Tuesday, May 6, 2025

ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು

ಅರುಣ್ ಕುಮಾರ್ 
    ಭದ್ರಾವತಿ : ಕ್ರಿಕೆಟ್ ಆಟದಲ್ಲಿ ಉಂಟಾದ ಜಗಳದ ಹಿನ್ನಲೆಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನ ಆಧಾರದ ಮೇರೆಗೆ ಓರ್ವನನ್ನು ಬಂಧಿಸಲು ತೆರಳಿದ್ದ ಪೊಲೀಸರು ಆತ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಮಂಗಳವಾರ ನಡೆದಿದೆ.  
    ಕ್ರಿಕೆಟ್ ಆಟದಲ್ಲಿ ಉಂಟಾದ ಜಗಳದ ಹಿನ್ನಲೆಯಲ್ಲಿ  ಸೋಮವಾರ ರಾತ್ರಿ ಅರುಣ್ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ ಸಹೋದರ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಸಂಜಯ್, ಸಚಿನ್ ಮತ್ತು ಅರುಣ್ ಕುಮಾರ್ ಸೇರಿದಂತೆ ೪ಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. 
    ಈ ದೂರಿನಲ್ಲಿ ಅರುಣ್ ಕುಮಾರ್(೧೯) ಅಲಿಯಾಸ್ ಕೊಕ್ಕು ೩ನೇ ಆರೋಪಿಯಾಗಿದ್ದು, ಈ ಹಿನ್ನಲೆಯಲ್ಲಿ ಬಂಧಿಸಲು ಹೋದಾಗ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಠಾಣೆಯ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 
    ಆರೋಪಿ ಅರುಣ್‌ಕುಮಾರ್‌ನನ್ನು ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅಲ್ಲದೆ ಈತನಿಂದ ಹಲ್ಲೆಗೊಳಗಾಗಿರುವ ಪೊಲೀಸ್ ಸಿಬ್ಬಂದಿಗೂ ಸಹ ಚಿಕಿತ್ಸೆ ನೀಡಲಾಗಿದೆ. ಪೊಲೀಸ್ ಠಾಣೆಯಲ್ಲಿ ಅರುಣ್‌ಕುಮಾರ್ ವಿರುದ್ಧ ಒಟ್ಟು ೫ ಪ್ರಕರಣಗಳು ದಾಖಲಾಗಿವೆ. 

ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಮೇ.೯ರಂದು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಜಾತ್ಯತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಯಿತು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಕಾಗದನಗರ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಮೇ.೯ರಂದು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಜಾತ್ಯತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಯಿತು. 
    ದೇವಸ್ಥಾನ ಟ್ರಸ್ಟ್ ವತಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿರುವ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಸಹ ಆಹ್ವಾನಿಸುವಂತೆ ಅವರ ನಿವಾಸಕ್ಕೆ ತೆರಳಿ ಮನವಿ ಮಾಡಲಾಯಿತು. 
    ಟ್ರಸ್ಟ್ ಗೌರವಾಧ್ಯಕ್ಷ ಎಂ. ರಾಮಕೃಷ್ಣಪ್ಪ, ಉಪಾಧ್ಯಕ್ಷ ಎನ್. ಉಮೇಶ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಟ್ರಸ್ಟಿಗಳು ಉಪಸ್ಥಿತರಿದ್ದರು. 
 

ಆನಂದರಾಮನ್‌ರವರು ಪತ್ರಕರ್ತರಿಗೆ ಒಂದು ಶಿಸ್ತು, ಬದ್ಧತೆ ಬೇಕೆಂಬ ನಿಲುವು ಹೊಂದಿದ್ದವರು : ಬಿ.ಆರ್ ಬದರಿನಾರಾಯಣ ಶ್ರೇಷ್ಠಿ

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಭದ್ರಾವತಿ ತಾಲೂಕು ಶಾಖೆ ಅಧ್ಯಕ್ಷ ಬಿ.ಆರ್ ಬದರಿನಾರಾಯಣ ಶ್ರೇಷ್ಠಿ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಪತ್ರಕರ್ತರಾದ ಎಲ್. ಆನಂದರಾಮನ್‌ರವರ ನಿಧನದ ಹಿನ್ನಲೆಯಲ್ಲಿ ಹಳೇನಗರದ ಸಂಘದ ಕಛೇರಿಯಲ್ಲಿ ಸೋಮವಾರ ಸಂಜೆ ಸಂತಾಪ ಸೂಚಕ ಸಭೆ ನಡೆಯಿತು.  ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತರಾದ ಕಣ್ಣಪ್ಪ ಮಾತನಾಡಿದರು. 
    ಭದ್ರಾವತಿ: ಹಿರಿಯ ಪತ್ರಕರ್ತ ಎಲ್. ಆನಂದರಾಮನ್‌ರವರು ಪತ್ರಕರ್ತರಿಗೆ ಒಂದು ಶಿಸ್ತು, ಬದ್ಧತೆ ಬೇಕೆಂಬ ನಿಲುವು ಹೊಂದಿದ್ದವರು. ಮಾದರಿಯಾಗಿ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ.ಆರ್ ಬದರಿನಾರಾಯಣ ಶ್ರೇಷ್ಠಿ ಬಣ್ಣಿಸಿದರು. 
    ಅವರು ಆನಂದರಾಮನ್‌ರವರ ನಿಧನದ ಹಿನ್ನಲೆಯಲ್ಲಿ ಹಳೇನಗರದ ಸಂಘದ ಕಛೇರಿಯಲ್ಲಿ ಸೋಮವಾರ ಸಂಜೆ ಜರುಗಿದ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಪತ್ರಕರ್ತರು ಎಂದರೆ ಯಾವುದೋ ಅಮಿಷಗಳಿಗೆ ಒಳಗಾದವರಲ್ಲ ಅಥವಾ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಸೀಮಿತರಾದವರಲ್ಲ. ಸಮಾಜದಲ್ಲಿ ಅವರದೇ ಆದ ಜವಾಬ್ದಾರಿ, ಕರ್ತವ್ಯಗಳಿವೆ ಎಂಬುದನ್ನು ತೋರಿಸಿಕೊಟ್ಟವರು. ಇಂತಹವರು ಇಂದು ಕಣ್ಮರೆಯಾಗಿರುವುದು ನೋವಿನ ಸಂಗತಿಯಾಗಿದೆ. ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು. 
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಮಾತನಾಡಿ, ಆನಂದರಾಮನ್‌ರವರು ಒಬ್ಬ ಪತ್ರಕರ್ತ ಮಾತ್ರವಲ್ಲ ಸಂಘದ ಪ್ರತಿಯೊಬ್ಬರಿಗೂ ಅವರೊಬ್ಬ ಉತ್ತಮ ಸ್ನೇಹಿತರಾಗಿದ್ದರು.  ಪ್ರತಿಯೊಂದು ಕೆಲಸದಲ್ಲೂ ಬದ್ಧತೆ ಹಾಗು ನಿಖರತೆಯನ್ನು ಹೊಂದಿದ್ದರು. ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಪತ್ರಿಕಾಭವನ ಟ್ರಸ್ಟ್ ಬೆಳವಣಿಗೆಯಲ್ಲಿ ಅವರ ಪಾತ್ರ ಹೆಚ್ಚಿನದ್ದಾಗಿದೆ. ಅವರ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ದೇವರು ಆವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದರು. 
    ಉಳಿದಂತೆ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್, ಸಹ ಕಾರ್ಯದರ್ಶಿ ಫಿಲೋಮಿನಾ, ಖಜಾಂಚಿ ಅನಂತಕುಮಾರ್, ಹಿರಿಯ ಸದಸ್ಯರಾದ ಎಚ್.ಕೆ ಶಿವಶಂಕರ್, ಸುದರ್ಶನ್, ಟಿ.ಎಸ್ ಆನಂದಕುಮಾರ್, ಸುಧೀಂದ್ರ, ಸೈಯದ್ ಖಾನ್, ಕೆ.ಆರ್ ಶಂಕರ್, ಕಿರಣ್ ಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿ, ಸಂತಾಪ ವ್ಯಕ್ತಪಡಿಸಿದರು. ಆರಂಭದಲ್ಲಿ ಆನಂದರಾಮನ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.
    ಶಾಸಕರ ಸಂತಾಪ: 
    ಹಿರಿಯ ಪತ್ರಕರ್ತರಾದ ಎಲ್. ಆನಂದರಾಮನ್‌ರವರು ಮಾಧ್ಯಮ ಲೋಕದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು. ಸ್ನೇಹಜೀವಿಯಾಗಿದ್ದ ಇವರು ಕ್ರೀಡಾ ಲೋಕದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇವರ ನಿಧನದಿಂದ ಇವರ ಕುಟುಂಬಕ್ಕೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ. 

ಕ್ರಿಕೆಟ್ ಆಟದಲ್ಲಿ ಉಂಟಾದ ಜಗಳ ಓರ್ವ ಯುವಕನ ಕೊಲೆಯಲ್ಲಿ ಅಂತ್ಯ

ಕೊಲೆಯಾದ ಯುವಕ ಅರುಣ್ 
    ಭದ್ರಾವತಿ: ಕ್ರಿಕೆಟ್ ಆಟದಲ್ಲಿ ಉಂಟಾದ ಜಗಳ ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 
    ಅರುಣ್(೨೩) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಶ್ರೀ ಅಕ್ಕ ಮಹಾದೇವಿ ವಿದ್ಯಾಸಂಸ್ಥೆ(ಎವಿಎಸ್) ಬಳಿ ಇರುವ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾ ನಡೆದಿದ್ದು, ಈ ಪಂದ್ಯಾದಲ್ಲಿ ಅರುಣ್ ಮತ್ತು ಇತರರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿದೆ. 
    ಇದೆ ಜಗಳ ರಾತ್ರಿ ಗಾಂಧಿನಗರ, ಕೇಶವಪುರ ಬಡಾವಣೆ ನೀರಿನ ಟ್ಯಾಂಕ್ ಹತ್ತಿರ ಮದ್ಯ ಸೇವಿಸುವಾಗ ಮುಂದುವರೆದಿದ್ದು, ಮಾತಿಗೆ ಮಾತು ಬೆಳೆದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಮತ್ತೊಬ್ಬ ಯುವಕ ಸಂಜಯ್ ಎಂಬಾತ ಗಾಯ ಗೊಂಡಿದ್ದಾನೆ. 
    ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ, ಹಳೇನಗರ ಪೊಲೀಸ್ ಠಾಣೆ ಉಪನಿರೀಕ್ಷಕ ಚಂದ್ರಶೇಖರನಾಯ್ಕ ಸೇರಿದಂತೆ ಇನ್ನಿತರರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
    ಈ ಘಟನೆಗೆ ಸಂಬಂಧಿಸಿದಂತೆ ಅರುಣ್ ಸಹೋದರ ದೀಪಕ್ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ೪ಕ್ಕೂ ಹೆಚ್ಚು ಜನರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  

Monday, May 5, 2025

ಮೇ.೭ರಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

    ಭದ್ರಾವತಿ : ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕಗಳೊಂದಿಗೆ ರ್‍ಯಾಂಕ್ ಪಡೆದ ಜಿಲ್ಲೆಯ ೩ ಸಾಧಕರಿಗೆ ನಗರದ ರೋಟರಿ ಕ್ಲಬ್ ವತಿಯಿಂದ ಮೇ. ೭ರಂದು ಸಂಜೆ ೬.೩೦ಕ್ಕೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ರ್‍ಯಾಂಕ್ ವಿಜೇತರಾದ ಸಾಗರದ ವಿ. ವಿಕಾಸ್, ಶಿವಮೊಗ್ಗದ ಬಿ.ಎಂ ಮೇಘನಾ ಮತ್ತು ಮಾದೇನಹಳ್ಳಿಯ ಡಾ. ದಯಾನಂದ ಸಾಗರ್ ಅವರನ್ನು ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಗುತ್ತಿದ್ದು, ಕ್ಲಬ್ ಅಧ್ಯಕ್ಷ ಜಿ. ರಾಘವೇಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದಾರೆ. 
    ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರೋಟರಿ ಪ್ರಮುಖರಾದ ಎಸ್.ಆರ್ ನಾಗರಾಜ್, ಆದರ್ಶ್, ಕ್ಲಬ್ ಕಾರ್ಯದರ್ಶಿ ಎಂ. ನಿರಂಜನ್, ಆನ್ಸ್ ಕ್ಲಬ್ ಅಧ್ಯಕ್ಷೆ ಲೀಲಾವತಿ ಸುಧಾಕರ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

ಶಂಕರಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್‌ಗೆ ಸನ್ಮಾನ

ಭದ್ರಾವತಿ ಸಿದ್ದಾರೂಢನಗರದ ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್‌ರವರು ೯೫ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅವರನ್ನು ರಾಜ್ಯ ಒಬ್ಬೂರು ಕಮ್ಮೆ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಸಿದ್ದಾರೂಢನಗರದ ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್‌ರವರು ೯೫ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅವರನ್ನು ರಾಜ್ಯ ಒಬ್ಬೂರು ಕಮ್ಮೆ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಸೇವಾ ಸಮಿತಿ ಅಧ್ಯಕ್ಷ ಎ.ವಿ ಪ್ರಸನ್ನ ನೇತೃತ್ವದಲ್ಲಿ ಸುಬ್ಬರಾವ್ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲೆಂದು ಪ್ರಾರ್ಥಿಸಲಾಯಿತು. 
    ರಾಜ್ಯ ಸಮಿತಿ ನಿರ್ದೇಶಕರಾದ ಕೆ.ಎಸ್ ನಾಗರಾಜ, ಜಿಲ್ಲಾ ಬ್ರಾಹ್ಮಣ ಮಹಾಸಭೆ ಪ್ರತಿನಿಧಿ ಎನ್.ಎಂ ರಘುರಾಮ್, ಮಾ.ಸ ನಂಜುಂಡಸ್ವಾಮಿ, ಛಾಯಾಪತಿ, ಪ್ರಕಾಶಭಟ್ಟರು, ತಾಲೂಕು ಬ್ರಾಹ್ಮಣ ಮಹಾಸಭೆ ಮಾಜಿ ಅಧ್ಯಕ್ಷ ಎ.ಎನ್ ಸುರೇಶ್ ಹಾಗು ಶಂಕರ ಮಠದ ಕೆ.ಎಸ್ ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಾತಿಗಣತಿ ಸಮೀಕ್ಷೆ : ಮನೆ ಮನೆಗೆ ಭೇಟಿ ನೀಡಲು ನಿರ್ದೇಶನ ನೀಡಿ

ಸರ್ಕಾರಕ್ಕೆ ಜಂಗಮ ಸಮಾಜದಿಂದ ಮನವಿ 

ಪ್ರತಿ ಮನೆ ಮನೆಗೆ ತೆರಳಿ ಜಾತಿಗಣತಿ ಸಮೀಕ್ಷೆ ನಡೆಸುವಂತೆ ಸಮೀಕ್ಷೆ ನಡೆಸುವವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ಭದ್ರಾವತಿ  ತಾಲೂಕು ನಗರ ಘಟಕ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. 
    ಭದ್ರಾವತಿ : ಪ್ರತಿ ಮನೆ ಮನೆಗೆ ತೆರಳಿ ಜಾತಿಗಣತಿ ಸಮೀಕ್ಷೆ ನಡೆಸುವಂತೆ ಸಮೀಕ್ಷೆ ನಡೆಸುವವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ತಾಲೂಕು ನಗರ ಘಟಕ ಸೋಮವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. 
    ನಗರ ಘಟಕದ ಜಂಗಮ ಸಮಾಜದ ಅಧ್ಯಕ್ಷ ಎಸ್. ಅಡವೀಶಯ್ಯ ನೇತೃತ್ವದಲ್ಲಿ ಉಪತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಮನವಿ ಸಲ್ಲಿಸಲಾಗಿದ್ದು, ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್‌ರವರ ಸದಸ್ಯ ಆಯೋಗದಿಂದ ನ್ಯಾಯಯುತವಾಗಿ ರಾಜ್ಯದ ೧೦೧ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಿ ಆ ಜಾತಿಗಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಿರುವುದು ಸಂತಸದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಮೇ.೫ರಿಂದ ಜಾತಿಗಣತಿ ಸಮೀಕ್ಷೆ ನಡೆಸುವರೆಂದು ತಿಳಿದು ಬಂದಿದೆ.  
    ಜಂಗಮ ಸಮಾಜ ಪರಿಶಿಷ್ಟ ಜಾತಿಗೆ ಸಂಬಂಧಿಸಿದ್ದು, ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿ ಆ.ನಂ.೧೯(೧)ರಲ್ಲಿ ಬೇಡ ಜಂಗಮ ಎಂದು ನಮೂದಿಸಲಾಗಿದೆ. ಬೇಡ ಜಂಗಮರ ಕುಲಕಸುಬು ಧಾರ್ಮಿಕ ಭಿಕ್ಷಾಟನೆಯಾಗಿದ್ದು, ತಲತಲಾಂತರದಿಂದ ಈ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ಸಮೀಕ್ಷೆ ಸಮಯದಲ್ಲಿ ವೃತ್ತಿ ಧರ್ಮವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿದ್ದು, ಸಮೀಕ್ಷೆ ನಡೆಸುವವರಿಗೆ ಮನೆ, ಮನೆಗೆ ಭೇಟಿ ನೀಡಲು ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. 
ಜಂಗಮ ಸಮಾಜದ ನಗರ ಘಟಕದ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.