Monday, May 5, 2025

ಹಿರಿಯ ಪತ್ರಕರ್ತ ಎಲ್. ಆನಂದರಾಮನ್ ನಿಧನ

ಎಲ್. ಆನಂದರಾಮನ್ 
    ಭದ್ರಾವತಿ : ಹಳೇನಗರದ ಪತ್ರಿಕಾ ಭವನ ಟ್ರಸ್ಟ್ ಅಜೀವ ಸದಸ್ಯರು, ಹಿರಿಯ ಪತ್ರಕರ್ತರಾದ ಎಲ್. ಆನಂದರಾಮನ್(೭೧) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ ಮಂಜುಳಾ, ಪುತ್ರಿಯರಾದ ರಕ್ಷಾ ಮತ್ತು ರಶ್ಮಿ ಹಾಗು ಅಳಿಯಂದಿರು, ಮೊಕ್ಕಳು ಇದ್ದಾರೆ.  ಸುಮಾರು ೩ ದಶಕಗಳಿಗೂ ಹೆಚ್ಚು ಕಾಲ ಪತ್ರಿಕಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕನ್ನಡಪ್ರಭ ಮತ್ತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ದಿನ ಪತ್ರಿಕೆಗಳ ವಿತರಕರಾಗಿ, ವರದಿಗಾರರಾಗಿ ದೀರ್ಘಾವಧಿ ಸೇವೆಲ್ಲಿಸಿದ್ದರು. 
    ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆಯ ಉಪಾಧ್ಯಕ್ಷರಾಗಿ ಹಾಗು ಪತ್ರಿಕಾ ಭವನ ಟ್ರಸ್ಟ್ ಅಜೀವ ಸದಸ್ಯರಾಗಿದ್ದು, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು.  
    ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪ್ರಸಾದ್ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಬಂಕ್ ಮಾಲೀಕರಾಗಿದ್ದರು. 
    ಅಲ್ಲದೆ ಆನಂದರಾಮನ್‌ರವರು ಕ್ರಿಕೆಟ್ ತರಬೇತಿದಾರರಾಗಿ ಸಹ ಗುರುತಿಸಿಕೊಳ್ಳುವ ಮೂಲಕ ಹಲವಾರು ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಕೆಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಚೇತರಿಸಿಕೊಂಡಿದ್ದರು. ನಂತರ ಬೆಂಗಳೂರಿನಲ್ಲಿ ವಾಸವಾಗಿದ್ದರು. 
    ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಹಾಗು ತಾಲೂಕು ಶಾಖೆ ಪದಾಧಿಕಾರಿಗಳು ಹಾಗು ಸದಸ್ಯರು, ಪತ್ರಿಕಾ ಭವನ ಟ್ರಸ್ಟ್ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು ಸಂತಾಪ ಸೂಚಿಸಿದ್ದಾರೆ. 

No comments:

Post a Comment