Thursday, May 8, 2025

ಮಧು ಲ್ಯಾಬ್‌ನಿಂದ ಪೌರ ಕಾರ್ಮಿಕರಿಗೆ ಗೌರವಾರ್ಪಣೆ

ಭದ್ರಾವತಿ ನಗರದ ರಂಗಪ್ಪ ವೃತ್ತದ ಮಧು ಲ್ಯಾಬೋರೇಟರಿ ವತಿಯಿಂದ ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆ ವಿನೂತನವಾಗಿ ಆಚರಿಸಲಾಯಿತು. 
    ಭದ್ರಾವತಿ : ನಗರದ ರಂಗಪ್ಪ ವೃತ್ತದಲ್ಲಿರುವ ಮಧು ಲ್ಯಾಬೋರೇಟರಿ ವತಿಯಿಂದ ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆ ವಿನೂತನವಾಗಿ ಆಚರಿಸಲಾಯಿತು. 
    ರಂಗಪ್ಪ ವೃತ್ತ ಮತ್ತು ಕೇಶವಪುರ ಬಡಾವಣೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಗರಸಭೆ ಪೌರ ಕಾರ್ಮಿಕರಾದ ಎಸ್. ಶರವಣ, ಲಕ್ಷ್ಮಮ್ಮ ಮತ್ತು ತಿರುಮಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಲ್ಯಾಬ್ ಮಾಲೀಕ ಎಸ್.ಆರ್ ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಸಮಾಜದ ಸ್ವಾಸ್ಥ್ಯ, ಸ್ವಚ್ಚತೆ ಮತ್ತು ನೈರ್ಮಲ್ಯ ಕಾಪಾಡುವ, ಜನರ ಆರೋಗ್ಯ ರಕ್ಷಿಸುವ ನಿಜವಾದ ವೈದ್ಯರು. ಜಗತ್ತು ಸುಖ ನಿದ್ರೆಯಲ್ಲಿದ್ದಾಗ ಎದ್ದು ತಮ್ಮ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರ ಕಾರ್ಯ ಅಭಿನಂದನೀಯ ಎಂದರು. 
    ಪೌರ ಕಾಮಿಕರ ಕುಟುಂಬ ವರ್ಗ ಉತ್ತಮ ಗುಣಮಟ್ಟದ ಜೀವನ ನಡೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಸಮಾಜದ ಪ್ರತಿಯೊಬ್ಬ ನಾಗರಿಕ ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವಂತಾಗಬೇಕೆಂದರು.
    ಕಾರ್ಯಕ್ರಮದಲ್ಲಿ ಮಧು ಸಾರಥಿ, ಎಚ್. ಲೀಲಾವತಿ, ಎಂ. ದೀಪಿಕಾ, ಚಿರಾಗ್ ಸಾರಥಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ಸಿಹಿ ಹಂಚಿಕೆ ಮಾಡಲಾಯಿತು.

ತಾಯ್ತನಕ್ಕಿಂತ ತಾಯಿ ಹೃದಯ ಅತ್ಯಂತ ಮುಖ್ಯ : ಬಿ.ಕೆ ಮಾಲಕ್ಕ

ಭದ್ರಾವತಿ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ತಾಯಂದಿರ ದಿನ ಕಾರ್ಯಕ್ರಮದಲ್ಲಿ ಪತ್ರಕರ್ತ ಸುಭಾಷ್ ರಾವ್ ಸಿಂಧ್ಯಾ ಹಾಗು ಸವಿತಾ ದಂಪತಿ ಪುತ್ರಿ ಎಸ್. ಹರ್ಷಿತಾ ಅವರ ಭರತನಾಟ್ಯ ಮನಸೂರೆಗೊಳಿಸಿತು. ವಿಶ್ವವಿದ್ಯಾಲಯದ ವತಿಯಿಂದ ಹರ್ಷಿತಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ತಾಯ್ತನಕ್ಕಿಂತ ತಾಯಿ ಹೃದಯ ಅತ್ಯಂತ ಮುಖ್ಯವಾಗಿದ್ದು, ಜಗತ್ತಿಗೆ ತಾಯಿ ಪ್ರೀತಿ ಹಂಚಿದ ಮದರ್ ತೆರೇಸಾ ಹಾಗೂ ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇಂತಹ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನಗರದ ನ್ಯೂಟೌನ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ ಮಾಲಕ್ಕ ಹೇಳಿದರು. 
    ಅವರು ಗುರುವಾರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ತಾಯಂದಿರ ದಿನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಭಗವಂತನನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ತಾಯಿಯನ್ನು ಪ್ರತ್ಯಕ್ಷ ದೈವ ಎಂದು ಪೂಜಿಸಲಾಗುತ್ತದೆ. ಸಹಿಷ್ಣುತ ಗುಣವುಳ್ಳ ತಾಯಿಯನ್ನು ಪ್ರಕೃತಿಯಲ್ಲಿ ಭೂಮಿ ಸೇರಿದಂತೆ ವಿವಿಧ ರೀತಿಯಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.
    ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಮಾತನಾಡಿ, ತಾಯಿಯನ್ನು ಮೊದಲ ಗುರು ಎಂದು ಪೂಜಿಸಲ್ಪಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಭಾರತ ದೇಶದಲ್ಲಿ ತಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ತಾಯಿಯ ಋಣ ತೀರಿಸಲು ಅಸಾಧ್ಯವಾಗಿದ್ದು, ಮಕ್ಕಳು ಹೆತ್ತವರನ್ನು ಕೊನೆಯ ಕಾಲದಲ್ಲಿ ನೋಡಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದರು.
    ಹೇಮಶ್ರೀ ಪ್ರಾರ್ಥಿಸಿ, ಪುಷ್ಪಲತಾ, ದೇವರಾಜ್ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಸುಭಾಷ್ ರಾವ್ ಸಿಂಧ್ಯಾ ಹಾಗು ಸವಿತಾ ದಂಪತಿ ಪುತ್ರಿ ಎಸ್. ಹರ್ಷಿತಾ ಅವರ ಭರತನಾಟ್ಯ ಮನಸೂರೆಗೊಳಿಸಿತು. ವಿಶ್ವವಿದ್ಯಾಲಯದ ವತಿಯಿಂದ ಹರ್ಷಿತಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 

Wednesday, May 7, 2025

ಮನೆಗಳ್ಳತನ ಪ್ರಕರಣ : ಓರ್ವನ ಸೆರೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿ ಮನೆಯೊಂದರಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ನ್ಯೂಟೌನ್ ಠಾಣೆಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿ ಮನೆಯೊಂದರಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ನ್ಯೂಟೌನ್ ಠಾಣೆಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಮೇ.೨ ರಂದು ರಾತ್ರಿ ಮನೆಯ ಸಿಮೆಂಟ್ ಮೇಲ್ಛಾವಣಿಯನ್ನು ಒಡೆದು ಹಾಕಿ ಒಳಗೆ ಪ್ರವೇಶಿಸಿ ಸುಮಾರು ೧.೧೨ ಲಕ್ಷ ರು. ಮೌಲ್ಯದ ಬಂಗಾರದ ಆಭರಣ, ವಾಚ್ ಮತ್ತು ನಗದು ಹಣ ಕಳ್ಳತನ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. 
    ಪ್ರಕರಣ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎ. ಜಿ. ಕಾರಿಯಪ್ಪ ರವರ ಮಾರ್ಗದರ್ಶನದಲ್ಲಿ ಉಪ ವಿಭಾಗದ ಉಪ ಅಧೀಕ್ಷಕ ಕೆ ಆರ್. ನಾಗರಾಜುರವರ ಮಾಗದರ್ಶನದಲ್ಲಿ  ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ರವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ ರಮೇಶ್‌ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಟಿ.ಪಿ ಮಂಜಪ್ಪ, ನವೀನ್ ಮತ್ತು ನಾಗರಾಜ್ ರವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು. 
    ತನಿಖಾ ತಂಡ ಆರೋಪಿ, ಮೀನುಗಾರರ ಬೀದಿಯ ನಿವಾಸಿ ಪಿ. ಜೈಕಾಂತ್(೨೧) ಈತನನ್ನು ಬಂಧಿಸಿ ಅಂದಾಜು ೧.೧೨ ಲಕ್ಷ ರು. ಮೌಲ್ಯದ ೧೧ ಗ್ರಾಂ ೩೦೦ ಮಿಲಿ ತೂಕದ ಬಂಗಾರದ ಅಭರಣ, ಒಂದು ವಾಚ್, ೨ ಸಾವಿರ ರು. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಒಪ್ಪೋ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. 

ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಸಿ.ಎಂ ರಮೇಶ್ರಿಗೆ ಸನ್ಮಾನ

ಭದ್ರಾವತಿ ತಾಲೂಕಿನ ಹುಣಸೇಕಟ್ಟೆ (ಜಂಕ್ಷನ್) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಚಾರಕ ಸಿ.ಎಂ ರಮೇಶ್ ಅವರ ಅತ್ಯುತ್ತಮ ಸೇವೆ ಸ್ಮರಿಸಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ: ತಾಲೂಕಿನ ಹುಣಸೇಕಟ್ಟೆ (ಜಂಕ್ಷನ್) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಚಾರಕ ಸಿ.ಎಂ ರಮೇಶ್ ಅವರ ಅತ್ಯುತ್ತಮ ಸೇವೆ ಸ್ಮರಿಸಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ವಿದ್ಯಾರ್ಥಿ ನಿಲಯದ ಎಲ್ಲಾ ೮ ಮಂದಿ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಲು ರಮೇಶ್‌ರವರು ಸಕಾಲದಲ್ಲಿ ಕೈಗೊಂಡ ಕ್ರಮ ಮತ್ತು ಶ್ರಮ ಹೆಚ್ಚಿನದ್ದಾಗಿದೆ. ಈ ಹಿನ್ನಲೆಯಲ್ಲಿ ಇವರನ್ನು ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರ ಮತ್ತು ಅಡುಗೆ ಸಿಬ್ಬಂದಿಗಳ ಎರಡು ದಿನಗಳ ವಿಶೇಷ ಪುನಶ್ಚೇತನ ಕಾರ್ಯಾಗಾರದಲ್ಲಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೆಂಗಳೂರಿನ ಉಪ ನಿರ್ದೇಶಕಿ ಭವ್ಯ, ಜಿಲ್ಲಾ ಅಧಿಕಾರಿ ಶೋಭಾ, ಆಹಾರ ಇಲಾಖೆಯ ಉಪ ನಿರ್ದೇಶಕ ಹವೀನ್, ತಾಲೂಕು ಕಲ್ಯಾಣಾಧಿಕಾರಿ ಕೆ.ಎಸ್ ಶೈಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ವಿಜೃಂಭಣೆಯಿಂದ ಜರುಗಿದ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಶ್ರೀ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು. 
    ದೇವಸ್ಥಾನದ ಪ್ರಧಾನ ಅರ್ಚಕ ಪ್ರಮೋದ್‌ಕುಮಾರ್ ಅವರ ನೇತೃತ್ವದಲ್ಲಿ ಸ್ವಸ್ತೀಶ್ರೀ ವಿಜಯಾಭ್ಯುದಯ ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ವಸಂತಋತು ವೈಶಾಖ ಶುದ್ಧ ದಶಮಿಯಂದು ಬೆಳಿಗ್ಗೆ ೯ ಗಂಟೆಯಿಂದ ಕಲ್ಯಾಣೋತ್ಸವ ಆರಂಭಗೊಂಡಿತು. ಮಧ್ಯಾಹ್ನ ೧.೩೦ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. 
    ಕಲ್ಯಾಣೋತ್ಸವದ ಅಂಗವಾಗಿ ದೇವಸ್ಥಾನದ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮಿಲ್ಟ್ರಿಕ್ಯಾಂಪ್, ಹುಡ್ಕೋಕಾಲೋನಿ, ಬುಳ್ಳಾಪುರ, ಸಿದ್ದಾಪುರ, ನ್ಯೂಟೌನ್, ವಿದ್ಯಾಮಂದಿರ, ಜನ್ನಾಪುರ, ಆಂಜನೇಯ ಅಗ್ರಹಾರ, ಜೆಪಿಎಸ್ ಕಾಲೋನಿ, ಸುರಗಿತೋಪು, ಕಾಗದನಗರ, ಉಜ್ಜನಿಪುರ, ಆನೇಕೊಪ್ಪ, ಬೊಮ್ಮನಕಟ್ಟೆ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. 

Tuesday, May 6, 2025

ಗ್ರಂಥಾಲಯ ಸಹಾಯಕ ರಾಜ್‌ಕುಮಾರ್‌ಗೆ ಸರ್ವೋತ್ತಮ ಸೇವಾ ಪ್ರಶಸ್ತಿ

ಭದ್ರಾವತಿ  ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಾಲಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್‌ಕುಮಾರ್ ಅವರಿಗೆ ೨೦೨೩ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 
    ಭದ್ರಾವತಿ : ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಾಲಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್‌ಕುಮಾರ್ ಅವರಿಗೆ ೨೦೨೩ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 
    ಜಿಲ್ಲಾಡಳಿತ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಶಿವಮೊಗ್ಗ ನೌಕರರ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿ ೨೫ ಸಾವಿರ ರು. ನಗದು ಹಾಗು ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ. 
    ರಾಜ್‌ಕುಮಾರ್‌ರವರು ಬಹಳ ವರ್ಷ ನ್ಯೂಟೌನ್ ಮತ್ತು ಕಾಗದನಗರ ಕೇಂದ್ರ ಗ್ರಂಥಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ರಾಜ್‌ಕುಮಾರ್‌ರವರು ವೃತ್ತಿ ಬದುಕಿನ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು, ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 
    ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಶಿವಮೊಗ್ಗ ನಗರ ಶಾಸಕ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಜಿಲ್ಲಾಮಟ್ಟದ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್ ಚಂದ್ರಭೂಪಾಲ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು

ಅರುಣ್ ಕುಮಾರ್ 
    ಭದ್ರಾವತಿ : ಕ್ರಿಕೆಟ್ ಆಟದಲ್ಲಿ ಉಂಟಾದ ಜಗಳದ ಹಿನ್ನಲೆಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನ ಆಧಾರದ ಮೇರೆಗೆ ಓರ್ವನನ್ನು ಬಂಧಿಸಲು ತೆರಳಿದ್ದ ಪೊಲೀಸರು ಆತ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಮಂಗಳವಾರ ನಡೆದಿದೆ.  
    ಕ್ರಿಕೆಟ್ ಆಟದಲ್ಲಿ ಉಂಟಾದ ಜಗಳದ ಹಿನ್ನಲೆಯಲ್ಲಿ  ಸೋಮವಾರ ರಾತ್ರಿ ಅರುಣ್ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ ಸಹೋದರ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಸಂಜಯ್, ಸಚಿನ್ ಮತ್ತು ಅರುಣ್ ಕುಮಾರ್ ಸೇರಿದಂತೆ ೪ಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. 
    ಈ ದೂರಿನಲ್ಲಿ ಅರುಣ್ ಕುಮಾರ್(೧೯) ಅಲಿಯಾಸ್ ಕೊಕ್ಕು ೩ನೇ ಆರೋಪಿಯಾಗಿದ್ದು, ಈ ಹಿನ್ನಲೆಯಲ್ಲಿ ಬಂಧಿಸಲು ಹೋದಾಗ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಠಾಣೆಯ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 
    ಆರೋಪಿ ಅರುಣ್‌ಕುಮಾರ್‌ನನ್ನು ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅಲ್ಲದೆ ಈತನಿಂದ ಹಲ್ಲೆಗೊಳಗಾಗಿರುವ ಪೊಲೀಸ್ ಸಿಬ್ಬಂದಿಗೂ ಸಹ ಚಿಕಿತ್ಸೆ ನೀಡಲಾಗಿದೆ. ಪೊಲೀಸ್ ಠಾಣೆಯಲ್ಲಿ ಅರುಣ್‌ಕುಮಾರ್ ವಿರುದ್ಧ ಒಟ್ಟು ೫ ಪ್ರಕರಣಗಳು ದಾಖಲಾಗಿವೆ.