Monday, April 28, 2025

ಪಹಲ್ಗಾಮ್ ಕೃತ್ಯ ಖಂಡಿಸಿ ಭಾವಸಾರ ಕ್ಷತ್ರಿಯ ಸಮಾಜದಿಂದ ಪಂಜಿನ ಮೆರವಣಿಗೆ

ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಖಂಡಿಸಿ ಹಾಗು ಹತ್ಯೆಗೊಳಗಾದ ಅಮಾಯಕ ಪ್ರವಾಸಿಗರಿಗೆ ಸಂತಾಪ ಸೂಚಿಸಿ ಭದ್ರಾವತಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.  
    ಭದ್ರಾವತಿ; ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಖಂಡಿಸಿ ಹಾಗು ಹತ್ಯೆಗೊಳಗಾದ ಅಮಾಯಕ ಪ್ರವಾಸಿಗರಿಗೆ ಸಂತಾಪ ಸೂಚಿಸಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.  
    ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಆರಂಭಗೊಂಡ ಮೆರವಣಿಗೆ ಹಾಲಪ್ಪ ವೃತ್ತ, ಮಾಧವಚಾರ್ ವೃತ್ತದ ಮೂಲಕ ರಂಗಪ್ಪ ವೃತ್ತ ತಲುಪಿತು. ಮೆರವಣಿಗೆಯಲ್ಲಿ ಉಗ್ರರ ಕೃತ್ಯವನ್ನು ಖಂಡಿಸಲಾಯಿತು.  
    ಸಮಾಜದ ಹಿರಿಯ ಮುಖಂಡ ಡಿ.ಟಿ ಶ್ರೀಧರ್, ಸಮಾಜದ ಅಧ್ಯಕ್ಷ ರಾಘವೇಂದ್ರರಾವ್,  ಎಚ್.ಎನ್ ಯೋಗೇಶ್ ಕುಮಾರ್,  ಡಿ.ಆರ್ ಕಿರಣ್, ಜಿ.ಎಸ್ ಯೋಗೇಶ್, ವಿಠಲನಾಥ್, ವಿಶ್ವನಾಥ್ ಮಾಸ್ಟರ್, ಭಾವಸಾರ ಯುವಕ ಸಂಘದ ಸದಸ್ಯರು, ಮಹಿಳಾ ಮಂಡಳಿ ಪ್ರಮುಖರಾದ ಕಲ್ಪನಾ, ಭಾವಸಾರ ವಿಜನ್ ಅಧ್ಯಕ್ಷೆ ಶಿಲ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಅನಿರೀಕ್ಷಿತ ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ

ಭದ್ರಾವತಿ ಹಳೇನಗರದ ಭೂತನಗುಡಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಮನೆಯೊಂದರ ಗೊಡೆ ಕುಸಿದು ಬಿದ್ದಿರುವುದು.
    ಭದ್ರಾವತಿ : ಕೆಲವು ದಿನಗಳಿಂದ ಅನಿರೀಕ್ಷಿತ ಗಾಳಿ ಮಳೆಗೆ ಒಂದೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿರುವ ಘಟನೆಗಳು ನಡೆದಿವೆ. ಮತ್ತೊಂದೆಡೆ ಮನೆಯ ಗೋಡೆಗಳು ಕುಸಿದು ಬಿದ್ದಿದ್ದು, ಭಾನುವಾರ ರಾತ್ರಿ ಸುರಿದ ಮಳೆಗೆ ನಗರಸಭೆ ವ್ಯಾಪ್ತಿಯ ಭೂತನಗುಡಿಯಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ.  
    ನಗರಸಭೆ ಕಛೇರಿ ಹಿಂಭಾಗದ ವಾರ್ಡ್.೧೩ರ ಭೂತನಗುಡಿ ಶ್ರೀ ಶನೇಶ್ಷರ ಸ್ವಾಮಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿರುವ ಪ್ರಶಾಂತ್ ಎಂಬುವವರ ಮನೆ ಗೋಡೆ ಕುಸಿದು ಬಿದ್ದದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ರಾತ್ರಿ ಸುಮಾರು ೧ ತಾಸು ಸುರಿದ ಮಳೆಯಿಂದಾಗಿ ಮನೆಯ ಗೋಡೆ ಶಿಥಿಲಗೊಂಡು ಬಿದ್ದಿದೆ. 
    ಘಟನೆ ಸಂಬಂಧ ಮಾಹಿತಿ ನೀಡಿದರೂ ಸಹ ನಗರಸಭೆ ಅಧಿಕಾರಿಗಳಾಗಲಿ, ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. 
    ವಾರ್ಡ್ ಸದಸ್ಯೆ ಅನುಸುಧಾಮೋಹನ್ ಈ ವಿಚಾರ ಶಾಸಕರ ಗಮನಕ್ಕೂ ತಂದಿದ್ದಾರೆ. ಪ್ರಶಾಂತ್ ಟೈಲರ್ ವೃತ್ತಿ ನಡೆಸುತ್ತಿದ್ದು, ಈ ಮನೆಯಲ್ಲಿ ೩-೪ ಮಂದಿ ವಾಸವಿದ್ದಾರೆ. ಮನೆ ಗೋಡೆಯನ್ನು ತಕ್ಷಣ ದುರಸ್ತಿಗೊಳಿಸುವ ಕಾರ್ಯ ಕೈಗೊಳ್ಳಬೇಕಾಗಿದೆ.   

ಪಹಲ್ಗಾಮ್ ಘಟನೆಯಲ್ಲಿ ಹತ್ಯೆಯಾದವರಿಗೆ ಚುಂಚಾದ್ರಿ ಮಹಿಳಾ ವೇದಿಕೆ ಸಂತಾಪ

ಉಗ್ರರಿಗೆ ನೆರವಾಗುವವರನ್ನು ಹುಡುಕಿ ಕಠಿಣ ಶಿಕ್ಷೆ ವಿಧಿಸಿ, ಗಡಿ ಭದ್ರತೆ ಹೆಚ್ಚಿಸಿ 

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಪ್ರವಾಸಿಗರಿಗೆ ಭದ್ರಾವತಿ ನಗರದ ಚುಂಚಾದ್ರಿ ಮಹಿಳಾ ವೇದಿಕೆ ಸಂತಾಪ ಸೂಚಿಸುವ ಮೂಲಕ ಕೇಂದ್ರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೇಶದಲ್ಲಿ ಉಗ್ರರರಿಗೆ ನೆರವಾಗುವವರಿಗೂ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು. 
    ಭದ್ರಾವತಿ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಪ್ರವಾಸಿಗರಿಗೆ ನಗರದ ಚುಂಚಾದ್ರಿ ಮಹಿಳಾ ವೇದಿಕೆ ಸಂತಾಪ ಸೂಚಿಸುವ ಮೂಲಕ ಕೇಂದ್ರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದೇಶದಲ್ಲಿ ಉಗ್ರರರಿಗೆ ನೆರವಾಗುವವರಿಗೂ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು. 
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿಯವರ ನೇತೃತ್ವದಲ್ಲಿ ವೇದಿಕೆ ಪದಾಧಿಕಾರಿಗಳು ಹಾಗು ಸದಸ್ಯರು ಪ್ರತಿಭಟಿಸಿ ಉಗ್ರರ ಕೃತ್ಯವನ್ನು ಖಂಡಿಸಿದರು. ಇದೊಂದು ಹೇಯ ಕೃತ್ಯವಾಗಿದ್ದು, ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಈ ಕೃತ್ಯದಲ್ಲಿ ಹತ್ಯೆಯಾದ ಒಟ್ಟು ೨೬ ಮಂದಿಗೂ ವೇದಿಕೆ ಸಂತಾಪ ಸೂಚಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸುತ್ತದೆ ಎಂದರು. 
    ದೇಶದ ಒಳಗೆ ಇದ್ದು ದೇಶದ ಹೊರಗಿನಿಂದ ಬರುವ ಉಗ್ರರಿಗೆ ನೆರವಾಗುವವರನ್ನು ಹುಡುಕಿ ಅವರಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕು. ಇದರಿಂದ ಭವಿಷ್ಯದಲ್ಲಿ ಯಾರು ಸಹ ಈ ರೀತಿಯ ಕೃತ್ಯಗಳನ್ನು ನಡೆಸುವವರಿಗೆ ನೆರವಾಗುದಿಲ್ಲ. ದೇಶದ ಗಡಿ ಭದ್ರತೆ ಮತ್ತಷ್ಟು ಹೆಚ್ಚಿಸಬೇಕಾಗಿದೆ. ಉಗ್ರಹ ಒಳನುಸುಳುವುದನ್ನು ನಿಗ್ರಹಿಸಬೇಕೆಂದು ಆಗ್ರಹಿಸಿದರು. 
    ವೇದಿಕೆ ಪ್ರಮುಖರಾದ ಉಪಾಧ್ಯಕ್ಷೆ ಸುಮಾ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಪ್ರತಿಭಾ .ಆರ್, ಸಹ ಕಾರ್ಯದರ್ಶಿ ಶೀಲಾ ರವಿ, ಖಜಾಂಚಿ ಭಾರತಿ ಕುಮಾರ್, ಕುಸುಮಾ, ಕೋಕಿಲಾ, ಮಲ್ಲಿಕಾಂಬ, ಪ್ರಕಾಶ್ ರಾವ್, ಮುರುಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

Sunday, April 27, 2025

ಏ.೩೦ರಂದು ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿ



    ಭದ್ರಾವತಿ : ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏ.೩೦ರಂದು ಶ್ರೀ ವಿಶ್ವಗುರು ಬಸವಣ್ಣನವರ ಜಯಂತಿ ಹಳೇನಗರದ ಕನಕಮಂಟಪದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಲಾಗಿದೆ. 
    ಬೆಳಿಗ್ಗೆ ೯ ಗಂಟೆಗೆ ನಗರದ ಅಂಡರ್‌ಬ್ರಿಡ್ಜ್ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಿಂದ ಶ್ರೀ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗು ಕಲಾ ತಂಡಗಳೊಂದಿ ಮೆರವಣಿಗೆ ನಡೆಯಲಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಪೂರ್‍ಯಾನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಡಿ.ಎಸ್ ಅರುಣ್, ಎಸ್.ಎಲ್ ಭೋಜೇಗೌಡ, ಭಾರತಿ ಶೆಟ್ಟಿ, ಡಾ. ಧನಂಜಯ ಸರ್ಜಿ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ವೀರಶೈವ ಸಮಾಜ(ನಗರ) ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ(ಗ್ರಾಮಾಂತರ) ಅಧ್ಯಕ್ಷೆ ಸಾಕಮ್ಮ ಮಹೇಶ್, ತಹಸೀಲ್ದಾರ್ ಪರುಸಪ್ಪ ಕುರುಬರ, ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಮತ್ತು ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
    ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಲಿದ್ದು, ಸರ್ಕಾರಿ ಅಧಿಕಾರಿಗಳು, ನೌಕರರು, ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ, ಮಹಿಳಾ ಸಂಘಟನೆಗಳ ಪ್ರಮುಖರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಉಗ್ರರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಪಂಜಿನ ಮೆರವಣಿಗೆ ನಡೆಸಿ ಶ್ರದ್ದಾಂಜಲಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಪ್ರವಾಸಿಗರಿಗೆ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿ ಪಂಜಿನ ಮೆರವಣಿಗೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. 
    ಭದ್ರಾವತಿ:  ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಪ್ರವಾಸಿಗರಿಗೆ ತಾಲೂಕಿನ ಶಂಕರಘಟ್ಟದಲ್ಲಿ ಪಂಜಿನ ಮೆರವಣಿಗೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. 
    ಶಂಕರಘಟ್ಟದ ಎಸ್‌ಬಿಐ ಬ್ಯಾಂಕ್ ಸಮೀಪದಿಂದ ಆರಂಭಗೊಂಡ ಮೆರವಣಿಗೆ ಗಾನವಿ ಹೋಟೆಲ್ ಸಮೀಪದವರೆಗೂ ನಡೆಯಿತು. ದಾಳಿ ಕೃತ್ಯವನ್ನು ಖಂಡಿಸುವ ಮೂಲಕ ತಕ್ಷಣ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕಾಶ್ಮೀರದಲ್ಲಿ ಶಾಂತಿ ಕಾಪಾಡಬೇಕೆಂದು ಆಗ್ರಹಿಸಲಾಯಿತು. ಅಲ್ಲದೆ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಸಂತಾಪ ಸೂಚಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿ ಉಪತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 
    ಕುವೆಂಪು ವಿಶ್ವವಿದ್ಯಾನಿಲಯ ಎನ್‌ಎಸ್‌ಯುಐ ಗೌರವಾಧ್ಯಕ್ಷ ಆರ್. ಮುರುಗೇಶ್ ರವರು, ಗ್ರಾಮ ಪಂಚಾಯಿತಿ ಸದಸ್ಯರಾದ ಪುನೀತ್, ಶಿವಶಂಕರ್(ದಿಲ್ಲಿ), ಪ್ರವೀಣ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಾದೇಶ್, ಸಿಂಗನ ಮನೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ಟಿ ಶಶಿಕುಮಾರ್, ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಶರವಣ, ಮೂರ್ತಿ, ಪುಟ್ಟರಾಜು, ಮೋಹನ್, ಯೋಗೇಶ್(ಬಿಲ್ಲ), ಪ್ರವೀಣ್ ಶಾಸ್ತ್ರಿ, ವಾಸು, ವೆಂಕಟೇಶ್, ಶಶಿಕುಮಾರ್, ಘಟ್ಟ, ಗಂಗಾಧರ್, ಸುಮಿತ್ರ, ಮಂಜುನಾಥ್, ಮಂಜುಳಾ, ರೇವತಿ, ಶುಭ, ಚಂದನ, ಸುಧಾ, ಶಿಲ್ಪ, ಶೋಭಾ, ವರಲಕ್ಷ್ಮಿ, ಶರಣ, ರಮೇಶ್, ವಿನಯ್, ರವಿಕುಮಾರ್, ಗಿರೀಶ್, ವೆಂಕಿ, ಅಪ್ಪು, ಕೀರ್ತಿ, ಕಾಶಿ, ಕೋಟಿ, ಚೇತು, ವೇಲು, ಸಂದೀಪ್, ಮಂಜುನಾಥ್, ಸುರೇಶ್, ಪ್ರಮೋದ್, ರವಿಶಂಕರ್, ವಿನಾಯಕ, ಸಂತೋಷ್, ಅಮಿತ್, ರವಿ, ಕಿರಣ್ ಕುಮಾರ್, ಚಿರಂತ್, ಮೌನಿಕ, ವನಿತಾ, ಪಲ್ಲವಿ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಸಿಂಗನ ಮನೆ, ತಾವರಘಟ್ಟ, ಕಂಬದಾಳ ಹೊಸೂರು ಸೇರಿದಂತೆ ಸುತ್ತಮುತ್ತಲ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

Saturday, April 26, 2025

ಇಬ್ಬರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನ

    ಭದ್ರಾವತಿ : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಸವಾರರ ಮೇಲೆ ಐವರು ಯುವಕರ ಗುಂಪು ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಶುಕ್ರವಾರ ಸಂಜೆ ಹಳೇನಗರ ವ್ಯಾಪ್ತಿಯಲ್ಲಿ ನಡೆದಿದೆ. 
    ಶ್ರೀ ಹಳದಮ್ಮ ದೇವಿ ಬೀದಿ ನಿವಾಸಿಗಳಾದ ವಿಶ್ವ ಅಲಿಯಾಸ್ ಮುದ್ದೆ ಮತ್ತು ಸಂದೀಪ ಅಲಿಯಾಸ್ ಕಡ್ಡಿ ಸಂದೀಪ ಇಬ್ಬರು ಸಂಜೆ ದ್ವಿಚಕ್ರ ವಾಹನದಲ್ಲಿ ಕಂಚಿಬಾಗಿಲ ವೃತ್ತದ ಮೂಲಕ ಹಾದು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಐವರು ಯುವಕರ ಗುಂಪು ಬೈಕಿನ ಹಿಂಬಾಗಕ್ಕೆ ಡಿಕ್ಕಿಹೊಡೆದಿದ್ದಾರೆ. ಕೆಳಗೆ ಬಿದ್ದ ವಿಶ್ವ ಮತ್ತು ಸಂದೀಪ ಮೇಲೆ ಕಾರಿನಿಂದ ಕೆಳಗೆ ಇಳಿದ ಐವರು ಯುವಕರು ಕೈಯಲ್ಲಿ ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಇಬ್ಬರು ಹಲ್ಲೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಘಟನೆ ಸ್ಥಳಕ್ಕೆ ಸುತ್ತಮುತ್ತಲ ಜನರು ಜಮಾಯಿಸುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ಯುವಕರು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
    ದ್ವಿಚಕ್ರ ವಾಹನ ಕೆಳಗೆ ಬಿದ್ದು ಸ್ವಲ್ಪ ಗಾಯಗೊಂಡಿರುವ ವಿಶ್ವ ಮತ್ತು ಸಂದೀಪ ಇಬ್ಬರನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಘಟನೆ ಕುರಿತಂತೆ ಹಳೇನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಹಲ್ಲೆಗೆ ಕಾರಣ ತಿಳಿದು ಬರಬೇಕಿದೆ. 

ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ : ನಗರದ ಭವಿಷ್ಯದ ಬೆಳವಣಿಗೆಗೆ ಸಹಕಾರಿ

ಸದ್ಬಳಕೆ ಮಾಡಿಕೊಳ್ಳಲು ಸಂಸದ ಬಿ.ವೈ ರಾಘವೇಂದ್ರ ಕರೆ 

ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಡಿ.ಎಸ್ ಅರುಣ್, ಬಲ್ಕೀಶ್ ಬಾನು ಸೇರಿದಂತೆ ಇನ್ನಿತರರು ಲೋಕಾರ್ಪಣೆಗೊಳಿಸಿದರು. 
    ಭದ್ರಾವತಿ: ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ ನಗರದ ಭವಿಷ್ಯದ ಬೆಳವಣಿಗೆಗೆ ಪೂರಕವಾಗಲಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
    ಅವರು ಶನಿವಾರ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಶೇ.೬೦ ಮತ್ತು ರಾಜ್ಯ ಸರ್ಕಾರದ ಶೇ.೪೦ ಅನುದಾನದಲ್ಲಿ ಸುಮಾರು ೨೫ ಕೋ. ರು. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಗೊಳಿಸಲಾಗಿದ್ದು, ಭದ್ರಾವತಿ ಅಭಿವೃದ್ಧಿ ಹೊಂದುತ್ತಿರುವ ನಗರ, ಶಿವಮೊಗ್ಗ ಅಭಿವೃದ್ಧಿ ಹೊಂದಿರುವ ಜಿಲ್ಲಾ ಕೇಂದ್ರವಾಗಿದೆ. ಈ ಎರಡು ನಗರಗಳ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಸುಮಾರು ೧೭೫ ಕೋ. ರು. ವೆಚ್ಚದಲ್ಲಿ ರೈಲ್ವೆ ಸೇತುವೆ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ೨ ವರ್ಷದ ಹಿಂದೆಯೇ ೩ ಸೇತುವೆಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಈ ಸೇತುವೆ ೨.೫ ವರ್ಷ ಕಾಲಾವಧಿಯಲ್ಲಿ ಮುಕ್ತಾಯಗೊಂಡಿದೆ. ಇದರೊಂದಿಗೆ ಇಂದಿಗೆ ಎಲ್ಲಾ ರೈಲ್ವೆ ಸೇತುವೆ ಕಾಮಗಾರಿಗಳು ಮುಕ್ತಾಯಗೊಂಡಂತಾಗಿದೆ ಎಂದರು. 


ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ ಸಂಸದ ಬಿ.ವೈ ರಾಘವೇಂದ್ರ ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. 
    ಸೇತುವೆ ಮುಕ್ತಾಯಗೊಳಿಸಲು ಶ್ರಮಿಸಿದ ರೈಲ್ವೆ ಅಧಿಕಾರಿಗಳು ಹಾಗು ಗುತ್ತಿಗೆದಾರರಿಗೆ ಮತ್ತು ಕಾಮಗಾರಿ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರಿಗೆ ಯಾವುದೇ ರೀತಿ ಅನಾನುಕೂಲವಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು. 
    ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ಮತ್ತು ಬಲ್ಕೀಶ್ ಬಾನುರವರು ಮಾತನಾಡಿ, ಸಂಸದರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯವಿರಲಿ ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷ, ಬೇಧಭಾವ ತೋರದೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳು ಸೇರಿದಂತೆ ಬಹುತೇಕ ಯೋಜನೆಗಳು ಯಶಸ್ವಿಯಾಗಿ ಮುಕ್ತಾಯಗೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆಂದು ಬಣ್ಣಿಸಿದರು. 
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಹಿರಿಯ ನಗರಸಭಾ ಸದಸ್ಯ ಬಿ.ಕೆ ಮೋಹನ್, ಮುಖಂಡರಾದ ಶಾರದ ಅಪ್ಪಾಜಿ, ಜಗದೀಶ್, ಎಸ್. ಕುಮಾರ್, ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು.