ಕೊಲೆಯಾದ ಯುವಕ ಅರುಣ್
ಭದ್ರಾವತಿ: ಕ್ರಿಕೆಟ್ ಆಟದಲ್ಲಿ ಉಂಟಾದ ಜಗಳ ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅರುಣ್(೨೩) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಶ್ರೀ ಅಕ್ಕ ಮಹಾದೇವಿ ವಿದ್ಯಾಸಂಸ್ಥೆ(ಎವಿಎಸ್) ಬಳಿ ಇರುವ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾ ನಡೆದಿದ್ದು, ಈ ಪಂದ್ಯಾದಲ್ಲಿ ಅರುಣ್ ಮತ್ತು ಇತರರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿದೆ.
ಇದೆ ಜಗಳ ರಾತ್ರಿ ಗಾಂಧಿನಗರ, ಕೇಶವಪುರ ಬಡಾವಣೆ ನೀರಿನ ಟ್ಯಾಂಕ್ ಹತ್ತಿರ ಮದ್ಯ ಸೇವಿಸುವಾಗ ಮುಂದುವರೆದಿದ್ದು, ಮಾತಿಗೆ ಮಾತು ಬೆಳೆದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಮತ್ತೊಬ್ಬ ಯುವಕ ಸಂಜಯ್ ಎಂಬಾತ ಗಾಯ ಗೊಂಡಿದ್ದಾನೆ.
ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ, ಹಳೇನಗರ ಪೊಲೀಸ್ ಠಾಣೆ ಉಪನಿರೀಕ್ಷಕ ಚಂದ್ರಶೇಖರನಾಯ್ಕ ಸೇರಿದಂತೆ ಇನ್ನಿತರರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಅರುಣ್ ಸಹೋದರ ದೀಪಕ್ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ೪ಕ್ಕೂ ಹೆಚ್ಚು ಜನರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.