Wednesday, April 9, 2025

ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಯುಜಿಡಿ ಕಾಮಗಾರಿ ನಿರ್ಲಕ್ಷ್ಯ ; ಅಧಿಕಾರಿಗಳ ವಿರುದ್ಧ ಆಕ್ರೋಶ

ನಗರಸಭೆ ಸಾಮಾನ್ಯಸಭೆಯಲ್ಲಿ ಆಡಳಿತ ರೂಢ ಪಕ್ಷದ ಸದಸ್ಯರಿಂದಲೇ ಪ್ರತಿಭಟನೆ 

ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಯುಜಿಡಿ ಕಾಮಗಾರಿ ನಿರ್ಲಕ್ಷ್ಯದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬುಧವಾರ ಭದ್ರಾವತಿ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ರೂಢ ಪಕ್ಷದ ಸದಸ್ಯರೇ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅದರಲ್ಲೂ ಸದಸ್ಯೆ ಲತಾ ಚಂದ್ರಶೇಖರ್ ಬಳೆ ತೋರಿಸಿ ಆಕ್ರೋಶ ಹೊರ ಹಾಕಿದರು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಅಲ್ಲದೆ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆಂದು ಆಡಳಿತ ರೂಢ ಪಕ್ಷದ ಸದಸ್ಯರೇ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿ ಆಡಳಿತ ರೂಢ ಪಕ್ಷದ ವಾರ್ಡ್ ನಂ.೬ರ ಸದಸ್ಯ ಆರ್. ಶ್ರೇಯಸ್ ವಾರ್ಡ್ ನಂ.೩ರ ಸದಸ್ಯ ಜಾರ್ಜ್ ಮತ್ತು ವಾರ್ಡ್ ನಂ.೩೩ರ ಪಕ್ಷೇತರ ಸದಸ್ಯ ಆರ್. ಮೋಹನ್ ಕುಮಾರ್ ಸಭೆಯ ಬಾವಿಗಿಳಿದು ಪ್ರತಿಭಟಿಸುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. 
    ಅಭಿಯಂತರರಾದ ಶಿವಪ್ರಸಾದ್ ಹಾಗು ಪ್ರಸಾದ್ ಮತ್ತು ಸಂತೋಷ್ ಪಾಟೀಲ್ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಕುರಿತು ಮಾಹಿತಿ ನೀಡಿದರೂ ಸಹ ಯಾರು ಗಮನ ಹರಿಸುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. 
    ಈ ನಡುವೆ ಅಧಿಕಾರಿಗಳು ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಸಹ ಸಾಧ್ಯವಾಗಲಿಲ್ಲ. ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಚನ್ನಪ್ಪ, ವಿ. ಕದಿರೇಶ್, ಟಿಪ್ಪುಸುಲ್ತಾನ್, ಕೆ. ಸುದೀಪ್ ಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಸುಮಾರು ಅರ್ಧ ತಾಸು ಅಧಿಕಾರಿಗಳ ವರ್ತನೆ ಹಾಗು ವಾರ್ಡ್‌ಗಳಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಈ ನಡುವೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ೧ ವಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. 
    ಈ ನಡುವೆ ವಿದ್ಯುತ್ ಸಮಸ್ಯೆಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಮೆಸ್ಕಾಂ ಅಧಿಕಾರಿಗಳಿಂದ ವಿದ್ಯುತ್ ಸಮಸ್ಯೆ ಕುರಿತು ಮಾಹಿತಿ ಪಡೆಯಲಾಯಿತು.  
    ಕುಡಿಯುವ ನೀರಿನ ಸಮಸ್ಯೆ ಜೊತೆಗೆ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಅಧಿಕಾರಿಗಳು ಹಾಗು ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯತನವಹಿಸಿದ್ದಾರೆ. ಅವರಿಗೆ ಕಾಮಗಾರಿ ನಡೆಸಲು ಸಾಧ್ಯವಾಗದಿದ್ದರೆ ಕೈಗಳಿಗೆ ಬಳೆ ಧರಿಸಿಕೊಂಡು ಇರಲಿ ಎಂದು ವಾರ್ಡ್ ನಂ. ೩೪ರ ಸದಸ್ಯೆ ಲತಾ ಚಂದ್ರಶೇಖರ್ ಬಳೆ ಪ್ರದರ್ಶಿಸುವ ಮೂಲಕ ಆಕ್ರೋಶ ಹೊರ ಹಾಕಿದರು. ಸುಮಾರು ೬ ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ವಾರ್ಡ್‌ಗಳ ನಿವಾಸಿಗಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಕಾಮಗಾರಿ ತಕ್ಷಣ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗು ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಮಾಡಿದರೂ ಸಹ ಏನೂ ಪ್ರಯೋಜನವಾಗಿಲ್ಲ ಎಂದು  ಅಳಲು ತೋರ್ಪಡಿಸಿಕೊಂಡರು. 
    ಗುತ್ತಿಗೆದಾರ ಸತೀಶ್ ಪರವಾಗಿ ಜಿಪಿಎ ಹೋಲ್ಡರ್ ಪಡೆದಿರುವ ಅಭಿಲಾಷ್ ಸಭೆಗೆ ಹಣದ ಸಮಸ್ಯೆ ಎದುರಾಗಿರುವ ಕುರಿತು ಮಾಹಿತಿ ನೀಡಿದರು. ಈಗಾಗಲೇ ನಡೆಸಿರುವ ಕಾಮಗಾರಿಗೆ ಇನ್ನೂ ಹಣ ಬಂದಿಲ್ಲ. ಈ ಹಿನ್ನಲೆಯಲ್ಲಿ ವಿಳಂಬವಾಗಿದೆ. ಆದರೂ ಸಹ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಈ ನಡುವೆ ಸದಸ್ಯ ಚನ್ನಪ್ಪ ಮಾತನಾಡಿ, ಕಾಮಗಾರಿ ಮುಕ್ತಾಯಗೊಳಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಈಗಾಗಲೇ ಮುಂಗಡ ಹಣ ಸಹ ಪಾವತಿಸಲಾಗಿದೆ. ಆದರೂ ಸಹ ಕಾಮಗಾರಿ ಪೂರ್ಣಗೊಳಿಸದಿರುವುದು ಸರಿಯಲ್ಲ ಎಂದರು. 
    ಈ ನಡುವೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, ಚರಂಡಿ, ರಸ್ತೆ ಸೇರಿದಂತೆ ಯುಜಿಡಿ ಕಾಮಗಾರಿಗಳನ್ನು ಮುಂದಿನ ೧೫ ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು. 
    ಸದಸ್ಯರಾದ ಟಿಪ್ಪು ಸುಲ್ತಾನ್, ಬಿ.ಟಿ ನಾಗರಾಜ್ ಸೇರಿದಂತೆ ಇನ್ನಿತರರು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳನ್ನು ಕಬಳಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. 
    ಸಭೆ ಆರಂಭವಾಗಿ ೨ ತಾಸು ಕಳೆದರೂ ಸಹ ಅಜೆಂಡಾದಲ್ಲಿನ ಪ್ರಸ್ತಾವನೆಗಳ ಕುರಿತು ಚರ್ಚೆ ನಡೆಯಲಿಲ್ಲ. ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಉಪಸ್ಥಿತರಿದ್ದರು. 
 

Tuesday, April 8, 2025

ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜಿಗೆ ಶೇ.೬೯ ಫಲಿತಾಂಶ


ಭದ್ರಾವತಿ ಹಳೇನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜು. 
    ಭದ್ರಾವತಿ: ಹಳೆನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಪದವಿ ಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೬೯ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಕಾಲೇಜಿನ ೫ ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ(ಡಿಸ್ಟಿಂಕ್ಷನ್)ಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. .
    ವಿಜ್ಞಾನ ವಿಭಾಗದ ತಹೀರಾ ಅಂಜುಮ್-೫೩೦ ಮತ್ತು ಮಾಯಾವತಿ-೫೨೨, ವಾಣಿಜ್ಯ ವಿಭಾಗದ ಡಿ. ಶೀಫಾ-೫೨೩ ಮತ್ತು ಎಂ. ಗಗನಶ್ರೀ-೫೨೧ ಹಾಗು ಕಲಾ ವಿಭಾಗದ ಪ್ರಿಯಾಂಕ-೫೧೦ ಅತಿಹೆಚ್ಚು ಅಂಕ ವಿದ್ಯಾರ್ಥಿನಿಯರಾಗಿದ್ದಾರೆ. 
    ಈ ಬಾರಿ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ೨೫೦ ವಿದ್ಯಾರ್ಥಿನಿಯರ ಪೈಕಿ ೧೦೪ ವಿದ್ಯಾರ್ಥಿನಿಯರು ಪ್ರಥಮ ಹಾಗೂ ೬೦ ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಕಾಲೇಜಿಗೆ ಶೇ. ೬೯ ಫಲಿತಾಂಶ ಲಭಿಸಿದೆ. 
    ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರು, ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. 

ಏ.೯ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ: ಮೆಸ್ಕಾಂ ಘಟಕ-೧, ೨, ೩ ಮತ್ತು ೪ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೯ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೫.೩೦ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ರಬ್ಬರ್ ಕಾಡು, ಬಾಳೇಮಾರನಹಳ್ಳಿ, ಸುಲ್ತಾನ್‌ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ, ಕಾಳನಕಟ್ಟೆ, ಕಂಬದಾಳ್‌ಹೊಸೂರು, ಹೊನ್ನಟ್ಟಿಹೊಸೂರು, ಹೊನ್ನಟ್ಟಿಹೊಸೂರು ಕ್ಯಾಂಪ್, ಸಿದ್ದರಹಳ್ಳಿ, ತಮ್ಮಡಿಹಳ್ಳಿ, ಕಲ್ಪನಹಳ್ಳಿ, ಹೊಸಳ್ಳಿ, ಕುಮರಿನಾರಾಯಣಪುರ, ಬಾರಂದೂರು, ಹಳ್ಳಿಕೆರೆ, ಬೊಮ್ಮೇನಹಳ್ಳಿ, ಕೆಂಪೇಗೌಡನಗರ, ಕಾರೇಹಳ್ಳಿ, ಕಾಳಿಂಗನಹಳ್ಳಿ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ. 

ಉತ್ತಮ ಆರೋಗ್ಯಕ್ಕೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಿ : ಡಾ. ವೀಣಾ ಭಟ್

ಭದ್ರಾವತಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಸಾರ್ವಜನಿಕ ಅರಿವು ಸಮಿತಿಯ ರಾಜ್ಯಾಧ್ಯಕ್ಷೆ ಡಾ. ವೀಣಾ ಭಟ್ ಪಾಲ್ಗೊಂಡು ಮಾತನಾಡಿದರು. 
    ಭದ್ರಾವತಿ: ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕೆ ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗದ ಅಧ್ಯಕ್ಷೆ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಸಾರ್ವಜನಿಕ ಅರಿವು ಸಮಿತಿಯ ರಾಜ್ಯಾಧ್ಯಕ್ಷೆ ಡಾ. ವೀಣಾ ಭಟ್ ಹೇಳಿದರು. 
    ಅವರು ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಮಹಿಳಾ ವಿಭಾಗ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.  
    ಉತ್ತಮ ಆರೋಗ್ಯ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆರೋಗ್ಯವನ್ನು ದಾನವಾಗಿ ಕೊಡಲು ಅಥವಾ ಎರವಲಾಗಿ ಪಡೆಯಲು ಸಾದ್ಯವಿಲ್ಲ. ಅದನ್ನು ಪ್ರತಿಯೊಬ್ಬರೂ ಸ್ವಯಂ ಪ್ರಯತ್ನದಿಂದಲೇ ಸಂಪಾದಿಸಬೇಕು. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕೆಂದರು.  
    ಪ್ರತಿವರ್ಷ ಏ.೭ರಂದು ವಿಶ್ವ ಆರೋಗ್ಯ ದಿನವನ್ನು ಒಂದೊಂದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. `ಆಶಾದಾಯಕ ಭವಿಷ್ಯಕ್ಕಾಗಿ ಆರೋಗ್ಯಕರ ಆರಂಭ' ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ ಎಂದರು. 
    ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯಯುತ ಬೆಳವಣಿಗೆ ಜೊತೆಗೆ ಹೆರಿಗೆಯ ನಂತರವೂ ಮಹಿಳೆಯರ ಸರ್ವತೋಮುಖ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು. ಈ ಮೂಲಕ ಸದೃಡ ಕುಟುಂಬ, ಸದೃಢ ಸಮಾಜ ಮತ್ತು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಬುನಾದಿ ಹಾಕುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದ ಅವರು ತಾಯಿ ಮಕ್ಕಳ ಆರೋಗ್ಯಕ್ಕೆ ವಹಿಸಬೇಕಾದ ಕಾಳಜಿಗಳ ಬಗ್ಗೆ ವಿವರವಾಗಿ ತಿಳಿಸಿದರು.
    ಡಾ. ಕುಮಾರಸ್ವಾಮಿ, ಡಾ. ಆಶಾ, ವಿಂದ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪ ಅಸ್ತಿತ್ವ ಕುರಿತು ಪ್ರಶ್ನೆ : ಜಾಗೃತರಾಗಿರಿ

ಶಿವಮೊಗ್ಗ ಬಸವ ಕೇಂದ್ರ, ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿ

ಭದ್ರಾವತಿಯಲ್ಲಿ ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಸಹಯೋಗದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕನ ಬಳಗದವತಿಯಿಂದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೬೫೯ನೇ ವಚನ ಮಂಟಪ ಮತ್ತು ಸಾವಿತ್ರಮ್ಮ ಎಚ್.ವಿ ಶಿವರುದ್ರಪ್ಪ ಹೆಬ್ಬಂಡಿ ದತ್ತಿ ಕಾರ್ಯಕ್ರಮ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸಮಾರಂಭ ಉದ್ಘಾಟಿಸಿದರು.  
    ಭದ್ರಾವತಿ: ವೇದ ಉಪನಿಷತ್‌ಗಳ ಕಾಲದಲ್ಲೂ ಸಂವಾದ, ಚರ್ಚೆಗಳು ನಡೆಯುತ್ತಿತ್ತು. ಜನರ ಅಹವಾಲುಗಳನ್ನು ಆಲಿಸಲಾಗುತ್ತಿತ್ತು. ಅನುಭವ ಮಂಟಪ ಎಂಬುದು ಇರಲೇ ಇಲ್ಲ ಎಂಬ ವಾದ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಇದರ ಬಗ್ಗೆ ಜನರು ಜಾಗೃತರಾಗಿರಬೇಕೆಂದು ಶಿವಮೊಗ್ಗ ಬಸವ ಕೇಂದ್ರ ಹಾಗು ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿಯವರು ಕರೆ ನೀಡಿದರು. 
    ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಸಹಯೋಗದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕನ ಬಳಗದವತಿಯಿಂದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೬೫೯ನೇ ವಚನ ಮಂಟಪ ಮತ್ತು ಸಾವಿತ್ರಮ್ಮ ಎಚ್.ವಿ ಶಿವರುದ್ರಪ್ಪ ಹೆಬ್ಬಂಡಿ ದತ್ತಿ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 
       ೧೨ನೇ ಶತಮಾನದ ಅನುಭವ ಮಂಟಪದ ಅಸ್ತಿತ್ವ ಕುರಿತು ವಿದ್ವಾಂಸರು, ಸಾಹಿತಿಗಳು, ಇತಿಹಾಸಕಾರರು ಸೂಕ್ತ ಸಾಕ್ಷ್ಯಾಧಾರ ಹಾಗು ಐತಿಹಾಸಿಕ ದಾಖಲೆಗಳು, ಸಂಗತಿಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದು ಏನು ಮಾಡಿತು ಎಂಬುದನ್ನು ಸಹ ತಿಳಿಸಿದ್ದಾರೆ. ಪ್ರಸ್ತುತ ಕೆಲವರು ಇದರ ಅಸ್ತಿತ್ವ ಕುರಿತು ಪ್ರಶ್ನಿಸುವ ಮೂಲಕ ಅತಿಸೂಕ್ಷ್ಮವಾಗಿ, ವ್ಯವಸ್ಥಿತವಾಗಿ ಮರೆಮಾಚುವ ಪಿತೂರಿ ನಡೆಸುತ್ತಿದ್ದಾರೆ ಎಂದರು. 
    ಅಂದು ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಶ್ರೀಸಾಮಾನ್ಯರು, ತಳಸಮುದಾಯದವರು ಹಾಗು ಮಹಿಳೆಯರು ಭಾಗವಹಿಸುತ್ತಿದ್ದರು. ಎಲ್ಲರಿಗೂ ಸೂಕ್ತ ಪ್ರಾತಿನಿಧ್ಯ ನೀಡಲಾಗಿತ್ತು.  ಅನುಭವ ಮಂಟಪ ಕೇವಲ ಕಾಲ್ಪನಿಕ ಹಾಗು ಕಟ್ಟು ಕಥೆಯಲ್ಲ. ಇಲ್ಲಿ ಜನಸಾಮಾನ್ಯರ ಅನುಭವಗಳ ಆಧಾರದ ಮೇಲೆ ಶಿವಶರಣರು ವಚನ ಸಾಹಿತ್ಯವನ್ನು ರಚಿಸಿದ್ದಾರೆ. ಇದನ್ನು ಎಲ್ಲರೂ ಅರಿಯುಬೇಕಿದೆ ಎಂದರು. 
    ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ನಗರದ ನಿವಾಸಿ ಡಾ.ಬಿ.ಜಿ ಧನಂಜಯ ಮಾತನಾಡಿ, ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಅಲ್ಲದೆ ಸಾಮಾಜಿಕ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಶಿವಶರಣರ ತಂಡವನ್ನು ನಿರ್ಮಾಣ ಮಾಡಿದರು. ಬಸವಣ್ಣನವರ ಆದರ್ಶ, ಚಿಂತನೆಗಳು ಇಡೀ ವಿಶ್ವವ್ಯಾಪ್ತಿಯಾದವು. ಅವರು ಕಂಡ ಕನಸನ್ನು ನನಸು ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ಕ್ರಾಂತಿಕಾರಿಯಾದರು ಎಂದರು.
    ಶರಣಾಗತಿಯ ಬದಲಾಗಿ ಸ್ವಾಭಿಮಾನದ ಕಿಚ್ಚನ್ನು ಸಮಾಜಕ್ಕೆ ತಿಳಿಸಿದರು. ದಾನದ ಸಂಸ್ಕೃತಿ ಬದಲಿಗೆ ದಾಸೋಹ, ದೇವಾಲಯ ಸಂಸ್ಕೃತಿಗೆ ಬದಲಾಗಿ ದೇಹವೇ ದೇವಾಲಯ, ಯಜಮಾನ ಸಂಸ್ಕೃತಿ ವಿರುಧ್ಧ ಸಮಾಜವಾದ, ಸಮಾನತೆಯನ್ನು ಪ್ರತಿಪಾದಿಸಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡಿದರು. ಸಂದೇಹಗಳಿಗೆ ಪ್ರಶ್ನೆ ಮಾಡುವ ಅದನ್ನು ತಿರಸ್ಕರಿಸುವ, ನಿರಾಕಾರ ಮಾಡುವ ಧೈರ್ಯದ ಬಗ್ಗೆ ತಿಳಿಸಿದರು. ಸಂಪ್ರದಾಯ ಪದ್ದತಿಗೆ ಪರ್ಯಾಯವಾಗಿ ಪರಂಪರೆಯ ಪ್ರಜ್ಞೆಯನ್ನು ಹುಟ್ಟು ಹಾಕಿದ ಮಹಾನ್ ಪುರುಷ ಬಸವಣ್ಣಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಯಾವುದೇ ಒಂದು ನಿರ್ದಿಷ್ಟ ಜಾತಿ, ಜನಾಂಗಕ್ಕೆ ಸೀಮಿತವಾದ ಸಂಘಟನೆಯಾಗಿಲ್ಲ. ಎಲ್ಲಾ ಜಾತಿ ಜನಾಂಗದವರಿಗೂ ಮುಕ್ತ ಮನಸ್ಸಿನಿಂದ ತೆರೆದ ಸಂಘಟನೆಯಾಗಿದೆ ಎಂದರು.
    ಅಂದು ವೀರಶೈವ ಮಠಗಳು ದೇಶದಲ್ಲಿ ಮಾಡಿರುವ ಕ್ರಾಂತಿ ಹಾಗು ತ್ರಿವಿಧ ದಾಸೋಹ ಬೇರೆ ಯಾವ ಮಠಗಳು ಮಾಡಿಲ್ಲ ಎಂಬುದು ಹೆಮ್ಮೆಯ ಸಂಗತಿ ಎಂದರು.
    ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಪ್ರಮುಖರಾದ ಕೆ. ಮಂಜಪ್ಪ ವೇದಿಯಲ್ಲಿ ಉಪಸ್ಥಿತರಿದ್ದರು.
    ಎಚ್.ಎಸ್ ಹರೀಶ್, ಎಚ್.ಎಸ್ ಧರಣೇಶ್ ಕುಟುಂಬದವರು ಆತಿಥ್ಯವಹಿಸಿದ್ದರು. ಕದಳಿ ವೇದಿಕೆ ಸದಸ್ಯರುಗಳು ವಚನ ಗಾಯನ ನಡೆಸಿಕೊಟ್ಟರು. ನಂದಿನಿ ಮಲ್ಲಿಕಾರ್ಜುನ್ ಸ್ವಾಗತಿಸಿ, ಬಾರಂದೂರು ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್ ಮಹೇಶ್ವರಪ್ಪ ಅತಿಥಿ ಪರಿಚಯ, ಮಲ್ಲಿಕಾಂಬ ವಿರುಪಾಕ್ಷ ಕಾರ್ಯಕ್ರಮ ನಿರೂಪಿಸಿ, ಗಂಗಾ ಕುಬ್ಸದ್ ವಂದಿಸಿದರು. 
 
ಬಸವಾದಿ ಶಿವಶರಣರು ಪ್ರತಿಪಾದಿಸಿದ ವಚನ ಸಾಹಿತ್ಯದ ಮೌಲ್ಯಗಳನ್ನು ಇಂದಿನ ಯುವ ಜನರಿಗೆ ತಿಳಿಸಿಕೊಡದೆ ಹಾಗು ಮೌಲ್ಯಗಳನ್ನು ಪಾಲನೆ ಮಾಡದೆ ಐಪಿಎಲ್ ನಂತಹ ಕ್ರಿಕೆಟ್ ಪಂದ್ಯಾವಳಿಗಳನ್ನು ವಿಕ್ಷೀಸಿ ಅದರ ಮೇಲೆ ಬೆಟ್ಟಿಂಗ್ ಕಟ್ಟುವಂತಹ, ಅದರಿಂದ ಹಣ ಮಾಡುವ ಕಾರ್ಯ ಮಾಡುತ್ತಿರುವುದು ಶೋಚನೀಯ ಸಂಗತಿ. ಇದರಿಂದ ಕುಟುಂಬ ವ್ಯವಸ್ಥೆ ಆರ್ಥಿಕವಾಗಿ ನಾಶವಾಗುತ್ತಿದೆ. ಶ್ರಮ ಸಂಸ್ಕೃತಿ ಇಲ್ಲದೆ ದಿಢೀರ್ ಶ್ರೀಮಂತರಾಗಬೇಕು ಎಂಬ ಮನೋಭಾವನೆ ಸರಿಯಲ್ಲ. 
                                     -ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿ  

Monday, April 7, 2025

ನಾಲೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಐವರು ಮಕ್ಕಳು ಪತ್ತೆ

ಭದ್ರಾವತಿ  ತಾಲೂಕಿನ ಕುಮರಿನಾರಾಯಣಪುರದಲ್ಲಿ ಭಾನುವಾರ ಸಂಜೆ ಏಕಾಏಕಿ ನಾಪತ್ತೆಯಾಗಿದ್ದ ೫ ಮಕ್ಕಳು. 
    ಭದ್ರಾವತಿ : ತಾಲೂಕಿನ ಕುಮರಿನಾರಾಯಣಪುರದ ೫ ಮಕ್ಕಳು ಭಾನುವಾರ ಸಂಜೆ ಏಕಾಏಕಿ ಕಾಣೆಯಾಗಿದ್ದರು. ಇಡೀ ರಾತ್ರಿ ಪೊಲೀಸರು, ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಈ ನಡುವೆ ಸೋಮವಾರ ಬೆಳಿಗ್ಗೆ ಸಮೀಪದ ತಳ್ಳಿಕಟ್ಟೆ ಗ್ರಾಮದ ಅಡಕೆ ತೋಟವೊಂದರಲ್ಲಿ ಕಾಣೆಯಾಗಿದ್ದ ಮಕ್ಕಳು ಪತ್ತೆಯಾಗಿದ್ದಾರೆ. 
    ಗ್ರಾಮದ ಧನಂಜಯ(೧೪), ಲೋಹಿತ್(೧೨), ಲಕ್ಷ್ಮೀಶ್(೧೦), ಚರಣ್‌ರಾಜ್(೯) ಮತ್ತು ಭುವನ್(೮) ಸಂಜೆ ಗ್ರಾಮದ ನಾಲೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ಇದು ಗ್ರಾಮಸ್ಥರಿಗೆ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮಕ್ಕಳು ಮನೆಯಲ್ಲಿ ಬಯ್ಯುತ್ತಾರೆಂಬ ಹೆದರಿಕೆಯಿಂದ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಹಾಗು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. 
    ಮಕ್ಕಳು ನೀರಿನಲ್ಲಿ ಮುಳುಗಿರಬಹುದು ಅಥವಾ ಮಕ್ಕಳನ್ನು ಯಾರಾದರೂ ಅಪಹರಿಸಿರಬಹುದು ಎಂಬ ಭಯ ಕುಟುಂಬಸ್ಥರು ಹಾಗು ಗ್ರಾಮಸ್ಥರಲ್ಲಿ ಉಂಟು ಮಾಡಿತ್ತು. ಈ ನಡುವೆ ಪೊಲೀಸರ ನೆರವಿನೊಂದಿಗೆ ಗ್ರಾಮಸ್ಥರು ಇಡೀ ರೀತಿ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸುಳಿವು ಕಂಡು ಬಂದಿರಲಿಲ್ಲ. ಮಧ್ಯರಾತ್ರಿ ೧.೩೦ರ ಸಮಯದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 
    ಕುಮರಿನಾರಾಯಣಪುರದಿಂದ ಸ್ವಲ್ಪ ದೂರದಲ್ಲಿರುವ ತಳ್ಳಿಕಟ್ಟೆ ಗ್ರಾಮದ ದಿನೇಶ್ ಎಂಬುವರ ಅಡಕೆ ತೋಟದಲ್ಲಿ ಮಕ್ಕಳು ಕಂಡು ಬಂದಿದ್ದಾರೆ. ಬೆಳಿಗ್ಗೆ ನೀರು ಬಿಡಲು ತೋಟಕ್ಕೆ ಬಂದಾಗ ಮಕ್ಕಳು ತೋಟದಲ್ಲಿರುವುದು ಕಂಡು ಬಂದಿದೆ. ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ತಿಳಿದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. 

ಏ.೧೪ರಂದು ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಜಾಗೃತಿ ಕಾರ್ಯಕ್ರಮ

ಭದ್ರಾವತಿಯಲ್ಲಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 
    ಭದ್ರಾವತಿ : ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಲ್ಲಾ ಇಲಾಖೆಗಳಲ್ಲಿರುವ ಸೌಲಭ್ಯಗಳ ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗು ಮಾನವಹಕ್ಕುಗಳ ಮತ್ತು ಸಂವಿಧಾನ ಹಕ್ಕುಗಳ ಬಗ್ಗೆ ಎಲ್ಲಾ ಇಲಾಖೆಗಳಲ್ಲಿ ಜಾಗೃತಿ ಮೂಡಿಸಲು ಏ.೧೪ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬಿ.ಎಚ್ ರಸ್ತೆ, ರೈಲ್ವೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಜಾಗೃತಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು. 
    ಅವರು ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಪ್ರಗತಿಪರ ಚಿಂತಕ ಡಿ.ಸಿ ಮಾಯಣ್ಣ ಉಪಸ್ಥಿತರಿರುವರು. ಎನ್‌ಆರ್‌ಇಜಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ದಿನಕ್ಕೆ ೫೦೦ ರು. ಸಂಬಳ, ಕುಟುಂಬದಲ್ಲಿ ಇಬ್ಬರಿಗೆ ವರ್ಷಕ್ಕೆ ಪ್ರತಿ ವ್ಯಕ್ತಿಗೆ ೨೦೦ ದಿನ ಕೆಲಸ ನೀಡುವುದು. ಕಟ್ಟಡ ಕಾರ್ಮಿಕರಿಗೆ ನೀಡುವಂತಹ ಹಲವು ಸೌಲಭ್ಯಗಳನ್ನು ಇವರಿಗೂ ವಿಸ್ತರಿಸುವುದು. ೬೦ ವರ್ಷದ ನಿವೃತ್ತಿ ನಂತರ ಪ್ರತಿ ತಿಂಗಳು ಪಿಂಚಣಿ  ನೀಡುವುದು. ಉದ್ಯೋಗ ಖಾತ್ರಿ ಕಾರ್ಮಿಕರ ಮಕ್ಕಳಿಗೆ ಉನ್ನತಮಟ್ಟದ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನದೊಂದಿಗೆ ಭದ್ರತೆ ನೀಡುವುದು ಹಾಗೂ ಗ್ರಾಮಗಳಲ್ಲಿ ಗುಡಿ ಕೈಗಾರಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಬೇಕೆಂದು ಒತ್ತಾಯಿಸುವ ಮನವಿ ಪತ್ರಗಳನ್ನು ಪ್ರತಿ ಗ್ರಾಮಪಂಚಾಯಿತಿ ಪಿಡಿಓರವರ ಮೂಲಕ ಪ್ರಧಾನಮಂತ್ರಿ ಹಾಗು ಮುಖ್ಯಮಂತ್ರಿಗೆ ಮನವಿ ಅರ್ಪಿಸಲಾಗುವುದು ಎಂದರು. 
    ಗ್ರಾಮಪಂಚಾಯಿತಿಯಲ್ಲಿನ ಇ-ಸ್ವತ್ತು, ಖಾತೆ, ಬಗರ್‌ಹುಕುಂ ಜಮೀನು, ಹಲವು ನಿಗಮಗಳ ಸಾಲ-ಸಬ್ಸಿಡಿ ಯೋಜನೆಗಳ ಬಗ್ಗೆ ಕಾನೂನಿನ ಅರಿವಿನ ಕುರಿತು ಹಾಗು ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಕಛೇರಿ, ತಾಲೂಕು ಪಂಚಾಯಿತಿ, ನಗರಸಭೆ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಪಿಡಬ್ಲ್ಯೂ.ಡಿ. ಇಲಾಖೆ, ಪಶು ಇಲಾಖೆ ಸೇರಿದಂತೆ ಸರ್ಕಾರದ ಅನೇಕ ಇಲಾಖೆಗಳಲ್ಲಿ ಇರುವ ಮಾಹಿತಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. 
    ಜಾಗೃತಿ ಕಾರ್ಯಕ್ರಮ ಏ.೧೪ ರಿಂದ ಏ.೩೦ರವರೆಗೆ ವಿಶ್ವಮಾನವ ಬಸವಣ್ಣನವರ ಜನ್ಮದಿನದವರೆಗೂ ನಡೆಯಲಿದೆ. ಮೇ ತಿಂಗಳಲ್ಲಿ ಅಂತಿಮವಾಗಿ ವಿಶ್ವಮಾನವ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಈ ಸಮಾವೇಶದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧುಬಂಗಾರಪ್ಪ ನೆರವೇರಿಸಲಿದ್ದಾರೆ. ಶಾಸಕ ಬಿ.ಕೆ. ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು,  ಸಂಘ-ಸಂಸ್ಥೆಗಳ ಮುಖಂಡರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಐ.ಎಲ್ ಅರುಣ್‌ಕುಮಾರ್, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.