಿಗೆ ಬೆಳಗಿನ ಉಚಿತ ಉಪಹಾರ, ಉಚಿತ ಕುಡಿಯುವ ನೀರಿನ ಸೇವೆ ಸೇರಿದಂತೆ ಇನ್ನಿತರ ಸೇವಾಕಾರ್ಯಗಳನ್ನು ಕೈಗೊಂಡು ನಗರದಲ್ಲಿ ಗಮನ ಸೆಳೆದಿರುವ ಭದ್ರಾವತಿ ತಮಿಳು ಯೂತ್ಸ್ ಅಸೋಸಿಯೇಷನ್ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು. 
    ನಗರದ ಕೆಎಸ್‌ಆರ್‌ಟಿಸಿ ಮುಖ್ಯಬಸ್‌ನಿಲ್ದಾಣ ಮುಂಭಾಗ ಕೈಗೊಂಡಿರುವ ಉಚಿತ ಕುಡಿಯುವ ನೀರಿನ ಸೇವೆ ಸ್ಥಳದಲ್ಲಿ ಅಸೋಸಿಯೇಷನ್ ವತಿಯಿಂದ ಶ್ರೀರಾಮ ದೇವರಿಗೆ ಪುಷ್ಪಾರ್ಚನೆ ಸಲ್ಲಿಸಿ ಕೋಸಂಬರಿ ಮತ್ತು ಪಾನಕ ವಿತರಿಸಲಾಯಿತು. 

ಶ್ರೀರಾಮನವಮಿಯಂದು ಗುಡ್ಡದ ಮೇಲೊಂದು ಜಾತ್ರೆ

ಭದ್ರಾವತಿ: ತಾಲೂಕಿನ ಐತಿಹಾಸಿಕ ಧಾರ್ಮಿಕ ಹಾಗು ಪ್ರಾಕೃತಿಕ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗೊಂದಿ  ಶ್ರೀ ಕ್ಷೇತ್ರ ಹೊನ್ನೆಗುಡ್ಡದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀರಾಮನವಮಿಯಂದು ಭಾನುವಾರ ಶ್ರೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ತಾಲೂಕಿನ ಐತಿಹಾಸಿಕ ಧಾರ್ಮಿಕ ಹಾಗು ಪ್ರಾಕೃತಿಕ ಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗೊಂದಿ  ಶ್ರೀ ಕ್ಷೇತ್ರ ಹೊನ್ನೆಗುಡ್ಡದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀರಾಮನವಮಿಯಂದು ಭಾನುವಾರ ಶ್ರೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
    ಶ್ರೀ ಹೊನ್ನೆಗುಡ್ಡ ಲಕ್ಷ್ಮೀರಂಗನಾಥಸ್ವಾಮಿ ಹಾಗು ಶ್ರೀ ಕೂಗು ಮಲ್ಲೇಶ್ವರಸ್ವಾಮಿ ದೇವಾಲಯದ ಅಧಿದೇವತೆಯಾಗಿರುವ ಶ್ರೀ ರಂಗನಾಥಸ್ವಾಮಿಯ ಮಹಾರಥೋತ್ಸವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗು ಶ್ರೀ ಕ್ಷೇತ್ರ ಹೊನ್ನೆಗುಡ್ಡದ ಶ್ರೀ ವಿಠ್ಠಲಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಯಿತು. 
    ದೇವಾಲಯದ ಮೂಲ ವಿಗ್ರಹಗಳಿಗೆ ಅಭಿಷೇಕ, ವಿಶೇಷ ಅಲಂಕಾರ, ಹೋಮ-ಹವನ, ದೇವರುಗಳ ಪಲ್ಲಕ್ಕಿ ಉತ್ಸವ, ನಂತರ ಮಹಾರಥೋತ್ಸವ ಹಾಗೂ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಧಾರ್ಮಿಕರ ಆಚರಣೆ ಜರುಗಿದವು. 
    ಭಕ್ತರಿಗೆ ಶ್ರೀರಾಮನವಮಿ ಅಂಗವಾಗಿ ಕೋಸಂಬರಿ, ಪಾನಕ ವಿತರಣೆ ಹಾಗು ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗೊಂದಿ, ಚಿಕ್ಕಗೊಪ್ಪೇನಹಳ್ಳಿ, ತಾರೀಕಟ್ಟೆ, ಅರಳಿಕೊಪ್ಪ, ಸುಲ್ತಾನ್‌ಮಟ್ಟಿ, ಹೊನ್ನಟ್ಟಿ ಹೊಸೂರು, ಹುಣಸೇಕಟ್ಟೆ, ಶಂಕರಘಟ್ಟ, ಗೋಣಿಬೀಡು, ಸಿಂಗನಮನೆ, ಹಿರಿಯೂರು ಬೊಮ್ಮನಕಟ್ಟೆ, ತಿಮ್ಲಾಪುರ, ಬಾಳೆಮಾರನಹಳ್ಳಿ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಸಹಸ್ರರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ : ಕನ್ನಡದ ತೇರು ತೆಳೆಯುವ ಕಾರ್ಯಕ್ಕೆ ಕೈ ಜೋಡಿಸಿ

ಭವನ ನಿರ್ಮಾಣಕ್ಕೆ ಸಹಕಾರ ನೀಡಲು ಬದ್ಧ : ಶಾಸಕ ಬಿ.ಕೆ ಸಂಗಮೇಶ್ವರ್ 

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨೮ರ ಹೊಸ ಸಿದ್ದಾಪುರ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನಿವೇಶನದಲ್ಲಿ ನೂತನವಾಗಿ ಸುಮಾರು ೩.೮೦ ಕೋ. ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು. ತಾಲೂಕು ಕಸಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ ವೈಯಕ್ತಿಕವಾಗಿ ೫೫ ಸಾವಿರ ರು. ದೇಣಿಗೆ ಚೆಕ್ ಮೂಲಕ ನೀಡಿದರು. 
    ಭದ್ರಾವತಿ: ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಹೆಚ್ಚಿನ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ಸಾಹಿತ್ಯ ಹಾಗು ಕನ್ನಡಾಭಿಮಾನಿಗಳು ಸೇರಿದಂತೆ ಸಮಸ್ತ ನಾಗರಿಕರು ನೀಡಬೇಕು. ಆ ಮೂಲಕ ಕನ್ನಡದ ತೇರು ಎಳೆಯುವ ಈ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು. 
    ಅವರು ಭಾನುವಾರ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨೮ರ ಹೊಸ ಸಿದ್ದಾಪುರ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನಿವೇಶನದಲ್ಲಿ ನೂತನವಾಗಿ ಸುಮಾರು ೩.೮೦ ಕೋ. ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 
    ಸಾಹಿತ್ಯ ಭವನ ಕಾಮಗಾರಿ ಯಶಸ್ವಿಯಾಗಿ ನಡೆಯಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಯಾವುದೇ ಅಡೆತಡೆಗಳಿಗೂ ಅವಕಾಶ ನೀಡಬಾರದು. ಕಾಮಗಾರಿ ಪೂರ್ಣಗೊಳಿಸಿ ಭವನ ಲೋಕಾರ್ಪಣೆಗೊಳಿಸಲು ನಾನು ಸಹ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಿದ್ದೇನೆ. ಒಂದು ವೇಳೆ ಆರ್ಥಿಕ ನೆರವಿನ ಕೊರತೆ ಕಂಡು ಬಂದಲ್ಲಿ ಅದನ್ನು ಸಹ ಸಂಪೂರ್ಣವಾಗಿ ನಾನೇ ವಹಿಸಿಕೊಂಡು ಭರಿಸಲು ಸಿದ್ದವಿದ್ದೇನೆ ಎಂದರು. 
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಒಂದು ನೆಲೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಗೊಳ್ಳುತ್ತಿದ್ದು, ಭವನ ನಿರ್ಮಾಣಕ್ಕೆ ಶಾಸಕರು ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಭೂಮಿ ಪೂಜೆ ನೆರವೇರಿಸಲು ಸಾಧ್ಯವಾಗುತ್ತಿದೆ. ಅವರ ಪ್ರಯತ್ನದಿಂದ ನಗರಸಭೆ ಆಡಳಿತ ಸುಮಾರು ೨೫ ಲಕ್ಷ ರು. ಆರ್ಥಿಕ ನೆರವು ನೀಡುತ್ತಿದ್ದು, ಅಲ್ಲದೆ ಅಧ್ಯಕ್ಷರು ಸೇರಿದಂತೆ ಸದಸ್ಯರು ತಮ್ಮ ಒಂದು ತಿಂಗಳ ವೇತನ ಸಹ ನೀಡುತ್ತಿರುವುದು ಮಾದರಿಯಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಭವನ ನಿರ್ಮಾಣಕ್ಕೆ ಎಲ್ಲರೂ ಸಹ ಹೆಚ್ಚಿನ ನೆರವು ನೀಡಬೇಕೆಂದರು. 
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ, ಉಪಾಧ್ಯಕ್ಷ ಡಾ. ಡಿ. ಪ್ರಭಾಕರ ಬೀರಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಈ ಜಗದೀಶ್, ಎಂ.ಎಸ್ ಸುಧಾಮಣಿ, ಕಾರ್ಯದರ್ಶಿಗಳಾದ ಡಿ. ನಾಗೋಜಿರಾವ್, ಬಿ.ಎಲ್ ಮೋಹನಕುಮಾರ್, ಖಜಾಂಚಿ ಬಿ.ಎಸ್ ಪ್ರಕಾಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಟಿ. ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಮತ್ತು ಜಾನಪದ ಕಲಾವಿದ ದಿವಾಕರ್ ಭೂಮಿ ಪೂಜೆ ಕುರಿತು ಕವನ ವಾಚಿಸಿದರು. ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಉಪಾಧ್ಯಕ್ಷ ಸಿ. ಜಯಪ್ಪ ಹೆಬ್ಬಳಗೆರೆ ವಂದಿಸಿದರು. 
    ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ  ಪ್ರಧಾನ ಕಾರ್ಯದರ್ಶಿ ಎಂ.ಎಸ್ ಸುಧಾಮಣಿ, ಕಸಾಪ ನಿಕಟಪೂರ್ವ ಕೋಶಾಧ್ಯಕ್ಷ ಜಿ.ಎಸ್ ಸತ್ಯಮೂರ್ತಿ, ಮೋಹನ್, ಸೂಡಾ ಸದಸ್ಯ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ವೈಯಕ್ತಿಕವಾಗಿ ದೇಣಿಗೆ ನೀಡಿದರು. 
    ಕಸಾಪ ನಿಕಟಪೂರ್ವ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಸುರೇಶ್‌ನಾಯರ್, ಎಸ್. ಉಮಾ, ಮಾಯಮ್ಮ, ಭಾಗ್ಯಮ್ಮ, ಆರ್. ಶೋಭಾ, ಕುಸುಮ, ಉಷಾ, ಮಲ್ಲಿಕಾಂಬ ಹಾಗು ಕಸಾಪ, ಕಜಾಪ, ಕಸಾಸಾಂವೇ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.